ಚಂದ್ರಕಾಣಿ ಪಾಸ್ ಚಾರಣ, ಕುಲು - ಭಾಗ 1

ಕೇಂದ್ರೀಯ ಸಂಸ್ಕೃತ ವಿಶ್ವವಿದ್ಯಾಲಯ, ದೆಹಲಿ, ಸಂಸ್ಕೃತ ಭಾರತಿ ಶಿವಮೊಗ್ಗ, ಯೂಥ್ ಹಾಸ್ಟೆಲ್ಸ್ ಅಸ್ಸೊಸಿಯೆಷನ್ ಆಫ್ ಇಂಡಿಯಾ ತರಣೋದಯ ಘಟಕ ಇವರುಗಳ ಸಹಭಾಗಿತ್ವದಲ್ಲಿ ಹಿಮಾಚಲ ಪ್ರದೇಶದ ಚಂದ್ರಕಾಣಿ ಪಾಸ್ ನ ೧೨೫೦೦ ಅಡಿ ಎತ್ತರದ ಪ್ರದೇಶಕ್ಕೆ ನಾವು ೪೨ ಜನರು, ಮೇ ತಿಂಗಳಿನಲ್ಲಿ ಪರ್ವತಾರೋಹಣ ಮಾಡಿದ್ದೆವು. ಚಂದ್ರಕಾಣಿ ಪಾಸ್ ಹಿಮಾಲಯ ಶ್ರೇಣಿಯ ಚಾರಣ ಹೋಗುವವರಿಗೆ ಮಾಹಿತಿ ಉಪಯುಕ್ತವಾಗಬಹುದು ಎಂಬ ಅನಿಸಿಕೆಯಿಂದ ಅನುಭವ ಕಥನ ಹಂಚಿಕೆ. ದಿನ ೧ : ಚಾರಣಕ್ಕೆ ಹೋಗಿ ಸೇರಿಕೊಳ್ಳುವ ದಿನ. ಶಿವಮೊಗ್ಗ ಮತ್ತು ಸುತ್ತಮುತ್ತಲಿನ ಜಾಗಗಳಿಂದ ಎಲ್ಲರೂ ಒಟ್ಟು ಸೇರಿ ಡೆಲ್ಲಿಯವರೆಗೆ, ಡೆಲ್ಲಿಯಿಂದ ಚಂಡಿಗರ್ವರೆಗೆ ರೈಲು ಪ್ರಯಾಣದೊಂದಿಗೆ ನಮ್ಮ ಚಾರಣ ತಂಡ ಹೊರಟಿತ್ತು. ನಾವಿಬ್ಬರು ಆಫೀಸು ರಜೆಗಳ ಉಳಿಸುವುದಕ್ಕಾಗಿ ವಿಮಾನದಲ್ಲಿ ಪ್ರಯಾಣಿಸಿ ನಮ್ಮ ತಂಡವನ್ನು ಸೇರಿಕೊಂಡೆವು. ಬೇರೆ ಬೇರೆ ಭಾಷೆ, ಬೇರೆ ಬೇರೆ ಸಂಸ್ಕೃತಿ, ದೇಶವೊಂದೇ ಭಾರತ. ದೆಹಲಿ, ಉತ್ತರಾಖಂಡ, ಉತ್ತರಪ್ರದೇಶ, ಝಾರ್ಖಂಡ್ ಇನ್ನಿತರ ಸ್ಥಳಗಳಿಂದ ಕೇಂದ್ರೀಯ ವಿಶ್ವವಿದ್ಯಾಲಯ ವಿದ್ಯಾರ್ಥಿಗಳು ಕೂಡ ಭಾಗವಹಿಸುತ್ತಿದ್ದಾದ್ದರಿಂದ ದಕ್ಷಿಣ ಭಾರತ ಮತ್ತು ಉತ್ತರ ಭಾರತದ ಸಂಸ್ಕೃತ ವಿದ್ಯಾರ್ಥಿಗಳ ಸಮಾಗಮ ಕಾರ್ಯಕ್ರಮ ಇದಾಗಿತ್ತು. ಚಂಡೀಘರ್ಇಂದ ಬಸ್ ಮಾಡಿಕೊಂಡು ರಾತ್ರಿ ಪ್ರಯಾಣ ಬೆಳೆಸಿದ್ದು, ಹಾದಿಯುದ್ದಕ್ಕೂ ಎತ್ತರೆತ್ತರ ಪರ್ವತಗಳ ಮಧ್ಯೆ, ಬಿಯಾಸ್ ನದಿಯ ಪಕ್ಕದಲ್ಲಿ...