ಶುಕ್ರವಾರ, ಅಕ್ಟೋಬರ್ 30, 2015

ಬಾಯಲ್ಲಿ ಬ್ರಮ್ಹಾಂಡ

               ಸಾನ್ವಿಯ ಆಗಮನದಿಂದ ನಮ್ಮ ಕುಟುಂಬದಲ್ಲಿ ಸಹಜವಾಗಿಯೇ ಅತೀವ ಸಂತೋಷ ಆವರಿಸಿತ್ತು.. ೫ ತಿಂಗಳಷ್ಟರಲ್ಲಿ ಅವಳು ಕೈ ಬಾಯಿಯ ಸಂಪರ್ಕದ ನಿಯಂತ್ರಣ ಪಡೆಯುವಲ್ಲಿ ಸಫಲಳಾಗಿ, ಕೈಗೆ ಸಿಗುವ ಪ್ರತಿಯೊಂದು ವಸ್ತುವನ್ನು ಬಾಯಿಗೆ ಹಾಕಿಕೊಳ್ಳುವ ಅಭ್ಯಾಸ ಪ್ರಾರಂಭಸಿದ್ದಳು. ಯಾವ ಸಮಯದಲ್ಲಿ ಏನನ್ನು ಬಾಯಿಗೆ ಹಾಕಿಕೊಳ್ಳುತ್ತಾಳೆ ಎಂದು ಜಾಗರೂಕರಾಗಿ ನಾವು ಅವಳನ್ನು ಕಾಯ್ದುಕೊಳ್ಳಬೇಕಾಗುತ್ತಿತ್ತು. ತನ್ನಿಷ್ಟದ ಮೇಲು ಹೊದಿಕೆ, ತನ್ನ ಕೈ, ಕಾಲು, ಬಾಗಿಲ ಹೊಸ್ತಿಲು, ಆಟಿಕೆಗಳು, ಚಾಪೆ, ಮೊಬೈಲ್, ಬಾಚಣಿಗೆ, ಊಟದ ತಟ್ಟೆ, ಕೊನೆಗೆ ದೇವರ ಕೋಣೆಯಲ್ಲಿರುವ ಹೂವನ್ನು ಕೂಡ ಬಿಡುತ್ತಿರಲಿಲ್ಲ. ಎಲ್ಲವೂ ಬಾಯಿಯ ಸಂಪರ್ಕಕ್ಕೆ ಹೋಗುತ್ತಿತ್ತು. ಇದರ ಜೊತೆಗೆ, ಸದಾ ಬಾಯಿಯಿಂದ ಸುರಿಯುವ ಜೊಲ್ಲು. ಕೆಲವರೆಂದರು ಮಗುವಿಗೆ ದೃಷ್ಟಿಯಾಗಿರಬಹುದು ಎಂದು, ಇನ್ಯಾರೋ ಮಗುವಿಗೆ ತುಟಿಗೆ ಮುತ್ತು ಕೊಟ್ಟಿದ್ದರೆ ಈ ತರಹದ ಕ್ರಿಯೆ ಇರುತ್ತದೆ ಎಂದು ಅಭಿಪ್ರಾಯ ಪಟ್ಟರು,  ಹಲ್ಲು ಬರುವಾಗ ಈ ತರಹದ ಸಮಸ್ಯೆಯಾಗುತ್ತದೆ ಎಂದು ಕೆಲವರು ತಿಳಿಸಿದರು. ಜೊಲ್ಲು ಬರುವುದು ಕಮ್ಮಿಯಾಗಲು ತುಟಿಗೆ ತುಪ್ಪ ಅಥವಾ ಬೆಣ್ಣೆ ಸವರಿ ಬಿಡಿ ಎಂದು ಮತ್ತೊಬ್ಬ ಆಪ್ತರು ಸಲಹೆ ಕೊಟ್ಟರು, ಹೀಗೆ ಹಲವು ಓಹಪೊಹೆಗಳ ನಡುವೆಯೂ ಮಗಳು ಸಾನ್ವಿಯ ಕೈ ಬಾಯಿ ಕೆಲಸ ಮಾತ್ರ ಎಡೆಬಿಡದೆ ನಡೆದೇ ಇತ್ತು...!! ಏನಿರಬಹುದು ಅಷ್ಟು ಕೌತುಕ ಅವಳಿಗೆ, ಎಂದು ನನಗೆ ಕುತೂಹಲ ಹೆಚ್ಚಾಗಿ, ಈ ತರಹದ ಮಕ್ಕಳ ಪ್ರಕ್ರಿಯೆ ಬಗ್ಗೆ  ಸಹಜವಾಗಿಯೇ ತಿಳಿಯ ಪ್ರಯತ್ನ ಪಟ್ಟಾಗಲೇ ಗೊತ್ತಾಗಿದ್ದು ಆ ಪುಟ್ಟ ಬಾಯಲ್ಲಿಯ ಬ್ರಮ್ಹಾಂಡದ ವಿಚಾರ!!! ನಾನು ತಿಳಿದುಕೊಂಡದ್ದನ್ನು ನಿಮ್ಮೊಡನೆ ಹಂಚಿಕೊಳ್ಳುತ್ತಿದ್ದೇನೆ, ಓದಿ ನೋಡಿ...



              ನಾವೆಲ್ಲರೂ ಗಮನಿಸುವ ಹಾಗೆ ಚಿಕ್ಕ ಮಕ್ಕಳು ಸಿಕ್ಕ ಸಿಕ್ಕ ವಸ್ತುಗಳನ್ನು ಬಾಯಿಗೆ ಹಾಕುವ ರೂಢಿ ಹೊಂದಿರುತ್ತಾರೆ. ಅದರಲ್ಲೂ, ೩ ತಿಂಗಳಿನ ಶಿಶುವಾಗಿನ ವಯಸ್ಸಿನಿಂದ ಬಹಳವಾಗಿ ೩ ವರ್ಷದ ಮಕ್ಕಳವರೆಗೂ ಈ ತರಹದ ಕಾರ್ಯಾಚರಣೆ ಕಂಡು ಬರುತ್ತದೆ. ಕೇವಲ ಹಾಲು ಹಲ್ಲುಗಳು ಮೂಡುವ ಸಮಯದಲ್ಲಿ ಮಾತ್ರ ಈ ರೀತಿಯಾಗಿ ಮಕ್ಕಳು ಮಾಡುತ್ತಾರೆ ಎಂದೇನಿಲ್ಲ. ಇದೊಂದು ಮಕ್ಕಳ ಅತ್ಯಂತ ಸಹಜ ಪ್ರಕ್ರಿಯೆ. ಜೊತೆಗೆ ಅದು ಮಗುವಿನ ಪ್ರಪಂಚ ಜ್ಞಾನದ ಅನ್ವೇಷಣೆಯ ಸಂಕೇತ. ಸಾಮಾನ್ಯವಾಗಿ ಮಕ್ಕಳು ತಮ್ಮ ಸುತ್ತಮುತ್ತಲಿನ ಪ್ರಾಪಂಚಿಕ ಅನುಭವವನ್ನು ವಿಧವಿಧವಾದ ತರದಲ್ಲಿ ತಿಳಿಯಲು ಪ್ರಯತ್ನಿಸುತ್ತಾರೆ. ಉದಾಹರಣೆಗೆ, ನೋಡುವುದು, ಆಲೈಸುವುದು, ಸ್ಪರ್ಶಿಸುವುದು, ವಾಸನೆಯ ಅನುಭವ ಮತ್ತು ರುಚಿಗಳನ್ನು ತಿಳಿಯುವ ಮೂಲಕ. ಹೀಗೆ ಅರಿಯುವ ಪ್ರಕ್ರಿಯೆಯಲ್ಲಿ, ಸ್ಪರ್ಶ ಮತ್ತು ರುಚಿಯ ಅನುಭವಕ್ಕೆ ಮಕ್ಕಳು ತಮ್ಮ ಕೈ ಮತ್ತು ಬಾಯಿಯ ಸಹಾಯ ಪಡೆಯುತ್ತಾರೆ.



             ಮಕ್ಕಳಿಗೆ ನಾಲಿಗೆಯಲ್ಲಿ ಅತ್ಯಂತ ಹೆಚ್ಚಿನ ಸಂವೇದನಾ ಶಕ್ತಿಯಿರುತ್ತದೆ. ಬಿಡಿಸಿ ಹೇಳಬೇಕೆಂದರೆ, ಮಕ್ಕಳು ಯಾವುದೇ ವಸ್ತುವನ್ನು ಬಾಯಲ್ಲಿ ಹಾಕಿದಾಗ, ಅದರ ಗಾತ್ರ, ಆಕಾರ, ರುಚಿ, ಪ್ರತಿಯೊಂದನ್ನು ನಾಲಿಗೆಯಿಂದ ಅಳೆದು ತಮ್ಮ ಮೆದುಳಿಗೆ ಸಂದೇಶವನ್ನು ಕಳಿಸಿ, ವಸ್ತುವಿನ ಬಗ್ಗೆ ಪ್ರತಿಯೊಂದು ವಿವರಗಳನ್ನೂ ದಾಖಲಿಸುತ್ತದೆ. ಹಾಗೇ ಕಲಿಯುವುದು ಮಗು.  ಇದರ ಜೊತೆಗೆ ನಾನು ಒಂದು ಕಡೆ ಓದಿ ತಿಳಿದ ಇನ್ನೊಂದು ಕುತೂಹಲಕಾರಿಯಾದ ವಿಷಯವೆಂದರೆ, ಮಕ್ಕಳು ಬಾಯಿಗೆ ಹಾಕುವ ವಸ್ತುಗಳಲ್ಲಿ ಕಣ್ಣಿಗೆ ಕಾಣಲಾಗದಷ್ಟು ಸಣ್ಣ ಬ್ಯಾಕ್ಟೀರಿಯಾ ಮತ್ತು ವೈರಸ್ ಗಳಿಗೆ ಮಕ್ಕಳು ತಮ್ಮನ್ನು ತಾವೇ ಒಡ್ಡುವುದರಿಂದ, ಅವರ ದೇಹಕ್ಕೆ ಒಂದು ರೀತಿಯ ಪ್ರತಿರೋಧ ಶಕ್ತಿ ಸಿಗುತ್ತದೆ ಎಂದು!! ಇದೇ ಕಾರಣಕ್ಕಾಗಿಯೇ ಪ್ರಾಯಶಃ ನಮ್ಮ ಹಿರಿಯರು ಹೇಳುವುದು, ಮಣ್ಣಿನಲ್ಲಿ ಆಡಿದ ಮಕ್ಕಳು, ಮತ್ತು ಕನಿಷ್ಠ ಕಾಳಜಿ ಸಿಕ್ಕಿದ ಮಕ್ಕಳು ಇವತ್ತಿನವರೆಗೂ ಗಟ್ಟಿಗರು ಎಂದು :) :)



          ಹಾಗೆಂದು ನಮ್ಮ ಸಂಪೂರ್ಣ ಕಾಳಜಿಯನ್ನು ನಾವು ತೊರೆಯಬೇಕೆಂದಲ್ಲ.... ಕೆಲವೊಂದು ವಸ್ತುಗಳು ನಮ್ಮ ಮಗುವಿಗೆ ಖಂಡಿತವಾಗಿಯೂ ಹಾನಿ ತರುವಂತದ್ದಾಗಿರಬಹುದು. ಮಕ್ಕಳಿಗೆ ತಮಗೆ ಯಾವ ವಸ್ತು ಒಳ್ಳೆಯದು ಯಾವದು ಕೆಟ್ಟದ್ದು ಎಂಬುದರ ಅರಿವಿರುವುದಿಲ್ಲ. ಉದಾಹರಣೆಗೆ, ಮಗುವು, ಕಾಲಿನ ಬೂಟನ್ನು ನೆಕ್ಕುತ್ತಿದ್ದರೆ, ನಾವು  ತಕ್ಷಣದಲ್ಲಿ "ಛೀ, ಕೊಳಕು, ಬಾಯಿಯಿಂದ ತೆಗೆದುಬಿಡು..." ಎಂದೆಲ್ಲಾ ಪ್ರತಿಕ್ರಿಯೆ ನೀಡುತ್ತೇವೆ, ಆ ಕ್ಷಣಕ್ಕೆ ಮಗು ಗಮನಿಸುವುದು ನಮ್ಮ ಮುಖ ಸಂಜ್ಞೆಯನ್ನು ಮತ್ತು ಅದಕ್ಕೆ ತಕ್ಕಂತೆ ತನಗೆ ತಾನೇ ಟ್ಯೂನ್ ಮಾಡುತ್ತಾ ಹೋಗುತ್ತದೆ, "ಛೀ! ಇದು ರುಚಿಕರವಾಗಿಲ್ಲ, ಇದರಲ್ಲಿ ಏನೋ ತೊಂದರೆ ಇದೆ" ಎಂದು....

           ಹಾಗಾಗಿಯೇ ಸ್ನೇಹಿತರೇ, ಮಗು ಬೆಳೆಯುವ ಪರಿಸರದ, ಮೂಲಭೂತ ರಕ್ಷಣೆಯ ಜವಾಬ್ದಾರಿ ತೆಗೆದುಕೊಳ್ಳಬೇಕಾದದ್ದು ನಮ್ಮ ಕರ್ತವ್ಯ. ಇವುಗಳ ಜೊತೆಗೆ, ಈ ಕೆಳಕಂಡ ಕೆಲವು ಕ್ರಮಗಳು, ನಾವು ನಮ್ಮ ಗಮನದಲ್ಲಿರಿಸೋಣ.
  • ಮಕ್ಕಳಿಗೆ ಕೈಗೆಟಕುವ ಯಾವುದೇ ವಸ್ತುವು, ಅದರ ಗಂಟಲಿಗೆ ಹೋಗಿ ಸಿಕ್ಕಿ ಹಾಕಿಕೊಳ್ಳುವಂತಿರಬಾರದು.
  • ಕೈ ಸಿಕ್ಕಿ ಹಾಕಿಕೊಳ್ಳುವ, ಹರಿತವಾದ ವಸ್ತುಗಳು, ರಾಸಾಯನಿಕ ವಸ್ತುಗಳು (ಉ.ದಾ, ನೈಲ್ ಪೋಲಿಷ್). ಈ ತರಹದ ವಸ್ತುಗಳು ಆದಷ್ಟು ಕೈಗೆಟುಕದಂತೆಯೇ ಇರಲಿ. 
  • ನಿಮ್ಮ ಮಗುವಿಗೆ, ಅಥವಾ ಬೇರೆ ಮಕ್ಕಳಿಗೆ ಸೋಂಕಿನ ಆರೋಗ್ಯ ತೊಂದರೆ ಇದ್ದಲ್ಲಿ, ಮಕ್ಕಳು ಪರಸ್ಪರ ಆಟಿಕೆ ವಿನಿಮಯ ಮಾಡಿಕೊಳ್ಳದಂತೆ ಎಚ್ಚರ ವಹಿಸಿ. ಇದರಿಂದಾಗಿ ಸೋಂಕು ಹರಡುವುದನ್ನು ತಡೆಯಬಹುದು. 
  • ಮಗು ಆಡುತ್ತಿರುವಾಗ ಅದರ ಕಡೆಗೆ ನಿಮ್ಮ ನಿಗಾ ಕೊಡಲಾಗದ ಸಂದರ್ಭ ಬಂದರೆ, ಆದಷ್ಟು ಮಗುವಿಗೆ ತೊಂದರೆಯಾಗಬಹುದಾದಂತಹ  ವಸ್ತುಗಳನ್ನು ಪರಿಶೀಲಿಸಿ, ಅವುಗಳು ಮಗುವಿಗೆ ಸಿಗದಂತೆ ಮೇಲಿರಿಸಿ ಹೊರಗೆ ನಡೆಯಿರಿ. 






   

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ