ಮದರಂಗಿ

ಅದೊಂದು ಹಬ್ಬದ ಮರುದಿನ ಮಾತ್ರ ಸ್ಕೂಲಿಗೆ ರೆಡಿಯಾಗಿ ಹೋಗಲು ಭಾರೀ ಉತ್ಸಾಹ..ನಾನಂತೂ ಶಾಲೆಗೆ ಹೊರಡುವ ಸಮಯಕ್ಕಿಂತ ಸುಮಾರು ಮುಂಚೆನೇ ಬೆನ್ನಿಗೆ ಚೀಲ ಹೊತ್ತುಓಡಿಯಾಗಿರುತ್ತಿತ್ತು..ಸ್ಕೂಲಿನ ಕಾರಿಡಾರ್ ನಲ್ಲಿ ನಡೆಯುವಾಗಲೂ ಕಣ್ಣು ಆ ಕಡೆ ಈ ಕಡೆ ಏನೋ ಹುಡುಕುತ್ತ ನೋಡುತ್ತಾ ಹೋಗುವುದು..ಯಾವ ಹಬ್ಬವಪ್ಪ ಅದು, ಏನನ್ನು ಹುಡುಕುವುದು ಅಂತ ಕೇಳಿದ್ರ? ನಾಗರಪಂಚಮಿ ಹಬ್ಬದ ಮರುದಿನದ ಮದರಂಗಿ ಕೈಗಳು..! ಪ್ರತಿಸಲವೂ ಸ್ವಲ್ಪ ಮದರಂಗಿ ತಾಕಿದರೂ ಅಚ್ಚ ಕೆಂಪು ಬಣ್ಣದಿಂದ ರಂಗೇರುವ ಕೈಯನ್ನು, ಹತ್ತತ್ತು ಸಲ ನೋಡಿಕೊಳ್ತಾ, ಶಾಲೆಗೆ ಹೋಗುತ್ತಿದ್ದೆ. ಪಾಠಕ್ಕೂ ಮೊದಲು, ಊಟದ ಬ್ರೇಕು, ಕಡೆಗೆ ಸಂಜೆ ಮನೆಗೆ ಹೋಗುವ ಬೆಲ್ ಹೊಡೆದು ವಾಪಸು ಮನೆಗೆ ಹೊರಡುವ ಗಳಿಗೆಗೂ , ಯಾರ್ಯಾರ ಕೈ ಎಷ್ಟು ಕೆಂಪಾಗಿದೆ, ಏನೇನು ಡಿಸೈನ್ ಮಾಡಿಕೊಂಡು ಬಂದಿದ್ದಾರೆ ಅಂತೆಲ್ಲ ಒಬ್ಬರಿಗೊಬ್ಬರು ತೋರಿಸಿಕೊಂಡು ಸಂಭ್ರಮ ಪಡುತ್ತಿದ್ದೆವು.. ನಾಗರಪಂಚಮಿ ಹಬ್ಬ ಶ್ರಾವಣ ಮಾಸದಲ್ಲಿ ಬರುವ ಮೊದಲ ಹಬ್ಬ. ನಾಗರ ಪೂಜೆಯಾದರೂ ಮನೆಯಲ್ಲೇ ದೇವರ ಪೂಜೆ ಮಾಡಿ ನೈವೇದ್ಯಕ್ಕಿಡುತ್ತಿದ್ದರೇ ಹೊರತು ನಮ್ಮ ಮನೆಯಲ್ಲಿ ಹಾವಿನ ಹುತ್ತಕ್ಕೆ, ನಾಗರ ಕಲ್ಲಿಗೆ ಹಾಲೆರೆಯುವ ಸಂಪ್ರದಾಯವೇನೂ ಇರಲಿಲ್ಲ. .ನಮಗಂತೂ ನಾಗರ ಪೂಜೆ, ಸ್ವೀಟು-ಅಪ್ಪಚ್ಚಿ ಎನ್ನುವುದಕ್ಕಿಂತಲೂ ಇದು ಮದರಂಗಿ ಹಚ್ಚಿ ಕೈ ಕ...