ಮಂಗಳವಾರ, ಅಕ್ಟೋಬರ್ 3, 2017

ಬತುಕಮ್ಮ ಹಬ್ಬ

ಬಿರು ಬಿಸಿಲಿನ ಊರು ಹೈದರಾಬಾದ್ ನ ನಂಟು ನನಗೆ ಪ್ರಾರಂಭವಾದ್ದು ೫ ವರ್ಷಗಳ ಹಿಂದೆ. ಅಕ್ಕ ನ ಕುಟುಂಬ ಹೈದರಾಬಾದಿನಲ್ಲಿ ವಾಸಿಸಲಾರಂಭಿಸಿದಾಗಿನಿಂದ, ವರ್ಷಕ್ಕೊಂದು ಸರ್ತಿಯಾದರೂ ರಜೆಗೆಂದು ಅಲ್ಲಿಗೆ ತೆರಳುವುದು ಸಾಮಾನ್ಯವಾಗಿದೆ ನನಗೆ. ಪ್ರತಿ ಸಲವೂ ಮಕ್ಕಳನ್ನು ಕಟ್ಟಿಕೊಂಡು ಸಿಕ್ಕ ಸಿಕ್ಕ ಸಂದರ್ಭ, ಸಿಕ್ಕ ಸಿಕ್ಕ ಸಮಯವನ್ನು ಹೈದರಾಬಾದ್ ಓಡಾಡಲು ಬಳಸಿಕೊಳ್ಳುತ್ತಿದ್ದೆವು. ಅಂತೆಯೇ ಈ ಸರ್ತಿ ಸೆಪ್ಟೆಂಬರ್ ತಿಂಗಳಿನಲ್ಲಿ ಅಲ್ಲಿಗೆ ಪ್ರಯಾಣ ಬಳಸಿದೆನಾದ್ದರಿಂದ, ಅಲ್ಲಿನ ಅತ್ಯಂತ ಸಡಗರದ ಮತ್ತು ಸ್ಥಳೀಯ ಹಬ್ಬವೊಂದರ ಪರಿಚಯ ನನಗಾಯಿತು. ಅದುವೇ, ಬತುಕಮ್ಮ ಹಬ್ಬ.



ಬತುಕಮ್ಮ ಹಬ್ಬ ತೆಲಂಗಣಿಗರ ಒಂದು ವಿಶಿಷ್ಟವಾದ ಮತ್ತು ಅನನ್ಯವಾದ ನವರಾತ್ರಿ ಹಬ್ಬ. ಹಬ್ಬ ಎನ್ನುವುದಕ್ಕಿಂತಲೂ ಇದೊಂದು ಅಲ್ಲಿನ ಸಂಸ್ಕೃತಿಯ ಸ್ವರೂಪವಾಗಿದೆ. ತೆಲುಗು ಭಾಷೆಯ ಪ್ರಕಾರ, ಬತುಕು ಎಂದರೆ ಜೀವ ಮತ್ತು ಅಮ್ಮ ಎಂದರೆ ತಾಯಿ. ಜನನಿ ಎಂದು ಕರೆಯಲ್ಪಡುವ ಶಕ್ತಿ ದೇವತೆ ಮಹಾ ಗೌರಿಯನ್ನು ನಿಸರ್ಗ ದೇವತೆಯ ರೂಪದಲ್ಲಿ ಪೂಜಿಸಲ್ಪಡುವ ಆಚರಣೆ. ಮಹಾಲಯ ಅಮಾವಾಸ್ಯೆ ದಿನದಿಂದ ಪ್ರಾರಂಭವಾಗುವ ಈ ಹಬ್ಬಕ್ಕೆ, ಗೋಪುರದ ಮಾದರಿಯಲ್ಲಿ, ಬಿದಿರಿನ ಕಟ್ಟನ್ನು ನಿರ್ಮಿಸಿಕೊಂಡು ಅದರ ಸುತ್ತಲೂ ಏಳು ಹಂತಗಳಲ್ಲಿ, ಋತುಮಾನಕ್ಕೆ ತಕ್ಕಂತೆ ದೊರೆಯುವ, ಚೆಂಡು ಹೂವು, ಕನ್ನೇ  ಹೂವು, ಆವರಿಕೆ ಗಿಡದ ಹೂಗಳು ಮತ್ತಿತರ ವಿಶೇಷ ವರ್ಣರಂಜಿತ ಹೂಗಳಿಂದ ಸಿಂಗರಿಸುತ್ತಾರೆ. ಅದರಲ್ಲೂ ಹೆಚ್ಚಿನ ಭಾಗದಲ್ಲಿ ಔಷಧೀಯ ಮಹತ್ವವಿರುವಂತಹ ಹೂಗಳನ್ನು ಅತ್ಯಂತ ಒಪ್ಪವಾಗಿ ಜೋಡಿಸುತ್ತಾರೆ. ಮೇಲ್ತುದಿಯಲ್ಲಿ ಅರಿಶಿಣ ಕೊಂಬಿನಿಂದ ನಾದಿದ ಮಿಶ್ರಣವನ್ನು ಲೇಪಿಸಿ ಗೌರಮ್ಮನ ಸ್ವರೂಪವನ್ನು ನಿರ್ಮಿಸುತ್ತಾರೆ. ಹೆಂಗಳೆಯರು ಈ ಗೋಪುರವನ್ನು ತಲೆಯ ಮೇಲೆ ಹೊತ್ತು ಮೆರವಣಿಗೆ ಮಾಡುವ ದೃಶ್ಯವೇ ಒಂದು ತರಹದ ಸುಗ್ಗಿ. ಜರಿತಾರಿ ಲಂಗ ದಾವಣಿ, ಬಣ್ಣ ಬಣ್ಣದ ರೇಷ್ಮೆ ಸೀರೆಗಳನ್ನುಟ್ಟು, ಆಭರಣಗಳನ್ನು ತೊಟ್ಟು, ತಲೆಗೆ ವರ್ಣಮಯ ಹೂವನ್ನು ಮುಡಿದು ಅಲಂಕಾರಗೊಂಡ ಹೆಣ್ಣುಮಕ್ಕಳು ಮತ್ತು ಹೆಂಗಸರು, ತಮಗೆ ಹತ್ತಿರದಲ್ಲಿನ ಸ್ಥಳೀಯ ಬತುಕಮ್ಮ ಹಬ್ಬದ ಆಚರಣೆಯ ಸ್ಥಳಕ್ಕೆ ಈ ಹೂಬುಟ್ಟಿಯ  ಹೊತ್ತುಕೊಂಡು ಹೋಗುತ್ತಾರೆ. ರಂಗವಲ್ಲಿ ಹಾಕಿ ಸಿದ್ಧಗೊಳಿಸಿಕೊಂಡ ಹಬ್ಬ ನಡೆಸುವ ಜಾಗದಲ್ಲಿ ಒಂದೆಡೆ ಸ್ಥಾಪಿಸುತ್ತಾರೆ. ನಂತರದಲ್ಲಿ, ಎಲ್ಲರೂ ವರ್ತುಲದ ಮಾದರಿಯಲ್ಲಿ ಸುತ್ತುವರೆಯುತ್ತಾರೆ. ಲಯಬದ್ಧವಾಗಿ ಹಾಡುವ ಬತುಕಮ್ಮನ ಕುರಿತಾದ ಹಲವು ಸಾಂಪ್ರದಾಯಿಕ ಹಾಡು ಮತ್ತು ಅದಕ್ಕನುಗುಣವಾಗಿ ಸರಳವಾಗಿ ಚಪ್ಪಾಳೆಯೊಂದಿಗೆ ಒಂದೇ ಹದದಲ್ಲಿ ಹೆಜ್ಜೆ ಹಾಕಿ ಮಾಡುವ ನೃತ್ಯ  ಅಲ್ಲಿನ ಕಲೆ-ಸಂಸ್ಕೃತಿಯ ಜೀವಂತಿಕೆಯನ್ನು ಪ್ರತಿಬಿಂಬಿಸುತ್ತದೆ. ಉಯ್ಯಾಲು (ಉಯ್ಯಾಲೆ), ಚಂದಮಾಮ (ಚಂದ್ರ) ಮತ್ತು ಗೌರಮ್ಮ ಇವುಗಳು ಪ್ರಮುಖವಾದ ಸಾಂಪ್ರದಾಯಿಕ ಹಾಡುಗಳು. ತಾಯಿ ಗೌರಿಯ ಆಶೀರ್ವಾದವನ್ನು ತಮ್ಮ ಹಾಡು ಮತ್ತು ನೃತ್ಯದ ಮೂಲಕ ಯಾಚಿಸುತ್ತಾರೆ. ಹೀಗೆ ೯ ದಿನಗಳ ವರೆಗೆ  ಪ್ರತಿದಿನವೂ ಬತುಕಮ್ಮನ ಪೂಜೆ, ಹಾಡು-ನೃತ್ಯ, ವಿವಿಧ ಬಗೆಯ ನೈವೇದ್ಯ ಸಿಹಿ ತಿನಿಸು ತಯಾರಿಕೆ ಎಲ್ಲವೂ ಉಲ್ಲಾಸದಿಂದ ಸಾಗುತ್ತದೆ.








ಬತುಕಮ್ಮ ಹಬ್ಬದ ಆಚರಣೆಗೂ ಒಂದು ಹಿನ್ನಲೆಯಿದೆ. ಪುರಾಣ ಕಥೆಯಲ್ಲಿ, ದಕ್ಷ ಮಹಾರಾಜ ಯಜ್ಞ ಮಾಡುವ ಸಂದರ್ಭದಲ್ಲಿ, ಮಗಳು ಗೌರಿಯು ತನ್ನ  ಇಚ್ಛೆಯ ವಿರುದ್ಧವಾಗಿ ಈಶ್ವರನ ಮದುವೆಯಾದ ಕೋಪದಿಂದ, ಈಶ್ವರನನ್ನು ಯಜ್ಞಕ್ಕೂ ಆಹ್ವಾನಿಸದೇ, ಅವನ ಕುರಿತು ಆಡಿದ ಅವಹೇಳನಾ ಮಾತುಗಳಿಂದ ಅವಮಾನಿತಳಾದಗೌರಿಯು, ಯಾಗದ ಬೆಂಕಿಗೆ ಹಾರುತ್ತಾಳೆ. ಹೀಗೆ ಉರಿವ ಬೆಂಕಿಯಲ್ಲಿಗೌರಿಯು ಒಂಭತ್ತು ದಿನಗಳವರೆಗೆ ಇದ್ದಳು ಎಂಬ ಪೌರಾಣಿಕ  ನಂಬಿಕೆಗೆ ಪೂರಕವಾಗಿ, ತಾಯೇ ಗೌರಮ್ಮ, ಮತ್ತೆ ಬದುಕಿ ಬಾ, ನಮಗೆಲ್ಲ ಸದ್ಗತಿಯನ್ನು ನೀಡಲು ಬಾ ಎಂಬ ಬೇಡಿಕೆಯನ್ನಿಡುತ್ತಾರೆ. ಇನ್ನೊಂದು ಕಥೆಯ ಹಿನ್ನಲೆಯಲ್ಲಿ ಪರ್ವತಗಳ ರಾಜ ಹಿಮವಂತಹ ಮಗಳು  ಪಾರ್ವತಿಯನ್ನು ಪ್ರತಿಬಿಂಬಿಸುವ ಸಲುವಾಗಿ ಹೂವಿನಿಂದ ಅಲಂಕರಿಸಿದ ಹೂಗುಡ್ಡೆಗಳನ್ನು ಮಾಡಿ ಅರಿಶಿನದ ಪಾರ್ವತಿಯ ಸ್ವರೂಪವನ್ನು ನೀಡಲಾಗುತ್ತದೆ. ೯ ದಿನಗಳವರೆಗೆ ಬತುಕಮ್ಮ ಸ್ಥಾಪಿಸಿದ ಸ್ಥಳದ ಸುತ್ತಲೂ ನಿತ್ಯ ಪೂಜೆ, ಹಾಡು ನೃತ್ಯದ ಸೇವೆ ನಡೆಯುತ್ತದೆ.  ಕೊನೆಯ ದಿನ, ತಾಯಿ ಗೌರಮ್ಮನನ್ನು ನೀರಿನಲ್ಲಿ ಕಳುಹಿಸುವುದು ಎಂಬ ಪದ್ಧತಿಯಂತೆ, ಬತುಕಮ್ಮನನ್ನು ನೀರಿನಲ್ಲಿ ಮುಳುಗಿಸುತ್ತಾರೆ.



ಬತುಕಮ್ಮ ಹಬ್ಬ ಕೇವಲ ಒಂದು ಕೋಮಿಗೆ ಸಂಬಂಧಿಸಿದ್ದಲ್ಲ. ಇದೊಂದು ಆಂಧ್ರ ಪ್ರದೇಶದ ಕಡೆಗಿನ ಒಂದು ವರ್ಣಮಯ ಪುಷ್ಪಾಲಂಕೃತ ನಾಡ  ಹಬ್ಬ. ಸಾಮಾನ್ಯವಾಗಿ ಈ ಹಬ್ಬದ ಸಮಯದಲ್ಲಿ ಊರಿಗೆ ಊರೇ ಅಲಂಕಾರಗೊಳ್ಳುತ್ತದೆ. ಎಲ್ಲಿ ನೋಡಿದರೂ ಸಣ್ಣ-ದೊಡ್ಡ  ಬತುಕಮ್ಮನ ಹೂವಿನ ದಿಬ್ಬವೇ ಎಲ್ಲೆಡೆ ರಾರಾಜಿಸುತ್ತಿರುತ್ತದೆ. ಮನೆ ಮನೆಗಳಲ್ಲಿ, ದೇವಸ್ಥಾನಗಳಲ್ಲಿ, ನಗರ ಪ್ರದೇಶದ ರಸ್ತೆಯ ಮುಖ್ಯ ಸ್ಥಳಗಳಲ್ಲಿ, ಕಡೆಗೆ ಸಿನಿಮಾ ಸ್ಥಳ- ಮಾಲುಗಳಲ್ಲಿಯೂ ಬತುಕಮ್ಮನದೇ ಭರಾಟೆ! ಅಂಗಡಿಗಳಲ್ಲಿ ಬತುಕಮ್ಮ ಹಬ್ಬದ ಪ್ರತೀಕವಾಗಿ ಹೂವಿನಿಂದ ಅಥವಾ ಬಣ್ಣದ ಪೇಪರ್ರುಗಳಿಂದ ಅಲಂಕೃತಗೊಂಡ ಗೋಪುರಗಳನ್ನು ಪ್ರತಿಷ್ಠಾಪಿಸಿರುತ್ತಾರೆ. ಸಾಮಾನ್ಯವಾಗಿ ಶಾಲೆ-ಕಾಲೇಜುಗಳಲ್ಲಿಯೂ ಬತುಕಮ್ಮನ ಗೋಪುರವನ್ನು ನಿರ್ಮಿಸಿ, ಹೆಣ್ಣು ಮಕ್ಕಳಿಗೆ ಅರಿಶಿನ ಕುಂಕುಮ ಹಚ್ಚಿ, ಕಾಲುಗಳಿಗೆ ಅರಿಶಿಣ ಲೇಪಿಸಿ, ಮಕ್ಕಳನ್ನೇ ದೇವರ ರೀತಿಯಲ್ಲಿ ಪೂಜಿಸುತ್ತಾರೆ. ಕೆಲವು ಶಾಲೆಗಳಲ್ಲಿ  ಹೂಗಳಿಂದ ರಂಗೋಲಿ ಮಾಡುವುದು, ಅಲಂಕಾರಿಕ ಕರ ಕೌಶಲ್ಯ ವಸ್ತುಗಳನ್ನು ತಯಾರಿಕೆ ಕಲಿಕೆ ಇತ್ಯಾದಿ ಕಲಿಕೆ ನಡೆಸುತ್ತಾರೆ. ಇದರಿಂದ ಮಕ್ಕಳಿಗೆ ವಿವಿಧ ಬಗೆಯ ಹೂವು, ಸಸ್ಯ ಜಾತಿಯ ಕುರಿತಾಗಿ ಜ್ಞಾನ ಹೆಚ್ಚುತ್ತದೆ. ಕೆಲವು ಶಾಲೆಗಳಲ್ಲಿ ಮಕ್ಕಳೊಡಗೂಡಿ ಬತುಕಮ್ಮ ಜಾನಪದ ನೃತ್ಯ ಕಾರ್ಯಕ್ರಮ ನಡೆಸುತ್ತಾರೆ. ಈ ವರ್ಷ ಒಂದು ಶಾಲೆಯಲ್ಲಿ ಮಕ್ಕಳನ್ನು ಹತ್ತಿರದ ಅರಣ್ಯ ಪ್ರದೇಶಕ್ಕೆ ಕರೆದೊಯ್ದು ವಿವಿಧ ಬಗೆಯ ಔಷಧೀಯ ಮೂಲದ ಸಸ್ಯ ಜಾತಿಯ ಪರಿಚಯ ನೀಡಿ, ಕಾಡನಿಂದ ಹೂಗಳ ಹೆಕ್ಕಿ ತರುವ ಕಾರ್ಯಕ್ರಮ ನಡೆಸಿದರಂತೆ.

ಮಳೆಗಾಲದ ಕೊನೆಯಲ್ಲಿ ಬರುವ ಈ ಹಬ್ಬದ ಅಂತಿಮವಾಗಿ, ದುರ್ಗಾಷ್ಟಮಿ ದಿನದಂದು ವೈಭವದಿಂದ ಬತುಕಮ್ಮನನ್ನು ಪೂಜಿಸಿ, ನೀರಿಗೆ ತೇಲಿ ಬಿಡುತ್ತಾರೆ. ಔಷಧೀಯ ಗುಣಗಳುಳ್ಳ ಹೂವಿನ ಪಕಳೆಗಳು ಮತ್ತು ಅರಿಶಿಣ ನೀರಿನಲ್ಲಿ ಕರಗಿ ಹರಿವ ನೀರಿನ್ನು ಇನ್ನಷ್ಟು ಸ್ವಚ್ಛವಾಗಿಸುತ್ತದೆ ಎಂಬುದು ಕೂಡ ಒಂದು ವೈಜ್ಞಾನಿಕ ವಿಶ್ಲೇಷಣೆ.  ಒಟ್ಟಿನಲ್ಲಿ ಆಂಧ್ರದಲ್ಲಿ, ಬತುಕಮ್ಮ ಹಬ್ಬದ ಪದ್ದತಿ ಮತ್ತು ಆಚರಣೆಯು ಅಲ್ಲಿನ ಜನರನ್ನು ಪಾರಂಪರ್ಯವಾಗಿ  ನೀರು ನೆಲ ಮತ್ತು ಜನರೊಡನೆ ಸಂಬಂಧವನ್ನು ಬೆಸೆಯುವ ನಿಟ್ಟಿನಲ್ಲಿ ಮುಖ್ಯ ಪಾತ್ರವನ್ನು ವಹಿಸುತ್ತದೆ.

(ವಿ.ಸೂ : ಚಿತ್ರಗಳು ಇಂಟರ್ನೆಟ್ ಆಧಾರಿತ)




ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ