ಗುರುವಾರ, ಫೆಬ್ರವರಿ 9, 2017

ಮಕ್ಕಳ ಪರೀಕ್ಷೆ - ಪಾಲಕರ ತಯಾರಿ ಹೇಗೆ?

ಮಕ್ಕಳ ಶಿಕ್ಷಣದ ವಾರ್ಷಿಕ ಅವಧಿಯ ಕೊನೆಯ ಹಂತ, ಪರೀಕ್ಷಾ ಸಮಯ.. ಅತ್ಯಂತ ಮುಖ್ಯವಾದ ಘಟ್ಟ. ಈಗಿನ ಶಿಕ್ಷಣ ವಿಧಾನದ ಪರಿಸ್ಥಿತಿ ನೋಡಿದರೆ, ಮಕ್ಕಳಿಗೆ ಎಷ್ಟರ ಮಟ್ಟಿಗೆ ಪರೀಕ್ಷಾ ಆತಂಕವಿರುತ್ತದೋ ಅದಕ್ಕಿಂತ ದುಪ್ಪಟ್ಟು ಆತಂಕ ಪೋಷಕರಲ್ಲಿ ಇರುತ್ತದೆ. ತಮ್ಮ ಮಗು ಓದಿನಲ್ಲಿ ಮುಂಚೂಣಿಯಲ್ಲಿರಬೇಕೆಂಬ ಅಭಿಲಾಷೆ ಪ್ರತಿಯೊಬ್ಬ ಪಾಲಕನ ಒತ್ತಾಸೆಯಾಗಿರುತ್ತದೆ. ಎಲ್ಲಾ ಮಕ್ಕಳ ಬುದ್ಧಿ ಮಟ್ಟವು ಒಂದೇ ರೀತಿಯಲ್ಲಿ ಇರುವುದಿಲ್ಲವಾದ್ದರಿಂದ, ಹೆಚ್ಚಿನ ಸಿದ್ಧತೆ ಖಂಡಿತ ಅವಶ್ಯಕ. ಯುದ್ಧಕಾಲೇ ಶಸ್ತ್ರಾಭ್ಯಾಸ ಎಂಬಂತೆ ಪರೀಕ್ಷೆಯ ಕೊನೆಯ ವಾರದಲ್ಲಿ ಪುಸ್ತಕ ಹಿಡಿಯುವ ಮಕ್ಕಳಿಗೂ, ಗಾಬರಿಸಿ ಗದರಿಸಿ ಇನ್ನಷ್ಟು ಆತಂಕ ಪಟ್ಟು ಒತ್ತಡ ಹಾಕುವ ಪೋಷಕರಿಗೂ, ಇದೋ ಒಂದು ಚಿಕ್ಕ ಟಿಪ್ಪಣಿ, ಪರೀಕ್ಷೆ ಎಂಬುದಕ್ಕೆ ಮಕ್ಕಳ ಜೊತೆ ನಮ್ಮ ತಯಾರಿ, ಜವಾಬ್ದಾರಿಗಳೇನು ಎಂಬುದರ ಬಗ್ಗೆ.

೧. ಮಗುವಿನ ಶೈಕ್ಷಣಿಕ ಪ್ರಗತಿ ಬಗ್ಗೆ ಶಾಲೆಯಲ್ಲಿ ವಿಚಾರಣೆ. 
ನಮ್ಮ ಮಕ್ಕಳನ್ನು ಒಳ್ಳೆಯ ಶಿಕ್ಷಣ ಕೊಡುವ ಭರವಸೆಯನ್ನೀಡುವ ಶಾಲೆಗೆ ಸೇರಿಸಿದರೆ ನಮ್ಮ ಜವಾಬ್ಧಾರಿ ಮುಗಿದೀತೇ? ಖಂಡಿತವಾಗಿಯೂ ಅಷ್ಟೇ ಸಾಲದು. ಮಕ್ಕಳ ಕಲಿಕೆಯ ಹಂತದಲ್ಲಿ ಅವರಷ್ಟೇ ನಾವು ಕೂಡ ಭಾಗಿಯಾಗಬೇಕು. ಪರೀಕ್ಷೆಗೆ ಇನ್ನೂ ಎರಡು ತಿಂಗಳಿರುವಂತೆಯೇ ಒಮ್ಮೆ ಶಾಲೆಯಲ್ಲಿ ಮಗುವಿನ ಪ್ರಗತಿಯ ಬಗ್ಗೆ ವಿಚಾರಿಸಿ, ನಮ್ಮ ಮಗುವಿಗೆ ಯಾವ ವಿಷಯ ಕಷ್ಟವಾಗುತ್ತಿದೆ, ಶಾಲೆಯಲ್ಲಿ ಕಲಿಕಾ ಸಾಮರ್ಥ್ಯ, ಮಿತಿ, ಕೊರತೆಗಳ ಬಗ್ಗೆ ವಿಚಾರಿಸಿಕೊಳ್ಳುವುದು ಒಳಿತು. ಇದರಿಂದ ನಮ್ಮ ಮಕ್ಕಳ ಪರೀಕ್ಷಾ ತಯಾರಿಗೆ ನಿಗದಿತ ಸಮಯ ಮತ್ತು ಯಾವ ವಿಷಯಗಳಿಗೆ ಹೆಚ್ಚಿನ ಗಮನ ಕೊಡುವ ಅವಶ್ಯಕತೆಯಿದೆ ಎಂಬುದರ ಪಾರದರ್ಶಕತೆ ನಮಗೆ ದೊರೆಯುತ್ತದೆ. ಆದರೆ ಈ ವಿಚಾರಣೆ ನಮ್ಮ ಮಗುವಿನ ಜೊತೆ ಮುಂಚಿತವಾಗಿಯೇ ಅವರಿಂದ ತೆಗೆದುಕೊಂಡ ಸಮ್ಮತಿಯಿಂದ ಅವರ ಸಮ್ಮುಖದಲ್ಲಿಯೇ ಆದರೆ ಅನುಕೂಲ. ಇದರಿಂದ,  ನೀವು ಯಾವುದೇ ರೀತಿಯ ದೂರಿನ ಭಾವನೆಯಲ್ಲಿಲ್ಲ ಎಂಬುದು ನಿಮ್ಮ ಮಗುವಿಗೆ ಮನದಟ್ಟಾಗುತ್ತದೆ.

೨. ಮಕ್ಕಳ ಪರೀಕ್ಷಾ ತಯಾರಿಗೊಂದು ವೇಳಾಪಟ್ಟಿಯ ತಯಾರಿಕೆ
ನಮ್ಮ ಮಗುವಿನ ಜೊತೆ ಕುಳಿತುಕೊಂಡು, ಅವರಿಗೆ ಸಹಾಯವಾಗುವಂತೆ ಓದುವ ವಿಷಯಗಳಿಗೆ ಸಂಬಂಧಿಸಿದಂತೆ ಒಂದು ವೇಳಾಪಟ್ಟಿಯನ್ನು ಮಾಡಲು ಸಹಕರಿಸಿದರೆ, ಮಗುವಿಗೆ ಒಂದು ನಿರ್ಧಿಷ್ಟವಾದ ಗುರಿಯನ್ನು ಹಾಕಿಕೊಟ್ಟಂತಾಗುತ್ತದೆ. ಶಾಲಾ ಸಮಯವನ್ನು ಹೊರತು ಪಡಿಸಿ ನಮ್ಮ ಮಗುವಿಗೆ ನಾವು ಕೊಡಬೇಕಾದ ಮತ್ತು ಸಹಕರಿಸಬೇಕಾದ ಓದಿನ ಸಮಯ ಯಾವುದು, ಪಾಠದ ಜೊತೆಗೆ ನಿದ್ದೆ, ಆಟ, ಪಠ್ಯೇತರ ಚಟುವಟಿಕೆಗಳು ಎಲ್ಲದಕ್ಕೂ ಸರಿಹೊಂದಾಣಿಕೆ ಬರುವಂತೆಯೂ ಗಮನಿಸಿ ಚರ್ಚಿಸಿ ವೇಳಾಪಟ್ಟಿಯನ್ನು ತಯಾರಿಸಿ. ಮಗುವಿಗೆ ಯಾವ ವಿಷಯಗಳು  ಕಲಿಯಲು ಸುಲಭವಾದದ್ದು, ಯಾವುದು ಕಷ್ಟಕರವಾಗಿದ್ದು ಹೆಚ್ಚಿನ ಸಮಯ ಮೀಸಲಿಡಬೇಕು. ಯಾವ ಐಚ್ಛಿಕ ವಿಷಯವನ್ನು ಹುರುಪಿನ ಸಮಯದಲ್ಲಿ ಓದಬಹುದು ಮತ್ತು ಯಾವ ಪಾಠವು ಮಗುವಿಗೆ ಸಾಮಾನ್ಯ ಸಮಯದಲ್ಲೂ ಕೂಡ ಓದಿ ಮುಗಿಸಲು ಸಾಧ್ಯ? ವಾರದ ಕೊನೆಯಲ್ಲಿ ಮತ್ತೊಮ್ಮೆ ಮನನ ಮಾಡಿಕೊಳ್ಳಲು ಬಳಸಿಕೊಳ್ಳಬಹುದಾದ ಸಮಯ ಇತ್ಯಾದಿ ವಿಷಯಗಳನ್ನು ಮನಸ್ಸಿನಲ್ಲಿರಿಸಿಕೊಂಡು, ಯಾವುದೇ ರೀತಿಯ ಒತ್ತಡ ವಿಧಿಸದೆ, ಮಗುವಿನ ಜೊತೆ ಚರ್ಚಿಸಿ ವೇಳಾಪಟ್ಟಿ ತಯಾರಿಸಿಕೊಡಿ.

೩. ಓದುವ ವಾತಾವರಣ ನಿರ್ಮಾಣ
ಮುಂದಿನ ಎರಡು ತಿಂಗಳು ನಿಮ್ಮ ಮಗುವಿಗೆ ಹೆಚ್ಚಿನ ಏಕಾಗ್ರತೆ ಮತ್ತು ಶಾಂತತೆಯ ಅವಶ್ಯಕತೆ ಸಾಮಾನ್ಯ ದಿನಗಳಿಗಿಂತ ಸ್ವಲ್ಪ ಜಾಸ್ತಿಯೇ ಬೇಕಾಗುವುದರಿಂದ, ಮಗುವಿಗೆ ಓದಲು ಒಂದು ಪೂರಕವಾದ ವಾತಾವರಣ ಮಾಡಿಕೊಡುವುದು ಕೂಡ ಅಷ್ಟೇ ಅವಶ್ಯಕ. "ಮಗನೇ ನೀನು ಚೆನ್ನಾಗಿ ಓದಿಕೋ" ಎಂದು ಬೋಧಿಸಿ, ಹೊರಾಂಗಣದಲ್ಲಿ ನೀವು ದೊಡ್ಡ ಧ್ವನಿಯಲ್ಲಿ ಟೀವಿ ಹಾಕಿಕೊಂಡು ಧಾರಾವಾಹಿ ನೋಡಲು ಕುಳಿತರೆ ಆದೀತೆ? ನಮ್ಮ ಮಗುವಿನ ಓದು ನಮಗೂ ಕೂಡ ಒಂದು ಯಜ್ಞ. ಉತ್ತಮವಾದ ಗಾಳಿ ಬೆಳಕಿರುವ ಕೊಠಡಿ ಅಥವಾ ಸೂಕ್ತವಾದ ಸ್ಥಳವನ್ನು ಗೊತ್ತು ಮಾಡಿಕೊಡಿ, ಆ ಸ್ಥಳವೂ ಆದಷ್ಟು ಮಗುವಿಗೆ ವೈಯುಕ್ತಿಕ ಸ್ಥಳವಾಗಿರಲಿ, ಪದೇ ಪದೇ ಆ ಕೋಣೆಗೆ, ಮನೆ ಮಂದಿಯ ಓಡಾಟ ಸರಿಯಲ್ಲ. ಮಗುವು ಕೂತು ಓದುವ ಭಂಗಿಯನ್ನು ಗಮನಿಸಿ, ಅವಶ್ಯಕತೆಯಿದ್ದರೆ ನೇರವಾಗಿ ಕುಳಿತು ಓದಲು ಬೆನ್ನಿಗೆ ದಿಂಬು ಇತರ ಆಧಾರವನ್ನು ನೀಡಿ. ವಿಪರಿಮೀತ ಶಬ್ಧವನ್ನಿಟ್ಟು ನೋಡುವ ಟೀವಿ, ಏರು ಧ್ವನಿಯಲ್ಲಿ ಮನೆ ಮಂದಿಯ ಪರಸ್ಪರ ಕೂಗಾಟ, ಇತರ ಗಲಭೆ-ಗದ್ದಲವನ್ನುಂಟು ಮಾಡುವ ಅಹಿತಕರ ಸಂದರ್ಭಗಳನ್ನು ಆದಷ್ಟು ತಪ್ಪಿಸಲು ತೆಗೆದುಕೊಳ್ಳಬಹುದಾದ ಸೂಕ್ತ ಕ್ರಮಗಳನ್ನು ಕೈಗೊಳ್ಳಿ. ಮಗುವಿನ ರೂಮಿನಲ್ಲಿ ಬಳಸುವ ವಿದ್ಯುದ್ದೀಪ ಪ್ರಕಾಶಮಾನವಾಗಿದೆಯೇ ಇಲ್ಲವೇ ಗಮನಿಸಿ. ಹೆಚ್ಚಿನ ಮಕ್ಕಳಿಗೆ ಈಗ ಅತ್ಯಂತ ಸಣ್ಣ ವಯಸ್ಸಿನಲ್ಲಿಯೇ, ಮೊಬೈಲ್, ಕಂಪ್ಯೂಟರ್, ಟ್ಯಾಬ್ ಇವುಗಳ ಲಭ್ಯತೆ ತುಂಬಾ ಸರ್ವೇ ಸಾಮಾನ್ಯವಾಗಿರುವುದರಿಂದ, ಪರೀಕ್ಷಾ ಸಮಯದಲ್ಲಿ ಆದಷ್ಟು ಈ ರೀತಿಯ ಮಕ್ಕಳ ಏಕಾಗ್ರತೆಯನ್ನು ಕಮ್ಮಿಯಾಗಿಸುವ ಗ್ಯಾಡ್ಜೆಟ್ ಗಳನನ್ನು, ಓದಿನ ಸಮಯದಲ್ಲಿ ದೂರವಿಡಿ.

೪. ಮಗುವಿನ ಆರೋಗ್ಯ ಸಂರಕ್ಷಣೆ
ಯಾವುದೇ ಕೆಲಸ ಮಾಡಲು ಕೂಡ ಆರೋಗ್ಯವಾಗಿರುವುದು ಅತ್ಯಂತ ಅವಶ್ಯಕ. ಪದೇ ಪದೇ ಕೆಡುವ ಆರೋಗ್ಯದಿಂದ ಅಥವಾ ಇನ್ನಿತರ ದೈಹಿಕ ತೊಂದರೆಯಿಂದಾಗಿ, ಮಕ್ಕಳಿಗೆ ಪರೀಕ್ಷಾ ತಯಾರಿ ಸಮಯದಲ್ಲಿ ಹೆಚ್ಚಿನ ಏಕಾಗ್ರತೆ ತಂದುಕೊಳ್ಳಲು ಕಷ್ಟವಾಗುತ್ತದೆ. ನಿಯಮಿತವಾಗಿ ಮಕ್ಕಳ ದೃಷ್ಟಿ ಪರೀಕ್ಷೆ, ಉತ್ತಮವಾದ ಪೌಷ್ಟಿಕ ಆಹಾರದ ಪೂರೈಕೆ, ಚಿಕ್ಕಪುಟ್ಟ ಅರೋಗ್ಯ ತೊಂದರೆ ಏನಾದರೂ ಕಂಡು ಬಂದಿದ್ದರೆ, ಅದನ್ನು ನಿರ್ಲಕ್ಷಿಸದೇ, ವೈದ್ಯರನ್ನು ಕಂಡು ನಿವಾರಿಸಿಕೊಳ್ಳಿ. ಹಣ್ಣು, ಹಾಲು, ಹೆಚ್ಚಿನ ಪ್ರೋಟೀನ್ ಯುಕ್ತ ಪದಾರ್ಥಗಳಾದ ಕಾಳು - ಧಾನ್ಯಗಳು, ಹಸಿರು ತರಕಾರಿ ಇತ್ಯಾದಿ ಪೋಷಕಾಂಶ ನೀಡುವ ಆಹಾರ ಪದಾರ್ಥಗಳು ಮಕ್ಕಳ ನಿತ್ಯದ ಊಟ-ತಿಂಡಿಗಳಲ್ಲಿರಲಿ. ಮಕ್ಕಳಿಗೆ ಹೆಚ್ಚಿನ ಪ್ರಮಾಣದಲ್ಲಿ ನೀರನ್ನು ಕುಡಿಯಲು ಪ್ರೋತ್ಸಾಹಿಸಿ. ಇದರಿಂದ ಆತಂಕ ಕಡಿಮೆಯಾಗುತ್ತದೆ. ಆದಷ್ಟು ಈ ಸಮಯದಲ್ಲಿ ಮಕ್ಕಳು ಹೊರಗಿನ ಕುರುಕಲು ತಿಂಡಿಗಳನ್ನು ತಿನ್ನದಂತೆ ನೋಡಿಕೊಳ್ಳಿ. ಮನೆಯಲ್ಲೇ ಆದಷ್ಟು ಶುಚಿಯಾಗಿ ರುಚಿಕರವಾದ ಆಕರ್ಷಣೀಯ ಪದಾರ್ಥಗಳನ್ನು ಮಾಡಿ. ರಾತ್ರೆಯ ಸಮಯವನ್ನು ವಿಸ್ತರಿಸಿ ಅಥವಾ ಬೆಳಗ್ಗಿನ ಮುಂಜಾವಿನಲಿ ಓದುವ ಸಮಯಕ್ಕೆ, ಮಕ್ಕಳಿಗೆ ಬಿಸಿ ಪಾನೀಯಗಳು, ಬಿಸ್ಕಿಟ್ ಹೀಗೆ ಹಗುರವಾದ ಹಾನಿಕಾರವಲ್ಲದ, ತ್ವರಿತ ಸಮಯಕ್ಕೆ ಹಸಿವನ್ನು ನೀಗಿಸಿಕೊಳ್ಳಲು ನೀಡಬಹುದಾದಂತ ಆಹಾರವನ್ನು ಶೇಖರಿಸಿಟ್ಟು ನೀಡಿ.

೫, ಪೋಷಕರ ಪಾಲ್ಗೊಳ್ಳುವಿಕೆ
ಕೇವಲ ವೇಳಾಪಟ್ಟಿ ಹಾಕಿಕೊಟ್ಟರೆ ಸಾಲದು. ಮಕ್ಕಳಿಗೆ ನಾವು ಅವರ ಜೊತೆಯಿದ್ದೇವೆ ಎಂಬ ಭಾವನೆ ತರುವುದು ಕೂಡ ಅಷ್ಟೇ ಮುಖ್ಯವಾದದ್ದು. ಓದಿನ ಸಮಯದ ಹೊರತಾಗಿ ಬಿಡುವಿನ ಸಮಯದಲ್ಲಿ ನಿಮ್ಮ ಮಕ್ಕಳ ಜೊತೆ ಇತರ ವಿಷಯಗಳ ಬಗ್ಗೆ ಸಂವಾದ, ಅವರ ಜೊತೆ ಒಂದು ಸಣ್ಣ ವಾಕ್ ಅಥವಾ ಮಗುವಿನ ಆಟದ ಸಮಯದಲ್ಲಿ ನಮ್ಮ ಪಾಲ್ಗೊಳ್ಳುವಿಕೆ, ಮಕ್ಕಳಿಗೆ ಅವರ ಒತ್ತಡವನ್ನು ನೀಗಿಸುವುದರ ಜೊತೆಗೆ, ನಿಮ್ಮ ಶಿಸ್ತು ಅವರಿಗೆ ಕಟ್ಟುನಿಟ್ಟಣಿಸದು. ಸಾಧ್ಯವಾದರೆ ಸಮಯವಿದ್ದಾಗ ನಿಮ್ಮ ಮಗುವಿನ ಜೊತೆ ತಡರಾತ್ರಿ ಅಥವಾ ಬೆಳಗಿನ ಜಾವ ಸ್ವಲ್ಪ ಸಮಯ ಕುಳಿತುಕೊಳ್ಳಿ. ನೀವೇ ಕೂತು ಓದಿಸಬೇಕಾದ ವಯಸ್ಸಿನ ಮಕ್ಕಳಿದ್ದರೆ, ಪಾಠ ಹೇಳಿಕೊಡವಾಗ ಮಧ್ಯೆ ಮಧ್ಯೆ ನಗು ತಮಾಷೆ ಕೂಡ ಇರಲಿ. ನಿಯಮಿತವಾಗಿ ಮಕ್ಕಳ ಓದಿನ ಬಗೆಗೆ ಕಳಕಳಿಯಿಂದ ವಿಚಾರಿಸಿ, ಹೆಚ್ಚಿನ ಪ್ರಗತಿ ಕಂಡುಬರದಿದ್ದಲ್ಲಿ, ಗದರಿಸಿ-ಅವಮಾನಿಸುವ ಬದಲು, ಮಕ್ಕಳಿಗೆ ಬೋಧಕರ ಸಹಾಯದ ಅವಶ್ಯಕತೆಯಿದೆಯೇ ಎಂದು ಪರೀಕ್ಷಿಸಿ.

೬. ಇತರ ಮುಖ್ಯ ಅಂಶಗಳು
ಯಾವುದೇ ಕಾರಣಕ್ಕೂ ನಮ್ಮ ಮಗುವನ್ನು ಇತರ ಮಕ್ಕಳೊಡನೆ ಹೋಲಿಸಿ ಹೀಯಾಳಿಸಬೇಡಿ. ಅದರಿಂದ ಮಕ್ಕಳ ಆತ್ಮವಿಶ್ವಾಸ ಕಡಿಮೆಯಾಗುತ್ತದೆ. ಪಾಠದ ಜೊತೆಗೆ ಆಟ ಮತ್ತು ಇತರ ಮಕ್ಕಳ ಮೋಜಿನ ಹವ್ಯಾಸಗಳಿಗೂ ಸ್ವಲ್ಪ ಸಮಯ ಸೀಮಿತವಿದ್ದೇ ಇರಲಿ. ಉತ್ತಮವಾದ ಆಹಾರ ಪೂರೈಕೆ ಮತ್ತು ನಿಮ್ಮ ಕಾಳಜಿ ಮಗುವಿಗೆ ತಿಳಿಯುವಂತಿರಲಿ. ಯಾವುದೇ ಕಾರಣಕ್ಕೂ ಮಗು ಅನುತ್ತೀರ್ಣನಾದರೆ ಎಂಬ ಕಲ್ಪನೆಗೆ, ಮಕ್ಕಳನ್ನು ಬೆದರಿಸಲು ಹೋಗಬೇಡಿ. ನಿಮ್ಮ ಬಿಡುವಿನ ಸಮಯದಲ್ಲಿ ಮಗುವಿನ ಜೊತೆ ಆದಷ್ಟು ಓದಿಸಲು ಸಹಾಯ ಮಾಡಿ  ಮತ್ತು ಅವಧಿಗೂ ಮೀರಿ ಓದ ಬೇಕಾದ ಸಮಯವಿದ್ದರೆ, ಮಕ್ಕಳ ಓದಿಗೆ ಜೊತೆಯಾಗುವಂತೆ, ನೀವು ಒಂದು ಕಥೆ ಪುಸ್ತಕ ಹಿಡಿದು ಕುಳಿತು ಸಾಂಗತ್ಯವನ್ನು ನೀಡಿ. ಮಗುವಿಗೆ ಅವಶ್ಯಕ ಓದಿ ಬರೆಯಲು ಬೇಕಾಗುವ ಪರಿಕರಗಳನ್ನು ಒದಗಿಸಿಕೊಡಿ. ತನ್ನ ಜವಾಬ್ಧಾರಿಯನ್ನು ಅರಿತು ಓದುತ್ತಿರುವ ಮಗುವಿನೆಡೆಗೆ ಮೆಚ್ಚುಗೆಯ ಮಾತಿರಲಿ. ಒಮ್ಮೆ ತಲೆ ನೇವರಿಸುವುದು, ಬೆನ್ನು ತಟ್ಟಿ ಮೆಚ್ಚುಗೆ ವ್ಯಕ್ತಪಡಿಸಿದರೂ ಆದೀತು.

ನಮ್ಮ ಮಗುವಿನ ಭವಿಷ್ಯಕ್ಕಾಗಿ ಹಂಬಲಿಸುವ ನಾವು, ಮಗುವಿನ ಶ್ರಮದ ಸಮಯದಲ್ಲಿ ಇಷ್ಟು ಮಾತ್ರವಾದರೂಸಹಾಯ ನೀಡಿದರೆ, ನಮ್ಮ ಮಕ್ಕಳಲ್ಲಿ ಓದಿನೆಡೆಗೆ ಆಸಕ್ತಿ ಖಂಡಿತವಾಗಿಯೂ ಬರುತ್ತದೆ. ಜೊತೆಗೆ ಮಕ್ಕಳ ಪರೀಕ್ಷಾ ಫಲಿತಾಂಶದಲ್ಲೂ ಉತ್ತಮವಾದ ಪ್ರಗತಿಯನ್ನು ಕಂಡುಕೊಳ್ಳುವಲ್ಲಿ ಸಹಕಾರಿಯಾಗುತ್ತದೆ.



2 ಕಾಮೆಂಟ್‌ಗಳು: