ಮಂಗಳವಾರ, ಅಕ್ಟೋಬರ್ 24, 2023

ಚೌಸಟ್ ಯೋಗಿನಿ ದೇವಾಲಯ

ಭುವನೇಶ್ವರದ ನಗರದೊಳಗಿನ ಪ್ರಮುಖ ದೇವಾಲಯಗಳನ್ನೆಲ್ಲ ಮುಗಿಸಿ, ಮತ್ತಿನ್ಯಾವ ವಿಶಿಷ್ಟ ಸ್ಥಳವನ್ನು ನೋಡಬಹುದು ಎಂದು ಹುಡುಕಿದಾಗ ಗೂಗಲಮ್ಮ ಹೇಳಿದ್ದು, ಚೌಸ ಯೋಗಿನಿ ದೇವಾಲಯದ ಬಗ್ಗೆ. ಬೇರೆ ದೇವಾಲಯಗಳಷ್ಟು ಪ್ರಸಿದ್ಧ ಮಾಹಿತಿಗಳು ಇರದಿದ್ದರೂ, ಯೋಗಿನಿ ದೇವಾಲಯ ಭೇಟಿ ನೀಡಲೇ ಬೇಕು ಎಂದುಕೊಂಡು ಹೋಟೆಲ್ಲಿನಿಂದ ಆಕ್ಷಣಕ್ಕೆ ಕಾಲ್ಕಿತ್ತೆವು. ಗೂಗಲ್ ಮ್ಯಾಪ್ ಪ್ರಕಾರ ಪಟ್ಟಣದಿಂದ ಸುಮಾರು ೧೫ ಕಿಮೀ ಹೊರಭಾಗದಲ್ಲಿ ಇತ್ತು ಈ ದೇವಾಲಯ. ಹಾದಿ ಸಾಗುತ್ತ ಹೋದಂತೆ, ಮುಂದಕ್ಕೆ ಯಾರೂ ಹೆಚ್ಚು ಓಡಾಡದ ಹಳ್ಳಿಯ ರಸ್ತೆಗಳಲ್ಲಿ ನಮ್ಮ ಗಾಡಿಚಲಿಸುತ್ತಿತ್ತು. ಭೈರವಿ ನದಿಯ ಪಕ್ಕದಲ್ಲಿ ಹಾದುಹೋಗುವ ಈ ಹಾದಿಯಲ್ಲಿ ಎಡ ಬಲಗಳ ತಿರುಗಾಟವಾಗಿ, ಸ್ವಲ್ಪ ಸಮಯಕ್ಕೆ  ಗೂಗಲ್ ಮ್ಯಾಪ್ ಕೂಡ ಹಾದಿ ತೋರಿಸುತ್ತಿಲ್ಲ ಎಂದಾಗ ಹೇಗೆ ತಲುಪುವುದಪ್ಪಾ ಎಂದು ತುಸು ಆತಂಕವಾದರೂ, ಯಾರನ್ನಾದರೂ ಕೇಳುತ್ತಲೇ ಸಾಗುವುದು ಎಂದು ನಿರ್ಧರಿಸಿ ಮುಂದೆ ಸಾಗಿದೆವು. ತುಸು ಹೊತ್ತಿಗೆ ಮತ್ತೆ ಗೂಗಲ್ ಮ್ಯಾಪ್ಸ್ ಮಾಹಿತಿ ನೀಡಿ ಸಹಕರಿಸಿತು.  ಅದೊಂದು ಪುಟ್ಟ ಹಳ್ಳಿ ಹಿರಾಪುರ. ಊರ ಮನೆಗಳ ಮುಂದೆ ಹಾದು ಹೋಗುವ ಸಣ್ಣ ರಸ್ತೆಗಳ ದಾಟಿದಂತೆ ಮುಂದೆ ಅನಾವರಣ ಗೊಂಡಿದ್ದು ಒಂದು ಪುರಾತನ ಸಣ್ಣ ದೇವಾಲಯದ ವರಾಂಗಣ. ದೂರದಿಂದ ಕಲ್ಲಿನ ಸಣ್ಣ ವರ್ತುಲದಂತೆ ಕಾಣುತ್ತಿದ್ದ ಕಲ್ಲಿನ ಸ್ಮಾರಕದಲ್ಲಿ ಅಂತಹದ್ದೇನಿರಬಹುದು ಎಂದುಕೊಂಡು ಹೋದವಳಿಗೆ, ಹೊರಬರುವಾಗ ಇಂತದ್ದೊಂದು ಸ್ಥಳವನ್ನು ನೋಡದೇ ಹೋಗಿದ್ದರೆ, ಏನೋ ಕಳೆದುಕೊಂಡಿರುತ್ತಿದ್ದೆವು ಎನ್ನುವ ಭಾವ.    




ದೇವಾಲಯದ ವಾರಾಂಗಣದ ಪ್ರಾರಂಭದಲ್ಲಿ ಒಂದು ಈಶ್ವರನ ಸಣ್ಣ ಗುಡಿ, ಪಕ್ಕದಲ್ಲಿ ತಾಯಿ ಮಾಶಕ್ತಿಯ ವಿಗ್ರಹ ಅದರಿಂದ ಅಣತಿ ದೂರದಲ್ಲಿ ಕಾಣುತ್ತದೆ, ಕೇವಲ ನಾಲ್ಕು ಅಡಿ ಎತ್ತರದ ಶ್ರೀಯಂತ್ರದ ಸಾಂಕೇತಿಕವಾಗಿ ವರ್ತುಲದ ರೂಪದಲ್ಲಿನ ಕಲ್ಲಿನ ಪುರಾತನ  ದೇವಾಲಯ ಚೌಸಟ್ ಯೋಗಿನಿ ಮಂಡಲ, ಭಾರತದ ತಾಂತ್ರಿಕ ವಿದ್ಯೆಯ ಪ್ರಯೋಗಗಳ ಸಂಪ್ರದಾಯಗಳ ಉದಾಹರಿಸುವ ವಿಶೇಷ ಪೂಜಾ ಸ್ಥಳವಿದು. ಇತರ ದೇವಾಲಯಗಳಿಗಿಂತ ಭಿನ್ನವಾದ ವಿನ್ಯಾಸವನ್ನು ಹೊಂದಿರುವ ಈ ದೇವಾಲದಲ್ಲಿ, ಹೆಸರಿಗೆ ತಕ್ಕಂತೆ, ಚೌಸಟ್ ಅಂದರೆ ಹಿಂದಿ ಭಾಷೆಯಲ್ಲಿ ೬೪ ಎಂದರ್ಥ ಮತ್ತು 'ಯೋಗಿನಿ' ಎಂದರೆ ಶಕ್ತಿಗಳ ಒಟ್ಟುಗೂಡುವಿಕೆ. ವಾಸ್ತು ಶಾಸ್ತ್ರದ ಪ್ರಕಾರ, ಈ ವರ್ತುಲದ ದೇವಾಲಯದಲ್ಲಿ, ೬೪ ದಿಕ್ಕುಗಳಿಂದ ಶಕ್ತಿಗಳು ಮಿಳಿತವಾಗಿ, ಅದರ ಉನ್ನತಿ ಎಲ್ಲೆಡೆ ಪಸರಿಸುವುದರಿಂದ, ಈ ದೇವಾಲಯಕ್ಕೆ ಛಾವಣಿಯಾಗಲಿ, ಇತರ ದೇವಾಲಯಗಳಿಗೆ ಇರುವಂತೆ ಗೋಪುರವಾಗಲಿ ಇಲ್ಲ! ಇತರ ವಿಗ್ರಹಗಳಿಗಿಂತ ಮಧ್ಯದಲ್ಲಿರುವ ತುಸು ದೊಡ್ಡ ವಿಗ್ರಹವಾದ, ಕಮಲದ ಮೇಲೆ ನಿಂತಿರುವ, ಹತ್ತು ಭುಜಗಳುಳ್ಳ ಮುಖ್ಯ ಮಾಯಾಮಾಯ ದೇವಿಯ ವಿಗ್ರಹವಿದೆ. ಹಾಗಾಗಿ ಇದನ್ನು ಮಾಯಮಾಯ ದೇವಾಲಯ ಎಂದೂ ಕೂಡ ಕರೆಯಲಾಗುತ್ತದೆ.  ಮಧ್ಯಪ್ರದೇಶದ ಖಜರಾಹೋ ಯೋಗಿನಿ ದೇವಾಲಯ ಹೊರತು ಪಡಿಸಿದರೆ, ಭಾರತದಲ್ಲಿ, ಒಡಿಶಾದಲ್ಲಿ ಮಾತ್ರ ಕಂಡು ಬರುವ ಯೋಗಿನಿ ದೇವಾಲಯ, ಸಾವಿರಾರು ವರ್ಷಗಳ ಹಿಂದೆ  ೬೪ ಬಗೆಯ ವಿದ್ಯೆಗಳು ಮತ್ತು ಪ್ರಭಾವಿಸಬಲ್ಲ ತಂತ್ರ ವಿದ್ಯೆಯ ಅಭ್ಯಾಸದ ಸ್ಥಳವಾಗಿತ್ತು ಈ ದೇವಾಲಯ ಎಂಬ ಪುರಾಣ ಸಾಕ್ಷಿಯ ಬಗ್ಗೆ ಎಂದು ಅಲ್ಲಿನ ಅರ್ಚಕರು ತಿಳಿಸುತ್ತಾರೆ. ಸಾವಿರಾರು ವರ್ಷಗಳ ಶಿಥಿಲತೆ ಮತ್ತು ಧಾಳಿಗಳಿಗೆ ಈಡಾಗಿ, ಅನೇಕ ಯೋಗಿನಿಯರ ಮೂರ್ತಿಗಳು ಧ್ವಂಸಗೊಂಡಿದ್ದರೂ ಕೂಡ, ನೋಡಬಲ್ಲ ಸ್ಥಿತಿಯಲ್ಲಿ ಇದೆ ಈ ದೇವಾಲಯ. ಇದೀಗ ಭಾರತದ ಪುರಾತತ್ವ ಸಮೀಕ್ಷೆಯ ವತಿಯಿಂದ ಹಾನಿಯಿಂದ ಸಂರಕ್ಷಿಸಲ್ಪಟ್ಟ ದೇವಾಲಯಗಳಲ್ಲಿ ಇದೂ ಒಂದು. ದೇವಾಲಯದ ಒಳಹೊಕ್ಕರೆ ವರ್ತುಲಾಕಾರದ ಮಂಟಪದ ಮಧ್ಯದಲ್ಲೊಂದು ಮಂಟಪ. ವರ್ತುಲಾಕಾರದ ಕಲ್ಲಿನ ಗೋಡೆಗೆ ಅಂಟಿಕೊಂಡಂತೆ ಯೋಗಿನಿಯರ ವಿಗ್ರಹಗಳು. ೬೪ ಯೋಗಿನಿಯರ ಮೂರ್ತಿಗಳಲ್ಲಿ ಮುಖ್ಯವಾಗಿ ತಾರಾ, ಇಂದ್ರಾಣಿ, ವಾರಾಹಿ, ಕುಬೇರಿ, ಕೌಮಾರಿ, ಗೌರಿ,  ಸ್ವರಸ್ವತಿ,ಯಮುನಾ, ಯಶ, ವಿನಾಯಕಿ, ಕಾಮಾಕ್ಯ, ಸಮುದ್ರಿ, ಶಿವಾನಿ, ಗಂಗಾ, ಚಾಮುಂಡ, ಗಾಂಧಾರಿ, ಸರ್ವ ಮಂಗಳೆ, ವಾಯುವೇಗ ಇತ್ಯಾದಿ ಯೋಗಿನಿಯರು ತಮ್ಮ ತಮ್ಮ ವಾಹನದ ಮೇಲೆ ನಿಂತಿರುವ ಭಂಗಿಗಳ ಅವಶೇಷಗಳನ್ನು ಕಾಣಬಹುದು. ಗಣಪತಿಯ ಶಕ್ತಿಯನ್ನು ಸ್ತ್ರೀ ರೂಪದಲ್ಲಿನ ವಿನಾಯಕಿ ಅಥವಾ ಗಣೇಶ್ವರಿ ಎಂಬ ಹೆಸರಿನಿಂದ ಕರೆಯಲಾಗುತ್ತದೆ. ಇವುಗಳ ಜೊತೆಯಲ್ಲಿಯೇ ನಾಲ್ಕು ಏಕ ಪಾದ ಭೈರವ ಮೂರ್ತಿಗಳ ಕೆತ್ತನೆ, ಮಂಟಪದ ಹೊರಾಂಗಣದಲ್ಲಿ ಒಂಭತ್ತು ಕಾತ್ಯಾಯಿನಿಗಳ ವಿಗ್ರಹಗಳನ್ನೂ ಸೇರಿಸಿ ಒಟ್ಟಾರೆ ೮೧ ವಿಗ್ರಹಗಳ ಕೆತ್ತನೆ ಈ ಸುಂದರ ಮಂಟಪದಲ್ಲಿದೆ. ಎದುರಿಗೆ ಕೈ ಹಾಕಿದರೆ ಎಟುಕುವಷ್ಟು ನೀರಿನ ಒರತೆ ಇರುವ ಅಷ್ಟೇ ಪುಟ್ಟದಾದ ಬಾವಿಯೊಂದಿದೆ. ಊರಿನ ಗ್ರಾಮಸ್ಥರು ಅತ್ಯಂತ ಭಕ್ತಿಯಿಂದ ಪ್ರತಿನಿತ್ಯ ತುಪ್ಪದ ದೀಪ ಹಚ್ಚಿ ಯೋಗಿನಿಯರ ಪೂಜಿಸುತ್ತಾರೆ. ವರ್ಷಕ್ಕೊಮ್ಮೆ ಡಿಸಂಬರ್ ತಿಂಗಳಿನಲ್ಲಿ, ಚೌಸಟ್ ಯೋಗಿನಿ ಮಹೋತ್ಸವ ಕೂಡ ವಿಜೃಂಭಣೆಯಿಂದ ಜರುಗುತ್ತದೆ . ವಿಶೇಷತಃ ಪೂಜೆ ಪುನಸ್ಕಾರಗಳು, ಒರಿಸ್ಸಾದ ಇತಿಹಾಸದ, ಪುರಾಣಗಳ ಪ್ರಾಮುಖ್ಯತೆಯನ್ನು ತಿಳಿಸುವಂತಹ ಸಾಂಸ್ಕೃತಿಕ ಕಾರ್ಯಕ್ರಮಗಳು ಕೂಡ ಜರುಗುತ್ತದೆ ಎಂದು ಇಲ್ಲಿನ ಸ್ಥಳೀಯರು ಹೆಮ್ಮೆಯಿಂದ ಹೇಳುತ್ತಾರೆ. 





ಸ್ಥಳೀಯರ ಅನುಕರಿಸಿ, ಊದಿನಕಡ್ಡಿ ಹಚ್ಚಿ, ದೇವಿಯ ಕುರಿತಾದ ಸಂಗೀತದ ಹಾಡುಗಳ ಸೇವೆ ನೀಡಿ, "ಒಡಿಶಾದಲ್ಲಿ ನಾನು ನೋಡಿರ ಎಲ್ಲ ದೇವಸ್ಥಾನಕ್ಕಿಂತ ನಂಗೆ ಈ ಜಾಗ ತುಂಬಾ ಇಷ್ಟ ಆತು" ಎಂದು ಮಗಳು ಹೇಳುವಾಗ, ಕಳೆದೇ ಹೋದೆವು ಎಂದುಕೊಂಡಿದ್ದ ಸ್ಥಳದಲ್ಲಿ ಏನೋ ಸಿಕ್ಕಿದ ಧನ್ಯತೆಯ ಭಾವವೊಂದು ಮೂಡಿ ಬಂದದ್ದು ಸುಳ್ಳಲ್ಲ. ಒಮ್ಮೊಮ್ಮೆ ಗೂಗಲ್ ಮ್ಯಾಪ್ ಸುತ್ತಾಡಿಸುವುದರಿಂದ, ಈ ಸ್ಥಳಕ್ಕೆ ಸ್ಥಳೀಯರ ಕೇಳಿಕೊಂಡು, ಒಮ್ಮೆ ಖಂಡಿತಾ ಭೇಟಿ ನೀಡಬಹುದಾದ ಸ್ಥಳವಿದು. 

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ