ಬುಧವಾರ, ಮೇ 15, 2024

ಚಾರಣ ಕಥೆ - ಕುಮಾರ ಪರ್ವತ!

ಮದುವೆ ಮನೆಯೊಂದಕ್ಕೆ ಹೋದಾಗ, ಎಲ್ಲ ಕಸಿನ್ಸ್ ಜೊತೆ ಲೋಕಾಭಿರಾಮದೊಂದಿಗೆ ಪ್ರಾರಂಭವಾದ ಮಾತುಕತೆ, ಎಲ್ಲರೂ ಸೇರಿ ಕುಮಾರ ಪರ್ವತ ಟ್ರೆಕಿಂಗ್ ಮಾಡೋಣ ಎಂಬಲ್ಲಿಗೆ ಕೊನೆಗೊಂಡಿತು. ಒಟ್ಟಾಗಿದ್ದ ಜನ ೧೨. ಕುಮಾರಪರ್ವತದಂತಹ ಅತಿ ಸುಂದರ ತಾಣಕ್ಕೆ ಚಾರಣ ಏರ್ಪಡಿಸುವುದು ಇಂದು ಕೆಲವರಿಗೆ ಸಣ್ಣ ಮಟ್ಟದ ಬಿಸಿನೆಸ್ ಸಹ ಆಗಿದೆ. ವಾರಾಂತ್ಯಗಳಲ್ಲಿ ಬೆಂಗಳೂರು ಮತ್ತು ಇತರ ಪ್ರದೇಶಗಳಿಂದ ಬರುವ ಸರಾಸರಿ ಚಾರಣಿಗರ ಸಂಖ್ಯೆ ೩೦೦-೪೦೦ ಮೀರಬಹುದು ಎಂಬ ಮಾಹಿತಿ ಕೇಳಿ ನಮ್ಮ ಪ್ಲಾನ್ ಯಾವ ಕಾರಣಕ್ಕೂ ರದ್ಧಾಗದೆ ಜಾರಿಯಲ್ಲಿರಲಿ ಎಂದು, ಏಜೆನ್ಸಿಯೊಂದನ್ನು  ಹಿಡಿದು ಮೂರು ತಿಂಗಳ ಮುಂಚೆ, ಸುಬ್ರಮಣ್ಯಕ್ಕೆ ಪ್ರಯಾಣ ಸಹಿತವಾಗಿ ಚಾರಣದ ಅನುಮತಿ ತೆಗೆದುಕೊಂಡದ್ದಾಯಿತು.  

ತಯಾರಿ.. 

ಚಾರಣ ಯೋಜನೆಗೆ ಒಂದು ವಾಟ್ಸಪ್ಪ್ ಗ್ರೂಪ್ಮಾಡಿಕೊಂಡು, ಅದರಲ್ಲೊಂದಷ್ಟು ಕತೆ ಹರಟೆ, ಎಲ್ಲರೂ ಪ್ರತಿದಿನ ಇಂತಿಷ್ಟು ವಾಕಿಂಗ್ ಮಾಡಬೇಕು ಎಂಬಿತ್ಯಾದಿ ಪ್ಲಾನಿಂಗ್ ಎಲ್ಲವೂ ನಡೆಸಿದ್ದಾಯಿತು. ವಾಕಿಂಗ್ ನಿತ್ಯದ ಚಟುವಟಿಕೆ ಆಗಿದ್ದರೂ, ಕುಮಾರಪರ್ವತ ಟ್ರೆಕ್ ಅಷ್ಟು ಸುಲಭವಿಲ್ಲ, ಜನರು ಸೋತು ಮರಳಿ ಬರುತ್ತಾರೆ ಎಂಬಿತ್ಯಾದಿ ಮಿಶ್ರ ಅಭಿಪ್ರಾಯ ಹೋಗಿಬಂದವರ ಬಾಯಲ್ಲಿ ಕೇಳಿದ್ದರಿಂದಲೋ ಏನೋ, ವಾಕಿಂಗ್ ಸಾಲಲಿಕ್ಕಿಲ್ಲ ಎಂದು ಅಪಾರ್ಟ್ಮೆಂಟ್ ನ ಮೆಟ್ಟಿಲುಗಳನ್ನೇ, ೩-೪ ಮೆಟ್ಟಿಲುಗಳ ದಾಟಿ ದಾಟಿ ಏರುವ ವ್ಯಾಯಾಮ, ಸ್ಕ್ವಾಟ್ಸ್ ಇತ್ಯಾದಿ ಕವಾಯಿತುಗಳು ಚಾರಣಕ್ಕೂ ಒಂದು ವಾರದ ಮುಂಚೆ ಬಿಡದೇ ನಡೆಸಿದ್ದಾಯಿತು. ದೇಶದಲ್ಲೇ ಕಷ್ಟದ ಟ್ರೆಕ್ಕಿಂಗ್ಗಳಲ್ಲಿ ಹೆಸರಾಗಿರುವ ಕುಮಾರ ಪರ್ವತ ಟ್ರೆಕ್ ಮುಗಿಸುವುದು ನಮ್ಮ ನಮ್ಮ ಫಿಟ್ನೆಸ್ಗೆ ಸವಾಲು ಎಂಬ ಅರಿವು ಇತ್ತು. ಟೈಪೋಯ್ಡ್ನಿಂದ ಚೇತರಿಕೆ ಆಗುವಷ್ಟು ದಿನಗಳೂ ಯೋಗ ಮಾಡಿರಲಿಲ್ಲವಾದ್ದರಿಂದ, ಸಹಜವಾದ ಸ್ಟ್ರೆಚಿಂಗ್ ಮಾಡಿದರೂ ಕೂಡ ಮೈಕೈ ಮುರಿದುಕೊಳ್ಳುತ್ತಿದ್ದೇನೆ ಎಂದು ನನಗೆ ಭಾಸವಾಗುತ್ತಿತ್ತು ಆದರೆ ಉತ್ಸಾಹ ಮಾತ್ರ ಕಿಂಚಿತ್ ಕಡಿಮೆ ಆಗಿರಲಿಲ್ಲ. ತುಸು ಗಮನವಿಟ್ಟು ತಯಾರಿ ಮಾಡಿಕೊಂಡೆ.  ಈ ಮಧ್ಯೆ ಗಾಡಿಯಿಂದ ಬಿದ್ದು ಕಾಲು ಪೆಟ್ಟು ಮಾಡಿಕೊಂಡು ಟ್ರೆಕಿಂಗ್ ಗೆ ಅಕ್ಷಯನ ಗೈರುಹಾಜರಿ ಎಂದಾಗ ಎಲ್ಲರಿಗೂ ಬೇಸರವಾಯಿತು. ಇತ್ತೀಚಿಗಷ್ಟೇ ಗಿರಿಗದ್ದೆ ಮಹಾಲಿಂಗ ಭಟ್ಟರು ತೀರಿಕೊಂಡ ಕುರಿತಾಗಿ ಎಲ್ಲೆಡೆ ನ್ಯೂಸ್ ಇದ್ದಿದ್ದರಿಂದ, ಫೇಸ್ಬುಕ್ ತುಂಬಾ ಕುಮಾರ ಪರ್ವತದ ಚಾರಣದ ಚಿತ್ರಗಳು ಎಲ್ಲೆಡೆ ಮೇಲೆದ್ದು ತೋರುತ್ತಿದ್ದವು. ಟ್ರೆಕಿಂಗ್ ನ ಕೊನೆಯ ವಾರ, ಲಾಂಗ್ ವೀಕೆಂಡ್ ಸಿಕ್ಕಾಪಟ್ಟೆ ರಶ್ ಇರಬಹುದು ಎಂಬ ಗುಮಾನಿ ಇದ್ದರೂ ಕೂಡ ನಮ್ಮ ಗ್ರೂಪಿನ ಪ್ರತಿಯೊಬ್ಬರಿಗೂ ಅದೇನೋ ಹೋಗಿ ನೋಡಿದರಾಯಿತು ಎಂಬ ಹುಮ್ಮಸ್ಸೇ ಇದ್ದಿದ್ದರಿಂದ ಒಂದಲ್ಲಾ ಒಂದು ತಮಾಷೆ ಮಾಡಿಕೊಳ್ಳುತ್ತ ಕಾಲ ಕಳೆದೆವು. 

ಕುಮಾರ ಪರ್ವತ ಬೆಟ್ಟ ತಲುಪಲು ಎರಡು ದಾರಿಗಳಿವೆ. ಒಂದು ಸೋಮವಾರಪೇಟೆ ಮತ್ತೊಂದು ಕುಕ್ಕೆಸುಬ್ರಹ್ಮಣ್ಯ. ಸೋಮವಾರಪೇಟೆಯ ಹಾದಿಯನ್ನು ಒಂದೇ ದಿನದಲ್ಲಿ ಹತ್ತಿ ಇಳಿಯಬಹುದಂತೆ. ಮಾರನೆಯ ದಿನ ಮಲ್ಲಳ್ಳಿ ಫಾಲ್ಸ್ ನೋಡಿಕೊಂಡು ಬೆಂಗಳೂರಿಗೆ ಮರಳುವ ಯೋಜನೆಗಳೂ ಆ ಕಡೆ ಇಂದ ಮಾಡಬಹುದಂತೆ. ನಾವು ಹೋಗಿದ್ದು ಕುಕ್ಕೆ ಹಾದಿಯ ಚಾರಣ. ಟ್ರೆಕಿಂಗ್ ಮಾಡುವ ದಿನದ ಹಿಂದಿನ ದಿನ ರಾತ್ರಿ ಬೆಂಗಳೂರಿನಿಂದ ಹೊರಟು ೨೮೦ ಕಿಮೀ ಕ್ರಮಿಸಿ, ಸುಬ್ರಮಣ್ಯ ತಲುಪಿ, ಸಣ್ಣದೊಂದು ಗೆಸ್ಟ್ ರೂಮಿನಲ್ಲಿ ಫ್ರೆಶ್ ಆಗಿ ಚಾರಣದ ಸ್ಥಳಕ್ಕೆ ತಲುಪಿದ್ದಾಯಿತು. ತೀರ ಅಗತ್ಯದ ಭಾರವಿಲ್ಲದ ವಸ್ತುಗಳಿರುವ  ಸಣ್ಣ ಬ್ಯಾಗ್ ಗಳನ್ನು ಹೊತ್ತುಕೊಂಡು ಪ್ರಾರಂಭವಾಯಿತು ನಮ್ಮ ನಡಿಗೆ. ಬೇಸ್ ಕ್ಯಾಮ್ಪ್ ಸುಬ್ರಮಣ್ಯ ಪೇಟೆಯಿಂದ ಸುಮಾರು ಒಂದುವರೆ ಕಿಮೀ ದೂರದಲ್ಲಿದೆ. ನೋಡಿದರೆ ಅಲ್ಲಿ ಅದಾಗಲೇ ಜನಸ್ತೋಮವೇ ನೆರೆದಿತ್ತು!  

ಕುಮಾರ ಪರ್ವತ ಕಾಡಿನ ಚಾರಣ ಏರಲು ಬಂದಿರುವ 'ಜನರ ಜಾತ್ರೆ'! ಅಲ್ಲಿ ಕಾಯುವಾಗ, ಕೆಲವು ಪುಂಡ ಜನರು ಕೂಗುತ್ತ, ಗಲಾಟೆ ಮಾಡುತ್ತಿರುವಾಗ, ನಿರ್ಧಿಷ್ಟ ಸಂಖ್ಯೆಯ ಜನರಿಗೆ ಮಾತ್ರ ಅವಕಾಶ ನೀಡಿದರೆ ಮಾತ್ರ ಅಲ್ಲಿ ಹೋದವರಿಗೂ 'ಚಾರಣದ ನೈಜ ಅನುಭವ' ಪಡೆಯಲು ಸಾಧ್ಯ ಎಂದೆನಿಸಿದ್ದೂ ಸುಳ್ಳಲ್ಲ. ನಮ್ಮ ಕಣ್ಣು ಇಲಾಖೆಯ ಸಿಬ್ಬಂದಿಯ ಶಿಸ್ತಿನ ಪರಿಶೀಲನೆ ಕಡೆ ಹೋಯಿತು. ಶಿಸ್ತಿನ ಜವಾನರು ಬೆಳಗ್ಗೆಯಿಂದ ಸಾವಿರಕ್ಕಿಂತಲೂ ಮೇಲ್ಪಟ್ಟ ಚಾರಣಿಗರ ಪ್ರತಿ ಬ್ಯಾಗ್ ಗಳನ್ನು ಚೆಕ್ ಮಾಡಿದ್ದರೂ ಕೂಡ, ಅಷ್ಟೇ ಆಸ್ಥೆಯಿಂದ ಪ್ರತಿಯೊಬ್ಬರ ಬ್ಯಾಗ್ ನ ಪೂರಾ ಮಗುಚಿ ಚೆಕ್ ಮಾಡಿ ಬ್ಯಾಗಲ್ಲಿದ್ದ ಬೇಡದ ಕಸಗಳನ್ನು ತೆಗೆದು ಡಸ್ಟ್ ಬಿನ್ ಗೆ ಹಾಕುತ್ತಿದ್ದರು. ಜತೆಗೆ ಕೊಂಡೊಯ್ಯುವ ವಸ್ತುಗಳಲ್ಲಿ ಒಂದು ಸಣ್ಣ ಪ್ಲಾಸ್ಟಿಕ್ಚಾಕಲೇಟ್ನ್ನು ಬಿಡದೆ ಲೆಕ್ಕಕ್ಕೆ ಬರೆಯುತ್ತಿದ್ದರು.  ಬ್ಯಾಗಿನಲ್ಲಿ ಒಟ್ಟು ಎಷ್ಟು ಪ್ಲಾಸ್ಟಿಕ್ ವಸ್ತುಗಳಿವೆ ಎಂಬುದರ ಮೇರೆಗೆ ಮುಂಗಡ ಹಣವನ್ನು ಕಟ್ಟಿಸಿಕೊಳ್ಳುತ್ತಾರೆ. ಎಷ್ಟು ಪ್ಲಾಸ್ಟಿಕ್ ತೆಗೆದುಕೊಂಡು ಹೊರಟಿದ್ದೇವೆಯೋ ಅಷ್ಟೇ  ಮರಳಿ ತರಬೇಕು. ಇಲ್ಲವಾದಲ್ಲಿ ಕಟ್ಟಿದಷ್ಟುದುಡ್ಡಿನ ಹೊರತಾಗಿ, ಜೊತೆಗೆ ಮತ್ತೊಂದಷ್ಟು ದಂಡ ತೆರಬೇಕಾಗುತ್ತದೆ. ಇಲ್ಲಿ ನಾವು ಹೆಚ್ಚು ಕಮ್ಮಿ ೧.೫ ಗಂಟೆ ಕಾದರೂ ಕೂಡ, ಅರಣ್ಯ ಇಲಾಖೆಯವರು ಕೈಗೊಂಡ ಈ ಕಾಳಜಿ, ಬೆಟ್ಟಗಳಲ್ಲಿ ಮಾಲಿನ್ಯ ತಡೆಹಿಡಿಯಲು ಅತ್ಯಂತ ಸಹಾಯಕ ಎಂದು ಸಮಾಧಾನವಾಯಿತು. 


ಕರ್ನಾಟಕದ ಅತ್ಯಂತ ಸವಾಲಿನ ಚಾರಣ ಇದು! ಎರಡು ದಿನಗಳಲ್ಲಿ ಸಮುದ್ರಮಟ್ಟದಿಂದ ೫೮೦೦ ಅಡಿಗಳಷ್ಟು ಎತ್ತರದ, ೨೨ ಕಿಮೀ ಕ್ಲಿಷ್ಟದ ಹಾದಿಯನ್ನು ಕ್ರಮಿಸುವ ಚಾರಣವಿದು. ಕುಮಾರ ಪರ್ವತ ಚಾರಣದ ಪ್ರಥಮ ಹಂತ, ಚೆಕಿಂಗ್ ಪೋಸ್ಟ್ನಿಂದ ಗಿರಿಗದ್ದೆಯ ತನಕದ್ದು. ಸರಿ ಸುಮಾರು ಏಳು ಕಿಮೀ ದೂರ ನಡೆಯಬೇಕು.  ಆದರೆ ಇಲ್ಲಿ ದೂರ ಎಷ್ಟು  ಎನ್ನುವುದಕ್ಕಿಂತ  ಎಷ್ಟು ಗಂಟೆ ನಡೆಯ ಬೇಕು ಎಂದು ಕೇಳುವುದು ಲೇಸು. ನಿಯಮಿತವಾಗಿ ಇಲ್ಲಿಗೆ ಬರುವವರ ಹೊರತು ಪಡಿಸಿ, ಸಾಮಾನ್ಯ ಚಾರಣಿಗರಿಗೆ ೪ ರಿಂದ ೪.೩೦ ತಾಸು ಬೇಕಾಗುತ್ತದೆ. ಈ ದೂರವನ್ನು ಗಿರಿಗದ್ದೆಯವರು ಮತ್ತು ಅಲ್ಲಿಗೆ ಆಗಾಗ ಹೋಗುವವರು ಎರಡು ಗಂಟೆಯಲ್ಲಿಯೂ ಕ್ರಮಿಸುತ್ತಾರಂತೆ.  ಪ್ರಾರಂಭದಲ್ಲಿ ದಟ್ಟ ಅರಣ್ಯ ಪ್ರದೇಶ ನಮ್ಮಎದುರಿಗೆ ಸಿಗುತ್ತದೆ. ಪ್ರಾರಂಭದ ಉತ್ಸಾಹ, ಬಿರುಸು ನಡೆ, ಮಾತು ಕಥೆ ಹೊಡೆಯುತ್ತ, ಎತ್ತರೆತ್ತರ ಮರಗಿಡಗಳ ಕಣ್ಣರಳಿಸಿ ನೋಡುತ್ತಾ ಪ್ರಾರಂಭಿಸಿದ ಚಾರಣ, ಬಿಸಿಲೇರುತ್ತ ಹೋದಂತೆ ನಿಧಾನವಾಗತೊಡಗುತ್ತದೆ. ಅನೇಕ ಕಡೆಗಳಲ್ಲಿ ಬಿಸಿಲು ನೆಲವನ್ನು ಸ್ಪರ್ಶಿಸುವುದೇ ಇಲ್ಲ ಎಂಬಷ್ಟು ದಟ್ಟ ಕಾನನ ನಮ್ಮನ್ನು ಸುತ್ತುವರೆದಿರುತ್ತದೆ. ಸಾಕಷ್ಟು ದೂರ ಮರದ ಬೇರುಗಳಿಂದಲೇ ನಿರ್ಮಿತ ಕಡಿದಾದ ಆರೋಹಣ ಹಾದಿ. ಅಲ್ಲಲ್ಲಿ ವಿರಮಿಸಲು ಸಣ್ಣ ಪುಟ್ಟ ಕಲ್ಲಿನ ಬಂಡೆಗಳು ಸಿಗಬಹುದಷ್ಟೆ. ಕೆಲವೆಡೆ ಕಾಲು ಜಾರುವಷ್ಟು ನುಣುಪಾದ ಹಾದಿ, ಕೆಲವೆಡೆ ಕಣ್ಣು ಆ ಕಡೆ ಈ ಕಡೆ ಹಾಯಿಸದಂತೆ, ಗಮನವಿರಿಸಿಕೊಂಡು ಹೆಜ್ಜೆಯಿಡಬೇಕಾದಷ್ಟು ಕಡಿದಾದ ಹಾದಿ. ಆಗಷ್ಟೇ  ಆರೋಹಣ ಪ್ರಾರಂಭಿಸಿದ ನಮ್ಮ ಮುಖದಲ್ಲಿ ಜೋಶ್ ಇದ್ದರೆ, ಆ ಕಡೆ ಇಂದ ಬೆಳಿಗ್ಗೆ ಮುಂಚೆ ಗಿರಿಗದ್ದೆ ಯಿಂದ ಹೊರಟು ಚಾರಣ ಮುಗಿಸುತ್ತಿರುವವರ  ಮುಖ ಬಸವಳಿದಿರುತ್ತಿತ್ತು.  

 



ಚಾರಣ ಮಾಡುವಾಗ ಅತ್ಯಂತ ಸೂಕ್ಷ್ಮವಾಗಿ ಗಮನಿಸಿದಂತೆ ಸಣ್ಣ ಪುಟ್ಟ ವೈವಿಧ್ಯಮಯ ಕೀಟಗಳು ಕಂಡವು. ನಮ್ಮ ನಿಶ್ಯಬ್ಧತೆ, ಪಕ್ಷಿಗಳ ಕಲರವ ಕೇಳಲು ಸಹಾಯಕಾರಿ. ಮಳೆಗಾಲದ ಸಮಯಕ್ಕೆ ಹೋದರೆ, ಅನೇಕ ಬಗೆಯ ವನ್ಯಜೀವಿಗಳು , ಸರೀಸೃಪಗಳು, ಅದೆಷ್ಟೋ ಬಗೆಯ ಕೀಟಗಳನ್ನು ಕಾಣಬಹುದಂತೆ. ನಮ್ಮ ತಂಡದಲ್ಲಿ ಎಲ್ಲರೂ ಅವರವರ ಸಾಮರ್ಥ್ಯದ ವೇಗದಲ್ಲಿ ಸಾಗುತ್ತಿದ್ದುದರಿಂದ, ಮಂದಗತಿಯಲ್ಲಿ ಹೋಗುವವರು ಮರಗಿಡಗಳ ವೈವಿದ್ಯತೆಯನ್ನು ಅಧ್ಯಯನ ಮಾಡುತ್ತಾ ಸಾಗಿದರೆ, ಒಂದಷ್ಟು ಜನ ಮುಂದಕ್ಕೆ ಸಾಗಿ, ವಿಶ್ರಾಂತಿ ಸಮಯಕ್ಕೆ ಸಿಕ್ಕು ತಾವು ಅನ್ವೇಷಿಸಿದ ವಿಷಯಗಳ ತಿಳಿಸುತ್ತಿದ್ದುದರಿಂದ, ಮಾಹಿತಿಪೂರ್ಣ ಚರ್ಚೆಗಳು ನಮ್ಮ ಚಾರಣವನ್ನು ಇನ್ನಷ್ಟು ಆಸಕ್ತಿದಾಯಕವನ್ನಾಗಿಸಿತ್ತು. ಮಲಬಾರ್ ಕೆಂಪು ಅಳಿಲುಗಳು ಇಲ್ಲಿ ಸಾಮಾನ್ಗವಾಗಿ ಕಾಣಸಿಗುತ್ತದೆ ಎಂದು ಓದಿಕೊಂಡು ಹೋಗಿದ್ದರಿಂದ, ನನ್ನ ಕಣ್ಣುಗಳೆಲ್ಲ ಮರಗಿಡಗಳ ಕೊಂಬೆಗಳ ಮೇಲೆಯೇ ದೃಷ್ಟಿ ಹಾಯಿಸುತ್ತಿತ್ತು. ಆದರೆ ದುರಾದೃಷ್ಟಕ್ಕೆ ಅಳಿಲುಗಳು ನಮಗೆ ಕಾಣಸಿಗಲಿಲ್ಲ. ಕಾಡಿನ ಹಕ್ಕಿಗಳು ಅಲ್ಲಲ್ಲಿ ಹಾರುವುದ ಗಮನಿಸುತ್ತಾ ಮುಂದೆ ಸಾಗಿದೆವು. 









ಒಬ್ಬರ ಹಿಂದೆ ಒಬ್ಬರಂತೆ ಹೆಜ್ಜೆ ಹಾಕಿ ಕಾಡ ಪರ್ವತ ಏರತೊಡಗಿದೆವು. ಬೇರಿಗೆ ಬೆಸೆದುಕೊಂಡು ಹೊಸೆದುಕೊಂಡು ಏರಲೊಂದು ಸಣ್ಣ ಬೇರಿನ ದಾರಿ. ಕತ್ತೆತ್ತಿ ದೃಷ್ಟಿ ಹಾಯಿಸಿದಷ್ಟೂ ಬರಿ ಹಸಿರು, ರೆಂಬೆ,  ಕೊಂಬೆ,  ಗಿಡ ಮರಗಳು. ಏರ ಏರುತ್ತಾ ಏದುಸಿರು ಹೆಚ್ಚಾಯ್ತು. ದೊಡ್ಡ ಬಳಗ ಒಡೆದು ಸಣ್ಣ ಸಣ್ಣ ಗುಂಪುಗಳಾಗಿ ಅಲ್ಲಲ್ಲಿ ವಿಶ್ರಮಿಸಿ ಹತ್ತುವಂತಾಯಿತು



ಸುಮಾರು ೩.೫ ಕಿಮೀ ದೂರ ಕ್ರಮಿಸಿದ ಮೇಲೆ ಒಂದು ನೀರಿನ ಒರತೆಯ ಸ್ಥಳ ಸಿಗುತ್ತದೆ. ಮುಖ್ಯ ಚಾರಣದ ರಸ್ತೆಯಿಂದ ಬಲಕ್ಕೆ ಅಡ್ಡ ಹಾದಿಯಲ್ಲಿ ೨೦೦ ಮೀಟರ್ ನಷ್ಟು ದೂರ ಒಳಗೆ ಸಾಗಬೇಕು. ನೀರಿನ ತಂಪು ಕಂಡೊಂಡನೆ ಆದ ಖುಷಿ ಅಷ್ಟಿಷ್ಟಲ್ಲ. ನಾವು ಹೋಗಿದ್ದು ಬೇಸಿಗೆಯ ಸಮಯ ಆದ್ದರಿಂದ, ಭರಪ್ಪೂರ ನೀರಿರಲಿಲ್ಲ. ಪುಟ್ಟದೊಂದು ಜಲಪಾತದಿಂದ ನೀರು ಮೆದುವಾಗಿ ಇಳಿದು, ಕೆಳಗಡೆ ಕಲ್ಲುಬಂಡೆಗಳ ನಡುವೆ ಸುಳಿದು ಹೋಗುತ್ತಿತ್ತು. ಆದರೆ ಮಂಜುಗಡ್ಡೆಯಷ್ಟು ತಂಪು. ಮಳೆಗಾಲದ ಸಮಯದಲ್ಲಿ ಇದೇ ನೀರು ಭೋರ್ಗರೆಯುತ್ತಾ ಸಾಗುತ್ತದೆಯಂತೆ. ಅಲ್ಲಿಯೇತುಸು ದಣಿವು ಕಳೆದು, ನೀರಾಟ ಆಡಿ, ಪಾನಕ ಕುಡಿದು ತಂದಿದ್ದ ತಿಂಡಿಗಳನ್ನು ತಿಂದು ಕತೆ ಹೊಡೆದು ಫೋಟೋಗಳನ್ನು ಕ್ಲಿಕ್ಕಿಸಿಕೊಳ್ಳುವುದರಲ್ಲಿ ಒಂದು ತಾಸು ಕಳೆದು ಹೋಗಿದ್ದೇ ತಿಳಿಯಲಿಲ್ಲ.






ಜಾಗರೂಕತೆಯಿಂದ ಹೆಜ್ಜೆಯಮೇಲೊಂದ್ ಹೆಜ್ಜೆಯನಿಕ್ಕುತ ನಮ್ಮ ಪಯಣ ಮುಂದುವರೆಸಿದೆವು. ದಾರಿಯಲ್ಲಿ ವೈವಿಧ್ಯಮಯ ಹುಳಗಳು, ಬಣ್ಣಬಣ್ಣದ ಚಿಟ್ಟೆಗಳು ನಮ್ಮ ಚಾರಣವನ್ನು ವರ್ಣರಂಜಿತ ವಾಗಿಸುತ್ತಿದ್ದವು.  ಎರಡು ಕಿಮೀ ಗಳ ದಾರಿಯಾದರೂ, ಬಿಸಿಲು ನೆತ್ತಿಗೇರಿದ್ದರೂ, ಹೊಟ್ಟೆ ಚುರುಗುಟ್ಟುತ್ತಿದ್ದರೂ, ವಿವಿಧ ಬಗೆಯ ಭೂದೃಶ್ಯಗಳ, ಕಣಿವೆಗಳ ವಿಹಂಗಮ ನೋಟವು ಅಕ್ಕ ಪಕ್ಕದಲ್ಲಿ ಸಿಗುತ್ತಿದ್ದುದರಿಂದ, ಕಾಲುಗಳು ತಾವಾಗಿಯೇ ಮುಂದಕ್ಕೆ ಸಾಗುತ್ತಲಿದ್ದವು. 



ಕಾಡಿನ ಹಾದಿ ದಾಟಿದ ಮೇಲೆ ಮುಂದಕ್ಕೆ ಸಿಗುತ್ತದೆ ಹುಲ್ಲುಗಾವಲಿನ ಪ್ರದೇಶ. ಅಲ್ಲಿಂದ ವಿಸ್ತಾರವಾದ ಗುಡ್ಡ ಬೆಟ್ಟಗಳ ಅನಾವರಣ. ದೂರದಿಂದ ನುಣುಪಾದ ಕಂದು ಬಣ್ಣದ ಒಣ ಹುಲ್ಲಿನ ಹಾಸೇ ಇಷ್ಟು ಚಂದ ಕಾಣುವಾಗ ಇನ್ನು ಮಳೆಗಾಲದಲ್ಲಿ ಹಸಿರು ಹುಲ್ಲ  ಹೊದಿಕೆ ಹೊತ್ತು ಈ ಬೆಟ್ಟಗಳು ಅದಿನ್ನೆಷ್ಟು ಅಂದವಾಗಿ ಕಾಣಬಹುದು!? ಹುಲ್ಲುಗಾವಲಿನ ಹಾದಿಯೂ ಕೂಡ ಸಾಮಾನ್ಯದಲ್ಲ; ಕೆಲವೊಂದು ಜಾಗದಲ್ಲಿ ಒಮ್ಮೆ ಒಂದೇ ಒಂದು ವ್ಯಕ್ತಿ ದಾಟಬಹುದಾದ ದಾರಿ, ಚೂರು ಕಾಲು ತಪ್ಪಿದರೂ ಕೆಳಗಡೆ ಪ್ರಪಾತ!ಈ ದಾರಿಯಲ್ಲಿ ಸಾಮಾಗ್ರಿ ಸಾಗಿಸುವವರು ನನ್ನ ಮನಸ್ಸಲ್ಲಿ ಸಾಮಾನ್ಯವಾಗಿ ಉಳಿಯಲೇ ಇಲ್ಲ. ಅವರು ಅಸಾಮಾನ್ಯರೇ! ತುಸುದೂರಕ್ಕೆ ಹುಲ್ಲುಗಾವಲು ತುಂಬಿದ ಬೆಟ್ಟದ ಇಳಿಜಾರುಗಳು ಆರಂಭ,  ದೂರದಲ್ಲಿ ಕುಮಾರ ಪರ್ವತ, ಶೇಷ ಪರ್ವತ, ಭತ್ತದ ರಾಶಿ ಶಿಖರ, ಸಿದ್ಧಪರ್ವತಗಳು ಕಂಡವು.  









ಅಂತೂ ಇಂತೂ ಸುಧೀರ್ಘ ನಾಲ್ಕುವರೆ ತಾಸುಗಳ ಚಾರಣದ ನಂತರ ಅಲ್ಲಲ್ಲಿ ದನಕರುಗಳು ಕಂಡು ಬಂದಿದ್ದು ಭಟ್ಟರ ಮನೆ ಇಲ್ಲೇ ಎಲ್ಲೋ ಹತ್ತಿರದಲ್ಲಿದೆ ಎಂಬ ಕುರುಹನ್ನೀಡಿತು. ಹೆಚ್ಚಾಗಿ ಕುಮಾರ ಪರ್ವತ ಚಾರಣ ಒಂದು ದಿನದಲ್ಲಿ ಮುಗಿಯುವಂತದ್ದು ಕಷ್ಟ ಸಾಧ್ಯ ಹಾಗಾಗಿ ಚಾರಣಿಗರು ಇಲ್ಲಿ ಗಿರಿಗದ್ದೆಯ ಭಟ್ಟರ ಮನೆಯಲ್ಲಿ ಒಂದು ದಿನ ಉಳಿದು ಮಾರನೇ ದಿನ ಪರ್ವತ ಹತ್ತಿ ಇಳಿಯುತ್ತಾರೆ. ಅಲ್ಲಿ ನೀಡುವ  ಅನ್ನ, ತಿಳಿ ಸಾರು, ಮಜ್ಜಿಗೆ ಉಪ್ಪಿನಕಾಯಿ ಅಮೃತಕ್ಕೆ ಸಮ ಎನ್ನುತ್ತಾರೆ. ನಾವು ಮುಂಚೆಯೇ ಬುಕಿಂಗ್ ಮಾಡಿದ್ದಕ್ಕಾಗಿ ನಮಗೆ ಅಲ್ಲಿಂದ ಅನತಿ ದೂರದಲ್ಲಿರುವ ಫಾರೆಸ್ಟ್ ಡಿಪಾರ್ಟ್ಮೆಂಟ್ ನ ಒಂದು ಚೆಕ್ಪೋಸ್ಟ್ ಹೌಸ್ ನ ಬಳಿ ನಮಗೆ ಏಜೆನ್ಸಿ ವತಿಯಿಂದ ಊಟದ, ಟೆಂಟಿನ  ವ್ಯವಸ್ಥೆಯಾಗಿತ್ತು. ಆಯೋಜಕರು ಅಡಿಗೆ ಮಾಡುವ ತುರಾತುರಿಯಲ್ಲಿದ್ದರು. ಈ ವರ್ಷದ ಕೊನೆಯ ವಾರದ ಟ್ರೆಕಿಂಗ್ ಆಗಿದ್ದರಿಂದ, ಚಾರಣಿಗರ ಹಿಂಡೇ ಸರಿದಿತ್ತು ಅಲ್ಲಿ. ಎಲ್ಲಿ ನೋಡಿದರಲ್ಲಿ ಜನರ ಓಡಾಟ! ಆದರೆ ಯಾರೂ ಕೂಡ ಪ್ಲಾಸ್ಟಿಕ್ ಎಸೆಯುಂತಿಲ್ಲವಾದ್ದರಿಂದ ಜಾಗವು ಅತ್ಯಂತ ಸ್ವಚ್ಛವಾಗಿತ್ತು. ನಾವು ತಲುಪುವಾಗ ಹೊಟ್ಟೆ ಚುರುಗುಟ್ಟುತ್ತಿದ್ದುದರಿಂದ, ಮೊದಲು ಕೈಕಾಲು ತೊಳೆದು ಊಟ ಮಾಡಿದೆವು.ಚಾರಣಿಗರ ಊಟದ ವ್ಯವಸ್ಥೆಗಾಗಿ ಪ್ರತಿಯೊಂದೂ ಕೆಳಗಿನಿಂದ ಹೊತ್ತುಕೊಂಡು ತರುವುದಕ್ಕಾಗಿ, ತರಹೇವಾರಿ ಮೃಷ್ಟಾನ್ನ ಭೋಜನ ನಿರೀಕ್ಷೆ ಮಾಡುವಂತಿಲ್ಲ ಅಲ್ಲಿ. ಊಟದ ನಂತರ ತುಸು ಹೊತ್ತು ಟೆಂಟಿನಲ್ಲಿಯೇ ಕಾಲುಚಾಚಿ ಮಲಗಿದೆವು. ಅಲ್ಲಿ ಇದ್ದದ್ದು ಎರಡೇ ನೀರಿನನಲ್ಲಿ. ಒಂದು ತಟ್ಟೆ ಲೋಟಗಳನ್ನು ತೊಳೆದುಕೊಳ್ಳಲು ಕೈ ತೊಳೆಯಲು ಬಳಸುವ ನೀರಿನ ಜಾಗ, ಇನ್ನೊಂದು ಕುಡಿಯುವ ನೀರಿಗೆ. ನಾವು ಹೋದ ವಾರ ಸುಮಾರು ೧೦೦೦ ಜನ ಅಲ್ಲಿ ಉಳಿದ ದಾಖಲೆಯ ದಿನವಾದ್ದರಿಂದ, ಭಟ್ಟರ ಮನೆ ಮತ್ತು ಈ ಫಾರೆಸ್ಟ್ ಡಿಪಾರ್ಟ್ಮೆಂಟ್ ಚೆಕ್ಪೋಸ್ಟ್ ಹೌಸ್ ಎರಡೂ ಕೂಡ ಜನರಿಂದ  ತುಳುಕುತ್ತಿತ್ತು. ಒಂದು ಬಾಟಲಿ ನೀರು ಹಿಡಿದುಕೊಳ್ಳಲು ನಾವು ಸುಮಾರು ೨೫ ನಿಮಿಷ ಸರದಿಯಲ್ಲಿ ಕಾದೆವು!  ಅರಣ್ಯ ಇಲಾಖೆಯಿಂದ ಸ್ವಚ್ಚ ಮತ್ತು ಸುಸಜ್ಜಿತವಾದ  ಸ್ನಾನದ ಕೊಠಡಿ ಹಾಗೂ ಶೌಚಾಲಯಗಳಿವೆ. ಆದರೆ ಜನ ಜಾಸ್ತಿ ಇದ್ದಿದ್ದರಿಂದ ಸರದಿಯಲ್ಲಿ  ನಿಲ್ಲಬೇಕಿತ್ತು. ಬೆಟ್ಟ ಎಲ್ಲರಿಗೂ ಅಂತಹ ತಾಳ್ಮೆ ಕಲಿಸುತ್ತದೆ. ಚಾರಣವೇ ಹಾಗಲ್ಲವೇ, ಕೇವಲ ದೈಹಿಕ ಶ್ರಮ ಪರಿಶೀಲಿಸಲು, ಅಥವಾ ನಿಸರ್ಗ ಸೌಂದರ್ಯ ಸವಿಯಲಷ್ಟೇ ಅಲ್ಲ; ಪ್ರತಿಸಲವೂ ಹೊಸ ಸವಾಲುಗಳು ಮತ್ತು ನಾವು ಅದಕ್ಕೆ ಹೇಗೆ ಪ್ರತಿಸ್ಪಂದಿಸುತ್ತೇವೆ, ಹೊಂದಾಣಿಕೆ ಹೇಗೆ ಕಲಿಯುತ್ತೇವೆ ಎಂಬ ಹೋಗುವ ಉದ್ದೇಶಕ್ಕೂ ಆಗಿರುತ್ತದೆ.  











 ದಾಹ ಸುಸ್ತು ಕಳೆದು, ಸಂಜೆಯ ಇಳಿಬಿಸಿಲಿಗೆ ಗಿರಿಗದ್ದೆಯ ಗುಡ್ಡದ ಬುಡಕ್ಕೆ ಹೋಗಿಕುಳಿತೆವು. ಭಟ್ಟರ ಮನೆ ತುಸು ದೂರದಲ್ಲಿ ಅವರ ಒಂದಷ್ಟು ಅಡಿಕೆ ತೋಟ, ಅವರ ಹೈಕಳು ದನಗಳು ಇವಿಷ್ಟು ಬಿಟ್ಟರೆ ಸುತ್ತ ಮುತ್ತ ಎಂಟು ದಿಕ್ಕಿಗೂ ಗುಡ್ಡಬೆಟ್ಟಗಳು , ಅಂತಹ ಕಾಡಿನ ಜಾಗದಲ್ಲಿ ಅವರ ಒಂಟಿ ಮನೆಯ ಬಗ್ಗೆ ಆಶ್ಚರ್ಯ ಪಡುತ್ತಾ,ಅಲ್ಲೇ ಭಟ್ಟರ ಮನೆ ಕಡೆ ಓಡಾಡಿಕೊಂಡುಬರಲು ಹೋದೆವು. ಸಣ್ಣ ಹಂಚಿನ ಮನೆ. ಮನೆ, ಅಂಗಳ ತುಂಬಾ ಚಾರಣಿಗರೇ ತುಂಬಿ ತುಳುಕುತ್ತಿದ್ದಾರೆ. ಚಾರಣಿಗರ ಕಾಲು ತುಳಿತಕ್ಕೆ ಅಂಗಳ ತುಂಬಾ ಕೆಸರು. ಅಲ್ಲಿಯೂ ಅಷ್ಟೇ, ಸಾವಿರಾರು ಚಾರಣಿಗರ ನೂಕು ನುಗ್ಗಲು, ಊಟಕ್ಕೆ ಎಲ್ಲರೂ ತಟ್ಟೆ ಹಿಡಿದುಕೊಂಡು ಆಹಾರ ಪಡೆಯಲು ನಾ ಮುಂದು ತಾ ಮುಂದು ಎಂದು ಹವಣಿಸುತ್ತಿದ್ದರು. ಎರಡೂವರೆ ತಿಂಗಳ ಹಿಂದೆಯೇ ಬುಕಿಂಗ್ ಮಾಡಿ ಬಂದರೂ. ಕೊನೇ ಗಳಿಗೆಯಲ್ಲಿ ಲಾಂಗ್ ವೀಕೆಂಡ್ ಗೆ ಪ್ಲಾನಿಂಗ್ ಇಲ್ಲದೆ ಒಟ್ರಾಶಿ ಬಂದ ಅದೆಷ್ಟೋ ಪುಂಡು ಹೈಕಳುಗಳ ಗುಂಪು ಕಂಡಾಗ, ಚಾರಣಿಗರ ಸಂಖ್ಯೆಯ ಮಿತಿ ಇರಬೇಕಾದ ಅವಶ್ಯಕತೆ ಅಲ್ಲಿ ನೇರವಾಗಿ ಕಾಣುತ್ತಿತ್ತು. ಮುಂದಿನ ಸಲ ಪ್ರಸಿದ್ಧ ರಜಾದಿನಗಳನ್ನು ಚಾರಣಕ್ಕೆ ಆಯ್ಕೆ ಮಾಡಿಕೊಳ್ಳಬಾರದು ಎಂದು ನಾವು ನಮ್ಮಲ್ಲಿಯೇ ಮಾತನಾಡಿಕೊಂಡು ಬಂದೆವು.  

ಈ ಆಧುನಿಕ ಯುಗದಲ್ಲಿ ಆ ಕಾಡಿನ ಮಧ್ಯೆ ಬದುಕುವುದು ಸುಲಭದ ವಿಷಯವಲ್ಲ. ಕಾಡು ಪ್ರಾಣಿಗಳ ಉಪಟಳವೂ ಆಕಳುಗಳನ್ನು ಇಟ್ಟುಕೊಂಡ ಇವರಿಗೆ ಇರುತ್ತದೆ. ರಾತ್ರಿ ಪಯಣ ಒಳ್ಳೆಯದಲ್ಲ.ಕಾಡಾನೆಗಳು ಸಂಚರಿಸುವ ಜಾಗ ಇದು. ಒಂದು ದಿನಸಿ ತರಬೇಕು, ಮೂಲಭೂತ ವಸ್ತುಗಳ ಖರೀದಿ ಮಾಡಬೇಕು , ಅನಾರೋಗ್ಯ ಆಗಿದೆ ಎಂಬಿತ್ಯಾದಿ  ಏನೇ ಆದರೂ ಸುಬ್ರಹ್ಮಣ್ಯಕ್ಕೆ ೭ ಕಿಲೋಮೀಟರ್ ಕಲ್ಲು ಮುಳ್ಳುಗಳ ಹಾದಿಯಲ್ಲಿ ಕಾಲ್ನಡಿಗೆಯಲ್ಲಿ ಬಂದು ಮತ್ತೆ ೭ ಕಿಲೋಮೀಟರ್ ನಡೆದುಕೊಂಡೇ ಗುಡ್ಡದ ಮೇಲಿನ ಮನೆ ಸೇರಬೇಕು. ಅಲ್ಲಿ ತನಕ ಅಕ್ಕಿ, ತರಕಾರಿ ಇನ್ನಿತರ ವಸ್ತುಗಳನ್ನು ಹೊತ್ತುಕೊಂಡೇ ಹೋಗಿ ಅಡುಗೆ ಮಾಡಿ ಬಡಿಸುವ ಅವರ ವಿಶಾಲವಾದ ಮನಸ್ಸು ಇನ್ನಷ್ಟು ದಿನ ಇರಬೇಕಿತ್ತು. ಎಲ್ಲರ ಹೃದಯ ಗೆದ್ದಿದ್ದ ಗಿರಿಗದ್ದೆ ಭಟ್ಟರು ಹೃದಯಾಘಾತ ಆಗಿ ತೀರಿಕೊಂಡರು ಅನ್ನೋದು ದುಃಖದ ವಿಚಾರ ಎಂದು ಮಾತನಾಡಿಕೊಂಡು ಮರಳಿ ಬಂದೆವು. ಅಲ್ಲೀಗ ಅವರ ಕುಟುಂಬದವರೇ ಅಡುಗೆಯ ಜವಾಬ್ಧಾರಿಯನ್ನು ಮುಂದುವರೆಸಿಕೊಂಡು ಹೋಗುತ್ತಿದ್ದಾರೆ.  



ಸಂಜೆಯ ಸಮಯಕ್ಕೆ ಗುಡ್ಡದ ತುದಿಗೆ ಸೂರ್ಯಾಸ್ತ ನೋಡಲು ನೂರಾರು ಜನರು ನೆರೆದಿದ್ದರು. . ಎಲ್ಲರೂ ಅವರವರ ಪಾಲಿನ ವಿರಾಮದ ಸಂತೋಷವನ್ನು, ಫೋಟೋ ತೆಗೆದುಕೊಳ್ಳುವುದರ ಮೂಲಕ, ಗಾಳಿಗೆ ಮುಖವೊಡ್ಡಿ ಸುಮ್ಮನೆ ಕುಳಿತುಕೊಳ್ಳುವುದರ ಮೂಲಕ, ಕಥೆ ನಗು ಹರಟೆ, ಕೊನೆಯಲ್ಲಿ ಸೂರ್ಯಾಸ್ತ ನೋಡುವವರೆಗೆ ಮುಗಿಸಿಕೊಂಡರು. ತುಸು ಮೋಡದ ವಾತಾವರಣ ಇದ್ದಿದ್ದರಿಂದ ಸೂರ್ಯಾಸ್ತ ಅದ್ವಿತೀಯವಾಗೇನೂ ಕಂಡು ಬರಲಿಲ್ಲ. ಆದರೆ ಆ ದಿನದ ನಮ್ಮ ಚಾರಣದ ಸಾಧನೆಗೆ ಸಾಕ್ಷಿಯಾಗಿದ್ದು ಹೊರಟು ನಿಂತ ಸೂರ್ಯನನ್ನು ಸುಧೀರ್ಘವಾಗಿ ನೋಡಿ ಕಳಿಸಿ ಕೊಟ್ಟೆವು. ಕತ್ತಲಾಗುತ್ತ ಬಂದಂತೆ ಮೊಬೈಲ್ ನ ಆಪ್ ಬಳಸಿ, ವಿಶಾಲವಾದ ಆಗಸದಲ್ಲಿ, ಬೇರೆ ಬೇರೆ ನಕ್ಷತ್ರ ಪುಂಜಗಳನ್ನು, ಗ್ರಹಗಳನ್ನು ಹುಡುಕಿ ನೋಡಿಸಂತಸಪಟ್ಟೆವು. 

















ಶಹರಿನ ಸ್ಟ್ರೀಟ್ ಲೈಟುಗಳಲ್ಲಿ, ಕಣ್ಣು ಕುಕ್ಕುವ ವಾಹನಗಳ ಬೆಳಕಿನಲ್ಲಿ, ಗಗನಚುಂಬಿ ಅಪಾರ್ಟ್ಮೆಂಟ್ ಗಳ ಬೆಳಕಿನ ಮಧ್ಯೆ, ಕತ್ತಲಿನ ಆಗಸವೇ ಕಾಣುವುದುಅಪರೂಪ ಆಗಿದೆ ಹಾಗಾಗಿ ಅಲ್ಲಿ ಸಿಕ್ಕ ಸೊಗಸಾದ ಕಡುಗಪ್ಪು ಖಾಲಿ ಆಗಸವನ್ನು ಇನ್ನಷ್ಟು ಮತ್ತಷ್ಟು ಗ್ರಹಿಸಿ, ಸುತ್ತಮುತ್ತ ಓಡಾಡಿ ಮರಳಿ ಬಂದು ನಮ್ಮ ನಮ್ಮ ಗೂಡು ಸೇರಿಕೊಂಡೆವು.  ಮರಳಿ ಬರುವಾಗ ಕಂಡ ಉದಯಿಸುತ್ತಿದ್ದ ಚಂದ್ರ ಮಾತ್ರ, ಸೂರ್ಯನನ್ನೂ ಮೀರಿಸಿದ, ಗುಡ್ಡಗಳ ಸಾಲಿನಲ್ಲಿ, ಕಡುಗಪ್ಪು ಬಾನಿನಲ್ಲಿ, ತನ್ನ ಪ್ರಖರತೆಯ ಹರಡಿಕೊಂಡು ಬೆಳಕ ಚೆಲ್ಲುತ್ತಿದ್ದ ಚಂದ್ರೋದಯ ಸೌಂದರ್ಯವನ್ನು ಎಷ್ಟು ಬಣ್ಣಿಸಿದರೂ ಕಡಿಮೆಯೇ!




 ಆ ದಿನ ಬೇಗ ಮಲಗಲು ನಮಗೆ ತಿಳಿಸಲಾಗಿತ್ತು, ಏಕೆಂದರೆ ಬೆಳಿಗ್ಗೆ ೩ ಗಂಟೆಗೆ ನಾವು ಟ್ರೆಕಿಂಗ್ ಪ್ರಾರಂಭಿಸಲು ತಯಾರಿರಬೇಕಿತ್ತು. ರಾತ್ರಿಯ ಊಟಕ್ಕೆ ತರಕಾರಿ ಹಾಕಿದ ಪಲಾವ್ ಸಿಕ್ಕು, ಹೊಟ್ಟೆಯೊಳಗಿನ ಪರಮಾತ್ಮ ತೃಪ್ತಿಗೊಂಡ. ಅಷ್ಟು ಮೇಲಕ್ಕೆ ಏರಿದ್ದೇವೆ ಎಂಬ ಖುಷಿಗೋ, ಕಾಡಿನ ಮಧ್ಯೆ ಟೆಂಟ್ ಹಾಕಿ ಮಲಗಿ ಆಗಸ ನೋಡುವ ಪ್ರಚೋದನೆಗೋ ಅಥವಾ ಮರುದಿನದ  ಇನ್ನೂ ಕಷ್ಟದ ಟ್ರೆಕಿಂಗ್ ಮಾಡಲಿದ್ದೇವೆ ಎಂಬ ಕಾತುರತೆಗೋ ಏನೋ ಪುಟ್ಟದೊಂದು ಗಟ್ಟಿ ನಿದ್ದೆಯ ನಂತರ, ೧ ಗಂಟೆಯಿಂದ ನಾನು ಕಣ್ಣರಳಿಸಿಕೊಂಡು  ಮಲಗಿಕೊಂಡೇ ಆಗಸವನ್ನು ನೋಡುತ್ತಾ ಇದ್ದುಬಿಟ್ಟೆ.  ಆಗಸದಲ್ಲಿ ಚಂದ್ರ ತಲೆಯ ಮೇಲೆ ಪ್ರಖರವಾದ ಬೆಳಕನ್ನು ಬೀರುತ್ತಾ ನಗುತ್ತಿದ್ದ. ಎಲ್ಲೆಡೆ ತಣ್ಣನೆಯ ಗಾಳಿ. ಅಕ್ಕ ಪಕ್ಕದ ಜಾಗವನ್ನೆಲ್ಲ ಸಲೀಸಾಗಿ ನೋಡಲು ಸಾಧ್ಯವಾಗುವಂತೆ  ಚೆಲ್ಲಿದ ಬೆಳದಿಂಗಳು! ಚಂದ್ರನ ನೋಡುತ್ತ ಆ ಸಮಯಕ್ಕೆ ಇದ್ದ ಶಾಂತಿ ನಿಶ್ಯಬ್ದತೆ ಅದೆಂತಹ ದುಡ್ಡು ಕೊಟ್ಟು ಕೂಡ ಪಡೆವ ಸಂತೋಷಕ್ಕೆ ಸಮಾನವಲ್ಲ! ಏನೂ ಮಾಡದೆ ಸುಮ್ಮನಿರುವ ಸ್ಥಿತಿ. ಪದಗಳಲ್ಲಿ ಹೇಳಲು ಸಾಧ್ಯವಾಗದಂತಹ ಭಾವವದು, ಅದೊಂದು ಸುಖ! 




ಹಿಂದೆಲ್ಲ ಕುಮಾರಪರ್ವತದ ನೆತ್ತಿಯ ಮೇಲೇ ರಾತ್ರಿ ಉಳಿದುಕೊಳ್ಳೋ ಅವಕಾಶವಿತ್ತಂತೆ. ರಾತ್ರಿ ಪೂರ್ತಿ ಅಲ್ಲಿಯೇ ಕಳೆದು ಕುಮಾರಪರ್ವತದ ನೆತ್ತಿಯ ಮೇಲಿಂದ ಸೂರ್ಯೋದಯ ಮಧುರ ಕ್ಷಣಗಳನ್ನು ಕಣ್ತುಂಬಿಕೊಳ್ಳಬಹುದಾಗಿತ್ತಂತೆ. ಆದರೆ ಯಾವಾಗ ಚಾರಣದ ನೆಪದಲ್ಲಿ ಜನರು ಎಗ್ಗಿಲ್ಲದೆ ನಿಯಮಗಳನ್ನು ಕಡೆಗಣಿಸಿ, ಮೋಜುಮಸ್ತಿಗೆ ಬಳಸಿಕೊಂಡು, ತ್ಯಾಜ್ಯವಸ್ತುಗಳಿಂದ ಪರಿಸರವನ್ನು ಹಾಳುಗೆಡವಲು ಪ್ರಾರಂಭಿಸಿದರೋ, ರಾತ್ರಿ ತಂಗುವುದು ಗಿರಿಗದ್ದೆಯ ಫಾರೆಸ್ಟ್ ಚೆಕ್ ಪೋಸ್ಟ್/ಭಟ್ರಮನೆಯ ವರೆಗಷ್ಟೇಸೀಮಿತವಾಯ್ತು.  ಹಾಗಾಗಿ ಅಲ್ಲಿಂದ ಮುಂದೆ ಕುಮಾರಪರ್ವತದ ಸೂರ್ಯೋದಯ ಎಂಬುದು ಚಾರಣಿಗರ ಪಾಲಿಗೆ ಗಗನ ಕುಸುಮವಾಯಿತು. ಅದಾಗಿಯೂ ಕುಮಾರಪರ್ವತದ  ಸೂರ್ಯೋದಯದ ವೀಕ್ಷಣೆಯನ್ನು ಸವಾಲಾಗಿ ತೆಗೆದುಕೊಂಡು ಬೆಳಿಗ್ಗೆ ೩. ೩೦-೪ ಗಂಟೆಗೆ ಎದ್ದು ಹೊರಟರೆ, ಸೂರ್ಯೋದಯವನ್ನು ವೀಕ್ಷಿಸಬಹುದು. ನಮ್ಮ ತಂಡದವರೆಲ್ಲ ಎಲ್ಲಿಲ್ಲದ ಉತ್ಸಾಹದಿಂದ ಬೆಳಿಗ್ಗೆ ೩ ಗಂಟೆಗೆ ಎದ್ದು ನಿತ್ಯೋಪಕರ್ಮಗಳನ್ನು ಮುಗಿಸಿಕೊಂಡೆವು.  ಕೊರೆವ ಚಳಿ, ಸುತ್ತಲೂ ಚಂದ್ರನ ಮಂದ ಬೆಳಕಿನ ಮಬ್ಬು, ಸುರಿವ ಮಂಜು. ನಮ್ಮ ಏಜೆನ್ಸಿಯವರು ಬೆಳಿಗ್ಗಿನ ಚಾರಣದವರಿಗಾಗಿ, ಕಾಫೀ ಬಿಸ್ಕತ್ತು ಮತ್ತು ರಾಗಿ ಅಂಬಲಿಯನ್ನು ತಯಾರಿಸಿ ಇಟ್ಟಿದ್ದರು. ಬರೋಬ್ಬರಿ ಎರಡು ಲೋಟ ರಾಗಿ ಗಂಜಿ ಕುಡಿದು ನಾವೆಲ್ಲರೂ ಸಾಲಾಗಿ ಬ್ಯಾಟರಿ, ನೀರಿನ ಬಾಟಲನ್ನು ಏರಿಸಿಕೊಂಡು ಹೊರಟೆವು. ಅಲ್ಲಿ ಎರಡನೇ ಹಂತದ ಚೆಕಿಂಗ್. ಅನಾವಶ್ಯಕ ಪ್ಲಾಸ್ಟಿಕ್ ವಸ್ತುಗಳು, ಪರಿಸರಹಾನಿ ವಸ್ತುಗಳು ಸಿಕ್ಕಿದರೆ ಅವುಗಳನ್ನು ಅಲ್ಲಿಯೇ ತೆಗೆದುಬಿಡುವ ಅಧಿಕಾರ ಫಾರೆಸ್ಟ್ ಡಿಪಾರ್ಟ್ಮೆಂಟ್ ನವರಿಗೆ ಇರುತ್ತದೆ. ಇಲಾಖಾ ಸಿಬ್ಬಂದಿಗಳ ಬದ್ಧತೆಗೆ ಮತ್ತೊಂದು ಮೆಚ್ಚುಗೆ.  ಸಿಕ್ಕಾಪಟ್ಟೆ ಚಾರಣಿಗರಿದ್ದ ಕಾರಣ ಚೆಕಿಂಗ್ ಸ್ಥಳದಲ್ಲಿಯೇ ಅರ್ಧ ಗಂಟೆಯ ಕಾಯ್ವಿಕೆ ನಮ್ಮ ಪಾಲಿನ ದುರಾದೃಷ್ಟವಾಯಿತು. ನಮ್ಮ ತಂಡದಲ್ಲಿ ಅರ್ಧ ಪಾಲು, ಕಾಲಿಗೆ ಚಕ್ರ ಕಟ್ಟಿಕೊಂಡು ಸಿಕ್ಕಾಪಟ್ಟೆ ವೇಗದಲ್ಲಿ ಹೋಗುವವರು. ನಾವು ಒಂದಷ್ಟು ಹೆಣ್ಣುಮಕ್ಕಳು ಒಬ್ಬರಿಗೊಬ್ಬರು ಪ್ರೇರಣಾತ್ಮಕ ಮಾತುಗಳನ್ನು ಹೇಳುತ್ತಾ ಪರಸ್ಪರ ಚಾರಣ ವೇಗಕ್ಕೆ ಸಹಾಯ ಮಾಡುತ್ತಾ ಸಾಗಿದೆವು. ಸೂರ್ಯೋದಯದ ವೀಕ್ಷಣೆಯ ಟಾರ್ಗೆಟ್ ಇಟ್ಟುಕೊಂಡು ಸಾಧ್ಯವಾದಷ್ಟು ಎಲ್ಲಿಯೂ ವಿಶ್ರಾಂತಿ ತೆಗೆದುಕೊಳ್ಳದೆ ಎಲ್ಲರೂ ಒಕ್ಕೊರಲಿನಿಂದ ನಡೆದೆವು. ನಮ್ಮ ಗುಂಪಿನ ೪೫ ವರ್ಷದ ಸುಮಕ್ಕ ಇತ್ತ 'ತನ್ನಿಂದಾಗದು' ಎನ್ನುತ್ತಲೇ, ಅತ್ತ ಬಿಡಲೂ ಮನಸ್ಸಿಲ್ಲದೇ ತನ್ನ ಸಾಮರ್ಥ್ಯ ಮೀರಿ ಕುಮಾರ ಪರ್ವತ ಹತ್ತಿದ ಸಾಹಸಕ್ಕೆ ನಮ್ಮೆಲ್ಲರ ಮೆಚ್ಚುಗೆ ಪಡೆದವಳು!   


ಕುಳಿರ್ಗಾಳಿ, ಎಲ್ಲೆಲ್ಲೂ ಕತ್ತಲು. ಗಾಳಿ ಬೀಸುವ ರಭಸಕ್ಕೆ ಒಮ್ಮೊಮ್ಮೆ ದೇಹ ತೇಲುವ ಅನುಭವ! ನಮ್ಮ ನಮ್ಮ ಬ್ಯಾಟರಿ ಬೆಳಕಿನಲ್ಲಿ ಮುಂದಕ್ಕೆ ಹೆಜ್ಜೆ ಇಡಲು ಎಲ್ಲಿ ಕಾಣುತ್ತದೆಯೋ ಅದೊಂದೇ ಹಾದಿ! ಎಲ್ಲಿ ಕಾಲಿಡುತ್ತಿದ್ದೇವೆ ಎಂದೆಲ್ಲ ನೋಡಲು ಕೂಡ ಪುರುಷೋತ್ತಿಲ್ಲದ ವೇಗದಲ್ಲಿ ನಮ್ಮ ಚಾರಣ. ಅದೆಷ್ಟು ಬಂಡೆಕಲ್ಲುಗಳನ್ನು ಹತ್ತಿದೆವೋ ಲೆಕ್ಕವಿಲ್ಲ, ಕೆಲವೆಡೆ ಕಾಲಿನ ಮಂಡಿ ಮಡಚಿ ಎದೆಗೆ ತಾಕುವಂತಹ ಹೆಜ್ಜೆ! ಒಂದು ಕೈಯಲ್ಲಿ ಚಾರಣದ ಕೋಲು ಇನ್ನೊಂದು ಕೈಯಲ್ಲಿ ಬ್ಯಾಟರಿ. ತಣ್ಣನೆಯ ಗಾಳಿಯಿದ್ದರಿಂದ,  ಹಿಂದಿನ ದಿನದ ರೀತಿಯ ಚಾರಣ ಅನುಭವ ಮೈಬೆವರಿ ಒದ್ದೆಯಾಗಿಸದಿದ್ದರೂ, ದಾಹ ಮತ್ತು ದೇಹದ ಬಿಸಿ ದೇಹದ ಬಿಸಿ ಅರಿವಿಗೆ ಬರುತ್ತಿತ್ತು. ಪದೇ ಪದೇ ನೀರು ಕುಡಿಯುತ್ತಲಿರಬೇಕು. ಕಣ್ಣೆತ್ತಿ ನೋಡಿದರೆ ಸುತ್ತಮುತ್ತ ಕತ್ತಲು ಬರಿಗತ್ತಲು. ಹಿಂದಕ್ಕೆ ಮುಂದಕ್ಕೆ ಮಾತ್ರ ಬಿಳಿ ಮಲ್ಲಿಗೆ ಚೆಲ್ಲಿದಂತೆ ಗುಡ್ಡದ ತುಂಬಾ ಬ್ಯಾಟರಿಯ ಸಾಲು. ಮಿಂಚು ಹುಳಗಳೆಲ್ಲ ಸಾಲಾಗಿ ದಂಡೆತ್ತಿ ಹೋದಂತೆ! ಒಟ್ರಾಶಿ ಎಲ್ಲರೂ ನಡೆದದ್ದೇ..  ಅಯ್ಯಪ್ಪ ಎನಿಸುವಷ್ಟು ನಡೆದಾದ ಮೇಲೆ,  "ಕಲ್ಲುಮಂಟಪದ ಹತ್ತಿರ ಬಂದಿದ್ದೇವೆ" ಎಂದು ಮುಂದಕ್ಕೆ ಹೋಗುವವರು ಒಬ್ಬರು  ಹೇಳಿದಾಗ, ಚೆಕ್ಪೋಸ್ಟ್ ನಿಂದ ಮೂರು ಕಿಮೀ ಹತ್ತಿದ್ದೇವೆ ನಾವು ಎಂದು ಅರಿವಿಗೆ ಬಂದದ್ದು. ಚೂರು ಕಾಲು ಎಡವಿದರೂ ಪ್ರಪಾತ! ಹಿಂದಕ್ಕೆ ತಿರುಗಿ ನೋಡಿದರೆ, ಚೆಕ್ಪೋಸ್ಟ್ ಜಾಗದಿಂದಲೂ, ಮಬ್ಬು ಮುಸುಕಿದ  ಬ್ಯಾಟರಿ ಲೈಟುಗಳ ಹಾದಿ,ನಾವು ಎಷ್ಟು ದೂರ ಎಷ್ಟು ಎತ್ತರಕ್ಕೆ ಹತ್ತಿ ಬಂದಿದ್ದೇವೆ ಎಂಬುದನ್ನು ಸೂಚಿಸುತ್ತಿತ್ತು. ಕೆಳಗಡೆ ಬ್ಯಾಟರಿಯ ಸಾಲಿಗಿಂತ ಮೇಲಿನ ಚಂದ್ರನೇ ಹತ್ತಿರದಲ್ಲಿ ಇದ್ದಾನೆ ಎಂಬ ಅನುಭವ..ಅದೊಂದು ರೀತಿ ಆಶ್ಚರ್ಯ ಸಂತೋಷ ಭಯ ಎಲ್ಲವೂ ಒಮ್ಮೆಲೇ ಆದ ಅನುಭವ!  




ಹಾದಿಯಲ್ಲಿ, ಒಬ್ಬರ ಹಿಂದೆ ಇನ್ನೊಬ್ಬರು ಹತ್ತುತ್ತಿರುವಾಗ, ನಮಗೆ ಬೇಕೆಂದಾಗ ಮಧ್ಯದಲ್ಲೆಲ್ಲೂ ನಿಂತುಬಿಡಲು ಆಗುವುದಿಲ್ಲ. ಆಗಾಗ ಅವರಿವರು ಜಾರಿ ಬೀಳುವುದು, ಎಡವುವುದು, ಜನರ ಕೇಕೆ, ಇತ್ಯಾದಿಗಳ ಮಧ್ಯೆ ಬಲು ಜಾಗರೂಕತೆಯಿಂದ ನಾವು ಹೆಜ್ಜೆ ಹಾಕುತ್ತಿದ್ದೆವು. ಮಧ್ಯೆ ಕುಳಿತುಕೊಳ್ಳಲು ಸಿಗುವ ಜಾಗವೂ ಕೂಡ, ಅರಮಾದಾಯಕ  ರಾಜಾ ಸೀಟು ಆಗಿರುವುದಿಲ್ಲ. ಚಾರಣದ ಮುಖ್ಯ ಹಾದಿಗೆ ತೊಂದರೆ ಆಗದಂತೆ ಬೆಟ್ಟದ ಯಾವುದೋ ಬದಿಗಿನ ಬಂಡೆಕಲ್ಲನ್ನು ಆಯ್ದು ಕುಳಿತುಕೊಳ್ಳಬೇಕಾಗಿತ್ತು. ಅದೂ ಕೂಡ ಕೆಳಗಡೆ ನೋಡಿದರೆ ಪ್ರಪಾತ! ಕೊಡಗು ಜಿಲ್ಲೆಯ ಎರಡನೇ ಅತೀ ಎತ್ತರದ ಶಿಖರ ಕುಮಾರಪರ್ವತ. ಕರ್ನಾಟಕದ ನಾಲ್ಕನೇ ಎತ್ತರದ ಶಿಖರ ಎಂಬ ಖ್ಯಾತಿಯೂ ಇದೆ. ನಮಗೆ ಭಾರತದ ಎರಡನೇ ಅತೀ ಕಷ್ಟದ ಚಾರಣವಿದು ಎಂದು ಏಕೆ ಹೇಳುತ್ತಾರೆ, ಇದರ ಅಗಾಧತೆ ಏನು ಎಂಬುದು ಅರ್ಥವಾಗಿದ್ದ ಸಮಯ! ಅದಕ್ಕಿಂತಲೂ ಹೆಚ್ಚಾಗಿ ಸಾಕಷ್ಟು ಚಾರಣದ ಹಾದಿ ಅರಣ್ಯದ ಹೊದಿಕೆ ಇಲ್ಲದ ಹಾದಿಯಾದ್ದರಿಂದ ಬಿಸಿಲೇರಿದ ಮೇಲೆ ಈ ಚಾರಣ ಅತ್ಯಂತ ಕಷ್ಟ. ಬೆಳಕು ಹರಿಯುವ ಮುನ್ನ ಹೊರಡುವುದೇ ಸರಿಯಾದ ನಿರ್ಧಾರ. ತಂದಿದ್ದ ಡ್ರೈ ಫ್ರೂಟ್ಸ್ಗಳನ್ನು ಸ್ವಲ್ಪ ಮೆಂದು ನೀರು ಕುಡಿದು ತುಸು ಶಕ್ತಿಯನ್ನು ತಂದುಕೊಂಡಿದ್ದಾಯಿತು.  ತಂಡದಲ್ಲಿದ್ದ ನಾವೆಲ್ಲರೂ ಜಿದ್ದಿಗೆ ಬಿದ್ದಂತೆ ಒಂದಿಷ್ಟೂ ನೋವನ್ನು ತೋರ್ಪಡಿಸದಂತೆ, ಹಿತವಾದ ಮಾತು, ಮುಖದಲ್ಲಿನ ನಗು ಒಂದಿನಿತೂ ಮಾಸದಂತೆ ಸಾಗೋ ಗತಿಯೇ ಪರಸ್ಪರ ಸ್ಪೂರ್ತಿಯಾಯಿತು. ನಮ್ಮ ಕೈಯಲ್ಲಿ ಈ ವರೆಗೆ ಆಗುತ್ತಿದೆ, ಮುಂದಕ್ಕೂ ಆಗುತ್ತದೆ ಎಂದು ಪರಸ್ಪರ ಒಬ್ಬರಿಗೊಬ್ಬರು ಪ್ರೋತ್ಸಾಹಿಸಿಕೊಂಡು, ಮತ್ತೆ ಮುಂದಕ್ಕೆ ದಾಟಿ ಎರಡನೇ ಅತೀ ದೊಡ್ಡ ವಿಭಾಗ, ಶೇಷ ಪರ್ವತವನ್ನು ತಲುಪಿದೆವು. ಬಲಕ್ಕೆ ಕಡಿದಾದ ಬಂಡೆಯ ಮುಖದ ಜೊತೆ ವಿಶಾಲವಾದ ಕಂದು ಹಸಿರು ಹೊದಿಕೆಯ ಕಣಿವೆ ಕಾಣುತ್ತದೆ. ಚಳಿಗಾಲ ಕಳೆದು ಬೇಸಿಗೆಯ ಸಮಯಕ್ಕೆ ಈ ಸೌಂದರ್ಯ ಹೀಗಿದ್ದರೆ, ಇನ್ನು ಮಳೆಗಾಲದ ಸಮಯದಲ್ಲಿ ಹಚ್ಚಹಸಿರಿನಿಂದ ಕೂಡಿದ ಈ ಜಾಗದ ಸೌಂದರ್ಯ ಅರಗಿಸಿಕೊಳ್ಳಲು ಸಾಧ್ಯವಾಗುವುದಾ ನಮ್ಮ ಕೈಯಲ್ಲಿ ಎಂದು ಮಾತನಾಡಿಕೊಂಡೆವು. ಅಲ್ಲಲ್ಲಿ ಮೋಡಗಳ ಹತ್ತಿಯುಂಡೆ ಅಕ್ಕಪಕ್ಕದ ಗುಡ್ಡಗಳ ಮೇಲಿಂದ ನಮಗೆ ಅತೀ ಹತ್ತಿರದಲ್ಲಿ ಕಾಣಸಿಗುತ್ತಿದ್ದವು.  ಸಮುದ್ರ ಮಟ್ಟಕ್ಕಿಂತ ೫೬೦೦ ಅಡಿ ಎತ್ತರದ ಶಿಖರವನ್ನು ಏರುತ್ತಲಿದ್ದೇವೆ ಎಂಬುದೇ ನಮ್ಮ ಚಾರಣಕ್ಕೆ ಸ್ಪೂರ್ತಿಯಾಗಿ ಮುನ್ನಡೆಸುತ್ತಿತ್ತು.  








ಚಾರಣದ ಮೂರನೇ ವಿಭಾಗ ಶೇಷ ಪರ್ವತದಿಂದ ಕುಮಾರ ಪರ್ವತಕ್ಕೆ ನಡಿಗೆ. ಸುಮಾರು ೧.೫ ಕಿಮೀ ದೂರ ಇರುವ ಈ ಚಾರಣಕ್ಕೆ, ಸಾಧಾರಣ ವೇಗದಲ್ಲಿ ಸುಮಾರು ೧.೪೫ ಗಂಟೆಗಳಕಾಲ ನಡೆಯಬೇಕು. ಸೂರ್ಯೋದಯದ ಟಾರ್ಗೆಟ್ ನಮ್ಮನ್ನು ಬಿಟ್ಟೂ ಬಿಡದಂತೆ ನಡೆಸುತ್ತಿತ್ತು. ನಡೆಯುತ್ತಾ ಹೋಗುವಾಗ ಸುಸ್ತಾಗಿ ಕುಸಿದು ಕೂತವರು, ಮೇಲಿನ ಬೆಟ್ಟವನ್ನು ಹತ್ತಲು ಸಾಧ್ಯವಿಲ್ಲೆಂದು ಕೈ ಚೆಲ್ಲಿ ಕೆಳಗೆಆಳುತ್ತಿರುವವರು, ನಾವೇನು ಕಮ್ಮಿ ಇಲ್ಲ ಬೆಟ್ಟವನ್ನು ಹತ್ತೇ ಬಿಡುವೆವು ಎನ್ನುವ ಅರುವತ್ತು ಎಪ್ಪತ್ತರ ಹರೆಯದ ಯುವಕ ಯುವತಿಯರುಎಲ್ಲ ತರದವರು ಸಿಕ್ಕರು. ಒಂದು ಲಂಬವಾದ ಜಾಗವನ್ನು ಹತ್ತಿಳಿದು, ಒಂದು ಅರಣ್ಯವನ್ನು ದಾಟಿ ಹೋಗಬೇಕಾದ ದಾರಿಯಿದು. ಕಾಡಿನ ಮದ್ಯೆ ಸಣ್ಣ ಕಾಲುದಾರಿ, ಒಂದು ಬಾರಿಗೆ ಒಬ್ಬರಷ್ಟೇ ನಡೆದು ಹೋಗುವಷ್ಟು ಜಾಗ. ಕೊರಕಲು ಕಲ್ಲುಗಳ ಮದ್ಯೆ ಕಾಲುಗಳನ್ನಿಟ್ಟುಕೊಂಡು ಬ್ಯಾಲೆನ್ಸ್ ಮಾಡುತ್ತಾ ಹತ್ತುತ್ತಾ ಸಾಗಬೇಕು ಮಳೆಗಾಲದಲ್ಲಿ ಬಂದರೆ ಇದೆ ಜಾಗ ಮಳೆಗಾಲದ ನೀರು ಕಾಡಿನೊಳಗೆ ಹೊಳೆಯಂತೆ ನಮ್ಮ ಪಕ್ಕದಲ್ಲೇ ಹರಿಯುತ್ತದೆಯಂತೆ. ಈ ಕಡು ಬೇಸಿಗೆಯಲ್ಲೂ ಅಲ್ಲಲ್ಲಿ ಹಸಿರು ಪಾಚಿ ಸಸ್ಯಗಳು ಮರದ ಮೇಲೆಲ್ಲಾ ಇದ್ದದ್ದು, ಅಲ್ಲಿನ ನೀರಿನ ಒರತೆಯನ್ನು ಕಾಡು ಹಿಡಿದಿಟ್ಟುಕೊಂಡಿರುವ ಬಗ್ಗೆ ಆಶ್ಚರ್ಯವಾಯಿತು. ನಿತ್ಯ ಬದುಕಿನಲ್ಲಿ ನಮಗಿರುವ ಸಾಮರ್ಥ್ಯತೆ ನಮಗೆ ಸಾಮಾನ್ಯವಾಗಿ  ಗೊತ್ತಾಗುವುದಿಲ್ಲ. ಈ ಕಾಡನ್ನು ನಾವು ದಾಟಿದ ವೇಗ ಹೇಗಿತ್ತೆಂದರೆ, ನಮ್ಮ ಕಾಲುಗಳ ತೂಕಬದ್ಧ ತುಲನೆ ನಮ್ಮ ಸಾಮರ್ಥ್ಯ ಇಷ್ಟಿದೆಯೇ ಎಂದು ಆಶ್ಚರ್ಯ ಪಡುವಷ್ಟು! ಆಚೀಚೆ ದಟ್ಟ ಅರಣ್ಯ, ಮಧ್ಯದಲ್ಲಿ ಕಠಿಣವಾದ ಬಂಡೆಕಲ್ಲುಗಳ ಹಾದಿ. ಎಲ್ಲರೂ ಅಲ್ಲಲ್ಲಿಯೇ ಆಗಾಗ ಕುಳಿತು ವಿಶ್ರಾಂತಿ ತೆಗೆದುಕೊಳ್ಳುತ್ತಾ ಹತ್ತುವುದು ಸರ್ವೇ ಸಾಮಾನ್ಯ ದೃಶ್ಯವಾಗಿತ್ತು. 
 


ಅರಣ್ಯದಿಂದ ಹೊರಬೀಳುತ್ತಿದ್ದಂತೆಯೇ, ಕುಮಾರ ಪರ್ವತ ಹತ್ತಿರದಲ್ಲಿದೆ ಎನಿಸಿದರೂ, ಶಿಖರವನ್ನು ಹತ್ತುವ ಸವಾಲುಗಳು ಅಲ್ಲಿಗೆಯೇ ಮುಗಿಯುವುದಿಲ್ಲ. ಮಧ್ಯದಲ್ಲಿ ಸಿಗುವ ಸ್ಲಿಂಪರಿ ದೊಡ್ಡ ಬಂಡೆಕಲ್ಲನ್ನು ಅಕ್ಷರಶಃ ಸೂಪರ್ಮ್ಯಾನ್, ಸ್ಪೈಡರ್ ಮ್ಯಾನ್ ತರದಲ್ಲಿಯೇ ಹತ್ತಬೇಕು. ೭೦ ಡಿಗ್ರಿ ಓರೆಗೆ ಸಮನಾಗಿ ಮೇಲಕ್ಕೆ ಹತ್ತಬೇಕು! ಆ ಬ್ರಹತ್ ಕಲ್ಲನ್ನು ಹತ್ತಿದ ಮೇಲೆ ಮತ್ತೆ ೨೦ ನಿಮಿಷ ನಡೆಯಬೇಕು ಎಂದು ಕೇಳಿದ ಮೇಲೆ ನಡೆದ ಹೆಜ್ಜೆಗಳು ಮಾತ್ರ ಅತ್ಯಂತ ಭಾರ ಕಠಿಣ ಆದರೂ ಅತ್ಯಂತ ರಭಸದ  ಹೆಜ್ಜೆಗಳು!





ಅವಿಷ್ಟನ್ನೂ ದಾಟಿ ಮೇಲೆ ಹತ್ತಿದಾಗ ಸಿಗುವ ಒಂದು ಸಂಧಿ, ಸೋಮವಾರಪೇಟೆ ಕಡೆಯಿಂದಲೂ ಚಾರಣ ಮಾಡಿ ಬಂದು ಸೇರುವ ಜಾಗವದು. ಕುಮಾರ ಪರ್ವತಕ್ಕೆ ಪುಷ್ಪಗಿರಿ ಎಂಬ ಹೆಸರೂ ಇದೆ. ಅಲ್ಲಿ ನಿಂತು -  ಕಂಡಿತು ಪುಷ್ಪಗಿರಿಯ ತುದಿ  ಎಂದು ಕಣ್ಣರಳಿಸಿ ಕೆಳಗಿನಿಂದ ಬೆಟ್ಟದೆಡೆಗೆ ನೋಡಿದರೆ, ಬೆಟ್ಟದ ಮೇಲ್ಮೈ ಹಿಂದಿನಿಂದ ಯಾವುದೋ ಬೆಂಕಿ ಹತ್ತಿ ಉರಿದಿದೆ ಎಂದು ಭಾಸವಾಗುವಂತೆ ಮೋಡಗವು ಏಳುತ್ತಿವೆ! ಎಂತಹ ಅದ್ಭುತ ದೃಶ್ಯವದು! ಅಲ್ಲಿಂದ ಅದಾಗಲೇ  ಹತ್ತಿದವರ ಹರ್ಷೋದ್ಘಾರ ಮುಗಿಲು ಮುಟ್ಟುತ್ತಿತ್ತು. ಇನ್ನೊಂದು ೧೫೦ ಮೀಟರ್ ಮೇಲಕ್ಕೆ ಹತ್ತಬೇಕು ತುದಿ ತಲುಪಲು. ಅಲ್ಲಿಂದ ಶಕ್ತಿ ಮೀರಿ ಎಲ್ಲರೂ ಬೆಟ್ಟದ ತುದಿಯೆಡೆಗೆ ಓಡಿದೆವು. ಮೋಡಗಳು ಬೀಸುವ ರಭಸಕ್ಕೆ  ನಾವು ಹಿಂದಕ್ಕೆ ತಳ್ಳಿ ಹೋಗುತ್ತೇವೆ.   ಆದರೂ ರಭಸವಾಗಿ ಮುಖಕ್ಕೆ ಮೋಡಗಳು ಒತ್ತಿಹೋಗುವುದ ಅನುಭವಿಸುತ್ತಾ, ಕಾಲು ಇನ್ನಾಗದು ಎಂದು ಹೇಳಿದರೂ ಮಧ್ಯೆ ನಿಲ್ಲದ ಓಟ -  ಕುಮಾರಪರ್ವತದ ತುದಿಯೆಡೆಗೆ..  




ಅಲ್ಲಿ ಮುಂದೆ ಕಂಡ ದೃಶ್ಯಕ್ಕೆ ನಮ್ಮ ಮನಸ್ಸುಗಳು ನಮ್ಮ ನಿಯಂತ್ರಣದಲ್ಲಿ ಇರಲೇ ಇಲ್ಲ ಎಂದರೂ ತಪ್ಪೇನಿಲ್ಲ. ಎಲ್ಲರೂ ಖುಷಿಯಿಂದ ಮೇಲೆದ್ದು ಬರುತ್ತಿರುವ ಸೂರ್ಯನ ಕಂಡು ಕೂಗುತ್ತಿದ್ದಾರೆ. ನನಗೋ ಮಾತೇ ಹೊರಡುತ್ತಿಲ್ಲ! ಮನಸ್ಸು ಖುಷಿಯಿಂದ ಏನು ಮಾಡಬೇಕೆಂದು ತಿಳಿಯದೆ ಮೌನವಾದ್ದು!  ಸ್ವಲ್ಪ ಕ್ಷಣಕ್ಕೆ ಫೋಟೋ ತೆಗೆಯಲು  ಮರೆತ ನಾನು, ಸೂರ್ಯನಿಗೆ ಕೈಮುಗಿದು, ಮತ್ತೆ ಪಟಪಟ ಮೊಬೈಲ್ ಕೈಗೆತ್ತಿಕೊಂಡು ಒಂದಷ್ಟು ಚಿತ್ರಗಳ ಸೆರೆಹಿಡಿದೆ. ಒಂದಷ್ಟು  ಹೊತ್ತು ಕಣ್ಣುಗಳ  ಮುಚ್ಚಿ ಇದನ್ನು ಕಾಣಲು ನಾವು ಬಂದ ದಾರಿಗಳನೆನೆಪಿಸಿಕೊಂಡೆ. ಕುಮಾರ ಪರ್ವತದ ಉತ್ತುಂಗದಿಂದ ಸುತ್ತಮುತ್ತ ಕಣ್ಣು ಹಾಯಿಸಿದಷ್ಟು ದೂರವೂ ಕಾಣುತ್ತಿದ್ದ ಪಶ್ಚಿಮ ಘಟ್ಟಗಳ ನೋಡುವ ಆ ಆನಂದ ಪದಗಳಲ್ಲಿ ಹೇಳುವುದು ಕಷ್ಟ! ಮೋಡಗಳು ಕೆಳಗಿನಿಂದ ಹುಟ್ಟಿ ಬರುತ್ತಿವೆ! ನೋಡಿದಷ್ಟೂ ಸಾಲ..! ನಮಗಿಂತ ತುಸು ಮುಂಚೆಯೇ ಬಂದು ತಲುಪಿದ್ದ ನಮ್ಮ ಸಂಗಡಿಗರ ಜೊತೆ ಸೇರಿ, ಪುಷ್ಪಗಿರಿ ತುದಿಯನ್ನು ತಲುಪಿದ ಶುಭಹಾರೈಕೆಯನ್ನು ಸಂತೋಷವನ್ನು  ಪರಸ್ಪರ  ಹಂಚಿಕೊಂಡು ಒಟ್ಟಿಗೆ ಎಲ್ಲರೊಡನೆ ಒಂದಷ್ಟು ಫೋಟೋಗಳನ್ನು ತೆಗೆದುಕೊಂಡು, ಎಲ್ಲರೂ ಸೇರಿ ಹೊತ್ತು ತಂದಿದ್ದ ಹೋಳಿಗೆ, ಚಪಾತಿ ಚಟ್ನೆಪುಡಿ ಯನ್ನು ತಿಂದು ತೇಗಿದೆವು.  













ಒಂದು ಗಂಟೆಗಳ ಕಾಲ ಅದ್ಭುತವಾಗಿ ಕಳೆಯಿತು ಅಲ್ಲಿ. ಆದರೆ ಸಮಯ ವ್ಯರ್ಥ ಮಾಡದೆ ನಾವು ಚುರುಕಾಗಿ ಮತ್ತೆ ವಾಪಸು ಇಳಿಯಲುಪ್ರಾರಂಭಿಸಬೇಕಿತ್ತು. ಏಕೆಂದರೆ ಅಂದೇ ನಾವು ನಮ್ಮ ಸಂಪೂರ್ಣ ಟ್ರೆಕಿಂಗ್ ಮುಗಿಸಿ ಸುಬ್ರಮಣ್ಯಕ್ಕೆ ಇಳಿಯಬೇಕಿತ್ತು. ಆ ದಿನಕ್ಕೆ ಬೆಳಿಗ್ಗೆಯಿಂದ ಹತ್ತಿದಷ್ಟು ದೂರವನ್ನು ಹೊರತುಪಡಿಸಿ ಅಂದು ನಾವು ಸುಮಾರು ೧೨-೧೩ ಕಿಮೀ ದೂರ ಅವರೋಹಣ ಮಾಡಲಿಕ್ಕಿತ್ತು. ತಡಮಾಡದೇ ಬಂದ ಹಾದಿಯನ್ನೇ ಸಾಹಸ ಮಾಡುತ್ತಾ ಇಳಿಯುತ್ತ ಸಾಗಿದೆವು.  ಕಸಕಡ್ಡಿ ಪ್ಲಾಸ್ಟಿಕ್ ರಾಪರ್, ಬಾಟಲಿಗಳು, ಬಟ್ಟೆ ಶೂಗಳು ಬೀದಿ ಸಿಗರೇಟುಗಳು  ಎಲ್ಲವನ್ನು ಸಾಮಾನ್ಯವಾಗಿ ಎಸೆದು ಗಲೀಜಾಗಿರುವ ಚಾರಣದ ಗುಡ್ಡ ಬೆಟ್ಟಗಳೇ ಕಂಡು ಬೇಜಾರಾಗುವ ನಮಗೆ ಅಲ್ಲಿ ಹುಡುಕಿದರೂ ಒಂದು ಕಸ ಕಾಣುತ್ತಿರಲಿಲ್ಲ, ಸ್ವಚ್ಛತೆಯನ್ನು ಕೇಂದ್ರವಾಗಿಟ್ಟುಕೊಂಡು, ಕುಮಾರಪರ್ವತದ ದೈವಿಕಾ ಶಕ್ತಿಯನ್ನು ಜನರ ಮನಸ್ಸಲ್ಲಿ ನೆಲೆ ಮಾಡಿಸಿ, ಬೆಟ್ಟದ ಹಸಿರಿಗೆ ಯಾವುದೇ ಕುತ್ತು ಬಾರದಂತೆ , ಪ್ರವಾಸೋದ್ಯಮವನ್ನು ಶಕ್ತಿಯಾಗಿಸಿಕೊಂಡಿರುವ ದಕ್ಷಿಣ ಕನ್ನಡ ಅರಣ್ಯ ಇಲಾಖೆಗೆ ಹಾಗೂ ಶಿಸ್ತಿನ ಕ್ರಮಗಳಿಗೆ, ನಿಯಮಗಳಿಗೆ ಸ್ವಲ್ಪನೂ ಕುತ್ತೂ ಬಾರದಂತೆ ಕರ್ತವ್ಯ ನಿರ್ವಹಿಸುತ್ತಿರುವ ಸಿಬ್ಬಂದಿಗಳ ಕುರಿತು ಆದರಣೀಯ ಭಾವನೆ ಮೂಡಿತು. ಇದನ್ನು ಎಲ್ಲಾ ಪ್ರವಾಸಿತಾಣಗಳಲ್ಲೂ ಜಾರಿಗೊಳಿಸಿದರೆ,  ಶಿಸ್ತಿನ ವ್ಯವಸ್ಥೆ ಇಟ್ಟರೆ, ಸ್ವಚ್ಛ ಸುಂದರ  ದೇಶ ನಮ್ಮದಾಗುವುದರಲ್ಲಿ ಯಾವುದೇ ಅನುಮಾನವಿಲ್ಲ..

ಸೂರ್ಯ ಮೇಲೇರಿದಂತೆಯೂ ನಾವು ಕಷ್ಟ ಪಟ್ಟು ಕತ್ತಲಲ್ಲಿ ಹತ್ತಿದ್ದ ಬೆಟ್ಟಗಳು, ಬೆಳಕಿನಿಂದ ಕಣ್ಣಿಗೆ ಸುತ್ತಮುತ್ತಲಿನ ಇತರ ಗುಡ್ಡ ಬೆಟ್ಟಗಳು ಮೋಡಗಳ ಮಂಜನ್ನು ಹೊದ್ದುಕೊಂಡು ಸುಂದರವಾಗಿ ಅನಾವರಣಗೊಳ್ಳುತ್ತಲಿದ್ದವು.  ನಾವು ಇಳಿಯುವಾಗೆಲ್ಲ ಇನ್ನೂ ಹತ್ತುತ್ತಿರುವ ಚಾರಣಿಗರು,  ಅಪರಿಚಿತರೆಂದರೆನಿಸದೆ ಸಮಾನ ದುಃಖ ಬಾಗಿಗಳನ್ನು ಮಾತಾಡಿಸುವಂತೆ ಆತಂಕದಿಂದ, "ಇನ್ನೆಷ್ಟು ದೂರ", "ಮುಂದೆ ದಾರಿ ಹೇಗಿದೆ?", "ಎಷ್ಟೊತ್ತಾಗಬೌದು?" ಎಂಬಿತ್ಯಾದಿ ಕೌತುಕದ ಪ್ರಶ್ನೆಗಳನ್ನು ಕೇಳುತ್ತಿದ್ದರೆ ಅವರಿಗೆ ಉತ್ತರಿಸುವಾಗೆಲ್ಲ, ಚಾರಣವನ್ನು ಅಷ್ಟು ಚುರುಕಾಗಿ ಮುಗಿಸಿದ ಕುರಿತು ನಮಗೆ ನಮ್ಮ ಮೇಲೆಯೇ ಹೆಮ್ಮೆ ಉಂಟಾಗುತ್ತಿತ್ತು. ಅವರಿಗೆಲ್ಲ ಪ್ರೇರಣಾತ್ಮಕ ಮಾತುಗಳನ್ನು ಹೇಳಿ ಮುಂದಕ್ಕೆ ಕಳಿಸುತ್ತಿದ್ದೆವು .  ಬೆಳಕು ಸುರಿದಂತೆ ಎಲ್ಲೆಲ್ಲಿ ಎಂತಹ ಪ್ರಪಾತದ ಒಂಟಿಹಾದಿಗಳನ್ನು ನಾವು ದಾಟಿಬಂದೆವು ಎಂದು ನೋಡಿ ಎದೆ ಝಲ್ಲೆನ್ನುತ್ತಿತ್ತು . ನಮ್ಮ ಜೊತೆಗಿದ್ದ ಉತ್ಸಾಹೀ ಹುಡುಗರು ವಾಪಸು ಬರುವ ಹಾದಿಯಲ್ಲಿ ಒಂದೂ ಬಿಡದಂತೆ ಎಲ್ಲ ಪುಟ್ಟ ಪುಟ್ಟ ಗುಡ್ಡಗಳ ಮೇಲೂ ಹತ್ತಿ ಮೇಲ್ನಿಂದ ಕಾಣುವ ನಿಸರ್ಗವನ್ನು ಕಂಡು ಖುಷಿ ಪಡುತ್ತಿದ್ದರು. 












ಬಿಸಿಲೇರಿದಂತೆಯೂ ಚಾರಣ ಪ್ರಯಾಸದಾಯಕವಾಗುತ್ತ ಹೋಗುತ್ತದೆ. ಮಧ್ಯಾಹ್ನಕ್ಕೆ ಫಾರೆಸ್ಟ್ ಡಿಪಾರ್ಟ್ಮೆಂಟ್ ಹೌಸ್ ತಲುಪಿ ಅಲ್ಲಿ ಊಟ ಮಾಡಿ ಮತ್ತೆ ನಾಲ್ಕು ತಾಸು ನಡೆಯಬೇಕಿದ್ದ ಕಾರಣ, ನಮ್ಮ ಹೆಜ್ಜೆಗಳನ್ನು ಚುರುಕುಗೊಳಿಸಿ ಬೆಟ್ಟಗಳನ್ನು ಕಾಡುಗಳನ್ನು ದಾಟುತ್ತ ಹೋದೆವು. ಏರುವುದಕ್ಕಿಂತ ಇಳಿಯುವುದೇ ಕಷ್ಟ. ನಮ್ಮ ಕಣ್ಣೆದುರೇ ಅದೆಷ್ಟೋ ಜನ ಜರಿದು, ಕಾಲು ಜಾರಿ ಬೀಳುತ್ತಿದ್ದರು. ಹಾಗಾಗಿ  ಪ್ರತಿ ಹೆಜ್ಜೆಯನ್ನೂ ನಿರ್ಧಿಷ್ಟವಾಗಿ ಇಟ್ಟು ಇಳಿಯುತ್ತಿದ್ದೆವು. ಸಾಕಷ್ಟು ಟ್ರೆಕಿಂಗ್ ಮಾಡಿದ್ದೆನಾದರೂ ಇ ಷ್ಟು ಕಡಿದಾದ ಹಾದಿಯ ಟ್ರೆಕಿಂಗ್ ನನಗೆ ಮೊದಲ ಅನುಭವ. ಮತ್ತು ಆ ಅನುಭವವೇ ಅನನ್ಯ.  







ಮರಳಿ ಬರುವಾಗ ಕಲ್ಲು ಮಂಟಪದ ಬಳಿ ಸ್ವಲ್ಪ ಕಾಲ ವಿಶ್ರಮಿಸಿ ಬಂದೆವು. ಮರಳಿ ಬಂದಾಗ ಯಶಸ್ವೀ ಚಾರಣಕ್ಕೆ ಇತರರ ಶುಭಾಶಯಗಳನ್ನು ಪಡೆದುಕೊಂಡು  ಊಟ ಮಾಡಿ ತುಸು ಹೊತ್ತು ವಿರಮಿಸಿ, ಮತ್ತೆ ೧. ೩೦ ಗೆ ನಮ್ಮ ಅವರೋಹಣ ಪ್ರಾರಂಭವಾಯಿತು. ಬೆಳಗ್ಗಿನಿಂದ ನಡೆದ ಸುಸ್ತು, ಹೊಟ್ಟೆ ತುಂಬಾ ಊಟ, ನೆತ್ತಿ ಸುಡುವ ಬಿಸಿಲು. ಬೆನ್ನಿಗೆ ಲಗೇಜು. ಅಲ್ಲಿ ಅಷ್ಟು ಜನರ ಮಧ್ಯೆ ಕುಡಿಯುವ ನೀರಿಗೆ ಅರ್ಧ ಘಂಟೆ ಸರತಿಯಲ್ಲಿ ನಿಲ್ಲುವ ಪಾಡು ಇನ್ನೊಂದೆಡೆ.  ಈ ಸಂಯೋಜನೆಯಲ್ಲಿ ನಮ್ಮ ೭ ಕಿಮೀ ಅವರೋಹಣದ ಕಾರ್ಯಕ್ರಮ! ಇಂತಹ ಸಮಯದಲ್ಲೇ ಎಲೆಕ್ರೋಲೈಟ್ ಅಥವಾ ಗ್ಲೂಕೋಸು ಸಹಾಯಕ್ಕೆ ಬರುತ್ತದೆ. ನಮ್ಮ ನಮ್ಮ ನೀರಿನ ಬಾಟಲಿಗೆ ಅಷ್ಟಷ್ಟು ಸುರಿದು ಎಲ್ಲರೂ ಯುದ್ಧಕ್ಕೆ ಸನ್ನದ್ಧರಾದಂತೆ ಹೊರಟು, ನಮ್ಮ ಕೈಲಾದಷ್ಟು ವೇಗದಲ್ಲಿ ಗುಡ್ಡಬೆಟ್ಟಕಾಡುಗಳ ಇಳಿಯುತ್ತಾ ಸಾಗಿದೆವು. ಸಂಜೆ ಸುಮಾರು ೬ ಗಂಟೆಗೆ ಬೇಸ್ ಕ್ಯಾಮ್ಪ್ ತಲುಪಿದ್ದಾಯಿತು. ಪ್ಲಾಸ್ಟಿಕ್ ಚೆಕಿಂಗ್ ಮಾಡಿಸಿಕೊಂಡು, ಪಾವತಿಸಿದ ಹಣ ಮರಳಿ ಪಡೆದು, ಕುಮಾರಪರ್ವತ ಚಾರಣದ ಬೇಸ್ ಕ್ಯಾಮ್ಪಾಸಿನಿಂದ ಹೊರಗೆ ಬರುವಷ್ಟರಲ್ಲಿ ಒಬ್ಬೊಬ್ಬರ ಮುಖ ಬಸವಳಿದು ಹೋಗಿತ್ತು. ಆದರೆ ಆ ಸುಸ್ತಿನಲ್ಲೂ ಎರಡು ದಿನಗಳಲ್ಲಿ ೨ ದಿನಗಳಲ್ಲಿ ೨೪ ಕಿಮೀ,ನಷ್ಟು ಕಠಿಣ ಚಾರಣವೊಂದನ್ನು ಮಾಡಿ ಮುಗಿಸಿದ ಸಂತೋಷ ಎಲ್ಲರ ಮುಖದಲ್ಲಿ ಎದ್ದು ಕಾಣುತ್ತಿತ್ತು.  ಫ್ರೆಶ್ ಆಗಲು ವ್ಯವಸ್ಥೆ ಮಾಡಿದ್ದ ಹೋಟೆಲಿನಲ್ಲಿ ಸ್ನಾನ ಮುಗಿಸಿ, ಸುಬ್ರಮಣ್ಯ ದೇವಸ್ಥಾನದ ಕಡೆಗೆ ನಡೆದು ದೇವರಿಗೆ ಕೈಮುಗಿದು, ಒಂದೊಳ್ಳೆ ಊಟ ಮುಗಿಸಿ ಬೆಂಗಳೂರಿನ ಕಡೆಗೆ ನಮ್ಮ ರಾತ್ರಿಯ ಪ್ರಯಾಣ ಬೆಳೆಸಿದೆವು.   




ಹೊಸತೊಂದು ಅನುಭವ ಹಾಗೂ ಅನುಭಾವದ ಬುತ್ತಿ ಕಟ್ಟಿಕೊಡೋ,ಒಮ್ಮೆಯೂ ಬೇಸರದ ಸಣ್ಣ ಎಳೆಯನ್ನೂ ಮೂಡಿಸದ ಮಾಯಾವೀ ಈ ಕುಮಾರ ಪರ್ವತ. ದೈಹಿಕ ಸಾಮಾರ್ಥ್ಯವನ್ನು, ನಮ್ಮನ್ನು ನಾವೇ ಅರಿತುಕೊಳ್ಳಲು ಸಹಾಯ ಮಾಡುವ ಭಾರತಲ್ಲಿಯೇ  ಕ್ಲಿಷ್ಟಕರವಾದ ಈ ಚಾರಣ ನಮ್ಮಲ್ಲಿ ಇನ್ನಷ್ಟು ಮತ್ತಷ್ಟು ಜೀವನೋತ್ಸಾಹವನ್ನು ತುಂಬುವುದರಲ್ಲಿ ಯಾವುದೇ ಅನುಮಾನವಿಲ್ಲ. 






 

    










2 ಕಾಮೆಂಟ್‌ಗಳು: