ಗುರುವಾರ, ಏಪ್ರಿಲ್ 30, 2020

ಮದರಂಗಿ

ಅದೊಂದು ಹಬ್ಬದ ಮರುದಿನ ಮಾತ್ರ ಸ್ಕೂಲಿಗೆ  ರೆಡಿಯಾಗಿ ಹೋಗಲು ಭಾರೀ ಉತ್ಸಾಹ..ನಾನಂತೂ ಶಾಲೆಗೆ ಹೊರಡುವ ಸಮಯಕ್ಕಿಂತ ಸುಮಾರು ಮುಂಚೆನೇ ಬೆನ್ನಿಗೆ ಚೀಲ ಹೊತ್ತುಓಡಿಯಾಗಿರುತ್ತಿತ್ತು..ಸ್ಕೂಲಿನ ಕಾರಿಡಾರ್ ನಲ್ಲಿ ನಡೆಯುವಾಗಲೂ ಕಣ್ಣು ಆ ಕಡೆ ಈ ಕಡೆ ಏನೋ ಹುಡುಕುತ್ತ ನೋಡುತ್ತಾ ಹೋಗುವುದು..ಯಾವ ಹಬ್ಬವಪ್ಪ ಅದು, ಏನನ್ನು ಹುಡುಕುವುದು ಅಂತ ಕೇಳಿದ್ರ? ನಾಗರಪಂಚಮಿ ಹಬ್ಬದ ಮರುದಿನದ ಮದರಂಗಿ ಕೈಗಳು..! ಪ್ರತಿಸಲವೂ ಸ್ವಲ್ಪ ಮದರಂಗಿ ತಾಕಿದರೂ ಅಚ್ಚ ಕೆಂಪು ಬಣ್ಣದಿಂದ ರಂಗೇರುವ ಕೈಯನ್ನು, ಹತ್ತತ್ತು ಸಲ ನೋಡಿಕೊಳ್ತಾ, ಶಾಲೆಗೆ ಹೋಗುತ್ತಿದ್ದೆ. ಪಾಠಕ್ಕೂ ಮೊದಲು, ಊಟದ ಬ್ರೇಕು, ಕಡೆಗೆ ಸಂಜೆ ಮನೆಗೆ ಹೋಗುವ ಬೆಲ್ ಹೊಡೆದು ವಾಪಸು ಮನೆಗೆ ಹೊರಡುವ ಗಳಿಗೆಗೂ , ಯಾರ್ಯಾರ ಕೈ ಎಷ್ಟು ಕೆಂಪಾಗಿದೆ, ಏನೇನು ಡಿಸೈನ್ ಮಾಡಿಕೊಂಡು ಬಂದಿದ್ದಾರೆ ಅಂತೆಲ್ಲ ಒಬ್ಬರಿಗೊಬ್ಬರು  ತೋರಿಸಿಕೊಂಡು ಸಂಭ್ರಮ ಪಡುತ್ತಿದ್ದೆವು..



ನಾಗರಪಂಚಮಿ ಹಬ್ಬ ಶ್ರಾವಣ ಮಾಸದಲ್ಲಿ ಬರುವ ಮೊದಲ ಹಬ್ಬ. ನಾಗರ ಪೂಜೆಯಾದರೂ ಮನೆಯಲ್ಲೇ ದೇವರ ಪೂಜೆ ಮಾಡಿ ನೈವೇದ್ಯಕ್ಕಿಡುತ್ತಿದ್ದರೇ ಹೊರತು ನಮ್ಮ ಮನೆಯಲ್ಲಿ ಹಾವಿನ ಹುತ್ತಕ್ಕೆ, ನಾಗರ ಕಲ್ಲಿಗೆ ಹಾಲೆರೆಯುವ ಸಂಪ್ರದಾಯವೇನೂ ಇರಲಿಲ್ಲ. .ನಮಗಂತೂ ನಾಗರ ಪೂಜೆ, ಸ್ವೀಟು-ಅಪ್ಪಚ್ಚಿ ಎನ್ನುವುದಕ್ಕಿಂತಲೂ ಇದು ಮದರಂಗಿ ಹಚ್ಚಿ ಕೈ ಕೆಂಪು ಮಾಡಿಕೊಳ್ಳುವ ಹಬ್ಬ ಎಂದೇ ಅನ್ನಿಸುತ್ತಿತ್ತು.ನಾಗರಪಂಚಮಿ ಹಬ್ಬಕ್ಕೆ ಅಮ್ಮ ನೈವೇದ್ಯಕ್ಕೆಂದು ಪಾಯ್ಸ ಚಿತ್ರಾನ್ನ, ಕೋಸಂಬರಿ ಎಲ್ಲ ಮಾಡುವುದರಲ್ಲಿ ಬ್ಯುಸಿ ಆಗಿದ್ದರೆ, ನಾವು ಮಾತ್ರ ಅವತ್ತಿನ ದಿನ ಸಂಜೆಗೆ ಕೈಗೆ ಹಚ್ಚಿಕೊಳ್ಳುವ ಮದರಂಗಿಯ ಯೋಚನೆಯಲ್ಲಿಯೇ ಮಗ್ನವಾಗಿರುತ್ತಿದ್ದೆವು.. ಮದರಂಗಿ ಎನ್ನುವುದು, ಈಗಿನಂತೆ ಮೆಹಂದಿ ಕೋನ್ ಗಳಲ್ಲಿ ತುಂಬಿಕೊಂಡು ಅಂಗಡಿಗಳಿಂದ ಬೇಕುಬೇಕೆಂದಾಗ ತಂದುಕೊಂಡು ಹಚ್ಚಿಕೊಳ್ಳುವ ಬಗೆಯದ್ದಾಗಿರಲಿಲ್ಲ... ಹಾಗಂತ ಮನೆಯಲ್ಲಿಯೇ ಮದರಂಗಿ ಗಿಡ ಇದ್ದರೂ ಸುಂಸುಮ್ನೆ ಪದೇ ಪದೇ ಹಚ್ಚಿಕೊಳ್ಳುತ್ತಲೂ  ಇರಲಿಲ್ಲ.. ಅದೇನೋ ವರ್ಷಕ್ಕೊಮ್ಮೆ ಈ ನಾಗರಪಂಚಮಿ ಹಬ್ಬಕ್ಕಾಗಿ, ಕೈ ತುಂಬಾ ಮದರಂಗಿ ಎಂಬ ತೇರ ಕೂರಿಸಲು ಕಾಯುತ್ತ ಕುಳಿತಿರುತ್ತಿದ್ದೆವು..ಇನ್ನು ಅದು ಬಿಟ್ಟರೆ, ಎಲ್ಲೋ ಒಮ್ಮೊಮ್ಮೆ ಮದುವೆ ಮುಂಜಿ ಸಮಯದಲ್ಲಿ, ಶುಭ ಸಮಾರಂಭದ ಸಂಕೇತವಾಗಿ, ಅಲಂಕಾರ ಮಾಡಿಕೊಳ್ಳುವುದಕ್ಕೋಸ್ಕರ ಮದರಂಗಿ ಚಟ್ನೆ ಬೀಸಿ ಕಾರ್ಯಕ್ರಮದ ಹಿಂದಿನ ದಿನ ಹಚ್ಚಿಕೊಳ್ಳುತ್ತಿದ್ದೆವು.. ಒಟ್ಟಾರೆಯಾಗಿ ಪ್ರತಿಸಲವೂ ಮದರಂಗಿ ಹಚ್ಚಿಕೊಳ್ಳುವುದು ಎನ್ನುವುದು ನಮ್ಮ ಪಾಲಿಗೆ ದೊಡ್ದಬ್ಬದಂತೆಯೇ ಅನ್ನಿಸುತ್ತಿತ್ತು...



ಯಾವುದೇ ವಿಷಯಕ್ಕೂ ಸಲಕರಣೆ ವ್ಯವಸ್ಥೆ ಮಾಡುವುದರಲ್ಲಿ ಅಪ್ಪಾಜಿ ಎಕ್ಸ್ಪರ್ಟ್. ನಮಗಿಂತಲೂ ಮುಂಚಿತವಾಗಿ, ನಾವು ಮದರಂಗಿ ಕಟ್ಟಿಕೊಳ್ಳಲು ಬೇಕಾಗುವ ದಾರವನ್ನು ಮಾಡಲು, ಹಿತ್ತಲು ಕಡೆಯ ಮಾಡಿನಲ್ಲಿ ಶೇಖರಿಸಿಟ್ಟಿರುವ ಬಾಳೆಪಟ್ಟೆ ಸಿಗತೆಯನ್ನುತೆಗೆದು, ತಂಪು ನೀರಿನ ಬಾನಿಯಲ್ಲಿ ನೆನೆಸಿಟ್ಟುಕೊಂಡು, ತೆಳ್ಳಗೆ ಸಿಗಿದು ರೆಡಿ ಮಾಡಿಟ್ಟಾಗಿರುತ್ತಿತ್ತು. ಹಬ್ಬದೂಟ ಗಡದ್ದಾಗಿ ಮುಗಿಸಿದ್ದೇ, ಯಾವಾಗ ಸ್ವಲ್ಪ ಮಧ್ಯಾಹ್ನದ ಬಿಸಿಲು ಇಳಿಯಿತು ಎಂದು ಕಂಡಿತೋ, ನಾವೆಲ್ಲಾ ಕವರು ಹಿಡಿದುಕೊಂಡು ಮದರಂಗಿ ಸೊಪ್ಪು ಕೊಯ್ಯಲು ಹೊರಟು ಬಿಡುತ್ತಿದ್ದೆವು. ಮದರಂಗಿ ಸೊಪ್ಪು ಕೇಳಿಕೊಂಡು ನಮ್ಮನೆಗೆ ಅಕ್ಕಪಕ್ಕದಿಂದ ಅನೇಕರು ಬರುತ್ತಿದ್ದರು. ಅವತ್ತಿನ ದಿನದ ಮಟ್ಟಿಗೆ, ಸಂಜೆಗೆ ಅಕ್ಕ-ಪಕ್ಕ, ಎಲ್ಲಿ ಯಾರು ಮಾತಿಗೆ ಸಿಕ್ಕಿದರೂ ಮಾತನಾಡುವ ಟಾಪಿಕ್ ಮಾತ್ರ ಮದರಂಗಿಯದೇ ಆಗಿರುತ್ತಿತ್ತು.  

ಮದರಂಗಿ ಸೊಪ್ಪು ಯಾರು ಕೊಯ್ದರೂ, ಅದನ್ನು ನಿಂಬೆ ರಸದೊಂದಿಗೆ ಹದವಾಗಿ ಒರಳಲ್ಲಿ ಬೀಸಿಕೊಡುವ ಕೆಲಸ ಮಾತ್ರ ಅಮ್ಮಂದೇ. ನಮಗೆ ಒರಳಲ್ಲಿ ಬೀಸುವ ಅಭ್ಯಾಸವಿರಲಿಲ್ಲ ಎಂದೇನಲ್ಲ..ಅಜ್ಜನ ಮನೆಯಲ್ಲೆಲ್ಲ, ಬೇಸಿಗೆ ರಜೆಯಲ್ಲಿ ಹಲಸಿನ ಕಾಯಿಯ ಹಪ್ಪಳ ಮಾಡುವಾಗ ದೊಡ್ಡವರು ಹಲಸಿನ ಕಾಯಿ ತೊಳೆಗೆ ಉಪ್ಪು ಮೆಣಸು ಹಾಕಿ ಬೀಸುವಾಗ, ಜೊತೆಗೆ ನಾವು ಒಂದ್ ಕೈ ಹಾಕಿ ಸ್ವಲ್ಪ ಹೊತ್ತು ಬೀಸಿದಂತೆ ಮಾಡಿ, ಹೊರಡುವಾಗ ತಿನ್ನಲು ರುಚಿ ರುಚಿಯಾದ ಹಪ್ಪಳದ ಹಿಟ್ಟು ಗಿಟ್ಟಿಸಿಕೊಂಡು ಹೋಗುತ್ತಿದ್ದೆವು..ಆದರೆ, ಚೂರು ಮುಟ್ಟಿದರೂ ಕೈ ಕೆಂಪಾಗುವ ಮದರಂಗಿ ಚಟ್ನೆಯನ್ನು ಬೀಸಲು  ಹೋದರೆ, ಕೈ ಮೇಲೆ ಮರುದಿನ ಮೂಡುವ ಚಂದದ ಚಿತ್ತಾರವನ್ನು ಕೆಡಿಸಿಕೊಳ್ಳುವ ಭಯವಿರುತ್ತಿದ್ದರಿಂದ ಚಟ್ನೆ ಅರೆಯುವ ಕೆಲಸ ಅಮ್ಮಂದೇ ಆಗಿರುತ್ತಿತ್ತು..ಪಕ್ಕದಲ್ಲಿ ಕೂತು ನೋಡಲು ನಾವು.. ಒರಳಲ್ಲಿ ಮದರಂಗಿಯ ಚಟ್ನೆ ಅರೆಯಲು ಶುರು ಮಾಡಿದಂತೆಯೂ,  ಆ ಪರಿಮಳದಿಂದ ನಮ್ಮ ಖುಷಿ ದುಪ್ಪಟ್ಟಾಗುತ್ತಿತ್ತು!

ಇನ್ನು ಮದರಂಗಿ ಚಟ್ನೆ ಕಟ್ಟುವ ಟೊಪ್ಪಿಗೆಯ ತಯಾರಿ.. ಎಲ್ಲಾದರೂ ಕುಳ್ಡಂಗಿ ಸೊಪ್ಪು ಅಥವಾ ಹಾರವಾಣ ಸೊಪ್ಪು ಯಾರೋ ಕೊಟ್ಟಾಗ ಒಮ್ಮೆ ಅದರಿಂದ ಟೊಪ್ಪಿಗೆ ಕಟ್ಟಿಸಿಕೊಂಡ ನೆನಪು.. ಆದರೆ ಪೇಟೆ ಮನೇಲಿದ್ದರಿಂದ ಎಲ್ಲ ಸಲವೂ ನಮಗದು ಸಿಗುತ್ತಿರಲಿಲ್ಲ. ನಾವು ಸುಮಾರಾಗಿ ತೊಳೆದು ಒಣಗಿಸಿಟ್ಟ ಹಾಲಿನ ಕವರ್ ಕಟ್ ಮಾಡಿ ಅದರಿಂದ ಟೊಪ್ಪಿಗೆ ಮಾಡಿಕೊಳ್ಳುತ್ತಿದ್ದೆವು.. ಅಪ್ಪಾಜಿ ಶ್ರದ್ಧೆಯಿಂದ ಕವರ್ಗಳನ್ನುತೊಳೆದು ಒಣಗಿಸಿ ರೆಡಿ ಮಾಡುತ್ತಿದ್ದ.. ಸಂಜೆಗೆ ಎಲ್ಲ ಮನೆ ಕೆಲಸ ಹವಣಿಸಿ ಬೇಗಬೇಗಮುಗಿಸಲಾಗುತ್ತಿತ್ತು.. ಮದರಂಗಿ ಹಚ್ಕ್ಯಾಳಕ್ಕು ಬೇಗ್ ಬೇಗ್ ಊಟ ಮುಗ್ಸಿ ಎಂದರೆ ತುಟಕ್ ಪಿಟಕ್ ಎನ್ನದೆ ಎಲ್ಲ ಊಟ ಗಂಟಲಲ್ಲಿ ಇಳಿಸಿಬಿಡುತ್ತಿದ್ದೆವು.. ತೀರಾ ಸಣ್ಣಕ್ಕಿದ್ದಾಗ ಮಕ್ಕಳು ಮಾತನಾಡಿದರೆ ಕೈ ಬಣ್ಣ ಕೆಂಪಾಗ್ತಲ್ಲೆ ನೋಡು ಮತ್ತೆ ಎಂಬಿತ್ಯಾದಿ ಬೆದರಿಕೆಗಳನ್ನು ಸುಲಭವಾಗಿ ನಂಬಿಬಿಡುತ್ತಿದ್ದೆವು. ನೀರು ಹೆಚ್ಚು ಕುಡಿಯಡಿ ಎಂಬ ಆಜ್ಞೆಯನ್ನೂ ಶಿರಸಾ ಪಾಲಿಸುತ್ತಿದ್ದೆವು. ಮಲಗುವ ಹಾಸಿಗೆ ರೆಡಿ ಇಟ್ಟುಕೊಂಡು, ಬಚ್ಚಲಿಗೆಲ್ಲ ಹೋಗಿಬಂದು, ಪ್ರಾಜೆಕ್ಟ್ ಮದರಂಗಿ ಶುರುವಾಗುತ್ತಿತ್ತು. ಅಮ್ಮ ಮದರಂಗಿಯ ಚಿಕ್ಕ ಚಿಕ್ಕ ಉಂಡೆಗಳನ್ನು ಮಾಡಿ ಉಗುರುಗಳ ಮೇಲೆ ಇಡುತ್ತಾ ಹೋಗುತ್ತಿದ್ದಳು. ಮದರಂಗಿಯ ಉಂಡೆ ಕೈಗೆ ಹಚ್ಚಲು ಶುರು ಮಾಡಿದ ಕೂಡಲೇ, ಆಗುತ್ತಿದ್ದತಣ್ಣನೆಯ ಆ ಕಚಗುಳಿ ಅನುಭವವೇ ಒಂತರ ಮಜಾ.. ಬೆರಳುಗಳಿಗೆ ಉಂಡೆ ಹಚ್ಚಿದ ನಂತರ ಬಾಳೆಪಟ್ಟೆ ದಾರ ಸುತ್ತಿ ಟೊಪ್ಪಿ ಕಟ್ಟುವ ಕೆಲಸ ಅಪ್ಪಾಜಿಯದಾಗಿರುತ್ತಿತ್ತು, ಅಕ್ಕನೂ ಸಹಾಯಕ್ಕಿರುತ್ತಿದ್ದಳು.. ಮನೆಯಲ್ಲಿ ನಾನೇ ಸಣ್ಣವಳಾಗಿದ್ದರಿಂದ ನನ್ನ ರಗಳೆಗಳನ್ನು ಕೇಳಲಾಗುತ್ತಿತ್ತು..ಅಲ್ಲಿ ಉಂಡೆ ಇಟ್ಟಿದ್ದು ಸರಿಯಾಗಿಲ್ಲ, ಇಲ್ಲಿ ಗುಂಡಗೆ ಬಂದಿಲ್ಲ, ದಾರ ಕಟ್ಟಿದ್ದು ಬಿಗಿಯಾಯಿತು, ಸಡಿಲವಾಯಿತು ಎಂದೆಲ್ಲ ರಗಳೆ ಮಾಡುತ್ತಿದ್ದೆ.. ಕಡೆಗೆ ಅಕ್ಕನತ್ರ ಹಚ್ಚಿಸ್ಕ್ಯ ಎಂಬ ಪರಿಹಾರ ನೀಡುತ್ತಿದ್ದರು, ಅಕ್ಕ ಹುಷಾರಾಗಿ ತನ್ನ ಕೈ ಬೆರಳುಗಳು ಹೆಚ್ಚುರಾಡಿಯಾಗದಂತೆ, ಒಪ್ಪ ಓರಣದಿಂದ ಉಂಡೆಗಳನ್ನು ಜೋಡಿಸುತ್ತಿದ್ದಳು...ನಮ್ಮದೆಲ್ಲ ಮುಗಿದ ಮೇಲೆ ಅಮ್ಮ, ಅದಾಗಲೇ ಬಣ್ಣ ಹತ್ತಿದ ಬಲಗೈ ಇಂದ ಎಡಗೈಗಷ್ಟೇ ಮದರಂಗಿ ಇಟ್ಟುಕೊಂಡು ಮಲಗುತ್ತಿದ್ದಳು . ಹಿಂದೆಲ್ಲ ಮದರಂಗಿ ಎನ್ನುವುದು ಕೇವಲ ಹೆಣ್ಣುಮಕ್ಕಳ ಅಂದಗಾರಿಕೆಗೆ ಎಂದಿರಲಿಲ್ಲ.. ಮದರಂಗಿ ದೇಹಕ್ಕೆ ತುಂಬಾ ತಂಪು ಎಂದು, ದೇಹದ ಉಷ್ಣ ಕಮ್ಮಿ ಮಾಡುತ್ತದೆ ಎಂದೂ ನಂಬಿಕೆ ಇದ್ದಿದುರಿಂದ, ಗಂಡಸರೂ ಕೂಡ ಕಡೇ ಪಕ್ಷ ಒಂದು ಕಿರು ಬೆರಳಿಗಾದರೂ ಮದರಂಗಿಯನ್ನು ಹಚ್ಚಿಕೊಳ್ಳುತ್ತಿದ್ದರು. ಇನ್ನು ನಾವು  ಫ್ರೆಂಡ್ಸ್ ಗ್ಯಾಂಗ್ ದೂ ಮದರಂಗಿ ಬಗ್ಗೆ ಸುಮಾರ್ ಕಥೆಗಳಿರುತ್ತಿದ್ದವು..  ಹಣೆ ಮೇಲೆ ಸಣ್ಣದೊಂದು ಚುಕ್ಕಿ ಇಟ್ಟು, ಅದು ಬೆಳಗಾಗುವಷ್ಟರಲ್ಲಿ ಕೆಂಪಾಗಿದ್ದರೆ, ಮದ್ವೆ ಆಗೋ ಗಂಡ ಭಾರೀ ಪ್ರೀತಿಸುತ್ತಾನೆ ಎಂಬಿತ್ಯಾದಿ ತಮಾಷೆಯ ಪ್ರಾಯೋಗಿಕ ಆಟಗಳೂ ಇದರ ಮಧ್ಯೆ ನಡೆಯುತ್ತಿತ್ತು, ಮದರಂಗಿ ಬಣ್ಣ ಹೆಚ್ಚು ದಿನ ಇರಬೇಕೆಂದು ಕೈ ಸವೆಯುವ ಯಾವ ಆಟಗಳನ್ನೂಆಡದೆ, ಯಾವ ಕೆಲಸವನ್ನೂ ಮಾಡದೆ, ಮದರಂಗಿ ಕಾಪಾಡಿಕೊಳ್ಳುವ ವರಸೆಯೂ ನಮ್ಮಲ್ಲಿ ನಡೆಯುತ್ತಿತ್ತು,..

ಮದರಂಗಿ ಬಣ್ಣದ ಆಸೆಯೇನೋ ಹೌದು, ಆದರೆ ಅದಕ್ಕಾಗಿ ಮಾಡುತ್ತಿದ್ದ ವಸವಂತ(ಸಿದ್ಧತೆ), ಪಡುತ್ತಿದ್ದ ಕಷ್ಟವೂ ಅಷ್ಟೇ ಇರುತ್ತಿತ್ತು.. ಮದರಂಗಿಯನ್ನು ಕೈಗೆ ಮತ್ತು ಕಾಲಿಗೆ ಕಟ್ಟಿದ ತಕ್ಷಣ, ಅಲ್ಲಿ ಇಲ್ಲಿ ತಾಕಿಸಿಕೊಳ್ಳದೇ ನಾವು ಮಲಗಿಬಿಡಬೇಕಿತ್ತು. ಮದರಂಗಿಯ ಬಣ್ಣ ಹಾಸಿಗೆಗೆ ಬಡಿಯಬಾರದೆಂದು, ವಿಶಿಷ್ಟವಾಗಿ ಹಳೆಯ ಮೇಲು ಹಾಸಿಗೆ ಯೊಂದಿಗೆ ರೆಡಿ ಮಾಡಲಾಗುತ್ತಿತ್ತು.. ;) ಕೈ ಕಾಲಿಗೆ ಮದರಂಗಿ ಕಟ್ಟಿಕೊಂಡು ಮಾಡುವ ನಿದ್ದೆ ಏನೂ ಸುಖಕರ ಎಂದೇನಲ್ಲ..ಸೊಳ್ಳೆ ಕಚ್ಚಿದರೆ ತುರಿಸಿಕೊಡಲು ಮತ್ತೊಬ್ಬರು ಬೇಕು. ಬೆಳಗಿನ ಜಾವ ಚಳಿಯಾದರೆ, ಮೈಮೇಲಿನ ಬೆಡ್ಶೀಟ್ ಆಕಡೆ ಈಕಡೆ ಹೋದರೆ, ಹೊದಕ್ಲು ಸರಿ ಮಾಡಲುಇನ್ನೊಬ್ಬರು ಬೇಕು..ಎರಡೂ ಕೈ, ಎರಡೂ ಕಾಲಿಗೂ ಬೆರಳುಗಳಿಗೆ ಟೊಪ್ಪಿಗೆಗಳು, ಬೇಕೆಂದಾಗ ಹೊರಳಲು,ಕೈಕಾಲನ್ನು ನಿರಾಸಾಯವಾಗಿ ಇಟ್ಟುಕೊಂಡು ಮಲಗಲು ಆಗುತ್ತಿರಲಿಲ್ಲ.. ಟೊಪ್ಪಿ ಕಟ್ಟಿರುವ ದಾರ ಸ್ವಲ್ಪ ಬಿಗುವಾಗಿದ್ದರೂ, ಮಧ್ಯರಾತ್ರೆಯಷ್ಟರಲ್ಲೇ ಬೆರಳುಗಳು ಉಬ್ಬಿಕೊಂಡು ಜುಮು ಜುಮು ಎನ್ನಲು ಶುರುವಾಗಿರುತ್ತಿತ್ತು.. ಏನೇ ಆಗಲಿ ಕೈ ಕೆಂಪಿ ಮಾಡಿಕೊಳ್ಳಬೇಕು ಅದೊಂದೇ ಧ್ಯೇಯ! ಎಷ್ಟೇ ಮಾಡಿದರೂ ಬೆಳಗಾಗುವಷ್ಟರರಲ್ಲಿ ಒಂದೆರಡಾದರೂ, ಬೆರಳಿಗೆ ಕಟ್ಟಿದ ಟೊಪ್ಪಿ ಎಲ್ಲ ಚೆಲ್ಲಾಪಿಲ್ಲಿಯಾಗಿ ಹಾಸಿಗೆಯ ಮೇಲೆ ಬಿದ್ದಾಗಿರುತ್ತಿತ್ತು. ಮರುದಿನ ಬೆಳಿಗ್ಗೆ ಬೇಗನೆ ಎದ್ದು ಕೈ ನೋಡಿಕೊಳ್ಳುವ ತವಕ.. ಮುಖವನ್ನೂ ತೊಳೆಯದೇ, ಮೊದಲು ಅಡುಗೆ ಮನೆಗೆ ಓಡಿ, ಮದರಂಗಿ ಬೀಸಿದ ಒರಳಲ್ಲಿ ಉಳಿದ ಒರಳು ತೊಳೆದಿಟ್ಟ ನೀರಿಗೆ ಕೈ ಅದ್ದಿ ತೊಳೆದುಕೊಳ್ಳುತ್ತಿದ್ದೆವು. ನಂತರ ಕೊಬ್ಬರಿಎಣ್ಣೆ ಹಚ್ಚಿ ಕೈಗೆ ಚೆನ್ನಾಗಿ ಮಸ್ಸಾಜ್ ಮಾಡಿಕೊಳ್ಳುತ್ತಿದ್ದೆವು.. ಉಗುರುಗಳೆಲ್ಲ ಅಚ್ಚ ಕೆಂಪಾಗಿರಬೇಕಷ್ಟೆ..ಮತ್ತೆರಡು ದಿನಕ್ಕೆ ಉಗುರುಗಳ ಬಣ್ಣ ಕೆಂಪಾಗಿ, ಕಪ್ಪಾಗಿ, ಸ್ವಲ್ಪ ದಿನಕ್ಕೆ ಕೈ ಸವೆದು ಅಲ್ಲಲ್ಲಿ ಕಪ್ಪು ಬಣ್ಣದ ಕಲೆಗಳ  ಅಪರಾವತಾರ ಆಗುವುದೆಲ್ಲ ಲೆಕ್ಕಕ್ಕೆ ಬರುತ್ತಿರಲಿಲ್ಲ.. "ಎಲ್ಲಿ ಎಷ್ಟು ಕೆಂಪಾತು ನೋಡನ.." ಎಂದು ಮನೆಯವರೆಲ್ಲ ಬೆಳಿಗ್ಗೆಯೇ ಬಂದು ವಿಚಾರಿಸುವುದು, ನಾವು ಹೋಗಿ ಕೈಯನ್ನು ತೋರಿಸಿ ಸಂಭ್ರಮಿಸುವುದು ಎಲ್ಲವೂ ಒಂದು ಅನೂಹ್ಯ ಬಾಂಧವ್ಯವಾಗಿರುತ್ತಿತ್ತು.

ಈಗೆಂತು ನಮಗೆ ರೆಡಿ ಮೆಹಂದಿ ಕೋನ್ ಸಿಗುತ್ತದೆ. ಬಗೆಬಗೆಯ ಡಿಸೈನ್ ಬಿಡಿಸಿ ನಾನು ಸಂಭ್ರಮಿಸುತ್ತೇನೆ..೩-೪ ತಾಸಿಗೆ ಬೇಕಾದ ಡಿಸೈನ್ ಕೈ ಮೇಲೆ ಮೂಡುತ್ತದೆ.. ಮೆಹಂದಿ ಕೋನ್ ಕಿಂತಲೂ ಒಂದು ಹೆಜ್ಜೆ ಮುಂದುವರೆದು, ಹೆಚ್ಚು ಪ್ರಯಾಸವಿಲ್ಲದೆ ಕಾರ್ಯಕ್ರಮಗಳಿಗೆ ಕೈಗೆ ಅಂಟಿಸಿಕೊಳ್ಳಬಹುದಾದ ಧಿಡೀರ್ ಮೆಹಂದಿ ಸ್ಟಿಕ್ಕರ್ ಗಳು ಕೂಡ ಇದೆ. ಫೌಂಡೇಶನ್ ಕ್ರೀಮ್ ನಿಂದ ಮಾಡಬಹುದಾದ ಶ್ವೇತ ವರ್ಣದ ಮೆಹಂದಿ ಕೋನ್ ಗಳೂ, ಕಪ್ಪು ಮೆಹಂದಿಗಳೂ ಫ್ಯಾಶನ್ ಲೋಕಕ್ಕೆ ಪಾದಾರ್ಪಣೆ ಮಾಡಿದೆ..ಹೊಸತನಕ್ಕೆ ಅವಕಾಶಗಳು ಹೆಚ್ಚಾಗಿವೆ.. ಆದರೂ ಇವೆಲ್ಲದರ ಮಧ್ಯೆಯೂ, ಈ ಸಾಂಪ್ರದಾಯಿಕ ಮದರಂಗಿ ಚಟ್ನೆ ಎನ್ನುವುದು ಸೌಂದರ್ಯ ಸರಕು ಎನ್ನುವುದಕ್ಕಿಂತಲೂ, ನನ್ನ ಪಾಲಿಗೆ ಇದೊಂದು ಭಾವನಾತ್ಮಕ ವಿಷಯ..ಯಾಂತ್ರಿಕ ಜಗತ್ತಿನಲ್ಲಿ ಒಂದಷ್ಟು ಸತ್ಯ ಎನಿಸುವಂತವುಗಳ ಪೈಕಿ ನನಗೆ ಇದೂ ಒಂದು..  

ಇಷ್ಟೆಲ್ಲಾ ಈಗ್ಯಾಕೆ ನೆನಪು ಮಾಡಿಕೊಂಡು ಎಂದರೆ, ರಜೆಗೆ ಊರಿಗೆ ಬಂದು ಸೇರಿಯಾಗಿದೆ.. ಕೊರೋನಾ  ಕಾಲದಲ್ಲಿ ಹೊರಗಡೆ ತಿರುಗಾಡುವಂತಿಲ್ಲ.. ಹಾಗಾಗಿ ಇದ್ದಲ್ಲಿಯೇ ಇದ್ದಿದ್ದಷ್ಟರಲ್ಲಿಯೇ ಸಂತೋಷ ಕಾಣಬೇಕಿದೆ..ಇಲ್ಲಿ ಪಕ್ಕದ ಮನೆಯಲ್ಲಿ ಮದರಂಗಿ ಗಿಡ ಕಂಡಿತು.. ನಾಗರಪಂಚಮಿಗೆ ಇನ್ನು ಮೂರು ತಿಂಗಳುಗಳಿವೆ.. ಆ ಸಮಯಕ್ಕೆ ಊರಲ್ಲಿಲ್ಲದಿದ್ದರೆ ಎಂದು ಯೋಚಿಸಿ, ಮಗಳಿಗೆ ಮದರಂಗಿ ಹಚ್ಚಿತೋರಿಸೋಣ ಎಂಬ ಆಲೋಚನೆ ಬಂತು..ಇವಳು ಹುಟ್ಟಿ ಆರು ವರ್ಷಗಳು ಕಳೆದರೂ , ಮಗು ಸಣ್ಣಕಿದೆ ಎಂದೋ, ನಾಗರಪಂಚಮಿ ಹಬ್ಬಕ್ಕೆ ಊರಲ್ಲಿರದಿದ್ದ ಕಾರಣಕ್ಕೋ.. ಅವಳ ಕೈಗೆ ಹೆಚ್ಚೆಂದರೆ ಒಂದೆರಡು ಸಲ ಹಚ್ಚಿದ ,ಒಂದು ಗಂಟೆಯೂ ಇಟ್ಟುಕೊಳ್ಳದ ಮೆಹಂದಿ ಕೋನ್ ಪರಿಚಯವಿತ್ತೇ ಹೊರತು, ಮದರಂಗಿ ಸೊಪ್ಪಿನ ಗುರುತಿರಲಿಲ್ಲ.. ಇಂದು ಇದೇ ಮೊದಲ ಬಾರಿಗೆ ನನ್ನ ಮಗಳಿಗೆ ಮದರಂಗಿ ಚಟ್ನೆ ಹಚ್ಚಿ ಟೊಪ್ಪಿ ಕಟ್ಟಿ ಕೈ ಕೆಂಪಾಗಿಸಿದ ಸಂಭ್ರಮ.. ! "ಕೈ ಕೆಂಪಿ ಕೆಂಪಿ ಮಾಡಿಕೊಡ್ಲಾ?" ಎಂದು ಕೇಳಿದಾಗ ಹುಂ ಎಂದಳು.. ಮದರಂಗಿ ಬೀಸಿ ರೆಡಿ ಮಾಡಿದೆನಾದರೂ, ಅದರ ಹೊಸ ತರದ ಪರಿಮಳಕ್ಕೆ, ಅದರ ಬಣ್ಣ ನೋಡಿ ಎಲ್ಲಿ ಗಾಡಿ ಉಲ್ಟಾ ಹೊಡೆಯುತ್ತದೆಯೋ ಎಂಬ ಅಳುಕಿತ್ತು.. ಆದರೆ ಉತ್ಸಾಹದಿಂದ, ನಮ್ಮ ಬಾಲ್ಯದ ಕಥೆಗಳ ಕೇಳುತ್ತ ಖುಷಿಯಿಂದ  ನಮ್ಮನೆ ಗುಬ್ಬಿ ಮದರಂಗಿಹಾಕಿಸಿಕೊಂಡಿತು.. ಅಲ್ಲಿಗೂ ಮುಗಿಯದೆ ಮತ್ತೆ ಮರುದಿನ ಅಂಗೈ ಮೇಲೆ ಬೊಟ್ಟು ಕೂಡ ಕೇಳಿ ಹಾಕಿಸಿಕೊಂಡಳು.. ಇವಳು ಖಯಾಲಿಗೆ ಒಮ್ಮೊಮ್ಮೆ ನೈಲ್ ಪೈಂಟ್ ಹಚ್ಚಿಕೊಳ್ಳುವುದುಂಟು.. ಹಚ್ಚಿಕೊಂಡ ನಾಲ್ಕು ದಿನಕ್ಕೆ ಅದು ಅರ್ಧಂಬರ್ಧ ಕಿತ್ತುಬಂದಿರುತ್ತದೆ. ಉಳಿದದ್ದಷ್ಟನ್ನು ಕೆರೆದು ಕೀಳ್ತಾ ಕೂರುವುದೊಂದು ಇವಳ ಆಟ. ಉಗುರಿನ ಅಂದಕ್ಕೆ ಅದಷ್ಟೇ ಗೊತ್ತಿದ್ದವಳಿಗೆ ಮೊದಲ ಬಾರಿಯ ಮದರಂಗಿ ಚಟ್ನೆ, ಅದಕ್ಕೆ ಟೊಪ್ಪಿಗೆ, ದಾರ, ರಾತ್ರೆ ಮದರಂಗಿ ಕಟ್ಟಿಕೊಂಡೇ ಮಲಗುವುದು, ಹಸಿರು ಚಟ್ನೆ ಮ್ಯಾಜಿಕ್ ಆಗಿ ರೆಡ್ ಕಲರ್ಕೊಡುವುದು ಎಲ್ಲವೂ ಆಶ್ಚರ್ಯವೋ ಆಶ್ಚರ್ಯ..ಬೆಳಿಗ್ಗೆಯಿಂದ ಮಗಳ ಪ್ರಶ್ನೆಗಳ ಮೇಲೆ ಪ್ರಶ್ನೆಗಳು, "ಕೈ ತೊಳೆದರೆ ಹೋಗ್ಬಿಡ್ತಾ ಮದರಂಗಿ ?, ಮಣ್ಣಾಡಿರೆ ಹೋಗ್ತಾ? " ಇತ್ಯಾದಿ.. ಏನೇ ಆಟ ಆಡಿದರೂ, ಕೈ ಕೊಳೆ ಮಾಡಿಕೊಂಡರೂ, ಸೋಪು ಹಚ್ಚಿ ತೊಳೆದರೂ ಹೋಗದ ಕೆಂಪು ಬಣ್ಣ.. ಎಲ್ಲವನ್ನೂ ಸಂಭ್ರಮಿಸುತ್ತಿದ್ದಾಳೆ :) ಮುಂದೆ ಕೈ ಉಗುರು ಬೆಳೆದಾಗ ಮದರಂಗಿ ಹೇಗೆ ಮೇಲೆ ಬರುತ್ತದೆ ಎಂಬುದ ನೋಡಲು ಕಾಡು ಕುಳಿತಿದ್ದಾಳೆ.. ಒಟ್ಟಾರೆಯಾಗಿ ಮದರಂಗಿ ಹಚ್ಚಿ ಮೊಗದಲ್ಲಿ ಸಂತೋಷದ ನೃತ್ಯವೇರಿಸಿಕೊಂಡಿರುವ ಅವಳಲ್ಲಿ ನನ್ನ ನಾನು ಕಾಣುತ್ತಿದ್ದೇನೆ..!! ಮತ್ತು ಇದೇ ನೆಪದಲ್ಲಿ ನನ್ನ ಕೈಗಳಿಗೂ ಇಷ್ಟದ ಮದರಂಗಿ ರಂಗೇರಿದ್ದು ಮತ್ತೂ ಖುಷಿ :) :)   

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ