ಶುಕ್ರವಾರ, ಜುಲೈ 28, 2023

ಚಾಕೋಲೇಟ್ ಕೊಡ್ಲಾ??

ತಮ್ಮದೇ ಮಕ್ಕಳಿಗೆ ಅತಿಯಾಗಿ ಚಾಕೊಲೇಟ್ ಕೊಡಿಸುವ ಪಾಲಕರು ಮತ್ತು ನೆಂಟರಿಷ್ಟರಾಗಿ ಮಕ್ಕಳಿರುವ ಮನೆಗೆ ಚಾಕೊಲೇಟ್ ಕೊಂಡೊಯ್ಯುವವರ ಗಮನಕ್ಕೆ!

ಮಕ್ಕಳು ಮತ್ತು ಚಾಕೊಲೇಟಿಗೆ ಅವಿನಾಭಾವ ಸಂಬಂಧ. ಬರ್ತಡೇ ಎಂದರೆ ಚಾಕೊಲೇಟು ಹಂಚಿಕೆ ಖಾಯಂ. ಚಿಕ್ಕ ಮಕ್ಕಳಿರುವ ಮನೆಗೆ ಮನೆಯವರೂ ಸೇರಿದಂತೆ, ಸ್ನೇಹಿತರು ಬಂಧುಗಳು ಚಾಕೊಲೇಟನ್ನು ತೆಗೆದುಕೊಂಡು ಹೋಗಿ ಕೊಡುವುದು ಸರ್ವೇ ಸಾಮಾನ್ಯ. ಯಾಕೆ? ಮಕ್ಕಳು ಸಿಹಿ ತಿಂದು ಖುಷಿಯಾಗಲಿ, ತಮ್ಮನ್ನು ಒಳ್ಳೆಯವರೆಂದು ಗುರುತಿಸಿಕೊಳ್ಳಲು ಸಿಗಬಹುದಾದ ಅತ್ಯಂತ ಕಡಿಮೆ ಖರ್ಚಿನ ತಿಂಡಿ ಚಾಕೊಲೇಟು. ಆದರೆ ಈ ಭರದಲ್ಲಿ, ಏನೂ ಅರಿಯದ ಮಕ್ಕಳಲ್ಲಿ, ಚಾಕೊಲೇಟಿನ ಅತಿಯಾದ ಬಳಕೆಯ ಚಟವನ್ನು, ಅನಾರೋಗ್ಯವನ್ನು ನಾವೇ ಧಾರೆಯೆರೆಯುತ್ತಿದ್ದೇವೆ. 

ಅಧ್ಯಯನಗಳ ಪ್ರಕಾರ ಕೋಕೋ ಬೀನ್ಸ್ ಗಳಲ್ಲಿ ಉತ್ಕರ್ಷಣ ನಿರೋಧಕಗಳು ಹೆಚ್ಚಾಗಿ ಇರುತ್ತವಯಾದ್ದರಿಂದ  ಚಾಕೊಲೇಟ್ಸ್ಗಳು ಆರೋಗ್ಯಕ್ಕೆ ಒಳ್ಳೆಯದು ಎನ್ನುತ್ತಾರೆ. ಚಾಕೊಲೇಟು ಬಾಯಲ್ಲಿಟ್ಟರೆ ಕರಗುವಂತೆ ಮಾಡಲು ಸಸ್ಯಜನ್ಯವಾದ ಕೋಕೋ ಬೆಣ್ಣೆಯನ್ನು ಮಾತ್ರ ಹೆಚ್ಚಿನ ಪ್ರಮಾಣದಲ್ಲಿ ಬಳಸಿ, ಹಾಲಿನ ಕೆನೆ ಮತ್ತು ಸಕ್ಕರೆಯ ಪ್ರಮಾಣವನ್ನು ಕನಿಷ್ಠವಾಗಿರಿಸಬೇಕು ಎನ್ನುತ್ತದೆ ಕಾನೂನು. ಖಾದ್ಯ ತೈಲಗಳ ಬಳಕೆ ಸಂಪೂರ್ಣ ನಿಷಿದ್ಧವಿದೆ. ಆದರೂ ಕೆಲವು ಚಾಕೊಲೇಟುಗಳಿಗೆ,  ತಾಳೆ, ಶೇಂಗಾ, ಸೂರ್ಯಕಾಂತಿಯ್ಕೆ ಎಣ್ಣೆಯನ್ನು ಬಳಸುವುದು ಗಮನಿಸಬಹುದು. ಎಷ್ಟೋ ಕಡೆ ಹೈಡ್ರೋಜೆನೆರೇಟೆಡ್ ಖಾದ್ಯ ತೈಲ ಬಳಕೆಯಾಗುತ್ತದೆ ಆದರೆ ಅದನ್ನು ಲೇಬಲ್ಲಿನಲ್ಲಿ ನಮೂದಿಸುವುದಿಲ್ಲ. ಇಂತಹ ಕೊಬ್ಬಿನಂಶ ನಮ್ಮ ಜೀರ್ಣಾಂಗದಲ್ಲಿ ಸುಲಭದಲ್ಲಿ ಕರಾಗುವಂತದಲ್ಲ. ಎಳೆ ಮಕ್ಕಳ ಆರೋಗ್ಯಕ್ಕಂತೂ ಇದು ಅತ್ಯಂತ ಅಪಾಯ.ದುರದೃಷ್ಟವಶಾತ್  ನಾವು ಮಾರುಕಟ್ಟೆಯಲ್ಲಿ ಕಾಣುವ ನೂರಾರು ಬಗೆಯ ಚಾಕೊಲೇಟಿನ ತಯಾರಿಗೆ ಮಾರಕವೆನಿಸುವ ಅತಿಯಾದ ಸಕ್ಕರೆ ಮತ್ತು ಕೊಬ್ಬಿನಂಶ ಬಳಕೆ ಹೆಚ್ಚಾಗುತ್ತಿದೆ. ತಪಾಸಣೆಗೆ ಕೋಕೋ ಪ್ರಮಾಣವನ್ನು ಪತ್ತೆ ಹಚ್ಚುವ ತಾಂತ್ರಿಕತೆಯ ಕೊರತೆಯಿದೆ. ಮೂಡ್ ಬೂಸ್ಟರ್ ಎಂಬಿತ್ಯಾದಿ ಹೊಸಕಲ್ಪನೆಯ ಚಾಕೊಲೇಟಿನ ಆವಿಷ್ಕಾರ, ಹಣ ಸಂಪಾದನೆಯ ಮಾರ್ಗವಾಗಿ, ಅದಕ್ಕೆ ಬಳಸುವ ಆರೋಗ್ಯಕರ ಸಾಮಗ್ರಿಗಳ ಮಿತಿಯನ್ನು ಮೀರಿ ಹಾನಿಕಾರಕ ಬಣ್ಣಗಳು, ಕೃತಕ ರುಚಿಗಳು ಮತ್ತು ಸಂರಕ್ಷಕಗಳ ಬಳಕೆ ಸಾಮಾನ್ಯವಾಗಿದೆ. ಪೂರಕವಾಗಿ ದಿನನಿತ್ಯ ಟೀವಿಯಲ್ಲಿ ಕಾಣುವ ವರ್ಣರಂಜಿತ ಜಾಹಿರಾತುಗಳು, ಅಂಗಡಿಗಳಲ್ಲಿ ಎದುರಿಗೆ ಕಾಣುವ ಚಾಕೊಲೇಟಿನ ಡಬ್ಬಿಗಳು, ಮಕ್ಕಳ ಮನಸ್ಸಿನಲ್ಲಿ ಚಾಕೊಲೇಟುಗಳ ಮಾಹಿತಿ ಇನ್ನಷ್ಟು ಮನನಗೊಳ್ಳಲು ಸಹಾಯ ಮಾಡುತ್ತವೆ.

ಮಕ್ಕಳಿಗೇಕೆ ಚಾಕೊಲೇಟ್  'ಕೊಡುವ' ಅಭ್ಯಾಸ ನಮ್ಮದು?

ಮನೆಯಲ್ಲಿ ಮಕ್ಕಳು ಹಸಿವಾಯಿತು ಎಂದು ರಚ್ಚೆ ಹಿಡಿದಾಗ ರುಚಿಕರ ತಿಂಡಿ ಮಾಡುವಷ್ಟು ಸಮಯವಾಗಲೀ ವ್ಯವಧಾನವಾಗಲೀ ಕೆಲವು ಪಾಲಕರಿಗಿರುವುದಿಲ್ಲ. "ತಗೋ ದುಡ್ಡು ತಗೋ ಹೋಗಿ ಅಂಗಡಿಯಿಂದ ಚಾಕೊಲೇಟು ತಗೆದುಕೊಂಡು ತಿನ್ನು" ಎಂದು ಮಕ್ಕಳನ್ನುಕಳಿಸಿಬಿಟ್ಟರೆ, ತಮಗೆ ಶ್ರಮ ತಪ್ಪುತ್ತದೆ ಎಂಬುದು ಕೆಲವರ ಭಾವವಾದರೆ, ಚಾಕೊಲೇಟೆಂದರೆ ಒಂದು ಸಿಹಿಯಷ್ಟೇ, ಮಕ್ಕಳಿಗೆ ಖುಷಿಯಾಗಲು ಅಷ್ಟು ಸಾಕು ಎಂಬ ಅಜ್ಞಾನ ಹಲವರದು. ಅವಶ್ಯಕತೆ ಇದೆಯೋ ಇಲ್ಲವೋ ಮಕ್ಕಳ ಮೇಲಿನ ಮಮಕಾರಕ್ಕೆ ಅಂಗಡಿಗೆ ಹೋದಾಗಲೆಲ್ಲ ತಾವು ತೆಗೆದುಕೊಳ್ಳುವ ಸಾಮಗ್ರಿಗಳ ಜೊತೆಗೆ ಕೊನೆಯಲೊಂದು ಚಾಕೊಲೇಟನ್ನು ಕೊಂಡು ತಿನ್ನಿಸುವುದು, ಅನೇಕರ ರೂಢಿ. ಕೆಲವೊಮ್ಮೆ ನಮ್ಮ ಆಜ್ಞೆಯನ್ನು ಪಾಲಿಸಲೆಂದು, ಮಕ್ಕಳ ಮನವೊಲೈಸಿಕೊಳ್ಳಲು ನಾವು ದೊಡ್ಡವರೇ ಮಕ್ಕಳನ್ನು ಚಾಕೊಲೇಟಿನ ಆಮಿಷಕ್ಕೆ ತಳ್ಳುತ್ತೇವೆ. ಮಕ್ಕಳಿರುವವರ ಮನೆಗೆ ಬೇರೆಲ್ಲ ಉಡುಗೊರೆಯ ಬೆಲೆಗೆ ಹೋಲಿಸಿದರೆ, ಚಾಕೊಲೇಟು ಕೊಂಡೊಯ್ಯುವುದು ಅಗ್ಗ. ಹಾಗಾಗಿ ನೆಂಟರಿಷ್ಟರು ಉಡುಗೊರೆಯಾಗಿ ಚಾಕೊಲೇಟ ಬಿಸ್ಕತ್ತಿನ ಪೊಟ್ಟಣಕ್ಕೆ ಮೊದಲ ಆದ್ಯತೆ ನೀಡಿ ಕೊಳ್ಳುತ್ತಾರೆ.   

ಚಾಕೊಲೇಟೆಂಬ ರಾಸಾಯನಿಕ ಗುಡ್ಡೆಯ ದುಷ್ಪರಿಣಾಮಗಳು :

ಕ್ಯಾನ್ಡಿ  ಮತ್ತು ಚಾಕೊಲೇಟ್ ಗಳ ಅತಿಯಾದ ಸೇವನೆಯಿಂದ ಚಿಕ್ಕಮಕ್ಕಳಲ್ಲಿ ಕೂಡ ಈಗ ಜುವೈನಲ್ ಮಧುಮೇಹದಂತಹ ರೋಗಗಳು ಕಾಣಿಸಿಕೊಳ್ಳುತ್ತಿವೆ. ಸಕ್ಕರೆಯಂಶ ಹಲ್ಲುಗಳನ್ನು ಹುಳುಕು ಮಾಡುತ್ತವೆ ಎಂಬ ಕನಿಷ್ಠ ಜ್ಞಾನವಿದ್ದರೂ, ಮಕ್ಕಳ ಆರೋಗ್ಯದ ಕುರಿತಾಗಿ ನಿರ್ಲಕ್ಷ್ಯ ತೋರುವ ಪಾಲಕರಿಗೆ ಮಕ್ಕಳಲ್ಲಿ ಪ್ರಕ್ಷುಬ್ಧತೆ, ತಲೆನೋವು ಮತ್ತು ವಾಕರಿಕೆ ಕಾಣಿಸಿಕೊಂಡಾಗ ಅವು ಚಾಕೊಲೇಟಿನಿಂದ ಎಂಬ ಸಂದೇಹ ಬರುವುದಿಲ್ಲ. ಅಂಗಡಿಗೆ ಹೋದಾಗ ಯಾವುದೋ ಒಂದು ಎದುರಿಗೆ ಕಂಡ ಚಾಕೊಲೇಟನ್ನುಮಕ್ಕಳಿಗಾಗಿ ತೆಗೆದುಕೊಂಡುಕೊಡುವವರಿಗೆ, ಅದು ಹಾಲು ಮತ್ತು ಡೈರಿ ಆಧಾರಿತ ಚಾಕೊಲೇಟ್ಗಳಾಗಿದ್ದರೆ, ಲ್ಯಾಕ್ಟೊಸ್ ಅಸಹಿಷ್ಣುತೆ ಹೊಂದಿರುವ ಮಕ್ಕಳಲ್ಲಿ ಕಾಲಾನಂತರ ಹೊಟ್ಟೆಯುರಿ, ಹೊಟ್ಟೆನೋವು, ಥಂಡಿ ಕೆಮ್ಮು ಇತ್ಯಾದಿ ತೊಂದರೆಗಳನ್ನು ತಂದೊಡ್ಡುತ್ತದೆ ಎಂಬ ಅರಿವಿರುವುದಿಲ್ಲ. ಕೆಲವರ ದೇಹಕ್ಕೆ ಚಾಕೊಲೇಟಿಗೆ ಬಳಸುವ ಕೆಲವು ಸಾಮಗ್ರಿಗಳಿಂದ ಅಲರ್ಜಿಇರುತ್ತದೆ, ಪ್ರಾರಂಭದಲ್ಲಿ ಸೌಮ್ಯ ರೋಗಲಕ್ಷಣಗಳು ಎನಿಸಿದರೂ ಅಲರ್ಗಿ ತೊಂದರೆಗಳು ಕ್ರಮೇಣ ಉಸಿರಾಟದ ಸಮಸ್ಯೆಯವರೆಗೆ ಗಂಭೀರತೆ ಪಡೆದುಕೊಳ್ಳುತ್ತದೆ. 

ಹಾಗದರೇನು ಮಾಡೋಣ?

ಆದಷ್ಟು ಎಳೆ ಮಕ್ಕಳಿಗೆ ಚಾಕೊಲೇಟ್ ತಿನ್ನಿಸುವ ಅಭ್ಯಾಸ ಮಾಡದಿರಿ. ಇದು ಮನೆಯವರಿಗೂ, ಮಕ್ಕಳಿರುವ ಮನೆಗೆ ಹೋಗುವ ನೆಂಟರಿಷ್ಟರಿಗೂ ಅನ್ವಯ. ಮಕ್ಕಳಿಗೆ ಅವರ ಪಾಲಕರ ಅನುಮತಿಯಲ್ಲಿ ಚಾಕೊಲೇಟ್ ಗಳನ್ನು ನೀಡುವ ಶಿಷ್ಟಾಚಾರವಿರಲಿ. ಚಾಕೊಲೇಟ್ ಬದಲಾಗಿ ಮಕ್ಕಳಿಗೆ ನೀವು ಕೊಡುವ ಸಮಯ ಅವರಿಗೆ ಅತ್ಯಂತ ಆಪ್ತ ಉಡುಗೊರೆಯಾಗುತ್ತದೆ. ಸಾಧ್ಯವಾದರೆ ಹಣ್ಣನ್ನು ಅಥವಾ ಮನೆಯಲ್ಲಿಯೇ ಮಾಡಿದ ಫ್ರೆಶ್ ತಿಂಡಿಯನ್ನು ಕೊಂಡೊಯ್ಯಿರಿ.  

ಚಾಕೊಲೇಟ್ ಎಂಬುದು ರುಚಿ, ಹಸಿವು, ಮಜ, ಬೋರ್ ಆದಾಗ ಸಮಯ ಕಳೆಯಲು, ಇತರರು ತಿನ್ನುತ್ತಾರೆ ಎಂಬ ಅಸೂಯೆ, ಪ್ರಶಂಸೆಗೆ ಸಿಗುವ ಬಹುಮಾನ ಹೀಗೆ ಅನೇಕ ಸಂದರ್ಭಗಳಲ್ಲಿ ಮಕ್ಕಳ ಹೊಟ್ಟೆಗೆ ಹೋಗುತ್ತದೆ. ಮಕ್ಕಳು  ಆಸೆಪಡುತ್ತಿದ್ದರೆ, ಮನೆಯಲ್ಲಿಯೇ ಸ್ವಾಸ್ತ್ಯ ವಸ್ತುಗಳನ್ನು ಬಳಸಿ ಕೆಲವು ಬಗೆಯ ಚಾಕೊಲೇಟ್ ತಯಾರಿಸಬಹುದು ಅಥವಾ ಮಕ್ಕಳಿಗೆ ಇಷ್ಟವಾಗುವ ಸಿಹಿಯನ್ನು ಆಗೀಗ್ಗೆ ಮಕ್ಕಳ ಆರೋಗ್ಯಕ್ಕಾಗಿ ಶ್ರಮಪಟ್ಟು ನಾವೇ ತಯಾರಿಸಿ ಕೊಟ್ಟರೆ ಹೊರಗಿನ ತಿಂಡಿಯ ಆಸೆಕಡಿಮೆಯಾಗುತ್ತದೆ. ಬೋರ್ ಆದಾಗ ತಿನ್ನುವ ಚಪಲ ಬಿಡಿಸಲು ಮಕ್ಕಳಿಗೆ ಹವ್ಯಾಸಕ್ಕೆ ಆದ್ಯತೆ ನೀಡಿ ಪ್ರೋತ್ಸಾಹಿಸಿ. ಮಕ್ಕಳ ಒಳ್ಳೆಯ ಕೆಲಸಗಳಿಗೆ ಮುಕ್ತವಾಗಿ ಮಾತನಾಡಿ ಪ್ರಶಂಶಿಸಿ. ಶಾಲೆಯಲ್ಲಿ ಬರ್ತಡೆಗೆ ಚಾಕೊಲೇಟ್ ಬದಲು, ಉಪಯುಕ್ತ ವಸ್ತುಗಳಾದ ರಬ್ಬರ್, ಮೆಂಡರ್,  ಪೆನ್ಸಿಲ್ ಪೆನ್ನುಗಳನ್ನು ಹಂಚಬಹುದು. 

ಯಾವ್ಯಾವ ಬಗೆಯ ಚಾಕೊಲೇಟ್ ತಿಂದಾಗ ಮಗುವಿನ ದೇಹ ಯಾವ ರೀತಿ ವರ್ತಿಸಿತ್ತು ಎಂಬುದನ್ನು ಪ್ರತಿಸಲ ಗಮನಿಸಿಕೊಂಡು, ಪಟ್ಟಿಯೊಂದನ್ನು ತಯಾರಿಸಿಟ್ಟುಕೊಳ್ಳಿ. ಕೆಲವರಿಗೆ ಹಾಲು ಆಧಾರಿತ ಚಾಕೊಲೇಟಿನ ಸೇವನೆ ತೊಂದರೆಯಿದ್ದರೆ, ಕೆಲವು ಮಕ್ಕಳಿಗೆ ಕೆಲವು ತೈಲಗಳ ಜೀರ್ಣತೆಯ ತೊಂದರೆಯಿರುತ್ತದೆ. ಈ ವಿಷಯಗಳ ಆಧಾರಿತ ಮಕ್ಕಳಿಗೆ ತಿಳುವಳಿಕೆ  ಹೇಳಿದರೆ, ಮಕ್ಕಳಿಗೆ ಚಾಕೊಲೇಟಿನ ತೊಂದರೆ ಮನದಟ್ಟಾಗುತ್ತದೆ.
#kannadaarticle #impactsofbuyingchocolatesforkids

ಮಂಗಳವಾರ, ಜುಲೈ 11, 2023

ಮಕ್ಕಳಿಗೆ ಚಿತ್ರಕಲೆ ಏಕೆ ಮುಖ್ಯ?


ಚಿತ್ರಕಲೆ ಒಂದು ವಿಶ್ವ ಭಾಷೆ. ಎಲ್ಲ ಜಾತಿ, ಧರ್ಮ, ಲಿಂಗ, ವಯಸ್ಸಿನ ಬೇಧವಿಲ್ಲದೆ ಎಲ್ಲರನ್ನೂ ಸೆಳೆದುಕೊಳ್ಳುವ ಭಾಷೆಯಿದು. ಅದರಲ್ಲೂ ಮುಖ್ಯವಾಗಿ ಮಕ್ಕಳು ಅತ್ಯಂತ ಸಹಜವಾಗಿಯೇ ತಮ್ಮನ್ನು ತಾವೇ ತೊಡಗಿಸಿಕೊಳ್ಳಬಹುದಾದಂತಹ ಚಟುವಟಿಕೆಯಿದು. ಚಿತ್ರಕಲೆಗಳಲ್ಲಿ ಆಸಕ್ತಿಯಿಲ್ಲ ನಮ್ಮ ಮಗುವಿಗೆ ಎನ್ನುವ ಪೋಷಕರಿಗಾಗಿ ಇಂದಿನ ಈ ಲೇಖನ. 


ಕಲೆ ಎಂದರೆ ವಿಶಿಷ್ಟವಾದ ಚಟುವಟಿಕೆ ಮತ್ತು ಚಿತ್ರಕಲೆ ಎಂದರೆ, ಚಿತ್ರಗಳ ಮೂಲಕ ಆ ಭಾವವನ್ನು ಬಿಂಬಿಸುವ ಪ್ರಯತ್ನ ಎಂದರ್ಥ. ಮನುಷ್ಯನಾಗಿ ರೂಪಿತವಾಗುತ್ತಿರುವ ಹಂತದಲ್ಲೇ, ಗುಹೆಗಳ ಮೇಲೆ ಚಿತ್ರಗಳ ಕೆತ್ತನೆ ಮಾಡುತ್ತ ಆನಂದವನ್ನು ಕಾಣುತ್ತಿದ್ದ ನಮ್ಮ ಪೂರ್ವಿಕರ ಇತಿಹಾಸವಿದೆ. ಪ್ರತಿ  ಮಗುವಿನಲ್ಲೂ ಹುಟ್ಟಿನಿಂದಲೇ ಕಲಾಜ್ಞಾನ ಇರುತ್ತದೆ. ಅದಕ್ಕೆ ಪೆನ್ಸಿಲ್ಲು, ಕುಂಚ-ಬಣ್ಣಗಳ ಬಳಕೆಯೇ ಆಗಿರಬೇಕೆಂದಿಲ್ಲ. ನೈಜತೆಗೆ ಹತ್ತಿರುವಾಗುವಂತಹ ಚಿತ್ರಗಳು ಬರೆದರೆ ಮಾತ್ರ ಅದು ಚಿತ್ರಕಲೆಯಲ್ಲ. ಅಮ್ಮ ಆರಿಸುವ ಅಕ್ಕಿಯ ಬಟ್ಟಲಲ್ಲಿ ಮಗು ಬೆರಳಿನಿಂದ ಗುಂಡನೆಯ ಸೂರ್ಯನನ್ನು ಯೋಚಿಸಿಕೈಯಾಡುತ್ತದೆ. ಆಡುವ ಮಣ್ಣಿನಲ್ಲಿ, ಕೋಲಿನಿಂದ ಕೋಳಿ ಬರೆದಿರುತ್ತಾರೆ ನಮ್ಮ ಮಕ್ಕಳು. "ಛೀ! ಮಣ್ಣಾಡಬೇಡ", "ನೀರು ಪೋಲು ಮಾಡ್ತೀಯ", "ಕೊಡಿಲ್ಲಿ ಅಕ್ಕಿ ಹಾಳು ಮಾಡ್ತೀಯ ನೀನು" ಎಂಬಿತ್ಯಾದಿ ಸ್ವಚ್ಛತೆಯೆಡೆಗಿನ ಪೂರ್ವನಿರ್ಧಾರಿತ ಮಾತುಗಳು, ಆ ಸಮಯಕ್ಕೆ ಎಳೆಗೂಸುಗಳ ಚಿತ್ರ ಬಿಡಿಸುವ ಕಲೆಯನ್ನೂ ಹಿಂದಕ್ಕಟ್ಟಿಬಿಡುತ್ತದೆ. "ಡ್ರಾಯಿಂಗ್ ಮಾಡೋದು ಹೆಣ್ಮಕ್ಳು, ನೀನೋಗಿ ಕ್ರಿಕೆಟ್ ಆಡು" ಎನ್ನುವ 'ನಮ್ಮ ಅಭಿಪ್ರಾಯ' ಗಂಡು ಮಕ್ಕಳಲ್ಲಿನ ಚಿತ್ರಕಲೆಯ ಕ್ರಿಯಾಶೀಲತೆಯ ಅಲ್ಲಿಯೇ ಕುಂದುತ್ತದೆ. ಪಠ್ಯಪುಸ್ತಕಗಳಷ್ಟೇ 'ಜ್ಞಾನ'  ಎಂದು ನಂಬಿರುವ ಕೆಲವು ಪಾಲಕರು, ಮಕ್ಕಳ ಶೈಕ್ಷಣಿಕ ವಿದ್ಯಾಭ್ಯಾಸದ ಒತ್ತಡಕ್ಕೆ, ಮಾರ್ಕ್ಸ್ಕಾರ್ಡ್ ತುಂಬಾ ಮಾರ್ಕ್ಸ್ ತುಂಬುವ ಆಸೆಯಿಂದ, "ಸ್ಟೂಡೆಂಟ್ ನೀನು, ಓದೋದು ಬಿಟ್ಟು ಚಿತ್ರ ಬರಿತ ಕೂರ್ತಿಯ, ಇದೇನು ನಿನಗೆ ತಿನ್ನಕ್ಕೆ ಅನ್ನ ಕೊಡುತ್ತ? ಓದಿ ಸಂಬಳ ಬರೋ ಕೆಲಸ ಹಿಡಿಬೇಕು" ಎಂದು ಹೀಯಾಳಿಸುತ್ತಾರೆ. ಒತ್ತಡವನ್ನು ನಿಭಾಯಿಸಲು ಸಹಾಯ ಮಾಡುವಂತಹ ಚಿತ್ರಕಲೆಯನ್ನೇ 'ಅಪ್ರಯೋಜಕ' ಎಂದು ಮಕ್ಕಳಿಗೆ ಹೇಳಿಕೊಡುವವರು ನಾವೇ!


ಚಿತ್ರಕಲೆಗಳಿಂದ ಪ್ರಯೋಜನವೇನು?

ಎಳೆ ಮಕ್ಕಳಲ್ಲಿ ಕಣ್ಣು ಮತ್ತು ಕೈಗಳ ಹೊಂದಾಣಿಕೆ, ಚಲನಾ ಕೌಶಲ್ಯತೆ ವೃದ್ಧಿಸುತ್ತದೆ. ಅಕ್ಷರಗಳ ಕಲಿಕೆಗೆ ಇದು ಅತ್ಯಂತ ಸಹಾಯಕ. 

ಬೇಜಾರು ಕಳೆಯಲು, ಗ್ಯಾಡ್ಗೆಟ್ ಮೊರೆ ಹೋಗುವುದಕ್ಕಿಂತ ಇದು ಆರೋಗ್ಯಕ್ಕೆ ಅತ್ಯಂತ ಉಪಕಾರಿ

ಚಿತ್ರಕಲೆ ಮಾಡುವುದರಿಂದ ಆಕಾರಗಳು, ಜಾಗ ಹೊಂದಾಣಿಕೆ, ಬಣ್ಣಗಳ ಹೊಂದಾಣಿಕೆ ಇತ್ಯಾದಿಗಳಿಗಾಗಿ ಮಕ್ಕಳಲ್ಲಿ ಗಮನಿಸುವಿಕೆ, ಸಮಸ್ಯೆ ಪರಿಹರಿಸುವ ಬಗೆ, ಕ್ರಿಯಾತ್ಮಕತೆ ಇತ್ಯಾದಿ ಕೌಶಲ್ಯಗಳು ಕರಗತವಾಗುತ್ತದೆ. 

ಎಲ್ಲಿಯೋ ನಡೆದ  ಘಟನೆ, ಕಂಡ ಚಿತ್ರದ ನೆನಪು, ಎದುರಿಗಿರುವ ವಸ್ತುಗಳ ಆಕಾರ ಗಮನಿಸಿ ಬರೆಯುವುದು ಹೀಗೆ ಮೆದುಳಿನ ಸಂವಹನೆ ಸತತವಾಗಿ ನಡೆಯುವುದರಿಂದ, ಮಕ್ಕಳಲ್ಲಿ ಕಂಡದ್ದನ್ನು ನೆನಪಿಡುವ ಸ್ಮರಣ ಶಕ್ತಿ,  ಆತ್ಮವಿಶ್ವಾಸ, ದೃಶ್ಯ ಗ್ರಹಿಕಾ ಶಕ್ತಿ ಹೆಚ್ಚುತ್ತದೆ. 

ಹತಾಶೆ, ಬೇಸರ, ಕೋಪ, ಅತಿಯಾದ ಸಂತೋಷ ಹೀಗೆ ಭಾವನೆಗಳನ್ನು ವ್ಯಕ್ತಪಡಿಸಿ ತಮಗೆ ತಾವೇ ಸಮಾಧಾನವಾಗಲು ಮಕ್ಕಳು ಗೀಚುವುದುಂಟು, ಅತ್ಯಂತ ಸಹಜ ಮತ್ತು ಸುರಕ್ಷಿತ 'ಮಕ್ಕಳ ಭಾಷೆ'ಯಿದು. ಚಿತ್ರಗಳು ಮಕ್ಕಳ ಮನಸ್ಸನ್ನು ಅರ್ಥಮಾಡಿಕೊಳ್ಳಲು ನಮಗೆ ಸಹಾಯ ಮಾಡುತ್ತವೆ, ಸ್ವಲ್ಪ ಗಮನಿಸಿ, ಮಕ್ಕಳಿಗೆ ಬೇಕಾದ ಪ್ರೀತಿ, ಧೈರ್ಯ ಮತ್ತು ಬೆಂಬಲ ನೀಡಿದರೆ ಮಗುವಿನ ಬೌದ್ಧಿಕ ಬೆಳವಣಿಗೆಗೆ ಸಹಕಾರಿ. 

ಮಕ್ಕಳು ತಮ್ಮದೇ ಆಲೋಚನೆಯ ಕಥೆಯನ್ನು ಕಲ್ಪಿಸಿ ಚಿತ್ರಿಸಿ ನಮಗೆ ತಂದು ತೋರಿಸುವುದುಂಟು. ಮಕ್ಕಳ ಈ ಸ್ವಂತಿಕೆ ಮತ್ತು ಕಲ್ಪನಾಶಕ್ತಿ ಮುಂದಕ್ಕೆ ಅವರಿಗೆ ವಿಜ್ಞಾನ, ತಂತ್ರಜ್ಞಾನ, ಗಣಿತ, ಕ್ರಿಯಾತ್ಮಕ ಬರವಣಿಗೆ, ಇಂಜಿನಿಯರಿಂಗ್ ಕಲಿಯುವ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ.  


ಮಕ್ಕಳಲ್ಲಿ ಚಿತ್ರಕಲೆ ಬೆಂಬಲಿಸುವುದು ಹೇಗೆ?

ಕನಿಷ್ಠ ಕಲಾ ಸಾಮಗ್ರಿ ಒದಗಿಸಿಕೊಡಿ. ಮಕ್ಕಳಿಗೆ ನೀಡುವ  ಕಥೆ ಪುಸ್ತಕಗಳಲ್ಲಿ ಹೆಚ್ಚೆಚ್ಚು ಚಿತ್ರಗಳಿರಲಿ. ಒಂದಷ್ಟು ವಿಫಲ ಪ್ರಯತ್ನಗಳಿಗೆ ಬೈಯಬೇಡಿ. ಬಿದ್ದು ಬಿದ್ದೇ ಸೈಕಲ್ ಕಲಿತಿದ್ದಲ್ಲವೇ ನಾವೆಲ್ಲಾ?

ಮಕ್ಕಳ ಸಹಜ ಚಿತ್ರಕಲೆಗಳನ್ನು "ಚೆನ್ನಾಗಿಲ್ಲ, ಸರಿ ಬರ್ದಿಲ್ಲ, ಶೇಡಿಂಗ್ ಮಾಡಬೇಕು ಸರಿಯಾಗಿ" ಇತ್ಯಾದಿಯಾಗಿ ಹೀಯಾಳಿಸಬೇಡಿ. "ಅವನ್ನೋಡು ಎಷ್ಟು ಚೆನ್ನಾಗಿ ಬರ್ದಿದ್ದಾನೆ" ಎನ್ನುವ ಹೋಲಿಕೆಯೂ ಬೇಡ. ಮಕ್ಕಳು ತಮ್ಮ ಸಾಮರ್ಥ್ಯಕ್ಕೆ ತಕ್ಕಂತೆ, ತಮ್ಮ ಕಲ್ಪನೆಗೆ ತಕ್ಕಂತೆ ಚಿತ್ರಿಸಿರುತ್ತಾರೆ. ಸಾಂಪ್ರದಾಯಿಕ ಚಿತ್ರ ಶೈಲಿಗಳನ್ನು ಹೊರತುಪಡಿಸಿ, ಚಿತ್ರಗಳು ಅತ್ಯಂತ ಸುಂದರವಾಗಿ, ನೈಜತೆಗೆ ಹತ್ತಿರವಾಗಿರಲೇ ಬೇಕೆಂಬ ನಿಯಮವಿಲ್ಲ.

ಮಕ್ಕಳ ಚಿತ್ರದ ವಿಷಯ ತಿಳಿಯದೆ ಕೇವಲ ಊಹೆ ಮಾಡಬೇಡಿ. ಅರ್ಥವಾಗದಿದ್ದರೂ, ಆ ಚಿತ್ರದ ಬಗ್ಗೆ ಸ್ವಲ್ಪ ವಿವರಣೆ ಕೇಳಿ. ಏಕೆಂದರೆ ಮಕ್ಕಳು ಬರೆದ ಪ್ರಾಣಿಯ ಚಿತ್ರವನ್ನು ನಾವು ವಾಹನ ಎಂದುಕೊಂಡು ಕೇಳಿದರೆ, ಅವರಿಗೆ ತಮ್ಮ ಚಿತ್ರದ ಕುರಿತಾಗಿ ಆತ್ಮವಿಶ್ವಾಸ ಕುಗ್ಗುತ್ತದೆ. ತಿಳಿಯದಿದ್ದ ಪಕ್ಷದಲ್ಲಿ ಒಂದು ನಗು, ಬೆನ್ನು ತಟ್ಟುವುದು, ಹೈ-ಫೈ ಕೈ ಕುಲುಕುವುದು ಕೂಡ ಆತ್ಮೀಯತೆ ತೋರಿಸುತ್ತದೆ. 

ಮಕ್ಕಳ ಚಿತ್ರಕಲೆಗಳನ್ನು ಪೋಷಿಸಿ. ಚಿತ್ರ ಪ್ರದರ್ಶನಗಳಿಗೆ ಮಕ್ಕಳನ್ನು ಕೊಂಡೊಯ್ಯಿರಿ. ಚಿತ್ರಗಳು ಕಣ್ಮುಂದಿರಲು ಪ್ರದರ್ಶನ ಸ್ಥಳ ಅಥವಾ ಫೈಲ್ ನೀಡಿ ಚಿತ್ರಗಳ ರಕ್ಷಿಸಿಕೊಂಡು, ಆಗಾಗ್ಗೆ ಚಿತ್ರಕಲೆಯಲ್ಲಿ ಮಕ್ಕಳ ಪ್ರಗತಿಯನ್ನು ಕಂಡು ಸಂಭ್ರಮಿಸುತ್ತಿರಿ. 

ಅತ್ಯಂತ ಉತ್ಸಾಹದಿಂದ ಮಗು ತಾನು ಬರೆದ ಚಿತ್ರವನ್ನು ತೋರಿಸಲು ಬಂದಾಗ "ಗುಡ್ ವರ್ಕ್" ಎಂದು ಬಾಯ್ಮಾತಿಗೆ ಹೇಳಿ ಮುಗಿಸಬೇಡಿ. ಒಂದೆರಡು ನಿಮಿಷ ಮಕ್ಕಳ ಚಿತ್ರದಲ್ಲಿನ ರೇಖೆಗಳು, ಶೇಡಿಂಗ್ಗಳು, ಬಳಸಿದ ಬಣ್ಣಗಳು, ಐಚ್ಛಿಕ ವಿಷಯಗಳನ್ನು ಗಮನಿಸಿ, ಅವರ ಪ್ರಯತ್ನವನ್ನು, ಮುಗಿಸಲು ತೆಗೆದುಕೊಂಡ ಸಮಯ ಮತ್ತು ತಾಳ್ಮೆಯನ್ನು ಪ್ರಶಂಶಿಸಿ. "ನಾನು ಗಮನಿಸಿದ ಹಾಗೆ..", "... ನಂಗೆ ಕಾಣಿಸ್ತಿದೆ", "..ಕಷ್ಟಪಟ್ಟು ಎಳೆದಿರಬಹುದು ನೀನು ಇಷ್ಟು ನೇರವಾದ ಗೆರೆಗಳನ್ನು.." ಇತ್ಯಾದಿ ಧನಾತ್ಮಕ ಪದಗಳ ಬಳಕೆ ಆತ್ಮವಿಶ್ವಾಸ ಹೆಚ್ಚಿಸುತ್ತದೆ. 

ಮಕ್ಕಳ ಚಿತ್ರಕಲಾಸಕ್ತಿ ಸಕ್ರಿಯವಾಗಿದ್ದರೆ, ಚಿತ್ರಕಲೆಯಲ್ಲಿ ಹೊಸಪ್ರಕಾರಗಳನ್ನು ತೋರಿಸಿ. ಅವರ ಗ್ರಹಿಕೆಗೆ ಪೂರಕವಾಗಿ, ಸೌಮ್ಯವರ್ಣಗಳು, ಪ್ರಖರವರ್ಣಗಳು, ಪಾರದರ್ಶಕ ವರ್ಣಗಳ ಕುರಿತಾಗಿ, ಮೂರ್ತ ಅಮೂರ್ತ ಚಿತ್ರಗಳ ಕುರಿತಾಗಿ, ನಿಸರ್ಗದಲ್ಲಿ ಕಾಣಸಿಗುವ ದಿನನಿತ್ಯದ ಸುಂದರ ದೃಶ್ಯಗಳನ್ನೇ ಉದಾಹರಿಸಬಹದು. ಆಸಕ್ತಿ ಅವಿರತವಾಗಿದ್ದರೆ ಸರಿಯಾದ ಮಾರ್ಗದರ್ಶಕರು, ಸಮಾನ ಮನಸ್ಕರರ ಸಂಗಕ್ಕೆ ಅವಕಾಶ ಕಲ್ಪಿಸಿಕೊಡಿ. ಪರೋಕ್ಷ ಬೆಂಬಲವಾಗಿ ಮಕ್ಕಳೊಡನೆ ಆಗೀಗ ನಾವೂ ಕೂಡ ಕುಳಿತು ಗೀಚುತ್ತಿದ್ದರೆ ಕೌಟುಂಬಿಕ ಬಾಂಧವ್ಯ ಬೆಳೆಯುತ್ತದೆ.  

ಕೊನೆಯಲ್ಲಿ, ಚಿತ್ರಕಲೆ ಮಕ್ಕಳಿಗೆ ಇಷ್ಟವಾಗಬೇಕು. ಬಲವಂತದಿಂದ ಇತರರೆದುರು ತುಲನೆಗಾಗಿ ಅವರ ಹವ್ಯಾಸವಾಗಬಾರದು. ನಮ್ಮ ಉನ್ನತ ನಿರೀಕ್ಷೆ ಮಕ್ಕಳಿಗೆ ಒತ್ತಡವನ್ನುಂಟುಮಾಡಬಾರದು.

ಸೋಮವಾರ, ಜುಲೈ 10, 2023

ಮನೆಯಾಗಲಿ ಮೊದಲ ಗ್ರಂಥಾಲಯ



"ಅಮ್ಮಾ, ಒಂದು ಪ್ಲಾನ್ ಮಾಡನ, ನನ್ನ ಹತ್ರ ಇರ ಪುಸ್ತಕ ನಾನು ಮೌಲ್ಯನಿಗೆ ಕೊಡ್ತಿ, ಅವಳತ್ರ ಇರೋ ಪುಸ್ತಕ ನಾನು ಇಸ್ಕತ್ತಿ. ಅವಾಗ ಇಬ್ರು ಮನೇಲೂ ರಾಶಿ ದುಡ್ಡು ಕೊಟ್ಟು ಅದೇ ಬುಕ್ ತಗಳದು ಬ್ಯಾಡ ಮತ್ತೆ ಇಬ್ರಿಗೂ ತುಂಬಾ ಬುಕ್ಸ್ ಓದಕ್ಕೆ ಸಿಗ್ತು.."  ಎಂದು ೯ ವರ್ಷಕ್ಕೆ ಮಗಳು ಹೇಳಿದ್ದಾಗ, ಅವಳ ಪುಸ್ತಕ ಓದುವ ಹಂಬಲ ಮತ್ತು ಕಥೆಪುಸ್ತಕಗಳ ಪೂರೈಕೆಯ ಕುರಿತು ಹೊಸತೊಂದು ಆಲೋಚನೆ ಬಂದಿತು. ಅದುವೆ ಮನೆಯಲ್ಲಿಯೇ ಮಕ್ಕಳ ಲೈಬ್ರರಿ ಮಾಡುವುದು! 

ಹಿಂದಿನ ಕಾಲದಲ್ಲಿ ಸಮಯ ಕಳೆಯಲು ಪುಸ್ತಕ ಓದುವುದು ಒಂದೊಳ್ಳೆಯ ವಿಷಯವಾಗಿತ್ತು. ಆಗೆಲ್ಲ ಫಕ್ರು ಡಿಂಗ ಬೇತಾಳನ ಸೋಲಿಸುವ ವಿಕ್ರಮ ಎಲ್ಲರೂ ಸೂಪರ್ ಹೀರೋಗಳ, ಕತೆ ಕಾದಂಬರಿಗಳ ಚರ್ಚಾಕೂಟ ನಡೆಯುತ್ತಿತ್ತು. ಈಗ ಓದಿನ ಗೀಳಿರುವವರು ಬೆರಳಣಿಕೆಯಷ್ಟು ಮಾತ್ರ.  ಹೊತ್ತು ಕಳೆಯಲು, ಜ್ಞಾನ ಪಡೆಯಲು ಈಗಿರುವ ಮೊಬೈಲ್ ಸಾಧನಗಳು, ಅಂತರ್ಜಾಲ ಹಾಗೂ ಸಾಮಾಜಿಕ ಮಾಧ್ಯಮಗಳೀಗ ಓದಲು ವಿನಿಯೋಗಿಸುತ್ತಿದ್ದ ಸಮಯವನ್ನು ಕಸಿದುಕೊಂಡಿದೆ. ಬೇಕಾದಾಗ ಅನಿಮೇಟೆಡ್ ಫಿಲ್ಮ್ಗಳು ಸಿಗುವುದಕ್ಕಾಗಿ, ಮ್ಯಾಗಜೀನ್ ಬಂದಿತಾ ಎಂಬ ಹಪಹಾಪಿ ಮಕ್ಕಳಲ್ಲಿ ಅಪರೂಪ. ಹಿಂದೆ ನಾವೆಲ್ಲಾ ಒದ್ದಾಡಿ, ಕಾದು, ಕಡ ತೆಗೆದುಕೊಂಡು ಪುಸ್ತಕ ಓದಿದಷ್ಟು ಸಾಹಸ ಈಗಿನ ಹೆಚ್ಚಿನವುಕ್ಕಿಲ್ಲ. ಮಕ್ಕಳ ಹೊಂವರ್ಕ್ ಮಾಡಿಸಿ ಟೀವಿ ಕೊಟ್ಟು ಕೂರಿಸುವ ಬದುಕು ಎಲ್ಲರಿಗೂ ಹಿತವಾಗಿರುತ್ತದೆ. ಶೈಕ್ಷಣಿಕ ಫಲಿತಾಂಶ ಮುಖ್ಯ ಇತರ ಪುಸ್ತಗಳಿಗೆ ಸಮಯವಿಲ್ಲ ಎಂಬುದು ಕೆಲವರ ನಿಲುವಾದರೆ, "ಅವನಿಗೆ ಇಂಟರೆಸ್ಟೇ ಇಲ್ಲ" ಎಂದು ದೂರುವವರು ಹಲವಾರು. ಮನೆಯಲ್ಲಿ ಓದುಗರು ಇಲ್ಲದೇ  ಮಕ್ಕಳಿಗೆ 'ಪುಸ್ತಕಗಳನ್ನು ಓದುವುದು ಒಂದು ಸುಂದರ ಅನುಭೂತಿ' ಎಂಬುದನ್ನು ಮಕ್ಕಳಿಗೆ  ತೋರಿಸುವುದಾದರೂ ಹೇಗೆ?   


ಪಠ್ಯ ಪುಸ್ತಕಗಳ ಹೊರತಾಗಿ ಇತರ ಪುಸ್ತಕಗಳು ಏಕೆ ಬೇಕು?

ಪುಸ್ತಕಗಳು ಜ್ಞಾನ ಮತ್ತು ಭಾವನೆಗಳ ಕೊಂಡಿ. ಪುರಾಣಕಥೆಗಳು ಐತಿಹಾಸಿಕ ನಾಟಕ, ಜಾನಪದ, ಯೋಗ, ಚಿತ್ರಕಲೆ, ಜೀವನಚರಿತ್ರೆ, ಅನುವಾದ ಮುಂತಾದ ಸಾಹಿತ್ಯ ಪ್ರಕಾರಗಳ ಓದು ನಮ್ಮ ಮನಸ್ಸಿನ ಮೇಲೆ ಆಳವಾದ ಪ್ರಭಾವ ಬೀರುವುದರಿಂದ, ನಮ್ಮ ಸಂಸ್ಕೃತಿ ಮತ್ತು ಪದ್ದತಿಗಳ ಪರಿಚಯ ನಮಗೆ ಸಿಗುತ್ತದೆ. ಪುಸ್ತಕಗಳು ಮಕ್ಕಳ ಭಾಷಾ ಜ್ಞಾನ, ಆತ್ಮವಿಶ್ವಾಸ ಮತ್ತು ಸಂವಹನ ಶಕ್ತಿಯನ್ನು ಹೆಚ್ಚಿಸುತ್ತವೆ.  ಕಷ್ಟ-ಸುಖ, ಪ್ರೀತಿ,ಭಯ, ವೈಮನಸ್ಯ ಹೀಗೆ ಜೀವನದ ಭಾವಗಾಗಿರುವ ಪ್ರತಿಯೊಂದು ಸಣ್ಣ ವಿಷಯಗಳ ಬಗ್ಗೆಯೂ ಪುಸ್ತಕಗಳಿಂದ ತಿಳಿಯಬಹುದಾದ್ದರಿಂದ ಅವುಗಳಿಂದ ಮಕ್ಕಳಿಗೆ ಜೀವನ ಮೌಲ್ಯಗಳ ಕಲಿಕೆ ದೊರೆಯುವುದರ ಜೊತೆಯಲ್ಲಿ,ಅವರ ಒತ್ತಡರಹಿತ ಧನಾತ್ಮಕ ವ್ಯಕ್ತಿತ್ವಕ್ಕೂ ಸಹಕಾರಿ. ಸ್ಕ್ರೀನ್ ಆಧಾರಿತ ಹವ್ಯಾಸಗಳಿಗಿಂತ ಪುಸ್ತಕದ ಓದು ಕಣ್ಣಿನ ಆರೋಗ್ಯಕ್ಕೆ ಉತ್ತಮ. ಮಕ್ಕಳು ಯಾವ ಪುಸ್ತಕ ಓದುತ್ತಿದ್ದಾರೆ ಗಮನಿಸಿಕೊಂಡು, ಕೆಲದಿನಗಳ ಕಾಲ ಆ ಪುಸ್ತಕದ ಕುರಿತಾಗಿ ಆಗಾಗ್ಗೆ ಮಾತನಾಡಿಸುತ್ತಾ ಇದ್ದರೆ, ಮಕ್ಕಳಿಗೆ ಪುಸ್ತಕದ ಸಾಹಿತ್ಯ ಮನನವಾಗುತ್ತದೆ. ಇದೇ ಮಾದರಿ ಮುಂದಕ್ಕೆ ಶೈಕ್ಷಣಿಕ ಓದುವಿಕೆಗೂ ಆಸಕ್ತಿ ನೀಡುತ್ತದೆ. 

ಮಕ್ಕಳಿಗೆ ಪುಸ್ತಕಗಳನ್ನು ಓದುವ ಹವ್ಯಾಸ ಹಚ್ಚುವುದು ಹೇಗೆ? 

ಮಕ್ಕಳಲ್ಲಿ ಓದುವ ಹವ್ಯಾಸಕ್ಕೆ ಪೋಷಕರ ಪ್ರೋತ್ಸಾಹ ಮಹತ್ವವಾದುದ್ದು. ಪುಸ್ತಕಗಳನ್ನು ನಾವು ಓದದೇ ಮಕ್ಕಳಿಗೆ ಓದಿ ಎನ್ನುವುದು ಬಲವಂತವಾಗುತ್ತದೆ. 

ಚಿಕ್ಕ ಮಕ್ಕಳು ಪುಸ್ತಕಗಳನ್ನು ಹರಿಯುತ್ತಾರರೆಂದು ಎತ್ತಿಡದೇ, ಮಾರ್ಗದರ್ಶಕ ನೀಡಬೇಕು. ಜಾಗದ ಅಭಾವ ಇದ್ದರೆ, ವಾರಕ್ಕೊಮ್ಮೆ ೪-೫ ಪುಸ್ತಕಗಳನ್ನು ಬದಲಿಸಿ ಎದುರಿಗಿಟ್ಟರೆ ಮಕ್ಕಳಲ್ಲಿ ಓದುವ ಕ್ರಿಯೆ ನಿರಂತರವಾಗುತ್ತದೆ. 

ಕಲರ್ಫುಲ್ ಚಿತ್ರಗಳಿರುವ, ದೊಡ್ಡಕ್ಷರದ ಪುಸ್ತಕಗಳು ಮಕ್ಕಳನ್ನು ಆಕರ್ಷಿಸುತ್ತವೆ.  ಅದರ ಕುರಿತು ಚರ್ಚೆ, ಸಣ್ಣಪುಟ್ಟ ಚಿತ್ರಕಲೆ , ರಸಪ್ರಶ್ನೆ, ಆಶುಭಾಷಣ ಇತ್ಯಾದಿ ಸುಂದರ ಚಟುವಟಿಕೆಗಳನ್ನು ಚಪ್ಪಾಳೆಯೊಂದಿಗೆ ನಡೆಸಿದರೆ, ಮಕ್ಕಳಿಗೆ ಅದೊಂದು ಒಳ್ಳೆಯ ಸ್ಟ್ರೆಸ್ ಬರ್ಸ್ಟರ್.  

ಪುಸ್ತಕದ ಬಗ್ಗೆ ಮಗು ತನ್ನನುಭವ ಹೇಳುವಾಗ ತಪ್ಪಾದರೆ ಹೀಯಾಳಿಸದೆ, ಅವರ ಭಾಷಾ ಪ್ರಯತ್ನವನ್ನು ಪ್ರಶಂಸಶಿಸಿ. 

ನಮ್ಮಆಸಕ್ತಿಯ ಪುಸ್ತಕಗಳೇ ಮಕ್ಕಳ ಆಯ್ಕೆಯಾಗಿರಬೇಕು ಎಂಬ ಹಠ ಬೇಡ. ಮಕ್ಕಳ ಆಸಕ್ತಿಗೆ ಗೌರವವಿರಲಿ. ಗೆಳೆಯರೊಡನೆ ಪುಸ್ತಕಗಳ ಹಂಚಿಕೆಯನ್ನು ಪ್ರೋತ್ಸಾಹಿಸಿ.  

ಪುಸ್ತಕ ಎರವಲು, ಸಾರ್ವಜನಿಕ ಗ್ರಂಥಾಲಯಗಳ ಪುಸ್ತಕಗಳ ಬಳಕೆಯಲ್ಲಿ ಮಕ್ಕಳೊಂದಿಗೆ ಶಿಸ್ತು ಸಂಯಮಕ್ಕೆ ನಮ್ಮ ಗಮನಿಸುವಿಕೆ ಅತ್ಯಗತ್ಯ. 

ಮಕ್ಕಳಿಗೆ ಕಥೆಗಳನ್ನು ಓದಿ ಹೇಳುವುದು, ಗಾದೆ ಮಾತುಗಳ ಬಳಕೆ, ಆಗಾಗ ವಚನಗಳ ಪಠಣೆ, ಪುಸ್ತಕದಲ್ಲಿನ ಪದ್ಯವನ್ನು ರಾಗವಾಗಿ ಹಾಡುವುದು ಹೀಗೆ ಮಕ್ಕಳೆದುರು ಪುಸ್ತಕದ ಬಳಕೆಯನ್ನು ನಾವು ರೂಢಿ ಮಾಡಿದಲ್ಲಿ, ಮಕ್ಕಳಿಗೆ ಓದಿನ ಗೀಳು, ಊಟದಷ್ಟೇ ಸಹಜವೆನಿಸುತ್ತದೆ. 

ದಿನಪತ್ರಿಕೆ, ಮ್ಯಾಗಜೀನ್ ಗಳೆಡೆಗೆ ಮಕ್ಕಳು ಮೊದಲಿಗೆ ಆಸಕ್ತಿ ತೋರದಿದ್ದರೂ ಅವರೆದುರು ತಾಳ್ಮೆಯಿಂದ ಕೂತು ಸುದ್ದಿಗಳನ್ನು ಓದಿ, ಅವರ ವಯಸ್ಸಿಗನುಗುಣವಾಗಿ ಪದಬಂಧ ತುಂಬಲು, ಚಿತ್ರಗಳಿಗೆ ಬಣ್ಣ ತುಂಬಲು  ಕರೆದುಕೊಂಡರೆ, ಮುಂದಕ್ಕೆ ಸ್ವಅಧ್ಯಯನ ರೂಡಿಸಿಕೊಳ್ಳುತ್ತಾರೆ. 

ನನ್ನ ಮಗಳು ಕಥೆಪುಸ್ತಕಗಳನ್ನು ಹಿಡಿದರೆ ಜಗವ ಮರೆಯುತ್ತಾಳೆ. ಆದರೂ ಮಾಡುವ ಪ್ರಸಂಗ ಇವರುಗಳಿಗಿಲ್ಲ. ಆದಾಗಿಯೂ ಕಂಡ ಕಂಡ ಕಡೆ ಪುಸ್ತಕಗಳ ಖರೀದಿ ನಮ್ಮ ಮನೆಯ ಕಪಾಟು ತುಂಬಲಾರಂಭಿಸಿದಾಗ ಮಗಳದ್ದೇ ಉಪಾಯ 'ಎಲ್ಲರ ಪುಸ್ತಕ ಲೈಬ್ರರಿ'. ಶುರುವಿನಲ್ಲಿ ನಮ್ಮ ಪ್ರಯತ್ನಕ್ಕೆ ಸಿಕ್ಕ ಬೆಂಬಲ ಅತೀ ಕಡಿಮೆ.  ಸಮಾನಮನಸ್ಕರರ ಹುಡುಕಿಕೊಂಡ ಮೇಲೆ ನಮ್ಮ ಮನೆಯ ಪುಸ್ತಕ ಲೈಬ್ರರಿ ಕ್ರಮೇಣ ಮುಂದುವರೆಯುತ್ತ ಬರುತ್ತಿದೆ. ನಾವು ಪೋಷಕರಿಗೂ ಪುಸ್ತಕ ಹಂಚಿಕೆ ಎನ್ನುವುದು ಹೊಸ ಸ್ನೇಹ ಮತ್ತು ಸಂತೋಷವನ್ನು ನೀಡಿದೆ. ಶಾಲೆಯ ಲೈಬ್ರರಿ ಪುಸ್ತಕಗಳ ಎರವಲು ಮಗಳ ಓದಿಗೆ ಈಗ ಮತ್ತಷ್ಟು ಪ್ರೋತ್ಸಾಹ ನೀಡಿದೆ.

#ವಿಶ್ವವಾಣಿ #ಪ್ರಕಟಿತ