ಗುರುವಾರ, ಜನವರಿ 12, 2023

ಗೊಂಬೆಯಾಟದ ರಾಮಾಯಣ!

ಎರಡು ತಾಸಿನಲ್ಲಿ ಗೊಂಬೆಯಾಟದ ಮೂಲಕ ರಾಮಾಯಣವನ್ನು ಅತ್ಯದ್ಭುತವಾಗಿ  ತೋರ್ಪಡಿಸಿದ ಖ್ಯಾತಿ ಧಾತು ತಂಡದವರಿಗೆ ಅಭಿನಂದನೆಗಳು. ರಾಮನ ಜನನದಿಂದ ಪ್ರಾರಂಭವಾಗಿ, ರಾವಣನ ವಧಿಸಿ ಸೀತೆಯೊಡನೆ ಪುರಪ್ರವೇಶ ಮಾಡುವಲ್ಲಿಯವರೆಗೆ, ಪ್ರತೀ ಕಥೆ ತೆರೆಗೊಳ್ಳುತ್ತಿದ್ದುದು ಸಭಿಕರ ಹರ್ಷೋದ್ಘಾರ ಮತ್ತು ಚಪ್ಪಾಳೆಯೊಂದಿಗೆ! ಅದೆಷ್ಟು ಸುಂದರವಾದ ಗೊಂಬೆಗಳು! ಸಂಗೀತ ಮಾತುಗಳಿಗೆ ತಕ್ಕಂತೆ ಗೊಂಬೆಗಳನ್ನು ಕುಣಿಸಬೇಕು,  ಸಮಯೋಚಿತವಾಗಿ, ಸನ್ನಿವೇಶಕ್ಕೆ ತಕ್ಕಂತೆ, ಭಾವನೆಗಳಿಗೆ ಒತ್ತು ಕೊಡಲು ಬಣ್ಣ ಬಣ್ಣದ  ಬೆಳಕುಗಳ ವೇದಿಕೆಯಲ್ಲಿ ಗೊಂಬೆಗಳ ಮೇಲೆ ತೋರಬೇಕು. ಎಲ್ಲರ ಕೆಲಸಗಳೂ ಏಕಕಾಲಕ್ಕೆ ನಡೆಯಬೇಕು. ಗೊಬೆಯಾಟದ ಪ್ರದರ್ಶನ ನೋಡುವುದೇ ನಮ್ಮೆಲ್ಲರ ಕಣ್ಣಿಗೆ ಒಂದು ಹಬ್ಬ!  ಅದರಲ್ಲೂ ರಾಮಾಯಣದ  ಕಥೆಯನ್ನು ಹೇಳಲು ಏಳು ಭಾಷೆಗಳ ಸಾಹಿತ್ಯ-ಸಂಗೀತ ಬಳಸಿರುವುದು ಈ ಪ್ರದರ್ಶನದ ವಿಶೇಷ ಭಾಗವಾಗಿತ್ತು. ಎಲ್ಲಾ ಸಂಗೀತಗಳಿಗೆ ಅರಿವಿಲ್ಲದೆ ಒಮ್ಮೆ ಕೈ ತಾಳ ಹಾಕಿದರೆ ಮತ್ತೊಮ್ಮೆ ತಲೆದೂಗಿ ಹೋಗುತ್ತಿತ್ತು. ಕಾರ್ಯಕ್ರಮದಷ್ಟೇ ಚೆನ್ನಾಗಿ ನೀವು ಈ ಕಾರ್ಯಕ್ರಮವನ್ನು ಎಂಜಾಯ್ ಮಾಡಿದ್ದು ನೋಡಿ ನಮಗೆ ಖುಷಿ ಆಯಿತು ಎಂದು ತಂಡದವರೊಬ್ಬರು ಹೇಳಿದಾಗಲೇ ನನ್ನರಿವಿಗೆ ಅದು ಬಂದದ್ದು! ಹಿನ್ನೆಲೆಗೆ ೨೦ಕ್ಕೂ ಹೆಚ್ಚು ಬಗೆಯ ಸಂಗೀತ ವಾದ್ಯಗಳನ್ನು ಬಳಸಿದ್ದು, ಪ್ರತೀ ಸನ್ನಿವೇಶಕ್ಕೆ ತಕ್ಕಂತೆ ಮೂಡುತ್ತಿದ್ದ ವಾದ್ಯ ಸಂಯೋಜನೆ, ತಡರಾತ್ರಿಯಾದರೂ ಮಕ್ಕಳ ಅರೆಗಣ್ಣನ್ನು ಮತ್ತೆ ಮತ್ತೆ ಕುತುಹೂಲದಿಂದ ತೆರೆಯುವಂತೆ ಮಾಡುತ್ತಿತ್ತು.

 








ಸೂತ್ರದ ಗೊಂಬೆಯಾಟ ಕರ್ನಾಟಕದ ಒಂದು ಸಾಂಸ್ಕೃತಿಕ ಕಲೆ. ಗೊಂಬೆಯಾಟ ಹಲವು ದೇಶಗಳಲ್ಲಿ ಇತ್ತೀಚಿಗೆ ಕಂಡು ಬಂದರೂ, ಇದರ ಮೂಲ ಮಾತ್ರ  ಭಾರತ. ಈ ಕಲೆಯ ಸೌಂದರ್ಯವನ್ನು ಕಂಡು ನಶಿಸಿ ಹೋಗುತ್ತಿರುವ ಕಲೆಯನ್ನು ಉಳಿಸಿ ಬೆಳೆಸಬೇಕೆಂಬ ಉದ್ದೇಶಕ್ಕೆ, ಅನುಪಮಾ ಹೊಸಕೆರೆ ಮತ್ತು ವಿದ್ಯಾಶಂಕರ್ ಹೊಸಕೆರೆ ದಂಪತಿಗಳು ಸ್ಥಾಪಿಸಿದ ಕಲಾ ತಂಡ 'ಧಾತು'. ಈ ತಂಡ ಪ್ರತೀ ವರ್ಷವೂ ನಡೆಸುವ ಎರಡು ಪ್ರಮುಖ ಕಾರ್ಯಕ್ರಮಗಳು - ನವರಾತ್ರಿ ಗೊಂಬೆ ಪ್ರದರ್ಶನ ಮತ್ತು ವರ್ಷಕ್ಕೊಮ್ಮೆ ನಡೆಯುವ ಈ ಅಂತಾರಾಷ್ಟ್ರೀಯ ಗೊಂಬೆ ಉತ್ಸವ. ಮಹಾಭಾರತ, ರಾಮಾಯಣ, ಕೃಷ್ಣ ಲೀಲೆ, ಭಾಗವತ, ಶಿವ ಪುರಾಣ, ಭಾರತೀಯ ಜಾನಪದ ಕಥೆಗಳು, ಭಾರತ ಜೀವನ ಶೈಲಿ ಇತ್ಯಾದಿ ವಿಷಯಾಧಾರಿತ ಪ್ರದರ್ಶನಗಳನ್ನು ೨೦೦೯ ರಿಂದ ನೀಡುತ್ತಲೇ ಬಂದಿದೆ. ಕರ್ನಾಟಕದ ಕಿನ್ಹಾಳ ದಿಂದ ತಯಾರಾಗುವ ಗೊಂಬೆಗಳಿಂದ ಹಿಡಿದು ದೇಶ ವಿದೇಶಗಳಿಂದ ಒಟ್ಟು ಮಾಡಿದ ೫೦೦೦ ಕ್ಕೂ ಹೆಚ್ಚು ಗೊಂಬೆಗಳ ಸಂಗ್ರಹವಿದೆಯಂತೆ. ಬೇರೆ ಬೇರೆ ದೇಶ-ಭಾಷೆಯ ರಂಗಭೂಮಿ ಕಲಾವಿದರು ಇವರಲ್ಲಿಗೆ ಬಂದು ಸೂತ್ರದ ಗೊಂಬೆಯಾಟದ ತರಬೇತಿ ಪಡೆದು ಹೋಗುತ್ತಾರೆ. ಈ ಕಳೆಯ ಉಳಿಸಿ ಬೆಳೆಸಲು, ಮಕ್ಕಳ ಬೇಸಿಗೆ ಶಿಬಿರಗಳೂ ಪ್ರತೀ ವರ್ಷನಡೆಯುತ್ತದೆ. 

ತಾಂತ್ರಿಕ ನಾವಿನ್ಯತೆ, ಆಧುನಿಕತೆಯ ಭರಾಟೆಯಲ್ಲಿ ಸಾಂಪ್ರದಾಯಿಕ ಮತ್ತು ಸಾಂಸ್ಕೃತಿಕ ಕಲೆಗಳು ಮರೆಯಾಗುತ್ತಿರುವುದು ದುರಂತವನ್ನು ಸವಾಲಾಗಿ ಸ್ವೀಕರಿಸಿ, ವಿಷಯಾಧಾರಿತ ಗೊಂಬೆಯಾಟದ ಪ್ರದರ್ಶನಗಳು, ತರಬೇತಿ ಇನ್ನಿತರ ಹತ್ತು ಹಲವು ಕಾರ್ಯಕ್ರಮಗಳ ಮೂಲಕ ಟೀವಿ ಮಾಧ್ಯಮದಷ್ಟೇ ಜನರ ಆಕರ್ಷಣೆ ಪಡೆಯಲು ಸಫಲರಾಗುತ್ತಿರುವ 'ಧಾತು' ತಂಡಕ್ಕೆ ಅಭಿನಂದನೆ ಮತ್ತು ಶುಭ ಹಾರೈಕೆ ತಿಳಿಸುತ್ತಾ..  













. ಆಸಕ್ತಿ ಇದ್ದವರು ಖಂಡಿತ Dhaatu ಭೇಟಿ ಕೊಡಿ. 


    

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ