Wednesday, October 26, 2016

ಮಾತಾಡ್ ಮಾತಾಡ್ ಮಲ್ಲಿಗೆ..

ಇವತ್ತಿಗೆ ನನ್ನ ಪಾಪು ನನ್ನನ್ನು 'ಅಮ್ಮಾ' ಎಂದು ಪೂರ್ತಿಯಾಗಿ ಕರೆದು ೩ ವರ್ಷಗಳಾದವು. ಎಷ್ಟೊಂದು ಸಂತೋಷದ ಕ್ಷಣ! ನಿಜ ಹೇಳಬೇಕೆಂದರೆ ಅಂದು ನನ್ನಲ್ಲಿ ಸಂತೋಷ, ಆಶ್ಚರ್ಯದ ಜೊತೆಗೆ ಪ್ರಶ್ನೆಯೊಂದು ಉದ್ಭವವಾಗಿತ್ತು. ಈ ಪಾಪುಗೆ ಹೇಗೆ ತಿಳಿಯಿತು ನನ್ನನ್ನು 'ಅಮ್ಮಾ' ಎಂದೇ ಸಂಭೋದಿಸಬೇಕೆಂದು. ಈ ಪ್ರಶ್ನೆ ಅಸಮಂಜಸ ಎನಿಸಬಹುದು ಆದರೂ ನನಗೆ ಸಂಶಯ ಕಾಡಿದ್ದೆಂತೂ ನಿಜ.. ಇನ್ನೊಂದು ಬಗೆಯಲ್ಲಿ ಹೇಳುತ್ತೇನೆ. ಇಂಗ್ಲೀಷ್ ಮಾತೃಭಾಷೆಯಾಗಿರುವಂತಹ ಮನೆಗಳಲ್ಲಿ,ಮಗುವು ತಾಯಿಗೆ 'Mommy', 'Mamma' ಎಂದೇ ಕರೆಯಲು ಪ್ರಾರಂಭಿಸುತ್ತದೆ.. ಮಗುವಿಗೆ ಹೇಗೆ ತಿಳಿಯಿತು ತಾನು English  ಭಾಷೆಯಲ್ಲಿ ಮಾತನಾಡಬೇಕೆಂದು? ವಿಷಯವಿಷ್ಟೇ, ಮಗುವು ಕಲಿಯುವುದು ಕೇವಲ ಅನುಕರಣೆಯಿಂದ, ಸಹಜವಾಗಿ ಮತ್ತು ತಮಗರಿವಿಲ್ಲದೆ...

ಯಾವುದೇ ಹುಟ್ಟಿದ ಶಿಶು, ಈ ಜಗತ್ತಿನಲ್ಲಿ ಇರುವ ಎಲ್ಲ ಭಾಷೆಗಳಿಗೆ (ಸುಮಾರು ೬೫೦೦ ಭಾಷೆಗಳಿವೆ ಎಂದು ಅಂದಾಜಿಸಲಾಗಿದೆ) ಅವಶ್ಯಕತೆ ಇರುವ ೧೫೦ ಕ್ಕೂ  ಹೆಚ್ಚಿನ ಧ್ವನಿಗಳನ್ನು ಗ್ರಹಿಸುವ ಮತ್ತು ತಮ್ಮ ಬಾಯಿಯಿಂದ ಹೊರಡಿಸುವ ಸಾಮರ್ಥ್ಯ ಪಡೆದಿರುತ್ತದೆ ಎಂಬ ವಿಷಯವನ್ನು ನಾನು ಓದಿದಾಗ ಇದು ನಮ್ಮ ಕಲ್ಪನೆಗೂ ಮೀರಿದ್ದು ಎಂದೆನಿಸಿತು. ಈಗ ಭಾಷೆ, ಶಬ್ದ, ವಾಕ್ಯ, ವ್ಯಾಕರಣ ಎಲ್ಲವನ್ನೂ ಕಲಿತಿರುವ ನಮ್ಮಿಂದ ಅಷ್ಟೊಂದು ಧ್ವನಿಗಳನ್ನು ಹೊರಡಿಸಲು ಸಾಧ್ಯವಾಗುವುದಿಲ್ಲ ಏಕೆಂದರೆ ನಾವು ಈಗಾಗಲೇ ಪಳಗಿ ಹೋಗಿರುತ್ತೇವೆ 'ಭಾಷೆ'ಯ ಬಳಕೆಗೆ. ಆದರೆ ಅದೇ ಹುಟ್ಟಿದ ಮಗುವಿಗೆ ಪ್ರತಿ ಉಚ್ಚಾರಣೆಯೂ ಒಂದು ಸಹಜದತ್ತವಾದ ಪ್ರತಿಕ್ರಿಯೆ ಆಗಿರುತ್ತದೆ. ಮಗುವು ತಾನು ಹುಟ್ಟಿದಾಗಿನಿಂದ ಕೇಳುವ ಎಲ್ಲ ಧ್ವನಿಗಳನ್ನು ಉಚ್ಚರಿಸಲು,  ಪ್ರಯೋಗಿಸಲು ಪ್ರಯತ್ನಿಸುತ್ತಿರುತ್ತದೆ. ಉದಾಹರಣೆಗೆ, ಮಗು ಹಸಿವಿನಿಂದ ಅತ್ತಾಗ, "ಅಮ್ಮ ಬಂದೆ.. " ಎನ್ನುತ್ತಾ ತಾಯಿ ಮಗುವಿನ ಹತ್ತಿರ ಸಮೀಪಿಸಿದಾಗ, ಮ್..ಮ್ಮ್ಮ್ ..ಎಮ್...ಅಮ್.. ಎಂದು  ಪ್ರಾಯೋಗಿಕವಾಗಿ ಮಗು ಹೊರಡಿಸಿದ ದನಿಗೆ ತಾಯಿ ಅಥವಾ ಪೋಷಕರು ಬಂದು ಮಗುವನ್ನು ಎತ್ತಿ ಕರೆದುಕೊಂಡಾಗ, ಓ ಎಂದು ಪ್ರತಿಕ್ರಿಯೆ ನೀಡಿದಾಗ ಮಗುವು ತನ್ನಲ್ಲೇ ಅರ್ಥೈಸಿಕೊಳ್ಳುತ್ತದೆ ಈ 'ಮ್ಮ್.. ' ಉಚ್ಚಾರ ನನಗೆ ಆರಾಮವನ್ನು ನೀಡಲು  ಬರುವಂತದ್ದು ಎಂದು!! ಅಂತೆಯೇ ತನ್ನ ಮೆದುಳಿನಲ್ಲಿ  ನೋಂದಣಿಸಿಕೊಳ್ಳುತ್ತದೆ. ಅದಕ್ಕೆ ರೂಪು ಕೊಡುವಂತೆ ನಾವು ಬಳಸುವ ಅಮ್ಮ ಎಂಬ ಉಚ್ಚಾರಣೆಯನ್ನು ಅನುಕರಣೆ ಮಾಡಿ ಆ ಉಚ್ಚಾರಣೆಯ ಪುನರ್ ಬಳಕೆಯನ್ನು  ಪ್ರಾರಂಭಿಸುತ್ತದೆ. ಒಮ್ಮೆ ಅವಲೋಕಿಸಿ, ಒಂದು ಸಾವಿರ ಜನರ ಹೆಸರುಗಳನ್ನು ನಮಗೆ ತಿಳಿಸಿ ನಂತರದಲ್ಲಿ ಅದನ್ನು ಪುನರುಚ್ಚರಿಸಲು ತಿಳಿಸಿದರೆ ನಮಗೆ ಜ್ಞಾಪಕ ಶಕ್ತಿ ಸಾಲದೇನೋ  ಅದೇ ಮಗುವೊಂದು ತಾನು ಕೇಳಿದ ಲಕ್ಷಗಟ್ಟಲೇ ಧ್ವನಿ ಶಬ್ಧ, ಪದಗಳನ್ನು ಕಲಿತು ಸಾಂಧರ್ಭಿಕವಾಗಿ ಉಚ್ಚರಿಸಲು ಪ್ರಾರಂಭಿಸುವ ಸಾಮರ್ಥ್ಯವನ್ನು ಮತ್ತು ವೇಗವನ್ನು ಪಡೆದಿರುತ್ತದೆ..!! ಈ ಸ್ವಯಂ ಕಲಿಕೆ ಮಗುವಿನಲ್ಲಿ ಅತ್ಯಂತ ಸಹಜದತ್ತವಾದುದು, ನಿರಂತರವಾದುದು ಮತ್ತು ಅವರ ಅರಿವಿಗೇ ಸಿಗದೇ ಆಗುವ ಕ್ರಿಯೆ ಎಂದರೆ ಮೈ ನವಿರೇಳದೆ ಇರದು.

ಮಗುವಿನ ಮಾತು ಕಲಿಕೆಯ ಮೊದಲ ಹಂತ :

ಮಗುವಿನ ಧ್ವನಿ ಗಮನಿಸುವಿಕೆ, ಅದು ತಾಯಿಯ ಹೊಟ್ಟೆಯಲ್ಲಿದ್ದಾಗ ನಡೆದಿರುತ್ತದೆ, ಅಸ್ಪಷ್ಟವಾಗಿ ಶಬ್ಧಗಳನ್ನು ಕೇಳಿದ್ದರೂ, ಹೊರಗಿನ ವಾತಾವರಣಕ್ಕೆ ಬಂದ ನಂತರ, ಸಾಮಾನ್ಯವಾಗಿ ಕೇಳಿಬರುವ ಎಲ್ಲರ ಧ್ವನಿಗಳನ್ನು ಗುರುತಿಸಬಲ್ಲದು, ಅದರಲ್ಲೂ ತಾಯಿಯ ಧ್ವನಿಗೆ ಮೊದಲ ಆದ್ಯತೆ!! ಏಕೆಂದರೆ ತಾಯಿಯ ಹೊಟ್ಟೆಯಲ್ಲಿ ೯ ತಿಂಗಳು ಇದ್ದ ಮಗುವಿಗೆ, ತಾಯಿಯ ಧ್ವನಿಯ ಕಂಪನದ ಹೆಚ್ಚಿನ ಅನುಭವವಿರುತ್ತದೆ..ಇದೇ ಕಾರಣಕ್ಕಾಗಿ, ಎಂತಹ ಗಲಾಟೆಯ ಸ್ಥಳದಲ್ಲಿಯೂ ಮಗುವು ತನ್ನ ತಾಯಿಯ ಧ್ವನಿಯನ್ನು ಗುರುತಿಸಿ, ತಾಯಿಯ ಕಡೆಗೆ ಹೊರಳುವುದು. ಹಾಗೆಯೇ, ಇತರರು ಮಾತನಾಡಿದ ಅನ್ಯ ಭಾಷೆಯ ಉಚ್ಚಾರಣೆ, ತಾನು ಈ ವರೆಗೆ ತನ್ನ ಪಾಲಕರ ಮೂಲಕ ಕೇಳಿದ ಉಚ್ಚಾರಣೆಕಿಂತಲೂ ಭಿನ್ನವಾದುದು ಎನ್ನುವುದೂ ಕೂಡ ಆ ಮಗುವಿನ ಮೆದುಳಿಗೆ ಸಂವಹನೆಯನ್ನು ನೀಡುತ್ತದೆ.

ಶರ ವೇಗದ ಕಲಿಕೆ :

 ಸಹಜವಾಗಿ ಮಕ್ಕಳಲ್ಲಿ ಈ ರೀತಿಯ ಕಲಿಕೆ, ಹೋಲಿಕೆ, ಅನುಕರಣೆ ಎಲ್ಲವೂ ಅತ್ಯಂತ ವೇಗವಾಗಿ ಅವುಗಳ ಮನಸ್ಸಿನಲ್ಲಿ ನಡೆಯುತ್ತಿರುತ್ತದೆ. ಇದರ ಜೊತೆಗೆ, ಮಗುವಿನೊಂದಿಗೆ ನಾವು ನಡೆಸುವ ಪರಸ್ಪರ ಸಂಭಾಷಣೆ, ಮುಖ ಭಾವಗಳು, ಸೂಚನೆಗಳು, ಸನ್ನೆಗಳು ಮಗುವಿಗೆ ಇನ್ನೂ ಹೆಚ್ಚಿನ ಭಾಷಾ ಸೆಳೆತಕ್ಕೆ ಸಹಾಯಕವಾಗುತ್ತದೆ. ಉದಾಹರಣೆಗೆ, ಒಂದು ೧.೫ ವರ್ಷದ ಮಗುವಿಗೆ, 'ಅಲ್ಲಿ ನೋಡು ಪುಟ್ಟದಾದ ಬಿಳೀ ಮೊಲದ ಮರಿ ಎಷ್ಟು ಚಂಗನೆ ಪುಟಿದು ಓಡುತ್ತಿದೆ" ಎಂದು ಕೈ ಬೆಟ್ಟು ಮಾಡಿ ತೋರಿಸಿದರೆ, ಮಗುವು ನಮ್ಮ ಮುಖದಲ್ಲಿನ ಉತ್ಸಾಹ, ಕೈ ಬೆಟ್ಟು ಮಾಡಿ ತೋರಿಸಿದ ಸನ್ನೆ ಮತ್ತು ನಮ್ಮ ಬಾಯಿಯಿಂದ ಹೊರ ಹೊಮ್ಮಿದ ಪದಪುಂಜಗಳು ಇದೆಲ್ಲವನ್ನೂ ಏಕಕಾಲದಲ್ಲಿ ಗಮನಿಸುತ್ತದೆ. ಹೊರನೋಟಕ್ಕೆ ಮಗುವು ನಾವು ತಿಳಿಸಿದ ಕಡೆಗೆ ತನ್ನ ಕತ್ತು ತಿರುಗಿಸಿದುದು ಕಂಡು ಬಂದರೂ, ಮಗುವು ಮೊದಲು ನೋಡುವುದು ಕೈ ಸನ್ನೆ ಮಾಡಿದ ವಸ್ತುವಿನೆಡೆಗೆ. ಆ ವಸ್ತುವಿಗೆ ಮೊಲ ಎಂದು ಕರೆಯುತ್ತಾರೆ ಎಂಬುದನ್ನು, ನಾವು ಪುನರಾವರ್ತಿಸಿ ತಿಳಿಸುವ ಸಂಧರ್ಭದಲ್ಲಿ ಮನನ ಮಾಡಿಕೊಳ್ಳುತ್ತದೆ. ನಂತರದಲ್ಲಿ ಹಂತ ಹಂತವಾಗಿ, ಆ ವಸ್ತುವಿನ ಆಕಾರ, ಬಣ್ಣ, ರೂಪ ಇತ್ಯಾದಿ ವಿಷಯಗಳನ್ನು ಅರ್ಥೈಸಲು ಪ್ರಾರಂಭಿಸುತ್ತದೆ. ಅದರ ಜೊತೆಗೆ, ನಾವು ಹಿರಿಯರು ಬಳಸಿದ ಅಕ್ಷರಗಳ ಉಚ್ಚಾರಣೆ ಸರಿಯಾಗಿ ಬರದಿದ್ದರೂ, ನಮ್ಮ ಧ್ವನಿಯ ಏರಿಳಿತವನ್ನೇ ಗಮನಿಸಿ ಮಕ್ಕಳು ಪದಗಳನ್ನು ಕಲಿಯುವಲ್ಲಿ ಸಫಲರಾಗುತ್ತಾರೆ. ಒಂದು ತಮಾಷೆಯ ಉದಾರಹಣೆ ಎಂದರೆ, ನಾನು ಶಾಲೆಯಲ್ಲಿ ಮಕ್ಕಳಿಗೆ ಹೇಳಿಕೊಟ್ಟ ಇಂಗ್ಲೀಷ್ ಪದ್ಯ 'ರಿಂಗ ರಿಂಗ ರೋಸಸ್....' ಅನ್ನು ಕೆಲವು ಮಕ್ಕಳು ತಮ್ಮರಿವಿಗೆ ಬಂದಂತೆ, ಟೀಚರ್ ನ ಬಾಯಿಯ ಉಚ್ಚಾರಣೆಯನ್ನು ಗಮನಿಸಿಕೊಂಡು 'ನಿಂಗ ನಿಂಗ ನೋಸಸ್.." ಎಂದು ಹಾಡಿಕೊಂಡು ಹೋಗಿದ್ದಾರೆ :D

ಎರಡನೇ ಹಂತ ಪದಗಳ ಕಲಿಕೆ ಮತ್ತು ಬಳಕೆ :

ಚಿಕ್ಕ ಮಗುವು ಸ್ವಲ್ಪ ಬೆಳವಣಿಗೆ ಹೊಂದಿದಂತೆ, 'ಪದ' ಗಳನ್ನು ಆಲೈಸಿಲು ಪ್ರಾರಂಭಿಸುತ್ತದೆ. ನಿಜ ಹೇಳಬೇಕೆಂದರೆ ಅವು ಕಲಿಯುವುದು 'ಪದ' ಗಳನ್ನಲ್ಲ. ಅವರು ಕಲಿಯುವುದು ಕೇವಲ ಕನಿಷ್ಠ ಸಾರ್ಥಕ ಪದಾಕೃತಿಗಳನ್ನು (morpheme). ಅಂದರೆ ನಿರ್ಧಿಷ್ಟವಾದ ಅರ್ಥವಿರುವ ಧ್ವನಿಗಳನ್ನಷ್ಟೇ. ಒಮ್ಮೆ ಹೀಗಾಯಿತು ... 'ಮಂಗ' ಪದಕ್ಕೆ ಬಹುವಚನವಾಗಿ ನಾವು ಬಳಸಿದ 'ಮಂಗಗಳು' ಎಂಬುದನ್ನು ಗಮನಿಸಿ, 'ಮಕ್ಕಳುಗಳು' ಎಂದು ನನ್ನ ಮಗಳು ಹೇಳಿದಾಗಲೇ ಈ ಲಾಜಿಕ್ ಹೇಗೆ ಮಕ್ಕಳು ಮಾತನಾಡಲು ಬಳಸುತ್ತಾರೆ ಎಂದು ನನಗೆ ಅರಿವಾದದ್ದು. ' ಗಳು' ಎಂಬುದನ್ನು ಒಂದಕ್ಕಿಂತ ಜಾಸ್ತಿ ಇರುವುದಕ್ಕೆ ಹೇಳುತ್ತಾರೆ ಎಂಬುದನ್ನು ಗಮನಿಸಿ, ಮಕ್ಕಳುಗಳು ಎಂಬ ಪದ ಊಹಿಸಿ ಹೇಳಿರುವುದು.

ಮಕ್ಕಳ ಮಾತಿನ ತಪ್ಪುಗಳು ನಿಜವಾಗಿಯೂ ಸರಿ ಮತ್ತು ಒಳ್ಳೆಯದು!!

 ನೀವು ನಿಮ್ಮ ಮನೆಗಳಲ್ಲಿ ಗಮನಿಸಿರಬಹುದು, "ನಿನಗೆ ನೀರು ಬೇಕಾ, ಕೊಡುತ್ತೀನಿ" ಎಂದು ನಾವು ಬಳಸುವ ವಾಕ್ಯದಲ್ಲಿ 'ನೀನು' ಎಂಬುದು 'ತನ್ನನ್ನು' ಉಲ್ಲೇಖಿಸಿ ಹೇಳಲಾಗಿದೆ ಎಂಬುದನ್ನು ಅರಿತ ಮಗು, ನಂತರದಲ್ಲಿ ತಾನು ಆ ಪದವನ್ನು ಅಂತೆಯೇ ಬಳಸಲು ಪ್ರಯತ್ನಿಸುತ್ತದೆ, "ನಿಂಗೆ ನೀರು ಬೇಕು" ಎಂದು ತನ್ನ ನೀರಿನ ಬೇಡಿಕೆಯನ್ನಿಡುತ್ತದೆ, ವ್ಯಾಕರಣ ತಪ್ಪಿದೆ ನಿಜ, ಆದರೆ ಮಗು ಎಷ್ಟು ಚೆನ್ನಾಗಿ ಅರ್ಥೈಸಿಕೊಂಡಿದೆ, ತನಗಾಗಿ ಉಲ್ಲೇಖಿಸಿದ ಪದವನ್ನು!! ಜೀನಿಯಸ್ ಎನ್ನಿಸುವುದಿಲ್ಲವೇ ನಿಮಗೆ... ??  ನಿನ್ನೆಗೆ ನಾಳೆ ಎನ್ನುವುದು, ತನ್ನನ್ನು ಕರೆದುಕೊಂಡು ಹೋಗಿ ಎನ್ನುವುದಕ್ಕೆ 'ಬಾ ಬಾ' ಎನ್ನುವುದು ಇತ್ಯಾದಿ ನಾವು ಸಾಮಾನ್ಯವಾಗಿ ಬಳಸುವ ಶಬ್ದಗಳನ್ನು, ತನ್ನ ಚಟುವಟಿಕೆಗಳಿಗೆ ಹೋಲಿಸಿಕೊಂಡು ಬಳಸಲು ಮಕ್ಕಳು ಪ್ರಯತ್ನಿಸುತ್ತಾರೆ, ಯಾವುದೇ ಒಂದು ಶಬ್ದಕ್ಕೆ ಅದರ ಹೋಲಿಕೆಯನ್ನು ಮೊದಲು ಅರ್ಥ ಮಾಡಿಕೊಂಡು ನಂತರದಲ್ಲಿ  'ಆ' ಕ್ಕೆ 'ಹ', 'ರ' ಕ್ಕೆ 'ನ', 'ಲ' ಕ್ಕೆ 'ವ' ಈ ರೀತಿಯಾಗಿ ಇತರೆ ಅಕ್ಷರಗಳನ್ನು ಬಳಸಿದರೂ ಕೂಡ ಸರಿಯಾದ ಪದಗಳನ್ನು ನಿರ್ಮಾಣ ಮಾಡುವ ಹಂತದಲ್ಲಿ ಮಕ್ಕಳಿಂದ ಮಾತಿನ ತಪ್ಪುಗಳು ಸಹಜ. ಸಾಕಷ್ಟು ಕಡೆ ಗಮನಿಸಿದಂತೆ, ಬಣ್ಣ, ಅಕ್ಕರ, ಅಳತೆ ಇವೆಲ್ಲವುಗಳ ಸಂಬಂಧವಾಗಿ ಬಳಸುವ ಶಬ್ದಗಳ ಬಳಕೆ ಮಕ್ಕಳಲ್ಲಿ ಮೊದಲಿಗೆ ತದ್ವಿರುದ್ಧವಾಗಿರುತ್ತದೆ. ಈ ಪ್ರಸಂಗದಲ್ಲಿ ನನಗೊಂದು ಘಟನೆ ನೆನಪಾಗುತ್ತಿದೆ, ಸಂಬಂಧಿಕರ ೨-೩ ವರ್ಷದ ಪೋರನೊಬ್ಬ ಒಂದು ಮದುವೆ ಮನೆಯಲ್ಲಿ, "ನಾನು ಹೆಣ್ ನೋಡಕ್ ಹೋಗ್ತೀನಿ " ಎಂದು ಪದೇ ಪದೇ ಪದೇ ಹೇಳುತ್ತಿದ್ದಾಗ ನಮಗೆಲ್ಲರಿಗೂ ಆಶ್ಚರ್ಯ ಮತ್ತು ನಗು! ನಂತರದಲ್ಲಿಯೇ ತಿಳಿದಿದ್ದು ಆ ಪುಟ್ಟ ಕಂದ ಹೇಳುತ್ತಿದುದು  ಇಂಗ್ಲಿಷ್ ನ 'Hen' ಬಗ್ಗೆ ಎಂದು :) :)

ವಾಕ್ಯ ನಿರ್ಮಾಣ ಹಂತ :

೨ ವರ್ಷ ಮೇಲ್ಪಟ್ಟ ಮಕ್ಕಳು ತಮಗೆ ತಿಳಿದ ಪದಗಳನ್ನು ಜೋಡಿಸಿ ವಾಕ್ಯವನ್ನು ಮಾಡುವ ಹಂತದಲ್ಲಿರುತ್ತಾರೆ. 'ಅಮ್ಮ ನನಗೆ ಹಾಲು ಕೊಡುತ್ತೀಯಾ?" ಎಂದು ಭಾವಿಸುವ ಬೇಡಿಕೆಗೆ, "ಅಮ್ಮ ಹಾವು" ಎಂದು ಕೇಳುವಷ್ಟು ಅನುವಾಗುತ್ತಾರೆ. ನಾನು, ನನಗೆ ಎಂದೆಲ್ಲ ಬಳಸುವ ಅಗತ್ಯತೆಯನ್ನು ಮಕ್ಕಳು ಭಾವಿಸುವುದಿಲ್ಲ. ಕಾಗೆಯೊಂದು ಕೂಗಿದ ಶಬ್ಧವನ್ನು ಆಲೈಸಿ, "ಕಾಗೆ ಕಾಕಾ... " ಎಂದು ಸಂಭೋದಿಸುತ್ತಾರೆ. "ಬೈಕು ಅಪ್ಪ.. " ಎಂದು ಹೇಳುವ ಅರ್ಥದಲ್ಲಿ ಅಪ್ಪ ಬೈಕಿನಲ್ಲಿ ಹೋದನೆಂದು   ಮಗು ತಿಳಿಸುತ್ತದೆ. ಆದರೆ ಯಾವ ಪದದ ನಂತರದಲ್ಲಿ ಯಾವ ಪದವನ್ನು ಬಳಸಬೇಕೆಂಬ ಗೊಡವೆಗೆ ಆ ಮಗು ಹೋಗುವುದಿಲ್ಲ. ಕ್ರಮೇಣ ೩ ವರ್ಷದ ಆಸುಪಾಸಿನಲ್ಲಿ ಮಕ್ಕಳು ಕ್ರಿಯಾಪದಗಳ ಜೋಡಣೆ ಮತ್ತು ನಾಮಪದಗಳ ಬಳಕೆ ಇತರೆ ವ್ಯಾಕರಣ ಸಹಿತ ವಾಕ್ಯಗಳನ್ನು ತಪ್ಪಿಲ್ಲದೆ ತಯಾರು ಮಾಡುವಲ್ಲಿ ನಿಸ್ಸೀಮರಾಗಿಬಿಡುತ್ತಾರೆ.

ಮಕ್ಕಳ ಭಾಷಾ ಕಲಿಕೆಗೆ ನಮ್ಮ ಸಹಕಾರ :

ಮಕ್ಕಳ ಬುದ್ಧಿ ವಿಕಸನದ ಜೊತೆ ಜೊತೆಯಲ್ಲಿ ಮಕ್ಕಳ ಮಾತನಾಡುವ ಸಾಮರ್ಥ್ಯಕ್ಕೂ ಪೋಷಕರ ಸಹಕಾರದ ಅವಶ್ಯಕತೆ ಇರುತ್ತದೆ. ಹೆಚ್ಚಿನೆ ಚುರುಕು ಬುದ್ಧಿ ಇದ್ದರೂ ಕೆಲವೊಮ್ಮೆ ಕೆಲವು  ಮಕ್ಕಳು ಕಡಿಮೆ ಮಾತು ಅಥವಾ ಸಂವಹನ ಸಾಮರ್ಥ್ಯವನ್ನು ಹೊಂದಿರುತ್ತಾರೆ. ಮಕ್ಕಳು ಮೂಲತಃ ಕಿವಿಯಿಂದ ಕೇಳಿ ಅಥವಾ ನಮ್ಮ ಮುಖ ಭಾವವನ್ನು ಆಲೈಸಿ/ನೋಡಿ ಅನುಕರಣೆ ಮಾಡುವುದರಿಂದ, ನಾವು ಮಕ್ಕಳೊಂದಿಗೆ ಅವರ ಹುಟ್ಟಿನ ಸಮಯದಿಂದಲೂ ಸಂವಹನೆ ನಡೆಸುವುದು ಅತ್ಯಂತ ಉಪಯೋಗಕಾರಿ. ಇನ್ನೊಂದರ್ಥದಲ್ಲಿ ಹೇಳುವುದಾದರೆ, ನಾವು ಮಕ್ಕಳೊಂದಿಗೆ ಮಾತನಾಡುವಾಗ ನಮ್ಮ ಮುಖ ಅವರಿಗೆ ಗೋಚರಿಸುವಂತಿರಬೇಕು. ಮಕ್ಕಳ ಮಟ್ಟಕ್ಕೆ ಮಂಡಿಯೂರಿ ಕುಳಿತು, ನಾವು ಅವರಿಗೆ ತಿಳಿಸಬೇಕಾದ ವಿಷಯವನ್ನು, ನಿಧಾನವಾಗಿ ತಿಳಿಸಿದರೆ, ಮಕ್ಕಳಿಗೆ ಬಲು ಬೇಗ ನಾವು ಹೇಳಿದುದು ಮನನವಾಗುವುದು. ಚಿಕ್ಕ ಮಕ್ಕಳ ಜೊತೆ ಮಾತನಾಡಲು ಬಳಸುವ ವಾಕ್ಯಗಳು ಚಿಕ್ಕದಾಗಿರಲಿ, ಕೊಡುವ ಸೂಚನೆಗಳು ಆದಷ್ಟು ಸರಳವಾಗಿರುವುದರ ಜೊತೆಗೆ ಸಾಧ್ಯವಾದಷ್ಟು ಕೈ ಸನ್ನೆ ಬಳಸಿದರೆ, ಮಕ್ಕಳಿಗೆ ನೀವು ಕೊಟ್ಟ ಸೂಚನೆಗಳನ್ನು ಪಾಲಿಸಲು ಸುಲಭವಾಗುವುದು, ಉದಾಹರಣೆಗೆ, "ಆ ನಿನ್ನ ಟಾಯ್ಸ್ ತೆಗೆದಿಡು" ಎಂದು ಬೆನ್ನು ಮಾಡಿ ಯಾವದೋ ಕೆಲಸ ಮಾಡುತ್ತಾ ಹೇಳುವುದಕ್ಕಿಂತ, ಕೈ ಮಾಡಿ ತೋರಿಸಿ, "ನಿನ್ನ ಈ ಟಾಯ್ಸ್ ಗಳನ್ನು ಎತ್ತಿಟ್ಟುಕೊಳ್ಳಬಹುದೇ?" ಎಂದು ಕೇಳಿದರೆ, ಮಕ್ಕಳಿಗೆ ನೇರ ಮಾರ್ಗದರ್ಶನ ಸಿಕ್ಕಂತಾಗುತ್ತದೆ.  ಹೊಸ ಪದ, ಹೊಸ ವಿಷಯಗಳನ್ನು ಕೇಳಿದಾಗ, ಮಕ್ಕಳು ಅದನ್ನರಿಯುವ ಕುತೂಹಲಕ್ಕಾಗಿ ಪುನಃ ನಮ್ಮ ಮುಖವನ್ನು ಗಮನಿಸುತ್ತಿರುತ್ತಾರೆ, ಇಲ್ಲವೇ ತಾವು ಪುನರಾವರ್ತಿಸಲು ಪ್ರಯತ್ನಿಸುತ್ತಿರುತ್ತಾರೆ. ಅಂತಹ ಸಮಯದಲ್ಲಿ ಮಕ್ಕಳ ಸಂಶಯವನ್ನು ಗಮನಿಸಿ, ಶಬ್ದಗಳನ್ನು ಪುನರಾವರ್ತಿಸಿ. ಪದಗಳ ಉಚ್ಚಾರಣೆಯ ಏರಿಳಿತವನ್ನು ನಿದಾನವಾಗಿ ಹೇಳಿ ತಿಳಿಸಿ. ಅದರಲ್ಲೂ ಮುಖ್ಯವಾಗಿ ಮಕ್ಕಳ ತಪ್ಪನ್ನು ಹಳಿಯಬೇಡಿ. ಒಂದೇ ದಿನದಲ್ಲಿ ನಿಮಗೆ ಅನ್ಯ ಭಾಷೆಯನ್ನು ಹೇಳಿಕೊಟ್ಟು, ಮರುದಿನವೇ ಚಾಚೂ ತಪ್ಪದೇ, ಪುಂಖಾನುಪುಂಖವಾಗಿ ಮಾತನಾಡು ಎಂದರೆ ನಿಮ್ಮ ಕೈಲಾದೀತೇ? ಇಲ್ಲಾ ತಾನೇ ..ಅಂತೆಯೇ ನಮ್ಮ ಮಕ್ಕಳು, ತಪ್ಪಾದರೂ ಸರಿ, ಮಕ್ಕಳ  ಮಾತಿಗೆ ಗೌರವಿಸಿ. ಮಕ್ಕಳಿಗೆ ತಾವು ಕಲಿತುದರ ಬಗ್ಗೆ ತಿಳಿಸುವ ಕುತೂಹಲವಿರುತ್ತದೆ, ದಿನದಲ್ಲಿ ಸ್ವಲ್ಪ ಸಮಯ ಅವರಿಗಾಗಿಯೇ ಮೀಸಲಿಟ್ಟು, ಆದಷ್ಟು ಪ್ರಶ್ನೆಗಳನ್ನು ಕೇಳದೆ, ಕೇವಲ ಕೇಳುಗರಾಗಿ, ಅವರ ಕುತೂಹಲಕ್ಕೆ ಪ್ರತಿಕ್ರಿಯೆ ನೀಡಿ. ೩ ವರ್ಷಕ್ಕೂ ಮೇಲ್ಪಟ್ಟ ಮಕ್ಕಳಿಗೆ ಸಾಮಾನ್ಯ ವಿಷಯಗಳನ್ನು ತಿಳಿಸುವಾಗ, ಮುಖ್ಯ ವಿಷಯ ವಸ್ತುವಿಗೆ ಒಂದಕ್ಕಿಂತ ಹೆಚ್ಚಿನ ಅರ್ಥವಿದ್ದರೆ, ಅವುಗಳನ್ನು ತಿಳಿಸಿ. ಸಮಾನಾರ್ಥಕ ಪದಗಳನ್ನೂ ಅವಾಗವಾಗ ಬಳಸುತ್ತೀರಿ. ಮಗುವಿನ ಶ್ರವಣ ಶಕ್ತಿ, ಪ್ರತಿಕ್ರಿಯೆ ನೀಡುವ ಬಗೆ, ವಾಕ್ ಸಾಮರ್ಥ್ಯದ ಬಗ್ಗೆ ಗಮನವಿರಲಿ. ಮಕ್ಕಳೊಂದಿಗೆ ಕುಳಿತು ಸ್ವಲ್ಪ ಸಮಯ ಯಾವುದೇ ಪುಸ್ತಕವನ್ನು ಓದಿಸಿ. ಅದು ಕಥೆ ಪುಸ್ತಕವಾದರೂ ಒಳ್ಳೆಯದೇ, ಇದರಿಂದ ಓದುವ ಕ್ರಿಯೆಯಲ್ಲಿ ಏನಾದರೂ ದೋಷವಿದೆಯೇ, ಮಗುವಿಗೆ ಯಾವುದು ತಿಳಿಯಲು ಕಷ್ಟವಾಗುತ್ತಿದೆ ಎಂಬಿತ್ಯಾದಿ ವಿಷಯಗಳು ನಮಗೆ ತಿಳಿಯುತ್ತದೆ. ಮಕ್ಕಳಿಗೆ ಸರಿಯಾದ ಶಬ್ದ ಉಚ್ಚಾರದ ಕಡೆಗೆ ಆದಷ್ಟು ಮಾರ್ಗದರ್ಶನ ಮಾಡಿ, ಉದಾ, 'ಹೌದು ಎನ್ನಲು ಔದು, ಶಂಖ ಎನ್ನಲು ಸಂಕ, ಇತ್ಯಾದಿ. ಒಟ್ಟಿನಲ್ಲಿ ನಮ್ಮ ಮಕ್ಕಳ ಭಾಷಾ ಕಲಿಕೆಗೆ, ಅವರ ಕಲಿಕೆಯ ವೈವಿಧ್ಯತೆಗೆ ನಮ್ಮ ಬೆಂಬಲವಿರಲಿ.

No comments:

Post a Comment