ಮನೆಯಾಗಲಿ ಮೊದಲ ಗ್ರಂಥಾಲಯ
"ಅಮ್ಮಾ, ಒಂದು ಪ್ಲಾನ್ ಮಾಡನ, ನನ್ನ ಹತ್ರ ಇರ ಪುಸ್ತಕ ನಾನು ಮೌಲ್ಯನಿಗೆ ಕೊಡ್ತಿ, ಅವಳತ್ರ ಇರೋ ಪುಸ್ತಕ ನಾನು ಇಸ್ಕತ್ತಿ. ಅವಾಗ ಇಬ್ರು ಮನೇಲೂ ರಾಶಿ ದುಡ್ಡು ಕೊಟ್ಟು ಅದೇ ಬುಕ್ ತಗಳದು ಬ್ಯಾಡ ಮತ್ತೆ ಇಬ್ರಿಗೂ ತುಂಬಾ ಬುಕ್ಸ್ ಓದಕ್ಕೆ ಸಿಗ್ತು.." ಎಂದು ೯ ವರ್ಷಕ್ಕೆ ಮಗಳು ಹೇಳಿದ್ದಾಗ, ಅವಳ ಪುಸ್ತಕ ಓದುವ ಹಂಬಲ ಮತ್ತು ಕಥೆಪುಸ್ತಕಗಳ ಪೂರೈಕೆಯ ಕುರಿತು ಹೊಸತೊಂದು ಆಲೋಚನೆ ಬಂದಿತು. ಅದುವೆ ಮನೆಯಲ್ಲಿಯೇ ಮಕ್ಕಳ ಲೈಬ್ರರಿ ಮಾಡುವುದು!
ಹಿಂದಿನ ಕಾಲದಲ್ಲಿ ಸಮಯ ಕಳೆಯಲು ಪುಸ್ತಕ ಓದುವುದು ಒಂದೊಳ್ಳೆಯ ವಿಷಯವಾಗಿತ್ತು. ಆಗೆಲ್ಲ ಫಕ್ರು ಡಿಂಗ ಬೇತಾಳನ ಸೋಲಿಸುವ ವಿಕ್ರಮ ಎಲ್ಲರೂ ಸೂಪರ್ ಹೀರೋಗಳ, ಕತೆ ಕಾದಂಬರಿಗಳ ಚರ್ಚಾಕೂಟ ನಡೆಯುತ್ತಿತ್ತು. ಈಗ ಓದಿನ ಗೀಳಿರುವವರು ಬೆರಳಣಿಕೆಯಷ್ಟು ಮಾತ್ರ. ಹೊತ್ತು ಕಳೆಯಲು, ಜ್ಞಾನ ಪಡೆಯಲು ಈಗಿರುವ ಮೊಬೈಲ್ ಸಾಧನಗಳು, ಅಂತರ್ಜಾಲ ಹಾಗೂ ಸಾಮಾಜಿಕ ಮಾಧ್ಯಮಗಳೀಗ ಓದಲು ವಿನಿಯೋಗಿಸುತ್ತಿದ್ದ ಸಮಯವನ್ನು ಕಸಿದುಕೊಂಡಿದೆ. ಬೇಕಾದಾಗ ಅನಿಮೇಟೆಡ್ ಫಿಲ್ಮ್ಗಳು ಸಿಗುವುದಕ್ಕಾಗಿ, ಮ್ಯಾಗಜೀನ್ ಬಂದಿತಾ ಎಂಬ ಹಪಹಾಪಿ ಮಕ್ಕಳಲ್ಲಿ ಅಪರೂಪ. ಹಿಂದೆ ನಾವೆಲ್ಲಾ ಒದ್ದಾಡಿ, ಕಾದು, ಕಡ ತೆಗೆದುಕೊಂಡು ಪುಸ್ತಕ ಓದಿದಷ್ಟು ಸಾಹಸ ಈಗಿನ ಹೆಚ್ಚಿನವುಕ್ಕಿಲ್ಲ. ಮಕ್ಕಳ ಹೊಂವರ್ಕ್ ಮಾಡಿಸಿ ಟೀವಿ ಕೊಟ್ಟು ಕೂರಿಸುವ ಬದುಕು ಎಲ್ಲರಿಗೂ ಹಿತವಾಗಿರುತ್ತದೆ. ಶೈಕ್ಷಣಿಕ ಫಲಿತಾಂಶ ಮುಖ್ಯ ಇತರ ಪುಸ್ತಗಳಿಗೆ ಸಮಯವಿಲ್ಲ ಎಂಬುದು ಕೆಲವರ ನಿಲುವಾದರೆ, "ಅವನಿಗೆ ಇಂಟರೆಸ್ಟೇ ಇಲ್ಲ" ಎಂದು ದೂರುವವರು ಹಲವಾರು. ಮನೆಯಲ್ಲಿ ಓದುಗರು ಇಲ್ಲದೇ ಮಕ್ಕಳಿಗೆ 'ಪುಸ್ತಕಗಳನ್ನು ಓದುವುದು ಒಂದು ಸುಂದರ ಅನುಭೂತಿ' ಎಂಬುದನ್ನು ಮಕ್ಕಳಿಗೆ ತೋರಿಸುವುದಾದರೂ ಹೇಗೆ?
ಪಠ್ಯ ಪುಸ್ತಕಗಳ ಹೊರತಾಗಿ ಇತರ ಪುಸ್ತಕಗಳು ಏಕೆ ಬೇಕು?
ಪುಸ್ತಕಗಳು ಜ್ಞಾನ ಮತ್ತು ಭಾವನೆಗಳ ಕೊಂಡಿ. ಪುರಾಣಕಥೆಗಳು ಐತಿಹಾಸಿಕ ನಾಟಕ, ಜಾನಪದ, ಯೋಗ, ಚಿತ್ರಕಲೆ, ಜೀವನಚರಿತ್ರೆ, ಅನುವಾದ ಮುಂತಾದ ಸಾಹಿತ್ಯ ಪ್ರಕಾರಗಳ ಓದು ನಮ್ಮ ಮನಸ್ಸಿನ ಮೇಲೆ ಆಳವಾದ ಪ್ರಭಾವ ಬೀರುವುದರಿಂದ, ನಮ್ಮ ಸಂಸ್ಕೃತಿ ಮತ್ತು ಪದ್ದತಿಗಳ ಪರಿಚಯ ನಮಗೆ ಸಿಗುತ್ತದೆ. ಪುಸ್ತಕಗಳು ಮಕ್ಕಳ ಭಾಷಾ ಜ್ಞಾನ, ಆತ್ಮವಿಶ್ವಾಸ ಮತ್ತು ಸಂವಹನ ಶಕ್ತಿಯನ್ನು ಹೆಚ್ಚಿಸುತ್ತವೆ. ಕಷ್ಟ-ಸುಖ, ಪ್ರೀತಿ,ಭಯ, ವೈಮನಸ್ಯ ಹೀಗೆ ಜೀವನದ ಭಾವಗಾಗಿರುವ ಪ್ರತಿಯೊಂದು ಸಣ್ಣ ವಿಷಯಗಳ ಬಗ್ಗೆಯೂ ಪುಸ್ತಕಗಳಿಂದ ತಿಳಿಯಬಹುದಾದ್ದರಿಂದ ಅವುಗಳಿಂದ ಮಕ್ಕಳಿಗೆ ಜೀವನ ಮೌಲ್ಯಗಳ ಕಲಿಕೆ ದೊರೆಯುವುದರ ಜೊತೆಯಲ್ಲಿ,ಅವರ ಒತ್ತಡರಹಿತ ಧನಾತ್ಮಕ ವ್ಯಕ್ತಿತ್ವಕ್ಕೂ ಸಹಕಾರಿ. ಸ್ಕ್ರೀನ್ ಆಧಾರಿತ ಹವ್ಯಾಸಗಳಿಗಿಂತ ಪುಸ್ತಕದ ಓದು ಕಣ್ಣಿನ ಆರೋಗ್ಯಕ್ಕೆ ಉತ್ತಮ. ಮಕ್ಕಳು ಯಾವ ಪುಸ್ತಕ ಓದುತ್ತಿದ್ದಾರೆ ಗಮನಿಸಿಕೊಂಡು, ಕೆಲದಿನಗಳ ಕಾಲ ಆ ಪುಸ್ತಕದ ಕುರಿತಾಗಿ ಆಗಾಗ್ಗೆ ಮಾತನಾಡಿಸುತ್ತಾ ಇದ್ದರೆ, ಮಕ್ಕಳಿಗೆ ಪುಸ್ತಕದ ಸಾಹಿತ್ಯ ಮನನವಾಗುತ್ತದೆ. ಇದೇ ಮಾದರಿ ಮುಂದಕ್ಕೆ ಶೈಕ್ಷಣಿಕ ಓದುವಿಕೆಗೂ ಆಸಕ್ತಿ ನೀಡುತ್ತದೆ.
ಮಕ್ಕಳಿಗೆ ಪುಸ್ತಕಗಳನ್ನು ಓದುವ ಹವ್ಯಾಸ ಹಚ್ಚುವುದು ಹೇಗೆ?
ಮಕ್ಕಳಲ್ಲಿ ಓದುವ ಹವ್ಯಾಸಕ್ಕೆ ಪೋಷಕರ ಪ್ರೋತ್ಸಾಹ ಮಹತ್ವವಾದುದ್ದು. ಪುಸ್ತಕಗಳನ್ನು ನಾವು ಓದದೇ ಮಕ್ಕಳಿಗೆ ಓದಿ ಎನ್ನುವುದು ಬಲವಂತವಾಗುತ್ತದೆ.
ಚಿಕ್ಕ ಮಕ್ಕಳು ಪುಸ್ತಕಗಳನ್ನು ಹರಿಯುತ್ತಾರರೆಂದು ಎತ್ತಿಡದೇ, ಮಾರ್ಗದರ್ಶಕ ನೀಡಬೇಕು. ಜಾಗದ ಅಭಾವ ಇದ್ದರೆ, ವಾರಕ್ಕೊಮ್ಮೆ ೪-೫ ಪುಸ್ತಕಗಳನ್ನು ಬದಲಿಸಿ ಎದುರಿಗಿಟ್ಟರೆ ಮಕ್ಕಳಲ್ಲಿ ಓದುವ ಕ್ರಿಯೆ ನಿರಂತರವಾಗುತ್ತದೆ.
ಕಲರ್ಫುಲ್ ಚಿತ್ರಗಳಿರುವ, ದೊಡ್ಡಕ್ಷರದ ಪುಸ್ತಕಗಳು ಮಕ್ಕಳನ್ನು ಆಕರ್ಷಿಸುತ್ತವೆ. ಅದರ ಕುರಿತು ಚರ್ಚೆ, ಸಣ್ಣಪುಟ್ಟ ಚಿತ್ರಕಲೆ , ರಸಪ್ರಶ್ನೆ, ಆಶುಭಾಷಣ ಇತ್ಯಾದಿ ಸುಂದರ ಚಟುವಟಿಕೆಗಳನ್ನು ಚಪ್ಪಾಳೆಯೊಂದಿಗೆ ನಡೆಸಿದರೆ, ಮಕ್ಕಳಿಗೆ ಅದೊಂದು ಒಳ್ಳೆಯ ಸ್ಟ್ರೆಸ್ ಬರ್ಸ್ಟರ್.
ಪುಸ್ತಕದ ಬಗ್ಗೆ ಮಗು ತನ್ನನುಭವ ಹೇಳುವಾಗ ತಪ್ಪಾದರೆ ಹೀಯಾಳಿಸದೆ, ಅವರ ಭಾಷಾ ಪ್ರಯತ್ನವನ್ನು ಪ್ರಶಂಸಶಿಸಿ.
ನಮ್ಮಆಸಕ್ತಿಯ ಪುಸ್ತಕಗಳೇ ಮಕ್ಕಳ ಆಯ್ಕೆಯಾಗಿರಬೇಕು ಎಂಬ ಹಠ ಬೇಡ. ಮಕ್ಕಳ ಆಸಕ್ತಿಗೆ ಗೌರವವಿರಲಿ. ಗೆಳೆಯರೊಡನೆ ಪುಸ್ತಕಗಳ ಹಂಚಿಕೆಯನ್ನು ಪ್ರೋತ್ಸಾಹಿಸಿ.
ಪುಸ್ತಕ ಎರವಲು, ಸಾರ್ವಜನಿಕ ಗ್ರಂಥಾಲಯಗಳ ಪುಸ್ತಕಗಳ ಬಳಕೆಯಲ್ಲಿ ಮಕ್ಕಳೊಂದಿಗೆ ಶಿಸ್ತು ಸಂಯಮಕ್ಕೆ ನಮ್ಮ ಗಮನಿಸುವಿಕೆ ಅತ್ಯಗತ್ಯ.
ಮಕ್ಕಳಿಗೆ ಕಥೆಗಳನ್ನು ಓದಿ ಹೇಳುವುದು, ಗಾದೆ ಮಾತುಗಳ ಬಳಕೆ, ಆಗಾಗ ವಚನಗಳ ಪಠಣೆ, ಪುಸ್ತಕದಲ್ಲಿನ ಪದ್ಯವನ್ನು ರಾಗವಾಗಿ ಹಾಡುವುದು ಹೀಗೆ ಮಕ್ಕಳೆದುರು ಪುಸ್ತಕದ ಬಳಕೆಯನ್ನು ನಾವು ರೂಢಿ ಮಾಡಿದಲ್ಲಿ, ಮಕ್ಕಳಿಗೆ ಓದಿನ ಗೀಳು, ಊಟದಷ್ಟೇ ಸಹಜವೆನಿಸುತ್ತದೆ.
ದಿನಪತ್ರಿಕೆ, ಮ್ಯಾಗಜೀನ್ ಗಳೆಡೆಗೆ ಮಕ್ಕಳು ಮೊದಲಿಗೆ ಆಸಕ್ತಿ ತೋರದಿದ್ದರೂ ಅವರೆದುರು ತಾಳ್ಮೆಯಿಂದ ಕೂತು ಸುದ್ದಿಗಳನ್ನು ಓದಿ, ಅವರ ವಯಸ್ಸಿಗನುಗುಣವಾಗಿ ಪದಬಂಧ ತುಂಬಲು, ಚಿತ್ರಗಳಿಗೆ ಬಣ್ಣ ತುಂಬಲು ಕರೆದುಕೊಂಡರೆ, ಮುಂದಕ್ಕೆ ಸ್ವಅಧ್ಯಯನ ರೂಡಿಸಿಕೊಳ್ಳುತ್ತಾರೆ.
ನನ್ನ ಮಗಳು ಕಥೆಪುಸ್ತಕಗಳನ್ನು ಹಿಡಿದರೆ ಜಗವ ಮರೆಯುತ್ತಾಳೆ. ಆದರೂ ಮಾಡುವ ಪ್ರಸಂಗ ಇವರುಗಳಿಗಿಲ್ಲ. ಆದಾಗಿಯೂ ಕಂಡ ಕಂಡ ಕಡೆ ಪುಸ್ತಕಗಳ ಖರೀದಿ ನಮ್ಮ ಮನೆಯ ಕಪಾಟು ತುಂಬಲಾರಂಭಿಸಿದಾಗ ಮಗಳದ್ದೇ ಉಪಾಯ 'ಎಲ್ಲರ ಪುಸ್ತಕ ಲೈಬ್ರರಿ'. ಶುರುವಿನಲ್ಲಿ ನಮ್ಮ ಪ್ರಯತ್ನಕ್ಕೆ ಸಿಕ್ಕ ಬೆಂಬಲ ಅತೀ ಕಡಿಮೆ. ಸಮಾನಮನಸ್ಕರರ ಹುಡುಕಿಕೊಂಡ ಮೇಲೆ ನಮ್ಮ ಮನೆಯ ಪುಸ್ತಕ ಲೈಬ್ರರಿ ಕ್ರಮೇಣ ಮುಂದುವರೆಯುತ್ತ ಬರುತ್ತಿದೆ. ನಾವು ಪೋಷಕರಿಗೂ ಪುಸ್ತಕ ಹಂಚಿಕೆ ಎನ್ನುವುದು ಹೊಸ ಸ್ನೇಹ ಮತ್ತು ಸಂತೋಷವನ್ನು ನೀಡಿದೆ. ಶಾಲೆಯ ಲೈಬ್ರರಿ ಪುಸ್ತಕಗಳ ಎರವಲು ಮಗಳ ಓದಿಗೆ ಈಗ ಮತ್ತಷ್ಟು ಪ್ರೋತ್ಸಾಹ ನೀಡಿದೆ.
#ವಿಶ್ವವಾಣಿ #ಪ್ರಕಟಿತ
ಕಾಮೆಂಟ್ಗಳು
ಕಾಮೆಂಟ್ ಪೋಸ್ಟ್ ಮಾಡಿ