ಮಂಗಳವಾರ, ನವೆಂಬರ್ 13, 2018

ನಾವು ಮತ್ತು ಮಕ್ಕಳ 'ಫೆವಿಕಾಲ್ ಬಾಂಡಿಂಗ್'

ಇದೊಂದು ಘಟನೆ ನೆನಪಿದೆ ನನಗೆ. ಆ ದಿನ ಸಂಜೆ, ಎಡಬಿಡದೆ ತೊಂದರೆ ಕೊಡುತ್ತಿದ್ದ ಶೀತಕ್ಕೆ ಸುಸ್ತಾಗಿ ಮಲಗಿದ್ದೆ. ಒಬ್ಬಳೇ ಆಟವಾಡಿಕೋ ಎಂಬ ಉತ್ತರ ಪದೇ ಪದೇ ಸಿಗುತ್ತ್ತಿದ್ದ ಕಾರಣಕ್ಕೋ ಅಥವಾ ಅಮ್ಮನ ಅವಸ್ಥೆ ನೋಡಿ ಕರುಣೆ ಬಂದೋ, "ಅಮ್ಮ ನಾನು ನಿಂಗೆ ಥಂಡಿ ಹೋಗಕ್ಕೆ ಹೆಲ್ಪ್ ಮಾಡ್ತಿ" ಎಂದಳು ಮಗಳು. "ಸರಿ, ಏನು ಮಾಡ್ತ್ಯಪ..?" ಎಂಬ ಪ್ರಶ್ನೆಗೆ "ನಾನು ಬಿಶಿನೀರ್ ಮಾಡ್ಕೊಡ್ತಿ.." ಎಂದು ಧೈರ್ಯವಾಗಿ ಉತ್ತರಿಸಿದಳು. ಮೂರಡಿಯೂ ಇಲ್ಲದ ಕೂಸಿಗೆ ಅಡುಗೆ ಮನೆಯ ಕಟ್ಟೆ ಕೂಡ ಎಟುಕದ ಸತ್ಯ ನನಗೆ ತಿಳಿದಿದ್ದರಿಂದ ಏನು ಮಾಡುತ್ತಾಳೆ ಎಂಬ ಸಹಜ ಕುತೂಹಲ ನನ್ನಲ್ಲೂ ಇತ್ತು. ಮಗಳು ಅಡುಗೆ ಮನೆಗೆ ಹೋಗಿ ಎಲ್ಲವನ್ನು ಕೂಲಂಕುಷವಾಗಿ ಪರಿಶೀಲಿಸಿ, "ಅಮ್ಮ, ಓವನ್ ಲೈಟ್ ಹಚ್ಕೊಡು ಬಾ.." ಎಂದು ಕೂಗಿ ಕರೆದಳು. ತಲೆನೋವಿನಿಂದ ತಲೆ ಒಂದೇ ಸಮನೆ ಸಿಡಿಯುತ್ತಿತ್ತು. ಶಬ್ದ, ಪ್ರಖರ ಬೆಳಕು, ದೈಹಿಕ ಶ್ರಮ ಯಾವುದೂ ಸಹ್ಯವಿರಲಿಲ್ಲ..ಅನಿವಾರ್ಯ, ಎದ್ದು ಹೋಗಿ ಮೈಕ್ರೋ ಓವನ್ ಆನ್ ಮಾಡಿಕೊಟ್ಟೆ. ನನ್ನ ಪಿಂಗಾಣಿಯ ಟೀ ಕಪ್ಪನ್ನು ಹುಡುಕಿ ಕೈಯಲ್ಲಿ ಹಿಡಿದುಕೊಂಡು ರೆಡಿ ನಿಂತಿದ್ದಳು ಮಗಳು. "ಅಮ್ಮ, ನೀರು ಹಿಡ್ಕೋಡ್ತ್ಯ ಪ್ಲೀಸ್..' ಎಂಬ ಮತ್ತೊಂದು ಕೋರಿಕೆ. ನೀರಿನ ಜಗ್ಗಿನಲ್ಲಿ ನೀರು ಖಾಲಿಯಾದ್ದಕ್ಕಾಗಿ, ಅವಳಿಗೆ ಕೈಗೆಟುಕದ ಎತ್ತರದ ಫಿಲ್ಟರ್ ನಿಂದ ನೀರು ತೆಗೆಯಲು ನನ್ನ ಸಹಾಯ ಬೇಕಿತ್ತು. ಮಗ್ ಗೆ ನೀರು ತುಂಬಿಕೊಂಡು ನೀರನ್ನು ಎಲೆಕ್ಟ್ರಿಕ್ ಓವನ್ ನಲ್ಲಿ ಇಟ್ಟು ಬಿಸಿ ಮಾಡುವಷ್ಟು ಹೊತ್ತು ಮಾರ್ಗದರ್ಶನಕ್ಕೆ ನಾನು ಜೊತೆಯಲ್ಲೇ ನಿಂತಿದ್ದೆ. ಬಿಸಿನೀರ ಮಗ್ಗನ್ನು ಕೈಯಲ್ಲಿ ಹಿಡಿಕೊಳ್ಳಲು ನಾನು ಮುಂದಾದಾಗ, ಇವಳು ನನಗೆ ಅದನ್ನು ಕೊಡದೆ, "ಅಮ್ಮ ನೀ ಹೋಗಿ ಮಲ್ಗಿರು, ನಾನೇ ಬಿಸಿನೀರ್ ಕೊಡ್ತಿ.." ಎಂದಳು. ನಾವು ದೊಡ್ಡವರು ಹೇಗೆ ಕಾಳಜಿ ಮಾಡುತ್ತೇವೋ ಅದೇ ರೀತಿ ಮಾಡಲು ಹವಣಿಸುತ್ತಾ ತನ್ನ ಅವಲಂಭಿತ ಸಹಾಯವನ್ನು, ಸ್ವಾವಲಂಭಿತ ಸಹಾಯವನ್ನಾಗಿ ಮಾಡುವ ಪ್ರಯತ್ನದಲ್ಲಿದ್ದಳು ಅವಳು!! ನಾನು ಹುಷಾರಿಲ್ಲದೆ ಮಲಗಿರುವ ಸನ್ನಿವೇಶವನ್ನು ಮತ್ತೆ ಬಿಂಬಿಸಿ ಅವಳು ರೂಮಿಗೆ ಬಂದು ಬಿಸಿನೀರು ಕೊಟ್ಟು, ನಾನದನ್ನು ಕುಡಿದು "ಆಹಾ..ಆರಾಮಾತು.." ಎಂದು ಹೇಳುವಲ್ಲಿವರೆಗೆ, ನಂತರಕ್ಕೆ ಬಿಸಿನೀರೆಂಬ ಮಾಂತ್ರಿಕತೆಗೆ ತಲೆನೋವು ಕಡಿಮೆಯಾಗಿ ಹಾವು ಏಣಿ ಆಟವಾಡಬೇಕು ಎಂಬಲ್ಲಿವರೆಗೆ ಮುಂದಿನ ಕಥೆ ಸಾಗಿದ್ದು ಬೇರೆ ವಿಷಯ..

ಈಗ ವಿಷ್ಯ ಅದಲ್ಲ, ಎಲ್ಲರ ಮನೆಯಲ್ಲಿ ಈ ರೀತಿಯ ಒಂದಲ್ಲ ಒಂದು ಘಟನೆ ನಡೆಯುತ್ತಲೇ ಇರುತ್ತದೆ, ಹಾಗಾಗಿ ಮಗಳ ಕುರಿತು ಹೆಗ್ಗಳಿಕೆ ಯಂತೂ ಖಂಡಿತ ಅಲ್ಲ..ಪ್ರತಿಯೊಬ್ಬರ ಮನೆಯ ಪ್ರತಿಯೊಂದು ಮಗುವೂ ಕೂಡ 'ಭಾವ ಜೀವಿ' ಆಗಿರುತ್ತದೆ. ..ಪ್ರೀತಿ ಪಡೆದು, ಪ್ರೀತಿ ಕೊಡಲು ಹಂಬಲಿಸುತ್ತಿರುತ್ತದೆ. ಈ ಮಕ್ಕಳ ಮನಸ್ಸಿನಲ್ಲಿ 'ಕಾಂಪ್ಲಿಕೇಷನ್' ಎನ್ನುವ 'ಕಾನ್ಸೆಪ್ಟ್' ಇರುವುದಿಲ್ಲ. ಅವೆಲ್ಲ 'ಪ್ಯೂರ್ ಸೋಲ್' ಗಳು. ತಮಗೆ ತೋಚಿದ ರೀತಿಯಲ್ಲಿ ಪ್ರೀತಿ, ಕರುಣೆ, ಮಮಕಾರ ವ್ಯಕ್ತಪಡಿಸುವಂತವರು..ಮಕ್ಕಳ ಊಟ-ಆಟ-ಪಾಠ ಗಳ ನಡುವೆ, ಅವರ ತುಂಟಾಟವೂ ಅಷ್ಟೇ ಅವಿಭಾಜ್ಯವಾಗಿರುತ್ತದೆ. ಆದರೆ, ಸಮಯದ ಅಭಾವಕ್ಕೋ,ನಮ್ಮ ತಾಳ್ಮೆ ಇಲ್ಲದ ಮನಸ್ಥಿತಿಗೋ ಅಥವಾ ಶಿಸ್ತಿನ ಜೀವನಶೈಲಿ ರೂಡಿ ಮಾಡುವ ಸಲುವಾಗಿ ಅನೇಕ ಸಾರಿ ಮಕ್ಕಳ ಅನೇಕ ಸದ್ಗುಣಗಳನ್ನು ಹುಡುಕಿ ಪ್ರಶಂಸಿಸಲು ನಾವು ಸೋಲುತ್ತೇವೆ. ಬೈದು ರೇಗಿ ಮನಸ್ಸನ್ನು ಇನ್ನಷ್ಟು ಜಟಿಲಗೊಳಿಸಿಕೊಳ್ಳುತ್ತೇವೆ. 'ಅಯ್ಯೋ ಇವ್ಳು ಒಂದು ಲೋಟ ಬಿಸಿನೀರ್ ಮಾಡಿಕೊಡುವುದಕ್ಕೆ ನಂಗೆ ಹತ್ತು ಕೆಲಸ ಬಂತು' ಎಂದು ಬೇಸರಿಸಿದೆವೋ ಅಥವಾ ಹೀಯಾಳಿಸಿದೆವೋ ಅಲ್ಲಿಗೆ ಕಥೆ ಮುಗಿಯಿತು..ತನ್ನ ಸಹಾಯ ಇವರಿಗೆ ಹೊರೆಯಾಗುತ್ತದೆ ಎಂಬ ಸಂಕುಚಿತ ಭಾವನೆ, ಮತ್ತೆ ಮುಂದಿನ ಸಲಕ್ಕೆ ಮನೆಯವರಿಗೆ ಸಹಾಯ ಮಾಡುವ ಯೋಚನೆಯೆಡೆಗೆ ಪ್ರೇರಣೆ ನೀಡುವುದಿಲ್ಲ. ಹಾಗಾಗಿ, ನಮ್ಮ ಒಂದೆರಡು ಹೆಚ್ಚಿನ ನಿಮಿಷದ ಮಕ್ಕಳೆಡೆಗಿನ ಗಮನ, ಅವರಿಗೋಸ್ಕರ ಸ್ವಲ್ಪ ಹೆಚ್ಚಿನ ಕೆಲಸ, ನಾವು ಮತ್ತು ಮಕ್ಕಳ ಮಧ್ಯೆ 'ಫೆವಿಕಾಲ್ ಬಾಂಡಿಂಗ್' ತರುವುದರಲ್ಲಿ ಏನೂ ಸಂದೇಹವಿಲ್ಲ.




ಮಕ್ಕಳದ್ದು ಹೇಗೆ ಕಲಿಕೆ ಅವಿರತವೋ ಹಾಗೆಯೇ ಮಕ್ಕಳಿಂದ ನಾವು ಕಲಿಯುವುದೂ ಕೂಡ ಅಷ್ಟೇ ಇದೆ. ಸಣ್ಣ ಸಣ್ಣ ವಿಷಯಗಳಿಗೆ ಗಟ್ಟಿಯಾಗಿ ನೆಗಾಡಿಕೊಂಡು ಮುಕ್ತವಾಗಿ ಖುಷಿ ಪಡುವ, ತಪ್ಪೋ ಒಪ್ಪೋ 'ಪ್ರಯತ್ನ ಮಾಡುವ' ಮಕ್ಕಳಂತಾ ಮನಸ್ಸು ನಾವು ದೊಡ್ಡವರಿಗೂ ಬರಲಿ ಎಂಬ ಹಾರೈಕೆಯೊಂದಿಗೆ, ಎಲ್ಲಾ ಮುದ್ದು ಮಕ್ಕಳಿಗೆ ಮಕ್ಕಳ ದಿನಾಚರಣೆಯ ಶುಭಾಶಯಗಳು.  

6 ಕಾಮೆಂಟ್‌ಗಳು: