ಭಾನುವಾರ, ಜುಲೈ 7, 2024

ಪ್ಲಾಸ್ಟಿಕ್ ಫ್ರೀ ಜುಲೈ ಕ್ಯಾಲೆಂಡರ್

 "ಪ್ಲಾಸ್ಟಿಕ್ ಫ್ರೀ ಜುಲೈ ಕ್ಯಾಲೆಂಡರ್" ಎಂಬ ಅಭಿಯಾನದ ಬಗ್ಗೆ ಯಾರಾದರೂ ಕೇಳಿದ್ದೀರಾ?

ಒಂದು ದಿನದಲ್ಲಿ ನಾವು ಅದೆಷ್ಟು ಪ್ಲಾಸ್ಟಿಕ್ ವಸ್ತುಗಳ ಜೊತೆ ನಾವು ವ್ಯವಹರಿಸುತ್ತೇವೆ ಒಂದು ತಿಂಗಳು ಪ್ಲಾಸ್ಟಿಕ್ ಕಡಿತಗೊಳಿಸಿ ಬದುಕಲು ಪ್ರಯತ್ನಿಸುವ ಚಾಲೆಂಜ್ ಇದು. ಬದುಕು ಸುಲಭವಿರುವುದು ಯಾರಿಗೆ ತಾನೇ ಇಷ್ಟವಾಗುವುದಿಲ್ಲ. ಬೆಳಿಗ್ಗೆ ಎದ್ದು ಹಲ್ಲುಜ್ಜಲು ಬಳಸುವ ಬ್ರಷ್ ನಿಂದ ಹಿಡಿದು, ರಾತ್ರೆ ಸೊಳ್ಳೆ ಕಾಯಿಲ್ ಹಾಕಿ ಮಲಗುವವರೆಗೆ ಅದೆಷ್ಟೋ ವಸ್ತುಗಳು ನಮಗೆ ನಮ್ಮ ಶ್ರಮವನ್ನು ಕಡಿತಗೊಳಿಸಿದೆ.  ಪ್ಲಾಸ್ಟಿಕ್ ನಮಗೆ ಇಷ್ಟು ಮೂಲಭೂತವಾಗಲು ಮುಖ್ಯ ಕಾರಣ ಅದರ ಬಹುಮುಖತೆ ಮತ್ತು ಅನುಕೂಲತೆ. ಉಪಯೋಗಗಳ ನೋಡಹೋದರೆ ಹೌದು, ಪ್ಲಾಸ್ಟಿಕ್ ವಸ್ತುಗಳ ಬಳಕೆಯಿಂದ ನಮ್ಮ ಆಹಾರ ಕೆಡದಂತೆ ಇಡಬಹುದಾಗಿದೆ. ಹಣದ ಮಿತವ್ಯಯ ಸಾಧ್ಯವಾಗಿದೆ, ಸ್ಪಾಂಡೆಕ್ಸ್, ನೈಲಾನು, ಅಕ್ರಿಲಿಕ್ ರೂಪದ ವಸ್ತ್ರಗಳು, ಶೂ ಜಾಕೇಟುಗಳು ನಮಗೆ ಹೆಚ್ಚಿನ ವೈವಿದ್ಯತೆ ನೀಡಿದೆ. ಪ್ಲಾಸ್ಟಿಕ್ ಪಾತ್ರೆಗಳು ಬಕೇಟುಗಳು, ಕವರು ಕೊಟ್ಟೆಗಳು ನೀರಿನಿಂದ ಸಂರಕ್ಷಿಸಿ ನಮ್ಮ ಬದುಕನ್ನು ಸಲೀಸಾಗಿಸಿದೆ. ಬಣ್ಣ ಬಣ್ಣದ ಪ್ಲಾಸ್ಟಿಕ್ ವಸ್ತುಗಳ ನಮ್ಮ ಬದುಕನ್ನು ಸುಂದರವಾಗಿ ಕಾಣಲು ಸಹಾಯ ಮಾಡಿದೆ. ಆದರೆ ಸ್ನೇಹಿತರೆ, ನಮಗೆ ಈ ಪ್ರಪಂಚದಲ್ಲಿ ದೊರಕುತ್ತಿರುವ ಅನೇಕ ಪ್ಲಾಸ್ಟಿಕ್ ವಸ್ತುಗಳಲ್ಲಿ ೬೦% ಕೇವಲ ನಮ್ಮ ಬಯಕೆಗಾಗಿ, ಆಕರ್ಷಣೆಯ ಮೂಲಕ ವ್ಯಾವಹಾರಿಕ ಲಾಭಕ್ಕಾಗಿಯೇ ತಯಾರುಗೊಂಡಿದೆಯೇ ಹೊರತು, ನಮ್ಮ ಅವಶ್ಯಕತೆಗಳಿಗಲ್ಲ. ಇವುಗಳೆಲ್ಲ ಇಲ್ಲದೆಯೂ ನಮ್ಮ ಹಿರಿಯರು ಆರೋಗ್ಯಕರ, ಆನಂದಮಯ ಜೀವನವನ್ನು ನೈಸರ್ಗಿಕ ಅಥವಾ ಪರಿಸರಕ್ಕೆ ಹೆಚ್ಚು ತೊಂದರೆಯಾಗದಂತಹ ವಸ್ತುಗಳ ಬಳಕೆಯಿಂದ ಸಾಗಿಸಿದ್ದರು. ಬೀಸಣಿಕೆ ಈ ಹಿಂದೆಯೂ ಇತ್ತು, ಈಗ ನಮಗೆ ಬ್ಯಾಟರಿ ಚಾರ್ಜ್ ಇರುವ ಹ್ಯಾಂಡ್ ಫ್ಯಾನ್ ಪ್ರಿಯವಾಗಿದೆ ಅಷ್ಟೇ. ಆಮೇಲೆ ರಸ್ತೆ ಬದಿಗಿನ ಪ್ಲಾಸ್ಟಿಕ್ ಕಸಗಳನ್ನು ನೋಡಿ ಬೈದುಕೊಳ್ಳುವವರು ನಾವೇ!

ಪ್ರಪಂಚದಾದ್ಯಂತ ಬಳಕೆಯಾಗುವ ಪ್ಲಾಸ್ಟಿಕ್ಗಳಲ್ಲಿ ರಿಸೈಕಲ್ ಆಗಿ ಬಳಕೆಯಾಗುವ ಪ್ಲಾಸ್ಟಿಕ್ ಪ್ರಮಾಣ ಕೇವಲ ೧೨%! ಮೈಕ್ರೋಪ್ಲಾಸ್ಟಿಕ್ ಗಳು ನಮ್ಮ ದೇಹಕ್ಕೆ ಸೇರುತ್ತಿರುವ ವೇಗ ಎಷ್ಟಿದೆಯೆಂದರೆ, ಇನ್ನೂ ಗರ್ಭದಲ್ಲಿರುವ ಶಿಶುವಿನ ದೇಹಕ್ಕೂ ಇದಾಗಲೇ ಅಂಟಿರುವ, ಆ ಮೂಲಕ ಬೆಳವಣಿಗೆಗೆ ತೊಂದರೆ ಆಗಿರುವ ಕುರಿತಾದ ವಿಷಯ ಈಗ ಬೆಳಕಿಗೆ ಬರುತ್ತಿದೆ. ಹೆಚ್ಚು ಮರುಬಳಕೆ ಮಾಡಲೂ ಆಗದೆ, ಅತ್ತ ನಾಶ ಪಡಿಸಲೂ ಆಗದೆ, ಕರಗದ ವಿಷ ವಸ್ತುವಾಗಿ, ನಮ್ಮ ಭೂಮಿಗೆ, ನಮ್ಮ ಆರೋಗ್ಯಕ್ಕೆ, ಸಕಲ ಜೀವಿಗಳಿಗೂ ನಾನಾ ಬಗೆಯಲ್ಲಿ ತೊಂದರೆಯಾಗಿ ಪರಿಣಮಿಸುತ್ತಿರುವ ಪ್ಲಾಸ್ಟಿಕ್ ಬಗ್ಗೆ ನಮಗಿನ್ನೂ ಅರಿವು ಮೂಡುತ್ತಿಲ್ಲ ಏಕೆಂದರೆ ನಾವು ಅದನ್ನು ಗ್ರಹಿಸದೇ ನಮ್ಮ ಸ್ವಾರ್ಥದ ಬದುಕಿನಲ್ಲಿ ಮುಳುಗಿ ಹೋಗಿದ್ದೇವೆ. ಖಾಯಿಲೆಗಳ ಮೂಲ ತಿಳಿಯುವ ಗೋಜಿಗೆ ಹೋಗುತ್ತಿಲ್ಲ ನಾವು. ಯಾವುದೇ ವಸ್ತುವಿನ ಮೌಲ್ಯ ಅದು ಇನ್ನೊಂದರ ಮೌಲ್ಯವನ್ನು ಕಸಿದುಕೊಂಡು ಸಿಗುವಂತಾಗಿದ್ದರೆ, ಅದೆಷ್ಟೇ ಸಂತೋಷ ಕೊಟ್ಟರೂ ಬಳಕೆ ಧರ್ಮವಲ್ಲ. ಅದೇ ರೀತಿ ಪ್ಲಾಸ್ಟಿಕ್ ತಯಾರಿಕೆ, ಬಳಕೆ ಮತ್ತು ಅದರ ನಿರ್ಮೂಲನೆ ಮೂರೂ ಕೂಡ ನಮ್ಮ ಪರಿಸರಕ್ಕೆ ಹಾನಿಕಾರಕವಾಗಿರುವುದರಿಂದ, ಅತ್ಯಂತ ಜಾಗರೂಕರಾಗಿ ಕನಿಷ್ಟ ಬಳಕೆಯೊಂದೇ ನಮಗೀಗ ಇರುವ ಏಕೈಕ ಮಾರ್ಗ. ರೆಡ್ಯೂಸ್ (ಕಡಿತಗೊಳಿಸುವುದು), ರಿಯೂಸ್ (ಮರುಬಳಕೆ), ರಿಸೈಕಲ್ (ಮರುಸೃಷ್ಟಿ) ಇವು ಮೂರು ವಿಷಯಗಳು ನಾವು ದಿನನಿತ್ಯ ಮನೆಗೆ ತರುವ, ಬಳಸುವ ಮತ್ತು ಎಸೆಯುವ ಕಾರ್ಯದಲ್ಲಿ ಅಳವಡಿಕೆಯಾಗಿರಬೇಕು. 

ಇದೇ ಕಳಕಳಿಯಿಂದ, ಆಸ್ಟ್ರೇಲಿಯಾದ ಪ್ಲಾಸ್ಟಿಕ್ ಫ್ರೀ ಫೌಂಡೇಶನ್ ನವರು ೨೦೧೧ ರಿಂದ ಪ್ರತೀ ವರ್ಷ ಜುಲೈ ತಿಂಗಳನ್ನು 'ಪ್ಲಾಸ್ಟಿಕ್ ಫ್ರೀ ಜುಲೈ' ಎಂಬ ಶೀರ್ಷಿಕೆಯಡಿ, ಜನರಿಗೆ ಪ್ಲಾಸ್ಟಿಕ್ ರಹಿತ ಜೀವನದ ಕಡೆಗೆ ಜಾಗೃತಿ ಮೂಡಿಸುವ ಸಲುವಾಗಿ, ಗರಿಷ್ಟ ಮಟ್ಟದಲ್ಲಿ ಪ್ಲಾಸ್ಟಿಕ್ ಕಡಿತ ಗೊಳಿಸುವ ಚಾಲೆಂಜ್ ಅನ್ನು ನೀಡುತ್ತಾರೆ. ಇದೊಂದು ಜಾಗೃತಿ ಕಾರ್ಯಕ್ರಮವಾಗಿದ್ದು, ಯಾರು ಬೇಕಾದರೂ ಈ ಚಾಲೆಂಜ್ ಅನ್ನು ಅವರ website ನಲ್ಲಿ ರಿಜಿಸ್ಟರ್ ಆಗಿ ಸ್ವೀಕರಿಸಬಹುದು. ಪ್ರತಿದಿನವೂ ಪ್ಲಾಸ್ಟಿಕ್ ಮಾರಕತೆಯ ಕರಾಳ ವಿಷಯ, ಪ್ಲಾಸ್ಟಿಕ್ ಕಡಿಮೆ ಮಾಡಲು ಉಪಯುಕ್ತ ಸಲಹೆ, ಇತರರ ಆದರ್ಶನೀಯ ನಡೆ ಇತ್ಯಾದಿ ಮಾಹಿತಿ ನೀಡುತ್ತಾರೆ. ಇದರಿಂದ ಲಾಭ? ಸ್ವಚ್ಛ ಪರಿಸರ, ಉತ್ತಮ ಅರೋಗ್ಯ ನಮಗೆ ಸಿಗುವ ಗಿಫ್ಟ್! ೩೧ ದಿನಗಳ ಕಾಲ ಮನೆಗೆ ಪ್ಲಾಸ್ಟಿಕ್ ತರದೇ ಇರುವ ವೃತವಿದು. ಪ್ಲಾಸ್ಟಿಕ್ ವಿಂಗಡನೆಯನ್ನು ಸರಿಯಾದ ರೀತಿಯಲ್ಲಿ ಮಾಡುವ ವೃತವಿದು. ಯಾರು ಬೇಕಾದರೂ ಮಾಡಬಹುದು, ವಯಸ್ಸು, ಲಿಂಗ, ಜಾತಿ  ಮತಗಳ ಬೇಧವಿಲ್ಲದೆ. ಅಯ್ಯೋ! "ಇವೆಲ್ಲ ಸಾಧ್ಯ ಇಲ್ಲಪಾ".. ಖಂಡಿತ ಸಾಧ್ಯವಿದೆ ಪ್ರತಿಯೊಬ್ಬರಿಂದ, ಹೇಗೆ ಎಂದು ತಿಳಿದುಕೊಂಡರೆ, ಪರ್ಯಾಯ ವ್ಯವಸ್ಥೆ ಹುಡುಕಿಕೊಂಡರೆ, ಮರುಬಳಕೆಮಾಡಿಕೊಂಡರೆ..! ಒಂದಷ್ಟು ಟಿಪ್ಸ್ ನಮ್ಮ ಕಡೆಯಿಂದ - 'ಆಗದು' ಎಂಬ ಯೋಚನೆ ಇಂದ, 'ನಾವು ಮಾಡಿದೆವು' ಗೆ ತಲುಪಲು.   

೧. ಕನಿಷ್ಠ ತೂಕದ ಬಟ್ಟೆಯ ಬೇರೆ ಬೇರೆ ಗಾತ್ರದ ೬-೮ ಚೀಲಗಳನ್ನು ಹೊಲೆಸಿಟ್ಟುಕೊಂಡು, ಮನೆ ಇಂದ ಯಾರೇ ಹೊರಗಡೆ ಹೋಗುವಾಗಲೂ ನಮ್ಮ ಜೇಬಿನಲ್ಲಿ, ಪರ್ಸಿನಲ್ಲಿ, ಗಾಡಿಯಲ್ಲಿ ಒಂದೊಂದು ಚೀಲಗಳನ್ನು ಇಟ್ಟುಕೊಂಡು, ಅವಶ್ಯಕತೆ ಇದ್ದಾಗ ಪ್ಲಾಸ್ಟಿಕ್ ಕವರ್ ಕೇಳದೆ ನಮ್ಮದೇ ಚೀಲದಲ್ಲಿ ಸಾಮಗ್ರಿಗಳನ್ನು ತರುವುದು. 


೨. ಒಮ್ಮೆ ಮಾತ್ರ ಬಳಸಿ ಎಸೆಯಬೇಕಾದ ನೀರಿನ ಬಾಟಲ್ಲು ಮಾರ್ಕೆಟಿನಲ್ಲಿ ಅತ್ಯಧಿಕ ಬಳಕೆಯಾಗಿ ಮಾಲಿನ್ಯ ತರುವ ವಸ್ತು. ಆದ್ದರಿಂದ ಎಲ್ಲಿಯೇ ಹೊರಗೆ ಹೋಗುವುದಾದರೂ, ನಮ್ಮ ಮನೆಗಳಿಂದಲೇ  ನೀರನ್ನು ಕೊಂಡೊಯ್ಯಬೇಕು. ನಮ್ಮ ಬ್ಯಾಗಿನಲ್ಲಿ, ಮರುಬಳಕೆ ಮಾಡಬಹುದಾದ ನೀರಿನ ಬಾಟಲಿ, ನಮ್ಮ ಕೈಯಲ್ಲಿ ಹಿಡಿಯುವ ಮೊಬೈಲ್ ನಷ್ಟು ಕಡ್ಡಾಯ ಮಾಡಿಕೊಳ್ಳಬೇಕು. 


೩. ಮನೆಗಳಲ್ಲಿ ಹೆಚ್ಚಿನ ಪ್ಲಾಸ್ಟಿಕ್ ಡಬ್ಬಿಗಳಿಗಿಂತಲೂ  ಸ್ಟೀಲು, ಕಬ್ಬಿಣ, ಗ್ಲಾಸುಗಳ ಬಳಕೆಯನ್ನು ಅಭ್ಯಾಸ ಮಾಡಿಕೊಳ್ಳುವುದು, ಹೋಟೆಲುಗಳಿಂದ ಪಾರ್ಸೆಲ್ ತೆಗೆದುಕೊಂಡು ಬರಲು, ನಮ್ಮದೇ ಮನೆಯಿಂದ ಡಬ್ಬಿಗಳ ಕೊಂಡೊಯ್ಯುವುದು, ಆನ್ಲೈನ್ ಆಹಾರ ಪದಾರ್ಥಗಳ ತರಿಸುವುದ ಕಡಿಮೆ ಮಾಡುವುದು  ಇತ್ಯಾದಿ ನಮ್ಮ ಆರೋಗ್ಯಕ್ಕೂ ಪೂರಕವಾದ ಅಂಶಗಳು. 

೪. ಮನೆಗೆ ಸುಧೀರ್ಘ ಸಮಯಕ್ಕೆ ಬೇಕಾಗುವ ನಿತ್ಯ ಬಳಕೆಯ ವಸ್ತುಗಳು ದಿನಸಿ  ಸಾಮಾನುಗಳು ಉದಾಹರಣೆಗೆ ಪೇಸ್ಟ್, ಶಾಂಪೂ, ಸೋಪುಗಳ ಅವಲೋಕಿಸಿ, ಚಿಕ್ಕ ಚಿಕ್ಕ ಸ್ಯಾಶೆ ತರುವ ಬದಲು, ದೊಡ್ಡ ಪ್ಯಾಕೆಟ್ ಗಳನ್ನು ತರಬಹುದು.  ಇವುಗಳಿಗೆಲ್ಲ ಪರ್ಯಾಯವಾಗಿ ನೈಸರ್ಗಿಕ ವಸ್ತುಗಳ ಹುಡುಕಿ, ಮನೆಯಲ್ಲಿಯೇ ತಯಾರು ಮಾಡಿಕೊಂಡು ಬಳಸುವುದು ಅತೀ ಉತ್ತಮ. 



೫. ಮಕ್ಕಳ ಸ್ಟೇಷನರಿ ವಸ್ತುಗಳು ಪೆನ್ನುಗಳು, ಮಕ್ಕಳು ಆಕರ್ಷಣೆಗೊಳಗಾಗುವ ಆಟಿಕೆ ವಸ್ತುಗಳು ಅತ್ಯಧಿಕ ಪ್ಲಾಸ್ಟಿಕ್ ಮನೆಗೆ ಬರುವ ವಸ್ತುಗಳು. ಹೊಸ ಪೆನ್ನಿಗಿಂತ ಇರುವುದಕ್ಕೆ ರೀಫಿಲ್ಸ್ ಉತ್ತಮ, ಹಾಳಾಗದಂತೆ ಕಾಪಾಡಿಕೊಳ್ಳುವ ಶಿಸ್ತು, ಪ್ಲಾಸ್ಟಿಕ್ ರಹಿತ ಬಣ್ಣದ ಪೆನ್ಸಿಲ್ಸ್ ಗಳು, ಇತರರಿಗೆ ಪ್ಲಾಸ್ಟಿಕ್ ವಸ್ತುಗಳ ಉಡುಗೊರೆ ಕೊಡದೇ ಇರುವುದು ಹೀಗೆ ಬದಲಾವಣೆಗೆ ನೂರಾರು ಮಾರ್ಗವಿದೆ. ಮಕ್ಕಳಾದರೆ ಮನೆಯ ನಿಯಮಗಳಿಂದ, ತುಸು ದೊಡ್ಡವರಾದರೆ ಅವರೊಂದಿಗೆ ಚರ್ಚಿಸಿ, ಅವಶ್ಯಕತೆ ಮತ್ತು ಬಯಕೆಯ ವಸ್ತುಗಳ ನಡುವಿನ ವ್ಯತ್ಯಾಸ ತಿಳಿಸಿ, ಸಾಧ್ಯವಾದಷ್ಟು ಪರ್ಯಾಯ ವಸ್ತುಗಳಕಡೆಗೆ ಮನ ಓಲೈಸುವುದು.

೬. ಕಾರ್ಯಕ್ರಮಗಳು, ಬರ್ತೇಡೇ ಪಾರ್ಟಿಗಳಲ್ಲಿ, ಅಲಂಕಾರಕ್ಕೆ ಅತೀ ಹೆಚ್ಚಿನ ಮೈಕ್ರೋಪ್ಲಾಸ್ಟಿಕ್ ಗಳ ಬಳಕೆ ಆಗುತ್ತದೆ. ಪೇಪರ್ ಕಪ್ಪಿನಲ್ಲಿಯೂ ಕೂಡ ಒಂದು ಪದರ ತೆಳುವಾದ ಪ್ಲಾಸ್ಟಿಕ್ ಹೊದಿಕೆ ಇದ್ದೇ ಇರುತ್ತದೆ. ಹಾಗಾಗಿ ಸಾಧ್ಯವಾದಷ್ಟು ಸ್ಟೀಲ್ ಲೋಟ ತಟ್ಟೆಗಳು, ಪರಿಸರ ಸ್ನೇಹಿ ವಸ್ತುಗಳಿಂದ ಮಾಡಿದ ಸಾಮಗ್ರಿಗಳನ್ನು ಮಾತ್ರ ಕೊಂಡುಕೊಳ್ಳುವುದು. ಗಿಫ್ಟ್ ರಿಟರ್ನ್ ಗಿಫ್ಟ್ ಪರಿಸರ ಸ್ನೇಹಿ ಆಗಿರಲಿ ಇಲ್ಲವಾದಲ್ಲಿ ಒಳ್ಳೆಯ ಸಿಹಿ ಹಂಚಿ ಮಕ್ಕಳಿಗೆ ಅವರ ವಯಸ್ಸಿಗನುಗುಣವಾಗಿ ಆಟವಾಡಿಸಿ ಆಡಿಸಿ ಸಂತೋಷಪಡಿಸಿ ಕಳಿಸಿ.


೭. ಅನಿವಾರ್ಯವಿಲ್ಲದಿದ್ದರೆ, ಸೀಲ್ ಆಗಿರುವ ಪ್ಯಾಕೆಟ್ಗಳಿಗೆ ಹೋಗದೆ, ಸ್ಥಳೀಯ ದಿನಸಿ ಅಂಗಡಿಗಳಲ್ಲಿ, ನಾವು ಕೊಂಡೊಯ್ದಿರುವ ಎಕ್ಸ್ಟ್ರಾ ಪ್ಲಾಸ್ಟಿಕ್ ಕವರುಗಳಲ್ಲಿಯೇ ಧಾನ್ಯ, ಹಿಟ್ಟುಗಳನ್ನು ತುಂಬಿಕೊಡಲು ಕೇಳಿದರೇ, ದಿನಸಿಯಿಂದ ಬರುವ ೧೦ ಪ್ಲಾಸ್ಟಿಕ್ ಕವರ್ಗಳನ್ನು ಕಡಿಮೆ ಮಾಡಬಹುದು. 

೮. ಸೌಂದರ್ಯ ವರ್ಧಕಗಳು, ಅಲಂಕಾರಿಕ ವಸ್ತುಗಳು, ಮಕ್ಕಳ ಕ್ರಾಫ್ಟ್ ಎಲ್ಲೆಲ್ಲಿ ಮೈಕ್ರೋಪ್ಲಾಸ್ಟಿಕ್ ಚೂರುಗಳು ಉಧ್ಭವವಾಗುತ್ತದೆಯೋ ಅವೆಲ್ಲವನ್ನೂ ನಿರ್ಧರಿಸಿ ತ್ಯಜಿಸಿ. ಪಾಲಿಸ್ಟರ್, ನೈಲಾನ್ ಬಟ್ಟೆಗಳ ಬದಲು ಹತ್ತಿಯಿಂದ ತಯಾರಿಸಿದ ಬಟ್ಟೆ ಉತ್ತಮ. ಪ್ಯಾಕೆಟ್ ಗಳನ್ನು ಕತ್ತರಿಸುವಾಗ, ಸಣ್ಣ ಚೂರುಗಳಾಗಿ ಬೇರ್ಪಡಿಸದೇ, ಅಡ್ಡ ಕತ್ತರಿಸಿ ಬಳಸಬಹುದು

 ಪ್ಲಾಸ್ಟಿಕ್ ಬಳಕೆ ಕಡಿಮೆ ಮಾಡಬೇಕು ಎನ್ನುವುದು ನಿಜ. ಪರ್ಯಾಯವಾಗಿ ಈಗ ಸಾಕಷ್ಟು ಕಡೆ ಪೇಪರ್ ಬ್ಯಾಗ್ ಗಳನ್ನು ನೀಡಲಾಗುತ್ತಿದೆ. ನಾವು ಪೇಪರ್ ಬ್ಯಾಗ್ನಲ್ಲಿ ಸಾಮಾನುಗಳನ್ನು ತರಕಾರಿಗಳನ್ನು ತರುತ್ತೇವೆ ಹಾಗಾಗಿ ನಮ್ಮ ಕೊಡುಗೆ ಧಾರಾಳವಾಗಿ ಸಾಕು ಎನಿಸಿದ್ದರೆ, ನಮ್ಮ ನಿಮ್ಮೆಲ್ಲರಿಗೂ ಒಂದು ಜ್ಞಾಪಿಸುವ ವಿಷಯವೆಂದರೆ, ಪ್ಲಾಸ್ಟಿಕ್ ಬಳಕೆ ಉಳಿಸುವ ಪೇಪರ್ ಮಾಡಲು ಅಷ್ಟೇ ಕಾಡು ನಾಶ, ಮರಗಳ ಕಡಿತ ಆಗುತ್ತಿದೆ!! ಬೇಜಾರಿನ ಸಂಗತಿ ಆದರೂ ವಾಸ್ತವ. ನಮಗೆ ಪಶ್ಚಾತ್ತಾಪ ಬರಬೇಕು ಕೂಡ. ಹಾಗಾದರೆ ಏನು ಮಾಡೋದು? 

ಎಲ್ಲೆಲ್ಲಿ ಅವಶ್ಯಕತೆ ಇಲ್ಲವೋ ಅಲ್ಲಲ್ಲಿ ಪೇಪರ್ ಬ್ಯಾಗ್ ಕೂಡ ತೆಗೆದುಕೊಳ್ಳದೇ ಇರೋಣ. ಉದಾಹರಣೆಗೆ, ತರಕಾರಿ ಹಣ್ಣುಗಳು, ನೇರವಾಗಿ ನಮ್ಮ ಚೀಲಕ್ಕೆ ಹೋಗಲಿ. 

ಸೂಪರ್ ಮಾರ್ಕೆಟ್ಗಳಲ್ಲಿ ಒಂದೊಂದು ತರಕಾರಿಗೆ ಒಂದೊಂದು ಪೇಪರ್ ಬ್ಯಾಗ್ ನೀಡಿ, ತೂಕ ಹಾಕಿ ಬೆಲೆಯ ಸ್ಟಿಕ್ಕರ್ ಹಚ್ಚಿ ಬಿಲ್ಲಿಂಗ್ ಗೆ ಕಳಿಸುತ್ತಾರೆ. ನಾವು ಪ್ರಯತ್ನಿಸಿದರೆ, ೩-೪ ತರಕಾರಿಗಳ ಒಂದೇ ಪೇಪರ್ ಬ್ಯಾಗಿನಲ್ಲಿ ಹಾಕಿಕೊಂಡು, ಅವುಗಳ ಬಿಲ್ಲಿಂಗ್ ಅನ್ನು ಒಟ್ಟಿಗೆ ಒಂದೇ ಬ್ಯಾಗಿಗೆ ಎಲ್ಲ ಸ್ಟಿಕ್ಕರ್ ಹಚ್ಚಿಕೊಡಿ ಎಂದು ಕೇಳಿ ಪಡೆಯಬಹುದು. 


ದಿನಂಪ್ರತಿ ನಾವು ಮಾರುಕಟ್ಟೆಯಿಂದ ತರುವ, ಆನ್ಲೈನ್ ಶಾಪಿಂಗ್ ಗಳಿಂದ, ಜೊಮ್ಯಾಟೋ ಸ್ವಿಗ್ಗಿಗಳಿಂದ ಬರುವ ಪೇಪರ್ ಬ್ಯಾಗ್ ಲೆಕ್ಕವಿಲ್ಲದಷ್ಟು... ಪೇಪರ್ ಬ್ಯಾಗ್ ಅನ್ನು ಹೇಗೆ ತೆಗೆಯುತ್ತೀರಾ? ಸಾಕಷ್ಟು ಮನೆಗಳಲ್ಲಿ, ಪರ್ ಎಂದು ಹರಿದು ಬಿಸಾಡುವ ಪ್ರತೀತಿ ಇದೆ. ಅದು ನಂತರಕ್ಕೆ ಕಸದ ಬುಟ್ಟಿಗೆ ಹೋಗುತ್ತದೆ. ಅದರ ಬದಲು ಅವೇ ಪೇಪರ್ ಬ್ಯಾಗ್ ಗಳನ್ನು ನೀಟಾಗಿ ತೆಗೆದು, ಅದರಲ್ಲಿಯ ಪ್ಲಾಸ್ಟಿಕ್  ಗಮ್ಟೇಪುಗಳನ್ನು ಬೇರ್ಪಡಿಸಿ, ಒಟ್ಟು ಮಾಡಿಟ್ಟರೆ, ಆ ಬ್ಯಾಗ್ ಗಳೆಲ್ಲವೂ ನಮಗೆ ಮರುಬಳಕೆಗೆ ಬರುತ್ತದೆ. 

ಮನೆಗೆ ಪೇಪರ್ ಬ್ಯಾಗ್ ಗಳು ಬರುವುದು ಅನಿವಾರ್ಯ. ಆದರೆ ನನಗೆ ಅದರ ಅಗತ್ಯ ಅಷ್ಟಾಗಿ ಇಲ್ಲ ಎಂದಿರಾ ? ಪರ್ವಾಗಿಲ್ಲ! ಹಾಗಾದರೆ,ಕೊನೇಪಕ್ಷ  ಪೇಪರ್ ಬ್ಯಾಗ್ಗಳನ್ನು ಒಟ್ಟು ಮಾಡಿ ಒಂದು ೧೦-೧೫ ಪೇಪರ್ ಬ್ಯಾಗ್ಗಳು ಒಟ್ಟಾದಾಗ ಹತ್ತಿರದ ತರಕಾರಿ ಅಂಗಡಿ, ಹೂವಿನ ಅಂಗಡಿ, ಸಣ್ಣ ಪುಟ್ಟ ಬೀದಿ ವ್ಯಾಪಾರಿಗಳಿಗೆ ನೀಟಾಗಿರುವ ಬ್ಯಾಗ್ಗಳನ್ನು ಕೊಟ್ಟು, ಅದನ್ನು ಪ್ಲಾಸ್ಟಿಕ್ ಕವರ್ ಬದಲು ಬಳಸಲು ಉಪಯೋಗಿಸಿಕೊಳ್ಳಲು ಹೇಳಿ. ಯಾವ ಸಂಕೋಚವೂ ಬೇಡ ಈ ಕೆಲಸಕ್ಕೆ! ಪೇಪರ್ ಬ್ಯಾಗ್ಗಳು ಬಳಸುವ ಸ್ಥಿತಿಯಲ್ಲಿರುವವರೆಗೆ ಮರುಬಳಕೆ ಆಗುತ್ತಿರಲಿ. 

ಪ್ಲಾಸ್ಟಿಕ್ ಮತ್ತು ಪೇಪರ್ ಬ್ಯಾಗ್ಗಳ ಕಡಿತದಿಂದ ಮರಗಳ ಹಸಿರು, ಭೂಮಿಯ ಉಸಿರು ಉಳಿಯಲಿ!

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ