ಮಂಗಳವಾರ, ಸೆಪ್ಟೆಂಬರ್ 27, 2016

ಅನ್ನದ ಋಣ

ನನ್ನ ೩ ವರ್ಷದ ಮಗಳು ಊಟ ತಿಂಡಿ ವಿಷಯದಲ್ಲಿ ಸ್ವಲ್ಪ ಜಾಸ್ತಿಯೇ ಚೂಸಿ. ಶಾಲೆಗೆ ಏನು ತೆಗೆದುಕೊಂಡು ಹೋಗುತ್ತೇನೆ, ರೂಟ್ಟಿಗೆ ನೆಂಚಿಕೊಳ್ಳುವುದಕ್ಕೆ ಏನು ಬೇಕು ಎಂಬುದರ ಬಗ್ಗೆ ನಾನು ಕೇಳುವ ಮೊದಲೇ ತಾನು ತೀರ್ಮಾನ ತೆಗೆದುಕೊಂಡಾಗಿರುತ್ತದೆ. ಸೂಪರ್ ಮಾರ್ಕೆಟಿಗೆ ಹೋದಾಗ ತನಗೆ ಇಷ್ಟವಾಗುವ ವಸ್ತು ಮತ್ತು ತಿಂಡಿಗಳನ್ನು ನಮಗಿಂತ ಮುಂಚೆಯೇ ಆಯ್ಕೆ ಮಾಡಿಟ್ಟಿರುತ್ತಾಳೆ. "ಅಮ್ಮ, ಇವತ್ತು ಮಿಕ್ಕಿ ಮೌಸ್ ದೋಸೆ ಮಾಡ್ಕೋಡ್ತ್ಯ?","ನಂಗೆ ಸ್ಕ್ವೇರ್ ಶೇಪ್, ಆರೆಂಜ್ ಕಲರ್ ಚಪಾತಿ ಮಾಡಿ ಕೊಡು", "ವೆಜಿಟಬಲ್ ಬೋಂಡಾ ನಂಗಿಷ್ಟ", "ಹಣ್ಣಿನ ಜೊತೆ ಐಸ್ ಕ್ರೀಮ್ ಕೊಡ್ತ್ಯ?", "ಇವತ್ತು ಮೊಸರು ಜೊತೆ ಸಕ್ರೆ ಬೇಡ ಉಪ್ಪು ಹಾಕಿಕೊಡು" ಹೀಗೆ ಸಾಗಿರುತ್ತದೆ ನನ್ನ ಮಗಳ ಬಾಯಿ ರುಚಿಗೆ ತಕ್ಕಂತೆ ಇಡುವ ಬೇಡಿಕೆಗಳು. ಬಹುಶಃ ನನ್ನ ಹಾಗೆ ಅನೇಕ ತಾಯಂದಿರಿಗೆ ಇದರ ಅನುಭವವಿದ್ದಿರುತ್ತದೆ. ಒಂದು ದಿನ ಆಹಾರ ಪದಾರ್ಥದ ಸ್ವಚ್ಛತೆಯ ಬಗ್ಗೆ ಏನೋ ಬರೆಯುವ ಪ್ರಯತ್ನದಲ್ಲಿದ್ದೆ. ಮನಸ್ಸು ಹಾಗೆಯೇ ಹಿಂದಕ್ಕೆಳೆಯಿತು. ನಿಜ! ಈಗಿನ ಮಕ್ಕಳಿಗೆ ಯಾವುದು ಪೌಷ್ಟಿಕ ಆಹಾರ, ಯಾವುದು ಹಿತ, ಯಾವುದು ಮಿತ ಎಂದು ಅಳೆದು ಸುರಿದು, ರುಚಿ-ಶುಚಿ ಗಮನಿಸಿ, ನೋಡಲು ಆಸಕ್ತಿ ಬರುವಂತೆಯೂ ಮಾಡಿ ಮಕ್ಕಳು ಚೆನ್ನಾಗಿ ತಿನ್ನುವಂತೆ ಮಾಡಬೇಕಾದ ಸಾಹಸ ಒಂದೆರಡಲ್ಲ. ಅಷ್ಟು ಮಾಡಿದರೂ ಕಡೆಗೆ ಊಟ ತಿಂಡಿ ಮಾಡಿಸಲು, ಲ್ಯಾಪ್ಟಾಪ್ ಮೊಬೈಲ್ ಟ್ಯಾಬ್ ತೋರಿಸಿ ತಿನ್ನಿಸುವ ಅನಿವಾರ್ಯತೆ, ನನ್ನಗಲ್ಲದಿದ್ದರೂ, ನನ್ನಂತಹ ಈಗಿನ ಅನೇಕ ತಾಯಂದಿರಿಗಿದೆ. ದಶಕಗಳ ಹಿಂದೆ ನಾವು ಸಣ್ಣವರಿದ್ದಾಗ, ಪೌಷ್ಟಿಕತೆ ಶುಚಿತ್ವದ ಕೊರತೆಯಾಗದಿದ್ದರೂ, ಇದು ಸೇರಲ್ಲ, ಅದು ಮಾಡಿಕೊಡು, ಚಪಾತಿ ಗಟ್ಟಿಯಾಗಿದೆ ಬೇರೆ ಮಾಡಿಕೊಡು ಎಂದೆಲ್ಲ ನಾನು ಹಠ ಮಾಡಿ ಅಮ್ಮನ ಹತ್ತಿರ ಮತ್ತೆ ಮಾಡಿಸಿಕೊಂಡು ತಿಂದ ನೆನಪಿದೆ. ಮಧ್ಯಮ ವರ್ಗದ ಕುಟುಂಬವಾದ್ದರಿಂದಲೋ ಏನೋ ಹಠಕ್ಕೆ ಅವಕಾಶವಿತ್ತೆನಿಸುತ್ತದೆ. ಮಕ್ಕಳು ಹೊಟ್ಟೆಗೆ ಏನನ್ನಾದರೂ ತಿನ್ನಲಿ, ಬೇರೆ ತಿಂಡಿ ಮಾಡಿಕೊಡಲೂ ಅಡ್ಡಿಯಿಲ್ಲ ಎನ್ನುವ ಪೋಷಕರ ಒತ್ತಾಸೆಯಿಂದಲೋ ಏನೋ, ಒಟ್ಟಿನಲ್ಲಿ ಹೊತ್ತೊತ್ತಿಗೆ ಬೇಕಾದ ಊಟ ತಿಂಡಿ, ಸಂಜೆಯ ತಿಂಡಿ ಹೀಗೆಲ್ಲ ಆಹಾರ ಪೂರೈಕೆ ನಡೆದೇ ಇರುತ್ತಿತ್ತು. ಕಾಲೇಜಿಗೆ ಹೊರಡುವಾಗ, ನಾನು  ಕುಡಿಯಲಿ ಎಂದು ಹಾಲು ರೆಡಿ ಮಾಡಿ ತಂದರೆ, ಅದು ಹೆಚ್ಚಿನ ಬಿಸಿಯಿದೆ, ಕುಡಿಯಲು ಸಮಯವಿಲ್ಲ ಎಂದು ಹಾಗೆಯೇ ಬಿಟ್ಟು ಓಡುತ್ತಿದ್ದುದುಂಟು. ಈಗ ಪಶ್ಚಾತಾಪವಾಗುತ್ತದೆ ಅಮ್ಮನ ಪ್ರೀತಿ ಕಳಕಳಿಯ ಅರಿವಾಗಲಿಲ್ಲ ಎಂದು. ಆವಾಗಿನ ಸಿಲ್ಲಿ ತಗಾದೆಗಾಳ ನೆನಪಾಗಿ ನಗುವೂ ಬಂದಿತು. ಮನಸ್ಸು ಅಲ್ಲಿಗೇ ನಿಲ್ಲಲಿಲ್ಲ, ಯೋಚನಾ ಲಹರಿ ಇನ್ನೂ ಹಿಂದಕ್ಕೆಳೆಯಿತು, ಒಮ್ಮೆ ಅಪ್ಪಾಜಿ ನಮಗೆ ಊಟ ಮಾಡಿಸುತ್ತಿದ್ದಾಗ ಹೇಳಿಕೊಂಡ ತಮ್ಮ ಅನುಭವದ ಬಗ್ಗೆ. ಬಹುಶಃ ಆ ಘಟನೆಯ ನಂತರವೇ ನನಗೆ, ಊಟ-ತಿಂಡಿಗಳ ಬಗೆಗೆ ಗೌರವ ಶುರುವಾದ್ದು ಎನ್ನಬಹುದು. ..ನನ್ನಪ್ಪಾಜಿ ಒಬ್ಬ ಸರ್ವೇ ಸಾಮಾನ್ಯ ಕೃಷಿಕನ ಮಗ. ಆವಾಗಿನ ಕಾಲವೇ ಹಾಗಿತ್ತು. ಮನೆ ತುಂಬಾ ಮಕ್ಕಳು, ದುಡಿಯುವವ ಒಬ್ಬ ಮಾತ್ರ. ಹೊತ್ತೊತ್ತಿಗೆ ಊಟ ತಿಂಡಿಗೆ ವ್ಯವಸ್ಥೆಯಾದರೂ, ಎಲ್ಲವೂ ಅಚ್ಚುಕಟ್ಟು, ಎಲ್ಲರಿಗೂ ಶಿಕ್ಷಣ ಕೊಡಿಸುವಷ್ಟೂ ತಾಕತ್ತಿಲ್ಲದೆ, ಮಕ್ಕಳೆಲ್ಲರೂ ತಾವೇ ಸ್ವಂತ ಬಲದ ಮೇಲೆ ಓದಿ ಮುಂದೆ ಬಂದವರು. ಓದಲು ಅನುಕೂಲವಿಲ್ಲದೆ, ಮನೆಯಿಂದ ಹೊರಟು, ತಮ್ಮ ದೊಡ್ಡಮ್ಮನ ಚಿಕ್ಕಮ್ಮಂದಿರ ಮನೆಯಲ್ಲಿ ಉಳಿದುಕೊಂಡು, ವಾರಾನ್ನದ ಮಾದರಿಯಲ್ಲಿ ಊಟ ತಿಂಡಿ ಮಾಡಿಕೊಂಡು ತಮ್ಮ ವಿದ್ಯಾಭ್ಯಾಸವನ್ನು ಮಾಡುತ್ತಿದ್ದರಂತೆ. ಊಟ ಸ್ವಲ್ಪ ಸಾಕು ಜಾಸ್ತಿ ಬೇಕು ಎನ್ನುವ ಮಾತೇ ಇಲ್ಲ. ಆ ತರಕಾರಿ ಹಿಡಿಸುವುದಿಲ್ಲ, ಈ ಪದಾರ್ಥ ಖಾರವಾಗಿದೆ, ನನಗೆ ಒಗ್ಗದು ಎಂಬಿತ್ಯಾದಿ ಯೋಚನೆಯೂ ಹತ್ತಿರ ಸುಳಿಯದಂತೆ ತಟ್ಟೆ ಖಾಲಿಯಾಗುತ್ತಿತ್ತಂತೆ. ಹೀಗೆಯೇ ಮುಂದುವರೆಸಿ, ನಮ್ಮ ತಂದೆ ತಮಗಾದ ಒಂದು ಅನುಭವದ ಬಗ್ಗೆ ತಿಳಿಸಿದರು. ಮೊದಲೆಲ್ಲ ಅಡುಗೆ ಪದಾರ್ಥವನ್ನು ಕೆಡದಂತೆ ಇಡಲು ಈಗಿನ ತರಹ ಫ್ರಿಡ್ಜ್ ಕಬೋರ್ಡ್ ತರಹ ಏನಿರಲಿಲ್ಲವಲ್ಲ. ಆಗೆಲ್ಲ ಅಡುಗೆ ಕೊಣೆಯಲ್ಲಿ ಸಣ್ಣ ಸಣ್ಣ ಗೂಡುಗಳಿರುತ್ತಿದ್ದವು. ಹಾಲು, ಮಜ್ಜಿಗೆ ಇಡಲು ಒಂದು ಗೂಡು, ಅನ್ನ ಈ ತರಹದ ಪದಾರ್ಥ ಇಡಲೊಂದು ಗೂಡು ಹೀಗೆ.. ಒಮ್ಮೆ ಎಲ್ಲರೂ ಊಟಕ್ಕೆ ಕೂರಲು ಅನುವಾಗುತ್ತಿರುವಾಗಲೇ ಅಪ್ಪಾಜಿ ನೋಟಕ್ಕೆ ಬಂದದ್ದು ಇಲಿಯೊಂದು ಅಡುಗೆ ಕೋಣೆಯ ಗೂಡಿನಿಂದ ಹೊರಗೋಡುತ್ತಿತ್ತು, ಬಾಯಿ ಚಪ್ಪರಿಸುತ್ತಾ...!!! ನಂತರದಲ್ಲಿ ಎಲ್ಲರಿಗೂ ಸರತಿಯ ಪ್ರಕಾರದಂತೆ ಹೆಚ್ಚು ಕಡಿಮೆ ಎಂಬ ಮಾತಿಲ್ಲದೆ ಬಾಳೆ ಎಲೆ ಯ ಮೇಲೆ ಅದೇ  ಆಹಾರ ಪದಾರ್ಥವನ್ನು, ಬಡಿಸಿದಷ್ಟು ಊಟ ಮಾಡುವ ಅನಿವಾರ್ಯತೆ ಅವರದ್ದಾಗಿತ್ತು. ಇದನ್ನು ಕೇಳಿ ಅಂದು ಊಟದ ತುತ್ತು ಒಳಗೆ ಹೋಗದಷ್ಟು ದುಃಖ ಗಂಟಲು ಕಟ್ಟಿತ್ತು.  ಇಂದು  ಅಷ್ಟೇ..  ಕ್ಷಣಮಾತ್ರದಲ್ಲಿ ನನ್ನನ್ನು ಎಲ್ಲಿಯೋ ಕೊಂಡೊಯ್ದ ಮನಸ್ಸು, ಕಣ್ಣಂಚಿನಲ್ಲಿ ನೀರು ತರಿಸಿತ್ತು. ಆವಾಗಿನ ಅತ್ಯಂತ ಕನಿಷ್ಠ ಸವಲತ್ತುಗಳ ಬಾಲ್ಯ ಅವರನ್ನಿಂದು ಒಳ್ಳೆಯ ನಾಗರೀಕನನ್ನಾಗಿಯೂ , ಒಬ್ಬ ಯಶಸ್ವೀ ಉನ್ನತ ಶಿಕ್ಷಣ ಅಧಿಕಾರಿಯನ್ನಾಗಿಯೂ ಮಾಡಿದೆ. ಆದರೂ ಅಪ್ಪಾಜಿ ತಮಗೆ ಊಟ ನೀಡಿದವರನ್ನು ಇವತ್ತಿಗೂ ನೆನಪಿಸಿಕೊಳ್ಳುತ್ತಾರೆ. ಅವರ ಆ ಅನ್ನದ ಋಣದ ಸ್ಮರಣೆ, ನಮಗೆ ತಿಳಿದುಕೊಳ್ಳಲು ಮತ್ತು ಮಕ್ಕಳಿಗೆ ತಿಳಿಸಿಕೊಡಲು ಒಂದು ಪಾಠವಾಗಿ ಪರಿಣಮಿಸಿದೆ.   

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ