ಪ್ಲೇಟು ಲೋಟ ಸುದ್ದಿ!

ಆರ್ಟ್ ವರ್ಕ್ ಕೆಲಸಕ್ಕಾಗಿ ಗೆಳತಿಯ ಮನೆಗೆ ಹೋಗಿದ್ದೆ. ಅವರದ್ದು ಒಂದು ಲೇಔಟಿನಲ್ಲಿ ಸ್ವಂತ ಮನೆ. ಅಲ್ಲಿ ಸುಮಾರು ೧೨೦೦ ಕ್ಕೂ ಹೆಚ್ಚು ಮನೆಗಳಿವೆ. ಅಲ್ಲಿಗೊಂದು ದೇವಸ್ಥಾನ. ಧಾರ್ಮಿಕ ಕಾರ್ಯಕ್ರಮಗಳು ನಡೆಸುವುದರ ಜೊತೆಗೆ ದಾನಿಗಳ ಕೊಡುಗೆಗಳಿಂದ ಪ್ರತೀ ಶನಿವಾರ ಮಧ್ಯಾಹ್ನ ಒಂದು ೨೫೦ ಮಂದಿಗೆ ಊಟಕ್ಕೆ ಅವಕಾಶವಾಗುವಂತೆ ಅನ್ನ ಸಂತರ್ಪಣೆ ಕೂಡ ನಡೆಯುತ್ತದೆ. ಪ್ರತೀ ಶನಿವಾರ! ಯಾರಾದರೂ ಬಂದು ಪ್ರಸಾದ ಸ್ವೀಕರಿಸಬಹುದು. ನಿನ್ನೆ ಹನುಮ ಜಯಂತಿ. ನಮ್ಮದೂ ಕೂಡ ಒಂದು ಭೇಟಿ ನಿಕ್ಕಿಯಾಗಿತ್ತು. ಅಲ್ಲಿಯ ಅನ್ನ ಸಂತರ್ಪಣೆ ವ್ಯವಸ್ಥೆ ನೋಡಿದೆ. ಸ್ಟೀಲ್ ತಟ್ಟೆಗಳಲ್ಲಿ ಊಟ ವಿತರಣೆ. ಮಕ್ಕಳಿಗೆ ತುಸು ಚಿಕ್ಕ ಪ್ಲೇಟ್. ಕೈಯಲ್ಲಿ ಹಿಡಿದರೆ ಭಾರವಾಗದಿರಲೆಂದು. ಉಳಿದದ್ದೆಲ್ಲ ದೊಡ್ಡ ತಟ್ಟೆಗಳು. ದೇವಸ್ಥಾನದ ಪಕ್ಕದಲ್ಲಿಯೇ ತಟ್ಟೆಗಳನ್ನು ತೊಳೆದು ಬುಟ್ಟಿಯೊಂದಕ್ಕೆ ಹಾಕುವ ವ್ಯವಸ್ಥೆ. ತಟ್ಟೆ ತೊಳೆಯುವುದು ನಮ್ಮ ಕರ್ತವ್ಯವಾಗಿರಬೇಕು. ಕೆಲವರು ತಟ್ಟೆಯನ್ನು ಶಿಸ್ತಿನಿಂದ ತೊಳೆಯಬಹುದು. ಕೆಲವರು ಅದರಲ್ಲಿಯೂ ಮಕ್ಕಳಿಗೆ ಸರಿಯಾಗಿ ತೊಳೆಯಲು ಬಾರದೆ ಇರಬಹುದು. ಅದಕ್ಕೂ ವ್ಯವಸ್ಥೆ ಇದೆ. ಮಹಿಳೆಯೊಬ್ಬಳು ಆ ಬುಟ್ಟಿಯಲ್ಲಿರುವ ತಟ್ಟೆಯನ್ನು ಇನ್ನೊಮ್ಮೆ ಚೆನ್ನಾಗಿ ತೊಳೆದು ಕೊಡುತ್ತಾಳೆ. ಪಾತ್ರೆ ತೊಳೆದ ನೀರೆಲ್ಲ ವ್ಯವಸ್ಥಿತವಾಗಿ ಉದ್ಯಾನವನದ ಗಿಡಗಂಟೆಗಳಿಗೆ ಮರುಬಳಕೆಗೆ. ಹೆಚ್ಚು ನಿವಾಸಿಗಳು ಇರುವ ಇಂತಹ ಸ್ಥಳಗಲ್ಲಿ ಹಂಚಿಕೊಂಡಾಗ ಹೆಚ್ಚೇನೂ ಖರ್ಚು ಬರುವುದಿಲ್ಲ ಎಂದೂ ಅಲ್ಲಿ ಕೇಳಿ ತಿಳಿದೆ. ಬೇಕಾಗಿರುವುದು ಒಳ್ಳೆಯ ಮನಸ್ಸು ಮಾತ್ರ! ಪ್ರತೀ ಶನಿವಾರ ೨೫೦ ಜನರ ಊಟಕ್ಕೆ ತಟ್ಟೆಗೆ ಪೇಪರ್ ಪ್ಲೇಟ್ ಬಳಕೆ ಮಾಡಿದ್ದಾಗಿದ್ದಲ್ಲಿ ಅದೆಷ್ಟು ಮಾಲಿನ್ಯ ಉತ್ಪತ್ತಿ ಆಗುತ್ತಿತ್ತು ಎಂಬ ಯೋಚನೆ ಬಂದು, ಇವರ ವ್ಯವಸ್ಥೆ ಅತ್ಯಂತ ಮೆಚ್ಚುಗೆ ಆಯಿತು. ಶುದ್ಧ ಕುಡಿಯುವ ನೀರಿನ ಕ್ಯಾನು ಮತ್ತು ಲೋಟ ಒಂದೆಡೆ ಇತ್ತು. ಬಂದವರೆಲ್ಲ ಸರತಿಯಲ್ಲಿ ಬಳಕೆ ಮಾಡುತ್ತಿದ್ದರು. ನೀರಿನ ಬಾಟಲಿ ತಂದುಕೊಂಡು ತುಂಬಿಕೊಂಡು ಕುಡಿಯುತ್ತಿದ್ದರು. ಯಾರು ಇದೆಲ್ಲ ವ್ಯವಸ್ಥೆ ಮಾಡಿದ್ದಾರೆ ಎಂದು ವಿಚಾರಿಸಿದೆ. ನಿವಾಸಿಗಳೆಲ್ಲರೂ ವರ್ಷದ ಪ್ರಾರಂಭದಲ್ಲಿಯೇ ಒಂದಷ್ಟು ಹಣ ಸಹಾಯ ಮಾಡಿ ಒಟ್ಟುಗೂಡಿದ ಹಣದಿಂದ ಸ್ಟೀಲ್ ತಟ್ಟೆಗಳ ಖರೀದಿ ಮಾಡಿದ್ದಾರಂತೆ..

ನಮ್ಮಲ್ಲಿ ಅನೇಕರು ಈ ರೀತಿಯ ನಿವಾಸಗಳ ವ್ಯವಸ್ಥೆ ಹೊಂದಿರುತ್ತೇವೆ. ಟೌನ್ಶಿಪ್ ಅಥವಾ ಹೆಚ್ಚು ಮನೆಗಳಿರುವ ಅಪಾರ್ಟ್ಮೆಂಟ್ಗಳಲ್ಲಿ, ಅನೇಕ ವಿಷಯಗಳಿಗೆ ಒಂದಷ್ಟು ಸಾಮೂಹಿಕನಿಯಮಗಳನ್ನು ಮಾಡಿಕೊಂಡು ಶಿಸ್ತನ್ನು ಕಾಪಾಡಿಕೊಂಡಿರುತ್ತಾರೆ. ಅದರಲ್ಲಿ ಒಂದು ಯೋಜನೆ ಇದನ್ನೂ ಮಾಡಬಹುದು. ಈ ರೀತಿಯಾಗಿ ಸ್ಟೀಲ್ ತಟ್ಟೆ ಮತ್ತು ಲೋಟಗಳ ಎಲ್ಲರೂ ತುಸು ಖರ್ಚು ಹಾಕಿಕೊಂಡು ಖರೀದಿ ಮಾಡಿ ಒಂದು ಬ್ಯಾನ್ಕ್ ಮಾಡಿಟ್ಟುಕೊಂಡರೆ, ಯಾರ ಮನೆಯಲ್ಲಾದರೂ ಕಾರ್ಯಕ್ರಮಗಳು ನಡೆದರೆ, ಅವುಗಳ ಬಳಕೆ ಮಾಡಿ, ತೊಳೆದು ಸ್ವಚ್ಛಗೊಳಿಸಿ ವಾಪಸು ಎತ್ತಿಡಬಹುದು. ಪೇಪರ್ ಕಪ್ಸ್ ಪೇಪರ್ ಪ್ಲೇಟ್ಸ್ ಗಳನ್ನು ಬಳಸಿ ಬಿಸಾಡುವುದಕ್ಕಿಂತ ಇದು ಎಷ್ಟೋ ಉತ್ತಮ.


ಇಲ್ಲಪ್ಪ, ನಾನಿರುವುದು ಒಂಟಿ ಮನೆ, ಬಾಡಿಗೆ ಮನೆ, ಈ ರೀತಿಯಾಗಿ ಯಾರು ಸಹಕಾರ ನೀಡಲು ಗುಂಪಿಲ್ಲ ಎಂದಾದರೆ, ನಗರಗಳಲ್ಲಿ ಈಗೆಲ್ಲ ತಟ್ಟೆ ಲೋಟಗಳ ಬ್ಯಾಂಕ್ ತಯಾರಾಗುತ್ತಿದೆ. ನಮಗೆ ಬೇಕಾದಷ್ಟು ತಟ್ಟೆ ಲೋಟಗಳ ತರಿಸಿಕೊಂಡು ಬಳಸಿ, ತೊಳೆದು ವಾಪಸು ಕೊಡಬಹುದು. ವ್ಯವಸ್ಥೆಗಾಗಿ ತುಸು ಬಾಡಿಗೆ ಕಟ್ಟಿದರೆ ಸರಿ. ಗೆಳತಿ ಪ್ರತಿಭಾ ಕೂಡ ಇತ್ತೀಚಿಗೆ ತಮ್ಮ ಮನೆಯಲ್ಲಿ ನಡೆದ ಕೌಟುಂಬಿಕ ಕಾರ್ಯಕ್ರಮವೊಂದಕ್ಕೆ ೫೦ ಪ್ಲೇಟು ಲೋಟಗಳನ್ನು ಬಾಡಿಗೆಗೆ ತರಿಸಿಕೊಂಡು ಬಳಸಿ ಸ್ವಚ್ಛಗೊಳಿಸಿ ವಾಪಸು ನೀಡಿದ್ದನ್ನು ಕಂಡಿದ್ದೆ.
ಒಂದು ಚೂರು ಕಾಳಜಿ, ಒಂದು ಚೂರು ಹಣದ ವ್ಯವಸ್ಥೆ, ಒಂದಷ್ಟು ಇತರೊಂದಿಗೆ ಹೊಂದಿಕೊಳ್ಳುವ ಭಾವನೆ ಇದ್ದರೆ ಸಾಕು, ನಾವು ಬದುಕುವ ಭೂಮಿ, ಮುಂದೆ ಮಕ್ಕಳಿಗೆ ನೀಡುವ ಭೂಮಿಯನ್ನ ನಮ್ಮ ಕೈಲಿ ಸಾಧ್ಯವಾದಷ್ಟರ ಮಟ್ಟಿಗೆ ಪ್ಲಾಸ್ಟಿಕ್ ಮುಕ್ತವನ್ನಾಗಿಸಬಹುದು. ಏನಂತೀರಾ? ಒಂಚೂರು ಟ್ರೈ ಮಾಡೋಣ್ವಾ?

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಶೈಕ್ಷಣಿಕ ಪ್ರವಾಸಗಳ ಮಹತ್ವ

ಶರಣರ ಸಾವು ಮರಣದಲಿ ಕಾಣು

ಪ್ಲಾಸ್ಟಿಕ್ ಫ್ರೀ ಜುಲೈ ಕ್ಯಾಲೆಂಡರ್