ಶುಕ್ರವಾರ, ಅಕ್ಟೋಬರ್ 30, 2015

ಮಣ್ಣು ಮರಳು ಮತ್ತು ಮಕ್ಕಳು

             
ಸಂಜೆಯ ಸಮಯ ಸಾಮಾನ್ಯವಾಗಿ ನನ್ನ ಮಗಳನ್ನು ವಾಕಿಂಗ್ ಕರೆದುಕೊಂಡು ಹೋಗುವ ರೂಢಿ. ಅದು ಅವಳ ಅತ್ಯಂತ ಸಂತೋಷದ ಸಮಯ. ಹೊರಗೆ ಕಾಲಿಡುತ್ತಿದ್ದಂತೆಯೇ, ಅವಳ ಮೊದಲ ಗಮನ ರಸ್ತೆಯ ಬದಿಗಿನ ಮಣ್ಣು, ಮರಳು, ಕಲ್ಲಿನ ಮೇಲೆಯೇ ಇರುತ್ತದೆ. ಮಣ್ಣು ಕೆದಕುವುದು, ಕಲ್ಲು ಆರಿಸುವುದು, ಮರಳಿನಲ್ಲಿ ಗುಂಡಿ ತೊಡುವುದು ಇವೆಲ್ಲಾ ಆಟಗಳು ಶುರುವಾಗಿ ಹೋಗುತ್ತದೆ. "ಅಯ್ಯೋ ಸೌಮ್ಯಾ, ಮಗಳನ್ನಾ ಎತ್ಕೊಳ್ರಿ, ಮಣ್ಣಾಡ್ತಿದಾಳೆ... ಏನೇ ಹುಡ್ಗೀ, ಅಷ್ಟೂ ಬಟ್ಟೆನೆಲ್ಲಾ  ಗಲೀಜು ಮಾಡ್ಕೊಂಡಿದೀಯ...ಏಯ್ ಯಾರದು ಮಣ್ಣಲ್ಲಿ ಆಡೋರೂ...?? ಬಾಯಿಗೆ ಹಾಕ್ತಾರೆ ನೋಡ್ಕೊಳ್ರಿ...ಥೂ ಕರ್ಕೊಂಡ್ ಬರ್ರೀ  ಈ ಕಡೆ, ಮೈ ಕೈ ಎಲ್ಲಾ ಕೆಸರು ಮಾಡ್ಕೊಂಡಿದಾಳೆ. ತಂಡಿ  ಜ್ವರ ಆಗೋದು ಇದಕ್ಕೇನೆ..." ಇವೇ  ಎಲ್ಲಾ ಸಾಮಾನ್ಯವಾಗಿ ನನಗೆ ಕೇಳಿ ಬರುವ ಮಾತುಗಳು...



೧. ಮಣ್ಣಿನಲ್ಲಿ ಆಡುವುದರ ಬಗೆಗಿನ ತಪ್ಪು ಕಲ್ಪನೆ :

            ಮಣ್ಣು, ಮರಳು, ಕಲ್ಲು, ಇವೆಲ್ಲ ಪ್ರಕೃತಿ ಸಹಜದತ್ತವಾಗಿಯೇ ಮಕ್ಕಳಿಗೆ ಕೊಟ್ಟ ಉಡುಗೊರೆ...ಆದರೆ ಇವತ್ತಿನ ಸಮಾಜದಲ್ಲಿ ಪೋಷಕರು, ತಮ್ಮ ಮಕ್ಕಳಿಗೆ ಅತ್ಯುತ್ತಮವಾದುದನ್ನು ಕೊಡಬೇಕು, ಆರೋಗ್ಯಕರವಾದ ಜೀವನವನ್ನು ಕೊಡಬೇಕೆಂಬ ಹಂಬಲದಿಂದ, ತಮ್ಮ ಮಕ್ಕಳು ಮಣ್ಣಿನಲ್ಲಿ ಆಡುವುದು, ರೋಗಕ್ಕೆ ದಾರಿ, ಅಶಿಸ್ತಿನ ರೂಪ ಎಂಬ ತಪ್ಪು ಕಲ್ಪನೆ ತಂದುಕೊಂಡಿದ್ದಾರೆ.. ಮಣ್ಣಿನಿಂದಲೇ ನಾನಾ ರೋಗಗಳು ಬರುವುದು ಎಂಬುದು ಖಂಡಿತ ನಿಜವಲ್ಲ...ರೋಗಗ್ರಸ್ತ ಜನರ ಅಥವಾ ಪ್ರಾಣಿಯ ರೋಗಾಣು ಮಣ್ಣಿಗೆ ಪ್ರಸಾರಗೊಂಡಿದ್ದಲಿ ಮಾತ್ರ, ಆ ತರಹದ ಜಾಗಗಳನ್ನು, ಜಾಗರೂಕತೆಯಿಂದ ಗಮನಿಸಿ ಮಗುವಿಗೆ ಆಡಲು ಬಿಟ್ಟರೆ, ಯಾವದೇ ತರಹದ ತೊಂದರೆ ಇರುವುದಿಲ್ಲ.

           ಚಿಕ್ಕ ಮಗು ಮಣ್ಣನ್ನು ಮರಳನ್ನು ಬಾಯಿಗೆ ಹಾಕಿರುವುದನ್ನು ನೀವು ಗಮನಿಸಿರುತ್ತೀರಾ. ಅದಕ್ಕೂ ಕೂಡ ವಿಕಾಸಾತ್ಮಕ ಕಾರಣಗಳಿವೆ ಎಂದರೆ ನೀವು ನಂಬಲೇ ಬೇಕು. ಸಹಸ್ರಾರು ಬಾಕ್ಟೀರಿಯಾ, ವೈರಸ್ ಮತ್ತು ಕಣ್ಣಿಗೆ ಕಾಣಿಸದಂತಹ ಹುಳುಗಳು  ಮಗುವಿನ ದೇಹ ಸೇರಿ, ಮಗುವಿಗೆ ಸಾಮಾನ್ಯವಾಗಿ ಬರುವ ರೋಗಗಳು ಬಾರದಿದ್ದಂತೆ ಪ್ರತಿರಕ್ಷಣಾ ಶಕ್ತಿಯನ್ನುನಿರ್ಮಾಣ ಮಾಡುತ್ತವೆ ಎಂದರೆ ನಿಮಗೆ ಆಶ್ಚರ್ಯ ಆಗುವುದಿಲ್ಲವೇ?

. ಮಗುವಿಗೆ ಮಣ್ಣಿನ ಮೇಲೆ ಆಸಕ್ತಿಯೇಕೆ?

         ಮಣ್ಣಲ್ಲಿ ಆಡುತ್ತಿರುವ ಮಗು ಅಕ್ಷರಶಃ ಸಂತೋಷ ಪಡುತ್ತಿರುತ್ತದೆ, ಮಗುವಿನ ಮುಖದಲ್ಲಿ ಒಂದು ರೀತಿಯ ಗೆಲುವನ್ನು ನೀವು ಗಮನಿಸಿರಬಹುದು, ಮಗುವನ್ನು ನೀವು ಕರೆದರೂ, ನಿಮ್ಮ ಮಗು ಮಣ್ಣು ಮರಳನ್ನು ಬಿಟ್ಟು ಬರಲು ಇಚ್ಚಿಸುತ್ತಿರುವುದಿಲ್ಲ..ಕಾರಣ ಏನೆಂದು ಯೋಚಿಸಿದ್ದೀರಾ? ವೈಜ್ಞಾನಿಕವಾಗಿ ಹೇಳಬೇಕೆಂದರೆ, ಮಗುವು ಮಣ್ಣನ್ನು ಮುಟ್ಟಿದಾಗ ಅದರಲ್ಲಿರುವ ಒಂದು ತರಹದ ಬಾಕ್ಟೀರಿಯಾಗಳು, ಮೆದುಳಿನ ನರಕೊಶಗಳನ್ನು ಸಕ್ರೀಯಗೊಳಿಸುತ್ತದೆ. ಸಿರೋಟೋನಿನ್ ಎಂಬ ಹಾರ್ಮೋನ್ ಬಿಡುಗಡೆಯಿಂದಾಗಿ, ಮಗುವಿನ ಮನಸ್ಸು ಪ್ರಫುಲ್ಲಗೊಳ್ಳುತ್ತದೆ. ಇದರಿಂದಾಗಿಯೇ ಮಗು, ಮಣ್ಣು, ಕಲ್ಲು ಮರಳು ಆಡಿದಾಗ ಸಂತೋಷ ವ್ಯಕ್ತಪಡಿಸುವುದು..

          ಹೊರಗಡೆ ಹೋಗಿ, ಮರಳು ಮಣ್ಣು ಆಡುವ ಮಗು ಎಷ್ಟು ಸಮಯ ಬೇಕಿದ್ದರೂ ಆಟದಲ್ಲಿ ಕಳೆಯಬಹುದು, ಸಮಯದ ಅರಿವನ್ನೇ ಮರೆಯಬಹುದು, ಏಕೆಂದರೆ, ಅನಿಯಮಿತ ಆಟದ ವಿಧಾನಕಗಳಾದ ಮರಳು, ಮಣ್ಣು ಕಲ್ಲುಗಳು, ಮಕ್ಕಳಿಗೆ ಒಂದು ರೀತಿಯ ಸ್ವತಂತ್ರ ಭಾವನೆಯನ್ನು ಕೊಡುತ್ತದೆ, ಅವರಿಗೆ ಬೇಕಾದ ಹಾಗೆ ಆಡುವುದರಿಂದ, ತಮ್ಮ ಆಸೆಗಳನ್ನು ಪೂರೈಸಿಕೂಂಡ ತೃಪ್ತಿ ಮಕ್ಕಳಿಗೆ ಸಿಗುತ್ತದೆ.

೩. ಮಣ್ಣು-ಮರಳು-ಕೊಳಕು ನಿಜವಾಗ್ಲೂ ಒಳ್ಳೆಯದೇ?

          ಸಾಕಷ್ಟು ಒಳಾಂಗಣ ಆಟಗಳಲ್ಲಿ, ಒಂದು ಮಿತಿಯಿರುತ್ತದೆ ಇನ್ನೊಂದು ಅರ್ಥದಲ್ಲಿ ಹೇಳುವುದಾದರೆ, ಕೆಲವೊಂದು ಆಟಿಕೆಗಳು ಅದರದ್ದೇ ಆದ ರೀತಿಯಲ್ಲಿ ಆಡಬೇಕಾಗುತ್ತದೆ. ಆದರೆ ಮಕ್ಕಳಾಡುವ ಮಣ್ಣು ಕಲ್ಲು ಮರಳು, ಮಕ್ಕಳಿಗೆ ಕ್ರಿಯಾತ್ಮಕ ಭಾವನೆಯನ್ನು ಉಂಟುಮಾಡುತ್ತದೆ, ಮರಳಾಡುವುದಕ್ಕೆ ನಿರ್ಧಿಷ್ಟವಾದ ವಿಧಾನ ಎಂಬುದಿಲ್ಲ. ಎಷ್ಟೊಂದು ಸಲ, ನಾವು ರಸ್ತೆಯ ಬದಿಯಲ್ಲಿ ಓಡಾಡುವಾಗ ಅಥವಾ ನಮ್ಮ ಮಕ್ಕಳೇ ಆಡುವಾಗ, ಕಲ್ಲನ್ನು ಆರಿಸುವುದನ್ನು ನೋಡಿರುತ್ತೀವೆ, ಮಗು ತನ್ನದೇ ಆದ ರೀತಿಯಲ್ಲಿ ಆಟವನ್ನು ಮುಂದುವರೆಸಿರುತ್ತದೆ.. ಮಗು ಪ್ರತಿ ಸಲವೂ ಮಣ್ಣನ್ನು ನೋಡಿದಾಗ ಅಥವಾ ಮುಟ್ಟಿದಾಗ, ಅದರ ಬಣ್ಣ, ಗಾತ್ರ, ಪ್ರಮಾಣ, ಗುಣ ಸ್ವರೂಪವನ್ನುಗುರುತಿಸಲು ಮತ್ತು ಹೋಲಿಕೆ ಮಾಡಲು ಪ್ರಾರಂಬಿಸುತ್ತದೆ. ಉದಾಹರಣೆಗೆ, ಮರಳನ್ನು ಕೆದಕಿ, ಯಾವುದಾದರೂ ಸಣ್ಣ ಧಾರಕ ಅಥವಾ ಪಾತ್ರೆಯಲ್ಲಿ ತುಂಬುವುದು, ಮಕ್ಕಳಲ್ಲಿ ಖಾಲಿ ಮತ್ತು ಪೂರ್ಣವಾಗಿದುದರ ಕಲ್ಪನೆಯನ್ನು ತರುತ್ತದೆ. ಕಲ್ಲು ಚಿಕ್ಕದ್ದು, ದೊಡ್ಡದು ಎಂಬುದರ ವ್ಯತ್ಯಾಸವನ್ನು ಬಹಳ ಸುಲಭವಾಗಿ ಕಂಡು ಹಿಡಿಯುತ್ತದೆ, ಒರಟು ಮೃದುವಿನ ಅರ್ಥ ತಿಳುಯುವಷ್ಟು ಸಾಮರ್ಥ್ಯವನ್ನುಮಗು ಪಡೆಯುತ್ತದೆ. ಇದನ್ನೇ ನಾವು ಸ್ವಕಲಿಕೆ ಎಂದು ಕರೆಯುತ್ತೇವೆ. ಇವೆಲ್ಲಾ ಬುದ್ಧಿ ವಿಕಸನದ ಪ್ರಾಯೋಗಿಕ ವಿಧಾನವೆಂದೇ ಹೆಳಬಹುದು.

           ಕಲ್ಲನ್ನು ಆರಿಸುವುದು, ಒಂದುಗೂಡಿಸುವುದು, ಅದರ ಗಾತ್ರಕ್ಕೆ ಆಕಾರಕ್ಕೆ ತಕ್ಕಂತೆ ಗುಂಪುಮೂಡುವುದು, ಸಮಾನವಾಗಿ ಜೋಡಿಸುವುದು, ಕಲ್ಲನ್ನು ಎಸೆದು ಅದು ಏನಾಗುತ್ತದೆ ಎಂದು ನೋಡುವುದು ಇವೆಲ್ಲವೂ ಮಕ್ಕಳ ದಿನನಿತ್ಯದ ಹೊಸ ಸಂಶೋಧನೆಗಳು. ಪ್ರತಿಸಲವೂ ಹೊಸತು ಕಲಿತಾಗ, ತಾವು ಮಾಡಿದ ಪ್ರಯೋಗವು ಉತ್ತಮವಾಗಿ ಕಂಡುಬಂದಾಗ, ಮಕ್ಕಳಲ್ಲಿ ತಮ್ಮಲ್ಲಿಯ ಆತ್ಮವಿಶ್ವಾಸವೂ ಹೆಚ್ಚುತ್ತಾ ಹೋಗುತ್ತದೆ, ನಾನು ಮಾಡಬಲ್ಲೆ ಎಂಬ ಅರಿವು ಅವರಲ್ಲಿ ಮೂಡಿದಾಗ, ಮಕ್ಕಳ ಸಕಾರಾತ್ಮಕ ಭಾವನೆ ವೃದ್ಧಿಯಾಗುತ್ತದೆ.



           ಸಾಮಾನ್ಯವಾಗಿ ನಾವು ಕಾಣುವಂತೆ, ಮಕ್ಕಳಿಗೆ ತಮ್ಮ ಆಟಿಕೆಯ ಮೇಲೆ ಸ್ವಂತಿಕೆಯ ಭಾವನೆ ಇರುತ್ತದೆ.  ಇತರರೊಡನೆ ಹಂಚಲು ಇಚ್ಚಿಸುವುದಿಲ್ಲ. ಆದರೆ ಮರಳು ಆಡುವಾಗ, ಮಗು ತನ್ನ ಜೊತೆಯವರೊಂದಿಗೆ ಹೊಸತನ್ನು ಕಲಿಯಲಿಚ್ಚಿಸುತ್ತದೆ. ಹಂಚಿಕೊಂಡು ಆಡುವ ಭಾವನೆ ರೂಪಿಸಿಕೊಳ್ಳುತ್ತದೆ, ಅಣ್ಣ, ತಂಗಿ, ಅಕ್ಕ, ತಮ್ಮ, ಸಹಭಾಗಿಗಳು, ಫ್ರೆಂಡ್ಸ್ ಎಂಬೆಲ್ಲಾ  ಭಾಂಧವ್ಯ ಜಾಸ್ತಿಯಾಗುತ್ತದೆ. ಜೊತೆಗೆ, ಸಂವಹನ ಶಕ್ತಿಯೂ ಕೂಡ ಹೆಚ್ಚುತ್ತದೆ.

          ಹೆಚ್ಚೆಚ್ಚು ಮಣ್ಣು ಮರಳುಗಳನ್ನು ತನ್ನದೇ ಆದ ರೀತಿಯಲ್ಲಿ ಆಡುವ ಮಕ್ಕಳಲ್ಲಿ ನಗು, ಸಂತೋಷ ನಿರಂತವಾಗಿರುತ್ತದೆ. ಅದೇ ಕಾರಣದಿಂದ ಮಕ್ಕಳ ರಕ್ತದೊತ್ತಡ, ಬೊಜ್ಜು ಮತ್ತು ಮಾನಸಿಕ ಸಂತುಲನ ಕಾಪಾಡಿಕೊಳ್ಳಲು ಅನುಕೂಲವಾಗುತ್ತದೆ.



೪. ಪೋಷಕರ ಭಾಗಿತ್ವ

          ಮಕ್ಕಳು ಮಣ್ಣಾಡುವುದರಲ್ಲಿ  ಪೋಷಕರ ಪಾತ್ರವೇನಿದೆ ಎಂದು ಸಹಜವಾಗಿಯೇ ನಮಗೆ ಪ್ರಶ್ನೆ ಮೂಡಬಹುದು. ಆದರೆ ಪೋಷಕರೇ ಗಮನದಲ್ಲಿರಲಿ, ಮರಳಾಟ ಕೂಡ ಒಂದು ಪ್ರಮುಖ ಆಟವೇ .. ಮಕ್ಕಳಿಗೆ ಮೊದಲಿಗೆ ಈ ತರಹದ ಆಟಕ್ಕೆ ಅನುಮತಿ ಮತ್ತು ಪ್ರೋತ್ಸಾಹ ಕೊಡಬೇಕಾದದ್ದು ನಮ್ಮ ಕರ್ತವ್ಯ. ನಮ್ಮ ಮಕ್ಕಳಿಗೆ ಅವರು ಇಷ್ಟ ಪಡುವ ಆಟದಲ್ಲಿ ನಾವು ಭಾಗಿಯಾದಾಗ, ತಮ್ಮ ಪೋಷಕರು ತಮ್ಮೊಂದಿಗಿದ್ದಾರೆ ಎಂಬ ಸುರಕ್ಷತಾ ಭಾವನೆ ಮಕ್ಕಳಲ್ಲಿ ಮೂಡುತ್ತದೆ. ಜೊತೆಗೆ, ಅವರಾಡುವ ಆಟಗಳಿಗೆ ನಾವು ಸ್ಪಂದಿಸಿದಾಗ, ಅವರ ಆಟದಲ್ಲಿನ ಜಟಿಲವಾದ ತೊಂದರೆಗೆ ಸಹಾಯ ಮಾಡಿದಾಗ, ಮಕ್ಕಳಿಗೆ ಪೋಷಕರ ಮೇಲಿನ ನಂಬಿಕೆ ಹೆಚ್ಚುತ್ತದೆ. ಭಯ ಕಾಡುವುದಿಲ್ಲ. ಈ ನಿಟ್ಟಿನಲ್ಲಿ ಮಕ್ಕಳ ಮನಸ್ಸಿಗೆ  ನಾವು ಹತ್ತಿರದವರಾಗಬಹುದು.

೫. ಗಮನಿಸಬೇಕಾದ ಅಂಶಗಳು

          ಮಣ್ಣು, ಕಲ್ಲು, ಮರಳು  ಜೊತೆಯಲ್ಲಿ ಆಡುವುದರ  ಪ್ರಯೋಜನ ಸಾಕಷ್ಟಿದ್ದರೂ , ಚಿಕ್ಕ ಮಕ್ಕಳು  ಆಡಬೇಕಾದರೆ  ಕೆಲವೊಂದು ಸುರಕ್ಷತಾ  ಕ್ರಮಗಳನ್ನು ಅನುಸರಿಸುವುದು  ಅತ್ಯಗತ್ಯ .

  • ಮಕ್ಕಳು ಮಣ್ಣಾಡುವ  ಜಾಗ ಸ್ವಚ್ಚತೆಯಿಂದ  ಕೂಡಿರಬೇಕು. ಉದಾಹರಣೆಗೆ  ಮಲ ಮೂತ್ರ ವಿಸರ್ಜನೆ, ಕಸದ ರಾಶಿ ಹಾಕುವ ಜಾಗ, ಚರಂಡಿ ಹರಿಯುವ ಜಾಗ ಮುಂತಾದ ಜಾಗಗಳಲ್ಲಿ ರೊಗಾಣು ಹೆಚ್ಚಿರುತ್ತದೆ. 
  • ಆಟವಾಡುವ ಮಗು ತುಂಬಾ ಚಿಕ್ಕದಿದ್ದರೆ, ಮಗು ಮಣ್ಣು, ಕಲ್ಲುಗಳನ್ನು, ಕಣ್ಣು, ಮೂಗು, ಕಿವಿ  ಮತ್ತು ಬಾಯಿಗೆ ಹಾಕದಂತೆ ಎಚ್ಚರಿಕೆ ಕಾಯ್ದುಕೊಳ್ಳುವುದು ಉತ್ತಮ. 
  • ಆಟವಾಡುವ ಮಣ್ಣು ಅಥವಾ ಮರಳಿನಲ್ಲಿ, ಮೊನಚಾದ ವಸ್ತುಗಳೇನಾದರು ಇದೆಯೇ ಎಂದು ನೋಡಿಯೇ ಆಡಲು ಬಿಡಿ. ಕೆಲವೊಮ್ಮೆ, ಮುರಿದ ಗ್ಲಾಸ್ ಚೂರುಗಳು, ಕಬ್ಬಿಣದ ಹರಿತವಾದ ವಸ್ತುಗಳು ಇರುವ ಸಾದ್ಯತೆ ಇರುತ್ತದೆ. ಹಾಗೆಯೇ,ಇರುವೆ ಇನ್ನಿತರ ಸಣ್ಣ ಕೀಟಗಳೆನಾದರೂ ತೊಂದರೆ ಮಾಡುತ್ತಿದೆಯೇ ಎಂದು ಖಾತ್ರಿ ಮಾಡಿಕೊಳ್ಳುವುದು ಒಳಿತು. 
  • ಆಟವಾಡಿದ ನಂತರ ಸ್ವಚ್ಚವಾಗಿ ಮಗುವಿಗೆ ಕೈ ಕಾಲು ತೊಳೆಸುವುದು,  ಅಗತ್ಯ ಬಿದ್ದಲ್ಲಿ ಫ್ರೆಶ್ ಆಗಲಿಕ್ಕೊಂದು ಚಿಕ್ಕ ಸ್ನಾನ ಮಾಡಿಸಬಹುದು. ನಂತರದಲ್ಲಿ, ಎಣ್ಣೆಯಿಂದ ಮಗುವಿನ ಕೈ ಕಾಲುಗಳನ್ನು ಮಸಾಜ್ ಮಾಡಿದಲ್ಲಿ, ಚಿಕ್ಕ ಪುಟ್ಟ ಗಾಯ ಗೀರುಗಳನ್ನು ಹೋಗಲಾಡಿಸುವುದರ ಜೊತೆಗೆ, ಮಕ್ಕಳಿಗೆ ತಮ್ಮ ಸ್ವಚ್ಚತೆಯ ಕಡೆಗೆ ಒಂದು ಶಿಸ್ತಿನ ಕಾರ್ಯಾಚರಣೆ ಕಲಿಸಿ ಕೊಟ್ಟಂತಾಗುತ್ತದೆ. 


15 ಕಾಮೆಂಟ್‌ಗಳು:

  1. ಲೇಖಕರು ಈ ಕಾಮೆಂಟ್‌ ಅನ್ನು ತೆಗೆದು ಹಾಕಿದ್ದಾರೆ.

    ಪ್ರತ್ಯುತ್ತರಅಳಿಸಿ