ಮಗಳು ಮೀನು ಹಿಡಿದಳು..

ಮಗಳು ಮೀನು ಹಿಡಿದಳು.. ಸಂಜೆ ಆಫೀಸು ಕೆಲಸ ಮುಗಿದ ಮೇಲೆ ವಾಕಿಂಗ್ ಹೋಗುವ ರೂಡಿ. ಒಮ್ಮೊಮ್ಮೆ ಮಗಳೂ ಜೊತೆಯಾಗುತ್ತಾಳೆ. ಹತ್ತಿರದ ಕೆರೆಪಾರ್ಕಿನಲ್ಲಿ ನಮ್ಮ ವಾಕಿಂಗು. ಅದೊಂದು ದಿನ, ಕೆರೆಪಾರ್ಕಿನ ಹತ್ತಿರದ ಪುಷ್ಕರಣಿಯ ಬಳಿ ಸ್ನೇಹಿತೆಯೊಡನೆ ಮಾತನಾಡುತ್ತ ಕೂತಿದ್ದೆ. ಮಗಳು ಕೊಳದಲ್ಲಿನ ನೀರು, ಮೀನು, ಆಮೆ ಇತ್ಯಾದಿ ನೋಡುತ್ತಾ ಆಡುತ್ತಿದ್ದಳು. ತನಗೆ ಬೇಕಾದ ಕಲ್ಲು, ಕೋಲು, ಎಲೆ-ಬೀಜಗಳನ್ನು ಒಟ್ಟು ಮಾಡಿಕೊಳ್ಳಲು ಅವಳು ಡಬ್ಬಿ, ಚೀಲಗಳನ್ನು ಒಮ್ಮೊಮ್ಮೆ ಹಿಡಿದು ತರುವುದುಂಟು. ನಮ್ಮ ಕಟ್ಟೆ ಹರಟೆ ನಡೆದಿತ್ತು. ಅಲ್ಲೇ ಅಣತಿ ದೂರದಲ್ಲಿ ಎರಡು ಮಕ್ಕಳು, ಪುಷ್ಕರಣಿಯ ಮೆಟ್ಟಿಲುಗಳ ಕೊನೆಯ ಮೆಟ್ಟಿಲಲ್ಲಿ ಕುಳಿತು, ತಮ್ಮ ತಮ್ಮಲ್ಲೇ ಮಾತನಾಡುತ್ತ ಆಗಾಗ ಚಂಗನೆ ಕೆರೆಗೆ ಕೈಹಾಕಿ ನೀರು ಎತ್ತುತ್ತಿದ್ದರು. "ಎಂತ ಮಾಡ್ತಿದ್ದೀರೋ.." ಕೇಳಿದೆ. "ಆಂಟಿ, ಮೀನಿನ್ ಮರಿ ಹಿಡೀತಿದೀವಿ.." ಅಂತ ಅಂದ ಒಬ್ಬ ಚೋಟು. "ಎಂತ ತಿಂತೀರಾ ಹಿಡ್ಕಂಡು?" ಕೇಳಿದೆ. "ಆಂಟಿ, ಅಲ್ಲಿ ಅಕ್ವೇರಿಯಂ ಅಂಗಡಿ ಇದೆ, ಒಂದು ಮೀನಿಗೆ ಎರಡು ರೂಪಾಯಿ ಕೊಡ್ತಾರೆ ತಗಂಡು ಕೊಟ್ರೆ.." ಎಂದ ಇನ್ನೊಬ್ಬ ಕಣ್ಣರಳಿಸಿಕೊಂಡು. ಇವೆಲ್ಲವನ್ನೂ ಮೆಲ್ಲನೆ ಕಿವಿಗೆ ಹಾಕಿಕೊಂಡ ನಮ್ಮನೆ ಮೇಡಮ್ಮು ನಿಧಾನಕ್ಕೆ ಒಂದೊಂದೇ ಮೆಟ್ಟಿಲು ಕೆಳಗಿಳಿದು ಕೂರತೊಡಗಿದಳು. "ಸಾನ್ವಿ ಎಂತ ಯೋಚ್ನೆ ಮಾಡಿದೆ ನೀನು?" ಎಂದು ಕೇಳಿದೆ. "ನಾನು ನೀ...