ಶನಿವಾರ, ಅಕ್ಟೋಬರ್ 31, 2015

ಅಗೋಚರ ಸ್ನೇಹಿತರು..

 ಘಟನೆ ೧.

         "ಅಮ್ಮಾ, ಡಿಂಗ್ರೀಗೂ ಜೋಕಾಲಿ ಆಡಬೇಕಂತೆ, ನೀನೇ ತೂಗ್ಬೇಕಂತೆ ಅಮ್ಮ....." ಎಂದು ನಳಿನಿಯ  ಮಗಳು ಪಾರ್ಕಲ್ಲಿ ಕೂಗುತ್ತಿದ್ದರೆ, ನಳಿನಿಯ ಫ್ರೆಂಡ್ ರಜತ ಸುತ್ತಮುತ್ತಲು ಆಶ್ಚರ್ಯದಿಂದ ಒಮ್ಮೆ ಕಣ್ಣು ಹಾಯಿಸಿದಳು. ಅಲ್ಲಿ ಇನ್ಯಾವದು ಮಗು ಆಟವಾಡ್ತಿರೋದು ಕಾಣಲಿಲ್ಲ. ಅದಕ್ಕೆ ಪೂರಕವೆಂಬಂತೆ ನಳಿನಿ, ತನ್ನ ಮಗಳು ಆಟವಾಡುತ್ತಿದ್ದ ಜೋಕಾಲಿಯ ಪಕ್ಕದ ಜೋಕಾಲಿಯನ್ನು ಸುಮ್ಮನೆ ಹೋಗಿ ಒಮ್ಮೆ ತೂಗಿ ಬಂದಳು. ರಜತಳ ಸಂಶಯ ಮುಖಭಾವವನ್ನು ಗಮನಿಸಿದ ನಳಿನಿ ಸುಮ್ಮನೆ ಒಮ್ಮೆ ನಕ್ಕು ಹೇಳಿದಳು, "ಡಿಂಗ್ರೀ, ನನ್ನ ಮಗಳ ಕಾಲ್ಪನಿಕ ಸ್ನೇಹಿತೆ". ರಜತ ಇದನ್ನು ಕೇಳಿ ಏನು ಹೇಳಬೇಕಂದು ತಿಳಿಯದೆ ತಟಸ್ಥವಾದಳು.

ಘಟನೆ ೨.

         "ಪಪ್ಪಾ, ನೀನು ಇನ್ಮೇಲಿಂದ  ಒಂದೇ  ಚಾಕೊಲೆಟ್  ತರಬೇಡ, ಎರಡು ತಗೊಂಡ್ ಬಾ, ಇಲ್ಲಾಂದ್ರೆ ಡೋರಿ ಗೆ ಬೇಜಾರಾಗತ್ತೆ", "ಮಮ್ಮೀ, ನಾ ಸ್ಕೂಲ್ ಗೆ ಹೋದಾಗ, ಡೋರಿ ಮಿಲ್ಕ್ ಚೆಲ್ಲಿದರೆ ಬೈಬೇಡ ಮತ್ತೆ ನಾನು ಬರೋವರೆಗೆ ನನ್ ರೂಮ್ ಗೆ ಯಾರೂ ಹೋಗ್ಬೇಡಿ ಡೋರಿ ನಂಗೋಸ್ಕರ ಕಾಯ್ತಿರ್ತೀನಿ ಹೇಳಿದಾಳೆ", ಹೀಗೆ ಪ್ರಮೋದ್ ಅವನ ಅಮ್ಮ ಅಪ್ಪನಿಗೆ ದಿನವೂ ಹೇಳುತ್ತಿದ್ದರೆ , ಇತ್ತ ಪ್ರಮೋದ್ ತಾಯಿ ಇಂದಿರಾಗೆ ಮನಸ್ಸಿನೊಳಗೊಳಗೇ ಆತಂಕ, ಭಯ. ರೂಮಿನಲ್ಲಿ ಮಗ ಗಾಳಿಯಲ್ಲಿ ಯಾರದ್ದೋ ಜೊತೆ ದಿನವಿಡೀ ಸಂಭಾಷಣೆ ನಡೆಸುತ್ತಾನೆ, ತನ್ನ ಬಗ್ಗೆ, ತನ್ನ ವಸ್ತುಗಳ ಬಗ್ಗೆ ಅಥವಾ ಯಾವುದೇ ಆಟವಾಗಲಿ, ಒಬ್ಬೋಬ್ಬನೇ ಮಾತನಾಡುತ್ತಾನೆ, ಮಲಗಲು ಕೂಡ ಅಪ್ಪ ಅಮ್ಮನನ್ನು ಕೇಳದೇ, ಒಬ್ಬನೇ ನಗುತ್ತಾ ಡೋರಿ ಜೊತೆ ಇರ್ತೀನಿ ಅಂತೆಲ್ಲ ಹೇಳುವಾಗ, ಪ್ರಮೋದ್ ತಾಯಿಗೆ ತನ್ನ ಮಗನಿಗೆ ಯಾವುದೋ ಕೆಟ್ಟ ದೃಷ್ಟಿ ಅಥವಾ ಯಾರಾದರೂ ತನ್ನ ಮಗನ ಮೇಲೆ ಮಾಟ ಮಂತ್ರ ಮಾಡಿಸಿರಬಹುದು ಎಂಬ ದಿಗಿಲು ಕಾಡುತ್ತಿತ್ತು. ವಿಶೇಷ ಪೂಜೆಗೆ ಹೇಳಬೇಕೇ ಅಥವಾ ಮಾಂತ್ರಿಕನನ್ನು ಕಾಣಬೇಕೆ ಎಂಬ ದ್ವಂಧ್ವದಲ್ಲಿದ್ದಾರೆ ಪ್ರಮೋದ್ ತಾಯಿ.

      ಈ ರೀತಿಯ ಘಟನೆಗಳನ್ನು ನೀವು ಸಾಮಾನ್ಯವಾಗಿ ಮಕ್ಕಳಿರುವವರ ಮನೆಯಲ್ಲಿ ಕೇಳಿರುತ್ತೀರಿ ಅಥವಾ ಸ್ವತಃ ಅನುಭವಿಸಿರುತ್ತೀರಿ. ಸಾಮಾನ್ಯವಾಗಿ ಮಕ್ಕಳು ತಮ್ಮಲ್ಲಿರುವ ಆಟಿಕೆ ಗೊಂಬೆಗಳನ್ನು, soft toys ಗಳನ್ನು ತನ್ನದೇ ಮಗು, ಅಣ್ಣ , ತಂಗಿ, ಫ್ರೆಂಡ್ ಎಂಬಂತೆ ಮಾತನಾಡಿಸುವುದು, ಅದರ ಜೊತೆ ಪ್ರತಿಯೊಂದನ್ನು ಹಂಚಿಕೊಳ್ಳುವುದು ಗಮನಿಸಿರುತ್ತೀರಿ. ಇನ್ನು ಕೆಲವು ಮಕ್ಕಳು ಅಸ್ತಿತ್ವದಲ್ಲೇ ಇರದ ವಸ್ತು, ಪ್ರಾಣಿ ಅಥವಾ ಮನುಷ್ಯರ ಬಗ್ಗೆಯೂ ಮಾತನಾಡುತ್ತಿರುತ್ತಾರೆ, ಅತಿಯಾದ ಒಡನಾಟ ಇಟ್ಟುಕೊಂಡಿರುತ್ತಾರೆ. ಹಾಗಾದರೆ ಏನಿದು ವಾಸ್ತವದಲ್ಲಿ? Mr. India ತರಹ ಏನಾದರು ಇರಬಹುದೇ? ಇದೊಂದು ಅಸಹಜವಾದ ಪ್ರವೃತ್ತಿಯೇ?

ಸಾಮಾಜಿಕ ಮತ್ತು ಭಾವನಾತ್ಮಕ ಬೆಳವಣಿಗೆ

        ಏನಿದು ಆಶ್ಚರ್ಯ?? ಈ ತರಹದ ಸನ್ನಿವೇಶಗಳ ಬಗ್ಗೆ ಚಿಂತಿಸುವುದು, ಪರಿಹಾರ ಕಂಡುಹಿಡಿಯುವುದರ ಬದಲಾಗಿ ಇದೊಂದು "ಬೆಳವಣಿಗೆ" ಎನ್ನುತ್ತಿದ್ದಾರಲ್ಲ?? ಹೌದು, ನಿಮ್ಮ ಮಗು ಈ ಮೇಲಿನ ತರದ ಯಾವುದೇ ಚಟುವಟಿಕೆಗಳಲ್ಲಿ ತೊಡಗಿದ್ದರೆ ನಿಮ್ಮ ಮಗು ತುಂಬಾ ಕ್ರೀಯಶೀಲವಾಗಿದೆ ಎಂದರ್ಥ!!!

          ಇಪ್ಪತ್ತನೆಯ ಶತಮಾನ ಕೊನೆಯವರೆಗೂ, ಈ ತರಹದ ಗಾಳಿಯಲ್ಲಿ ಮಾತನಾಡುವ ಪ್ರಕ್ರಿಯೆ ಬಗ್ಗೆ ವಿಚಾರ ನಡೆದಾಗ, ಇದೊಂದು ಮಕ್ಕಳಲ್ಲಿ ಒಂಟಿತನ, ಅಭಧ್ರತೆಯ ಸಂಕೇತ, ಒಂದು ಸಾಮಾಜಿಕ ಸಮಸ್ಯೆ ಎಂಬಂತೆ ಅಭಿಪ್ರಾಯ ಪಡಲಾಗಿತ್ತು. ಯಾವುದೇ ಮಗುವು ಹೆಚ್ಚಿನ ಸಮಯ ಗಾಳಿಯಲ್ಲಿ ಮಾತನಾಡುವುದು, ತನ್ನೆಲ್ಲಾ ಭಾವನೆಗಳನ್ನು ಹಂಚಿಕೊಳ್ಳುವುದು ಮಾಡುತ್ತಿದ್ದರೆ, ಆ ಮಗುವಿಗೆ ಪೋಷಕರು ಅಥವಾ ಹತ್ತಿರದವರು ಹೆಚ್ಚಿನ ಗಮನ ಕೊಡುವುದರ ಅವಶ್ಯಕತೆ ಇದೆ ಮತ್ತು ಇತರರ ಸಾನಿಧ್ಯದ ಕೊರತೆ ಹೆಚ್ಚಾಗಿಯೇ ಕಾಡುತ್ತಿದೆ ಎಂದು ಊಹಿಸಲಾಗಿತ್ತು. ನಂತರದ ಸಂಶೋಧನೆಯ ಪ್ರಕಾರ, ಮಗು ತನ್ನದೇ ಲೋಕದ ತನ್ನದೇ ಆದ ವಸ್ತು ಅಥವಾ ವ್ಯಕ್ತಿಗಳ ಕಲ್ಪನೆ ಬೆಳೆಸಿಕೊಂಡಿದ್ದರೆ ಅದೊಂದು ಕ್ರಿಯಾತ್ಮಕ ಬೆಳವಣಿಗೆ ಎಂಬುದನ್ನು ಕಂಡು ಹಿಡಿಯಲಾಯಿತು.

       ಕಣ್ಣಿಗೇ ಕಾಣದೇ ಅಗೋಚರವಾಗಿರುವ ವ್ಯಕ್ತಿಯ ಜೊತೆ ಒಡನಾಟ ಇರುವ ಮಗುವಿನ 'ಅದ್ಭುತವಾದ ಕಲ್ಪನಾ ಶಕ್ತಿಯ' ಬಗ್ಗೆ ಒಮ್ಮೆ ಯೊಚಿಸಿ!! ಚಿಂತಿಸಬೇಡಿ, ಮಕ್ಕಳಲ್ಲಿ ಇದೊಂದು ಅತ್ಯಂತ ಸಹಜವಾದ ಪ್ರಕ್ರಿಯೆ. ಮಕ್ಕಳಲ್ಲಿ, ಬೆಳೆಯುತ್ತಿರವ ಕಲ್ಪನಾ ಸಾಮರ್ಥ್ಯ, ಅವರಲ್ಲಿ ಈ ತರಹದ ಕಾಲ್ಪನಿಕ ವಸ್ತುವಿಗೆ ಜೀವ ತುಂಬವ ಮತ್ತು ಒಟ್ಟಿಗೆ ಜೀವಿಸುವ ಭಾವನೆಯನ್ನು ರಚಿಸಲು ಪ್ರಾರಂಬಿಸುತ್ತದೆ. ತನ್ನೊಡನೆ ಇತರರು ಹೇಗೆ ವರ್ತಿಸುತ್ತರೋ ಅದೇ ರೀತಿ ತನ್ನ ಕಾಲ್ಪನಿಕ ಸಂಗಾತಿಯ ಜೊತೆ ವರ್ತಿಸುವ ಮಗು, ಯಾವುದು ಸರಿ ಯಾವುದು ತಪ್ಪು ಎಂಬುದರ ವ್ಯತ್ಯಾಸ ಬಹಳ ಬೇಗ ತಿಳಿದುಕೊಳ್ಳುತ್ತದೆ. ನೀವೇ ಗಮನಿಸಿ, ಕಾಲ್ಪನಿಕ ವ್ಯಕ್ತಿಯ ಜೊತೆ ಮಾತನಾಡುತ್ತಿರುವ ಮಗು, ತನ್ನ ಮತ್ತು ತನ್ನ ಕಾಲ್ಪನಿಕ ಸ್ನೇಹಿತನ, ಇಬ್ಬರ ಪಾತ್ರವನ್ನೂ ನಡೆಸುತ್ತಿರುತ್ತದೆ. ಇನ್ನೊಂದು ಅರ್ಥದಲ್ಲಿ ಹೇಳುವುದಾದರೆ, ನಿಮ್ಮ ಮಗು ಹೆಚ್ಚಿನ ಶಬ್ದಕೋಶ, ಭಾವನೆ ಮತ್ತು ಸಮಸ್ಯೆಗಳ ಪರಿಹಾರ ಕಂಡುಹಿಡಿಯುವ ಕೌಶಲ್ಯವನ್ನು ಬೇಗನೆ ಬೆಳೆಸಿಕೊಳ್ಳುತ್ತದೆ. ಇದೇ ಕಾರಣದಿಂದಾಗಿ ನಿಮ್ಮ ಮಗುವಿನ ಬೌದ್ಧಿಕ ಮಟ್ಟ ಹೆಚ್ಚುವುದು. ಜೊತೆಗೆ, ಮಕ್ಕಳಿಗೆ ಹೊರಗಿನ ಪ್ರಪಂಚಕ್ಕೆ ಸಂಕೋಚವಿಲ್ಲದೇ ಬೆರೆಯಲು ಸಹಾಯವಾಗುತ್ತದೆ.

ಪ್ರಾರಂಬಿಕ ಸ್ಥಿತಿ

         ಎಲ್ಲಾ ಮಕ್ಕಳಲ್ಲಿ ಅಲ್ಲದಿದ್ದರೂ ಹೆಚ್ಚಿನ ಮಕ್ಕಳಲ್ಲಿ, ಈ ತರಹದ ಕಾಲ್ಪನಿಕ ಗೆಳೆಯರ ರಚನೆ ಇದ್ದೇ ಇರುತ್ತದೆ. ಸಾಮಾನ್ಯವಾಗಿ ಮನೆಯ ಮೊದಲನೇ ಮಗುವಿಗೆ ಈ ತರಹದ ಸಾಮರ್ಥ್ಯ ಹೆಚ್ಚಿರುತ್ತದೆ. ಯಾವುದೇ ಮಗುವಿಗೆ ಅದು  ಚಿಕ್ಕದಿರುವಾಗ ತೋರಿಸುವ ಆಟಿಕೆಗಳು, ನಿರ್ಜೀವ ವಸ್ತುಗಳು ಎಂಬುದರ ಕಲ್ಪನೆ ಇರುವುದಿಲ್ಲ. ಅದರ ಜೊತೆಗೆ ನಾವು ಸೇರಿಸುವ ಶಬ್ದ, ಹೊರಡಿಸುವ ಧ್ವನಿಗೆ ಮಗುವು ಆ ವಸ್ತುವಿನ ಬಗ್ಗೆ ಒಂದು ಕಲ್ಪನೆ ತರಲು ಪ್ರಾರಂಭಿಸುತ್ತದೆ. ಅಲ್ಲಿಂದ ಶುರು ನಮ್ಮ ಮಗುವಿನ ಮನಸ್ಸಿನ "ಪ್ರಯೋಗಾಲಯ".  ಆ ವರೆಗೆ ಸುಪ್ತವಾಗಿದ್ದ ಮೆದುಳು, ಪ್ರತಿಯೊಂದು ವಸ್ತು, ಶಬ್ದ, ಧ್ವನಿ ಮತ್ತು ಸ್ಪರ್ಶದ ಸಂಕೋಲೆಗೆ ಒಂದು definition ಕೊಡಲು ಶುರು ಮಾಡುತ್ತದೆ ಮತ್ತು ಅದಕ್ಕಿಂತ ಒಂದು ಹೆಜ್ಜೆ ಮುಂದೆ ಹೋಗಿ ಅದರ ಬಗ್ಗೆ  ಉನ್ನತ ದರ್ಜೆಯ ಕಲ್ಪನೆಯನ್ನು ಪ್ರಾರಂಭಿಸುತ್ತದೆ.  ಗೊಂಬೆಗಳ ಜೊತೆ ಮಾತನಾಡುತ್ತ, ಆಡುತ್ತಾ ನೈಜವಾಗಿಯೇ ವರ್ತಿಸಲು, ಪ್ರತಿಸ್ಪಂದಿಸಲು ಪ್ರಾರಂಭಿಸುತ್ತದೆ. ಶಾಲೆಗ ಹೋಗುವ ಮಗುವು, ತನಗೆ ಇಷ್ಟವಾದ ಗೊಂಬೆಗೆ ಬೈ ಬೈ ಹೇಳಿ ಹೋಗುವ ಆತ್ಮೀಯತೆ ಭಾವನೆ ತಂದುಕೊಳ್ಳುವುದು ಕೂಡ ಈ ಕಲ್ಪನಾ ಶಕ್ತಿಯಿಂದಲೇ. ಚಿಕ್ಕ ಮಗುವು ಕನ್ನಡಿಯೆದುರು ನಿಂತು ತನ್ನೆದುರಿಗೆ ಕಾಣುವ ಪ್ರತಿಬಿಂಬವನ್ನು, ಮತ್ತೆ ಮತ್ತೆ ನೋಡಿ ಪ್ರಯೋಗ ಮಾಡುವುದು ಎಷ್ಟು funny ಎಂದು ನಮಗನಿಸಿದರೂ, ಅಷ್ಟೇ ಕಾರ್ಯಚರಣೆಯಲ್ಲಿರುತ್ತದೆ ನಮ್ಮ ಪುಟ್ಟ ಪೋರ ಅಥವಾ ಪೋರಿಯ ಮನಸ್ಸು!!

ಹೇಗಿರಬಹುದು ಆ ಅಗೋಚರ ಸ್ನೇಹಿತ?

       ತನ್ನ ಹುಟ್ಟಿನಿಂದಲೂ ಪ್ರತಿ ನಿಮಿಷ ಪ್ರತಿ ಘಳಿಗೆ ಹೊಸತನ್ನು ನೋಡುವ, ಕಲಿಯುವ ಮಗುವು, ವಾಸ್ತವಾಗಿ ಕಾಣಿಸುವ ಜನರು ಅಥವಾ ಗೊಂಬೆಗಳ ಜೊತೆಗೆ, ತನಗೆ ಸ್ಪಂದಿಸುವ ಕಾಲ್ಪನಿಕ ವಸ್ತುವಿನ ಬಗೆಗೆ ಒಂದು ರೂಪರೇಖೆಯನ್ನು ತಾನೇ ಚಿತ್ರಿಸಿಕೊಳ್ಳುತ್ತದೆ. ಆ ಕಲ್ಪನೆ, ಮನುಷ್ಯನೇ ಆಗಿರಬೇಕೆಂದಿಲ್ಲ. ಆ ಕಲ್ಪನೆ ಒಂದು ಗೊಂಬೆಯಾಗಿರಬಹುದು, ಚಿಕ್ಕ ಮಗುವಿನ ರೂಪದಲ್ಲಿರಬಹುದು, ಪ್ರಾಣಿಯಾಗಿರಬಹುದು, ಆ ವರೆಗೆ ಮಗುವು ನೋಡದೇ ಇರುವ ಜೀವಿಯೇ ಆಗಿರಬಹುದು. ಕಲ್ಪನೆಗೆ ಮಿತಿಯುಂಟೇ? ತನ್ನ ಸಂಗಾತಿ ಒಬ್ಬ ಅಣ್ಣ ಎಂದು ಒಂದು ಮಗು ಹೇಳಿದರೆ, ತನ್ನ ಜೊತೆ ಇರುವ ತನ್ನ ಸಂಗಾತಿ, ಮರದ ಮೇಲೆಯೇ ಯಾವಾಗಲು ಹತ್ತಿ ಕುಳಿತುಕೊಳ್ಳುವ ಒಂದು ಕರಡಿ ಎಂದು ಇನ್ನೊಂದು ಮಗು ಹೇಳಬಲ್ಲದು. ನನ್ನ ಫ್ರೆಂಡ್ ಗೆ ೬ ಕೈಗಳಿವೆ ಎಂದು ಒಂದು ಮಗು ಹೇಳಿದರೆ, ತನ್ನ ಪಾರ್ಟ್ನೆರ್ ದೇಹವೇ ಇಲ್ಲದೆ ಗಾಳಿಯಲ್ಲಿ ತೇಲುವ ಒಂದು ಭೂತ ಎಂದು ಇನ್ನೊಂದು ಮಗು ಹೇಳಬಹುದು :)

ಕಾಲ್ಪನಿಕ ಸ್ಥಿತಿ ಮತ್ತು ವಯಸ್ಸಿನ ಮಿತಿ 

        ಎಲ್ಲಿಂದ ಎಲ್ಲಿಯವರೆಗೆ ಮಗು ಈ ತರಹದ ಕಲ್ಪನಾ ಲೋಕದಲ್ಲಿ ಜೀವಿಸುತ್ತದೆ? ಕೇವಲ ವಾಸ್ತವ್ಯದ ಕಲ್ಪನೆ ಬರುವಷ್ಟು ಪ್ರೌಢರಾಗುವರೆಗೆ ಮಾತ್ರ...ಅಂದರೆ ಅದಕ್ಕೆ ನಿರ್ಧಿಷ್ಟವಾದ ವಯಸ್ಸೆಂಬುದಿಲ್ಲ. ಸಾಮಾನ್ಯವಾಗಿ ಮಗುವು ೬ ರಿಂದ ೭ ವರ್ಷದವರೆಗೆ ಬರುವರೆಗೂ ತನ್ನ ಕಲ್ಪನೆಯ ಲೋಕದಲ್ಲಿ, ಕಲ್ಪನೆಯ ಪಾತ್ರಧಾರಿಗಳ ಜೊತೆ ಜೀವಿಸಬಹುದು. ಕೆಲವು ಮಕ್ಕಳು ಬಹಳ ಬೇಗ ವಾಸ್ತವದ ಬಗ್ಗೆ, ಸಜೀವ ನಿರ್ಜೀವ ವಸ್ತುಗಳ ಬಗ್ಗೆ ತಿಳಿಯುತ್ತಾರೆ, ಮತ್ತೆ ಕೆಲವು ಮಕ್ಕಳು ಇವೆಲ್ಲದರ ಅರಿವಿದ್ದರೂ ತಮ್ಮ ಕಲ್ಪನೆಯ ಬಗೆಗಿನ ವಸ್ತುಗಳಲ್ಲಿ ಸ್ವಾಧೀನತೆಯನ್ನು ಇನ್ನೂ ಮರೆತಿರುವುದಿಲ್ಲ...

         ಈ ಕಾಲ್ಪನಿಕ ಸ್ಥಿತಿಯೂ ಒಂದು ರೀತಿಯಲ್ಲಿ ಒಳ್ಳೆಯದೇ ... ಕಲ್ಪನೆಯಲ್ಲಿ ಸಂಭಾಷಣೆ ನಡೆಸುವ ಮಗು ತನ್ನ ಅನುಭವನ್ನು, ತನ್ನ ಜ್ಞಾನವನ್ನು ಪ್ರದರ್ಶನ ಮಾಡುತ್ತಿರುತ್ತದೆ. ನೀವೇ ಗಮನಿಸಿದಂತೆ, ನೀವು ಹೇಳಿಕೊಟ್ಟ ವಿಷಯಗಳನ್ನು, ಮಗು ತನ್ನ ಕಾಲ್ಪನಿಕ ವಸ್ತುವಿನ ಮೇಲೆ ಪ್ರಯೋಗ ಮಾಡುತ್ತಿರುತ್ತದೆ, ಅದು ಉತ್ತಮಾವಾದದ್ದೇ ಆಗಿರಬಹುದು ಇಲ್ಲವೇ, ನೀವು ಬೈದಂತೆ, ಕೋಪಿಸಿಕೊಂಡಂತೆ, ನಿಮ್ಮ ಮಗುವು ತನ್ನ ಕಾಲ್ಪನಿಕ ವಸ್ತುವಿನ ಮೇಲೆ ಅನುಕರಣೆ ಮಾಡುತ್ತಿರುತ್ತದೆ . ಈ ಮೂಲಕ ನಮಗೆ ನಮ್ಮ ಮಗು ನಮ್ಮಿಂದ ಏನನ್ನು ಕಲಿಯುತ್ತದೆ ಎಂಬುದರ ಬಗ್ಗೆ ಒಂದು ಸುಳಿವು ಸಿಕ್ಕಂತಾಗುತ್ತದೆ.

ನಾವು ಕೂಡಾ ಪಾತ್ರಧಾರಿಗಳಾಗಬೇಕಾ ??

        ಇದೆಂತಹ ಪ್ರಶ್ನೆ? ನಾವು ಕೂಡ ಕಾಲ್ಪನಿಕತೆಯ ಭ್ರಮೆಯಲ್ಲಿ ಇರಬೇಕೆ? ವಾಸ್ತವದಲ್ಲಿ ಹೌದು. ಮನೋತಜ್ನರ ಪ್ರಕಾರ ನಮ್ಮ ಮಗುವಿನ ಸಾಮಾಜಿಕ ಮತ್ತು ಭಾವನಾತ್ಮಕ ಬೆಳವಣಿಗೆಗೆ ಕಾಲ್ಪನಿಕಥೆಯ ಸಹಾಯವಿದ್ದಂತೆ, ಈ ಕೆಳಗಿನ ಕೆಲವು ಅಂಶಗಳನ್ನು ನಾವು ಗಮನಿಸಿ ಅಳವಡಿಸಿಕೊಂಡರೆ ಮಕ್ಕಳ ಉತ್ತಮ ಭವಿಷ್ಯಕ್ಕೆ ನಮ್ಮ ಕೊಡುಗೆಯಾಗುತ್ತದೆ.
  • ಮೊದಲನೇ ಮತ್ತು ಮುಖ್ಯವಾದ ಅಂಶ, ಮಗುವಿನ ಅಗೋಚರ ಒಡನಾಡಿಯ ಬಗ್ಗೆ ಹೀಯಾಳಿಸಬೇಡಿ. ಅದರ ಬಗೆಗಿನ ನಂಬಿಕೆ, ನಿಮ್ಮ ಮಗುವಿಗೆ ನಿಮ್ಮ ಮೇಲಿನ ನಂಬಿಕೆಯನ್ನು ಹೆಚ್ಚಿಸುತ್ತದೆ.  
  • ಮಗುವು ತಾನು ಮಾಡಿದ ತಪ್ಪಿಗೆ, ತನ್ನ ಕಲ್ಪನಾ ವಸ್ತು ಅಥವಾ ತನ್ನ ಕಲ್ಪನೆಯ ಸಜೀವ ಗೊಂಬೆಯನ್ನು ದೂಷಿಸಿದರೆ, ಆ ವಿಷಯವನ್ನು  ದೊಡ್ದದಾಗಿಸದೇ, ಮಗುವಿಗೆ ತನ್ನ ಕಾರ್ಯಗಳ ಬಗ್ಗೆ, ಅದನ್ನು ಸರಿಪಡಿಸುವ ಬಗ್ಗೆ ತಿಳಿಹೇಳಿ. 
  • ನಿಮ್ಮ ಮಗುವಿನ ಅಗೋಚರ ಫ್ರೆಂಡ್ ನನ್ನು ಮಾತನಾಡಿಸುವ ವಿಧಾನದಲ್ಲಿ ನಾವು ನಮ್ಮ ಮಕ್ಕಳಿಗೆ ಒಳ್ಳೆಯ ವರ್ತನೆಯ ಬಗ್ಗೆ ತಿಳಿಸಬಹುದು. 
  • ನಿಮ್ಮ ಮಗುವಿಗೆ ಭಯದ ಒಂದು ಪ್ರಭಾವ ತೋರಿಸಲು, ಮಗುವಿಗೆ ಪ್ರಿಯವಾದ ಗೊಂಬೆಗೆ ಹೊಡೆಯುವ ಹಾಗೆ ವರ್ತಿಸುವುದು, ಗೊಂಬೆಗೆ ಶಿಕ್ಷೆ ನೀಡುವುದು ಕೂಡ, ನಿಮ್ಮ ಮಗುವಿಗೆ  ದೈಹಿಕವಾಗಿ ಶಿಕ್ಷಿಸುವುದಕ್ಕೆ ಸಮಾನ. ಖಂಡಿತ ಆ ರೀತಿ ಮಾಡಬೇಡಿ. 
  • ಈ ತರಹದ ಮಕ್ಕಳ ಅಗೋಚರ ಸ್ನೇಹಿತರ ಅನುಭವಗಳು ಅತೀವ ಹೆಚ್ಚಾದಲ್ಲಿ ಮಾತ್ರ, ಅದನ್ನು ಅಲ್ಲಗಳೆಯದೇ ನಿಧಾನವಾಗಿ ನಿಮ್ಮ ಪ್ರಾಮುಖ್ಯತೆಯನ್ನು ಮಗುವಿಗೆ ತಿಳಿಹೇಳಿ. ಅಲ್ಲದೆ ಹೋದಲ್ಲಿ ನಿಮ್ಮ ಹಸ್ತಕ್ಷೇಪ ಆದಷ್ಟು ಕಡಿಮೆ ಇದ್ದರೇನೆ ಒಳ್ಳೆಯದು.   

[ವಿ. ಸೂ  : ಈ ಲೇಖನದಲ್ಲಿ ಪ್ರಸ್ತಾಪಿಸಿರುವ ವೈಜ್ಞಾನಿಕ ಸಂಶೋಧನಾ ವಿಷಯಗಳನ್ನು ಇಂಟರ್ನೆಟ್ ನಿಂದ ಆಯ್ದುಕೊಂಡಿದ್ದೇನೆ ]
     

       







       

1 ಕಾಮೆಂಟ್‌:

  1. ಮಕ್ಕಳ ಒಳ್ಳೆಯ ಬೆಳವಣಿಗೆಗೆ ಪೂರಕವಾದ ಮಾಹಿತಿಗಳನ್ನು ಒದಗಿಸುವ ನಿನ್ನ ಲೇಖನಗಳು ಚೆನ್ನಾಗಿ ಮೂಡಿಬರುತ್ತಿವೆ ಸೌಮ್ಯ ....ಹೀಗೆ ಬರೆಯುತ್ತಿರು.

    ಪ್ರತ್ಯುತ್ತರಅಳಿಸಿ