ಮಂಗಳವಾರ, ಜುಲೈ 11, 2023

ಮಕ್ಕಳಿಗೆ ಚಿತ್ರಕಲೆ ಏಕೆ ಮುಖ್ಯ?


ಚಿತ್ರಕಲೆ ಒಂದು ವಿಶ್ವ ಭಾಷೆ. ಎಲ್ಲ ಜಾತಿ, ಧರ್ಮ, ಲಿಂಗ, ವಯಸ್ಸಿನ ಬೇಧವಿಲ್ಲದೆ ಎಲ್ಲರನ್ನೂ ಸೆಳೆದುಕೊಳ್ಳುವ ಭಾಷೆಯಿದು. ಅದರಲ್ಲೂ ಮುಖ್ಯವಾಗಿ ಮಕ್ಕಳು ಅತ್ಯಂತ ಸಹಜವಾಗಿಯೇ ತಮ್ಮನ್ನು ತಾವೇ ತೊಡಗಿಸಿಕೊಳ್ಳಬಹುದಾದಂತಹ ಚಟುವಟಿಕೆಯಿದು. ಚಿತ್ರಕಲೆಗಳಲ್ಲಿ ಆಸಕ್ತಿಯಿಲ್ಲ ನಮ್ಮ ಮಗುವಿಗೆ ಎನ್ನುವ ಪೋಷಕರಿಗಾಗಿ ಇಂದಿನ ಈ ಲೇಖನ. 


ಕಲೆ ಎಂದರೆ ವಿಶಿಷ್ಟವಾದ ಚಟುವಟಿಕೆ ಮತ್ತು ಚಿತ್ರಕಲೆ ಎಂದರೆ, ಚಿತ್ರಗಳ ಮೂಲಕ ಆ ಭಾವವನ್ನು ಬಿಂಬಿಸುವ ಪ್ರಯತ್ನ ಎಂದರ್ಥ. ಮನುಷ್ಯನಾಗಿ ರೂಪಿತವಾಗುತ್ತಿರುವ ಹಂತದಲ್ಲೇ, ಗುಹೆಗಳ ಮೇಲೆ ಚಿತ್ರಗಳ ಕೆತ್ತನೆ ಮಾಡುತ್ತ ಆನಂದವನ್ನು ಕಾಣುತ್ತಿದ್ದ ನಮ್ಮ ಪೂರ್ವಿಕರ ಇತಿಹಾಸವಿದೆ. ಪ್ರತಿ  ಮಗುವಿನಲ್ಲೂ ಹುಟ್ಟಿನಿಂದಲೇ ಕಲಾಜ್ಞಾನ ಇರುತ್ತದೆ. ಅದಕ್ಕೆ ಪೆನ್ಸಿಲ್ಲು, ಕುಂಚ-ಬಣ್ಣಗಳ ಬಳಕೆಯೇ ಆಗಿರಬೇಕೆಂದಿಲ್ಲ. ನೈಜತೆಗೆ ಹತ್ತಿರುವಾಗುವಂತಹ ಚಿತ್ರಗಳು ಬರೆದರೆ ಮಾತ್ರ ಅದು ಚಿತ್ರಕಲೆಯಲ್ಲ. ಅಮ್ಮ ಆರಿಸುವ ಅಕ್ಕಿಯ ಬಟ್ಟಲಲ್ಲಿ ಮಗು ಬೆರಳಿನಿಂದ ಗುಂಡನೆಯ ಸೂರ್ಯನನ್ನು ಯೋಚಿಸಿಕೈಯಾಡುತ್ತದೆ. ಆಡುವ ಮಣ್ಣಿನಲ್ಲಿ, ಕೋಲಿನಿಂದ ಕೋಳಿ ಬರೆದಿರುತ್ತಾರೆ ನಮ್ಮ ಮಕ್ಕಳು. "ಛೀ! ಮಣ್ಣಾಡಬೇಡ", "ನೀರು ಪೋಲು ಮಾಡ್ತೀಯ", "ಕೊಡಿಲ್ಲಿ ಅಕ್ಕಿ ಹಾಳು ಮಾಡ್ತೀಯ ನೀನು" ಎಂಬಿತ್ಯಾದಿ ಸ್ವಚ್ಛತೆಯೆಡೆಗಿನ ಪೂರ್ವನಿರ್ಧಾರಿತ ಮಾತುಗಳು, ಆ ಸಮಯಕ್ಕೆ ಎಳೆಗೂಸುಗಳ ಚಿತ್ರ ಬಿಡಿಸುವ ಕಲೆಯನ್ನೂ ಹಿಂದಕ್ಕಟ್ಟಿಬಿಡುತ್ತದೆ. "ಡ್ರಾಯಿಂಗ್ ಮಾಡೋದು ಹೆಣ್ಮಕ್ಳು, ನೀನೋಗಿ ಕ್ರಿಕೆಟ್ ಆಡು" ಎನ್ನುವ 'ನಮ್ಮ ಅಭಿಪ್ರಾಯ' ಗಂಡು ಮಕ್ಕಳಲ್ಲಿನ ಚಿತ್ರಕಲೆಯ ಕ್ರಿಯಾಶೀಲತೆಯ ಅಲ್ಲಿಯೇ ಕುಂದುತ್ತದೆ. ಪಠ್ಯಪುಸ್ತಕಗಳಷ್ಟೇ 'ಜ್ಞಾನ'  ಎಂದು ನಂಬಿರುವ ಕೆಲವು ಪಾಲಕರು, ಮಕ್ಕಳ ಶೈಕ್ಷಣಿಕ ವಿದ್ಯಾಭ್ಯಾಸದ ಒತ್ತಡಕ್ಕೆ, ಮಾರ್ಕ್ಸ್ಕಾರ್ಡ್ ತುಂಬಾ ಮಾರ್ಕ್ಸ್ ತುಂಬುವ ಆಸೆಯಿಂದ, "ಸ್ಟೂಡೆಂಟ್ ನೀನು, ಓದೋದು ಬಿಟ್ಟು ಚಿತ್ರ ಬರಿತ ಕೂರ್ತಿಯ, ಇದೇನು ನಿನಗೆ ತಿನ್ನಕ್ಕೆ ಅನ್ನ ಕೊಡುತ್ತ? ಓದಿ ಸಂಬಳ ಬರೋ ಕೆಲಸ ಹಿಡಿಬೇಕು" ಎಂದು ಹೀಯಾಳಿಸುತ್ತಾರೆ. ಒತ್ತಡವನ್ನು ನಿಭಾಯಿಸಲು ಸಹಾಯ ಮಾಡುವಂತಹ ಚಿತ್ರಕಲೆಯನ್ನೇ 'ಅಪ್ರಯೋಜಕ' ಎಂದು ಮಕ್ಕಳಿಗೆ ಹೇಳಿಕೊಡುವವರು ನಾವೇ!


ಚಿತ್ರಕಲೆಗಳಿಂದ ಪ್ರಯೋಜನವೇನು?

ಎಳೆ ಮಕ್ಕಳಲ್ಲಿ ಕಣ್ಣು ಮತ್ತು ಕೈಗಳ ಹೊಂದಾಣಿಕೆ, ಚಲನಾ ಕೌಶಲ್ಯತೆ ವೃದ್ಧಿಸುತ್ತದೆ. ಅಕ್ಷರಗಳ ಕಲಿಕೆಗೆ ಇದು ಅತ್ಯಂತ ಸಹಾಯಕ. 

ಬೇಜಾರು ಕಳೆಯಲು, ಗ್ಯಾಡ್ಗೆಟ್ ಮೊರೆ ಹೋಗುವುದಕ್ಕಿಂತ ಇದು ಆರೋಗ್ಯಕ್ಕೆ ಅತ್ಯಂತ ಉಪಕಾರಿ

ಚಿತ್ರಕಲೆ ಮಾಡುವುದರಿಂದ ಆಕಾರಗಳು, ಜಾಗ ಹೊಂದಾಣಿಕೆ, ಬಣ್ಣಗಳ ಹೊಂದಾಣಿಕೆ ಇತ್ಯಾದಿಗಳಿಗಾಗಿ ಮಕ್ಕಳಲ್ಲಿ ಗಮನಿಸುವಿಕೆ, ಸಮಸ್ಯೆ ಪರಿಹರಿಸುವ ಬಗೆ, ಕ್ರಿಯಾತ್ಮಕತೆ ಇತ್ಯಾದಿ ಕೌಶಲ್ಯಗಳು ಕರಗತವಾಗುತ್ತದೆ. 

ಎಲ್ಲಿಯೋ ನಡೆದ  ಘಟನೆ, ಕಂಡ ಚಿತ್ರದ ನೆನಪು, ಎದುರಿಗಿರುವ ವಸ್ತುಗಳ ಆಕಾರ ಗಮನಿಸಿ ಬರೆಯುವುದು ಹೀಗೆ ಮೆದುಳಿನ ಸಂವಹನೆ ಸತತವಾಗಿ ನಡೆಯುವುದರಿಂದ, ಮಕ್ಕಳಲ್ಲಿ ಕಂಡದ್ದನ್ನು ನೆನಪಿಡುವ ಸ್ಮರಣ ಶಕ್ತಿ,  ಆತ್ಮವಿಶ್ವಾಸ, ದೃಶ್ಯ ಗ್ರಹಿಕಾ ಶಕ್ತಿ ಹೆಚ್ಚುತ್ತದೆ. 

ಹತಾಶೆ, ಬೇಸರ, ಕೋಪ, ಅತಿಯಾದ ಸಂತೋಷ ಹೀಗೆ ಭಾವನೆಗಳನ್ನು ವ್ಯಕ್ತಪಡಿಸಿ ತಮಗೆ ತಾವೇ ಸಮಾಧಾನವಾಗಲು ಮಕ್ಕಳು ಗೀಚುವುದುಂಟು, ಅತ್ಯಂತ ಸಹಜ ಮತ್ತು ಸುರಕ್ಷಿತ 'ಮಕ್ಕಳ ಭಾಷೆ'ಯಿದು. ಚಿತ್ರಗಳು ಮಕ್ಕಳ ಮನಸ್ಸನ್ನು ಅರ್ಥಮಾಡಿಕೊಳ್ಳಲು ನಮಗೆ ಸಹಾಯ ಮಾಡುತ್ತವೆ, ಸ್ವಲ್ಪ ಗಮನಿಸಿ, ಮಕ್ಕಳಿಗೆ ಬೇಕಾದ ಪ್ರೀತಿ, ಧೈರ್ಯ ಮತ್ತು ಬೆಂಬಲ ನೀಡಿದರೆ ಮಗುವಿನ ಬೌದ್ಧಿಕ ಬೆಳವಣಿಗೆಗೆ ಸಹಕಾರಿ. 

ಮಕ್ಕಳು ತಮ್ಮದೇ ಆಲೋಚನೆಯ ಕಥೆಯನ್ನು ಕಲ್ಪಿಸಿ ಚಿತ್ರಿಸಿ ನಮಗೆ ತಂದು ತೋರಿಸುವುದುಂಟು. ಮಕ್ಕಳ ಈ ಸ್ವಂತಿಕೆ ಮತ್ತು ಕಲ್ಪನಾಶಕ್ತಿ ಮುಂದಕ್ಕೆ ಅವರಿಗೆ ವಿಜ್ಞಾನ, ತಂತ್ರಜ್ಞಾನ, ಗಣಿತ, ಕ್ರಿಯಾತ್ಮಕ ಬರವಣಿಗೆ, ಇಂಜಿನಿಯರಿಂಗ್ ಕಲಿಯುವ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ.  


ಮಕ್ಕಳಲ್ಲಿ ಚಿತ್ರಕಲೆ ಬೆಂಬಲಿಸುವುದು ಹೇಗೆ?

ಕನಿಷ್ಠ ಕಲಾ ಸಾಮಗ್ರಿ ಒದಗಿಸಿಕೊಡಿ. ಮಕ್ಕಳಿಗೆ ನೀಡುವ  ಕಥೆ ಪುಸ್ತಕಗಳಲ್ಲಿ ಹೆಚ್ಚೆಚ್ಚು ಚಿತ್ರಗಳಿರಲಿ. ಒಂದಷ್ಟು ವಿಫಲ ಪ್ರಯತ್ನಗಳಿಗೆ ಬೈಯಬೇಡಿ. ಬಿದ್ದು ಬಿದ್ದೇ ಸೈಕಲ್ ಕಲಿತಿದ್ದಲ್ಲವೇ ನಾವೆಲ್ಲಾ?

ಮಕ್ಕಳ ಸಹಜ ಚಿತ್ರಕಲೆಗಳನ್ನು "ಚೆನ್ನಾಗಿಲ್ಲ, ಸರಿ ಬರ್ದಿಲ್ಲ, ಶೇಡಿಂಗ್ ಮಾಡಬೇಕು ಸರಿಯಾಗಿ" ಇತ್ಯಾದಿಯಾಗಿ ಹೀಯಾಳಿಸಬೇಡಿ. "ಅವನ್ನೋಡು ಎಷ್ಟು ಚೆನ್ನಾಗಿ ಬರ್ದಿದ್ದಾನೆ" ಎನ್ನುವ ಹೋಲಿಕೆಯೂ ಬೇಡ. ಮಕ್ಕಳು ತಮ್ಮ ಸಾಮರ್ಥ್ಯಕ್ಕೆ ತಕ್ಕಂತೆ, ತಮ್ಮ ಕಲ್ಪನೆಗೆ ತಕ್ಕಂತೆ ಚಿತ್ರಿಸಿರುತ್ತಾರೆ. ಸಾಂಪ್ರದಾಯಿಕ ಚಿತ್ರ ಶೈಲಿಗಳನ್ನು ಹೊರತುಪಡಿಸಿ, ಚಿತ್ರಗಳು ಅತ್ಯಂತ ಸುಂದರವಾಗಿ, ನೈಜತೆಗೆ ಹತ್ತಿರವಾಗಿರಲೇ ಬೇಕೆಂಬ ನಿಯಮವಿಲ್ಲ.

ಮಕ್ಕಳ ಚಿತ್ರದ ವಿಷಯ ತಿಳಿಯದೆ ಕೇವಲ ಊಹೆ ಮಾಡಬೇಡಿ. ಅರ್ಥವಾಗದಿದ್ದರೂ, ಆ ಚಿತ್ರದ ಬಗ್ಗೆ ಸ್ವಲ್ಪ ವಿವರಣೆ ಕೇಳಿ. ಏಕೆಂದರೆ ಮಕ್ಕಳು ಬರೆದ ಪ್ರಾಣಿಯ ಚಿತ್ರವನ್ನು ನಾವು ವಾಹನ ಎಂದುಕೊಂಡು ಕೇಳಿದರೆ, ಅವರಿಗೆ ತಮ್ಮ ಚಿತ್ರದ ಕುರಿತಾಗಿ ಆತ್ಮವಿಶ್ವಾಸ ಕುಗ್ಗುತ್ತದೆ. ತಿಳಿಯದಿದ್ದ ಪಕ್ಷದಲ್ಲಿ ಒಂದು ನಗು, ಬೆನ್ನು ತಟ್ಟುವುದು, ಹೈ-ಫೈ ಕೈ ಕುಲುಕುವುದು ಕೂಡ ಆತ್ಮೀಯತೆ ತೋರಿಸುತ್ತದೆ. 

ಮಕ್ಕಳ ಚಿತ್ರಕಲೆಗಳನ್ನು ಪೋಷಿಸಿ. ಚಿತ್ರ ಪ್ರದರ್ಶನಗಳಿಗೆ ಮಕ್ಕಳನ್ನು ಕೊಂಡೊಯ್ಯಿರಿ. ಚಿತ್ರಗಳು ಕಣ್ಮುಂದಿರಲು ಪ್ರದರ್ಶನ ಸ್ಥಳ ಅಥವಾ ಫೈಲ್ ನೀಡಿ ಚಿತ್ರಗಳ ರಕ್ಷಿಸಿಕೊಂಡು, ಆಗಾಗ್ಗೆ ಚಿತ್ರಕಲೆಯಲ್ಲಿ ಮಕ್ಕಳ ಪ್ರಗತಿಯನ್ನು ಕಂಡು ಸಂಭ್ರಮಿಸುತ್ತಿರಿ. 

ಅತ್ಯಂತ ಉತ್ಸಾಹದಿಂದ ಮಗು ತಾನು ಬರೆದ ಚಿತ್ರವನ್ನು ತೋರಿಸಲು ಬಂದಾಗ "ಗುಡ್ ವರ್ಕ್" ಎಂದು ಬಾಯ್ಮಾತಿಗೆ ಹೇಳಿ ಮುಗಿಸಬೇಡಿ. ಒಂದೆರಡು ನಿಮಿಷ ಮಕ್ಕಳ ಚಿತ್ರದಲ್ಲಿನ ರೇಖೆಗಳು, ಶೇಡಿಂಗ್ಗಳು, ಬಳಸಿದ ಬಣ್ಣಗಳು, ಐಚ್ಛಿಕ ವಿಷಯಗಳನ್ನು ಗಮನಿಸಿ, ಅವರ ಪ್ರಯತ್ನವನ್ನು, ಮುಗಿಸಲು ತೆಗೆದುಕೊಂಡ ಸಮಯ ಮತ್ತು ತಾಳ್ಮೆಯನ್ನು ಪ್ರಶಂಶಿಸಿ. "ನಾನು ಗಮನಿಸಿದ ಹಾಗೆ..", "... ನಂಗೆ ಕಾಣಿಸ್ತಿದೆ", "..ಕಷ್ಟಪಟ್ಟು ಎಳೆದಿರಬಹುದು ನೀನು ಇಷ್ಟು ನೇರವಾದ ಗೆರೆಗಳನ್ನು.." ಇತ್ಯಾದಿ ಧನಾತ್ಮಕ ಪದಗಳ ಬಳಕೆ ಆತ್ಮವಿಶ್ವಾಸ ಹೆಚ್ಚಿಸುತ್ತದೆ. 

ಮಕ್ಕಳ ಚಿತ್ರಕಲಾಸಕ್ತಿ ಸಕ್ರಿಯವಾಗಿದ್ದರೆ, ಚಿತ್ರಕಲೆಯಲ್ಲಿ ಹೊಸಪ್ರಕಾರಗಳನ್ನು ತೋರಿಸಿ. ಅವರ ಗ್ರಹಿಕೆಗೆ ಪೂರಕವಾಗಿ, ಸೌಮ್ಯವರ್ಣಗಳು, ಪ್ರಖರವರ್ಣಗಳು, ಪಾರದರ್ಶಕ ವರ್ಣಗಳ ಕುರಿತಾಗಿ, ಮೂರ್ತ ಅಮೂರ್ತ ಚಿತ್ರಗಳ ಕುರಿತಾಗಿ, ನಿಸರ್ಗದಲ್ಲಿ ಕಾಣಸಿಗುವ ದಿನನಿತ್ಯದ ಸುಂದರ ದೃಶ್ಯಗಳನ್ನೇ ಉದಾಹರಿಸಬಹದು. ಆಸಕ್ತಿ ಅವಿರತವಾಗಿದ್ದರೆ ಸರಿಯಾದ ಮಾರ್ಗದರ್ಶಕರು, ಸಮಾನ ಮನಸ್ಕರರ ಸಂಗಕ್ಕೆ ಅವಕಾಶ ಕಲ್ಪಿಸಿಕೊಡಿ. ಪರೋಕ್ಷ ಬೆಂಬಲವಾಗಿ ಮಕ್ಕಳೊಡನೆ ಆಗೀಗ ನಾವೂ ಕೂಡ ಕುಳಿತು ಗೀಚುತ್ತಿದ್ದರೆ ಕೌಟುಂಬಿಕ ಬಾಂಧವ್ಯ ಬೆಳೆಯುತ್ತದೆ.  

ಕೊನೆಯಲ್ಲಿ, ಚಿತ್ರಕಲೆ ಮಕ್ಕಳಿಗೆ ಇಷ್ಟವಾಗಬೇಕು. ಬಲವಂತದಿಂದ ಇತರರೆದುರು ತುಲನೆಗಾಗಿ ಅವರ ಹವ್ಯಾಸವಾಗಬಾರದು. ನಮ್ಮ ಉನ್ನತ ನಿರೀಕ್ಷೆ ಮಕ್ಕಳಿಗೆ ಒತ್ತಡವನ್ನುಂಟುಮಾಡಬಾರದು.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ