ಟಿಬೆಟಿಯನ್ ಘುಮ್ ಮೊನಸ್ಟರಿ

ದಾರ್ಜೀಲಿಂಗ್ ಸುತ್ತಮುತ್ತಲಿನ ಪ್ರಾಕೃತಿಕ ಸೌಂದರ್ಯವಂತೂ ವರ್ಣಿಸಲಸದಳ. ಅದರ ಜೊತೆಯಲ್ಲಿ, ದಸರಾ ಸಮಯದಲ್ಲಿ ದಾರ್ಜೀಲಿಂಗ್ ಪ್ರವಾಸ ಹೋದದ್ದು, ಅಲ್ಲಿನ ಅನೇಕ ಧರ್ಮಗಳ ಹಬ್ಬಗಳ ಆಚರಣೆಯ ಕುರಿತಾಗಿಯೂ ತಿಳಿಯಲು ಸಹಾಯಕವಾಯಿತು. ಅಂತದೇ ಒಂದು ದೇವಿ ಪೂಜೆಯ ಆಚರಣೆಯ ವಿಶೇಷತೆ ಕಂಡದ್ದು ಅಲ್ಲಿನ ಟಿಬೆಟಿಯನ್ ಘುಊಮ್ಮೊನಸ್ಟರಿಯಲ್ಲಿ. ದಾರ್ಜೀಲಿಂಗ್ ನಲ್ಲಿರುವ ಟಿಬೆಟಿಯನ್ ಘುಮ್ ಮೊನಸ್ಟರಿಗೆ (ಮಠ) ಭೇಟಿ ಇತ್ತ ಕ್ಷಣ. ಭವಿಷ್ಯದ ಬುದ್ಧ ಎಂದು ಕರೆಯಲಾಗುವ ಗೌತಮ ಬುದ್ಧನ ಉತ್ತರಾಧಿಕಾರಿ, 'ಮೈತ್ರೇಯ' ಬುದ್ಧನ ದೇವಾಲಯವಿದು. ಟಿಬೆಟಿಯನ್ ಶೈಲಿಯಲ್ಲಿ ನಿರ್ಮಾಣವಾಗಿರುವ ಈ ಧರ್ಮಮಠದ ಬಾಗಿಲಿನ ಕಮಾನಿನಲ್ಲಿ ಗರುಡನ ಕೆತ್ತನೆಯಿದೆ. ಮೈತ್ರೇಯ ಬುದ್ಧನ ೧೫ ಅಡಿ ಎತ್ತರದ ಸಿಂಗರಿಸಿದ ಅದ್ಭುತ ಮೂರ್ತಿಯನ್ನು ಟಿಬೆಟಿನ್ನಿಂದಲೇ ಮಣ್ಣನ್ನು ತರಿಸಿ ಮಾಡಿದ ಮೂರ್ತಿಯಂತೆ! ಇದರ ಮುಂದಿರುವ ಎರಡು ದೊಡ್ಡ ಎಣ್ಣೆಯ ದೀಪಗಳು ಈ ವರೆಗೆ ಆರಿದ ದಾಖಲೆಯಿಲ್ಲ ಎನ್ನುತ್ತಾರೆ ಅಲ್ಲಿನ ಬೌದ್ಧ ಸನ್ಯಾಸಿಯೊಬ್ಬರು. ದೀಪದ ಸುತ್ತಲಿನ ಗೋಡೆಗಳಮೇಲೆ ಬುದ್ಧನ ಕುರಿತಾದ ವರ್ಣರಂಜಿತ ಕಿರುಚಿತ್ರಗಳು,ಅಲ್ಲಿ ಟಿಬೆಟಿಯನ್ ಬೌದ್ಧರು ಸಾಲಾಗಿ ಕುಳಿತುಕೊಂಡು ಒಂದೇ ರಾಗದಲ್ಲಿ ಮಂತ್ರ ಪಠನೆ ಮಾಡುತ್ತಿದ್ದುದು, ಡ್ರಮ್ಸ್ ಮತ್ತು ಸಿಂಬಲ್ಸ್ ಬಡಿತ, ಪೈಪ್ಮಾದರಿಯ ಸಂಗೀತ ವಾದ್ಯಗಳ ನುಡಿಸುತ್ತ ಮಾಡಿದ ಪ್ರಾರ್ಥನೆ ಎಲ್ಲವೂ ಸೇರಿ ಒಂದು ರೀತಿಯ ಮಾಂತ್ರಿಕ ಭಾವನೆ ನೀಡ...