ಶುಕ್ರವಾರ, ಮೇ 5, 2017

ಉಡುಗೊರೆ ನೀಡುವ ಮುನ್ನ

"ವಸಂತ ಮಾಸ ಬಂದಾಗ ಮಾವು ಚಿಗರಲೇ ಬೇಕು, ಕೋಗಿಲೆ ಹಾಡಲೇ ಬೇಕು, ಕಂಕಣ ಕೂಡಿ ಬಂದಾಗ ಮದುವೆಯಾಗಲೇ ಬೇಕು.... " ಎಂದು ನನಗರಿವಿಲ್ಲದಂತೆಯೇ ಹಾಡು ಗುನುಗುತ್ತಲಿತ್ತು ಕೈಯಲ್ಲಿದ್ಯಾವುದೋ ಮದುವೆ ಆಮಂತ್ರಣ ಪತ್ರಿಕೆಯನ್ನು ನೋಡಿ.. ಹೌದು! ಈಗೆಲ್ಲ ಮಂಗಳ ಕಾರ್ಯಗಳು ನಡೆಯುವ ಸಕಾಲ... ಆಮಂತ್ರಣ ಪಡೆದ ನಮಗೂ ಅತಿಥಿಗಳಾಗಿ ಇಂತಹ ಕಾರ್ಯಕ್ರಮಗಳಿಗೆ ಭಾಗವಹಿಸುವುದು, ತುಂಬಾ ಹತ್ತಿರದ ಕೌಟುಂಬಿಕ ಕಾರ್ಯಕ್ರಮಗಳಾಗಿದ್ದರೆ ಮನೆಯವರಾಗಿ ಅವುಗಳ ಸಡಗರ - ಸಂಭ್ರಮಗಳಲ್ಲಿ ಪಾಲ್ಗೊಳ್ಳುವುದು ಎಲ್ಲವೂ ನಡೆದೇ ಇರುತ್ತದೆ. ಇವೆಲ್ಲದರ ಜೊತೆಗೆ, ಕಾರ್ಯಕ್ರಮಗಳಲ್ಲಿ, ಉಡುಗೊರೆ ನೀಡುವುದು ಕೂಡ ನಮ್ಮಲ್ಲಿ ಹಿಂದಿನಿಂದಲೂ ನಡೆದು ಬಂದ ಪದ್ಧತಿ. ಆದರೆ ಯಾರ್ಯಾರಿಗೆ, ಯಾವ ಯಾವ ಕಾರ್ಯಕ್ರಮಗಳಿಗೆ, ಎಷ್ಟೆಷ್ಟು ಮೌಲ್ಯದ ಉಡುಗೊರೆ ನೀಡುವುದು,  ಒಟ್ಟಾರೆ  ಏನು ಉಡುಗೊರೆ ಕೊಡುವುದು ಎಂಬುದು ಸಾಮಾನ್ಯವಾಗಿ ನಮಲ್ಲಿ ಉಧ್ಭವವಾಗುವ, ಅನೇಕ ಸಲ ಗೊಂದಲ ಉಂಟುಮಾಡುವ ಪ್ರಶ್ನೆ. ಹೀಗೊಂದು ಚಿಕ್ಕ ಟಿಪ್ಪಣಿ, ಉಪಯುಕ್ತ ಉಡುಗೊರೆಗಳ ಕುರಿತು.

ಸಂದರ್ಭ ೧ : 
ಲತಾ ಒಂದು ಟೆಲಿಫೋನ್ ಆಫೀಸ್ ನಲ್ಲಿ ಕೆಲಸ ಮಾಡುವ ಮಧ್ಯಮ ವರ್ಗದ ಮಹಿಳೆ. ಉನ್ನತ ಹುದ್ದೆಯಲ್ಲಿರುವ ಸಹೋದ್ಯೋಗಿಯ ಮಗನ ಮದುವೆಗೆ ಕರೆಯೋಲೆ ಸಿಕ್ಕಿದೆ. ಧಾಮ್ ಧೂಮ್ ಮದುವೆಯಂತೆ ಎಂಬ ಸುದ್ದಿ ಗಾಳಿಯಲ್ಲಿದೆ. ಚೆನ್ನಾಗಿ ಸಿಂಗಾರಗೊಂಡು ಹೋಗಬೇಕು, ಮದುವೆಗೆ ಉಡುಗೊರೆ ತೆಗೆದುಕೊಂಡು ಹೋಗಬೇಕು. ಸರ್ವೇಸಾಮಾನ್ಯ ಉಡುಗೊರೆ ಸರಿ ಹೊಂದೀತೇ? ಛೇ ಛೇ, ಏನಂದುಕೊಂಡಾರು ಸಹೋದ್ಯೋಗಿ! ನಮ್ಮ ಲೆವೆಲ್ ಅಲ್ಲ, ಅವರ ಸ್ಟೇಟಸ್ ಗೆ ತಕ್ಕಂತೆ ಉಡುಗೊರೆ ಮಾಡಲೇ ಬೇಕು, ಅನಿವಾರ್ಯ!

ಸಂದರ್ಭ ೨ :
ಗಣಪತಿ ರಾಯರು ಮುಂಚಿನಿಂದಲೂ ತಮ್ಮನ್ನು ತಾವೇ ಸಾಹಿತ್ಯ ಲೋಕದಲ್ಲಿ ತೊಡಗಿಸಿಕೊಂಡವರು. ಯಾವುದಾದರೂ ಮದುವೆ ಮುಂಜಿ ಇನ್ನಿತರ ಕಾರ್ಯಕ್ರಮಗಳಿದ್ದರೆ, ಯಾವುದಾದರೂ ತಮ್ಮ ಬಳಿ ಇರುವ ಪುಸ್ತಕವನ್ನೇ ಉಡುಗೊರೆಯಾಗಿ ನೀಡುವ ಅಭ್ಯಾಸ. ಹೊಸತಾಗಿ ಉಡುಗೊರೆ ಕೊಂಡು ತರುವ ಹವ್ಯಾಸವಿಟ್ಟುಕೊಳ್ಳುವುದಿಲ್ಲ.  

ಸಂದರ್ಭ ೩ : 
ಶೇಖರ್ ಮತ್ತು ಸರಳ, ತಮ್ಮ ದೂರ ಸಂಬಂಧಿಯ ಮಗನ ಮುಂಜಿಗೆ ಹೊರಡಲನುವಾಗಿದ್ದಾರೆ. ಉಡುಗೊರೆಯೊಂದು ಪ್ಯಾಕ್ ಮಾಡಿಕೊಳ್ಳಬೇಕು. ತಮ್ಮ ಹೊಸಮನೆಯ ಪ್ರವೇಶದ ಸಮಯದಲ್ಲಿ ಭರಪೂರ ಹರಿದು ಬಂದ ಉಡುಗೊರೆಗಳ ಭಂಡಾರವೇ ಇದೆಯಲ್ಲ, ಷೋ ಪೀಸ್ ಗಳು ಇವೆಯಲ್ಲ, ಯಾವದಾದರೊಂದು ಆಯ್ದುಕೊಂಡು ಗಿಫ್ಟ್ ಮಾಡಿದರಾಯಿತು ಎಂದು ಮಾತನಾಡಿಕೊಳ್ಳುತ್ತಾರೆ. 

ಸಂದರ್ಭ ೪ :
ವ್ಯಾಸಂಗದ ಸಮಯದಲ್ಲಿ ಅತ್ಯಂತ ನಿಕಟವಾದ ಸ್ನೇಹಿತನಾಗಿದ್ದ ನರೇಶ್ ಮನೆಯ ಪ್ರವೇಶವಿದೆ. ಕೋಟಿ ಬೆಲೆಬಾಳುವ ಮನೆಯದು. ಬಾಲು ಆರ್ಥಿಕವಾಗಿ ಹೆಚ್ಚು ಉಳ್ಳವನಲ್ಲ. ತನ್ನಸಾಮರ್ಥ್ಯಕ್ಕೆ ಸಾಧ್ಯವಾದಷ್ಟು ಕೊಡೋಣವೆಂದು ಯೋಚಿಸಿ ಹೊಸ ಬಟ್ಟೆಯ ಖರೀದಿಸಿ ಹೊರಡುತ್ತಾನೆ. ಆದರೆ ತಾನು ಕೊಡುವ ದರ್ಜೆಯ ಬಟ್ಟೆಯ ಪ್ರಯೋಜನ ಅವರು ಪಡೆಯುತ್ತಾರೆ ಎಂಬ ನೀರಿಕ್ಷೆಯಿಲ್ಲ.

  ಈ ಮೇಲಿನ ಸಂದರ್ಭಗಳನ್ನೆಲ್ಲ ನೋಡಿದಾಗ,  ನಾವು ಸಾಮಾನ್ಯವಾಗಿ ಉಡುಗೊರೆಯ ಆಯ್ಕೆಯಲ್ಲಿ ನಮ್ಮ ಮನೋಭಾವ, ನಮ್ಮ ಅನುಕೂಲ, ಪರರ ಅಂತಸ್ತಿಕೆ ಎಲ್ಲವನ್ನೂ ಗಮನದಲ್ಲಿರಿಸುತ್ತೇವೆ. ಆದರೆ ಉಡುಗೊರೆಯನ್ನು ಪಡೆಯುವ ವ್ಯಕ್ತಿಗೆ ಅದು ಎಷ್ಟರ ಮಟ್ಟಿಗೆ ಬಳಕೆಗೆ ಬರುತ್ತದೆ ಎಂಬುದನ್ನು ಗಮನಿಸುವ ಜನರು ಬೆರಳೆಣಿಕೆಯಷ್ಟೇ . ಸ್ವಲ್ಪ ಬುದ್ಧಿವಂತಿಕೆ ವಹಿಸಿದರೆ, ನಮ್ಮ ಕೊಳ್ಳುವ ಸಾಮರ್ಥ್ಯದ  ಮಿತಿಯಲ್ಲಿಯೇ, ಉಪಯುಕ್ತವಾದ ಉಡುಗೊರೆಯನ್ನು ನಾವು ನೀಡಬಹುದು.

ಮೊಟ್ಟ ಮೊದಲನೆಯದಾಗಿ, ಕಾರ್ಯಕ್ರಮ ನಡೆಸುತ್ತಿರುವವರು ಕುಟುಂಬದವರೇ ಆಗಿದ್ದರೆ ಅಥವಾ ನಿಮಗೆ ತೀರಾ ಹತ್ತಿರವಾದವರೆನಿಸಿದ್ದರೆ, ಸಂಕೋಚ-ಬಿಗುಮಾನವನ್ನು ಬದಿಗೊತ್ತಿ, ಅವರಿಗೆ ನಿಮ್ಮಿಂದ ಯಾವ ರೀತಿಯ ಸಹಾಯವಾಗಬಹುದು ಎಂಬುದನ್ನು ಸ್ಪಷ್ಟವಾಗಿ ವಿಚಾರಿಸಿಕೊಳ್ಳಿ. ಉಡುಗೊರೆ ಎಂಬುದು ಕೇವಲ ಥಳ-ಥಳಿಸುವ ಬಣ್ಣ ಬಣ್ಣದ ಹೊದಿಕೆಯಿಂದ ಕೂಡಿರುವಂತಹ ವಸ್ತುವಾಗಿರಬೇಕಾಗಿಲ್ಲ ಅಥವಾ ಅಂತಸ್ತಿಕೆಯ ಪ್ರದರ್ಶನವಾಬೇಕೆಂಬುದಿಲ್ಲ, ಬಳಕೆಗೆ ಯೋಗ್ಯವಾಗಿದ್ದರೆ ಅಷ್ಟೇ ಸಾಕು. ಉದಾಹರಣೆಗೆ, ಮದುವೆಯಾದ ಹೆಣ್ಣುಮಗಳು ತನ್ನ ತವರು ಮನೆಯ ಕಾರ್ಯಕ್ರಮದ ಪ್ರಯುಕ್ತವಾಗಿ ಉಡುಗೊರೆ ನೀಡುವ ಸಂದರ್ಭ, ಆ ಮನೆಗೆ ಅವಶ್ಯಕವಾದ ವಸ್ತುವಿನ ಬಗೆಗೆ ಅರಿವಿದ್ದು, ಅಂತಹ ವಸ್ತುಗಳನ್ನೇ ನೀಡುವುದರಿಂದ ಮನೆಯವರಿಗೂ ಹೆಚ್ಚಿನ ಲಾಭವಾಗುತ್ತದೆ. ಸಲಿಗೆಯಿಂದ ಇರುವ ವ್ಯಕ್ತಿಗಳ ಮನೆಯ ಕಾರ್ಯಕ್ರಮವಾದರೆಂತೂ, ನೀವು ಉಡುಗೊರೆ ನೀಡಲು ಸಾಧ್ಯವಾಗುವಷ್ಟು ಮೊತ್ತವನ್ನು ಕರಾರುವಕ್ಕಾಗಿ ತಿಳಿಸಿದರೆ, ಅದಕ್ಕೆ ತಕ್ಕದಾದ ತಮಗನುಕೂಲಕರವಾದ ಗ್ರಹೋಪಯೋಗಿ ವಸ್ತುಗಳು, ಅಥವಾ ಇನ್ನಿತರ ಪರಿಕರಗಳನ್ನು ತೆಗೆದುಕೊಳ್ಳಲೂ ಕೂಡ ಪ್ರಯೋಜನವೆನಿಸುತ್ತದೆ.

ಕೇವಲ ಉಡುಗೊರೆ ನೀಡಬೇಕು ಎಂಬ ಸಂಪ್ರದಾಯಕ್ಕೆ ಕಟ್ಟು ಬಿದ್ದು, ಯಾವುದೇ ಯೋಚನೆ ಇಲ್ಲದೇ, ಗಿಫ್ಟ್ ಸೆಂಟರ್ ಗಳಿಂದ ಉಡುಗೊರೆಯನ್ನು ಆಯ್ದುಕೊಳ್ಳಬೇಡಿ. ಉದಾಹರಣೆಗೆ, ಅಲಂಕಾರಿಕ ವಸ್ತುಗಳನ್ನು ಮನೆಗಳಲ್ಲಿ ಇಡುವ ಅಭ್ಯಾಸ ಇತ್ತೀಚಿಗೆ ಕಡಿಮೆಯಾಗಿದೆ. ಹೊಸ ಮನೆ ಪ್ರವೇಶ ಎಂದ ಕೂಡಲೇ, ಶೋ ಪೀಸ್ ಗಳು, ಗಡಿಯಾರ, ದೇವರ ಪಟಗಳು, ಫೋಟೋಫ್ರೇಮ್, ಅಡುಗೆ ಮನೆಯ ಪರಿಕರಗಳು, ಗಾಜಿನ ವಸ್ತುಗಳು, ಅಧ್ಯಾತ್ಮದ ಪುಸ್ತಕಗಳು ಇತ್ಯಾದಿ ನಮ್ಮ ಮನಸ್ಸಿಗೆ ಸೂಚಿಸುವುದು ಸಹಜ. ಆದರೆ ಎಲ್ಲರೂ ಸಾಮಾನ್ಯವಾಗಿ ಹೀಗೇ ಯೋಚಿಸುವುದರಿಂದ ಸಾಮಾಗ್ರಿಗಳ ಪುನರಾವರ್ತನೆಯಾಗಿ, ಪ್ರಯೋಜನಕ್ಕೆ ಬರದಂತಾಗುವ ಸಂಭವವಿರುತ್ತದೆ. ಅದರ ಬದಲು ನಿಮ್ಮಿಂದ ಸಾಧ್ಯವಾದರೆ, ಅನನ್ಯವಾಗಿರುವಂತಹ ಉಡುಗೊರೆಗಳು ಅಥವಾ ಯಾವ ಕಾಲಕ್ಕೂ ತನ್ನ ಸೊಬಗು ಮತ್ತು ಬಳಕೆಯ ಮೌಲ್ಯವನ್ನು ಕಳೆದುಕೊಳ್ಳದಂತಿರುವ ವಸ್ತುಗಳನ್ನು ನೀಡುವುದು ಸೂಕ್ತ.

ಸ್ನೇಹಿತರ ಮನೆಯ ಕಾರ್ಯಕ್ರಮಗಳಿಗೆ ಹೋಗುವುದಾದರೆ, ಪ್ರತಿಯೊಬ್ಬ ಸ್ನೇಹಿತನೂ ವೈಯುಕ್ತಿಕವಾಗಿ ತರಹೇವಾರಿ ಉಡುಗೊರೆ ನೀಡುವುದು ಒಂದು ಸಾಮಾನ್ಯ ಪ್ರಕ್ರಿಯೆ. ಇದಕ್ಕೆ ಪರ್ಯಾಯವಾಗಿ, ಇತರ ಆತ್ಮೀಯ ಸ್ನೇಹಿತರೊಡಗೂಡಿ, ನಿಮ್ಮ ಕೈಲಾದಷ್ಟು ಉಡುಗೊರೆಯ ಹಣ ಒಟ್ಟು ಮಾಡಿ, ಒಂದು ಉತ್ತಮವಾದ ಹಾಗೂ ಹೆಚ್ಚಿನ ಬೆಲೆಯುಳ್ಳ ಸಮಾಗ್ರಿಯನ್ನೇ ಕೊಂಡುಕೊಳ್ಳಬಹುದು. ಉದಾಹರಣೆಗೆ, ಮದುವೆಯ ಸಂದರ್ಭವಿದ್ದರೆ , ಹೊಸ ಸಂಸಾರ ಹೂಡುವವರಿಗೆ ಬೇಕಾಗುವ ಗ್ರಹೋಪಯೋಗಿ ವಸ್ತುಗಳನ್ನು ಮುಂಚಿತವಾಗಿಯೇ ಚರ್ಚಿಸಿ, ಉಡುಗೊರೆಯ ರೂಪದಲ್ಲಿ ತೆಗೆಸಿ ಕೊಡಬಹುದು ಅಥವಾ ಸ್ನೇಹಿತರನ್ನು ಅವರಗತ್ಯತೆಯ ವಸ್ತುಗಳ ಪಟ್ಟಿಯಲ್ಲಿ ನೀವು ಯೋಚಸಿರುವಂತಹ ಮೌಲ್ಯದ ಉಡುಗೊರೆಯ ವಸ್ತುವನ್ನು ಆಯ್ದುಕೊಂಡು  ಕೊಡಿಸಬಹುದು ಉದಾಹರಣೆಗೆ ಹೊಸ ಮನೆಯ ವಸ್ತು ವಿನ್ಯಾಸಗಳಿಗೆ ಸಹಾಯವಾಗುವಂತಹ ವಸ್ತುಗಳು, ಅಗತ್ಯವಿರುವ ಪೀಠೋಪಕರಣಗಳು, ಫ್ಯಾನ್ಗಳು, ವಿದ್ಯುತ್ ಉಪಕರಣಗಳು, ಕಿಟಕಿಯ ಪರದೆಗಳು, ಹಾಸಿಗೆ-ಹೊದೆಯುವ ಚಾದರಗಳು ಹೀಗೆ ಹತ್ತು ಹಲವು ಬಗೆಯಲ್ಲಿ ನಾವು ಸ್ವಲ್ಪ ಯೋಚಿಸಿ ಕೊಡುವ ವಸ್ತುಗಳು, ಸ್ವೀಕರಿಸುವವರಿಗೆ ಅತ್ಯಂತ ಸಹಕಾರಿಯಾಗುತ್ತದೆ.

ಉಡುಗೊರೆಯ ವಿಷಯಕ್ಕೆ ಬಂದರೆ, ನಮ್ಮಿಂದ ವ್ಯವಸ್ಥೆ ಮಾಡಲಾಗುವಷ್ಟು ಮೌಲ್ಯದ ಹಣವನ್ನು ನೇರವಾಗಿ ನೀಡುವುದೂ ಕೂಡ ಒಂದು ರೀತಿಯಲ್ಲಿ ಒಳ್ಳೆಯದೇ.  ದುಡ್ಡು ಎಲ್ಲರಿಗೂ ಎಂದಿಗೂ ಸದ್ಬಳಕೆಗೆ ಬರುವಂತದ್ದು, ಕೆಲವೊಮ್ಮೆ ನಾವು ಪ್ರೀತಿಯಿಂದ ನೀಡಿದ ಭೌತಿಕ ವಸ್ತುಗಳಿಗಿಂತಲೂ ಹಣದ ರೂಪದಲ್ಲಿ ನೀಡಿದ ಉಡುಗೊರೆ, ಕೇವಲ ಸಂತೋಷವನ್ನಷ್ಟೇ ಅಲ್ಲ, ಇತರರ ಕಷ್ಟ-ಕಾರ್ಪಣ್ಯಗಳಿಗೂ, ಅವರ ಆರ್ಥಿಕ ಮುಕ್ಕಟ್ಟಿನ ಪರಿಸ್ಥಿತಿಯಲ್ಲಿ ಅತ್ಯಂತ ಸಹಾಯಕವಾಗುತ್ತದೆ. ಉದಾಹರಣೆಗೆ, ಮಗುವಿನ ನಾಮಕರಣ, ಚೌಲ (ಚೂಡಾ ಕರ್ಮಾ), ಬ್ರಹ್ಮೋಪದೇಶ ಇತ್ಯಾದಿ ಕಾರ್ಯಕ್ರಮಗಳಿಗೆ ಹೋಗುವುದಾದರೆ, ಹೆಚ್ಚೇನೂ ಉಪಯುಕ್ತವಾದ ಉಡುಗೊರೆ ಸೂಚಿಸದಿದ್ದಲ್ಲಿ, ನಿಮ್ಮ ಕೈಲಾದಷ್ಟು ಉಡುಗೊರೆಯನ್ನು ಹಣದ ರೂಪದಲ್ಲಿಯೇ ನೀಡಿರಿ. ಇದು ಭವಿಷ್ಯತ್ ಕಾಲದಲ್ಲಿ ಆ ಮಕ್ಕಳ  ವಿದ್ಯಾಭ್ಯಾಸಕ್ಕೆ, ಅರೋಗ್ಯಕ್ಕೆ ನಿಸ್ಸಂಶಯವಾಗಿ ಬಳಕೆಯಾಗುತ್ತದೆ.

ಪಟ್ಟಣ ಪ್ರದೇಶಗಳಲ್ಲಾದರೆ, ಅನೇಕ ಈ-ಕಾಮರ್ಸ್ ಮಾರಾಟ ಸಂಸ್ಥೆಗಳ ಗಿಫ್ಟ್ ವೌಚೆರ್ ಗಳು ಲಭ್ಯವಿರುತ್ತದೆ. ಅನೇಕ ಬ್ಯಾಂಕ್ ಗಳು, ಕ್ಯಾಶ್ ಕಾರ್ಡ್ ಎಂಬ ಮಾದರಿಯಲ್ಲಿ ನೀಡುವ ವ್ಯವಸ್ಥೆಯನ್ನು, ನಾವು ಇತರರಿಗೆ ದುಡ್ಡನ್ನು ಉಡುಗೊರೆಯಾಗಿ ನೀಡಲು ಉಪಯೋಗಿಸಿಕೊಳಬಹುದು. ಪ್ರವಾಸ ಕೈಗೊಳ್ಳುವವರಿಗೆ, ಪ್ರವಾಸದ ಪ್ಯಾಕೇಜ್ ಅನ್ನು ಉಡುಗೊರೆಯಾಗಿ ನೀಡಬಹುದು. ಪರಿಸರ ಪ್ರಿಯರಿಗೆ, ಟೆರ್ರೆಸ್ ಗಾರ್ಡೆನ್ ಮಾದರಿಯ ವ್ಯವಸ್ಥೆಯನ್ನೂ ಉಡುಗೊರೆಯಾಗಿ ನೀಡಬಹುದು. ವೈದ್ಯಕೀಯ ಸಂಸ್ಥೆಗಳಿಂದ ಅರೋಗ್ಯ ತಪಾಸಣೆ ಮತ್ತು ಇತರ ವೈದ್ಯಕೀಯ ಸೇವೆಗಳ ಕಾರ್ಡ್ ಕೂಡ ಉಡುಗೊರೆಯಾಗಿ ನೀಡಬಹುದು.

ಒಟ್ಟಿನಲ್ಲಿ ಕಾರ್ಯಕ್ರಮಗಳಲ್ಲಿ ಉಡುಗೊರೆಯ ರೂಪದಲ್ಲಿ ನಾವು ನೀಡುವ ಪ್ರೀತಿಯ ಆಶಯ, ಇತರರಿಗೆ ಉಪಯುಕ್ತವಾಗುವಂತಿರಬೇಕು ಮತ್ತು ನಮ್ಮ ಸ್ನೇಹಿತರು ಅದರ ಬಳಕೆಯಿಂದ ನಮ್ಮನ್ನು ನೆನೆಯುವಂತಾದರೆ ನಮ್ಮ ಉಡುಗೊರೆ ಸಾರ್ಥವಾದಂತೆ.










ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ