ಗುರುವಾರ, ಸೆಪ್ಟೆಂಬರ್ 26, 2019

'ವ್ಯಾಲಿ ಆಫ್ ಫ್ಲವರ್ಸ್'

ಅಲ್ಲಿ ನಿಂತು ನೋಡಿದರೆ, ೩೬೦ ಡಿಗ್ರಿ ಸುತ್ತಲೂ ಆವರಿಸಿದ ಮಂಜಿನ ಬೆಟ್ಟಗಳ ಸಾಲು,ಅದರಾಚೆಗೆ ಹಿಮ ಹೊತ್ತ ರುದ್ರ ರಮಣೀಯ ಪರ್ವತ, ಹಿಮ ಕರಗಿ ನೀರಾಗಿ, ಕಾಲ್ಬದಿಗೆ ಹರಿವ ಸಣ್ಣ ತೊರೆ, ಅಲ್ಲೇ ಪಕ್ಕದ ಹಚ್ಚ ಹಸಿರ ಬೆಟ್ಟದಿಂದ ದುಮ್ಮಿಕ್ಕುವ ಬೆಳ್ನೊರೆಯ ಜಲಪಾತ, ನೀಲಾಕಾಶ, ಬಿಳಿ ಮೋಡಗಳ ಚಿತ್ತಾರ..ಸೂರ್ಯ ನೆತ್ತಿ ಮೇಲಿದ್ದರೂ ಮೈಸೋಕುವ ತಂಗಾಳಿಇದೆಲ್ಲದರ ಮಧ್ಯೆ ಭೂಮಿಯ ಮೇಲೆ ಪುಷ್ಪ ವೃಷ್ಟಿಯಾಗಿದೆಯೇನೋ ಎಂದು ಭಾಸವಾಗುವಂತೆ  ಆ ಹುಲ್ಲುಗಾವಲಿನ ಕಣಿವೆಯ ತುಂಬಾ ಕಣ್ಣು ಹಾಯಿಸಿದಷ್ಟು ದೂರಕ್ಕೂ ಬಣ್ಣ ಬಣ್ಣದ ಹೂಗಳ ಹಾಸು..!! ಇಂತದ್ದೊಂದು ಸಮ್ಮೋಹನಗೊಳಿಸುವಂತಹ ನೈಸರ್ಗಿಕ ಸೌಂದರ್ಯ ಕಾಣಸಿಗುವುದು, ಉತ್ತರಾಂಚಲದ ಪ್ರಸಿದ್ಧ ಚಾರಣ ಸ್ಥಳ 'ವ್ಯಾಲಿ ಆಫ್ ಫ್ಲವರ್ಸ್' ನಲ್ಲಿ.  






ವ್ಯಾಲಿ ಆಫ್ ಫ್ಲವರ್ಸ್ ನಲ್ಲೇನಿದೆ ? 

ವ್ಯಾಲಿ ಆಫ್ ಫ್ಲವರ್ಸ್ ಪ್ರಾರಂಭಿಕ ಹಂತದ ಪರ್ವತಾರೋಹಣರಿಗೆ ಹೇಳಿ ಮಾಡಿಸಿದಂತಹ ಚಾರಣ. ಜೂನ್ ತಿಂಗಳಿನಿಂದ ಪ್ರಾರಂಭವಾಗಿ ಅಕ್ಟೊಬರ್ ಕೊನೆಯವರೆಗೂ ಮಾತ್ರ ಟ್ರೆಕಿಂಗ್ ಮಾಡಬಹುದಾದ ಈ ಸ್ಥಳಗಳು, ನಂತರದ ೬ ತಿಂಗಳು ಸಂಪೂರ್ಣ ಹಿಮಾವೃತ್ತವಾಗುತ್ತದೆ. ಸಮುದ್ರ ಮಟ್ಟಕ್ಕಿಂತ ೧೨೦೦೦ ಅಡಿಗಳಷ್ಟು ಎತ್ತರದಲ್ಲಿರುವ ವ್ಯಾಲಿ ಆಫ್ ಫ್ಲವರ್ ಕಣಿವೆಯು ದಟ್ಟ ಹೂವಿನ ವನದಂತೆ ವ್ಯಾಪಿಸಿರುವ ವಿಸ್ತೀರ್ಣ ೮೭.೫ ಚದರ ಕಿ.ಮೀ ಗಳಷ್ಟು! ಚಾರಣದ ಪ್ರಮಾಣ ಅತ್ಯಂತ ಕಠಿಣವಲ್ಲದಿದ್ದರೂ, ಚಾರಣದ ಹಾದಿ, ಎತ್ತರೆತ್ತರ ಕಡಿದಾದ ಕಲ್ಲು ಬಂಡೆಗಳಿಂದ ಕೂಡಿದ್ದಾದ್ದರಿಂದ ತಕ್ಕ ಮಟ್ಟಿನ ಪರ್ವತಾರೋಹಣದ ಪೂರ್ವ ತಯಾರಿ ಅವಶ್ಯಕ.  








ಈ ಹೂವಿನ ಕಣಿವೆಯಲ್ಲಿ ೫೨೦ ಕ್ಕೂ ಹೆಚ್ಚು ಪ್ರಭೇದಗಳ ಆಲ್ಫ್ಐನ್ ಹೂಗಳಿವೆ ಎಂದು ಅಂದಾಜಿಸಲಾಗಿದೆ. ದಿನದಿಂದ ದಿನಕ್ಕೆ ಮಾರ್ಪಾಟಾಗುವ ಈ ಬೆಟ್ಟಗಳು ಈಗ ಕಂಡಂತೆ ಇನ್ನೊಂದು ತಿಂಗಳಿಗೆ ಕಾಣಿಸುವುದಿಲ್ಲ. ಒಮ್ಮೆ ನೀಲಿ-ನೇರಳೆ ಹೂಗಳಿಂದ ಕಂಗೊಳಿಸುವ ಬೆಟ್ಟ, ಮತ್ತೊಂದಷ್ಟು ಮಳೆಯ ನಂತರ ಅರಳಿ ನಿಲ್ಲುವ ಹಳದಿ-ಗುಲಾಬಿ ಹೂವಿನಿಂದ ಮೈದಳೆದು ನಿಂತಿರುತ್ತದೆ. ಈ ಪುಷ್ಪಗಳ ಕಣಿವೆಯಿಂದ ಹರಿದು ಬರುವ ಹಿಮನದಿಗೆ 'ಪುಷ್ಪವತಿ' ಎಂದೇ ಹೆಸರಿಡಲಾಗಿದೆ . ಬ್ರಹ್ಮ ಕಮಲ, ಬ್ಲೂ ಪಾಪ್ಪಿಲ್, ವಿವಿಧ ಬಗೆಯ ಆರ್ಕಿಡ್ಗಳು, ನಾಗುಮಲ್ಲಿಗೆ ಇತ್ಯಾದಿ ಇಲ್ಲಿನ ಮುಖ್ಯವಾದ ಹೂಗಳು. ವೈದ್ಯಕೀಯ ಮಹತ್ವವಿರುವ ೪೫ ಕ್ಕೂ ಹೆಚ್ಚು ಗಿಡ ಮೂಲಿಕೆಗಳು ಕೂಡ ಇಲ್ಲಿ ಗುರುತಿಸಿಕೊಂಡಿದೆ. ಕೇವಲ ಹಿಮ, ಹೂವುಗಳಷ್ಟೇ ಅಲ್ಲದೆ, ಇಲ್ಲಿ ಹಿಮಕರಡಿ, ಹಿಮ ಚಿರತೆ, ಕಸ್ತೂರಿ ಮೃಗ, ನೀಲಿ ಕುರಿಗಳು, ಬಂಗಾರದ ಕೋಗಿಲೆ, ಹಿಮ ಪಾರಿವಾಳ ಇನ್ನಿತರ ಬಣ್ಣಬಣ್ಣದ ಪಕ್ಷಿಗಳು ಮತ್ತು ಸಾವಿರಾರು ಬಗೆಯ ಬಣ್ಣಬಣ್ಣದ ಚಿಟ್ಟೆಗಳ ಜೀವಸಂಕುಲವಿದೆ. 




ವ್ಯಾಲಿ ಆಫ್ ಫ್ಲವರ್ಸ್  ಇತಿಹಾಸ 

 ಈ ಕಣಿವೆಯ ಹುಟ್ಟು ಕೂಡ ಒಂದು ಆಕಸ್ಮಿಕ ಸಂಶೋಧನೆ.  ೧೯೩೧ ರಲ್ಲಿ ಮೂವರು ಬ್ರಿಟಿಷ್ ಪರ್ವತಾರೋಹಿಗಳು, ಮೌಂಟ್ ಕಾಮೆಟ್ ಪರ್ವತಾರೋಹಣ ಮುಗಿಸಿ ಹಿಂದಿರುಗುವಾಗ ತಮ್ಮ ಹಾದಿಯನ್ನು ತಪ್ಪಿ ಒಂದು ಹುಲ್ಲುಗಾವಲಿನ ಬೆಟ್ಟವನ್ನು ಪ್ರವೇಶಿಸಿದರಂತೆ. ಆ ವರೆಗೂ ಯಾರು ಓಡಾಡದೇ ಇದ್ದ ಆ ಸ್ಥಳ ಸಂಪೂರ್ಣ ಹೂಗಳ ರಾಶಿಯಿಂದ ಆವೃತ್ತಗೊಂಡಿದ್ದನ್ನು ನೋಡಿ ದಿಗ್ಭ್ರಾಂತರಾಗಿ ಅದನ್ನು ವ್ಯಾಲಿ ಆಫ್ ಫ್ಲವರ್ಸ್ ಎಂದು ಉದ್ಗರಿಸಿ ನಾಮಕರಣ ಮಾಡಿದರೆಂಬುದು ಈ ಸ್ಥಳದ ಇತಿಹಾಸ. ಆ ಪರ್ವತಾರೋಹಿಗಳ ಪೈಕಿ, ಫ್ರಾಂಕ್ ಸ್ಮಿಥ್ ತನ್ನ ಪರ್ವತಾರೋಹಣ ಬಗ್ಗೆ ಬರೆದು ಪ್ರಕಟಗೊಳಿಸಿದ ಪುಸ್ತಕ ಕೂಡ ಇದೇ ಹೆಸರಿನಲ್ಲಿದೆ.  ನಂತರದ ವರ್ಷಗಳಲ್ಲಿ ಜಾನ್ ಮಾರ್ಗರೇಟ್ ಲೆಗ್ಗ್ ಎಂಬ ಸಸ್ಯ ಶಾಸ್ತ್ರಜ್ಞೆ ಇಲ್ಲಿಗೆ ಬಂದು, ಇಲ್ಲಿನ ಸಸ್ಯರಾಶಿಯ ಮಹತ್ವದ ಕುರಿತಾಗಿ ಸಾಕಷ್ಟು ಸಂಶೋಧನೆ ನಡೆಸಿದರು ಎನ್ನಲಾಗಿದೆ. ಆದರೆ ಅಧ್ಯಯನದ ಸಮಯದಲ್ಲಿ, ಈ ಕಣಿವೆಯಲ್ಲಿ ಕಾಲು ಜಾರಿ ತಮ್ಮ ಜೀವತೆತ್ತರಾದ್ದರಿಂದ ಅವರ ನೆನಪನಲ್ಲಿ ಕಟ್ಟಿದ ಸಮಾಧಿ ಇಂದಿಗೂ ವ್ಯಾಲಿ ಆಫ್ ಫ್ಲವರ್ಸ್ ನಲ್ಲಿ ಕಾಣಬಹುದು. ಇಲ್ಲಿನ ಸಸ್ಯ ಮತ್ತು ಪ್ರಾಣಿ ಸಂಕುಲಗಳ ಪ್ರಾಮುಖ್ಯತೆಯ ಕುರಿತಾದ ಹೆಚ್ಚಿನ ಅಧ್ಯಯನ ಮತ್ತು ಉಳಿವಿಗೋಸ್ಕರ, ಸ್ಥಳೀಯರ ಓಡಾಟ, ಜಾನುವಾರುಗಳ ಮೇವಿಗಾಗಿ ಬಳಸಿಕೊಳ್ಳುವುದನ್ನು ನಿಷೇದಿಸಲಾಗಿದೆ. ೧೯೮೨ ರಲ್ಲಿ ಈ ಕಣಿವೆಯನ್ನು ನ್ಯಾಷನಲ್ ಪಾರ್ಕ್ ಎಂದು ಘೋಷಿಸಲಾಯಿತು. ಜೊತೆಗೆ ೧೯೮೮ ರಿಂದ ಈ ಕಣಿವೆಯನ್ನು 'ವಿಶ್ವ ಪಾರಂಪರಿಕ ಜೀವ ವೈವಿಧ್ಯ ತಾಣ'ವೆಂದು ಕೂಡ ಯುನೆಸ್ಕೊ ಇಂದ ಘೋಷಿಸಲಾಗಿದೆ. ಈ ಪ್ರವಾಸೀ ಸ್ಥಳಕ್ಕೆ ಕೇವಲ ಟ್ರೆಕಿಂಗ್ ಗೆ ಅನುಮತಿ ನೀಡುತ್ತಾರೆಯೇ ಹೊರತು ಅಲ್ಲೇ ಉಳಿಯುವಂತಿಲ್ಲ.  








ಚಾರಣ ಹೇಗೆ ?

ಪಶ್ಚಿಮ ಹಿಮಾಲಯ ಪ್ರದೇಶದಲ್ಲಿರುವ ಚಮೋಲಿ ಜಿಲ್ಲೆಯ ಗಢವಾಲ್ ಊರಿನ, ಭ್ಹುಂದರ್ ಗಂಗಾ ಕಣಿವೆಯ ಮೇಲ್ತಟ್ಟಿನಲ್ಲಿದೆ ಈ 'ವ್ಯಾಲಿ ಆಫ್ ಫ್ಲವರ್ಸ್'. ಇದು ತನ್ನ ಅಲೌಕಿಕ ನಿಸರ್ಗ ಸೌಂದರ್ಯದಿಂದಾಗಿ ಚಾರಣಿಗರ, ಛಾಯಾಗ್ರಾಹಕರ ಪಾಲಿಗೆ ಸ್ವರ್ಗವೆನಿಸಿದೆ. ಹರಿದ್ವಾರದಿಂದ ೨೭೫ ಕಿ.ಮೀ ದೂರಕ್ಕೆ ಪ್ರಯಾಣಿಸಿ ಜೋಷಿಮಠಕ್ಕೆ ಬಂದು ತಂಗಿದರೆ, ಅಲ್ಲಿಂದ ವಾಹನದ ಮೂಲಕ ಗೋವಿಂದಘಾಟ್ ನಂತರದ ಊರು ಪುಲ್ನ ವರೆಗೆ ತಲುಪಬಹದು. ಇಲ್ಲಿಂದ ಮುಂದೆ ವಾಹನಗಳು ಸಾಗದು. 'ವ್ಯಾಲಿ ಆಫ್ ಫ್ಲವರ್ಸ್' ಮತ್ತು ಸಿಖ್ಖರ ಪ್ರಮುಖ ಯಾತ್ರಾಮಂದಿರ 'ಹೇಮಕುಂಡ್ ಸಾಹಿಬ್'ಗೆ ಚಾರಣ ಪ್ರಾರಂಭವಾಗುವುದು ಇಲ್ಲಿಂದಲೇಚಾರಣದ ಸೀಸನ್ ಇಲ್ಲಿಯ ಸ್ಥಳೀಯರಿಗೆ ದುಡಿಮೆಯ ಪರ್ವಕಾಲ. ತಿಂಡಿ-ಚಾಯ್ ಗಳು, ಚಾರಣಕ್ಕೆ ಬೇಕಾಗುವ ಊರುಗೋಲು, ಬ್ಯಾಗ್, ರೈನ್ ಕೋಟ್ ಮತ್ತಿತರ ಅಗತ್ಯ ಸಾಮಗ್ರಿಗಳು ಇಲ್ಲಿನ ಅಂಗಡಿಗಳಲ್ಲಿ ದೊರಕುತ್ತವೆ. ಮೊದಲ ದಿನ ಪುಲ್ನದಿಂದ ಸುಮಾರು ೮-೯ ತಾಸುಗಳ, ೧೧ ಕಿ.ಮೀ ಗಳಷ್ಟು ಆರೋಹಣ ನಡೆಸಿದರೆ ಸಿಗುವುದು ಗಾಂಗ್ರಿಯ ಎಂಬ ಊರು. ಇದನ್ನು ಬೇಸ್ ಕ್ಯಾಮ್ಪ್ ಸ್ಥಳ ಎಂದುಕರೆಯುತ್ತಾರೆ. ಈ ಸ್ಥಳವನ್ನು ತಲುಪುವವರೆಗೆ ಸಾಕಷ್ಟು ಮುಖ್ಯ ಹಳ್ಳಿಗಳಲ್ಲಿ ಸಣ್ಣಪುಟ್ಟ ತಿಂಡಿ ಸ್ನಾಕ್ಸ್ ಗಳ ಅಂಗಡಿಗಳು ಸಿಗುವುದರಿಂದ ಊಟ ತಿಂಡಿಗೆ ತೊಂದರೆಯಾಗುವುದಿಲ್ಲ . ಚಾರಣ ಮಾಡಲುಸಾಧ್ಯವಾಗದೇ ಅಥವಾ ಇಷ್ಟಪಡದೇ ಇರುವುವವರು ಜೋಷಿಮಠ ದಿಂದ ಗಾಂಗ್ರಿಯ ವರೆಗೆ ಹೆಲಿಕಾಪ್ಟರ್ ಮೂಲಕ ಪ್ರಯಾಣಿಸಬಹುದು ಮತ್ತು ವೈಮಾನಿಕ ಹಿಮಾಲಯ ಶ್ರೇಣಿಗಳ ವೈಮಾನಿಕ ನೋಟವನ್ನು ಆಸ್ವಾದಿಸಬಹುದು.(ಈ ವ್ಯವಸ್ಥೆಅಲ್ಲಿನ ವಾತಾವರಣದ ಮೇಲೆ ಅವಲಂಭಿತ)ಇನ್ನೊಂದು ಮುಖ್ಯವಾದ ಸೌಲಭ್ಯ, 'ಮ್ಯೂಲ್ ಅಥವಾ ಹೆಸರಗತ್ತೆ ಸವಾರಿ. ಬೆಟ್ಟದ ಮೇಲಿನ ಗಾಂಗ್ರಿಯ ಊರಿಗೆ ಸಕಲ ಸಾಮಗ್ರಿಗಳನ್ನು ಸಾಗಿಸಲು ಮ್ಯೂಲ್ ಗಳೇ ಇಲ್ಲಿನ ಮುಖ್ಯ ಆಧಾರ. ಇದರ ಜೊತೆಗೆ ಪೋರ್ಟರ್ಸ್ ಅಥವಾ ಮಾಲಿಗಳು ತಮ್ಮ ಬೆನ್ನಿನ ಬುಟ್ಟಿಯಲ್ಲಿ ಪ್ರವಾಸಿಗರನ್ನು ಮತ್ತು ಭಾರದ ಚೀಲಗಳನ್ನು ಹೊತ್ತುಕೊಂಡು ಹೋಗುವ ದುಡಿಮೆಯನ್ನು ಮಾಡುತ್ತಾರೆ. ಪ್ರವಾಸೋದ್ಯಮವೇ ಮುಖ್ಯ ಆದಾಯವಾದುದರಿಂದ, ಸ್ಥಳದ ಸ್ವಚ್ಛತೆಗೆ ಉತ್ತಮ ಪ್ರಾಧಾನ್ಯತೆ ನೀಡಿದ್ದಾರೆ. ಚಾರಣ ಹಾದಿಗೆ ಅಡಚಣೆಯಾಗುವ ಮ್ಯೂಲ್ ತ್ಯಾಜ್ಯ, ಪ್ರವಾಸಿಗರು ಎಲ್ಲೆಂದರಲ್ಲಿ ಎಸೆಯುವ ಕಸಗಳು ಇತ್ಯಾದಿ ತ್ಯಾಜ್ಯವಸ್ತುಗಳ ನಿರ್ವಹಣೆಯನ್ನು, ಸ್ವಚ್ಛತಾಕಾರ್ಮಿಕರು ಅತ್ಯಂತ ಸಮಗ್ರವಾಗಿ ನಿರ್ವಹಿಸಿವುದು ಪ್ರಶಂಸನೀಯ. ಚಾರಣದ ಹಾದಿಯುದ್ದಕ್ಕೂ ಆಗಸದೆತ್ತರಕ್ಕೆ ಚಿಮ್ಮಿ ನಿಂತ ಹಸಿರು ಪೈನ್, ಓಕ್ ಮರಗಳು,ಸಮೃದ್ಧ ಸಸ್ಯರಾಶಿ, ಪಕ್ಕದಲ್ಲಿ ಕಣಿವೆಯಿಂದಿಳಿದು ರಭಸದಲ್ಲಿ ತನ್ನ ಪಥದಲ್ಲಿ ಸಾಗುವ ಪುಷ್ಪವತಿ ನದಿ, ಹಿಮಾಲಯದ ಶ್ರೇಣಿಗಳು, ಬಾಯಾರಿಕೆ ನೀಗಲು ಖನಿಜಯುಕ್ತ ತಣ್ಣನೆಯ ನೈಸರ್ಗಿಕ ನೀರು,ಇಂತಹ ಪ್ರಕೃತಿ ಮಡಿಲಲ್ಲಿ ಚಾರಣ ಮಾಡುತ್ತಿದ್ದರೆ, ನಡಿಗೆಯೇ ಗೊತ್ತಾಗುವುದಿಲ್ಲ. ಗಾಂಗ್ರಿಯಾ ತಲುಪಿದ ಮೇಲೆ ವಸತಿಗಾಗೆಂದು ಅಲ್ಲಿ ಸಾಕಷ್ಟು ಶೆರ್ಡ್ ಟೆಂಟ್ ಗಳು, ಖಾಸಗೀ ಹೋಟೆಲು ಲಾಡ್ಜುಗಳಿವೆ. ಉತ್ತಮ ಊಟ ತಿಂಡಿಗಳು ದೊರೆಯುತ್ತವೆ. ಇಲ್ಲಿರುವ ಸಿಖ್ಖರ ಗುರುದ್ವಾರ ಹೇಮಕುಂಡ್ ಸಾಹಿಬ್ ಗೆ ಬರುವ ಯಾತ್ರಾರ್ಥಿಗಳಿಗೆ ವಸತಿ ನೀಡುವ ವ್ಯವಸ್ಥೆ ಹೊಂದಿದೆ. ಗಾಂಗ್ರಿಯ ದಿಂದ ಎರಡನೇ ದಿನದ ೩ ಕಿ.ಮೀ ಗಳ ಚಾರಣ 'ವ್ಯಾಲಿ ಆಫ್ ಫ್ಲವರ್ಸ್' ಕಣಿವೆಗೆ ಮುಂದುವರೆಯುತ್ತದೆ. ಈ ಸಸ್ಯರಾಶಿಯ ಕಣಿವೆಗೆ ಮ್ಯೂಲ್ ಗಳು ಹೋಗುವುದಿಲ್ಲ. ಪೋರ್ಟರ್ಸ್ ಗಳ ಬಾಡಿಗೆ ಸೌಲಭ್ಯ ಸಿಗುತ್ತದೆ. ಚಾರಣದ ತುದಿ ತಲುಪುವ ವರೆಗೂ ಯಾವುದೇ ಅಂಗಡಿಗಳು ಲಭ್ಯವಿಲ್ಲ. ಹಾಗಾಗಿ ಆಹಾರವನ್ನು ಮುಂಚಿತವಾಗಿಯೇ ಕಟ್ಟಿಕೊಂಡು ಹೋಗಬೇಕು. 

ಇತರ ಆಕರ್ಷಣೆ 

ಇದರ ಜೊತೆ ಇದೇ ಪ್ರದೇಶದಲ್ಲಿರುವ ಹೇಮಕುಂಡ್ ಸಾಹಿಬ್ ಗೂ ಒಂದು ಹೊತ್ತಿನ ಚಾರಣ ಮಾಡಬಹುದು. ಸಿಖ್ಖರ ಪವಿತ್ರ ತೀರ್ಥ ಯಾತ್ರಾ ಸ್ಥಳ ಇದಾಗಿದ್ದು, ಹಿಮಾವೃತ್ತ ಬೆಟ್ಟಗಳ ನಡುವೆ, ಹಿಮಸರೋವರದ ಬುಡದಲ್ಲಿರುವ ಗುರುದ್ವಾರ ಇಲ್ಲಿನ ಪ್ರೇಕ್ಷಣೀಯ ಸ್ಥಳ. ಇಲ್ಲಿ ಪ್ರಸಾದಕ್ಕೆಂದು ನೀಡುವ ಲಂಗಾರ್ ಬಾಯಿ ಚಪ್ಪರಿಸಿ ತಿನ್ನುವಷ್ಟು ರುಚಿಕರವಾಗಿರುತ್ತದೆ.  


(26/09/2019 ವಾರದ ಸುಧಾ ಪತ್ರಿಕೆಯಲ್ಲಿ ಪ್ರಕಟಿತ ಲೇಖನ)

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ