ಗೋಡೆ ಬರಹ
"ಅದೇನ್ ಕೆಟ್ಟು ಬುದ್ಧಿ ಬಂದಿದ್ಯೇನೋ ನಮ್ಮನೆ ಪಾಪು ಗೆ, ಎಷ್ಟು ಬೈದ್ರೂ ಕಡೆಗೆ ಕದ್ದು ಮುಚ್ಚಿ ಆದ್ರೂ ಗೋಡೆ ಮೇಲೆಗೀಚಿ ಬರ್ತಾನೆ. ನೋಡಿ, ಗೋಡೆ ತುಂಬಾ ಬಣ್ಣ ಬಣ್ಣದ ಪೆನ್ಸಿಲ್ ತಗೊಂಡು ಎಷ್ಟ್ ಅಸಹ್ಯ ಮಾಡಿದಾನೆ, ಯಾರಾದ್ರೂ ಬಂದ್ರೆ, ನಮ್ಮನೆ ನೋಡ್ಬಿಟ್ಟು, ಎಷ್ಟು ಗಲೀಜು ಅಂದ್ಕೊಂಡಾರು.." ಎನ್ನುತ್ತಾ ವಿಂಧ್ಯಾ ಮಗುಗೆ ಬೈಕೋತಾ ಇದ್ರೆ, ಮಗು ತಾನು 'ಖುಷಿ' ಪಟ್ಟು ಬರೆದ ಚಿತ್ರದಲ್ಲಿರುವ ಕಥೆಗೆ ಯಾಕಿವರೆಲ್ಲ 'ಬೈತಾರೆ' ಅಂತ ಪಿಳಿ ಪಿಳಿ ಕಣ್ಣು ಬಿಟ್ಟುಕೊಂಡು ತನ್ನ ಕುರಿತಾದ ಬೈಗುಳವನ್ನ ಕೇಳಿ ಏನು ಮಾಡಬೇಕೆಂದು ತಿಳಿಯದೆ ತಲೆ ತಗ್ಗಿಸಿ ನಿಂತಿತ್ತು. ಮಕ್ಕಳಿರುವ ಮನೆಗಳಲ್ಲಿ ಈ ರೀತಿಯ ಗೋಡೆ ಬರಹ ಸರ್ವೇ ಸಾಮಾನ್ಯ. ಕೆಲವು ಮನೆಯ ಎದುರು ಗೋಡೆಯಲ್ಲೇ ಮಕ್ಕಳು ಗೀಚಿ ಬರೆದ ಬ್ರಹ್ಮಾನ್ಡವಿದ್ದರೆ, ಕೆಲವು ಮನೆಯ ಒಳಕೋಣೆಯ ಮೂಲೆಗೊಡೆ ಇನ್ಯಾವುದೋ ಕಥೆ ಸಾರುತ್ತಿರುತ್ತದೆ. ನಿಮ್ಮ ಮನೆಯಲ್ಲೂ ಈ ರೀತಿ ಗೋಡೆ, ನೆಲದ ಮೇಲೆ ಗೀಚುವ ಅಭ್ಯಾಸದ ಮಕ್ಕಳಿದ್ದರೆ, ಅಥವಾ ನಿಮ್ಮ ಮಕ್ಕಳು ಸುಮ್ಮನೆ ಗೊತ್ತು ಗುರಿ ಇಲ್ಲದೆ ಗೀಚುತ್ತ ಕೂರುತ್ತಾರೆ ಎಂದರೆ ಅವರಿಗದನ್ನು ಕೆಟ್ಟದ್ದೆಂದು ತಡೆಯುವ, ತೆಗಳುವ ಮುನ್ನ ಗೀಚುವಿಕೆಯ ಕುರಿತಾಗಿ ಹೀಗೊಂದಷ್ಟು ವಿಷಯಗಳನ್ನು ತಿಳಿದುಕೊಳ್ಳಿ. ಗೋಡೆ ಒಂದು ಬಿಳಿ ಹಾಳೆಯಂತೆ. ಮಕ್ಕಳು ಹುಟ್ಟಿನಿಂದಲೂ ಅನ್ವೇಷಕರು. ಅವರಿಗೆ ಪ್ರತಿ...