ಗುರುವಾರ, ಜನವರಿ 26, 2017

ಇವತ್ ಯಾವ ಹಣ್ಣು ತಿಂದ್ರಿ??


ಹಣ್ಣು ಅಂದ್ರೆ ಯಾರಿಗೆ ಪ್ರಿಯವಲ್ಲ.. ಇಂದು ಈ ವರ್ಷದ ಮೊದಲ ಸ್ಟ್ರಾಬೆರಿ ಹಣ್ಣೊಂದನ್ನು ಬಾಯಿಗೆ ಹಾಕಿಕೊಂಡಾಗ ತಿಂದ ಮೊದಲ ಹಣ್ಣಿನ ಅತ್ಯಂತ ಹುಳಿಯಾದ ರುಚಿಯಿಂದಾಗಿ ಮುಖ ಕಿವುಚಿ ಹೋಯಿತು. 'ಅಬ್ಬಬ್ಬಾ..' ಎಂದು ಅಂತೂ ಸಾವರಿಸಿಕೊಂಡು ತಿನ್ನುವುದನ್ನು ಮುಂದುವರೆಸಿದೆ. ಮತ್ತೆ ೩ ಹಣ್ಣು ಮುಗಿಯುವರ್ಷ್ಟರಲ್ಲಿ, ಈ ಸೂಪರ್ ಸ್ಪೀಡ್ ಬ್ರೈನ್ ಎಷ್ಟೊಂದು ವಿಷಯಗಳನ್ನು ಯೋಚಿಸಿ ಗುಡ್ಡೆ ಹಾಕಿ, ನೆನಪುಗಳನ್ನು ಮೆಲಕು ಹಾಕಿ, ಒಂದಷ್ಟು ಭಾವನೆಗಳನ್ನು ಮಗಚಿ ಎತ್ತಿ ತಂದುಕೊಟ್ಟಿತ್ತು..!!
ಹಣ್ಣುಗಳನ್ನು ತಿನ್ನುವುದಕ್ಕೆ ನನಗೇನೂ ಹೆಚ್ಚಿನ ಬೇಸರವಿರಲಿಲ್ಲ..ಹಾಗೆಂದು ಗಾಬರಿಸಿ ಹೋಗಿ ತಿನ್ನುವಷ್ಟು ವ್ಯಾಮೋಹವೂ ಕೂಡ ಕಡಿಮೆ. ಚಿಕ್ಕಂದಿನಿಂದಲೂ ಮಕ್ಕಳು ಹಣ್ಣು ತಿನ್ನಲೆಂದು ಅಪ್ಪಾಜಿ ಪಡುತ್ತಿದ್ದ ಸಾಹಸ ಅಷ್ಟಿಷ್ಟಲ್ಲ. ಹಣ್ಣು ತಿನ್ನೀ ಎಂದು ಕೇಳಬೇಕಿತ್ತು, ಸಿಪ್ಪೆ ಬಿಡಿಸಿ ನಾವಿಬ್ಬರು ಹೆಣ್ಮಕ್ಕಳ ಮುಂದೆ ತರಬೇಕಿತ್ತು..ಅಕ್ಕಂಗೆ ತಿನ್ನಿಸಲೆಂತೂ..ಆಕರ್ಷಕವಾಗಿ ಕತ್ತರಿಸಿ ಬೌಲ್ ಅಲ್ಲಿ ಹಾಕಿ ತಂದು ಕೊಡುವ ಜವಾಬ್ಧಾರಿ !! ನಾವು ತಿನ್ನಲು ಸೋಮಾರಿತನ ತೋರಿಸಿದಾಗ, ಅಪ್ಪಾಜಿ ಚಿಕ್ಕಪ್ಪಂದಿರೆಲ್ಲ ಹೇಗೆ ಊರಲ್ಲಿ ಚಿಕ್ಕಂದಿನಲ್ಲಿ ಯಾವುದೇ ಬಾಳೆಹಣ್ಣಿನ ಚಿಪ್ಪನ್ನು ಒಂದು ಕ್ಷಣದಲ್ಲಿ ಇಲ್ಲವಾಗಿಸುತ್ತಿದ್ದರು, ಕಡೆಗೆ ಅದು ಹುಳಿ ಹುಳಿ ಸೇಲಂ ಜಾತಿಯ ಬಾಳೆಹಣ್ಣಾದರೂ ಸರಿ, ಸಿಪ್ಪೆ ಕೂಡ ಬಿಡಿಸಿ ತಿನ್ನವಷ್ಟು ವ್ಯವಧಾನವಿಲ್ಲದೆ, ಸಿಪ್ಪೆ ಸಹಿತ ನುಂಗಿ ಬಿಡುತ್ತಿದ್ದ ರೋಚಕ ಕಥೆಗಳೆಲ್ಲ ಹೊರ ಬರುತ್ತಿತ್ತು. ಮತ್ತೆ ಇವತ್ತಿನವರೆಗೂ ಅಷ್ಟೇ, ನಮ್ಮ ಇಚ್ಚೆಯನ್ನೂ ಕೇಳದೆ, ತನಗೆ ನೆನಪಾದಷ್ಟೊತ್ತಿಗೆಲ್ಲ ನಮ್ಮ ಅಮ್ಮ ಹಣ್ಣಿನ ಸಿಪ್ಪೆ ಬಿಡಿಸಿ ತಂದು, ಹಣ್ಣನ್ನು ಕೈಗೆ ಹಿಡಿಸಿಯೇ ನಂತರದಲ್ಲಿ ಉವಾಚ "ಏ ಹಣ್ಣು ತಿನ್ನಿರೆ..." ಎಂದು!! :D :D ಆ ಸಮಯದಲ್ಲಿ ರಗಳೆ ಎಂದೆನಿಸಿದರೂ ಈಗ ಮನೆಯಲ್ಲಿ ನಾವೇ ತೆಗೆದು ತಿನ್ನಬೇಕೆಂದಾಗ ಪಾಲಕರ ಕಾಳಜಿ ಪ್ರೀತಿ ತುಂಬಾ ನೆನಪಾಗುತ್ತದೆ.
ಹೀಗೆ ಎರಡನೇ ಸ್ಟ್ರಾಬೆರಿ ತಿನ್ನುತ್ತಾ, ಯೋಚನೆ ಮುಂದುವರೆಯಿತು..ಈ ಹಣ್ಣು ತಿನ್ನುವುದಕ್ಕೆ ಯಾವುದೇ ನಿಯಮಗಳೆಲ್ಲ ಇದ್ದಂತಿಲ್ಲ...ಇದ್ದರೂ ನನಗದು ಎಂದೂ ಅನ್ವ್ಯಯಿಸುವುದಿಲ್ಲ. ಹಸಿವಾದಾಗ ಕೈಗೆ ಸಿಕ್ಕಿದ ಹಣ್ಣು ಹೆಕ್ಕಿ ತಿನ್ನುವುದಷ್ಟೇ!! ಆದರೂ, ಹಣ್ಣಿನ ಬಗ್ಗೆ ಕೆಲವರು ಕೆಲವೊಂದು ಪ್ರಸಂಗದಲ್ಲಿ ಹೇಳಿದ ಮಾತು ಮನಸ್ಸು ಹೆಕ್ಕಿ ಕೊಟ್ಟೆ ಬಿಟ್ಟಿತು. "ಹಣ್ಣು ಹುಳಿ ಇರಲಿ, ಸಿಹಿ ಇರಲಿ, ಸಪ್ಪೆ ಇರಲಿ..ಹಣ್ಣು ಹಣ್ಣೇ...ಅದಕ್ಕೆ ಅದರದ್ದೇ ಆದ ಗೌರವ ಕೊಡ್ಲೇ ಬೇಕು.." ಅಪ್ಪಾಜಿ ಯಾವಾಗಲೂ ತಿಳಿಸುವ ಮಾತಿದು. ಎಷ್ಟು ಸತ್ಯವಾದ ಮಾತು!! ನಾವು ತಿನ್ನುವ ಹಣ್ಣು ಸ್ವೀಟ್ ಆಗಿಯೇ ಇರಬೇಕೆಂದೇನೂ ನಿಯಮವಿಲ್ಲ..ಅದರಲ್ಲೂ ಈಗಿನ ಕಾಲದಲ್ಲಿ ಕಲ್ಲಂಗಡಿಯಂತ ಕೆಲವೊಂದು ಹಣ್ಣುಗಳು ಸ್ವೀಟ್ ಇದ್ದರೇನೇ ಭಯ ಶುರುವಾಗುತ್ತದೆ ಎಲ್ಲಿ ಕೃತಕ ಸಿಹಿ ಅಂಶವನ್ನು ಸೇರಿಸಿದ್ದರೂ ಎಂದು! ಹಣ್ಣಿನ ರುಚಿ ಹೇಗೆ ಇರಲಿ ಅದರ ಪರಿಮಳವನ್ನು ಆಹ್ಲಾದಿಸಬೇಕು ಎಂದು ಹೋದ ಸರ್ತಿ ಹಲಸು ಮಾವು ಮೇಳಕ್ಕೆ ಹೋದಾಗ ಬುಟ್ಟಿಮಾವಿನ ಹಣ್ಣಿನ ಮುಂದೆ ಕೂತಿದ್ದ ಬೆಳೆಗಾರ ಹೇಳಿದ್ದ, ಸಿಹಿಯಲ್ಲ ಹಣ್ಣಿನ ಜಾತಿಯ ಬಗ್ಗೆ ಭರವಸೆ ನೀಡುತ್ತಾ..ಒಪ್ಪುವಂತಹ ಮಾತು! ಖಂಡಿಕ ಅಜ್ಜನ ಮನೆಯ ಬಕ್ಕೆ ಹಲಸು, ಮಲೆನಾಡ ಪ್ರಾಂತ್ಯದಲ್ಲೇ ಪ್ರಸಿದ್ಧವಾದದ್ದು. ಎಲ್ಲರೂ ಹಂಬಲಿಸುತ್ತಾರೆ ಪ್ರತಿವರ್ಷವೂ ಅಲ್ಲಿನ ಹಣ್ಣು ಸಿಗಬಹುದೇ ಎಂದು. ಮನಸೋಲುವುದು ಅದರ ರುಚಿಗೆ, ಪರಿಮಳಕ್ಕೆ. ಹಲಸು ಬಿಡಿಸಿ, ಒಂದು ಸೊಳೆಗೆ ಕೊಬ್ಬರಿ ಎಣ್ಣೆ ಮತ್ತು ಮಾವಿನಕಾಯಿ ಉಪ್ಪಿನಕಾಯಿ ಹಚ್ಚಿ ತಿಂದರೆ, ಆಹಾಹಾ ಧನ್ಯೋಸ್ಮಿ ಅನ್ನೋ ಭಾವನೆ!! ಇನ್ನು ಹಣ್ಣು ತಿನ್ನುವ ವಿಧಾನದ ಬಗ್ಗೆ ಆತ್ಮೀಯ ಗೆಳೆಯನ ಸಲಹೆ. ಅಂದು ಫ್ರೂಟ್ ಸಲಾಡ್ ಗೆಂದು ಹಣ್ಣನ್ನು ಕತ್ತರಿಸಿಟ್ಟ ದಿನ. "ಹಣ್ಣನ್ನ ಕತ್ತರಿಸಿ ಕೊಚ್ಚಿ ತಿನ್ಬಾರ್ದು ಕಣೆ, ಹೇಗಿದೆಯೋ ಹಾಗೇ ತಿನ್ನಬೇಕು, ಮಾವಿನ ಹಣ್ಣನ್ನು ಹೇಗೆ ಪೂರ್ಣವಾಗಿ ಬಾಯಾಕಿ ತಿಂತೀಯಾ ಹಾಗೆ.." :) ಅದು ಸರಿಯೇ ನೈಸರ್ಗಿಕವಾಗಿರಲಿ ಎಂಬ ಆಶಯ ನನ್ನ ಗೆಳೆಯನದು..! ಸಾಧ್ಯವಾದ ಹಣ್ಣುಗಳನ್ನು ಸಂಪೂರ್ಣವಾಗಿ ನಮ್ಮ ಕೈಯಲ್ಲಿ ಹಿಡಿದು, ಬಾಯಲ್ಲಿ ಕಚ್ಚಿ ಆ ಹಣ್ಣಿನ ರಸವನ್ನು, ಸ್ವಾದವನ್ನು ಹೀರುವುದೇ ಒಂದು ಗಮ್ಮತ್ತು.. ಹಣ್ಣನ್ನು 'ಆನಂದಿಸಿ' ತಿನ್ನುವ ಬಗೆ..ಅಂತೆಯೇ ಅಪ್ಪಾಜಿ ಹೇಳುವ ಇನ್ನೊಂದು ಮಾತು, "ಯಾವ್ಯಾವ ಹಣ್ಣು ಯಾವ್ಯಾವ ಸೀಸನ್ ಅಲ್ಲಿ ಸಿಗತ್ತೋ ಅದನ್ನ ಚೆನ್ನಾಗಿ ತಿನ್ನಬೇಕು, ಸೀಸನ್ ಅಲ್ಲದ ಸಂಸ್ಕರಿಸಿದ ಹಣ್ಣು ಉಚಿತವಲ್ಲ...", ಹೌದು ಅನೇಕ ವೈದ್ಯರೂ ಕೂಡ ಹೇಳುವುದನ್ನು ಕೇಳಿದ್ದೇನೆ ನಾನು..ನೈಸರ್ಗಿಕವಲ್ಲದ ಪ್ರಕ್ರಿಯೆಯಿಂದ ಸಂಸ್ಕರಿಸಿಟ್ಟ ಹಣ್ಣುಗಳು ತಮ್ಮೆಲ್ಲ ಪೋಷಕಾಂಶಗಳನ್ನು ಒಂದೂ ಮೂಡಿಸಿಕೊಂಡಿರುವುದಿಲ್ಲ ಅಥವಾ ಉಳಿಸಿಕೊಂಡಿರುವುದಿಲ್ಲ!
ಇದೆಲ್ಲದರ ಜೊತೆಗೆ, ಸುಮಾರು ೪-೫ ವರ್ಷಗಳ ಕೆಳಗೆ ನಡೆದ ಘಟನೆಯೊಂದನ್ನು ಕೂಡ ಮನಸ್ಸು ರಪ್ಪ ಎತ್ತಿ ಹಾಕಿತು. ಶಿವಮೊಗ್ಗದಿಂದ ಸಾಗರಕ್ಕೆ ಮರಳುತ್ತಿದ್ದ ದಾರಿ. ರಸ್ತೆ ಬದಿಯಲ್ಲಿ ರೈತರು ತಮ್ಮ ಗದ್ದೆಯಿಂದ ಕೊಯ್ದು ನ್ಯಾಷನಲ್ ಹೈವೇಯಲ್ಲಿ ಮಾರಾಟಕ್ಕಿಟ್ಟುಕೊಳ್ಳುವುದು ಸರ್ವೇ ಸಾಮಾನ್ಯ ದೃಶ್ಯ ಆ ಬದಿಯ ರಸ್ತೆಗಳಲ್ಲಿ. ಕಂಡಲ್ಲಿ ಗಾಡಿ ನಿಲ್ಲಿಸಿ, ಅನಾನಸ್, ತರಬೂಜ, ಕಲ್ಲಂಗಡಿ ಈ ರೀತಿಯಾಗಿ ಹಣ್ಣನ್ನು ಅಲ್ಲಿಯೇ ತಾಜಾವಾಗಿ ಕತ್ತರಿಸಲು ಕೇಳಿ ತಿನ್ನುವುದು ನಮಗೆಲ್ಲರಿಗೂ ಇಷ್ಟವಾದ ಕಾಯಕ. ಒಮ್ಮೆ ಹೀಗಾಯಿತು. ತಾಜಾ ಕಲ್ಲಂಗಡಿ ಹಣ್ಣುಗಳ ಗುಡ್ಡೆ ಹಾಕಿದ್ದನ್ನು ಒಂದೆಡೆ ನೋಡಿ ನಾವು ಅಲ್ಲಿಯೇ ನಿಂತು, ಹಣ್ಣನ್ನು ಆ ಕ್ಷಣಕ್ಕೇ ಕತ್ತರಿಸಿ ತಿನ್ನಲು ಕೊಡಲು ಕೇಳಿದೆವು. ರಾಚುವ ಕೆಂಪು ಬಣ್ಣ, ಸೊಗಸಾದ ಸ್ವಾದ, ಸಾಮಾನ್ಯಕ್ಕಿಂತಲೂ ತುಸು ಹೆಚ್ಚಿನ ಸಿಹಿಯೇ ಅನಿಸಿತ್ತು ನಮ್ಮೆಲ್ಲರಿಗೂ..ಆದರೂ ತಾಜಾ ಹಣ್ಣನ್ನು ತಿಂದು ಬೀಗುತ್ತ ಬೆಳೆದವನಿಗೊಂದು ಮೆಚ್ಚುಗೆ ನೀಡಬೇಕಲ್ಲವೇ ಎಂದು, ವ್ಯಾಪಾರ ನೋಡಿಕೊಳ್ಳುತ್ತಿದ್ದ ಸಣ್ಣ ವಯಸ್ಸಿನ ಹುಡುಗನಿಗೇ ಹೇಳಿದೆವು. "ಅದ್ಭುತವಾದ ಹಣ್ಣು ಕಣಪ್ಪ. ಹೇಗೆ ಇಷ್ಟೊಂದು ಒಳ್ಳೆಯ ಕಲರ್ ಮತ್ತು ಸ್ವೀಟ್..ತುಂಬಾ ಚೆನ್ನಾಗಿದೆ.." ಎಂದು. ವ್ಯಾಪಾರ ತಂತ್ರಗಳನ್ನು ಆಗಷ್ಟೇ ಕಲಿಯಬೇಕಿದ್ದ ವಯಸ್ಸಿನ ಪೋರ ಕೊಟ್ಟ ಉತ್ತರ ನಮಗೆ ಒಮ್ಮೆಲೇ ದಂಗು ಬಡಿಸಿತು. "ಹಾಕಿವಲ ಇಂಜೆಕ್ಷನ್ನು.. ಒಳ್ಳೆ ಸೈಜು ಬರ್ತದೆ, ಬೇಗ ಹಣ್ಣೂ ಆಕೈತಿ..". ಅಂತೂ ಸತ್ಯತೆಯ ಪರಾಕಾಷ್ಠೆ.."ತಮ್ಮಾ ಬೆರೆವರಿಗೆ ಹೇಳ್ಬೇಡ" ಎಂದಂದು ಗಾಡಿ ಹತ್ತಿದೆವು :D :D
ಅಂತೂ ಮೂರನೇ ಹಣ್ಣಿಗೆ ಬಂದೆ. ಈ ಮಕ್ಕಳ ಪುಸ್ತಕದ ಬಗ್ಗೆ ಯೋಚನೆ ಬಂತು... ಎ ಫಾರ್ ಆಪಲ್, ಓ ಫಾರ್ ಒರೆಂಜ್, ಪಿ ಫಾರ್ ಫೈನ್ಯಾಪಲ್, ಏಸ್ ಫಾರ್ ಸ್ಟ್ರಾಬೆರಿ ಇವಿಷ್ಟು ಎಬಿಸಿಡಿ ಪುಸ್ತಕದಲ್ಲಿ ಸಾಮಾನ್ಯವಾಗಿ ಮಕ್ಕಳಿಗೆ ಮೊದಲು ಪರಿಚಯಗೊಳ್ಳುವ ಹಣ್ಣುಗಳು. ಪೇಟೆ ಕಡೆ ಸಾಮಾನ್ಯವಾಗಿ ಸಿಗದ ಹಣ್ಣಿಲ್ಲ ಎನ್ನುತ್ತಾರೆ. ಬೇರೆ ಬೇರೆ ದೇಶದಿಂದ ಆಮದುಗೊಂಡ ಹಣ್ಣುಗಳೂ ಕೂಡ ಲಭ್ಯ..ಮಕ್ಕಳನ್ನು ಮಾರ್ಕೆಟ್ಟಿಗೆ ಕರೆದುಕೊಂಡು ಹೋಗಿ ಪರಿಚಯಿಸಿ ಕೊಂಡು ತಂದು ತಿನ್ನಿಸಿವುದು ಹೇಗೆಂದರೂ ನಡೆದಿದೆ..ಆದ್ರೂ ನಾವೇ ಲಕ್ಕಿ ಅನುಸ್ತು. ಸಾಮಾನ್ಯವಾಗಿ ಅಂಗಡಿಯಲ್ಲಿ ದೊರೆಯುವ ಹಣ್ಣುಗಳ ಹೊರತಾಗಿ ನಮಗೆ ಸಣ್ಣಕಿದ್ದಾಗ ಸಿಗುತ್ತಿದ್ದ ಹಣ್ಣುಗಳೆಂದರೆ, ನೇರಳೆ, ಬಗೆ ಬಗೆಯ ಹಲಸು, ಬೋರೆ ಹಣ್ಣು, ಪರಿಗೆ ಹಣ್ಣು, ಗೇರನ್ನು ಸಳ್ಳೆ ಹಣ್ಣು, ಪುನ್ನೇರಳೆ, ಪೇರಳೆ, ಸಂಪಿಗೆ ಹಣ್ಣು, ಕೋಕಂ, ಹೊಳೆದಾಸಾಳ ಹಣ್ಣು, ಮುಳ್ಳಣ್ಣು ಅಯ್ಯೋ ಇನ್ನೂ ಅನೇಕ ಅನೇಕ ಹಣ್ಣುಗಳು. ಮಾವನ ಮಕ್ಕಳು, ಅಕ್ಕ-ತಮ್ಮಂದಿರ ಜೊತೆಗೂಡಿ, ಗುಡ್ಡ ಬೆಟ್ಟ ಅಲೆದು, ತೋಟ ಬ್ಯಾಣ ಸುತ್ತಿ ಹುಡುಕಿ ಹೆಕ್ಕಿ ತಿನ್ನುತ್ತಿದ್ದ ರುಚಿಕರವಾದ ಹಣ್ಣುಗಳವು. ನಮಗೆ ಬೇಕಾದ ಹಣ್ಣನ್ನು ನಾವೇ ಸಂಪಾದಿಸುವ ಸ್ವತಂತ್ರತೆ, ಸಂತೋಷ, ಚಪಲ ಎಲ್ಲವೂ ಇರುತ್ತಿದ್ದವು. ಮರ ಹತ್ತಿ ಕಷ್ಟ ಪಟ್ಟು ಹಣ್ಣನ್ನು ಕೊಯ್ಯಳೊಬ್ಬರು, ದೋಟಿ ಕೋಲಲ್ಲಿ ಬಡಚಿಗೆ ಹಾಕಿ (ಕೋಲಿನಿಂದ ಹಣ್ಣನ್ನು ಕೆಳಗೆ ಬೀಳಿಸುವ ಬಗೆ) ಹಣ್ಣುದುರಿಸುವ ಕಲೆ, ಬಿದ್ದ ಹಣ್ಣನ್ನು ಹೆಕ್ಕಿ ಒಟ್ಟು ಮಾಡುವ ಕೆಲಸ, ಮತ್ತು ಕೊನೆಯಲ್ಲಿ ಎಲ್ಲರೂ ಕೂತು, ಸರಿ ಸಮಾನವಾಗಿ ಹಂಚಿಕೊಳ್ಳುವ/ಜಗಳವಾಡುವ ಪಂಚಾಯಿತಿಗೆ. ಇವೆಲ್ಲವನ್ನೂ ಮಾಡಿದ್ದೇವೆ ನಾವು. ಮಧುರ ಬಾಲ್ಯದ ನೆನಪಿಗೆ ಕ್ಷಣಮಾತ್ರದಲ್ಲಿ ಬೆಸೆದುಕೊಂಡ ಕೊಂಡಿಯನ್ನು ಎತ್ತಿ ಹಿಡಿದಿತ್ತು ಈ ಹಣ್ಣು.


ಒಟ್ಟಿನಲ್ಲಿ ತಿಂದ ೩ ಸ್ಟ್ರಾಬೆರ್ರಿ ಹಣ್ಣಿಗೆ, ರಭಸದ ಮನಸ್ಸು ಎತ್ತಿಕೊಟ್ಟ ಒಂದೆಂಟು ನಿಮಿಷದ ಯೋಚನೆಗಳು, ಅವಷ್ಟನ್ನು ಬರವಣಿಗೆಗಿಳಿಸಬೇಕೆಂದು ಕೂತು ನಾ ಬರೆದ ನನ್ನ ೩೫ ನಿಮಿಷಗಳು. ಇವೆಲ್ಲದರ ಪರಿಣಾಮ ಇಷ್ಟೆಲ್ಲಾ ವಿಷಯಗಳು. ಇಷ್ಟು ಅನುಭವ ಹಂಚಿಕೊಂಡ ಮೇಲೆ, ಬರಹದ ಸಾರಾಂಶ ಒಂದು ತಿಳಿಸಿಯೇ ಬಿಡುತ್ತೇನೆ.
# ಹಣ್ಣು ತಿನ್ರಪ್ಪ ಯಾವ್ದಾದ್ರೂ, ಆರೋಗ್ಯಕ್ಕೆ ಒಳ್ಳೆಯದು.
# ಹಣ್ಣು ತಿನ್ನಕ್ಕೆ ನಿಯಮಗಳಿಲ್ಲ ಅಂತ ನನ್ನ ಭಾವನೆ..ತಿನ್ಬೇಕಂಸಿದ್ರೆ ತಿನ್ನಿ ಅಷ್ಟೇ..(ಕೆಲವೊಂದು ಹಣ್ಣಿನ ಆಮ್ಲ ಸ್ವಭಾವದಿಂದ ದೇಹಕ್ಕೆ ಪರಿಣಾಮ, ತಿನ್ನುವ ಸಮಯ ಅಂತೆಲ್ಲ ಯೋಚ್ನೆ ಇದ್ರೆ, ನಿಮ್ಮ ನುರಿತ ತಜ್ಞರನ್ನು ಕೇಳಿಕೊಳ್ಳಿ, ಆಮೇಲೆ ನಂಗೆ ಬೈಬೇಡಿ)
# ಶುಚಿ ಮುಖ್ಯ, ರುಚಿ ಇದ್ರೆ ಒಳ್ಳೇದು ಇಲ್ದೆ ಹೋದ್ರೆ, ಹಣ್ಣಿನ ಬಗೆಗಿನ ಪ್ರೀತಿಗಾದ್ರೂ ತಿಂದ್ಬಿಡಿ.
# ಸಾಧ್ಯವಿದ್ರೆ ಹಣ್ಣನ್ನ ಇಡೀ ಇಡಿಯಾಗಿ ತಿನ್ನಣ, ಏನೋ ಒಂತರ ಪೂರ್ಣತೆ ಅನ್ಸತ್ತೆ..ಅದರ ಭೌತಿಕ ಅಂದ, ರುಚಿ, # ಪರಿಮಳ, ಆಹ್ಲಾದ ಎಲ್ಲವೂ ಇಡಿಯಾಗೆ ಸಿಗತ್ತಲ್ಲಾ...(ಇನ್ನು ಸಿಪ್ಪೆ ತೆಗಿಯುವಂತದ್ದು ತೆಕ್ಕೊಳಿ :P )
# ಸೀಸನ್ ಅಲ್ಲಿ ಸಿಗುವ ಹಣ್ಣಿಗೆ ಪ್ರಾಮುಖ್ಯತೆ ಕೊಡೋಣ.
# ಅಪರೂಪದ ಹಣ್ಣನ್ನು ಸ್ವಲ್ಪ ಪ್ರಯತ್ನ ಪಟ್ಟು, ಹುಡುಕಿ ಹೋಗಿ ತಿನ್ನಿ, ಮಜಾ ಬರತ್ತೆ..
# ಬರಿ ಅಂಗಡಿಗಷ್ಟೇ ಅಲ್ಲ, ಹಣ್ಣಿನ ಮರದ ಬುಡಕ್ಕೆ ಹೋಗಿ, ಮರವನ್ನ ಕೇಳಿ ತಿನ್ನಿ, ಕಡೆಗೊಂದು ಥ್ಯಾಂಕ್ಸ್ ಹೇಳಿ.
ಹಣ್ಣಿನ ಶೈನು, ಅಂದ-ಚಂದ, ರುಚಿ ಎಲ್ಲಕ್ಕಿಂತ ಆದಷ್ಟೂ ನೈಸರ್ಗಿಕವಾದ ಕೃತಕವಲ್ಲದ ಮಾದರಿಯ ಬೆಳೆಯ ಕಡೆ ಇರಲಿ ನಮ್ಮ ಆಕರ್ಷಣೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ