ಅನ್ನದ ಋಣ
ನನ್ನ ೩ ವರ್ಷದ ಮಗಳು ಊಟ ತಿಂಡಿ ವಿಷಯದಲ್ಲಿ ಸ್ವಲ್ಪ ಜಾಸ್ತಿಯೇ ಚೂಸಿ. ಶಾಲೆಗೆ ಏನು ತೆಗೆದುಕೊಂಡು ಹೋಗುತ್ತೇನೆ, ರೂಟ್ಟಿಗೆ ನೆಂಚಿಕೊಳ್ಳುವುದಕ್ಕೆ ಏನು ಬೇಕು ಎಂಬುದರ ಬಗ್ಗೆ ನಾನು ಕೇಳುವ ಮೊದಲೇ ತಾನು ತೀರ್ಮಾನ ತೆಗೆದುಕೊಂಡಾಗಿರುತ್ತದೆ. ಸೂಪರ್ ಮಾರ್ಕೆಟಿಗೆ ಹೋದಾಗ ತನಗೆ ಇಷ್ಟವಾಗುವ ವಸ್ತು ಮತ್ತು ತಿಂಡಿಗಳನ್ನು ನಮಗಿಂತ ಮುಂಚೆಯೇ ಆಯ್ಕೆ ಮಾಡಿಟ್ಟಿರುತ್ತಾಳೆ. "ಅಮ್ಮ, ಇವತ್ತು ಮಿಕ್ಕಿ ಮೌಸ್ ದೋಸೆ ಮಾಡ್ಕೋಡ್ತ್ಯ?","ನಂಗೆ ಸ್ಕ್ವೇರ್ ಶೇಪ್, ಆರೆಂಜ್ ಕಲರ್ ಚಪಾತಿ ಮಾಡಿ ಕೊಡು", "ವೆಜಿಟಬಲ್ ಬೋಂಡಾ ನಂಗಿಷ್ಟ", "ಹಣ್ಣಿನ ಜೊತೆ ಐಸ್ ಕ್ರೀಮ್ ಕೊಡ್ತ್ಯ?", "ಇವತ್ತು ಮೊಸರು ಜೊತೆ ಸಕ್ರೆ ಬೇಡ ಉಪ್ಪು ಹಾಕಿಕೊಡು" ಹೀಗೆ ಸಾಗಿರುತ್ತದೆ ನನ್ನ ಮಗಳ ಬಾಯಿ ರುಚಿಗೆ ತಕ್ಕಂತೆ ಇಡುವ ಬೇಡಿಕೆಗಳು. ಬಹುಶಃ ನನ್ನ ಹಾಗೆ ಅನೇಕ ತಾಯಂದಿರಿಗೆ ಇದರ ಅನುಭವವಿದ್ದಿರುತ್ತದೆ. ಒಂದು ದಿನ ಆಹಾರ ಪದಾರ್ಥದ ಸ್ವಚ್ಛತೆಯ ಬಗ್ಗೆ ಏನೋ ಬರೆಯುವ ಪ್ರಯತ್ನದಲ್ಲಿದ್ದೆ. ಮನಸ್ಸು ಹಾಗೆಯೇ ಹಿಂದಕ್ಕೆಳೆಯಿತು. ನಿಜ! ಈಗಿನ ಮಕ್ಕಳಿಗೆ ಯಾವುದು ಪೌಷ್ಟಿಕ ಆಹಾರ, ಯಾವುದು ಹಿತ, ಯಾವುದು ಮಿತ ಎಂದು ಅಳೆದು ಸುರಿದು, ರುಚಿ-ಶುಚಿ ಗಮನಿಸಿ, ನೋಡಲು ಆಸಕ್ತಿ ಬರುವಂತೆಯೂ ಮಾಡಿ ಮಕ್ಕಳು ಚೆನ್ನಾಗಿ ತಿನ್ನುವಂತೆ ಮಾಡಬೇಕಾದ ಸಾಹಸ ಒಂದೆರಡಲ್ಲ. ಅಷ್ಟು ಮಾಡಿದರೂ ಕಡೆಗೆ ಊಟ ತಿಂಡಿ ಮಾಡಿಸಲ...