Friday, November 25, 2016

ನನ್ನ ಬಂಗಾರಿ...

ಒಂದು ದಿನ ಚೀನಿಕಾಯಿ ಪದಾರ್ಥ ಮಾಡಿದ ನಂತರ, ಅದರ ಅಳಿದುಳಿದ ಬೀಜಗಳು ನನ್ನ ಕ್ರಾಫ್ಟ್ ಕೆಲಸಗಳಿಗೆ ಬರುತ್ವೇ ಎಂದು ತೊಳೆದು ಬಾಲ್ಕನಿಯಲ್ಲಿ ಬಿಸಲಿಗೆ ಒಣಗಿಸಿಟ್ಟಿದ್ದೆ. ಸಂಜೆಯ ವೇಳೆಗೆ ವಾಪಸು ತೆಗೆಯಬೇಕೆಂದು ನೋಡಿದರೆ ನನಗೆ ಆಶ್ಚರ್ಯವೊಂದು ಕಾದಿತ್ತು. ಚೀನೀ ಬೀಜದ ಕೇವಲ ಹೊರಗಿನ ಸಿಪ್ಪೆಗಳು ಅಲ್ಲಲ್ಲಿ ಹರಡಿ ಬಿದ್ದಿದ್ದವು. ಅದರೊಳಗಿನ ಮೃದು ಭಾಗವು ಲವಲೇಶವಿಲ್ಲದಂತೆ ಖಾಲಿಯಾಗಿತ್ತು. ಇದು ಮತ್ತೆ ಹೋದ ವಾರವಷ್ಟೇ ಕಷ್ಟ ಪಟ್ಟು ಹೋಗಲಾಡಿಸಿದ ಇರುವೆಯ ಕಾಟವೇ ಹೌದು ಎಂದು ಮನಸಾರೆ ಬೈದುಕೊಳ್ಳುತ್ತಾ ಕುರುಹು ಸಿಗಬಹುದೇ ಎಂದು ಬಗ್ಗಿ ನೋಡಿದೆ, ಏನೂ ಗೋಚರಿಸಲಿಲ್ಲ. ಎಲ್ಲಾ ಇರುವೆಗಳೂ ಚೆನ್ನಾಗಿ ತಿಂದು ಹೋಗಿವೆ ಎಂದುಕೊಳ್ಳುತ್ತಾ ಒಳನೆಡೆದೆ. ಮತ್ತೆ ಮರುದಿವಸ ಇನ್ನರ್ಧ ಚೀನೀಕಾಯಿಯ ಬೀಜಗಳನ್ನು ಒಣಗಿಸಿಟ್ಟೆ. ಈ ಸರ್ತಿ ಒಂದು ಕರ್ಪೂರವನ್ನು ಬೀಜಗಳ ಜೊತೆಗಿಟ್ಟು. ಇರುವೆಯಿಂದ ಕಾಪಾಡಿಕೊಳ್ಳುವ ಮಾಸ್ಟರ್ ಪ್ಲಾನ್  ಹಾಕಿದೆ. ಆದರೆ ಮಧ್ಯಾಹ್ನದ ವೇಳೆಗೆ, ಬೀಜ ಒಣಗಿಸಿಟ್ಟ ತಟ್ಟೆಯ ಬಳಿ ಸಣ-ಮಣ ಶಬ್ಧ ಕೇಳಿ ಬರುತ್ತಿತ್ತು. ನಿಧಾನವಾಗಿ ಬಾಲ್ಕನಿಯ ಕರ್ಟೈನ್ ಸರಿಸಿ ಗಮನಿಸಿದೆ. ಮತ್ತೆ ಅಲ್ಲಲ್ಲಿ ಹರಡಿದ ಸಿಪ್ಪೆಗಳು.. ಈ ಸರ್ತಿ ಸಾಕ್ಷಿ ಸಮೇತವಾಗಿ ದೊರಕಿತು,ಇದು ಯಾರ ಹರ್ಕತ್ ಎಂದು..ಪುಟ್ಟದೊಂದು ಮುದ್ದಾದ ಅಳಿಲು ಕುಳಿತ ಭಂಗಿಯಲ್ಲಿ, ತನ್ನೆರಡು ಮುಂಗಾಲು (ಕೈ) ಬಳಸಿ ಚೀನೀ ಬೀಜವನ್ನು ಕಡಿದು ಸಿಪ್ಪೆ ತೆಗೆದು ಒಳಗಿನ ಭಾಗವನ್ನು ತಿಂದು ತೇಗುತ್ತಿತ್ತು. ಕ್ಷಣ ಮಾತ್ರದಲ್ಲಿ ಆ ವರೆಗೆ ಆಗಿದ್ದ ಹತಾಶೆ, ಕೋಪ ಎಲ್ಲವೂ ಮಾಯವಾಗಿ, ತುಟಿಯಂಚಲ್ಲಿ ನಗುವೊಂದು ನನಗರಿವಿಲ್ಲದೇ  ಬಂದು ಆಸೀನವಾಗಿಬಿಟ್ಟಿತು. ಮರೆಯಲ್ಲಿ ನಿಂತು ಗಮನಿಸಿದೆ...ಆಹಾ ಅದೇನು ಕೌಶಲ್ಯ..! ಒಂದೊದಾಗಿ ಬೀಜವನ್ನು ಹೆಕ್ಕಿ, ತನ್ನೆರಡೂ ಕೈಗಳಲ್ಲಿ ಹಿಡಿದು, ಬಾಯಿಗೆ ಹಾಕಿ ಬೀಜದ ಹೊರಗಿನ ಸಿಪ್ಪೆಯೊಡೆದು, ಒಳಗಿನ  ಬೀನ್ಸ್ ತಿನ್ನುವ ಪರಿ... ಮತ್ತದೆಲ್ಲವೂ ಅರೆಕ್ಷಣದಲ್ಲಿ.... ಮೆಚ್ಚಿದೆ ಅದರ ಚುರುಕುತನವನ್ನು !! ನಾನು ನಿಂತ ಅನುಮಾನದಿಂದ ಚುರು ಕುಗೊಂಡ ಆ ಅಳಿಲು ಬಾಲ್ಕನಿಯ ತಳಿಯೇರಿತು, ಆದರೆ ತಿನ್ನುವ ಆಸೆ ಅದಕ್ಕಿನ್ನೂ ತೀರಿರಲಿಲ್ಲ  ಹಾಗಾಗಿ ಹೆದರಿ ಹೆದರಿ ಮತ್ತೆ ಕೆಳಗಿಳಿದು ಬರುವುದು, ಮತ್ತೊಂದು ಬೀಜವನ್ನೆತ್ತಿಕೊಂಡು ಪರಾರಿಯಾಗುವುದು, ಮಾಡಲು ಪ್ರಾರಂಭಿಸಿತು. ಕನಿಕರದಿಂದ "ನೀನು ತಿನ್ನು ಮರಿ..." ಎಂದು ಹೇಳಿ ಬಾಲ್ಕನಿಯ ಬಾಗಿಲನ್ನು ಸಂಪೂರ್ಣವಾಗಿ ಮುಚ್ಚಿ ಆಶ್ವಾಸನೆ ಕೊಟ್ಟುಬಿಟ್ಟೆ. ನಂತರದಲ್ಲಿ ಮತ್ತೆ ಉಳಿದದ್ದು ಅವೇ ಚೀನೀ ಬೀಜಗಳ ಸಿಪ್ಪೆ. ಆದರೆ ಈ ಸರ್ತಿ ಬೇಜಾರಾಗುವುದರ ಬದಲು, ಏನೋ ಒಂದು ರೀತಿಯ ಸಂತೋಷ ನನ್ನಲ್ಲುಂಟಾಯಿತು.


ಆಶ್ಚರ್ಯವೆಂದರೆ ಮರುದಿನವೂ ಆ ಅಳಿಲು ಅಲ್ಲಿಯೇ ಸುತ್ತುವರೆದುಕೊಂಡಿತ್ತು. ಚೀವ್ ಚೀವ್ ಎಂದು ಕೂಗಿಕೊಳ್ಳುತ್ತ  ಬಾಲ್ಕನಿಯಲ್ಲಿ ಹಕ್ಕಿಗಳಿಗಾಗಿ ಇಡುವ ಇನ್ನೊಂದು ಧಾನ್ಯದ ಕರಡಿಗೆಯಲ್ಲಿ ತನಗಿನ್ನೇನು ಸಿಗಬಹುದು ಎಂದು ಅನ್ವೇಷಣೆ ನಡೆಸಿತ್ತು. ಅಷ್ಟರಲ್ಲೇ ಮಗಳಿಗೆ ಅಳಿಲು ತೋರಿಸುವ ಸಂಭ್ರಮದಲ್ಲಿ ಅವಳಿಗೆ ಹೆಚ್ಚಿನ ಗಲಾಟೆ ಮಾಡದಿರಲು ತಿಳಿಹೇಳಲು ಮರೆತೇ ಬಿಟ್ಟೆ. ಇವಳ ಉತ್ಸಾಹದ ಭರದಲ್ಲಿ, ಕೂಗಿಕೊಂಡಳು, "ಇಣಚಿ ಇಣಚಿ.." ಎಂದುಕೋಂಡು. ಮರುಕ್ಷಣವೇ, ನಮ್ಮ ಮನೆಯ ಹೊಸ ನೆಂಟನ ಪಾಲಾಯನವಾಗಿಯಾಗಿತ್ತು!! ವಾಪಸು ಬರುವುದೇ ಇಲ್ಲವೇನೋ ಎಂಬ ಸಂಶಯ ಹುಟ್ಟಿದರೂ, ಅದಕ್ಕನುಕೂಲವಾದ ಆಹಾರವನ್ನಿಟ್ಟು ಪ್ರಯತ್ನಿಸೋಣ ಎಂದು ಮಗಳು ಮತ್ತು ನಾನು ಯೋಚಿಸಿ, ಶೇಂಗಾಬೀಜಗಳನ್ನಿಟ್ಟು ಕಾಯತೊಡಗಿದೆವು. ಆ ಸಮಯಕ್ಕೇ ಬರದೇ ಹೋದರೂ, ಯಾವದಾದರೂ ಸಮಯದಲ್ಲಿ ಆ ಪುಟ್ಟ ನಮ್ಮ ಗೆಸ್ಟ್ ನಮ್ಮ ಮನೆಯ ಬಾಲ್ಕನಿಗೆ ಬಂದು ಹೋಗುವುದು ತಿಳಿಯುತ್ತಿತ್ತು. ಅಷ್ಟರಲ್ಲೇ ಆ ಅಳಿಲಿನ ಮೇಲೆ ನಂಗೊಂದು ರೀತಿಯ ವ್ಯಾಮೋಹ ಪ್ರಾರಂಭವಾಗಿತ್ತು. ಅಳಿಲೇ ಹಾಗೆ ಅಲ್ಲವೇ...? ಒಂದು ಸುಂದರವಾದ, ತನ್ನ ದೇಹ ಗಾತ್ರಕ್ಕಿಂತಲೂ ದೊಡ್ಡದಾಗಿ ತುಪ್ಪುಳ ತುಪ್ಪುಳ ಬಾಲದ ವೈಶಿಷ್ಟ್ಯವನ್ನು ಹೊಂದಿರುವ, ಅತ್ಯಾಕರ್ಷಣೀಯ ಪುಟ್ಟ ಪುಟ್ಟ ಬಟ್ಟಲು ರೂಪದ ಕಡುಗಪ್ಪು ಕಣ್ಣುಳ್ಳ, ಒಂದು ನಿರುಪದ್ರವ ಚಿಕ್ಕ ಪ್ರಾಣಿ. ಅದರ ಚಟುವಟಿಕೆಗಳಂತೂ ನಿರಂತರ...! ಸಾಮಾನ್ಯವಾಗಿ ಮರದ ಮೇಲೆಯೇ ಅಳಿಲುಗಳನ್ನು ಚಂಗನೆ ಜೆಗಿಯುವುದನ್ನು ನೋಡಿರುತ್ತಿದ್ದ ನನಗೆ, ಅಷ್ಟು ಹತ್ತಿರದಲ್ಲಿ ನಮ್ಮ ಮನೆಯ ಬಾಲ್ಕನಿಯಲ್ಲಿ ಅಳಿಲು ಓಡಾಡಿಕೊಂಡಿರುವುದು ಅತೀವ ಸಂತೋಷವನ್ನು ತಂದಿತ್ತು. ಶುರುವಾಯಿತು ನನ್ನ ಅಳಿಲಿನ ಬಗೆಗಿನ ಅನ್ವೇಷಣೆ. ಗೂಗಲ್ಲಮ್ಮನಲ್ಲಿ ಅಳಿಲಿನ ಬಗ್ಗೆ ಎಲ್ಲಾ ವಿಷಯಗಳನ್ನು ಹುಡುಕಲಾರಂಭಿಸಿದೆ. ಏನು ತಿನ್ನುತ್ತದೆ, ಯಾವ ರೀತಿಯ ವಾತಾವರಣ, ಸೂಕ್ತ ಜಾಗ, ಎಷ್ಟರ ಮಟ್ಟಿಗೆ ಸ್ನೇಹ ಜೀವಿಯದು ಇತ್ಯಾದಿ ಎಲ್ಲಾ ವಿಷಯಗಳನ್ನು ಸಂಗ್ರಹಿಸಿ ಮನಸ್ಸಿನಲ್ಲೇ ಮಣೆ ಹಾಕಿಕೊಂಡೆ, ಸಾಕು ಪ್ರಾಣಿಯಾಗಿ ಉಳಿಯಬಹುದೇ ಎಂಬುದರ ಬಗ್ಗೆ ಕುತೂಹಲ, ಆಶಾಭಾವನೆ ಎಲ್ಲವೂ ಶುರುವಾಯಿತು.  ಆ ಮುದ್ದು ಮುಖದ ಪುಟ್ಟ ಜೀವಿಗೆ ಹೆಸರೊಂದಿಡೋಣ ಎಂದು ನಾನು ನನ್ನ ಮಗಳು ಚರ್ಚಿಸಿ, ಅವಳ ಅಪೇಕ್ಷೆಯ ಮೇರೆಗೆ  'ಬಂಗಾರಿ' ಎಂದು ನಾಮಕರಣವೂ ಮಾಡಿ ಮುಗಿಸಿದೆವು. ಅಪರೂಪಕ್ಕೆ ನಮ್ಮಗಳ ಅನುಪಸ್ಥಿತಿಯಲ್ಲಿ ಬಂದು ಹೋಗುತ್ತಿದ್ದ ಬಂಗಾರಿಯ ಭೇಟಿ ದಿನ ದಿನಕ್ಕೂ ಸಾಮಾನ್ಯವಾಗತೊಡಗಿತು. ನಮ್ಮ ಉಪಸ್ಥಿತಿ, ಅಣತಿ ದೂರದಲ್ಲಿ ನಾವಿದ್ದರೂ ಧೈರ್ಯದಿಂದ ಬಂದು ಓಡಾಡಲಾರಂಭಿಸಿತು. ಬಂಗಾರಿಯ ಆಹಾರಕ್ಕೋಸ್ಕರ ನಮ್ಮ ಮನೆಯ ಆಹಾರ ಪದ್ಧತಿಯಲ್ಲಿ ಬದಲಾವಣೆಯೂ ಶುರುವಾಯಿತು. ಬೀಜಗಳಿರುವ ಜೋಳ, ಸೌತೆಕಾಯಿ, ಚೀನಿಕಾಯಿಯ ಅಡುಗೆಗಳು, ಶೇಂಗಾಬೀಜ, ಕಡಲೆ, ಚಿಕ್ಕ ಪುಟ್ಟ ಸೊಪ್ಪುಗಳು ಎಲ್ಲವೂ ಮನೆಗೆ ತರುವ ಸಾಮಾನು ಪಟ್ಟಿ ಸೇರಲಾರಂಭಿಸಿತು.  ಸಂಜೆ ಕುಡಿಯಲು ಹಾಲಿನ ಬದಲು ನಾನು ಬೂದುಗುಂಬಳ ರಸವನ್ನು ಕುಡಿಯಲಾರಂಭಿಸಿದೆ. ಬಂಗಾರಿಗೆ ಬೀಜಗಳ ನಿರ್ವಹಣೆಗೆ ಎಂಬ ಹುನ್ನಾರವಿದ್ದರೂ, ನಮ್ಮ ಒಳ್ಳೆಯ ಆರೋಗ್ಯಕ್ಕೆ ಎಂಬ ಪಟ್ಟಿ ಕಟ್ಟುಕೊಂಡು!!

ಒಂದು ದಿನ ಯೋಗಾಸನ ಮಾಡುವಾಗ ಬಿಸಿಲಿನ ಕಿರಣಗಳಿಗೋಸ್ಕರ ಬಾಲ್ಕನಿಯ ಬಾಗಿಲನ್ನು ತೆರೆದಿಟ್ಟುಕೊಂಡಿದ್ದೆ. ಆ ದಿನ ಹೇಗೋ ನಮ್ಮ ಬಂಗಾರಿ ಧೈರ್ಯ ಮಾಡಿ ಮನೆಯ ಒಳಗೂ ಹೊರಗೂ ಓಡಾಡಲಾರಂಭಿಸಿತ್ತು. ದೇವರಕೋಣೆಯಲ್ಲಿ ದೇವರಿಗೆ ಏರಿಸಿಟ್ಟಿದ್ದ ಹೊಗಳನ್ನೊಂದಿಷ್ಟು ಪರಿಶೀಲಿಸಿತು. ಮತ್ತೆಲ್ಲಿಯಾದರೂ ತನಗಿನ್ನೇನು ಸಿಗಬಹುದು ಎಂದು ಜಗಲಿಯ ತುಂಬೆಲ್ಲ ಓಡಾಡಿತು. ಎದುರಿಗಿದ್ದ ನಾನು ಇದನ್ನೆಲ್ಲಾ ಗಮನಿಸಿ ಅತೀವ ಸಂತೋಷ ಪಡುತ್ತಿದ್ದರೂ, ಸ್ವಲ್ಪವೂ ಅಲುಗಾಡದೆ ಅದರ ಚಲನವಲನವನ್ನು ಗಮನಿಸುತ್ತಿದ್ದೆ. ಹೀಗೆ ಎಲ್ಲವನ್ನೂ ಪರಿಶೀಲಿಸುತ್ತಾ ನನ್ನ ಹತ್ತಿರವಾದವರೆಗೂ ಬಂದು, ಕೈಗಳನ್ನೆಲ್ಲ ಒಮ್ಮೆ ಮೂಸಿ ಮೂಸಿ ನೋಡಿತು. ಬೆರಳುಗಳನ್ನು ನೆಕ್ಕಿತು... ಅಂದು ಆದ ಅದ್ಭುತ ಅನುಭವವದು !! ಕೈಗೆ ಕಚಗುಳಿಯಾಯಿತು, ಹೊಟ್ಟೆಯಲ್ಲಿ ಚಿಟ್ಟೆ ಓಡಾಡಿದಂತಹ ಪುಳಕ! ಅಂದು ಖಾತ್ರಿಯಾಯಿತು, ಈ ಮುದ್ದು ಮರಿ ನಮ್ಮ ಮನೆಯಲ್ಲಿ ಆಶ್ರಯ ಪಡೆಯಲು ಹಿಂದೇಟಾಕುವುದಿಲ್ಲವೆಂದು.. ಅಂದು ಸಂತೋಷಕ್ಕೆ ಪಾರವೇ ಇರಲಿಲ್ಲ. ಸ್ನೇಹಿತರಿಗೆಲ್ಲ ಅಂದು ಹೇಳಿಕೊಳ್ಳಲು ಅದೇ ಸುದ್ದಿಯಾಗಿತ್ತು ನನಗೆ.. ಏನೋ ಒಂದು ರೀತಿಯ ಹೆಮ್ಮೆ ನನಗೆ ನನ್ನ ಮೇಲೆಯೇ ಬಂದಿತ್ತು.. ಅಳಿಲನ್ನು ಬಂಧಿಸಿಡುವ ಯಾವ ಉದ್ದೇಶವೂ ಇಟ್ಟುಕೊಳ್ಳದೆ, ಪ್ರೀತಿ ಕಾಳಜಿಯ ಸಂಭ್ರಮದಲ್ಲಿ ಒಂದು ಹೆಜ್ಜೆ ಮುಂದಕ್ಕೆ ಹೋಗಿ, ಬೆಚ್ಚಗಿರಲು ಅದಕ್ಕೊಂದು ಪುಟ್ಟ ಗೂಡೊಂದನ್ನು ಮಾಡುವ ಎಂದೆನಿಸಿತು. ರೂಟ್ಟಿನ ಪೆಟ್ಟಿಗೆಯನ್ನು ಪುಟ್ಟ ಕೊಣೆಯ ತರಹ ಕತ್ತರಿಸಿ, ಒಳಗಡೆ ಮಲಗಲೆಂದು ನನ್ನ ಬಳಿ ಇದ್ದ ಸ್ಪಂಜ್ ಅನ್ನೆಲ್ಲ ಸೇರಿಸಿ ಮೆದುವಾದ ಹಾಸಿಗೆಯನ್ನೊಂದು ತಯಾರಿಸಿದೆ. ಆದರೆ ಈ ಪ್ರಯತ್ನ ವಿಫಲವಾಯಿತು. ಒಳಗಡೆ ಹೋಗುವಷ್ಟು ಧೈರ್ಯ ಮಾಡಲಿಲ್ಲ ನಮ್ಮ ಬಂಗಾರಿ, ಅದರ ಬದಲು, ಸ್ಪಾಂಜ್ ನ ಬಟ್ಟೆಯನ್ನೇ ಹೊರಗೆ ಕಚ್ಚಿ ಎಳೆದು ತಿನ್ನಲು ಸಾಧ್ಯವೇ ಎಂದೆಲ್ಲ ಗಮನಿಸಿ, ಪರಚಿ, ತನಗೆ ಉಪಯುಕ್ತವಾದ್ದಲ್ಲ ಎಂದರಿತು ಕಿತ್ತು ಹೊರಗೋಡಿತು. "ಇನ್ನು ಚಳಿಗಾಲಕ್ಕೆಂದು ಅದಕ್ಕೆ ಟೋಪಿ ಸ್ವೇಟರ್ ಹೊಲೆಯುವುದೊಂದು ಬಾಕಿ ನೀನು.." ಎಂದು ಮನೆಯಲ್ಲಿ ಕೆಣಕಿಸಿಕೊಂಡಿದ್ದೂ ಆಯಿತು. "ಬಂಗಾರಿ ಬಾರೆ.." ಎಂದು ಒಮ್ಮೊಮ್ಮೆ ಕರೆದರೆ, ಹತ್ತಿರದ ಮರದ ಟೊಂಗೆಯಲ್ಲಿ ಹಣಕಿ ಇಣಕಿ ನನ್ನ ಕೈಯಲ್ಲೇನಾದರೂ ತಟ್ಟೆಯಿದೆಯೇ ಎಂದು ಗಮನಿಸುತ್ತಿತ್ತು, ತಟ್ಟೆ ಕಂಡರೆ ತಕ್ಷಣಕ್ಕೆ ಹಾಜರು. ಈ ಚಳಿಗಾಲದ ತಣ್ಣನೆಯ ವಾತಾವರಣಕ್ಕೋ ಏನೋ, ಬೆಳಗಿನ ಜಾವದಲ್ಲಿ ಬಾಲ್ಕನಿಯ ಬಾಗಿಲಿಂದ ಒಳಬಂದು ಮನೆಯ ಸೋಫಾ ಎಲ್ಲವನ್ನೂ ಹತ್ತಿ ಓಡಾಡಲು ಸ್ವಲ್ಪವೂ ಸಂಕೋಚಿಸುತ್ತಿರಲಿಲ್ಲ... ಕೈ ಮುಷ್ಠಿ ಬಿಗಿಹಿಡಿದು ತಗೋ ಎಂದು ಕೈ ಚಾಚಿದರೆ ಸಾಕು, ಬಂದು ತನ್ನ ಚೂಪು ಮೂತಿಯಿಂದ ಕೈಯನ್ನೆಲ್ಲ ಮೂಸಿ ಮೂಸಿ, ತನ್ನ ಮುಂದಿನ ಎರಡು ಮುಂಗಾಲುಗಳಿಂದ ನನ್ನ ಕೈ ಮುಷ್ಟಿಯನ್ನು ಬಾಚಿ ಬಾಚಿ ತೆಗೆಯಲು ಪ್ರಯತ್ನಿಸುತ್ತಿತ್ತು. ನನ್ನ ಮಗಳು ೬ ತಿಂಗಳ ಪಾಪುವಿದ್ದಾಗ ಹೇಗೆ ನಮ್ಮಗಳ ಕೈ ಎಳೆದು ಹಿಡಿಯುತ್ತಿದ್ದಳೋ ಅದೇ ಅನುಭವ ಮರುಕಳಿಸುತ್ತಿತ್ತು. ಒಟ್ಟಿನಲ್ಲಿ ಬಂಗಾರಿ - ನಮ್ಮ ಅಳಿಲಿನ ಆಗಮನ, ನಮಗೆಲ್ಲ ಒಂದು ರೀತಿಯ ಸಂತೋಷ, ಕುತೂಹಲ, ಉತ್ಸಾಹ ಎಲ್ಲವನ್ನೂ ತಂದಿತ್ತು.

ಒಂದು ದಿನ ಬೆಳಿಗ್ಗೆಯೇ ಹಾಕಿಟ್ಟಿದ್ದ ಬಂಗಾರಿಯ ಆಹಾರ ತಟ್ಟೆಯಲ್ಲಿ ಹಾಗೆಯೇ ಇತ್ತು, ಕರಟದಲ್ಲಿ ನೀರೂ ಕೂಡ ಕಡಿಮೆಯಾಗಿರಲಿಲ್ಲ. ಹೌದು ಬೆಳಿಗ್ಗೆ ಯೋಗಾಸನದ ಸಮಯದಲ್ಲಿ ಮನೆಯೊಳಗೇ ಬಂದು ಕಂಡ ಕಂಡಲ್ಲಿ ಹತ್ತಿ ಹಾರಿ ಕುಪ್ಪಳಿಸಿರಲಿಲ್ಲ. ನಾಲ್ಕು ಸಲ ಕೂಗಿ ಕರೆದೆ, "ಬಂಗಾರಿ ಬಾರವ್ವ.." ಎಂದು, ಸುತ್ತಲಿನ ಯಾವ ಮರದ ಕೊಂಬೆಗಳಲ್ಲೂ ಯಾವುದೇ ತರಹದ ಸಪ್ಪಳ ಆಗಲಿಲ್ಲ. ಎಲ್ಲೋ ಆಟವಾಡಿಕೊಂಡಿರಬಹುದೆಂದು ಭಾವಿಸಿ, ಇನ್ನೊಂದಷ್ಟು ಧಾನ್ಯಗಳನ್ನು ಉದುರಿಸಿ ನನ್ನ ಕೆಲಸದ ನಿಮಿತ್ತ ನಾನು ಹೊರನೆಡೆದೆ. ಮಧ್ಯಾಹನದವರೆಗೂ ಬಂಗಾರಿಯ ಸುಳಿವಿರಲಿಲ್ಲ. ಏನೋ ಒಂದು ರೀತಿಯ ಕಸಿವಿಸಿ ಪ್ರಾರಂಭವಾಯಿತು. ಅದಕ್ಕಿಷ್ಟವಾದ ಆಹಾರವನ್ನೇನಾದರೂ ನಾನು ಹೆಚ್ಚಿನ ಪ್ರಮಾಣದಲ್ಲಿ ನೀಡಿ ಅರೋಗ್ಯ ತೊಂದರೆ ಮಾಡಿದೆನೇ ಎಂದೆಲ್ಲ ಗೊಂದಲ ಶುರುವಾಯಿತು. ಮಗಳು ಕೂಡ ಒಂದೇ ಸಮನೆ "ಬಂಗಾರಿ ಇನ್ನೂ ಬರ್ಲೆ, ಎಲ್ಲೋತು ಎಲ್ಲೋತು.. ?" ಎಂದು ಕೇಳತೊಡಗಿದ್ದಳು. "ಎಲ್ ಹೊದ್ಯೆ ಮಗಳೇ..." ಎಂದು ನನ್ನ ಮನಸ್ಸೂ ಕೂಡ ಒಂದೇ ಸಮನೆ ಅದೇ ಪ್ರಶ್ನೆಯನ್ನು ಕೇಳುತ್ತಿತ್ತು. ಮಧ್ಯಾಹ್ನಕ್ಕೆ ಅದರ ಆಹಾರವನ್ನೆಲ್ಲ ಬದಲಾಯಿಸಿ ನೋಡಿದೆ. ಸಂಜೆಯವರೆಗೂ ಕಾದೆವು. ಬಂಗಾರಿಯ ಸುಳಿವಿಲ್ಲ. ಯಾರನ್ನು ಕೇಳಲೂ ಸಾಧ್ಯವಿಲ್ಲದ ಅಸಹಾಯಕತೆ. ಮತ್ತೆ ಗೂಗಲಮ್ಮ ಅಳಿಲುಗಳ ಬಗ್ಗೆ ನೀಡಿದ ವಿಷಯ ಸಂಗ್ರಹದಲ್ಲಿ ಒಂದು ವಿಷಯ ನೆನಪಾಯಿತು. ಮರ ಹತ್ತುವ ಅಳಿಲುಗಳು, ಒಂದು ನೈಸರ್ಗಿಕ ಜಾಗದಿಂದ ಇನ್ನೊಂದು ನೈಸರ್ಗಿಕ ಜಾಗಕ್ಕೆ ಓಡಾಡುತ್ತಿರುತ್ತವೇ ಎಂದು. ಅಂತೆಯೇ ಓದಿದ ಇನ್ನೊಂದು ವಿಷಯವೆಂದರೆ, ಬೆಕ್ಕು, ಹಾವು ಇನ್ನಿತರೇ ವೈರಿಗಳ ಕಾಟ ಹೆಚ್ಚೆಂದು. "ಓ ದೇವರೇ, ನಮ್ಮ ಪುಟ್ಟುಮರಿಗೆ ಈ ಮನೆ ನೆನಪಿಲ್ಲದಿದ್ದರೂ ಪರ್ವಾಗಿಲ್ಲ, ಏನೂ ತೊಂದರೆಯಲ್ಲಿಲ್ಲದಿದ್ದರೆ ಸಾಕು.." ಎಂದು ಮನಸ್ಸು ಕೇಳತೊಡಗಿತು. ಆದರೆ ಅಂದು ನನಗೆ ಊಟ ತಿಂಡಿಯೇ ಸೇರದಷ್ಟು ಬೇಸರ. ಸುಸ್ತಾಗಿ ಕನ್ನೇಳಿಯುತ್ತಿದ್ದರೂ, ರಾತ್ರೆ ಮಲಗಲು ಮನಸ್ಸಿಲ್ಲದಷ್ಟು ಕಳವಳ. ಪ್ರೀತಿಗೆ ಪ್ರತಿ ಪ್ರೀತಿಯನ್ನುತಕ್ಷಣಕ್ಕೆ ಕೊಟ್ಟ ಆ ಪುಟ್ಟು ಜೀವಿ, ಒಂದು ವಾರದಲ್ಲೇ ಹೃದಯಕ್ಕೆ ಸಮೀಪವಾಗಿ ಹೋಗಿತ್ತು. ಮರುದಿನ ಬೆಳಗಿನ ಜಾವವೇ ಎದ್ದು ಓದಿ ಹೋಗಿ ಬಾಲ್ಕನಿಯ ಕಡೆಗೆ ಓಡಿದೆ. ಇಲ್ಲ, ಬಂಗಾರಿ ಬಂದಿದ್ದರ ಸುಳಿವಿಲ್ಲ... ಅಂದು ಪ್ರಾಣಾಯಾಮಕ್ಕೂ ಮನಸಾಗಲಿಲ್ಲ, ಕೈಯಲ್ಲಿ ಚಾ ಹಿಡಿದು ಬಾಲ್ಕನಿಯ ಕಡೆಗೆ ತದೇಕಚಿತ್ತದಿಂದ ನೋಡುತ್ತಾ ಕುಳಿತಿದ್ದೆ. ಅಂದು ಯಾವ ಕೆಲಸಕ್ಕೂ ಮನಸಾಗಲಿಲ್ಲ. ಒಂದೇ ಸಮನೆ ಮನಸ್ಸು 'ಬಂಗಾರಿ' ಯನ್ನು ಕರೆಯುತ್ತಿತ್ತು...  ಶಬರಿ ರಾಮನಿಗೋಸ್ಕರ ಕಾದದ್ದು ಹೀಗೆ ಇರಬಹುದಾ...! ಆದರೂ ನಿತ್ಯ ಕೆಲಸಗಳಿಗೆ ಬ್ರೇಕ್ ಹಾಕಲಾಗದೆ, ಮಗಳನ್ನು ಬೆಳಿಗ್ಗೆ ಸೈಕಲ್ ರೌಂಡ್ ಹೊಡೆಸಲು ಹೊರಗೆ ಹೊರಟೆ. ಆಗ ಪಕ್ಕದಲ್ಲಿದ್ದ ವಾಚ್ ಮ್ಯಾನ್ ಹೇಳಿದ ಮಾತು ನನಗೆ ಅತೀವ ಆಘಾತ ಉಂಟುಮಾಡಿತು. "ಮೇಡಂ ನಿಮ್ಮ ಮನೆ ಬಾಲ್ಕನಿಗೆ ಜಂಪ್ ಮಾಡ್ಕೊಂಡ್ ಇತ್ತಲ್ಲಾ, ಆ ಅಳಿಲು ನಿನ್ನೆ ಮರದ ಕೊಂಬೆಗೆ ಎಲೆಕ್ಟ್ರಿಕ್ ವೈರ್ ಎಕ್ಸಟೆನ್ಶನ್ ತಾಕ್ಕೊಂಡಿತ್ತಲ ಅಲ್ಲಿ ಓಡಾಡ್ಬೇಕಾದ್ರೆ ಶಾಕ್ ಹೋಡ್ಸ್ಕೊಂಡ್ ಸತ್ತೋಯ್ತು..."!! "ನನ್ನ ಬಂಗಾರಿ ಮತ್ತೆ ವಾಪಸು ಬರದು.." ಆ ಭಾವನೆಯೇ ಒಪ್ಪಿಗೆಯಾಗಲಿಲ್ಲ ನನಗೆ. ಕಣ್ಣಂಚಿನಲ್ಲಿ ನೀರು ಕೇಳದೆಯೇ ತುಂಬಿಕೊಂಡಿತು. "ಅಮ್ಮಾ ಏನಂತೆ, ಅಳಿಲು ಎಲ್ಲೋತು?" ಎಂದು ಮಗಳ ಧ್ವನಿ ಕೇಳುತ್ತಿದ್ದರೂ ಉತ್ತರಿಸಲಾಗದಷ್ಟು ಗದ್ಗದಿತವಾಗಿತ್ತು ನನ್ನ ಗಂಟಲು. ಆದರೂ ಸಾವರಿಸಿಕೊಂಡು ಮಗಳಿಗೂ ಅವಳಿಗರ್ಥವಾಗುವಂತೆ ಉತ್ತರಿಸಿ, "ಛೆ! ರೆಂಬೆ ಕೊಂಬೆ ವೈರ್ ಗೆ ತಾಗದೆ ಇರೋ ಹಾಗೆ ಸ್ವಲ್ಪ ಕಟ್ ಮಾಡಬೇಕೀಗ...ಅನ್ಯಾಯವಾಗಿ ಅಳಿಲು, ಹಕ್ಕಿ ಎಲ್ಲ ಸಾಯ್ತವೆ" ಎಂದು ಅವರಿಗೆ ಪ್ರತ್ಯುತ್ತರ ನೀಡಿ ಅಲ್ಲಿಂದ ಜಾಗ ಖಾಲಿ ಮಾಡಿದೆ. ಮತ್ತೆರಡು ದಿನ ನಮ್ಮ ಬಂಗಾರಿ ಮತ್ತೆ ಬಾಲ್ಕನಿಗೆ ಬರುವುದಿಲ್ಲ ಎಂದು ತಿಳಿದಿದ್ದರೂ ಕತ್ತು ಹೊರಳಿ ನೋಡುವುದನ್ನು ನಿಲ್ಲಿಸುತ್ತಿರಲಿಲ್ಲ. ಆದರೂ ಬಂಗಾರಿಗೆ ಆಹಾರ ಕೊಡಲೆಂದು ಇಟ್ಟಿದ್ದ ತಟ್ಟೆ ಮತ್ತು ನೀರಿನ ಕರಟ ಇನ್ನೂ ಹಾಗೆಯೆ ಇದೆ... "ಬಂಗಾರಿಯ ಸಂಬಂಧಿಕರ್ಯಾರಾದರೂ ಬರಬಹುದು.." ಎಂಬ ಹುಚ್ಚು ಆಸೆಯಿಂದ......

No comments:

Post a Comment