ಬುಧವಾರ, ಡಿಸೆಂಬರ್ 16, 2015

ಮನೆಯೇ ಮೊದಲ ಆಟ ಶಾಲೆ

'ಆಟ' ಎನ್ನುವುದೇ ಒಂದು ಸಂತಸದ ಶಬ್ಧ. ಯಾವ ವಯಸ್ಸಿನ ಮಕ್ಕಳಿಗೆ ಆಗಲಿ ಆಟವಾಡುವುದೆಂದರೆ, ಅದಕ್ಕಿಂತ ಖುಷಿ ಬೇರೊಂದಿಲ್ಲ. ಆಟ ಯಾವುದೇ ಮಗುವಿನ ಪ್ರಮುಖ ಬೆಳವಣಿಗೆಯ ಪ್ರತೀಕ. ಚಿಕ್ಕ ಶಿಶುವಿನಿಂದ ಹಿಡಿದು ವಯಸ್ಸಾಗಿರುವ ಹಂತದ ವರೆಗೂ ಆಟಗಳು ನಮಗೆ ಮುದವನ್ನು ಕೊಡುತ್ತದೆ. ಮಕ್ಕಳಿಗೆ ಕೆಲವು ಆಟಗಳಿಗೆ ನಮ್ಮ ಸಹಾಯದ ಅವಶ್ಯಕತೆ ಇರುತ್ತದೆ. ಮತ್ತೆ ಕೆಲವು ಆಟಗಳು ಅವರು ತಾವೇ ಆಡಲು ಇಚ್ಚಿಸುತ್ತಾರೆ. ಆದಷ್ಟು ಕುತೂಹಲ ಉಂಟು ಮಾಡುವ ಆಟಗಳು ಮಕ್ಕಳ ಬುದ್ಧಿ ವಿಕಸನವಾಗಲು ಸಹಾಯ ಮಾಡುತ್ತದೆ. ಆಟಗಳ ಬಗ್ಗೆ ಬರಿಯಲಿಚ್ಚಿಸಿದರೆ ಸಾಕಷ್ಟಿದೆ. ಸದ್ಯಕ್ಕೆ ನಾನು ಕೆಲವು ಮನೆಯಲ್ಲಿಯೇ ನಾವು ಆಡಿಸಬಹುದಾದ ಕ್ರಿಯಾತ್ಮಕ ಆಟಗಳ ಒಂದು ಚಿಕ್ಕ ಟಿಪ್ಪಣಿ ಕೊಡಲಿಚ್ಚಿಸುತ್ತೇನೆ. ಈ ಕೆಲವು ಆಟಗಳು ಸುಮಾರು ೧.೫ ವರ್ಷ ವಯಸ್ಸಿನ ಮಕ್ಕಳಿಂದ ಹಿಡಿದು ೪ ವರ್ಷದ ವರೆಗಿನ ಮಕ್ಕಳಿಗೆ ಆಡಿಸುವಂತದ್ದು.

೧. ಪಾತ್ರೆ, ಲೋಟ, ಕರಡಿಗೆ ಮತ್ತು ಚಮಚಗಳು 
       ಹೌದು. ಮಕ್ಕಳಿಗೆ ಎಷ್ಟೇ ಆಟದ ಸಾಮಾನು ಇದ್ದರೂ, ಕಡೆಗೆ ಅವರು ಅಡುಗೆ ಮನೆಯ ಕಡೆಗೇ ಹೊರಳುತ್ತಾರೆ. ಕಾರಣ ಇಷ್ಟೇ. ತನ್ನ ಪ್ರೀತಿಪಾತ್ರರು ಸಾಕಷ್ಟು ಸಮಯ ಕಳೆಯುವ ಜಾಗ ಅದು. ಅಡುಗೆ ಮನೆಯಲ್ಲಿ ನಿತ್ಯ ಬಳಸುವ ವಸ್ತುಗಳು ಅವರಿಗೆ ಕುತೂಹಲಕಾರಿಯಾಗಿದ್ದಿರುತ್ತದೆ. ಮಕ್ಕಳು ಒಮ್ಮೆಯಾದರೂ ಪಾತ್ರೆ ಸೌಟು ಹಿಡಿದು ಆಟವಾಡಿಯೇ ಆಡುತ್ತಾರೆ. ಅದರಿಂದ ಹೊರಹೊಮ್ಮುವ ಶಬ್ದಗಳು, ಒಪ್ಪ ಓರಣ ಜೋಡಣೆ ಹಾಗೂ ಅಡಿಗೆಯನ್ನು ತಯಾರಿಸುವ ಕಲ್ಪನಾ ಕ್ರಿಯೆಗಳು ಮಕ್ಕಳನ್ನು ಅತೀವವಾಗಿ ಆಕರ್ಷಿಸುತ್ತದೆ. ೨ ವರ್ಷದ ಒಳಗಿನ ಮಕ್ಕಳಿಗೆ, ಒಂದಷ್ಟು ಲೋಟಗಳು ಮತ್ತು ಚಮಚಗಳನ್ನು ಸ್ವಚ್ಚವಾದ ಜಾಗದಲ್ಲಿ ಹಾಕಿ ಬಿಟ್ಟರೆ ಸಾಕು. ಅವರದ್ದೇ ಆದ ರೀತಿಯಲ್ಲಿ ಅವರು ಆಡುತ್ತಾರೆ. ಬಿಸಿ ಪಾತ್ರೆಯನ್ನು ಇಡಲು ಬಳಸುವ ರಿಂಗ್ ಅನ್ನು ಮಕ್ಕಳಿಗೆ ಆಡಲು ಕೊಡಬಹುದು. ಮಕ್ಕಳಿಗೆ ಅವರಿಷ್ಟದ ಅಡುಗೆ ಪದಾರ್ಥವನ್ನು ತಯಾರಿಸುವ (ಉ.ದಾ, ದೋಸೆ ಹೊಯ್ಯುವುದು, ಚಪಾತಿ ಲಟ್ಟಿಸುವುದು, ಮಜ್ಜಿಗೆ ಕಡೆಯುವುದು) ಬಗೆಗಿನ ಕಲ್ಪನಾ ಆಟ, ಅವರಲ್ಲಿ ಸ್ವಂತಿಕೆ, ಧೈರ್ಯ ಮತ್ತು ಆಹಾರದ ಬಗೆಗಿನ ಪ್ರೀತಿಯನ್ನು ಹೆಚ್ಚಿಸುತ್ತದೆ. ಸ್ವಲ್ಪ ದೊಡ್ಡ ವಯಸ್ಸಿನ ಮಕ್ಕಳಿಗೆ ಲೋಟಗಳನ್ನು ಒಂದರ ಮೇಲೊಂದರಂತೆ ಜೋಡಿಸುವುದು, ಚಮಚಗಳನ್ನು ಸಾಲಾಗಿ ಜೋಡಿಸುವುದು, ವರ್ತುಲ, ಚೌಕ, ನಕ್ಷತ್ರ ಈ ರೀತಿಯಾಗಿ ಬೇರೆ ಬೇರೆ ಆಕಾರಗಳನ್ನು ಮಾಡಲು ಹೇಳಿದರೆ, ಅದನ್ನು ಅವರು ಸವಾಲಾಗಿ ಸ್ವೀಕರಿಸಿ, ತಮ್ಮ ಕೌಶಲ್ಯದ ಪ್ರಯೋಗ ಮಾಡುತ್ತಾರೆ ಮತ್ತು ಸಂತಸ ಪಡುತ್ತಾರೆ. ಚಿಕ್ಕ ಪಾತ್ರೆ ಅಥವಾ ಚಿಕ್ಕ ಲೋಟವನ್ನು ದೊಡ್ಡ ಪಾತ್ರೆಯಲ್ಲಿ ಹಾಕಲು ಹೇಳುವುದು ಮಕ್ಕಳಿಗೆ ಸಣ್ಣ ದೊಡ್ಡದರ ಕಲ್ಪನೆಯನ್ನು ಕೊಡುತ್ತದೆ. ಬೇರೆ ಬೇರೆ ಪ್ರಮಾಣದ ಕರಡಿಗೆ ಮತ್ತು ಅದರ ಮುಚ್ಚಳವನ್ನು ತೆಗೆದು ಮನಬಂದಂತೆ ಇರಿಸಿ, ನಂತರದಲ್ಲಿ ಮಕ್ಕಳಿಗೆ ಜೋಡಿಸುವಂತೆ ಕೇಳಿದರೆ, ಮಕ್ಕಳು ಹೊಂದಾಣಿಕೆ ಮಾಡಲನುವಾಗಿ ತಮ್ಮ ಬುದ್ಧಿವಂತಿಕೆಯ ಪ್ರಯೋಗ ಮಾಡುತ್ತಾರೆ.





   


೨. ಕಾಯಿ, ಬೀಜ ಮತ್ತು ಮಣಿಗಳು
           ಚಿಕ್ಕಮಕ್ಕಳು ಬೀಜ-ಕಾಳುಗಳನ್ನು ಬಾಯಿಗೆ ಹಾಕುವ ಸಾಧ್ಯತೆ ಇರುವುದರಿಂದ, ತೀರ ಚಿಕ್ಕ ಮಕ್ಕಳನ್ನು ಹೊರತು ಪಡಿಸಿ, ಇತರ ಮಕ್ಕಳಿಗೆ ಮನೆಯಲ್ಲಿಯೇ ಇರುವ ಕಾಳು, ಧಾನ್ಯಗಳನ್ನು ಕೊಟ್ಟು ಸಾಕಷ್ಟು ತರದಲ್ಲಿ ಆಟವಾಡಿಸಬಹುದು. ಉದಾಹರಣೆಗೆ, ಕರವೀರದ ಬೀಜಗಳು ಸಾಮಾನ್ಯವಾಗಿ ನಮಗೆ ಸಿಗುತ್ತವೆ. ಅದನ್ನು ಚೆನ್ನಾಗಿ ತೊಳೆದು ಒಣಗಿಸಿಕೊಂಡರೆ, ಸ್ವಲ್ಪ ಸಣ್ಣ ಪ್ರಾಯದ ಮಕ್ಕಳಿಗೆ ಪಾತ್ರೆಗೆ ತುಂಬಲು ಕೊಡಬಹುದು, ಚಿಕ್ಕ ಮಕ್ಕಳಿಗೆ ಅದಕ್ಕಿಂತ ಸಂತೋಷದ ಆಟ ಬೇರೊಂದಿಲ್ಲ. ಸ್ವಲ್ಪ ದೊಡ್ಡ ಗಾತ್ರದ ಬೀಜವಾಗಿರುವುದರಿಂದ ಈ ತರದ ಬೀಜಗಳು ನಿರುಪದ್ರವ ವಸ್ತುಗಳು. ಮಕ್ಕಳು ನುಂಗುವ ಭಯವಿರುವುದಿಲ್ಲ. ಹಾಗೆಯೇ, ಬೇರೆ ಬೇರೆ ಪ್ರಕಾರದ ಕಾಳುಗಳನ್ನು ಒಂದು ಬಟ್ಟಲಲ್ಲಿ ಹಾಕಿ, ೩-೪ ಬಟ್ಟಲುಗಳನ್ನು ನೀಡಿ ಕಾಳುಗಳನ್ನು ವಿಂಗಡಣೆ ಮಾಡಲು ಕೇಳಿದರೆ, ಮಕ್ಕಳಿಗೆ ಪ್ರಾಯೋಗಿಕವಾದ ಈ ಆಟ ಇಷ್ಟವಾಗುತ್ತದೆ. ಜೊತೆಗೆ,  ಸ್ವಲ್ಪ ದೊಡ್ಡ ದೊಡ್ಡ ಧಾನ್ಯಗಳನ್ನು ಸಾಲಾಗಿ ಅಥವಾ ಇನ್ನಿತರೇ ಆಕಾರಗಳಲ್ಲಿ ಜೋಡಿಸಲು ಕೂಡ ಹೇಳಬಹುದು. ಅವರಿಗೆ ಅವರದ್ದೇ ಆದ ಒಂದು ಆಕ್ಟಿವಿಟಿ ಬುಕ್ ಎಂದು ತೆಗೆದಿಟ್ಟು ಅದರಲ್ಲಿ ವಿಧ ವಿಧವಾದ ಚಿತ್ರಗಳನ್ನು ಮಾಡಿ, ಅಂಟನ್ನು ಹಚ್ಚಿಸಿ ನಂತರದಲ್ಲಿ ವಿವಿಧ ಬಣ್ಣದ ಧಾನ್ಯಗಳನ್ನು ಅಂಟಿಸಲು ಹೇಳಿದರೆ ಮಕ್ಕಳಿಗೆ ಒಂದು ರೀತಿಯ ಮೋಜಿನ ಚಟುವಟಿಕೆಗಳನ್ನು ನೀಡಿದಂತಾಗುತ್ತದೆ.






೩. ತರಕಾರಿ ಹಣ್ಣುಗಳು
          ತರಕಾರಿ ಹಣ್ಣುಗಳನ್ನು ಅಡಿಗೆಗೆ ಅಥವಾ ಬಳಕೆಗೆ ಉಪಯೋಗಿಸುವುದರ ಜೊತೆಯಲ್ಲಿ, ಅದನ್ನು ಮಕ್ಕಳಿಗೆ ಒಂದು ಕಲಿಕಾ ಮಾಧ್ಯಮವಾಗಿ ಬಳಸಿಕೊಳ್ಳಬಹುದು. ಇದರಿಂದ ಮಕ್ಕಳಿಗೆ ಹಣ್ಣು ತರಕಾರಿಗಳ ಪರಿಚಯದ ಜೊತೆಗೆ, ಆಹಾರದ ಬಗೆಗಿನ ಆಸಕ್ತಿ ಹೆಚ್ಚುತ್ತದೆ. ಇನ್ನೂ ಹಲ್ಲು ಮೂಡಿರದ ಮಕ್ಕಳಿಗೆ, ಸ್ವಚ್ಚಗೊಳಿಸಿದ ಒಂದು ಕ್ಯಾರಟ್ ನ್ನು ಕೈಗಿತ್ತರೆ ಸಾಕು, ಮಗು ಸಂತೋಷದಿಂದ ಅದನ್ನು ಬಾಯಲ್ಲಿಟ್ಟು ಕಚ್ಚಲು ಪ್ರಯತ್ನಿಸುತ್ತದೆ. ಹಲ್ಲು ಹುಟ್ಟುವಾಗಿನ ಅಹಿತಕರ ಅನುಭವಕ್ಕೆ ಈ ರೀತಿಯಾಗಿ ಚೂಪು ಹರಿತವಿಲ್ಲದ ಕ್ಯಾರಟ್ ತಿನ್ನಲು ಕೊಡುವುದು ತುಂಬಾ ಸಹಾಯವಾಗುತ್ತದೆ. ಅದರ ಜೊತೆಗೆ ಕ್ಯಾರಟ್ ರಸವು ಮಗುವಿನ ಬಾಯಿಯಲ್ಲಿ ಸಮ್ಮಿಶ್ರಣಗೊಂಡು, ಅದರ ಸಾರವು ಜೀರ್ಣಗೊಳ್ಳುವಲ್ಲಿ ಸಹಕಾರಿಯಾಗುತ್ತದೆ. ಸ್ವಲ್ಪ ದೊಡ್ಡ ವಯಸ್ಸಿನ ಮಕ್ಕಳಿಗೆ ಬೀನ್ಸ್ ಬೆಂಡೆಕಾಯಿ ಈ ತರದ ಉದ್ದ ತರಕಾರಿಗಳನ್ನು ಜೋಡಿಸಲು ಕೊಡಬಹುದು. ಮತ್ತು ಎಲ್ಲ ಬಗೆಯ ತರಕಾರಿಗಳನ್ನು ಅವರೆದುರು ಇಟ್ಟು, ಅವುಗಳ ಹೆಸರು, ಬಣ್ಣ, ಗಾತ್ರ  ಮತ್ತು ಸ್ವರೂಪವನ್ನು ಕೇಳಿದರೆ ಮತ್ತು ತಿಳಿಸಿದರೆ, ಅಲ್ಲಿಯೇ ಒಂದು ಕಲಿಕೆ ಆಗಿಯೇ ಬಿಟ್ಟಿತು ಅಲ್ಲವೇ? ಇನ್ನು, ಕೆಲವು ಹಣ್ಣು ತರಕಾರಿಗಳನ್ನು ಮಕ್ಕಳಿಗೆ ಪೇಯಿಂಟ್ ಮಾಡಿಸಲು ಕೂಡ ಬಳಸಬಹುದು. ಉದಾಹರಣೆಗೆ, ಬೆಂಡೆಕಾಯಿಯನ್ನು ಚಿಕ್ಕದಾಗಿ ಕತ್ತರಿಸಿಕೊಂಡು, ಬಣ್ಣ ಹಚ್ಚಿಸಿ ಅದರಿಂದ ಹೂವಿನ ಚಿತ್ರವನ್ನು ರಚಿಸಲು ಅಚ್ಚಿನಂತೆ ಬಳಸಬಹುದು. ಬೀನ್ಸ್ ಅನ್ನು ಚೂಪಾಗಿ ಕತ್ತರಿಸಿ ಎಲೆಯ ಚಿತ್ರ ಬರೆಯಲು ಉಪಯೋಗಿಸಬಹುದು. ಅಲೂಗಡ್ಡೆಯನ್ನು ಅರ್ಧ ಕತ್ತರಿಸಿ, ಅದರಲ್ಲಿ ಯಾವುದಾದರೂ ಸಣ್ಣ ಡಿಸೈನ್ ಕೊರೆದು ಕೊಟ್ಟರೆ ಸಾಕು, ಮಕ್ಕಳ ನಂತರದ ಅರ್ಧ ಗಂಟೆಯ ಮೋಜು ಖಚಿತವಾದದ್ದು.








೩. ಮೇಜು, ಕುರ್ಚಿ ಮತ್ತು ಟೀಪಾಯಿ
         ಮೇಜು ಕುರ್ಚಿಗಳನ್ನು ಬಳಸಿ ಏನು ಮಾಡಬಹುದಪ್ಪ ಎಂದು ನಿಮಗನಿಸಬಹುದು. ಆದರೆ ಇವುಗಳನ್ನೂ ಕೂಡ ಆಟದ ಸಾಮಗ್ರಿಗಳಾಗಿ ಬಳಸಿಕೊಳ್ಳಬಹುದು. ಒಂದು ದೊಡ್ಡ ಮೇಜು ಇದ್ದರೆ, ಮೇಜು ಸಂಪೂರ್ಣ ಮುಚ್ಚುವಷ್ಟು ದೊಡ್ಡ ಮೇಲು ಹೊದಿಕೆಯನ್ನು ಹಾಕಿಟ್ಟರೆ, ಅದರಡಿಯಲ್ಲಿ ನಿಮ್ಮ ಪುಟ್ಟ ಮಗುವಿಗೊಂದು ಸ್ವಂತ ಮನೆ ರೆಡಿ. ಮಕ್ಕಳಿಗೆ ಕಾಲ್ಪನಿಕ ಆಟಗಳು ಅತೀವ ಸಂತೋಷವನ್ನು ಕೊಡುತ್ತದೆ ಜೊತೆಗೆ ಅವರು ಬುದ್ದಿ ವಿಕಸನಕ್ಕೆ ಸಾಕಷ್ಟು ಸಹಾಯವಾಗುತ್ತದೆ. "ಇದು ನಿನ್ನ ಮನೆ, ನಾನು ಬರಲೇ? ನನಗೇನು ಕೊಡುತ್ತೀಯ?" ಎಂದೆಲ್ಲ ಕಾಲ್ಪನಿಕ ಸನ್ನಿವೇಶಗಳನ್ನು ರಚಿಸಿದರೆ, ಮಗು ನಾನಾ ರೀತಿಯಲ್ಲಿ ಆದುಳು ಇಷ್ಟ ಪಡುತ್ತದೆ ಜೊತೆಗೆ ಮನೆಯವರ ಚಟುವಟಿಕೆಯನ್ನು ಗಮನಿಸಿಕೊಂಡು ಅದರಂತೆಯೇ ತಾನೂ ಕೂಡ ವರ್ತಿಸಲು ಪ್ರಯತ್ನಿಸುತ್ತದೆ. ಆದರೆ ಮಗುವಿಗೆ ಅದರಡಿಯಲ್ಲಿ ಹೋಗುವಾಗ ತಾಗಿಸಿಕೊಳ್ಳದಂತೆ ಮುನ್ನಚ್ಚೆರಿಕೆಯ ಸೂಚನೆ ಅಗತ್ಯ. ಇನ್ನು ಮನೆಯಲ್ಲಿ ಸ್ವಲ್ಪ ಆಡುವಷ್ಟು ವಿಶಾಲ ಜಾಗವಿದ್ದರೆ, ಮಗುವಿಗೆ ಅದರಿಷ್ಟದ ಆಟಿಕೆ ಅಥವಾ ವಸ್ತುವನ್ನು ಕಾಣುವಂತೆ ಒಂದು ಕುರ್ಚಿಯ ಮೇಲಿಟ್ಟು, ಮಕ್ಕಳಿಗೆ ದೂರದಿಂದ ಅಂಬೆಗಾಲಿಟ್ಟು ಬರಲು, ಕುಪ್ಪಳಿಸಿ ಬರಲು, ಉಲ್ಟಾ ನೆಡೆದು ಬರಲು ಆಕರ್ಷಿಸಬಹುದು. ಇದರಿಂದ ಮನೆಯಲ್ಲಿಯೇ ಅವರಿಗೆ ದೈಹಿಕ ವ್ಯಾಯಾಮವಾದಂತಾಗಿ ಮಕ್ಕಳ ಬೆಳವಣಿಗೆಗೆ ಸಹಾಯಕವಾಗುತ್ತದೆ.


೪. ರೊಟ್ಟಿನ ಕೊಳವೆ, ನಿರುಪಯುಕ್ತ ಪೊಟ್ಟಣಗಳು
           ನಿಮ್ಮ ಮನೆಯಲ್ಲಿ ಊದಿನ ಕಡ್ಡಿಯ ಕೊಳವೆ, ಟೀ ಪೌಡರ್ ಪೊಟ್ಟಣ, ಟೂತ್ ಪೇಸ್ಟ್ ಬಾಕ್ಸ್,ಈ ತರಹದ ಖಾಲಿ ಪೊಟ್ಟಣ ಸೀದಾ ಕಸದಬುಟ್ಟಿಗೆ ಹೋಗುತ್ತಿದೆಯೇ? ಮುಂದಿನ ಸಲ ಎತ್ತಿಡಿ. ಈ ತರದ ಪೊಟ್ಟಣಗಳನ್ನು ಒಳ್ಳೆ ರೀತಿಯಲ್ಲಿ ತೆಗೆದಿಟ್ಟು ಮಕ್ಕಳಿಗೆ ರೈಲಿನ ಮಾದರಿ ಮಾಡಬಹುದು, ಪೊಟ್ಟಣಗಳನ್ನು ಏರಿಸಿ ದೊಡ್ಡ ಬಿಲ್ಡಿಂಗ್ ಕಟ್ಟಲು ಕೊಡಬಹುದು. ಮಕ್ಕಳಿಗೆ ಇಷ್ಟವಾದ ವಸ್ತುವನ್ನು ಒಂದು ಚಿಕ್ಕ ಪೊಟ್ಟಣದಲ್ಲಿ ತುಂಬಿಟ್ಟು, ಅದನ್ನು ಮತ್ತೊಂದು ದೊಡ್ಡ ಪೊಟ್ಟಣದಲ್ಲಿ ಹಾಕಿ, ಇದೇ ರೀತಿಯನ್ನು ಪುನರಾವರ್ತಿಸಿ ಸಾಕಷ್ಟು ಪೆಟ್ಟಿಗೆ ಮಾಡಿ ಕೊಟ್ಟರೆ, ಮಕ್ಕಳಿಗೆ ಅದನ್ನು ಹುಡುಕಿ ತೆಗೆಯುವುದೇ ಒಂದು ಮೋಜಿನ ಆಟವಾಗುತ್ತದೆ. ಅದರಿಂದ ಮಕ್ಕಳಿಗೆ ಸಂತೋಷವೋ ಸಂತೋಷ. ಸಣ್ಣ ಸಣ್ಣ ರೊಟ್ಟಿನ ಪೆಟ್ಟಿಗೆಗಳಿಗೆ ಬಣ್ಣ ಹಚ್ಚಿ ಇಲ್ಲವೇ ನಿರುಪಯುಕ್ತ ಬಟ್ಟೆಯಿಂದ ಸುತ್ತಿ ಅಲಂಕರಿಸಿಡಿ ಮತ್ತು ಮಕ್ಕಳಿಗೆ ಅವರ ತರತರದ ಆಟದ ಸಾಮಾನುಗಳನ್ನು ವಿಂಗಡಿಸಿ ಹಾಕಿಟ್ಟು ಕೊಳ್ಳಲು ತಿಳಿಸಿ.


೫. ಡ್ರಾಯಿಂಗ್, ಪೇಯಿಂಟ್ ಇತರ ಶೈಕ್ಷಣಿಕ ವಸ್ತುಗಳು
       ಕೈಯಲ್ಲಿ ಪೆನ್ನು ಪೆನ್ಸಿಲ್ ಹಿಡಿತ ಹೊಂದಿರುವಷ್ಟು ದೊಡ್ಡ ಮಕ್ಕಳಿಗೆ, ಒಂದು ಸೊಗಸಾದ ಆಟವೆಂದರೆ ಅವರಿಗೆ ಪೆನ್ನು ಮತ್ತು ಪೇಪರ್ ಅವರ ಕೈಗೆ ಸಿಗುವುದು. ಯಾವುದೇ ಮಗುವಿಗೆ ಬೋರ್ (ಏನು ಮಾಡಬೇಕೆಂದು ಆ ಕ್ಷಣಕ್ಕೆ ತಿಳಿಯದ ಸನ್ನಿವೇಶ) ಆದಾಗ, ಅವರ ಕೈಗೆ ಸ್ಲೇಟು ಬಳಪ, ಅಥವಾ ಪೆನ್ನು ಪೇಪರ್ ಕಲರ್ ಪೆನ್ಸಿಲ್ ಗಳು, ಬಣ್ಣಗಳು ಇತರೆ ಕಲಾತ್ಮಕ ವಸ್ತುಗಳನ್ನು ನೀಡಿದಲ್ಲಿ, ಅವರು ಅವರದ್ದೇ ಆದ ರೀತಿಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳುತ್ತಾರೆ. ಬಣ್ಣಗಳ ಪರಿಕಲ್ಪನೆ ಮಕ್ಕಳಲ್ಲಿ ಮೂಡುತ್ತದೆ. ಪರಿಪೂರ್ಣ ಚಿತ್ರವನ್ನು ಬರೆಯಲು ಬಾರದಿದ್ದರೂ ಮಗುವಿಗೆ ತಾನು ಮನಸ್ಸಿನಲ್ಲಿ ಯೋಚಿಸಿದ ವಸ್ತುವಿನ ರಚನೆಯ ಕುರಿತು ಒಂದು ರೀತಿಯ ತೃಪ್ತಿ ಸಿಗುತ್ತದೆ. ಬಾಚಣಿಗೆ, ಸ್ಪಂಜ್ ಅಥವಾ ಹತ್ತಿಯನ್ನು ಬಳಸಿ, ಬಣ್ಣಗಳಿಂದ ಕಲಾತ್ಮಕ ಚಿತ್ರಗಳನ್ನು ಮಾಡಲು ಕೇಳಬಹುದು. ಅನುಕೂಲವಿದ್ದರೆ ನಾವು ಕೂಡ ಅವರೊಡನೆ ಕೂತು ಮಾರ್ಗದರ್ಶನ ಮಾಡುವುದರಿಂದ ಅವರಲ್ಲಿ ಕಲಾತ್ಮಕತೆಯ ಕೌಶಲ್ಯವನ್ನು ಉತ್ತಮಗೊಳಿಸಬಹುದು. ಅಂತೆಯೇ, ಯಾವುದೇ ಪಾತ್ರೆಯನ್ನು ಮೂಲ ಆಧಾರದ ವಸ್ತುವಾಗಿಟ್ಟುಕೊಂಡು ಅದರ ಮೇಲೆ ನಿರುಪಯುಕ್ತ ಪೇಪರ್ ಚೂರುಗಳನ್ನು ೪-೫ ಸುತ್ತು ಅಂಟಿಸುತ್ತ ಬಂದರೆ ಮಕ್ಕಳಿಂದಲೇ ಪೇಪರ್ ಬಾಕ್ಸ್, ಪಾತ್ರೆ ಇನ್ನಿತರ ಉಪಯೋಗಿ ವಸ್ತುಗಳ ರಚನೆಯಾಗುತ್ತದೆ. ಇನ್ನೂ ಒಂದು ಹೆಜ್ಜೆ ಮುಂದಕ್ಕೆ ಹೋಗಿ, ಯಾರಿಗೆ ಅಕ್ಷರಗಳ ಜ್ಞಾನವಿದೆಯೋ ಅಂತಹ ಮಕ್ಕಳಿಗೆ, ಒಂದು ಹಾಳೆಯಲ್ಲಿ, ಚೌಕ ಮನೆಗಳನ್ನು ಹಾಕಿ, ಮನಸ್ಸಿಗೆ ಬಂಡ ಅಕ್ಷರಗಳನ್ನು ಅದರಲ್ಲಿ ತುಂಬಿಸಿ, ಅಕ್ಷರಗಳನ್ನು ಬೇರೆ ಬೇರೆ ಮನೆಗಳಲ್ಲಿ ಪುನರಾವರ್ತಿಸಿ ಬರೆಯಿರಿ. ನಂತರ, ನೀವು ಹೇಳಿದ ಯಾವುದಾದರೊಂದು ಅಕ್ಷರ ಎಲ್ಲೆಲ್ಲಿ ಇವೆ ಎಂಬುದನ್ನು ಕಂಡು ಹಿಡಿಯಲು ಕೇಳಿದರೆ, ಮಕ್ಕಳಿಗೆ ಆಟದ ನೆಪದಲ್ಲಿ ಪಾಠದ ಪುನರಾವರ್ತನೆಯೂ ಆಗಿಬಿಡುತ್ತದೆ. ಸ್ವಲ್ಪ ದೊಡ್ಡ ವಯಸ್ಸಿನ ಮಕ್ಕಳಿಗೆ, ಇನ್ನೊಂದು ಕುತೂಹಲವಾದ ಮತ್ತು ಮಜಾ ಕೊಡುವ ಆಟವೆಂದರೆ, ನೀವು ನಿಮ್ಮ ಮಗುವಿನೊಡಗೂಡಿ, ಯಾವುದಾದರೂ ಅಕ್ಷರವನ್ನು ಗುರಿಯಾಗಿಟ್ಟುಕೊಂಡು, ಆ ಅಕ್ಷರದಿಂದ ಪ್ರಾರಂಭವಾಗುವ ಪದಗಳನ್ನು ಒಂದು ಹಾಳೆಯ ಮೇಲೆ ಬರೆಯುತ್ತಾ ಬನ್ನಿ. ಯಾರು ಹೆಚ್ಚಿನ ಶಬ್ದ ಬರೆಯುತ್ತಾರೆ ಎಂಬದು ಸವಾಲಾಗಿರಲಿ. ನೋಡಿ, ನಿಮ್ಮ ಮಕ್ಕಳು ಆಡುತ್ತಾ ಆಡುತ್ತಾ ಎಷ್ಟು ಕಲಿತಿರುತ್ತಾರೆ.






೬. ಗಿಡ ಬೆಳೆಸುವುದು
          ನಮ್ಮ ಮಗುವಿನ ಕೈಯ್ಯಾರೆ ಸಣ್ಣ ಮಣ್ಣಿನ ಜಾಗದಲ್ಲಿ ಮೆಂತೆ, ಕೊತ್ತಂಬರಿ, ಸಣ್ಣ ಹೂವಿನ ಗಿಡ,  ಈ ರೀತಿಯಾದ ವೇಗವಾಗಿ ಬೆಳವಣಿಗೆ ಇರುವ ಸಸ್ಯಗಳ ಬೀಜವನ್ನು ಬಿತ್ತಿಸಿದರೆ, ಅದು ಮೊಳಕೆ ಬರುವ ಹಂತದಿಂದ ಹಿಡಿದು, ಮನೆ ಬಳಕೆಗೆ ಬರುವಷ್ಟು ಬೆಳೆ ಬರುವ ವರೆಗೆ ಮಕ್ಕಳಿಗೆ ಸಸ್ಯಗಳ ಪಾಲನೆ ಪೋಷಣೆ ಬಗ್ಗೆ ತಿಳಿಸಿಕೊಡಬಹುದು. ಮಕ್ಕಳಿಗೆ ಗಿಡಗಳಿಗೆ ನೀರು ಹಾಕುವುದೇ ಒಂದು ಖುಷಿ. ಅದರಲ್ಲೂ ತಾವು ನೆಟ್ಟ ಗಿಡ, ತಮ್ಮದೇ ಮನೆಯಲ್ಲಿ ಬೆಳೆದ ಪೈರು ಎಂಬಿತ್ಯಾದಿ ಆಲೋಚನೆಗಳು, ಮಕ್ಕಳಲ್ಲಿ ಗಿಡ ಮರಗಳ ಬಗ್ಗೆ ಪ್ರೀತಿ ಮತ್ತು ಹೆಮ್ಮೆ ತರುವುದಲ್ಲದೆ, ಸ್ವಾಲಂಭನೆ ಮತ್ತು ಕಲಿಯುವ ಸ್ವತಂತ್ರತೆ ಅವರ ಮನಸ್ಸಿನಲ್ಲಿ ಬೇರೂರುತ್ತದೆ.



೬. ಇನ್ನಿತರೆ ಆಟಗಳು
           ಬಟ್ಟೆ ಒಣಗಿಸುವ ಕ್ಲಿಪ್ ಅನ್ನು ರೊಟ್ಟಿನ ಪೆಟ್ಟಿಗೆಗೆ ಜೋಡಿಸಲು ಹೇಳುವುದು. ಚಪಾತಿ ಹಿಟ್ಟನ್ನು ಕೈಗಿತ್ತು ಯಾವುದೇ ತರಹದ ಅಕಾರ ಮಾಡಿ ಆನಂದಿಸಲು ಬಿಡುವುದು. ಹಿಡಿಕಡ್ಡಿ ಬಳಸಿ ಕಡ್ಡಿಯಾಟ ಆಡುವುದು. ನ್ಯೂಸ್ ಪೇಪರ್ ಅಥವಾ ಇನ್ನಿತರ ವೇಸ್ಟ್ ಪೇಪರ್ ಬಳಸಿ, ಟೋಪಿ, ದೋಣಿ, ಒರಿಗಾಮಿ ವಸ್ತುಗಳ ರಚನೆ ಮಾಡಬಹುದು. ಕಿಟಕಿ ಕರ್ಟನ್ ಗಳಿಗೆ ಹಾಕುವ ರಿಂಗ್ ಅನ್ನು ಒಂದು ದಾರಕ್ಕೆ ಪೋಣಿಸಲು ತಿಳಿಸುವುದು. ಕೈಗೆ ಹಾಕುವ ಗಾಜಿನದಲ್ಲದ ಬಳೆಗಳನ್ನು ನೀಡಿ, ತಮಿಷ್ಟದ ಆಕಾರವನ್ನು ಮಾಡಲು ಮಕ್ಕಳಿಗೆ ಹೇಳಬಹುದು. ಕವಡೆ ಆಟ, ಪದಬಂಧ ಇತರೆ ಆಟಗಳು ಮನೆಯಲ್ಲಿಯೇ ಆಡಬಹುದಂತದಾಗಿದೆ. ಮನೆಯಲ್ಲಿ ಬಳಕೆಯಾಗದ ಹೆಚ್ಚಿನ ಕುಕ್ಕರ್ ಗ್ಯಾಸ್ಕೆಟ್ ಇದ್ದರೆ, ಅದನ್ನು ಬಳಸಿ ಕುಪ್ಪಳಿಸಲು ಮಕ್ಕಳಿಗೆ ಉತ್ತೇಜನ ನೀಡಬಹುದು. ಒಂದು ತಟ್ಟೆಯಲ್ಲಿ ನಿತ್ಯ ಉಪಯೋಗಿಸುವ ಚಿಕ್ಕ ಚಿಕ್ಕ ವಸ್ತುಗಳನ್ನಿಟ್ಟು, ಮಗುವಿಗೆ ಅದರಲ್ಲಿರುವ ವಸ್ತುಗಳ ಮನನ ಮಾಡಿಕೊಳ್ಳಲು ತಿಳಿಸಿ, ನಂತರದಲ್ಲಿ ಮಗುವಿಗೆ ತಾನು ನೋಡಿದ ವಸ್ತುಗಳನ್ನು ಸ್ಮರಿಸಲು ಕೇಳುವುದರಿಂದ ಆಟದ ಜೊತೆಯಲ್ಲೇ ಮಗುವಿನ ಜ್ಞಾಪಕ ಶಕ್ತಿಯೂ ಹೆಚ್ಚುತ್ತದೆ.

     






3 ಕಾಮೆಂಟ್‌ಗಳು: