ಮಕ್ಕಳ ಮನಿ ಮ್ಯಾನೇಜ್ಮೆಂಟ್
ಮಗಳ ಶಾಲೆಯಲ್ಲಿ, ಆರನೇ ತರಗತಿಯ ಮೇಲ್ಪಟ್ಟ ಮಕ್ಕಳು ತಮಗೆ ಆಸಕ್ತಿಯಿರುವ ಸಾಮಗ್ರಿ ಅಥವಾ ಸೇವೆಗಳ ಅಂಗಡಿಗಳನ್ನು ಹಾಕಿದ್ದ ಎಕ್ಷಿಬಿಷನ್ ಕಮ್ ಸೇಲ್ ಕಾರ್ಯಕ್ರಮವಿತ್ತು. ವಿವಿಧ ಬಗೆಯ ತಿಂಡಿಗಳು, ಆಟಗಳು, ಕ್ರಾಫ್ಟ್, ಮೆಹಂದಿ, ಟ್ಯಾಟೂ, ಹೀಗೆ ನಾನಾ ಬಗೆಯ ವ್ಯಾಪಾರ ವಹಿವಾಟು ಎಲ್ಲವೂ ಮಕ್ಕಳಿಂದಲೇ. ಮಾರಾಟದ ವಸ್ತುಗಳ ನಿಗದಿತ ಬೆಲೆ, ಚೌಕಾಸಿ ಬೆಲೆ, ಅಚ್ಚುಕಟ್ಟಾದ ಬೋರ್ಡ್ಗಳು, ದುಡ್ಡು ಚಿಲ್ಲರೆಗಳ ವಹಿವಾಟು, ಖರ್ಚಾದ ವಸ್ತುಗಳ ಪಟ್ಟಿ ಮತ್ತು ತಮಗೆ ಸಂದುತ್ತಿರುವ ದುಡ್ಡಿನ ಲೆಕ್ಕಾಚಾರ ಎಲ್ಲದರ ದಾಖಲೆ ಬರೆದುಕೊಂಡು ತಮಗೆಷ್ಟು ಲಾಭ ಸಂದಿದೆ ಇತ್ಯಾದಿ ತಮ್ಮ ತಮ್ಮಲ್ಲೆ ಮಾತುಕತೆ ಮಾಡಿಕೊಳ್ಳುತ್ತಿದ್ದ ಮಕ್ಕಳ ನೋಡಿ ಸಂತೋಷವಾಯಿತು. ಅಲ್ಲಿ ಮಕ್ಕಳ ಆರ್ಥಿಕ ಸಾಕ್ಷರತೆ ಪ್ರಾಯೋಗಿಕವಾಗಿ ಕಂಡುಬರುತ್ತಿತ್ತು. ಆರ್ಥಿಕ ಸಾಕ್ಷರತೆ ಎಂದರೇನು? ನಾವು ಹೆಚ್ಚಿನ ಭಾರತೀಯ ಪೋಷಕರು ನಮ್ಮ ಮಕ್ಕಳು ಹಣವನ್ನು ನಿಭಾಯಿಸಲು ಅಥವಾ ಅದರ ಕುರಿತು ಮಾತನಾಡಲು ಇನ್ನೂ ತುಂಬಾ ಚಿಕ್ಕವರು ಎಂದು ಭಾವಿಸುತ್ತೇವೆ. ಮಕ್ಕಳಿಗೆ ಏನೂ ತಿಳಿಯುವುದಿಲ್ಲ ಎಂಬ ಅಸಡ್ಡೆಯ ಮಾತು, ಮಕ್ಕಳಲ್ಲಿ ಅವರಲ್ಲಿನ ಆತ್ಮವಿಶ್ವಾಸವನ್ನು ಕುಂದಿಸುತ್ತದೆ. ಮುಂದೆ ಹದಿಹರೆಯದಲ್ಲಿ ವ್ಯವಹಾರದಲ್ಲಿ ಹೆಚ್ಚಿನ ಜ್ಞಾನ ಇಲ್ಲದೆ ಮಕ್ಕಳು ಕೆಲವೊಮ್ಮೆ ವಂಚನೆಗೆ ಗುರಿಯಾಗುವ ಸಾಧ್ಯತೆಯಿರುತ್ತದೆ. ಅಂತೆಯೇ ಕೆಲವರ ಮನೆಯಲ್ಲಿ ಸ್ವೇಚ್ಛೆಯ ಬದುಕು ಅಭ್ಯಾ...