ಶನಿವಾರ, ಸೆಪ್ಟೆಂಬರ್ 28, 2019

ಪರಿಸರದಿನ_ಆಗಲಿಪ್ರತಿದಿನ

ಒಂದೆರಡು ಅನುಭವಗಳೊಂದಿಗೆ:

ಬಂಧು ಒಬ್ಬರ ಮನೆಗೆ ಹೋಗಿದ್ದೆವು. ಎಲ್ಲರೂ ಕೂತು ಮಾತನಾಡುತ್ತ ಇರುವಾಗ ಅದು ಇದು ಸುದ್ದಿ ಬಂದು, ಒಂದು ಸುಂದರವಾದ ಆಕರ್ಷಣೀಯ ಬಣ್ಣದ ಪ್ಲಾಸ್ಟಿಕ್ ಬೌಲ್ ಒಂದನ್ನು ತೋರಿಸಿ, "ಈ ಬೌಲ್ ಅಂಗಡಿಲಿ ನೋಡಿ ಎಷ್ಟು ಇಷ್ಟ ಆತು ಅಂದ್ರೆ, ಈ ಬೌಲ್ ಗಾಗಿಯೇ ೪ ದೊಡ್ಡ ಪ್ಯಾಕೆಟ್ ಮ್ಯಾಗಿ ತಗಂಡಿದ್ದು ನಾನು, ಅದರಲ್ಲಿ ಫ್ರೀ ಬತ್ತು .." ಎಂದು ಅವರು ಹೆಮ್ಮೆಯಿಂದ ಹೇಳುವಾಗ ಒಮ್ಮೆಲೆ ಹೇಗೆ ಪ್ರತಿಕ್ರಿಯಿಸಬೇಕು ಎಂಬುದೇ ತಿಳಿಯಲಿಲ್ಲ. ಆದರೆ ಪರಿಸರಕ್ಕೆ ನಮ್ಮ ಕೊಡುಗೆ ಎನ್ನುವುದು - ಕೇವಲ ನಮ್ಮ ಸ್ವಂತ ಪ್ರಯತ್ನ ಒಂದೇ ಅಲ್ಲದೆ, ಅದರ ಕುರಿತಾಗಿ ಒಂದಷ್ಟು ಅರಿವು ನೀಡಬೇಕ್ಕಾದ್ದು ಕೂಡ ಅಷ್ಟೇ ಮುಖ್ಯ. ಸಂದರ್ಭ ನೋಡಿ ಪ್ಲಾಸ್ಟಿಕ್ ವಸ್ತುಗಳ ಬಳಕೆ ಮತ್ತು ನಮ್ಮಲ್ಲೇ ಇರುವಂತಹ ವಸ್ತುಗಳ ಮರುಬಳಕೆಯ ಕುರಿತು ವಿನಂತಿಸಿಯೇ ಬಂದೆ. ಈಗ ಸಂತೋಷದ ವಿಚಾರವೆಂದರೆ, ಅವರು ತರಕಾರಿ ಚೀಲಗಳನ್ನು ಬಟ್ಟೆಯಿಂದಲೇ ಹೊಲೆದು ಪ್ಲಾಸ್ಟಿಕ್ ಕಡಿಮೆ ಮಾಡಿದ್ದರ ಕುರಿತಾಗಿ ಹೇಳಿಕೊಂಡಿದ್ದಾರೆ.

ಉತ್ತರಾಖಂಡ್ ಟ್ರೆಕ್ ಹೋದ ಸಮಯದಲ್ಲಿ, ಚಾರಣದ ಹಾದಿಯ ಮಧ್ಯೆ ಚಾ ಅಂಗಡಿಯಲ್ಲಿ ಒಂದು ಸ್ಟಾಪು ಕೊಟ್ಟುಕೊಂಡೆವು. ಸಾಕಷ್ಟು ಸಿಖ್ಖ ಯಾತ್ರಿಗಳು ಅಲ್ಲಿ ಇದ್ದರು. ಅವರಲ್ಲೊಬ್ಬ 'ಚಿರಯುವಕ' ಅಂಗಡಿಯವನ ಬಳಿ ಬಿಸ್ಕತ್ತಿನ ಪಟ್ಟಣ ಕೊಂಡುಕೊಂಡು ಅಲ್ಲೇ ನಾಲಿಗೆ ಚಾಚಿ ಮುಖ ಮುಖ ನೋಡುತ್ತಿದ್ದ ನಾಯಿಗೆ ಅಷ್ಟೂ ಬಿಸ್ಕತ್ತನ್ನು ತಿನ್ನಿಸಿದ. ಪ್ರಾಣಿ-ಪ್ರೀತಿ, ಕರುಣೆ, ಮನುಷ್ಯತ್ವ ಎಲ್ಲವೂ ಸರಿಯಾಗಿತ್ತು.. ಅದರ ಮರುಕ್ಷಣವೇ ಕುಳಿತ ಕುರ್ಚಿಯಿಂದ ಎದ್ದು ಬಿಸ್ಕತ್ತಿನ ಪ್ಲಾಸ್ಟಿಕ್ ಕವರನ್ನು ಅಲ್ಲಿಯೇ ರಸ್ತೆಗೆ ಒಗೆದು ಹೊರಟೇಬಿಟ್ಟ. 'ಉಂಹೂಂ', ಸಹಿಸಲು ಸಾಧ್ಯವಾಗಲೇ ಇಲ್ಲ. "ಅರ್ರೆ, ವೊ ಪ್ಲಾಸ್ಟಿಕ್ ರ್ಯಾಪರ್ ಉಟಾಕೆ, ಆಪ್ಕೆ ಸಾಮಾನೆ ಜೊ ಡಸ್ಟ್ಬಿನ್ ದಿಖ್ ರಹಾ ಹೈನ ಉಸ್ ಮೆ ಡಾಲ್ ದೀಜ್ಯೇಗ ಪ್ಲೀಸ್.." ಎಂದು ನಯವಾಗಿಯೇ ವಿನಂತಿಸಿದೆ. ಆ ಮನುಷ್ಯ "ಅಪ್ಕೋ ಉಸ್ಸೆ ಕ್ಯಾ? ಕೊಯಿ ಧಿಕ್ಕತ್ ಹೈ..?" ಎಂದು ಗರ್ಜಿಸಿದ.. "ಹಾಂ ಹೈ; ಯೇ ಧರ್ತಿ ಮೇರಾ ಔರ್ ಆಪಕ ದೋನೋಕ ಹೈ, ಔರ್ ಇಸ್ಕ ಖಯಾಲ್ ರಖನ ಹಮ್ ದೋನೋ ಕ ಫರ್ಜ್ ಬಂತಾಹೈ, ತೊ ಪ್ಲೀಸ್..." ಎಂದು ಹೇಳುವಾಗ ನನ್ನ ಧ್ವನಿ ದುಪ್ಪಟ್ಟಾಗಿತ್ತು.. ಅಷ್ಟು ಜನರ ಎದುರು ಅವಮಾನವಾದಂತಾಗಿ, ಆತ ತಕ್ಷಣ ಅಲ್ಲಿಂದ ಬಿಸ್ಕತ್ತಿನ ಕವರನ್ನು ಎತ್ತದೇ ಸಿಟ್ಟಿನ ಮುಖ ಮಾಡಿಕೊಂಡು ಹೊರಡಲು ಅಣಿಯಾದ. ಅಲ್ಲಿಯೇ ಇದ್ದ ಪಂಜಾಬಿ ಹಿರಿಯರೊಬ್ಬರು, ದೊಡ್ಡ ಧ್ವನಿಯಲ್ಲಿ ಪಂಜಾಬಿ ಭಾಷೆಯಲ್ಲಿ ಏನೋ ಒಂದಷ್ಟು ಬೈದದ್ದು ಅಲ್ಪಸ್ವಲ್ಪ ಅರ್ಥವಾಯಿತು. "ಹೇಮಕುಂಡ್ ಯಾತ್ರೆ ಮುಗಿಸಿ ಬರುವವ, ಈ ರೀತಿ ಕೆಲಸ ಮಾಡಿದರೆ ಗುರು ಸಾಹೇಬ ಮೆಚ್ಚಿಯಾನೇ.. " ಎಂಬ ಅರ್ಥದಲ್ಲಿ ಹೇಳಿದರೆಂದು ತಿಳಿಯಿತು. ಒಲ್ಲದ ಮನಸ್ಸಿನಿಂದ ವಾಪಸು ಬಂದು ಕವರನ್ನು ಎತ್ತಿ ಡಸ್ಟ್ ಬಿನ್ ಗೆ ಹಾಕಿ ಆತ ಚಾರಣದ ಸುಸ್ತಿಲ್ಲದೆಯೆ ದುಸು ದುಸು ಎನ್ನುತ್ತಾ ಕಣ್ಮರೆಯಾದ.. 

ಅಮೆಜಾನ್ ನಿಂದ ಉಪಯುಕ್ತ ವಸ್ತುವೊಂದರ ತರಿಸಿದ್ದೆ. ಸೂಕ್ಷ್ಮ ವಸ್ತುವಲ್ಲದ ಕಾರಣದಿಂದ, ಅಮೆಜಾನ್ ಅವರು, ಕೇವಲ ಒಂದು ರೊತ್ತಿನ ತೆಳು ರ್ಯಾಪಿಂಗ್ ಅಲ್ಲಿ ಕಳುಹಿಸಿ ಕೊಟ್ಟಿದ್ದರು. ಜೊತೆಗೆ "ಪ್ಲಾಸ್ಟಿಕ್ ರೆಡ್ಯೂಸ್" ಮಾಡುವುದರೆಡೆಗೆ ಎಂಬ ಮೆಸ್ಸೇಜ್ ಇತ್ತು. ಸಹಜವಾಗಿಯೇ ಇದು ಖುಷಿಯೆನಿಸಿ ವಾಟ್ಸಪ್ಪ್ ಸ್ಟೇಟಸ್ಸಿನಲ್ಲಿ ಈ ವಿಚಾರವನ್ನು ಹಂಚಿಕೊಂಡಿದ್ದೆ. ಸ್ವಲ್ಪ ದಿನಗಳ ನಂತರ ಗೆಳತಿಯೊಬ್ಬಳು ಮೆಸ್ಸೇಜ್ ಮಾಡಿ, "ನನಗೆ ಬಂದ ಅಮೆಜಾನ್ ಕೊರಿಯರ್ ನಲ್ಲಿ ಪ್ಲಾಸ್ಟಿಕ್ ಸುತ್ತಿಯೇ ಕಳುಹಿಸಿದ್ದಾರೆ ನೋಡು" ಎಂದು ಹೇಳಿದ್ದಳು. ಸೂಕ್ಷ್ಮ ವಸ್ತುಗಳು ಮತ್ತು ಬಟ್ಟೆಯ ವಸ್ತುಗಳಾದ್ದರಿಂದ ಪ್ಲಾಸ್ಟಿಕ್ ಕವರ್ ಹಾಕಿ ಕಳುಹಿಸುವುದು ಅವರಿಗೆ ಅನಿವಾರ್ಯ ಇರಬಹುದು, ನಮ್ಮದು ಕೇವಲ ರೆಡ್ಯೂಸ್ ಮಾತ್ರ ಅಲ್ಲ, ರಿಸೈಕಲಿಂಗ್ ಕಾನ್ಸೆಪ್ಟ್ ಕೂಡ ಅಷ್ಟೇ ಮುಖ್ಯ, ಹೀಗೆ ಹೀಗೆ ಉತ್ತಮವಾಗಿ ನೀನು ಇವಿಷ್ಟನ್ನು ಮರು ಬಳಕೆ ಮಾಡಬಹುದು ಎಂದು ನನಗೆ ತಿಳಿದಿದ್ದ ಟಿಪ್ಸ್ ನೀಡಿದ್ದೆ. ಆದರೂ ಮತ್ತೆ ಯೋಚಿಸಿ ಇಂಟರ್ನೆಟ್ ಅಲ್ಲಿ ಹುಡುಕಿ ಒಂದಷ್ಟು ಮಾಹಿತಿ ಒಟ್ಟು ಮಾಡಿದೆ. ಮತ್ತೆ ಮುಂದಿನ ಸರ್ತಿ ಅದೇ  ಸೈಟಿನಿಂದ ಇನ್ನೇನನ್ನೋ ಆರ್ಡರ್ ಮಾಡುವಾಗ, ಕಸ್ಟಮರ್ ಸರ್ವಿಸ್ ಗೆ ಆರ್ಡರ್ ನಂಬರ್ ಜೊತೆ "ನನಗೆ ಅತ್ಯಂತ ಮಿನಿಮಲ್ ಪ್ಲಾಸ್ಟಿಕ್ ಫ್ರೀ ಪ್ಯಾಕಿಂಗ್ ಬೇಕು" ಎಂದು ಬರೆದಿದ್ದೆ. ಕೇವಲ ರೊಟ್ಟಿನ ಬಾಕ್ಸಿನಲ್ಲಿ ನನಗೆ ನನ್ನ ವಸ್ತು ಬಂದು ತಲುಪಿತು :)

ಅಕ್ಕಾ ತೇಜಸ್ವಿನಿ ಹೆಗಡೆ ತಮ್ಮ ಪೋಸ್ಟಿನಲ್ಲಿ ಹೇಳಿದಂತೆ, ನಮ್ಮ ಪರಿಸರದ ಮೇಲಾಗುತ್ತಿರುವ ಅನಾಹುತಗಳ ಬಗ್ಗೆ ಮಾತನಾಡುವವರ ಸ್ವಾರ್ಥ-ನಿಸ್ವಾರ್ಥದ ಬಗ್ಗೆ ಬೆಟ್ಟು ಮಾಡಿ ತೋರಿಸುವುದು ಅತ್ಯಂತ ಸುಲಭದ ಕೆಲಸ ಮತ್ತು ನಮ್ಮಗಳ ರೂಢಿ  ಕೂಡ. ಸಮುದ್ರದ ಜೀವಿಗಳು ಉಸಿರುಗಟ್ಟಿ ಸಾಯುತ್ತಿದ್ದರೆ, ಅಲ್ಲೆಲ್ಲೋ ಹಿಮನದಿಗಳು ಕರಗಿ ನೀರಾಗುತ್ತಿದ್ದರೆ, ಪ್ರವಾಹ ಬಂದು ಊರಿಗೆ ಊರೇ ಕೊಚ್ಚಿ ಹೋದರೆ, ಅವೆಲ್ಲ ನೈಸರ್ಗಿಕ ವಿಕೋಪಗಳು, ಅದಕ್ಕೆ ನಾವೇನು ಮಾಡಲು ಸಾಧ್ಯ? ಯಾವುದೋ ಊರಿನ ನೀರಿನ ಮೂಲಕ್ಕೆ ಸೇರಿಸುತ್ತಿರುವ ಯಾವುದೋ ದೊಡ್ಡ ಫ್ಯಾಕ್ಟರಿಯ ರಾಸಾಯನಿಕ ಮಲಿನ, ಅಮೆಜಾನಿನ ಕಾಡುಗಳು ಹೊತ್ತಿ ಉರಿದಾಗ,  "ಛೆ ಹೀಗಾಗಬಾರದಿತ್ತು" ಎಂದು ಟಿ.ವಿ ಮುಂದೆ ಕುಳಿತು ಮಾಡುವ ಮರುಗಿದರೂ ಸಹ, ನಮ್ಮ ಕೈಯಲ್ಲಿ ಏನೂ ಮಾಡಲು ಸಾಧ್ಯವಿಲ್ಲ ಎಂದು ಮತ್ತೆ ನಮ್ಮ ನಮ್ಮ ಕೆಲಸಕ್ಕೆ ಮರಳಿ ಹೋಗುವ ಸಹಜತೆ ಮೈಗೂಡಿಸಿಕೊಂಡುಬಿಟ್ಟಿದ್ದೇವೆ. ಆದರೆ  “Understanding is the first step to acceptance, and only with acceptance can there be recovery.” ಎಂದು ಹ್ಯಾರಿ ಪಾಟರ್ ನಲ್ಲಿ ಬರುವ ಮಾತಿನಂತೆ ಮೊದಲಿಗೆ, ಪರಿಸರದಲ್ಲಿ ಆಗುತ್ತಿರುವ ಅಸಮತೋಲನ, ನಷ್ಟ, ತೊಂದರೆ ಪ್ರಕೃತಿ ವಿಕೋಪಗಳಿಗೆ ಒಂದಲ್ಲ ಒಂದು ರೀತಿಯಲ್ಲಿ "ನಾವು" ಪ್ರತಿಯೊಬ್ಬ ವ್ಯಕ್ತಿಯ ಪಾಲು ಇದೆ ಎಂಬುದನ್ನು ಒಪ್ಪಿಕೊಳ್ಳುವ ಮನಸ್ಥಿತಿಗೆ ಬರಬೇಕು. ಪ್ರತಿಯೊಬ್ಬ ಸಾಮಾನ್ಯನಿಂದಲೂ ಮುಂದಿನ ಸರ್ವನಾಶವನ್ನು ತಡೆಯುವ ಶಕ್ತಿಯಿದೆ ಎಂಬುದನ್ನು ಮೊದಲು ನಂಬಬೇಕು. "ನಮ್ಮನ್ನು ನಾವು ಮೊದಲು ನಂಬಬೇಕು".  ಪರಿಸರದಿಂದ ಪಡೆಯುವಷ್ಟೇ, ನಾವು ಕೊಡುವುದೂ ಕೂಡ ಇದೆ. ಇಲ್ಲವಾದಲ್ಲಿ ಈ ಭೂಮಿಗೆ ಆಗುತ್ತಿರುವ ತೊಂದರೆ ಮತ್ತು ನಷ್ಟಕ್ಕೆ, ಬಲಿಪಶುಗಳಾಗುವುದು ನಾವೇ.. ಹಾಗಾದರೆ ನಮ್ಮಿಂದ ಏನು ಮಾಡಲು ಸಾಧ್ಯ? ನಾವೇನೋ ಮಾಡುತ್ತೇವೆ ಉಳಿದವರು ಅಷ್ಟೇ ಕಸ ಬಿಸಾಡುತ್ತಾರೆ, ಸ್ಥಳ ಮಲಿನ ಮಾಡುತ್ತಾರೆ, ಹಾಗಾಗಿ ನಾವೇ ಒಬ್ಬರೇ ಏಕೆ ಮಾಡಬೇಕು? ಇತ್ಯಾದಿ ಪ್ರಶ್ನೆಗಳು ನಮ್ಮಲ್ಲಿ  ಮೂಡುವುದು ಸಹಜ. ಆದರೆ ಫ್ರೆಂಡ್ಸ್, 'ಹನಿ ಹನಿ ಗೂಡಿದರೆ ಹಳ್ಳ". ನಮ್ಮ ಎಷ್ಟೊಂದು ಹಬ್ಬ-ಹರಿದಿನಗಳಲ್ಲಿ ಪ್ರಕೃತಿಯ ಪೂಜೆ ನಡೆಯುತ್ತದೆ. ದೇವರಂತೆ ಪೂಜಿಸುವ ಪ್ರಕೃತಿಯನ್ನು, ದೇವರಿಗೆ ಮಾಡುವಷ್ಟೇ ಶ್ರದ್ಧೆಯಿಂದ ಕಾಪಾಡಿಕೊಳ್ಳಬೇಕು.


ಎರಡು ವರ್ಷಗಳ ಹಿಂದೆ ನಾನು ಪರಿಸರ ದಿನಾಚರಣೆಯ ಸಂದರ್ಭದಲ್ಲಿ  ಸಾಕಷ್ಟು ನನ್ನ ತಿಳುವಳಿಕೆಯ ಮಟ್ಟಿಗೆ ದಿನನಿತ್ಯದ ಜೀವನದಲ್ಲಿ ನಾವು ಹೇಗೆ ಪ್ಲಾಸ್ಟಿಕ್ ಕಡಿಮೆ ಮಾಡಬಹುದು ಎಂಬುದರ ಕುರಿತು ಬರೆದಿದ್ದೆ. ಅದರಲ್ಲಿ ಬರೆದಿರುವ ಪ್ರತಿಯೊಂದು ವಿಷಯವನ್ನೂ ಇವತ್ತಿನವರೆಗೂ ನಮ್ಮ ಮನೆಯಲ್ಲಿ ಎಲ್ಲರೂ ಪಾಲಿಸುತ್ತಬಂದಿದ್ದೇವೆ. ಆ ಬರಹವನ್ನು ಇಲ್ಲಿ ಮತ್ತೊಮ್ಮೆ ಹಂಚಿಕೊಳ್ಳುತ್ತಿದ್ದೇನೆ.

http://sowmyabeena.blogspot.com/2018/11/blog-post_13.html

ಇವಿಷ್ಟು ಟಿಪ್ಸ್ ಗಳ ಹೊರತಾಗಿ ಮತ್ತೊಂದಷ್ಟು ನಾವು ಅನುಸರಿಸುತ್ತಿರುವ ಪ್ರಕಾರಗಳನ್ನು ಸೇರಿಸಲು ಇಷ್ಟಪಡುತ್ತೇನೆ. 


  • ಮಕ್ಕಳು ನಮ್ಮನ್ನು ಕೇಳಿ ಕಲಿಯುವುದಿಲ್ಲ ಆದರೆ ನಮ್ಮನ್ನು ನೋಡಿ ಕಲಿಯುತ್ತಾರೆ. ಹಾಗಾಗಿ ಅವರಿಗೆ ಏನು ಕಲಿಸಬೇಕು ಅದನ್ನು ನಮ್ಮಲ್ಲಿ ಮೊದಲು ರೂಡಿಸಿಕೊಳ್ಳಬೇಕಾದ್ದು ಅತ್ಯವಶ್ಯಕ.  ಮಗಳು ಹುಟ್ಟಿದ ಸಮಯದಿಂದ ಬಣ್ಣ ಬಣ್ಣದ ಪ್ಲಾಸ್ಟಿಕ್ ಆಟಿಕೆಗಳನ್ನು ತೆಗೆದುಕೊಂಡಿದ್ದೆವು. ಸಹಜ ಆಕಾರ್ಷಣೆ ಹೌದು ಅಥವಾ ಈಗಿನ ಮಟ್ಟಿಗೆ ಇರುವಷ್ಟು ಗಂಭೀರತೆ ಅವಾಗ ಇರಲಿಲ್ಲವೆಂದೇ ಒಪ್ಪಿಕೊಳ್ಳುತ್ತೇವೆ. ಮಗಳಿಗೆ ಈಗ ಆರು ವರ್ಷ. ತಕ್ಕ ಮಟ್ಟಿಗೆ ಸಮಾಧಾನದಿಂದ ಹೇಳಿದರೆ ಪಾಪ ಅರ್ಥಮಾಡಿಕೊಂಡು ಒಪ್ಪುವ ಕೂಸು. "ಪ್ಲಾಸ್ಟಿಕ್ ಆಟಿಗೆಗಳು ನಮಗೆ ಬೇಡ ಮಗು", ಮತ್ತು "ನಾವು ಯಾರಿಗೂ ಪ್ಲಾಸ್ಟಿಕ್ ಗಿಫ್ಟ್ ಗಳ ಉಡುಗೊರೆ ಕೊಡುವುದು ಬೇಡ" ಎಂಬ ವಿಷಯಕ್ಕೆ ಮಗಳ ಸಮ್ಮತಿಯಿದೆ. ಬಣ್ಣ ಬಣ್ಣದ ಆಟದ ಸಾಮಾನುಗಳು ಕಣ್ಣು ಕುಕ್ಕಿದರೂ, ಅದು ಬೇಡ ಅಮ್ಮ ಎಂದು ಚೆನ್ನಪಟ್ಟಣ ಆಟಿಕೆಗಳು, ಬೆತ್ತ-ಬಿದಿರಿನ ಆಟಿಕೆಗಳು, ಡ್ರಾಯಿಂಗ್ ಐಟಮ್ಸ್, ಕಥೆ ಪುಸ್ತಕಗಳನ್ನು ತೆಗೆದುಕೊಂಡು ಖುಷಿಪಡುತ್ತಾಳೆ. ಕೆಳಗಿನ ಚಿತ್ರದಲ್ಲಿ ತೋರಿಸುವಂತೆ ಗಿಫ್ಟ್ ಐಟಂ ಗಳ ಪ್ಯಾಕಿಂಗ್ ಕೂಡ ನಮ್ಮದು ಪ್ಲಾಸ್ಟಿಕ್ ರಹಿತ ಬಟ್ಟೆ ಚೀಲ ಅಥವಾ ಪೇಪರ್ ಪ್ಯಾಕಿಂಗ್. ಈ ವಿಷಯದಲ್ಲಿ ಹೆಮ್ಮೆ ಇದೆ. 


  • ಇನ್ನು ಆನ್ಲೈನ್ ವಸ್ತುಗಳನ್ನು ಖರೀದಿ ಮಾಡುವಾಗ, ಕೆಲವೊಮ್ಮೆ ಹೀಗಾಗುತ್ತದೆ. ಕೆಲವು ವಸ್ತುಗಳನ್ನು ತಕ್ಷಣಕ್ಕೆ ಕಳಿಸುತ್ತೇವೆ, ಕೆಲವು ೩-೪ ದಿನಗಳು ತಡವಾಗುತ್ತದೆ - ಎಂಬ ಮೆಸ್ಸೇಜ್ ಇದ್ದರೆ, ನಮಗೆ ಆ ಎಲ್ಲ ವಸ್ತುಗಳು ತತ್ತಕ್ಷಣಕ್ಕೆ ಬೇಕಾಗಿಲ್ಲ ಎಂಬಂತಿದ್ದರೆ, ಎಲ್ಲವನ್ನೂ ಒಟ್ಟಿಗೆ ಒಂದೇ ಪ್ಯಾಕೇಜ್ ನಲ್ಲಿ ಕಳುಹಿಸಿ ಎಂದು ಬರೆಯುತ್ತೇನೆ. ಆಗ ಕೊರಿಯರ್ ಡೆಲಿವರಿಯ ಪ್ರತಿಸಲದ ಗಾಡಿ ಓಡಾಟ, ಸೆಪೆರೇಟ್ ಪ್ಯಾಕಿಂಗ್ ಮತ್ತು ಪ್ಲಾಸ್ಟಿಕ್ ಗಳ ಹಾವಳಿ ಕಡಿಮೆಯಾಗುತ್ತದೆ. ನಾವು ತೆಗೆದುಕೊಳ್ಳುವ ವಸ್ತುವಿಗೆ ಪ್ಲಾಸ್ಟಿಕ್ ರ್ಯಾಪರ್ ಅವಶ್ಯಕತೆಯಿಲ್ಲವಾದಲ್ಲಿ, ಕಸ್ಟಮರ್ ಕೇರ್ ಗೆ ಆರ್ಡರ್ ನಂಬರ್ ಜೊತೆಗೆ ವಿನಂತಿಸಿ ಬರೆದರೆ ಇನ್ನಷ್ಟು ಅನುಕೂಲ. 

  • ಮನೆಗಳಲ್ಲಿ ಮಕ್ಕಳ ವಸ್ತುಗಳನ್ನು ಜೋಡಿಸಿದಳು ಎಷ್ಟು ಖಾನೆಗಳಿದ್ದರೂ ಸಾಲ. ದೊಡ್ಡ ಮನೆ ಹೆಚ್ಚಿನ ಕಪಾಟು ಇದ್ದವರಿಗೆ ಹೇಗೋ ನಡೆಯುತ್ತದೆ. ಆದರೆ ಇದ್ದುಷ್ಟು ಜಾಗದಲ್ಲೇ ಸರಿಯಾಗಿ ಹೊಂದಿಸಿಡಬೇಕು ಎಂಬ ಆಲೋಚನೆ ಇದ್ದರೆ, ಅದಕ್ಕಾಗಿ ಪ್ಲಾಸ್ಟಿಕ್ ಬುಟ್ಟಿ ಅಥವಾ ಟ್ರೇ ಗಳ  ಬಳಕೆ ಸರ್ವೇ ಸಾಮಾನ್ಯ. ಅದಕ್ಕಾಗಿಯೇ ಈ ಕೆಳಗಿನ ಚಿತ್ರದಲ್ಲಿ ತೋರಿಸಿದಂತೆ ಕಸದಿಂದ ರಸ ಬುಟ್ಟಿಗಳು ನಮ್ಮ ಮನೆಯಲ್ಲಿ ತಯಾರಾಗುತ್ತದೆ. ಸಣ್ಣ ಸಣ್ಣ ರೊಟ್ಟಿನ ಬಾಕ್ಸ್ಗಳನ್ನು ಸಂಗ್ರಹಿಸಿಟ್ಟುಕೊಂಡು, ಅದಕ್ಕೆ ಯಾವುದಾದರೂ ಬೇಡವಾದ ಚಂದದ ಬಟ್ಟೆಯನ್ನು ಕಟ್ ಮಾಡಿ ಫೆವಿಕಾಲ್ ಗಮ್ ಹಾಕಿ ಅಂಟಿಸಿ ಚಂದಗಾಣಿಸಿದರೆ, ಮಕ್ಕಳಿಗೂ ತಮ್ಮ ಕಪಾಟಿನಲ್ಲಿ ವಸ್ತುಗಳನ್ನು ಜೋಡಿಸಿಕೊಳ್ಳಲು ಆಸಕ್ತಿ ಮೂಡುತ್ತದೆ. ಮಗಳ ಸಾಕ್ಸ್ ಬುಟ್ಟಿ, ಚಡ್ಡಿ ಬುಟ್ಟಿ, ಸ್ಟೇಷನರಿ ಐಟಮ್ಸ್ ಬಾಕ್ಸ್, ಅವಳು 'explorer' ಆದಾಗ ಹುಡುಕಿ ತರುವಂತಹ 'collectibles' ಮತ್ತವಳ 'treasures' ಗಳಿಗೆಲ್ಲ ನಮ್ಮದು ಇಂತವೇ ಅಂದಚಂದಗಳು :) 

  • ಮನೆ ಎಂದ ಮೇಲೆ ಅಡುಗೆ ಸಾಮಾನು ಇನ್ನಿತರ ದಿನನಿತ್ಯದ ವಸ್ತುಗಳನ್ನು ತರಲು ಹಿಂದೆ ಮುಂದೆ ಅಂಗಡಿಗೆ ಹೋಗುವುದು ಇದ್ದಿದ್ದೇ. ಹತ್ತಿರ ಅಂಗಡಿಗಳಿಗೆ ಹೋಗಲು ತೀರಾ ಅವರಸವಿಲ್ಲದ ಸಮಯವೆಂದಾದಲ್ಲಿ, ಮಗಳ ಸೈಕಲ್ ರೈಡ್ ನೆಪದಲ್ಲಿ ನಡೆದೇ ಹೋಗುತ್ತೇವೆ. ನನಗಿಂತ ಹಿರಿಯಳಾದ ನನ್ನ ಅಕ್ಕ ಎಲ್ಲಾ ವಿಷಯದಲ್ಲೂ 'ಅಕ್ಕ' ನೇ ಹೌದು ನನಗೆ. ಅವಳಿಂದ ಕಲಿಯಲು ಸಾಕಷ್ಟಿರುತ್ತದೆ. ಹಗಲಿನ ಕ್ಲಾಸ್ ಮುಗಿಸಿ ಕಾರ್ ಡ್ರೈವ್ ಮಾಡಿಕೊಂಡು ಮನೆಗೆ ಬಂದು, ಮನೆಯಲ್ಲೆಲ್ಲ ನಿಭಾಯಿಸಿ ಮತ್ತೆ ಸಂಜೆ ಕಾಲೇಜಿಗೆ ಹೋಗಿ ಸೈಗ್ನ್ ಮಾಡಿ ಬರುವ ಸಂದರ್ಭವಿದ್ದರೆ, ಸಂಜೆಯ ಕಾಲೇಜಿಗೆ ಹೋಗುವ ೫ ಕಿ.ಮೀ ದೂರದ ಹಾದಿಯನ್ನು ನಡೆದೇ ಹೋಗುತ್ತಾಳೆ ಅಕ್ಕಾ!! ವಾಕಿಂಗ್ ಜೊತೆಜೊತೆಯಲ್ಲಿ ಹೈದರಾಬಾದಿನ ಟ್ರಾಫಿಕ್ಕಿಗೆ ನಿಂತು ನಿಂತು ಗಾಡಿಯ ಹೊಗೆ ಬಿಡುವುದು ಇಷ್ಟವಿಲ್ಲ ಅವಳಿಗೆ. ಇದನ್ನು ಕಂಡು ಬಂದ ದಿನದಿಂದ ನಾನು ನನ್ನ ಸಣ್ಣ ಪುಟ್ಟ ವಸ್ತುಗಳ ಖರೀದಿಗೆ ಅಥವಾ ಸಮಯದ ಅನುಕೂಲವಿದೆ ಎಂದಾದಲ್ಲಿ ನನ್ನ ಗಾಡಿಯನ್ನು ಬಳಸದೇ,  ನಡೆದುಕೊಂಡು ಹೋಗುವ ಅಭ್ಯಾಸ ಮಾಡಿಕೊಂಡಿದ್ದೇನೆ. ಸಾಮಾನಿನ ಪಟ್ಟಿ ಬರೆದುಕೊಳ್ಳುತ್ತೇವೆ ನಾವು ೩ ಜನ ನಮ್ಮ ಒಂದು ಕಾಮನ್ ಪುಸ್ತಕದಲ್ಲಿ ಮತ್ತು ಆಗ್ಗಾಗ್ಗೆ ಹೋಗಿ ಒಮ್ಮೆಲೇ ಸಾಮಗ್ರಿಗಳನ್ನು ತಂದುಬಿಡುತ್ತೇವೆ. ಇನ್ನು ಚೀಲ ತೆಗೆದುಕೊಂಡು ಹೋಗುವುದು ಬೇಸಿಕ್ ಎನ್ನುವಷ್ಟರ ಮಟ್ಟಿಗೆ ಅಭ್ಯಾಸ ಮೈಗೂಡಿದೆ. ಒಂದೆರಡು ನಿಗದಿತ ಪ್ಲಾಸ್ಟಿಕ್ ಕೊಟ್ಟೆಯನ್ನು ಇಟ್ಟುಕೊಂಡಿದ್ದೇನೆ. ಅದರಲ್ಲಿ ಹಾಲು ಮೊಸರು ಬೆಣ್ಣೆ ಇತ್ಯಾದಿ ನೀರಿನ ಅಂಶ ತಾಗುವಂತಹ ವಸ್ತುಗಳನ್ನು, ಬೇರೆ ಬೇರೆಯಾಗಿ ಹಾಕಿಕೊಂಡು ಬರುತ್ತೇವೆ ಮತ್ತು ಹಾಗೆಯೆ ಅದನ್ನು ಸ್ವಚ್ಛಗೊಳಿಸಿಕೊಂಡು ಒಣಗಿಸಿ ಮುಂದಿನ ಸರ್ತಿಯ ಬಳಕೆಗೆ ಎತ್ತಿಟ್ಟುಕೊಳ್ಳುತ್ತೇವೆ.  

  • ಮಗಳು ಚಿಕ್ಕವಳಾದ್ದರಿಂದ ಗೀಚಿ ಏನಾದರೂ ಚಿತ್ರ ಬರೆಯುವುದು ಅತ್ಯಂತ ಸಹಜ. ಪೇಪರ್ ಕೊಟ್ಟು ಪೂರೈಸಲು ಸಾಧ್ಯವಿಲ್ಲ ಎನ್ನುವಷ್ಟರ ಮಟ್ಟಿಗೆ ಚಿತ್ರ ಬರೆಯುತ್ತಲೇ ಇರುತ್ತಾಳೆ. ಅವಳ ಆ ತೃಪ್ತಿಗಾಗಿಯೇ ಅಮೆಜಾನ್ ನಲ್ಲಿ ದೊರೆತ ಬ್ಯಾಟರಿ ಚಾಲಿತ ಪ್ಯಾಡ್ ತಂದು ಕೊಟ್ಟೆವು. ಅವಳ ಪರೀಕ್ಷೆಯ ಸಮಯದಲ್ಲಿ, ಪುನರಾವರ್ತನೆ ಮಾಡಿಸಲು ಜೊತೆಗೆ ಅವಳ ಚಿತ್ರ ಬರೆಯುವ ಚಾಳಿಗೆ ಅತ್ಯಂತ ಉಪಯುಕ್ತವಾಗಿದೆ, ಬಿಳಿ ಹಾಳೆಗಳ ಬಳಕೆ ಕಡಿಮೆಯಿದೆ. 

  • ರನ್ನಿಂಗ್ ಗೆ ಹೋಗುವ ಪಾರ್ಕಿನಲ್ಲಿ ಶನಿವಾರ ಒಂದು ಗಂಟೆ, ಒಂದಷ್ಟು ಕಸ ಹೆಕ್ಕುವ ಕೆಲಸಕ್ಕೆ ನಾನೂ ಭಾಗಿಯಾಗುತ್ತೇನೆ. ಚಾರಣಕ್ಕೆ/ಪ್ರವಾಸಕ್ಕೆ ಹೋದಾಗ ಕಂಡ ಪ್ಲಾಸ್ಟಿಕ್ ಮಾಲಿನ್ಯ ನಮ್ಮಿಂದ ಆಗದಂತೆ ಎಲ್ಲ ಎಚ್ಚರಿಕೆ ವಹಿಸಿಕೊಳ್ಳುವುದರ ಜೊತೆಗೆ, ಅಲ್ಲಲ್ಲಿ ಕಂಡ ಪ್ಲಾಸ್ಟಿಕ್ ಕಸವನ್ನು ಹೆಕ್ಕಿ ಆ ಸ್ಥಳಕ್ಕೆ ನಮ್ಮ ಕೊಡುಗೆ ನೀಡಿ ಬರುವುದನ್ನು ಕಲಿತುಕೊಂಡಿದ್ದೇನೆ.  

  • ಅನುಕೂಲಕರವಾದ ಸ್ಥಳಗಳಿಗೆ ಹೋಗಿ ನಾನು ಮತ್ತು ಅಕ್ಷಯ್ ಒಂದಷ್ಟು ಗಿಡಗಳನ್ನು ನೆಟ್ಟು, ಆ ಸಸಿಗಳನ್ನು ಕಾಪಾಡಿಕೊಳ್ಳುತ್ತಿದ್ದೇವೆ. ಮನೆಯ ಪಾಟಿನಲ್ಲಿಯೇ ಇದ್ದಷ್ಟು ಜಾಗದಲ್ಲಿಯೇ ಸಣ್ಣ ಪುಟ್ಟ ನಮಗೆ ಸಾಧ್ಯವಾದ ತರಕಾರಿಗಳನ್ನು ನಾವೇ ಬೆಳೆದುಕೊಳ್ಳುತ್ತಿದ್ದೇವೆ. 

ಸಧ್ಯಕ್ಕೆ ನನಗೆ ನೆನಪಾದಷ್ಟನ್ನು ನಾನಿಲ್ಲಿ ದಾಖಲಿಸಿದ್ದೇನೆ. ನನ್ನಂತೆಯೇ ಅನೇಕರು ತಮ್ಮ ತಮ್ಮ ಮಟ್ಟಿಗೆ ಅನುಸರಿಸಲು ಸಾಧ್ಯವಾಗುತ್ತಿರುವ ಮತ್ತು ನಾವು ಇನ್ನಷ್ಟು ಕಲಿಯಬಹುದಾದ ಪ್ಲಾಸ್ಟಿಕ್ ಕಡಿತ ಮತ್ತು ಮರುಬಳಕೆಯ ಕುರಿತಾಗಿ ಹಂಚಿಕೊಂಡರೆ, ಪ್ರತಿಯೊಂದು ಮನೆಯಿಂದ ಇಷ್ಟರ ಮಟ್ಟಿಗೆ ಮಾಲಿನ್ಯ ಕಡಿಮೆಯಾದರೂ ಅದು ದೊಡ್ಡ ಸಾಧನೆಯೇ.. ಸಾಧ್ಯವಾದಷ್ಟು ಪ್ರಯತ್ನಿಸೋಣ.. 





ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ