ರಜೆ ಎಂದರೆ ಸಮಯದ ಸದುಪಯೋಗ
ಮಕ್ಕಳಿಗೆ ಪರೀಕ್ಷೆಗಳು ಮುಗಿದವು, ಇನ್ನು ಸಾಕಷ್ಟು ದಿನ ಬೇಸಿಗೆ ರಜೆ, ಮಕ್ಕಳು ಸ್ವಲ್ಪ ರೆಸ್ಟ್ ಮಾಡ್ಲಿ, ಅವರಿಗೆ ಬೇಕಾದ್ದನ್ನು ಮಾಡಿಕೊಳ್ಳಲಿ, ಊಟ ತಿಂಡಿಗೊಂದು ಬಂದರೆ ಸಾಕು ಎಂಬುದು ಸಾಮಾನ್ಯವಾಗಿ ನಾವು ಪೋಷಕರ ಮನಸ್ಸಿನಲ್ಲಿ ಬರುವ ವಿಚಾರ. ಆದರೆ ಈ ಬೇಸಿಗೆ ರಜೆ ಯ ನಿಜವಾದ ಅರ್ಥವೇನು? ಮಕ್ಕಳು ಇದರ ಸದುಪಯೋಗ ಮಾಡಿಕೊಳ್ಳುವ ವಿಧಾನಗಳೇನು? ನಾವು ಹೇಗೆ ನಮ್ಮ ಮಕ್ಕಳಿಗೆ ರಜೆಯ ಸದುಪಯೋಗದ ಬಗ್ಗೆ ಮಾಹಿತಿ, ಮಾರ್ಗದರ್ಶನ ಮತ್ತು ಬೆಂಬಲವನ್ನು ನೀಡಬಹುದು ಎಂದುದರ ಕುರಿತು ಇಲ್ಲಿದೆ ಒಂದು ಸಮಗ್ರವಾದ ಟಿಪ್ಪಣಿ. ರಜೆ ಎಂದರೆ ವಿಶ್ರಾಂತಿ ಎಂದರ್ಥವಲ್ಲ. ರಜೆ ಎಂದರೆ ನಮ್ಮ ನಿತ್ಯ ಚಟುವಟಿಕೆಗಳಿಗಿಂತ, ಸ್ಥಿತ ಜೀವನ ಶೈಲಿಗಳಿಂದ ಸ್ವಲ್ಪ ಭಿನ್ನವಾಗಿ, ಮನಸ್ಸಿಗೆ ಖುಷಿಯೆನಿಸಿದ್ದನ್ನು, ಉಪಯುಕ್ತವಾದ್ದನ್ನು, ಅಪೂರ್ಣವಾಗಿಟ್ಟುಕೊಂಡ ಕಾರ್ಯಗಳನ್ನು ಅನುಕೂಲಕ್ಕೆ ತಕ್ಕಂತೆ ಮಾಡಿಕೊಳ್ಳುವುದು ಎಂದೂ ಅರ್ಥೈಸಬಹುದು. ಒಂದೇ ಮಾತಿನಲ್ಲೇ ಹೇಳುವುದಾದರೆ ರಜೆ ಎಂದರೆ, ಸಿಕ್ಕಿರುವ ಬಿಡುವಿನ ಸಮಯದ ಸದುಪಯೋಗ. ವಾಸ್ತವವಾಗಿ, ರಜೆ ಬಂದರೆ, ಮಕ್ಕಳು ಆ ವರೆಗೆ ಒಗ್ಗಿಕೊಂಡ ಶಾಲೆ, ಶಿಕ್ಷಣ, ಹೊಂವರ್ಕ್, ಪರೀಕ್ಷಾ ಸಮಯದಲ್ಲಿ ಮಾಡಬೇಕಾಗುವ ಹೆಚ್ಚಿನ ತಯಾರಿ ಇತ್ಯಾದಿ ಶೈಕ್ಷಣಿಕ ಚಟುವಟಿಕೆಗಳಿಂದ ಹೊರಬಂದು, ತಮಗಿಷ್ಟವಾದ್ದನ್ನು ಮಾಡಿಕೊಂಡು, ಸ್ನೇಹಿತರೊಡನೆ ಹೆಚ್ಚಿನ ...