ಭಾನುವಾರ, ಮಾರ್ಚ್ 26, 2017

ಹಿರಿಯ ಜೀವದ ಶ್ರೀಮಂತಿಕೆ

ಪೂರಾ ಎಲುಬಿನ ಹಂದರ, ಸುಕ್ಕುಗಟ್ಟಿ ಹೋದ ಮುಖ, ಸುಮಾರಾಗಿ ಬಾಗಿ ಹೋದ ಬೆನ್ನು ಆದರೂ ಛಲವಿಟ್ಟು ಇಟ್ಟಿಗೆಯನ್ನೆಲ್ಲ ಹೊರುವ ಜವಾಬ್ದಾರಿ, ವಯಸ್ಸು ಸುಮಾರು ೬೫-೭೦ ಆಸುಪಾಸಿನಲ್ಲಿದ್ದಿರಬಹುದು. ಆ ಹಿರಿಯ ದೇಹಕ್ಕೆ ಜೀವನಾಂಶವೇ ಗಾರೆ ಕೆಲಸ. ಪ್ರತಿದಿನವೂ ನಾನು ನನ್ನ ಕೆಲಸಕ್ಕೆ ಹೋಗುವಾಗ ನಮ್ಮ ಮನೆಯ ಹತ್ತಿರದಲ್ಲಿ ಈ ವ್ಯಕ್ತಿಯನ್ನು ಗಮನಿಸುತ್ತಿದ್ದೆ. ಇತರರೆಲ್ಲ ತಮ್ಮ ಕೆಲಸಗಳನ್ನು ಮುಗಿಸಿ ತಮ್ಮ ತಮ್ಮ ಗೂಡಿಗೆ ಮರಳುತ್ತಿದ್ದರೆ, ಈತನದು ಮಾತ್ರ ಅಲ್ಲಿ ಮನೆ ಕಟ್ಟುವ ಸ್ಥಳದಲ್ಲೇ ಆಶ್ರಯ. ಒಬ್ಬನೇ ಒಂದು ತಾತ್ಕಾಲಿಕ ಶೆಡ್ ಮಾಡಿಕೊಂಡು, ಅವನ ಮಲಗುವ ಜಾಗ ಅಲ್ಲೇ ಮೂರು ದೊಡ್ಡ ಕಲ್ಲುಗಳನ್ನಿಟ್ಟುಕೊಂಡು, ೨-೩ ಪಾತ್ರೆಗಳನ್ನಿಟ್ಟುಕೊಂಡು ಗಂಜಿಯೇನೋ ಕಾಯಿಸಿ ಕುಡಿಯುತ್ತಿದ್ದ. ತಾನು ತಯಾರು ಮಾಡುವ ಅಡುಗೆಯಲ್ಲೇ ಒಂದಷ್ಟು ನಾಯಿಗೆ, ಹತ್ತಿರಕ್ಕೆ ಬರುವ ಬಿಡಾಡಿ ದನಕ್ಕೆ ಕೊಡುತ್ತಿದ್ದ. ನೋಡಿದಾಗ ಮರುಕವುಂಟಾಗುತ್ತಿತ್ತು. ದಿನನಿತ್ಯದ ನೋಟ, ಗಮನ - ಮುಗುಳ್ನಗೆವರೆಗೆ ತಲುಪಿ, ಮಗಳನ್ನು ಬೆಳಿಗ್ಗೆ ಬಿಸಲಿಗೆ ಕರೆದುಕೊಂಡು ಹೋಗುವ ಸಂದರ್ಭದಲ್ಲಿ ಅಲ್ಲೇ ನಿಂತು ಮಾತನಾಡಿಸುತ್ತಿದ್ದೆ. ಆತ ನನ್ನ ಮಗಳನ್ನು ಮಾತನಾಡಿಸಿ ಆಡಿಸಲು ಪ್ರಯತ್ನಿಸುತ್ತಿದ್ದ. ನನ್ನದು ಕನ್ನಡ ಭಾಷೆ. ಆತನದು ತಮಿಳು. ಹಾಗಾಗಿ ಇಬ್ಬರಿಗೂ ಪರಸ್ಪರರ ಭಾಷೆ ಹೆಚ್ಚು ತಿಳಿಯದಿದ್ದರೂ,  ಹೇಗೋ ಹರುಕು ಸಂಭಾಷಣೆ ನಡೆಯುತ್ತಿತ್ತು. ಇದ್ದೊಬ್ಬ ಗಂಡು ಮಗನನ್ನೂ ಅನಾರೋಗ್ಯದ ಕಾರಣ ಕಳೆದುಕೊಂಡಿದ್ದು,  ಹೆಣ್ಮಗಳನ್ನು ತಮ್ಮೂರಿನ ಹತ್ತಿರಕ್ಕೆಲ್ಲೋ ಮದುವೆ ಮಾಡಿಕೊಟ್ಟು, ಅಳಿಯನ ಬೇಜವಾಬ್ದಾರಿತನಕ್ಕೆ ಮಗಳು ಮನೆಗೆ ವಾಪಸಾಗಿರುವುದು, ಹೆಂಡತಿ ಹೆಚ್ಚು ಮೈಯಲ್ಲಿ ಶಕ್ತಿಯಿಲ್ಲದವಳಾದ್ದರಿಂದ ಊರಲ್ಲೇ ಬಿಟ್ಟು ಈತ ದುಡಿಮೆಗೊಸ್ಕರ ಇಲ್ಲಿದ್ದೇನೆಂದು ಅಂತೂ ತಮಿಳು ಬಲ್ಲ ನೆರೆಯ ಪರಿಚಯದವರ ಸಹಾಯದಿಂದ ತಿಳಿದುಕೊಂಡೆ. ಪಾಪವೆನ್ನಿಸುತ್ತಿತ್ತು, ಈ ಇಳಿ ವಯಸ್ಸಿನಲ್ಲಿ ಜೀವನ ಎಷ್ಟು ಕಷ್ಟಮಯ ಈ ವ್ಯಕ್ತಿಗೆ ಎಂದು. ಆಗಾಗ ಮನೆಯಿಂದ ಅಡುಗೆ ಪದಾರ್ಥವನ್ನು ಕೊಡುತ್ತಿದ್ದೆ. ಹಬ್ಬದ ದಿನಗಳಲ್ಲಿ ವಿಶೇಷ ಪದಾರ್ಥವನ್ನು ಮಾಡಿದಾಗ ಕೊಟ್ಟರೆ "ರೊಂಬ ನಂದ್ರಿ" ಎಂದು ಬಾಯಿ ತುಂಬಾ ಹರಸುತ್ತಿದ್ದ . ಭಾಷೆ ಎಲ್ಲವೂ ತಿಳಿಯದಿದ್ದರೂ, ಭಾವ ಗೊತ್ತಾಗದೆ ಇರುತ್ತಿರಲಿಲ್ಲ. ಸಂತೃಪ್ತಿ ನನ್ನದಾಗಿರುತ್ತಿತ್ತು. "ನಲ್ಲಾಮಾ..?", " ಪಾಪ ನಲ್ಲಾ ಇರಕ...?" ಎಂದೆಲ್ಲ ಕಂಡಲ್ಲಿ ಕೇಳದೆ ಇರುತ್ತಿರಲಿಲ್ಲ ಆ ವ್ಯಕ್ತಿ. ಮಗಳಿಗೆ ಥ್ಯಾಂಕ್ಸ್ ಕೊಡುವುದು ಅವನ ಅತ್ಯಂತ ಸಂತೋಷದ ಸಂಗತಿಯಾಗಿತ್ತು. ಮೊನ್ನೆಯೊಂದು ದಿವಸ ನನ್ನ ಕೆಲಸ ಮುಗಿಸಿ ಮನೆಗೆ ವಾಪಸಾದಾಗ, ಬೀಗ ಹಾಕಿದ್ದ ಮನೆಯ ಬಾಗಿಲ ಬಳಿ ಒಂದು ಪ್ಲಾಸ್ಟಿಕ್ ಕೊಟ್ಟೆಯಿದ್ದಿತ್ತು. ಯಾರದ್ದೂ ಎಂಬ ಸ್ವಲ್ಪವೂ ಸುಳಿವಿಲ್ಲದೆ ತೆಗೆದು ನೋಡಿದರೆ ಅದರಲ್ಲೊಂದು ಪುಟ್ಟ ಪ್ಲಾಸ್ಟಿಕ್ ಗೊಂಬೆ ಮತ್ತು ೪ ಕಿತ್ತಳೆ ಹಣ್ಣುಗಳಿದ್ದವು. ಬಿಲ್ಡಿಂಗ್ ಕೆಲ್ಸಕ್ಕೆ ಬರುವ ಗೌರಮ್ಮ ಬಿಟ್ಟು ಹೋಗಿದ್ದಾಳೆ ಎಂದು ಯೋಚಿಸಿ ಅಲ್ಲಿಯೇ ಇಟ್ಟು ಒಳ ನಡೆದೆ. ಸುಮಾರು ಸಂಜೆಯ ವೇಳೆಗೆ ನೆರೆಯವರಿಂದ ತಿಳಿಯಿತು, ಅದೇ ಹಿರಿಯನ ಹೆಂಡತಿ ತೀರಿ ಹೋದಳೆಂದು ಹಾಗಾಗಿ ತನ್ನೆಲ್ಲ ಬಿಡಾರ ಸುತ್ತಿಕೊಂಡು ಆತುರದಲ್ಲಿ ಆತ ಊರಿಗೆ ಹೊರಟು ಹೋದನೆಂದು. ಅಪಾರ ದುಃಖವಾಯಿತು. ಅಂತಹ ಪರಿಸ್ಥಿತಿಯಲ್ಲೂ ತಾನು ವಾಪಸು ಬರದೇ ಹೋಗುವ ಯೋಚನೆಯಿಂದ ನನ್ನ ಮಗಳ ನೆನೆದು ಹತ್ತಿರದ ಅಂಗಡಿಯಿಂದ ಮಗಳಿಗೆ ಒಂದು ಗೊಂಬೆ ಉಡುಗೊರೆಯಾಗಿ ಕೊಟ್ಟು ಹೋಗುವ ಮನಸ್ಸಿನ ಆ ವ್ಯಕ್ತಿ ಎಷ್ಟು ಶ್ರೀಮಂತನಿರಬಹುದು!! ನಾನು ಕೆಲಸದಿಂದ ವಾಪಸು ಬಂದಿರಲಿಲ್ಲವಾದ್ದರಿಂದ, ಮನೆಯ ಬಾಗಿಲಲ್ಲಿ ಉಡುಗೊರೆಯನ್ನಿತ್ತು ಹೋಗಿದ್ದ ಆ ವ್ಯಕ್ತಿ, ಸಂಬಂಧಿಕನಿಗಿಂತಲೂ ಹೆಚ್ಚಿನ ಆಪ್ತನೆನಿಸಿದ. 

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ