ಚಾರಣ ಕಥೆ - ಕುಮಾರ ಪರ್ವತ!

ಮದುವೆ ಮನೆಯೊಂದಕ್ಕೆ ಹೋದಾಗ, ಎಲ್ಲ ಕಸಿನ್ಸ್ ಜೊತೆ ಲೋಕಾಭಿರಾಮದೊಂದಿಗೆ ಪ್ರಾರಂಭವಾದ ಮಾತುಕತೆ, ಎಲ್ಲರೂ ಸೇರಿ ಕುಮಾರ ಪರ್ವತ ಟ್ರೆಕಿಂಗ್ ಮಾಡೋಣ ಎಂಬಲ್ಲಿಗೆ ಕೊನೆಗೊಂಡಿತು. ಒಟ್ಟಾಗಿದ್ದ ಜನ ೧೨. ಕುಮಾರಪರ್ವತದಂತಹ ಅತಿ ಸುಂದರ ತಾಣಕ್ಕೆ ಚಾರಣ ಏರ್ಪಡಿಸುವುದು ಇಂದು ಕೆಲವರಿಗೆ ಸಣ್ಣ ಮಟ್ಟದ ಬಿಸಿನೆಸ್ ಸಹ ಆಗಿದೆ. ವಾರಾಂತ್ಯಗಳಲ್ಲಿ ಬೆಂಗಳೂರು ಮತ್ತು ಇತರ ಪ್ರದೇಶಗಳಿಂದ ಬರುವ ಸರಾಸರಿ ಚಾರಣಿಗರ ಸಂಖ್ಯೆ ೩೦೦-೪೦೦ ಮೀರಬಹುದು ಎಂಬ ಮಾಹಿತಿ ಕೇಳಿ ನಮ್ಮ ಪ್ಲಾನ್ ಯಾವ ಕಾರಣಕ್ಕೂ ರದ್ಧಾಗದೆ ಜಾರಿಯಲ್ಲಿರಲಿ ಎಂದು, ಏಜೆನ್ಸಿಯೊಂದನ್ನು ಹಿಡಿದು ಮೂರು ತಿಂಗಳ ಮುಂಚೆ, ಸುಬ್ರಮಣ್ಯಕ್ಕೆ ಪ್ರಯಾಣ ಸಹಿತವಾಗಿ ಚಾರಣದ ಅನುಮತಿ ತೆಗೆದುಕೊಂಡದ್ದಾಯಿತು. ತಯಾರಿ.. ಚಾರಣ ಯೋಜನೆಗೆ ಒಂದು ವಾಟ್ಸಪ್ಪ್ ಗ್ರೂಪ್ಮಾಡಿಕೊಂಡು, ಅದರಲ್ಲೊಂದಷ್ಟು ಕತೆ ಹರಟೆ, ಎಲ್ಲರೂ ಪ್ರತಿದಿನ ಇಂತಿಷ್ಟು ವಾಕಿಂಗ್ ಮಾಡಬೇಕು ಎಂಬಿತ್ಯಾದಿ ಪ್ಲಾನಿಂಗ್ ಎಲ್ಲವೂ ನಡೆಸಿದ್ದಾಯಿತು. ವಾಕಿಂಗ್ ನಿತ್ಯದ ಚಟುವಟಿಕೆ ಆಗಿದ್ದರೂ, ಕುಮಾರಪರ್ವತ ಟ್ರೆಕ್ ಅಷ್ಟು ಸುಲಭವಿಲ್ಲ, ಜನರು ಸೋತು ಮರಳಿ ಬರುತ್ತಾರೆ ಎಂಬಿತ್ಯಾದಿ ಮಿಶ್ರ ಅಭಿಪ್ರಾಯ ಹೋಗಿಬಂದವರ ಬಾಯಲ್ಲಿ ಕೇಳಿದ್ದರಿಂದಲೋ ಏನೋ, ವಾಕಿಂಗ್ ಸಾಲಲಿಕ್ಕಿಲ್ಲ ಎಂದು ಅಪಾರ್ಟ್ಮೆಂಟ್ ನ ಮೆಟ್ಟಿಲುಗಳನ್ನೇ, ೩-೪ ಮೆಟ್ಟಿಲುಗಳ ದಾಟಿ ದಾಟಿ ಏರುವ ವ್ಯಾಯಾಮ, ಸ್ಕ್ವಾಟ್ಸ್ ಇತ್ಯಾದಿ ಕವಾಯಿತುಗಳು ಚಾರಣಕ್ಕೂ ಒಂದು ...