ಸೋಮವಾರ, ಫೆಬ್ರವರಿ 12, 2018

ಮಲೆಗಳಲ್ಲಿ ಮದುಮಗಳು

ಇಡೀ ರಾತ್ರಿ ನಾಟಕ ನಡೆಯುತ್ತಂತೆ...! ಕೊರೆವ ಚಳಿಯಲ್ಲಿ, ಬಿಂದಿಗೆ ಚಂದಿರನ ಬೆಳಕಿನಲಿ ಕುಳಿತು ಬೆಳಗಾಗುವ ವರೆಗೂ ನಾಟಕದಲ್ಲಿ ತಲ್ಲೀನಗೊಳ್ಳುವ ಅನುಭವವಂತೆ..ಅಮೋಘವಾದ ನಾಟಕ, ಪಾತ್ರಧಾರಿಗಳ ಅದ್ಭುತ ಅಭಿನಯ ೪ ಸ್ಟೇಜ್ ಗಳಲ್ಲಿ ಸಾಗುತ್ತದೆಯಂತೆ..ಎಂಬೆಲ್ಲ ಉತ್ಸಾಹಭರಿತ ವಿಷಯಗಳು ಕಳೆದ ಜನವರಿಯಿಂದಲೂ ಕೇಳುತ್ತಿದ್ದೆನಾದರೂ, ನಾಟಕವನ್ನು ನೋಡುವ ಸಂದರ್ಭ ಈ ಸರ್ತಿ ಸಿಕ್ಕಿಲ್ಲವೆಂದು ಸಣ್ಣ ನಿರಾಸೆ ಪಟ್ಟಿದ್ದು ನಿಜ. .ನಾಟಕ ಪ್ರದರ್ಶನದ ಕೊನೆಯ ದಿನಾಂಕವನ್ನು ವಿಸ್ತರಿಸಲಾಗಿದೆ ಎಂಬ ಸಿಹಿ ಸುದ್ದಿಯೊಂದಿಗೆ ಫೋನಿನಲ್ಲಿ ಮಾತನಾಡಿದ ಗೆಳತಿ ಸ್ವರ್ಣ ಜೊತೆ ಕಡೆಗೂ ಎಂದಾದರೂ ನೋಡಲೇ ಬೇಕು ಎಂದೆನಿಸಿದ್ದ ನಾಟಕವನ್ನು ನೋಡುವ ಅವಕಾಶ ನಿನ್ನೆಗೆ ನನ್ನದಾಯಿತು. ೧೦ ತಾಸುಗಳ ನಾಟಕ ನೋಡಲು, ಮಗಳನ್ನು ರಾತ್ರಿ ಬಿಟ್ಟು ಹೋಗುವುದು ಹೇಗಪ್ಪಾ ಎಂದು ಯೋಚಿಸುತ್ತಿರುವಾಗ, ನೀನು ಹೋಗಿ ಬಾ ಎಂದು ಮನೆಯವರು ಬೆಂಬಲಿಸಿದಾಗ ಮನಸ್ಸು ಹಿರಿಹಿಗ್ಗಿತ್ತು.
ಹಿಂದೆ ಓದಿದ್ದ ರಾಷ್ಟ್ರಕವಿ ಕುವೆಂಪು ರಚನೆಯ 'ಮಲೆಗಳಲ್ಲಿ ಮದುಮಗಳು' ಪುಸ್ತಕವನ್ನು ನಾಟಕದ ರೂಪದಲ್ಲಿ ನೋಡುವ ಅನುಭವವೇ super..!! ರಾತ್ರಿ ಎಲ್ಲ ಎಚ್ಚರವಿದ್ದು ಹೊರಾಂಗಣ ವೇದಿಕೆಯಲ್ಲಿ ಯಕ್ಷಗಾನ, ಬಯಲಾಟ ನೋಡುವ ಕಾಲವೇ ಈಗ ಕಡಿಮೆಯಾಗುತ್ತಿರುವಾಗ, ೮೧ ನೆಯ ಪ್ರದರ್ಶಕ್ಕೇರುತ್ತಿದ್ದ ನಾಟಕವೊಂದನ್ನು ನೋಡಲು ನಿನ್ನೆಗೂ ನೆರೆದ ಜನ ಸುಮಾರು ೬೦೦! ನನಗೋ ಇವೆಲ್ಲ ಮೊದಲ ಸಲದ ಅನುಭವ. ಜಾಕೆಟ್ ಏರಿಸಿಕೊಂಡಿದ್ದರೂ, ಇಬ್ಬನಿಯ ಮುಸುಕಲ್ಲಿ ಚಳಿಗೆ ಮುದುಡಿ ಕುಳಿತಿರಬೇಕಾದ ಸ್ಥಿತಿಯಲ್ಲೂ, ನಾಟಕದ ಸನ್ನಿವೇಶಗಳಿಗೆ, ಪಾತ್ರದೊಂದಿಗೂ ನಾವೂ ಕೂಡ ಅಷ್ಟೇ ಕಳೆದು ಹೋಗುವ ಪುಳಕ!

ಮಲೆನಾಡ ಸೊಬಗನ್ನು ಕಥೆಯಲ್ಲಿ ಕಣ್ಣಿಗೆ ಕಟ್ಟುವಂತೆ ಹೆಣೆದಿಟ್ಟಿದ್ದ ಕುವೆಂಪುರವರವರಿಗೆ ನನ್ನ ನಮನ. ಕಾದಂಬರಿ ಆಧಾರಿತ ಈ ನಾಟಕವು, ಇಷ್ಟೆಲ್ಲಾ ಜನಪ್ರಿಯಗೊಳ್ಳಲು, 'ಕುವೆಂಪು' ಎಂಬ ಹೆಸರೇ ನಾಟಕಕ್ಕೆ ಹೆಚ್ಚು ಮೌಲ್ಯವನ್ನು ಕೊಟ್ಟಿದ್ದಿರಬಹುದು ಎಂಬುದು ನನ್ನ ತಪ್ಪು ಗ್ರಹಿಕೆ ಎಂಬುದು ನಿನ್ನೆಯ ರಂಗಪ್ರಯೋಗವನ್ನು ನೋಡಿದ ಮೇಲೆ ನನ್ನನುಭವಕ್ಕೆ ಬಂದ ವಿಷಯ. ಜೋಗಪ್ಪಂದಿರು ಹೇಳುತ್ತಾ ಬರುವ ಕಥೆಯಾಗಿ ಮೂಡಿ ಬರುವ ಈ ನಾಟಕದಲ್ಲಿ, ನಮ್ಮ ಮುಂದೆ ಬರುವ ಗುತ್ತಿ - ಹುಲಿಯಾ (ನಾಯಿ), ಐತೂ-ಪೀನ್ಚಲು, ತಿಮ್ಮಿ, ನಾಗತ್ತೆ-ನಾಗಕ್ಕ, ಕುಂಟು ವೆಂಕಟಪ್ಪನಾಯಕ, ಚೀನ್ಕ್ರ, ಸಾಬರು, ಪಾದ್ರಿ, ಎಲ್ಲ ಎಲ್ಲಾ ಪಾತ್ರಗಳೂ ಕಣ್ಣಿಗೆ ಕಟ್ಟುವಂತೆ, ಮನಸ್ಸಿಗೆ ನಾಟುವಂತೆ ನಟಿಸಿ, ಕಲಾವಿದರು ತಮ್ಮ ಅಭಿನಯದ ಕೈಚಳಕವನ್ನು ತೋರಿಸಿದ್ದಾರೆ. ಸಂಭಾಷಣೆಯೇ ಇಲ್ಲದ ಗುತ್ತಿಯ ನಾಯಿ ಹುಲಿಯನ ಪಾತ್ರ, ಕೇವಲ ಅಭಿನಯದಿಂದಲೇ ಅಲ್ಲಿ ನೆರೆದಿದ್ದ ನಮ್ಮಂತ ಪ್ರೇಕ್ಷಕರಿಗೆ ಪ್ರಿಯವಾಗಿ ಹೋಯಿತು. ನಾಟಕದ ಕೊನೆಯ ಭಾಗದಲ್ಲಿ, ಗುತ್ತಿಯ ನಾಯಿ ನೀರಿಗೆ ಬಿದ್ದು ಹೋಗಿ, ಅದನ್ನುಳಿಸಿಕೊಳ್ಳಲ್ಲಾಗದ ಗುತ್ತಿಯ ಅಸಹಾಯಕತೆಯ ಚೀತ್ಕಾರವಂತೂ, ಬೆವರಿಳಿಸಿಬಿಟ್ಟಿತು. ೯ ತಾಸಿನ ಸುಧೀರ್ಘ ನಾಟಕವನ್ನು ಕುತೂಹಲಕಾರಿಯಾಗಿಡಲು, ಅಲ್ಲಲ್ಲಿ ನಡೆಸುವ ತಮಾಷೆ, ವ್ಯಂಗ್ಯ ಸಂಭಾಷಣೆಗಳು, ಕಾಲದ-ಸಮಾಜದ ಕಟುಸತ್ಯಗಳು, ನಟನೆಗೆ ಇನ್ನಷ್ಟು ನೈಜತೆಯನ್ನು ತರುವ ಪ್ರಯತ್ನಕ್ಕಾಗಿ, ಕತ್ತರಿಸುವ ಚಳಿಯಲ್ಲೂ, ನೀರಿಗೆ ಮೈಯೊಡ್ಡುವ ಕಲಾವಿದರ ಪ್ರಯತ್ನ ಪ್ರಶಂಸನೀಯ. ಹಾಡುಗಳೆಂತೂ ಒಂದಕ್ಕಿಂತ ಒಂದು ಇಷ್ಟವಾದವು. ಒಟ್ಟಾರೆಯಾಗಿ ಹೇಳುವುದಾದರೆ ನಿನ್ನೆಯ ನಾಟಕ ವೀಕ್ಷಣೆ ನನಗೊಂದು ಮರೆಯಲಾರದ ಅನನ್ಯ ಅನುಭವ.
ನಿಸರ್ಗದ ಮಡಿಲು, ರಾತಿಯ್ರ ತೆರೆದ ಆಕಾಶ. ಹುಚ್ಚು ಚಳಿಗೆ ಬೆಚ್ಚಗೆ ಹೊದ್ದು ಕುಳಿತು, ಮಂಡಕ್ಕಿ-ಬಿಸಿ ಕಾಪಿ-ಖಾರ ಕಷಾಯ ಸವಿಯುತ್ತ, ನಗುತ್ತ, ಖುಷಿಪಡುತ್ತಾ ಆಸಕ್ತರ ಸಂಗಡ ನೋಡಬಹುದಾದೊಂದು ಸೊಗಸಾದ ನಾಟಕ 'ಮಲೆಗಳಲ್ಲಿ ಮದುಮಗಳು'


ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ