ಭಾನುವಾರ, ಜೂನ್ 18, 2023

ಡಬ್ಬಿ ತುಂಬುವ ಮುನ್ನ

 


"ಅಯ್ಯೋ ಶಾಲೆ ಶುರು ಆಯ್ತು, ಮಕ್ಕಳ ಬಾಕ್ಸ್ ಮಾಡೋ ಕರ್ಮ ಶುರುಆಯ್ತಲ್ರೀ", "ಏನ್ ಡಬ್ಬಿಗೆ ಹಾಕೋದು ಅನ್ನೋದೇ ಗೊತ್ತಾಗಲ್ಲ, ಊಟ ಬೇಜಾರು, ವೆರೈಟಿ ತಿಂಡಿ ಹಾಕು, ಎಲ್ರೂ ಎಷ್ಟು ಒಳ್ಳೊಳ್ಳೆ ತಿಂಡಿ ತರ್ತಾರೆ ಗೊತ್ತಾ ಅಂತಾಳೆ ಮಗಳು", "ಏನ್ ಕಳಿಸಿದ್ರೂ ಅರ್ಧಕ್ಕರ್ಧ ಡಬ್ಬೀಲಿ ಹಂಗೆ ಬಿಟ್ಕೊಂಡ್ ಬರ್ತಾನೆ"," ಸ್ಕೂಲಲ್ಲಿ ಊಟಾನೇ ಮಾಡಲ್ಲ, ಮನೆಗ್ ಬಂದು, ಕುರ್ಕುರೆ ಅದು ಇದು ತಿಂದು ಹೊಟ್ಟೆ ತುಂಬಿಸಿಕೊಂಡು ಆಡಕ್ಕೆ ಓಡ್ತಾಳೆ, ಮೋಶನ್ನು ಸರಿಯಾಗಾಗ್ದೆ ಆಮೇಲೆ ಹೊಟ್ಟೆನೋವಿಗೆಅಳ್ತಾಳೆ" ಇವೆಲ್ಲ ಮಾತುಗಳು ನಮ್ಮ ನಿಮ್ಮವೇ ಅಲ್ವ? ತಾಯಂದಿರ ಕಳಕಳಿಯ ಕಂಪ್ಲೇಯಿಂಟ್ಗಳು ಇವು. ಮಕ್ಕಳು ಊಟದ ಡಬ್ಬಿಯ ಆಹಾರ ಸಂತೋಷದಿಂದ ತಿನ್ನುತ್ತಿಲ್ಲವೆಂದರೆ ಅದಕ್ಕೆ ಮಕ್ಕಳನ್ನು ದೂಷಿಸುವ ಮುನ್ನ ಒಮ್ಮೆ ಯೋಚಿಸಿ, ನಾವು ಮಕ್ಕಳು ನಿಜವಾಗಿಯೂ ಎಂಜಾಯ್ ಮಾಡುವ ಆಹಾರವನ್ನು ನೀಡುತ್ತಿದೇವೆಯೇ? 

ಮಕ್ಕಳ ಡಬ್ಬಿ ಬಗ್ಗೆ ಸ್ಪೆಷಲ್ ಗಮನ ಏಕೆ ಬೇಕು ?

'ಆಹಾರ' ಎಂದರೆ ಸುಮ್ಮನೆ ಹಸಿವು ನೀಗಿಸುವ ಹಿಟ್ಟು ಎಂದಲ್ಲ. ನಮ್ಮ ದೇಹ ಮತ್ತು ಮನಸ್ಸು ಸರಿಯಾದ ರೀತಿಯಲ್ಲಿ ಕಾರ್ಯನಿರ್ವಹಿಸಲು ನಾವು ನೀಡಬೇಕಾದ ಸತ್ವಗಳು.  ಮಕ್ಕಳು ಇಡೀದಿನ  ಶಾಲೆಯಲ್ಲಿಯೇ ಕಳೆಯುವಂತಿದ್ದರೆ, ಅವರಿಗೆ ಅವಶ್ಯಕತೆ ಇರುವಷ್ಟು ಪೌಷ್ಟಿಕಾಂಶ ಪಡೆಯುವುದು ಊಟದ ಡಬ್ಬಿಯಲ್ಲಿಯೇ. ಈಗಿನ ಬಿಡುವಿಲ್ಲದ ಜೀವನದಲ್ಲಿ, ಕುಟುಂಬದವರೆಲ್ಲ ಒಟ್ಟಿಗೆ ಕುಳಿತು ಆಹಾರ ಸೇವಿಸುವ ಚಟುವಟಿಕೆ ಅತ್ಯಂತ ವಿರಳ. ಅದೇ ಶಾಲೆಯಲ್ಲಿ ಮಕ್ಕಳು ತಮ್ಮ ಫ್ರೆಂಡ್ಸ್ ಜೊತೆ ಕುಳಿತು ನಗುತ್ತಾ ಆಡುತ್ತಾ ತಿನ್ನುತ್ತಾರಾದ್ದರಿಂದ, ಕಳಿಸುವ ಲಾಂಚ್ಬ್ಯಾಕ್ಸ್, ಮಕ್ಕಳ ಬೆಳವಣಿಗೆಗೆ ಅತಿಮುಖ್ಯ. 

ವಿದ್ಯಾರ್ಥಿ ದೆಸೆಯಲ್ಲಿ ಸ್ಕೂಲ್ ಡಬ್ಬಿ ಎಂಬುದು ನಿರಂತರವಾಗಿ ಮಕ್ಕಳ ಜೊತೆಗಿರುವುದು. ಅತಿರೇಕದ ರುಚಿಗಳಿಂದ ನಮ್ಮ ನಡವಳಿಕೆಯಲ್ಲಿ ವ್ಯತ್ಯಾಸವಾಗುತ್ತದೆ. ಮಕ್ಕಳ ಏಕಾಗ್ರತೆಗೆ ಸಾತ್ವಿಕ ಆಹಾರ ಅತ್ಯವಶ್ಯಕ. ಸಾಧ್ಯವಾದಾಗಲೆಲ್ಲ ಡಬ್ಬಿಯ ತಿಂಡಿಗಳ ಆಯ್ಕೆ, ತಯಾರು ಮಾಡುವುದು ಮತ್ತು ತುಂಬಿಕೊಳ್ಳುವ ಬಗೆಗೆ ಮಕ್ಕಳಿಗೆ ಚಾಯ್ಸ್ ನೀಡಿದರೆ, ಮಕ್ಕಳು ಆಹಾರವನ್ನು 'ಇಷ್ಟಪಟ್ಟು' ತಿನ್ನುತ್ತಾರೆ. ಅವರ ಅಪೇಕ್ಷೆ ಮತ್ತು ಅನಿಸಿಕೆಗಳಿಗೆ ಬೆಲೆನೀಡಿದಂತಾಗಿ, ಹಠಮಾರಿತನ ಕಡಿಮೆಯಾಗುತ್ತದೆ. ಹಾಂ! ಮಕ್ಕಳ ಏಳಿಗೆ ಬಯಸಿ, ಬೆಳಗ್ಗಿನ ನಿಯಮಿತ ಸಮಯದಲ್ಲಿ ಮಕ್ಕಳ ಡಬ್ಬಿಗೆ ಫ್ರೆಶ್ ಆಹಾರವನ್ನು ತಯಾರಿಸಿಕೊಡಲು ನಾವು ಮಾಡುವ ಪ್ರಯತ್ನ, ನಮ್ಮ ದೇಹ ಮತ್ತುಮನಸ್ಸನ್ನು ಚುರುಕುಗೊಳಿಸುವ ಆರೋಗ್ಯಕರ ಚಟುವಟಿಕೆಯದು. 

ಮಕ್ಕಳು ಸರಿಯಾಗಿ ಡಬ್ಬಿಯ ಆಹಾರವನ್ನು ತಿನ್ನದಿರುವುದರ ಕಾರಣಗಳು ಮತ್ತು ಪರಿಹಾರ :

ರುಚಿಯ ಗ್ರಹಣದ ಅನ್ವೇಷಣೆ : ಶಾಲೆಯಲ್ಲಿ ಹಂಚಿ ತಿನ್ನುವುದು ಮಕ್ಕಳ ಸಹಜ ವಾಡಿಕೆ. ಇತರರ ಮನೆಯ ಆಹಾರದಲ್ಲಿ ರುಚಿ ಬದಲಾವಣೆ ಕಾಣುವುದರಿಂದ ಮಕ್ಕಳಿಗೆ ತಮ್ಮ ಮನೆಯ ಅಡುಗೆ ಹಿಡಿಸುವುದಿಲ್ಲ. ಅವರ ಆ ಭಾವನೆಯನ್ನು ತಪ್ಪೆಂದು ಹೀಯಾಳಿಸದೆ, ಮಕ್ಕಳ ಇಷ್ಟ ಕಷ್ಟಗಳನ್ನು ಚರ್ಚಿಸಿ ಮಕ್ಕಳ ಡಬ್ಬಿಗೆ ಪೌಷ್ಟಿಕಾಂಶದ ಚೌಕಟ್ಟಿನಲ್ಲಿಯೇ ರುಚಿ ಮತ್ತು ನೋಟದಲ್ಲಿ ವೈವಿದ್ಯತೆ ತರಲು ಪ್ರಯತ್ನಿಸುವುದು ನಮ್ಮ ಕರ್ತವ್ಯವಾಗಿರಬೇಕು. ಮಕ್ಕಳ ತಿಂಡಿ ನಾವು ಟೇಸ್ಟ್ ನೋಡಿಯೇ ಕಳಿಸಬೇಕು, ಮಧ್ಯಾಹ್ನಕ್ಕೆ ತಣ್ಣಗೆ ತಿನ್ನಲು ಸಹ್ಯವೇ ಎಂದು ಪರಿಶೀಲಿಸಬೇಕು. ಫ್ರಿಡ್ಜ್ನಲ್ಲಿಟ್ಟ ಆಹಾರ  ಕೆಡುವುದಿಲ್ಲ ಎಂದು ಮಕ್ಕಳ ಡಬ್ಬಿಗೆ ಹಾಕಿದರೆ ಒಮ್ಮೊಮ್ಮೆ ಬ್ಯಾಕ್ಟೀರಿಯಾಗಳು ನಮಗೆ ಅರಿವಿಲ್ಲದಂತೆ ನಮ್ಮ ಮಕ್ಕಳ ಆಹಾರದಲ್ಲಿ ಬೆಳೆದು, ಮಧ್ಯಾಹ್ನಕ್ಕೆ ರುಚಿಗೆಡುವ ಸಾಧ್ಯತೆ ಇರುತ್ತದೆ ಮತ್ತದು ಆರೋಗ್ಯಕ್ಕೂ ತೊಂದರೆ.  

ಪ್ಯಾಕೆಟ್ ಫುಡ್ಗಳ ಹಾವಳಿ : ಬಣ್ಣಬಣ್ಣದ ಪ್ಯಾಕೆಟ್, ಕರುಮ್ಕುರುಮ್ ತಿಂಡಿ, ಉಪ್ಪು ಹುಳಿ ಖಾರ ಸಿಹಿ ಎಲ್ಲವೂ ಹೆಚ್ಚಿರುವ ಅಂಗಡಿ ಪದಾರ್ಥಗಳು ಮಕ್ಕಳ ಸಹಜ ಆಸೆ. ಈ ಕೃತಕ ಆಹಾರಗಳಲ್ಲಿರುವ ಟ್ರಾನ್ಸ್ ಕೊಬ್ಬು, ಸಕ್ಕರೆ, ಸೋಡಿಯಂ ಮತ್ತು ರುಚಿ-ಬಣ್ಣ ಹೆಚ್ಚಿಸುವ ರಾಸಾಯನಿಕಗಳು, ಮಕ್ಕಳಲ್ಲಿ ಜಂಕ್ ಫುಡ್ ತಿನ್ನುವ ಚಟವಾಗಿ ಪರಿಣಮಿಸುತ್ತದೆ. ಪೋಷಕರಾಗಿ ಜಂಕ್ಫುಡ್ಗಳ ಕೊಳ್ಳುಬಾಕರು ನಾವಾಗಿದ್ದರೆ, ಮಕ್ಕಳನ್ನು ದೂಷಿಸಿ ಪ್ರಯೋಜನವಿಲ್ಲ. ಮಕ್ಕಳ ಬಾಕ್ಸ್ ತಯಾರಿಸಲು ಸಮಯ ಹೊಂದಿಸಿಕೊಳ್ಳಲಾಗದ ಅನಿವಾರ್ಯತೆ, ಆಲಸ್ಯತನದ ಪರಿಣಾಮವೇ ನಾವು ನಮ್ಮ ಮಕ್ಕಳಿಗೆ ಫಾಸ್ಟ್ ಫುಡ್ ಗಳ ಗೀಳು ಹತ್ತಿಸುವುದು. ಸಾವಯವ ಪದಾರ್ಥಗಳನ್ನು ಬಳಸಿ, ಪ್ಯಾಕೆಟ್ ಫುಡ್ ಗಳನ್ನು ಮೀರಿಸುವ ಸ್ನ್ಯಾಕ್ ಗಳನ್ನು ನಾವು ತಯಾರು ಮಾಡಲು ಕಲಿತರೆ, ಮಕ್ಕಳ ವಿರೋಧ ಇರುವುದಿಲ್ಲ. ಊಟದ ಡಬ್ಬಿಯಲ್ಲಿ ಬಣ್ಣ ಬಣ್ಣದ ಹಣ್ಣು ತರಕಾರಿ ಇರುವ ರುಚಿಯಾದ ಸಲಾಡ್, ಆರೋಗ್ಯಕರ ಎಡಿಬಲ್ ಬಣ್ಣಗಳುಳ್ಳ ಪದಾರ್ಥ ಬಳಸಿ ತಯಾರಿಸಿದ ಮನೆಯ ಹಪ್ಪಳ ಸಂಡಿಗೆಗಳು, ಮನೆಯಲ್ಲೇ ತಯಾರಿಸಿದ ಸಿಹಿ ಹೀಗೆ ವೈವಿದ್ಯತೆಯನ್ನು ನಾವು ನೀಡಿದರೆ, ಮಕ್ಕಳಿಗೆ ಜಂಕ್ ಫುಡ್ ಅಪೇಕ್ಷೆ ಬರುವುದಿಲ್ಲ.

ಅತಿಯಾದ ಶಿಸ್ತು : 'ಆಹಾರ' ಎನ್ನುವುದು ಮಕ್ಕಳಿಗೆ ಬಲವಂತವಾಗಿರಬಾರದು. "ಡಬ್ಬಿ ಖಾಲಿ ಮಾಡಿಲ್ಲ ಎಂದರೆ ಬಾರಿಸ್ತೀನಿ ನಿಂಗೆ" ಎಂದು ಹೆದರಿಸಿದರೆ, ಆ ಭಯಕ್ಕೆ ಮಕ್ಕಳು ಸುಳ್ಳು ಹೇಳಲು ಪ್ರಾರಂಭಿಸುತ್ತಾರೆ. ಒಮ್ಮೊಮ್ಮೆ ಅನಾರೋಗ್ಯವಾಗಿ ಊಟ ರುಚಿಸುವುದಿಲ್ಲ, ಹೊಟ್ಟೆಯಲ್ಲಿನ ಜಂತು, ಜ್ವರದ ಲಕ್ಷಣ, ಹೊಸ ಹಲ್ಲು ಬರುವ ಸಮಯ ಇತ್ಯಾದಿ ಸಂಬಂಧಿತ ವಿಷಯಗಳೂ ಕೂಡ ಮಕ್ಕಳು ಊಟ ಬಿಡಲು ಕಾರಣಗಳಾಗಿರುತ್ತವೆ. ಮನುಷ್ಯ ಭಾವಜೀವಿ. ಪುಟ್ಟ ಮನಸ್ಸುಗಳಿಗೂ ಒತ್ತಡಗಳಿರುತ್ತವೆ. ಸುಸ್ತು, ಅವಮಾನ, ಹತಾಶೆ, ಇತ್ಯಾದಿ ಭಾವನೆಗಳಿಂದಲೂ ಒಮ್ಮೊಮ್ಮೆ ಊಟ ರುಚಿಸುವುದಿಲ್ಲ. ಮಕ್ಕಳನ್ನು ಮಾತನಾಡಿಸಿ ಅವರ ಆಹಾರ ನಿರಾಸಕ್ತಿಗೆ ಕಾರಣವನ್ನು ಕೇಳಿ, ಅವಶ್ಯಕ ಬದಲಾವಣೆಯನ್ನು ತರಬೇಕಾದ್ದೂ ಕೂಡ ನಮ್ಮ ಕರ್ತವ್ಯ.    

ಕೃತಜ್ಞತಾ ಭಾವನೆ ಇಲ್ಲದಿರುವುದು : ಮಕ್ಕಳಿಗೆ ತಮಗೆ ದೊರಕಿರುವ ಆಹಾರವನ್ನು ತಯಾರಿಸಲು ಯಾರು ಎಷ್ಟು ಸಮಯ ಮತ್ತು ಶಕ್ತಿಯನ್ನು ವ್ಯಯಿಸಿರುತ್ತಾರೆ ಎಂಬ ಅರಿವಿರುವುದಿಲ್ಲ. ಸಕಾರಣವಿಲ್ಲದಿದ್ದಲ್ಲಿ ಊಟ ಬಿಟ್ಟರೂ ತೊಂದರೆಯಿಲ್ಲ ಎಂಬ ಸಲಿಗೆ ಸರಿಯಲ್ಲ. ನಿತ್ಯ ಊಟ ಸೇವಿಸುವಾಗ ನಮಗೆ ದೊರಕಿರುವ ಆಹಾರದ ಕುರಿತಾಗಿ ಒಂದು ಕೃತಜ್ಞತೆ, ಎಲ್ಲೋ ಒಮ್ಮೊಮ್ಮೆ ರುಚಿ ಹೆಚ್ಚು ಕಮ್ಮಿಯಾದರೂ ಸಹಿಸಿಕೊಂಡು ಧನಾತ್ಮಕ ಪ್ರತಿಕ್ರಿಯೆ ನೀಡುವ ಅಭ್ಯಾಸ, ಪರಿಹಾರ ಕಂಡುಕೊಂಡು ತಟ್ಟೆಯಲ್ಲಿರುವ ಆಹಾರವನ್ನು ಖಾಲಿ ಮಾಡಬೇಕೆಂಬ ಶಿಸ್ತು, ಅಡುಗೆ ರುಚಿಯಾದಾಗ ತಯಾರಿಸಿದವರಿಗೆ ಪ್ರಶಂಸೆ, ಆಹಾರ ಸಾಮಗ್ರಿಗಳ ಮೂಲ ಮತ್ತು ಲಭ್ಯತೆಯ ಕುರಿತು ಚರ್ಚೆ, ಯಾವ ಆಹಾರ ನಮ್ಮ ಯಾವ ದೇಹದ ಅಂಗಾಂಗಕ್ಕೆ ಸಹಾಯಕ ಎಂಬ ಪುನರಾವರ್ತನೆ ಮಾಡುವುದು,  ಆಗಾಗ್ಗೆ ಮಕ್ಕಳಿಗೆ  ಅವರ ಸಾಮರ್ಥ್ಯಕ್ಕೆ ತಕ್ಕಂತೆ ಏನಾದರೂ ಅಡುಗೆ ಮಾಡುವ ಅವಕಾಶ ಇತ್ಯಾದಿ ಸಂವಹನಾಶೀಲ ಚಟುವಟಿಕೆಗಳನ್ನು ನಾವು ರೂಢಿಸಿಕೊಂಡರೆ ತಂತಾನೇ ಮಕ್ಕಳು ಊಟದ ಡಬ್ಬಿಯ ರಗಳೆ ನಿಲ್ಲುತ್ತದೆ. 


ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ