ಗುರುವಾರ, ಡಿಸೆಂಬರ್ 27, 2018

ನೀವು ಪ್ರವಾಸಿಗರೇ?

ಮಕ್ಕಳಿಗೆ, ಕೆಲವು ಕ್ಷೇತ್ರಗಳಲ್ಲಿ ಕೆಲಸ ಮಾಡುತ್ತಿರುವವರಿಗೆ ಈಗ ಕ್ರಿಸ್ತ್ಮಸ್ ರಜೆಯ ಸುಗ್ಗಿ.. ನೀವೀಗಾಗಲೇ ಯಾವುದಾದರೂ ಸ್ಥಳಕ್ಕೆ ಟ್ರಿಪ್ ಪ್ಲಾನ್ ಮಾಡಿರುತ್ತೀರಿ. ಓಡಾಡುವ  ಸ್ಥಳದ ಕುರಿತಾಗಿ ಒಂದಷ್ಟು ಮಾಹಿತಿ, ಓಡಾಡಲು ವಾಹನದ ವ್ಯವಸ್ಥೆ, ಅಲ್ಲಿ ಉಳಿಯಲು ಬೇಕಾದ ಹೋಟೆಲ್ಲು, ಹೋಂಸ್ಟೇ ಗಳ ವ್ಯವಸ್ಥೆ, ಟ್ರಿಪ್ನ ವೇಳೆ, ಹೊಟ್ಟೆ-ಬಟ್ಟೆಗಾಗಿ ಒಂದಷ್ಟು ಅವಶ್ಯಕತೆಯ ವಸ್ತುಗಳ ಶಾಪಿಂಗ್, ಆಟ-ಮೋಜು-ಮಸ್ತಿಗಾಗಿ ಬೇಕಾಗುವ ವಸ್ತುಗಳು, ಓಡಾಡಿದ ಸ್ಥಳದ ನೆನಪಿಗಾಗಿ ಚಿತ್ರ ಕ್ಲಿಕ್ಕಿಸಿಕೊಳ್ಳಲು ಮೊಬೈಲ್, ಕ್ಯಾಮೆರಾ ಹೀಗೆ ಪ್ರವಾಸದ ಕುರಿತಾಗಿ ಸಾಕಷ್ಟು ಯೋಜನೆ ಮತ್ತು ತಯಾರಿ ನಡೆಸುತ್ತೀರಿ ಅಲ್ಲವೇ? ಕಡೆಗೂ ಬಯಸಿದ ಸ್ಥಳಕ್ಕೆ ಪ್ರವಾಸ ಕೈಗೊಂಡು ಸಂಚಾರ ಮಾಡಿ, ಆಟವಾಡಿ, ತಿಂದು-ಕುಡಿದು,ಸಂತೋಷ ಪಡುತ್ತೀರಿ. "ಭಾರೀ ಲಾಯ್ಕ್ ಇತ್ತು ನಮ್ಮ ಟ್ರಿಪ್" ಎಂದು ಇತರರೊಡನೆ ಹೇಳಿ, ಫೋಟೋ ತೋರಿಸಿ ಬೀಗುತ್ತೀರಿ..  

ಹೀಗೆ ನಮ್ಮ ಲೆಕ್ಕದಲ್ಲಿ, 'ಪ್ರವಾಸವೊಂದು ಯಶಸ್ವಿಯಾಗಿತ್ತು' ಎಂಬುದು ನಾವು ಅರಿತ ಹೊಸ ವಿಷಯಗಳು, ಕಂಡು-ಅನುಭವಿಸಿದ ಸಂತೋಷ ಮತ್ತು ಮೋಜು, ಮತ್ತೊಂದಷ್ಟು ಫೋಟೋಗಳ ಕುರಿತಾಗಿಯಾಗಿರುತ್ತದೆ. ಆದರೆ ಸ್ನೇಹಿತರೆ, ನಮ್ಮ ಟ್ರಿಪ್ ಯಶಸ್ವಿ ಮತ್ತು ಅರ್ಥಪೂರ್ಣವಾಗಿತ್ತು ಎಂಬುದರ ಮಾನದಂಡ ನಾವು ಭೇಟಿ ನೀಡಿ ಬಂದ ಸ್ಥಳವನ್ನು ಮಲಿನಗೊಳಿಸದೇ, ಆ ಊರಿನ ಸ್ಥಳೀಯ ಸಂಸ್ಕೃತಿ, ನುಡಿ, ಆಚಾರ ವಿಚಾರಗಳಿಗೆ ಧಕ್ಕೆ ಬರದಂತೆ, ಅಲ್ಲಿನ ಪ್ರವಾಸೀ ತಾಣ ಮತ್ತು ನೈಸರ್ಗಿಕತೆಯನ್ನು ಯಥಾವತ್ತಾಗಿ ಕಾಯ್ದಿರಿಸಿ ಬರುವುದರ ಮೇಲೂ ಆಧಾರಿತವಾಗಿರುತ್ತದೆ. ಪ್ರವಾಸಿಗರಾಗಿ ನಮ್ಮಲ್ಲಿರಬೇಕಾದ ಕರ್ತವ್ಯ ಪ್ರಜ್ಞೆ ಮತ್ತು ಜವಾಬ್ಧಾರಿಯ ಕುರಿತಾಗಿ ಪುಟ್ಟದಾಗೊಂದು ವಿಮರ್ಶೆ.

ಪ್ರವಾಸ ಏಕೆ ಬೇಕು?

ಜೀವನದ ದಿನನಿತ್ಯದ ಜಂಜಾಟ, ಕೆಲಸ, ವಿದ್ಯಾಭ್ಯಾಸ, ಹೀಗೆ ಬಿಡುವಿಲ್ಲದ ಬದುಕು, ಒಂದೇ ಬಗೆಯ ದಿನಚರಿಯಿಂದ ಬೇಸತ್ತು ಮನಸ್ಸು ಒತ್ತಡಗೊಂಡಾಗ, ವಿರಾಮವೊಂದನ್ನು, ಬದಲಾವಣೆಯನ್ನು ಬಯಸುವುದು ಸಹಜ. ಇಂತಹ ಬದಲಾವಣೆಗಳಲ್ಲಿ ಪ್ರವಾಸ ಕೈಗೊಂಡು ಕುಟುಂಬ, ಸ್ನೇಹಿತರು ಮತ್ತು ಆಪ್ತರೊಡನೆ ಸಮಯ ಕಳೆಯುವುದು ಕೂಡ ಹಲವರ ಅಚ್ಚುಮೆಚ್ಚಿನ ಹವ್ಯಾಸಗಳಲ್ಲಿ ಒಂದು. ಒಬ್ಬೊಬ್ಬರ ಆಸೆ ಒಂದೊಂದು ರೀತಿಯದ್ದಾಗಿರುತ್ತದೆ. ಸಂಸ್ಕೃತಿ, ಸಾಹಿತ್ಯ, ಮನೋರಂಜನೆ, ಐತಿಹಾಸಿಕ ಸ್ಥಳಗಳ ಕುರಿತಾದ ಆಕರ್ಷಣೆ, ಪ್ರಕೃತಿ ವೀಕ್ಷಣೆ, ಚಾರಣ, ವಾಹನ ಸವಾರಿ, ಸಮುದ್ರ ತೀರದ ಮೋಹ ಹೀಗೆ ಹತ್ತು ಹಲವು ಬಗೆಯಲ್ಲಿ ನಮ್ಮ ಆಸಕ್ತಿಗೆ ತಕ್ಕಂತೆ ಹೊಸ ಅನುಭವಗಳ  ಪಡೆಯಲೆಂದು ನಾವು ಚಿಕ್ಕ ಪುಟ್ಟ ಪ್ರವಾಸಗಳನ್ನು ಮಾಡುತ್ತಿರುತ್ತೇವೆ. 'ಕೋಶ ಓದಿ ನೋಡು; ದೇಶ ಸುತ್ತಿ ನೋಡು" ಎನ್ನುವ ಮಾತಿನಂತೆ, ಪ್ರವಾಸಗಳು, ಅನುಭವಗಳು ನಮಗೆ ಪ್ರತಿ ಗಳಿಗೆಯೂ ಹೊಸತೊಂದು ಜೀವನ ಮೌಲ್ಯವನ್ನು, ಪಾಠವನ್ನು, ಜೀವಿಸುವ ಸಂಭ್ರಮವನ್ನು ನೀಡುತ್ತದೆ.

ಕೆಲವರಿಗೆ ತಮ್ಮ ವೈಯುಕ್ತಿಕ ಕಾರಣಕ್ಕಾಗಿ ಓಡಾಡುವ ಅನಿವಾರ್ಯತೆಯಿದ್ದರೆ, ಕೆಲವರಿಗೆ ಪ್ರವಾಸ ಒಂದು ಹವ್ಯಾಸವಾಗಿರುತ್ತದೆ. ಬೆಟ್ಟ ಗುಡ್ಡ ಹತ್ತುವ ಸಾಹಸ ಕೆಲವರ ಆಸಕ್ತಿಯಾದರೆ, ಮನಸ್ಸು ತೋಚಿದೆಡೆಗೆ ಗಾಡಿ ಓಡಿಸಿಕೊಂಡು ಊರೂರು ಸುತ್ತುವ ಹುಚ್ಚು ಇನ್ನೊಬ್ಬರದು. ಇನ್ನು ಮಕ್ಕಳಿಗಾಗಿ ಪ್ರಾಣಿ-ಪಕ್ಷಿಗಳನ್ನು, ನೆಲ-ಜಲ, ಆಕರ್ಷಣೀಯ ಆಟಗಳ ಕುರಿತಾದ ಸ್ಥಳಗಳಿಗೆ ಭೇಟಿ ನೀಡಿ ಅವರನ್ನು ಸಂತೋಷ ಪಡಿಸುವ ಉದ್ದೇಶಕ್ಕೆ ಕೆಲವರು ಫ್ಯಾಮಿಲಿ ಟ್ರಿಪ್ ಮಾಡಿದರೆ, ಬ್ಯುಸಿಯಾದ ಜೀವನದಲ್ಲಿ ಎಷ್ಟೋ ಸಮಯ ಭೇಟಿಯಾಗದೇ ಇದ್ದ ಗೆಳೆಯರೆಲ್ಲ ಒಂದೆಡೆ ಸೇರಿ  ತಮ್ಮೆಲ್ಲ ಕಥೆಗಳನ್ನು ಹೇಳುತ್ತಾ ಪಟ್ಟಾಂಗ ಹೊಡೆಯಲೆಂದೇ ಪ್ರವಾಸಕೈಗೊಳ್ಳುವವರು ಒಂದಷ್ಟು ಜನ. ಒಂದು ದಿನದ ಮಟ್ಟಿಗೆ ಮನೆಯಿಂದ ಹೊರಗೋಗಿ ಹತ್ತಿರದ ಹೊಸ ಸ್ಥಳಕ್ಕೆ ಭೇಟಿ  ನೀಡಿ ಸಂತಸ ಪಡಲು ಇಷ್ಟ ಪಡುವ ಜನ ಒಂದು ಕಡೆಯಾದರೆ, ತಿಂಗಳುಗಟ್ಟಲೆ ದೇಶಾಂತರ ಹೋಗಿ ಅಲ್ಲಿನ ಭೌಗೋಳಿಕ, ಪ್ರಾದೇಶಿಕ, ಸಾಂಸ್ಕೃತಿಕ, ವ್ಯಾವಹಾರಿಕ, ಐತಿಹಾಸಿಕ, ವೈಜ್ಞಾನಿಕ, ವಿಷಯಗಳ ಕುರಿತಾದ ಅಧ್ಯಯನ ನಡೆಸಿ,ನೂತನ ಅನುಭವಗಳಿಂದ ಕಲಿಯುವ ಉನ್ಮಾದಕ ಜನರು ಇನ್ನೊಂದೆಡೆ. ಒಂದೇ ಮಾತಿನಲ್ಲಿ ಹೇಳುವುದಾದರೆ, ಪ್ರವಾಸವೆಂಬುದು ನಾವು ನಮ್ಮ ಹಾಯ್ನೆಲೆ ಯಿಂದ ಹೊರ  ಬಂದು, ಪ್ರತಿ ಕ್ಷಣವೂ ದೊರೆಯುವ ಅವಕಾಶಗಳು ಅಥವಾ ಸವಾಲುಗಳನ್ನು ಸ್ವೀಕರಿಸಿ, ಆ ಸಂದರ್ಭಕ್ಕೆ ನಮ್ಮನ್ನು ನಾವೇ ಒಗ್ಗಿಸಿಕೊಂಡು ಸಂತೋಷ ಪಡುವ ಒಂದು ಜೀವನ ಕಲೆ.

ಪ್ರವಾಸ ಮಾಡುವುದೆಂದರೆ ನಮ್ಮಂತಸ್ತಿನ  ಹಿರಿಮೆಯ ತೋರ್ಪಡಿಕೆಯಲ್ಲ -  ಅದೊಂದು ಅವಿರತ ಕಲಿಕೆಯ ಅನಾವರಣ! ಮನೆ, ಆಫೀಸು, ಶಾಲೆ, ಕೆಲಸ, ಹೊಲ-ಗದ್ದೆ, ಊರು -ಕೇರಿ ಹೀಗೆ ನಮ್ಮ ನಮ್ಮ ಮಟ್ಟಿಗೆ ಪರಿಮಿತವಾದ ವಾತಾವರಣದಿಂದ, ಹೊಸ ವಾತಾವರಣವೊಂದನ್ನು ಆಗೀಗ ಜೀವಿಸುವುದರಿಂದ ನಮ್ಮ ದೈಹಿಕ ಮತ್ತು ಮಾನಸಿಕ ಅರೋಗ್ಯ ವೃದ್ಧಿಸುತ್ತದೆ. ಪ್ರವಾಸಗಳು ಮಕ್ಕಳಿಗೆ ಶಾಲೆಯ ಪಾಠಗಳ ಹೊರತಾಗಿ ತಮ್ಮನುಭವಗಳಿಂದ ಅನೇಕ ವಿಷಯಗಳನ್ನು ಕಲಿಯಲು ಒಂದು ಉತ್ತಮ ಅವಕಾಶ . ಸಾಹಸಗಳಿಗೆ ನಮ್ಮನ್ನು ನಾವು ತೊಡಗಿಸಿಕೊಂಡಾಗ ನಮ್ಮಲ್ಲಿನ ಆತ್ಮಸ್ತೈರ್ಯ ಹೆಚ್ಚುತ್ತದೆ. ಮನಸ್ಸುಗಳು ಬಿಗುವಾದಾಗ ಚಿಕ್ಕಪುಟ್ಟ  ತಿರುಗಾಟ ಮನಸ್ಸನ್ನು ತಿಳಿಯಾಗಿಸುತ್ತದೆ. ಪ್ರತಿನಿತ್ಯದ ಆಗುಹೋಗುಗಳನ್ನೇ ನೋಡಿ ನೋಡಿ ಜಡ್ಡು ಹಿಡಿದ ನಮ್ಮ ಮನಸ್ಸುಗಳಿಗೆ ಪ್ರವಾಸವೆಂಬುದು ಹೊಸ ಜನರೊಂದಿಗೆ ಕಲೆತು ಬೆರೆತು ಹೊಸತನವನ್ನು ನೀಡುವ ಒಂದು ಹುರುಪು. ಪ್ರವಾಸ ಮಾಡುವುದೆಂದರೆ ಕೇವಲ ಜೊತೆಗಿರುವವರೊಂದಿಗೆ ಮೋಜು-ಮಸ್ತಿ ಒಂದೇ ಅಲ್ಲದೆ, ಇತರರೊಂದಿಗಿನ ಹೊಂದಾಣಿಕೆ, ಬಾಂಧವ್ಯ ಉತ್ತಮಗೊಳಿಸಿಕೊಳ್ಳುವ ಒಂದು ಉತ್ತಮ ಬಗೆ.


ಯಶಸ್ವಿ ಪ್ರವಾಸದ ತಯಾರಿ ಮತ್ತು ಪ್ರವಾಸಿಗರ ಕರ್ತವ್ಯಗಳು

ಯಾವುದೇ ಆಕರ್ಷಣೀಯ ಸ್ಥಳವೂ, ಜನರು ಭೇಟಿ ನೀಡಲು ಯೋಗ್ಯವಾಗಿದ್ದು, ಮನರಂಜನೆ, ವಿರಾಮ ಅಥವಾ ವ್ಯಾಪಾರದ ಉದ್ದೇಶದಿಂದ ಕೂಡಿದ್ದು, ಆ ಪ್ರದೇಶದ ಒಟ್ಟಾರೆ ಅಭಿವೃದ್ಧಿಗೆ ಪೂರಕವಾಗುವಂತಿದ್ದರೆ ಅದು 'ಪ್ರವಾಸೀ ಸ್ಥಳ'ವೆನಿಸಿಕೊಳ್ಳುತ್ತದೆ. ಪ್ರವಾಸಿಗರಾಗಿ, ನಾವು ಇರುವ ಪರಿಸರದಿಂದ ಪರಸ್ಥಳಕ್ಕೆ ಭೇಟಿ ನೀಡುವಾಗ ಮಾಡುವ ಯೋಜನೆ ಮತ್ತು ನಡೆಸುವ ತಯಾರಿ ಕೇವಲ ಲೌಕಿಕ ವಸ್ತುಗಳ ಕೊಂಡೊಯ್ಯುವುದರ ಕುರಿತಾಗಿ ಮಾತ್ರವೇ ಆಗಿರಬಾರದು. ಪ್ರವಾಸವೆಂದರೆ ಒಂದಷ್ಟು ಸಮಯೋಜಿತ, ಪೂರ್ವಾಪರ ವಿಷಯಗಳ ಅರಿವು ಕೂಡ ಅಗತ್ಯ. ಇದರ ಜೊತೆಗೆ ಪ್ರವಾಸದ ಉದ್ದೇಶ ನಮ್ಮ ವೈಯುಕ್ತಿಕ ಕಾರಣಗಳಿಂದ ಯೋಜನೆಗೊಂಡಿದ್ದರೂ, ಅದು ಕೇವಲ ನಮ್ಮ ಹಿತವೊಂದಕ್ಕೆ ಮಾತ್ರ ಸೀಮಿತವಾಗಿರಬಾರದು. ನಾವು ಭೇಟಿ ನೀಡುತ್ತಿರುವ ಸ್ಥಳಕ್ಕೆ ಅಥವಾ ಪ್ರವಾಸದುದ್ದಕ್ಕೂ ನಮ್ಮಿಂದ ಇತರರಿಗೆ ಮತ್ತು ಪ್ರವಾಸೀ ತಾಣದ ಸುತ್ತಲಿನ ಪರಿಸರಕ್ಕೆ ಹಾನಿಯುಂಟಾಗದಂತೆ ಕಾಳಜಿ ವಹಿಸುವ ಜವಾಬ್ಧಾರಿ ಕೂಡ ನಮ್ಮದಾಗಿರುತ್ತದೆ.

೧. ಪ್ರವಾಸಿ ಸ್ಥಳದ ಕುರಿತು ಕನಿಷ್ಠ ಮಾಹಿತಿ ಸಂಗ್ರಹ.

ಪ್ರವಾಸ ಹೋಗಲು ಸಾರಿಗೆ ವ್ಯವಸ್ಥೆಯಿಂದ ಹಿಡಿದು, ವಸತಿ ಊಟ ಓಡಾಟ ಪ್ರತಿಯೊಂದೂ ಸ್ವತಃ ಆಯೋಜಿಸುವುದು ಕಷ್ಟ ಅಥವಾ ಅನುಭವ ಸಾಲದು ಎಂದೆನಿಸಿದಾಗ, ನಾವು ಸಾಮಾನ್ಯವಾಗಿ ಪ್ರವಾಸ ವ್ಯಾಪಾರೋದ್ಯಮ ನಡೆಸುವ ಟೂರ್ಸ್ ಅಂಡ್ ಟ್ರಾವೆಲ್ಸ್ ನವರ ಪ್ಯಾಕೇಜ್ ಟ್ರಿಪ್ ಗಳ ಮೊರೆ ಹೋಗುವುದು ಸಹಜ. ಒಂದಷ್ಟು ದುಡ್ಡು ಕಟ್ಟಿಬಿಟ್ಟರೆ ನಮ್ಮನ್ನು ಆರಂಭದ ಸ್ಥಳದಿಂದ ಹೊರಟು, ವೀಕ್ಷಿಸಬೇಕಾದ ಸ್ಥಳಗಳಿಗೆಲ್ಲ ಸುತ್ತಾಟ ಮುಗಿಸಿ ವಾಪಾಸು ಕರೆತರುವಲ್ಲಿಯವರೆಗೆ ಪ್ರತಿಯೊಂದೂ ಅವರದ್ದೇ ಪ್ರಯಾಣದ ಪ್ಲಾನ್ ಮತ್ತುಚಟುವಟಿಕೆಯ ಜವಾಬ್ದಾರಿ, ಚಿಂತೆ ಮಾಡುವ ಅಗತ್ಯವಿಲ್ಲ ಎಂದು ನಾವು ಯೋಚಿಸುತ್ತೇವೆ. ಆದರೆ ಖಾಸಗಿಯಾಗಿ ಅಥವಾ ಸ್ವತಃವಾಹನ ಚಲಾಯಿಸಿ ಪ್ರಯಾಣಿಸದಿದ್ದರೂ, ಪ್ರವಾಸ ಸ್ಥಳದ ಕುರಿತಾಗಿ ಕನಿಷ್ಠ ಪ್ರಮಾಣದ ಮಾಹಿತಿಯಾದರೂ ನಾವು ಸಂಗ್ರಹಿಸಬೇಕು. ಪ್ರವಾಸೀ ತಾಣದ ಕುರಿತಾಗಿ ಯಾವುದಾದರೂ ಪುಸ್ತಕ, ಟಿ.ವಿ ಡಾಕ್ಯುಮೆಂಟರಿ, ಇಂಟರ್ನೆಟ್ ಆಧಾರಿತ ವಿಷಯಗಳು, ಬ್ಲಾಗರ್ಸ್ ಗಳ ಪ್ರವಾಸಾನುಭವ ಇತ್ಯಾದಿ ಬಲ್ಲ ಮೂಲಗಳಿಂದ ಸಾಧ್ಯವಾದಷ್ಟರ ಮಟ್ಟಿಗೆ ತಿಳಿದುಕೊಳ್ಳಲು ಪ್ರಯತ್ನಿಸಬೇಕು.

ಈಗಿನ ತಂತ್ರಜ್ಞಾನದ ಬಳಕೆಯ ಸಾಧ್ಯತೆಯಿರುವ ಎಲ್ಲ ಸ್ಥಳಗಳಿಗೂ ಜಿ.ಪಿ.ಸ್ ವ್ಯವಸ್ಥೆಯು ನಮ್ಮ ಪ್ರವಾಸದ ಹಾದಿಯನ್ನು ಸುಗಮಗೊಳಿಸುತ್ತದೆ. ನಾವು ಭೇಟಿ ನೀಡುವ ಸ್ಥಳಗಳ ಕುರಿತಾಗಿ ಪ್ರವಾಸೀ ವಾಣಿಜ್ಯ ವೆಬ್ ಸೈಟ್ಗಳಲ್ಲಿ ಮಾಹಿತಿ ಹುಡುಕುವುದರ ಜೊತೆಗೆ, ಪ್ರವಾಸಿಗರ ಪ್ರವಾಸ ಕಥನ, ಅನುಭವಗಳನ್ನು ಓದುವುದು  ಒಳ್ಳೆಯದು. ಟ್ರಾವೆಲ್ ಬ್ಲಾಗ್ ಗಳಲ್ಲಿ, ಬರಹಗಾರರು ತಮ್ಮ ಪ್ರವಾಸದ ಉದ್ದೇಶ, ತಮಗೆ ದೊರಕಿದ ಕಾಲಾವಕಾಶ, ವ್ಯವಸ್ಥೆಗಳ ಯೋಜನೆ, ಕೆಲವು ಮುಂದಾಲೋಚನೆ, ಸಹಚರರೊಂದಿಗಿನ ಹೊಂದಾಣಿಕೆ, ತಮಗೆ ಸಿಕ್ಕ ಅವಕಾಶ ಮತ್ತು ಸಂಕಷ್ಟಗಳು, ಮಾಹಿತಿ ಅಂಕಿ ಅಂಶಗಳು ಹೀಗೆ ಹತ್ತು ಹಲವು ವಿಚಾರಗಳನ್ನು ಹಂಚಿಕೊಳ್ಳುವುದರಿಂದ, ನಮಗೆ ನಮ್ಮ ಪ್ರವಾಸವನ್ನು ನಮ್ಮನುಕೂಲಕ್ಕೆ ತಕ್ಕಂತೆ ಆಯೋಜಿಸಲು ಸಹಾಯಕವಾಗುತ್ತದೆ. ಕೇವಲ ವ್ಯಾಪಾರೋದ್ಯಮದ ದೃಷ್ಟಿಯಲ್ಲಿ ಬಿಂಬಿಸುವ ಅತ್ಯುತ್ತಮ ವ್ಯವಸ್ಥೆಗಳ ನಿಜ ಸ್ವರೂಪ, ಪ್ರವಾಸ ಸ್ಥಳಗಳಲ್ಲಿ ನಾವು ವಂಚನೆಗೊಳಗಾಗಬಹುದಾದ ಸಂದರ್ಭಗಳ ಸುಳಿವು ದೊರೆಯುತ್ತದೆ.

ಪ್ರವಾಸ ಸ್ಥಳದ ಭಾಷೆ ನಮ್ಮ ಭಾಷೆಗಿಂತ ಭಿನ್ನವಾಗಿದ್ದರೆ, ಪ್ರಮುಖವಾದ ಶಬ್ದಗಳನ್ನುತಿಳಿದುಕೊಂಡರೆ, ಹೋದ ಕಡೆಗೆ ಇತರರೊಡನೆ ಸಂಭಾಷಣೆ ನಡೆಸುವ ಅಗತ್ಯತೆ ಸುಲಭವೆನಿಸುತ್ತದೆ. ಪರದೇಶಕ್ಕೆ ಪ್ರವಾಸ ಕೈಗೊಳ್ಳುವುದಾದರೆ ಅಲ್ಲಿನ ಕಾನೂನು ವ್ಯವಸ್ಥೆಯ ಕುರಿತು ಮಾಹಿತಿ ಸಂಗ್ರಹಿಸುವುದು ಅತ್ಯವಶ್ಯಕ. ಕೆಲವೆಡೆ ಗುರುತಿನ ಚೀಟಿ ಕಡ್ಡಾಯವಾಗಿರುತ್ತದೆ. ಅರೋಗ್ಯ ವಿಮೆ ಪತ್ರ, ನಮ್ಮ ಹತ್ತಿರದವರ ಸಂಪರ್ಕ ಕೊಂಡಿ ಇತರೆ ಮಾಹಿತಿಗಳ ತಯಾರಿ ಮಾಡಿಕೊಂಡರೆ, ವಿವಿಧ ಬಗೆಯ ಪ್ರವಾಸೀ ಚಟುವಟಿಕೆಗಳಿಗೆ ಅನುಕೂಲಕರ. ಅಲ್ಲಿನ ಚಲಾವಣೆಯಲ್ಲಿರುವ ವ್ಯವಸ್ಥೆಗಳು, ಸಂಸ್ಕೃತಿ, ಸಾಮಾಜಿಕ ವರ್ತನೆ, ಆಹಾರ ಪದ್ದತಿಯ ಕುರಿತಾಗಿ ತುಸು ವಿಷಯಗಳನ್ನು ಕಲೆ ಹಾಕಿಕೊಂಡರೆ, ನಮಗತ್ಯವಾದ ಪರ್ಯಾಯ ವ್ಯವಸ್ಥೆ ಮಾಡಿಕೊಳ್ಳಬಹುದು, ಮಾಹಿತಿಯಿಲ್ಲದೆ ಪೇಚಾಟಕ್ಕೀಡಾಗುವ ಪ್ರಸಂಗ ಬರುವುದಿಲ್ಲ.

ಚಿಕ್ಕ ಮಕ್ಕಳನ್ನು ಕರೆದುಕೊಂಡು ಪ್ರವಾಸ ಕೈಗೊಳ್ಳುವುದು ಎಂತವರಿಗೂ ಒಂದು ಚಾಲೆಂಜ್. ಹಾಗಾಗಿ ಮಕ್ಕಳ ಊಟ-ತಿಂಡಿ, ಬಟ್ಟೆ ಮತ್ತು ಇತರ ಸೌಕರ್ಯಗಳಿಗಾಗಿ, ನಾವು ಪ್ರಯಾಣ ಬೆಳೆಸುತ್ತಿರುವ ಸ್ಥಳದಲ್ಲಿ ಬೆಳೆಯುವ ಮತ್ತು ದೊರೆಯುವ ತರಕಾರಿ, ಹಣ್ಣು ಆಹಾರ ವಸ್ತುಗಳ ಲಭ್ಯತೆ, ಹವಾಮಾನ ಪರಿಸ್ಥಿತಿ ಇತ್ಯಾದಿ ವಿಷಯಗಳ ಕುರಿತಾಗಿ ಮುಂಚಿತವಾಗಿಯೇ ಗಮನಿಸಿಕೊಂಡರೆ, ಮಕ್ಕಳನ್ನು ಪ್ರಯಾಣದುದ್ದಕ್ಕೂ ಸಮಾಧಾನದಿಂದಿರಿಸಲು ಅನುಕೂಲವಾಗುತ್ತದೆ.

೨. ಸ್ಥಳೀಯ ಸಂಪ್ರದಾಯಗಳ ಕುರಿತಾಗಿ ಗೌರವ

ಹೊಸ ಜಾಗವೊಂದಕ್ಕೆ ಹೋದಾಗ ಅಲ್ಲಿನ ಆಚಾರ ವಿಚಾರ ಸಂಪ್ರದಾಯಗಳು ನಮಗೆ ತಿಳಿಯದ ವಿಷಯವಾಗಿದ್ದರೆ, ಕೇಳಿ, ನೋಡಿ, ಗಮನಿಸಿ ಅಲ್ಲಿನ ರೀತಿ ರಿವಾಜುಗಳಿಗೆ ನಮ್ಮ ಪ್ರವಾಸವನ್ನು ಚಟುವಟಿಕೆಯನ್ನು ಹೊಂದಿಸಿಕೊಳ್ಳಬೇಕು.  ಕೆಲವು ಧಾರ್ಮಿಕ ಪ್ರವಾಸೀ ತಾಣಗಳಿಗೆ ಭೇಟಿ ನೀಡಿದಾಗ, ಉದಾಹರಣೆಗೆ ಕೆಲವು ಪೂಜಾ ಮಂದಿರಗಳಲ್ಲಿ ನಾವು ಧರಿಸುವ ಪೋಷಾಕುವಿನ ಕುರಿತಾಗಿ ನಿಯಮವಿರುತ್ತದೆ. ಪೂಜಾ ವಿಧಿ ವಿಧಾನಗಳಲ್ಲಿ ವೈವಿದ್ಯತೆ ಇರಬಹುದು. ಊಟ -ತಿಂಡಿಯ ಅಭ್ಯಾಸ ತುಸು ಭಿನ್ನವಾಗಿರಬಹುದು. ಆದರೆ ಅಲ್ಲಿನ ಸನಾತನ ಸಂಸ್ಕೃತಿ ಸಂಪ್ರದಾಯಕ್ಕೆ ನಮ್ಮ ಮನಸ್ಸನ್ನು ಸಂಕುಚಿತಗೊಳಿಸದೆ, ತೆರೆದ ಮನಸ್ಸಿನಿಂದ ಹೊಂದಿಕೊಂಡಾಗ ಮಾತ್ರ, ಸ್ಥಳೀಯರೊಡನೆ ನಾವು ಆತ್ಮೀಯವಾಗಿ ಬೆರೆಯಲು ಸಹಾಯವಾಗುತ್ತದೆ. ಯಾವುದೋ ನಗರ ಪ್ರದೇಶದಿಂದ ನಾವು ಪ್ರಯಾಣ ಬೆಳೆಸಿ ಚಿಕ್ಕ ಊರಿಗೆ ಹೋಗಿದ್ದರೂ ಸಹ, ಆ ಪ್ರದೇಶದ ಜನರ ಭಾವನಾತ್ಮಕ ವಿಷಯಗಳಿಗೆ, ಆಚರಣೆಗಳಿಗೆ ಧಕ್ಕೆ ತರುವಂತ ಅವಹೇಳನೆ ಮಾತುಗಳನ್ನಡದೇ, ನಮ್ಮ ಮನಸ್ಸಿಗೆ ಬಂದಂತೆ ವರ್ತಿಸದೇ, ಸ್ಥಳೀಯರ ಸಣ್ಣ ಸಣ್ಣ ನಂಬಿಕೆಗಳನ್ನು, ಕುತೂಹಲವನ್ನೂ ಖುಷಿ ಖುಷಿಯಾಗಿ ಸ್ವೀಕರಿಸಿದರೆ, ನಮ್ಮ ಟ್ರಿಪ್ ಕೂಡ ನಲಿವಿನಿಂದ ಕೂಡಿರುತ್ತದೆ.

ಪ್ರವಾಸೋದ್ಯಮವೇ ಮುಖ್ಯ ಬಂಡವಾಳವಾಗಿರುವಂತಹ ಊರುಗಳಲ್ಲಿ, ಪ್ರವಾಸಿಗರನ್ನು ಆಕರ್ಷಿಸಲೆಂದು ಅಲ್ಲಿನ ಮುಖ್ಯ ಐತಿಹಾಸಿಕ ವಿಷಯಗಳ ಕುರಿತಾದ ವಸ್ತು ಸಂಗ್ರಹಾಲಯಗಳು, ಕಲಾವಿದರಿಂದ ಸಂಗೀತ, ನೃತ್ಯ, ಕಲೆಗಳ ಪ್ರದರ್ಶನ, ಕರಕುಶಲ ವಸ್ತುಗಳ ಮಾರಾಟ ಹೀಗೆಸಾಕಷ್ಟು ರೀತಿಯ ಕಾರ್ಯಕ್ರಮಗಳನ್ನು ಏರ್ಪಡಿಸುತ್ತಾರೆ. ಇಂತಹ ಸ್ಥಳಗಳಲ್ಲಿ, ಪ್ರದರ್ಶನಕ್ಕಿಟ್ಟ ವಸ್ತುಗಳನ್ನು ಯಾವುದೇ ಕಾರಣಕ್ಕೂ ಭಗ್ನಗೊಳಿಸದೇ, ಮಹಿಳೆಯರ ಬಗ್ಗೆ ಅಶ್ಲೀಲ ಮಾತುಗಳನ್ನಾಡದೇ ಕಲೆಯನ್ನು ಅರಿಯುವ, ಹೊಸ ವಿಚಾರಗಳನ್ನು ತಿಳಿದುಕೊಳ್ಳುವ ಮನೋಭಾವನೆಯಿಂದ ನೋಡಿ ಆನಂದಿಸುವುದು, ಸಂತಸ ತಂದುಕೊಟ್ಟ ಪ್ರದರ್ಶನಕಾರರಿಗೆ ಒಂದು ಪ್ರಶಂಸೆ ನೀಡುವುದು ಇತ್ಯಾದಿ ನಮ್ಮನ್ನು ನಾವೇ ಉತ್ತಮ ಪ್ರಜೆಯನ್ನಾಗಿಸಿಕೊಳ್ಳಲು ಸಹಾಯ ಮಾಡುತ್ತದೆ.

೨. ಪ್ರವಾಸದ ಪರಿಸರ ನಮ್ಮ ಜವಾಬ್ಧಾರಿ ಕೂಡ.

ಒಂದು ಬೆಳ್ಳಂಬೆಳಗ್ಗೆ ಯಾರಾದರೂ ಇದ್ದಕ್ಕಿದ್ದಂತೆ ನಮ್ಮ ಮನೆಗಳಿಗೆ ಬಂದು ಒಂದಷ್ಟು ಹಾರಾಡಿ ಕುಣಿದಾಡಿಕೊಂಡು, ಕೂತು ಉಂಡು ಕಂಡ ಕಂಡಲ್ಲಿ ಕಸ ಬಿಸಾಡಿ ತಿಳಿಸದೇ ಹೊರಟೇ ಹೋದರೆ ಹೇಗನ್ನಿಸಬಹುದು? ಕೋಪ, ಅಸಹಾಯಕತೆ, ದುಃಖ ಎಲ್ಲವೂ ಒಮ್ಮೆಲೇ ಉಂಟಾಗಬುದಲ್ಲವೇ? ಅಂದ ಮೇಲೆ ನಾವು ಪ್ರವಾಸಕ್ಕೆಂದು ಹೊರಗಿನ ಸ್ಥಳಗಳಿಗೆ ಓಡಾಡಿ ಪರಿಸರವನ್ನು ಅಂದಗೆಡಿಸಿ ಬರುವುದು ಎಷ್ಟರ ಮಟ್ಟಿಗೆ ನ್ಯಾಯಸಮ್ಮತ?

ಪ್ರವಾಸೀ ಸ್ಥಳವೆಂದರೆ ಜನರು ಹೆಚ್ಚಿನ ಪ್ರಮಾಣದಲ್ಲಿ ಓಡಾಡುವಂತಹ ಸ್ಥಳ. ಕೆಲವು ಕಡೆ ಸ್ವಚ್ಛತೆಯೆಡೆಗೆ ನಿಗಾ ವಹಿಸಿ ಸರ್ಕಾರದಿಂದ ಕ್ರಮಗಳನ್ನು, ಉಸ್ತುವಾರಿಗೆ ಜನರ ನೇಮಕಗೊಂಡಿರುತ್ತಾರೆ. ಆದರೆ ಸರ್ಕಾರದ ವ್ಯವಸ್ಥೆಯೊಂದೇ ಸಾಕೆ? ಆಕರ್ಷಣೀಯ ಸ್ಥಳಗಳು ಎಂದ ಕ್ಷಣವೇ ೧೦-೨೦ ಸಣ್ಣ ಪುಟ್ಟ ಬೀದಿ ಅಂಗಡಿಗಳಿಂದ ಹಿಡಿದು ದೊಡ್ಡ ದೊಡ್ಡ ವಾಣಿಜ್ಯ ಮಳಿಗೆಗಳು ತಲೆ ಎತ್ತುವುದು ಸಹಜ. ಪ್ರತಿಯೊಂದು ವ್ಯವಸ್ಥೆಯೂ ಯಶಸ್ವಿಯಾಗಲು ಜನರ ಸಹಕಾರ ಅತೀ ಮುಖ್ಯ. ಅನೇಕ ಕಡೆ ಕಸದ ಬುಟ್ಟಿ ಇದ್ದರೂ ಜನರು ಕಂಡಕಂಡಲ್ಲೆ ಕಸ ಹಾಕುವುದನ್ನು ನಾವು ನೋಡುತ್ತೇವೆ. ಇನ್ನು ಕೆಲವೆಡೆ ಕಾಡು-ಮೇಡು ,ನೀರಿರುವಂತಹ ನೈಸರ್ಗಿಕ ಸ್ಥಳದಲ್ಲಂತೂ ಕೇಳುವುದೇ ಬೇಡ, ಬೇಕೆಂದರಲ್ಲಿ ಕಸ ಎಸೆಯುವ, ಮದ್ಯಪಾನ ಮಾಡಿ ಬಾಟಲಿಗಳನ್ನು ಎಸೆಯುವಂತಹ ನೀಚ ಕೃತ್ಯ ಮಾಡುವ ಮನಸ್ಸಿಗರಿರುತ್ತಾರೆ.

ಪ್ರವಾಸಿಗನಾಗಿ ನಮಗೆ ನಮ್ಮ ಧ್ಯೇಯವಿರಬೇಕು. 'ಇದೆಲ್ಲವೂ ನಮ್ಮ ಭೂಮಿ, ನಮ್ಮ ಸಂಸ್ಕೃತಿ, ನಮ್ಮ ಮಣ್ಣು, ನಮ್ಮ ಜಲ" ಎಂಬ ಆಳವಾದ ಮನೋಭಾವನೆ ನಮ್ಮಲ್ಲಿ ಬೇರೂರಿದರೆ ಮಾತ್ರ, ಮಾಲಿನ್ಯಕ್ಕೆ ನಮ್ಮಇಂದಾಗುವ ಕೊಡುಗೆಯನ್ನು ತಕ್ಕಮಟ್ಟಿಗೆ ತಪ್ಪಿಸಬಹುದು ಮತ್ತು ನಮ್ಮ ಮಕ್ಕಳಲ್ಲೂ ಈ ಭಾವನೆಯನ್ನು ಪೋಷಿಸಬಹುದು. ನಮ್ಮ ಟ್ರಿಪ್ ಜಾಲಿಯಾಗಿರಲು ಎಷ್ಟೆಲ್ಲಾ ವಿಷಯಗಳ ಕುರಿತು ನಾವು ತಯಾರಿ ನಡೆಸುತ್ತೇವೋ, ಅದರಲ್ಲಿ ಪರಿಸರದ ಕುರಿತು ಕಾಳಜಿಯೂ ಒಂದಂಶವಾಗಿರಬೇಕು. ಐತಿಹಾಸಿಕ ವಸ್ತುಗಳನ್ನು ನೋಡಿ ಸಂತೋಷಿಸಬೇಕು ವಿನಃ ಅವುಗಳನ್ನು ಯಾವುದೊ ಮತೀಯ ಭಾವನಾತ್ಮಕ ವಿಚಾರಗಳ ಹಿನ್ನಲೆಯಲ್ಲಿ ಹಾಳುಗೆಡುವುದು ತಪ್ಪು. ಯಾರದೋ ಮೇಲಿನ ಪ್ರೀತಿ-ಪ್ರೇಮ ಭಾವನೆಗಳು ಆ ವ್ಯಕ್ತಿಗೇ ನಮ್ಮ ನಡೆ ನುಡಿಗಳಲ್ಲಿ ತೋರ್ಪಡಿಸುವಂತಿರಬೇಕು ಹೊರತು, ಪ್ರವಾಸೀ ತಾಣಗಳ, ಪ್ರಸಿದ್ಧ ಸ್ಥಳಗಳ ಕಲ್ಲಿನ ಮೇಲೆ, ಮರದ ಮೇಲೆ ತಮ್ಮ ಹೆಸರುಗಳನ್ನು ಕೆತ್ತಿ ಬರೆದು ಆ ಪ್ರಕೃತಿಯ ಅಂದವನ್ನುಹಾಳು ಮಾಡುವಂತಿರಬಾರದು. ಇನ್ನು ಪ್ಲಾಸ್ಟಿಕ್ ಎಂಬ ಮಾರಕವನ್ನು ಪ್ರವಾಸದುದ್ದಕ್ಕೂ ಪ್ರಸರಣ ಮಾಡದಿರೋಣ. ಪ್ರಯಾಣ ಮಾಡುವಾಗ ಬಿಸ್ಕಿಟು, ಪ್ಯಾಕಡ್ ತಿಂಡಿಗಳನ್ನು, ಕುರುಕಲುಗಳನ್ನು ತಿಂದು ವಾಹನದ ಕಿಟಕಿಯಿಂದಾಚೆ 'ಇದೊಂದೇ ಕವರ್ ತಾನೇ' ಎಂದು ಹೊರಗೆ ಹಾಕದಿರೋಣ. ಪ್ರಯಾಣದ ಮಧ್ಯೆ ನೀರಿನ ಒರತೆಯ ಸಮೀಪದಲ್ಲಿ ಊಟ ತಿಂಡಿಗೆಂದು ಬಿಡುವು ತೆಗೆದುಕೊಂಡು ಅಲ್ಲಿಯೇ ತಿಂಡಿಯ ಕಸವನ್ನು ನೀರಿಗೆ, ಮರದ ಬುಡಕ್ಕೆ ಎಸೆದು ಬರುವುದು ಬೇಡ - ಬದಲಿಗೆ, ಕಸವನ್ನು ಒಟ್ಟು ಮಾಡಿಕೊಂಡು ಇನ್ನೊಂದು ಸ್ಪೇರ್ ಕವರಿಗೆ ತುಂಬಿಟ್ಟು ನಂತರಕ್ಕೆಲ್ಲಾದರೂ ಕಸದ ಬುಟ್ಟಿ ಕಂಡಾಗ ಅಲ್ಲಿ ವಿಲೇ ಮಾಡುವಷ್ಟು ಸಣ್ಣ  ಪ್ರಮಾಣದ ಕೆಲಸ ನಮ್ಮಿಂದ ಸಾಧ್ಯವಿದೆ. ಯುವಜನರು, ಕಾಲೇಜು ಮಕ್ಕಳು ಜಾಲಿ ಟ್ರಿಪ್ ಎಂದು ಪ್ರವಾಸ ಕೈಗೊಂಡು, ನಿಸರ್ಗದತ್ತ ಪ್ರವಾಸೀ ತಾಣಗಳಲ್ಲಿ ಮದ್ಯಪಾನ ಮಾಡುವುದು ಒಂದು ಟ್ರೆಂಡ್ ಎಂದು ಭಾವಿಸುವ ಮುಂಚೆ ಪರಿಸರಕ್ಕೆ ಮತ್ತು ಇತರ ಪ್ರವಾಸಿಗರಿಗೆ ಮುಜುಗರಕ್ಕೀಡುಮಾಡುವ ಕೆಲಸ ಆತ್ಮಗೌರವ ಕೊಡುವಂತದ್ದಲ್ಲ ಎಂಬ ಸಣ್ಣ ಆಲೋಚನೆ ಮನಸ್ಸಿನಲ್ಲಿ ತಂದುಕೊಂಡರೆ ಸಾಕು.  ಫಯರ್ ಕ್ಯಾಂಪ್ ಎಂದು ಬೆಂಕಿ ಹಾಕಿ ಸುತ್ತಲೂ ನರ್ತಿಸುವ ಮುನ್ನ ಸುತ್ತಮುತ್ತಲಿನ ಹಸಿರಿಗೆ, ಅರಣ್ಯಕ್ಕೆ ತೊಂದರೆಯಾಗದಂತೆ ಒಮ್ಮೆ ಕಾಳಜಿ ವಹಿಸುವುದು ಒಳಿತು. ಹೊರಗಡೆ ಹೋದಾಗ ದೊರಕುವ ಉಚಿತ ಸಂಪನ್ಮೂಲ ಎಂದು ನೀರನ್ನು ಹೆಚ್ಚು ಪೋಲು ಮಾಡದೆ ಇದ್ದರೆ ಅದೇ ಒಂದು ನಿಸರ್ಗಕ್ಕೆ ನಮ್ಮ ವಂತಿಕೆ. ಅಭಯಾರಣ್ಯಗಳಿಗೆ ಭೇಟಿನೀಡುತ್ತಿದ್ದೇವೆಂದರೆ, ಪ್ರಾಣಿ ಪಕ್ಷಿಗಳ, ಜೀವ-ಸಂಕುಲಗಳ ಮನೆಗೆ ಅತಿಥಿಯಾಗಿ ನಾವು ಹೋಗುತ್ತಿದ್ದೇವೆಂದರ್ಥ. ಬೇಕಾಬಿಟ್ಟಿ ಗಲಾಟೆ, ಮಾಲಿನ್ಯಗಳಿಂದ, ಪ್ರಾಣಿಪಕ್ಷಿಗಳಿಗೆ ಹಿಂಸೆ ನೀಡಿ ಬರುವಂತಹ ಕಾರ್ಯಗಳು ನಮ್ಮದಾಗುವುದು ಬೇಡ.

 ವಾಣಿಜ್ಯ ವ್ಯಾಪಾರಾಭಿವೃದ್ದಿ ದೃಷ್ಟಿಯಿಂದ ಯಾವುದೇ ಪ್ರವಾಸಿಗರಿಗೆ ಆಕರ್ಷಣೀಯವೆನಿಸುವ ಸ್ಥಳಗಳಲ್ಲೂ ಸಣ್ಣ ಗೂಡಂಗಡಿಯಿಂದ ಹಿಡಿದು ದೊಡ್ಡ ದೊಡ್ಡ ಮಳಿಗೆಗಳ ವರೆಗೆ ನಿರ್ಮಿತವಾಗುವುದು ಸಹಜ. ಸ್ಥಳೀಯ ಕರಕುಶಲ ಸಣ್ಣ ಕೈಗಾರಿಕೆಗೆ ಪ್ರೋತ್ಸಾಹಿಸಿ ವಸ್ತುಗಳನ್ನು ಕೊಳ್ಳುವುದು ಸಮಂಜಸ ; ಆದರೆ ಪರವಾನಗಿ ಪಡೆಯದೇ, ತಿಂಡಿ, ಆಟಿಕೆ ಇನ್ನಿತರ ವ್ಯಾಪಾರಕ್ಕೆಂದು ಅಂಗಡಿಗಳನ್ನು ಹಾಕಿಕೊಂಡು ಅಲ್ಲಲ್ಲೇ ಪ್ಲಾಸ್ಟಿಕ್ ಎಸೆದು ಮಾಲಿನ್ಯ ಮಾಡುವವರಿಗೆ ನಮ್ಮ ಹಿತಕ್ಕಾಗಿ ವ್ಯಾಪಾರ ನೀಡುವುದು ಕೂಡ ಅಷ್ಟೇ ಅಸಮಂಜಸ. ನಮ್ಮಲ್ಲಿ ಮಾಲಿನ್ಯ ಕಡಿಮೆಗೊಳಿಸುವ ಧ್ಯೇಯವಿದ್ದರೆ, ರೂಡಿಯಿದ್ದರೆ ಮಾತ್ರ, ಖಂಡಿತವಾಗಿಯೂ ಧೈರ್ಯದಿಂದ, ಹಕ್ಕಿನಿಂದಇತರರಲ್ಲೂ ನಾವು ಅದನ್ನು ಅಪೇಕ್ಷಿಸಬಹುದು. ಚಿಕ್ಕಪುಟ್ಟ ಪ್ರವಾಸವಾಗಿದ್ದರೆ, ಶುಚಿ ರುಚಿಯಾದ ಆಹಾರವನ್ನು ತಯಾರಿಸಿ ಡಬ್ಬಿಗಳಲ್ಲಿ ತುಂಬಿಕೊಂಡು ಹೋದರೆ, ಹಣ್ಣುಗಳನ್ನು ಪ್ಯಾಕ್ ಮಾಡಿಕೊಂಡು ಹೋದರೆ, ನಮ್ಮ ಟ್ರಿಪ್ ಮಾಲಿನ್ಯ ರಹಿತದ ಜೊತೆಗೆ ಆರೋಗ್ಯಕರವಾಗಿಯೂ ಇರುತ್ತದೆ.

೩. ಹೋಂಸ್ಟೇ ಮತ್ತು ಸಾರ್ವನಿಜನಿಕ ಸಾರಿಗೆ ವ್ಯವಸ್ಥೆ ಬಳಕೆ.

ಯಾವುದೇ ಪ್ರಸಿದ್ಧ ಪ್ರವಾಸೀ ತಾಣಗಳಿಗೆ ನಾವು ಭೇಟಿ ನೀಡಿದರೂ ವಸತಿಗಾಗಿ ಪ್ರಸಿದ್ಧವಾಗಿರುವ ಹೋಟೆಲ್ ಅನ್ನು ಹುಡುಕುವ ಪರಿಪಾಠವಿರುತ್ತದೆ. ಆದರೆ ಪ್ರವಾಸದ ಯೋಜನೆ ನಿಮ್ಮದೇ  ಹತೋಟಿಯಲ್ಲಿದ್ದರೆ ಒಮ್ಮೊಮ್ಮೆ ಹೋಂಸ್ಟೇ ಗಳನ್ನು ತಂಗಲು ಪ್ರಯತ್ನಿಸಿ. ಏಕೆಂದರೆ ಯಾವುದೇ ಸ್ಥಳದ ಕುರಿತಾಗಿ ಪ್ರವಾಸದ ಪಟ್ಟಿ, ಭೂಪಟದಲ್ಲಿ ಇರುವುದಕ್ಕಿಂತಲೂ, ಅಲ್ಲಿನ ಸ್ಥಳೀಯರಿಗೆ ಹೆಚ್ಚಿನ ಸ್ಥಳಗಳ ಮಾಹಿತಿ, ಆಗುಹೋಗುಗಳ ಅರಿವಿರುತ್ತದೆ. ಇದರ ಜೊತೆಗೆ ಹೋಂಸ್ಟೇ ಗಳೆಂದರೆ ಮನೆ ಅಥವಾ ಮನೆಯ ಒಂದು ಭಾಗವನ್ನು ಪ್ರವಾಸಿಗರಿಗೆ ಊಟ ಮತ್ತು ವಸತಿಗಾಗಿ ನೀಡಿ ಅದರಿಂದ ಆದಾಯ ಪಡೆಯುವ ಮಾರ್ಗ. ಹಾಗಾಗಿ ಹೋಂಸ್ಟೇ ನಡೆಸುವವರು ಪ್ರವಾಸಿಗರನನ್ನು ಆಕರ್ಷಿಸಲೆಂದೇ ಅಲ್ಲಿನ ಸಾಂಪ್ರದಾಯಿಕ ಅಡುಗೆ ಪದಾರ್ಥಗಳನ್ನು ತಯಾರಿಸುತ್ತಾರೆ. ಚಾರಣ, ಪ್ರಕೃತಿ ವೀಕ್ಷಣೆ, ಸಾಂಪ್ರದಾಯಿಕ ಆಟಗಳು ಇನ್ನಿತರ ಹಳ್ಳಿಯ ಘಮಲು ದೊರೆಯುವಂತಹ ಅನೇಕ ಚಟುವಟಿಕೆಗಳನ್ನು ಆಯೋಜಿಸಿರುತ್ತಾರೆ. ಅವರದ್ದೇ ವಾಹನಗಳ ವ್ಯವಸ್ಥೆ ಸಿಗುವುದರಿಂದ ನಮಗೆ ಬೇಕಾದ ಕಡೆಗೆ ನಾವು ಸ್ವಚ್ಛಂದವಾಗಿ ಓಡಾಡುವ ಸ್ವತಂತ್ರತೆ ಇರುತ್ತದೆ. ಹಾಗಾಗಿ ಹೋಟೆಲ್ ಗಳಿಗಿಂತಲೂ ಹೋಂಸ್ಟೇ ಗಳಲ್ಲಿ ಹೆಚ್ಚಿನ ಪ್ರವಾಸದ ಪರಿಪೂರ್ಣತೆಯನ್ನು ಆನಂದಿಸಲು ಸಾಧ್ಯವಾಗುತ್ತದೆ. ಸಾಮಾನ್ಯವಾಗಿ ಹೋಟೆಲ್ಗಳಿಗಿಂತ ಹೋಂಸ್ಟೇ ವೆಚ್ಚವು  ತುಸು ಕಡಿಮೆಯೇ ಇರುತ್ತದೆ ಜೊತೆಗೆ ಸ್ಥಳೀಯರಿಗೆ ಆದಾಯ ನೀಡಿದ ಸಂತೋಷ ನಮಗಿರುತ್ತದೆ.  

ಇದರ ಜೊತೆಗೆ, ಸಮಯದ ಅಭಾವ ಅಥವಾ ಇನ್ಯಾವುದೇ ಬದ್ಧತೆಯಿರದ ಪಕ್ಷದಲ್ಲಿ ಆದಷ್ಟು ಬಸ್ಸು, ಟಾಂಗಾ ಹೀಗೆ ಸ್ಥಳೀಯ ಸಾರ್ವಜನಿಕ ಸಾರಿಗೆ ಮಾಧ್ಯಮವನ್ನೇ ಬಳಸಿ ನೋಡಿ. ಹೆಚ್ಚೆಚ್ಚು ಸಾರ್ವಜನಿಕರೊಡನೆ ಪ್ರಯಾಣ ಬೆಳೆಸಿದಷ್ಟೂ ನಮಗೆ ಆ ಸ್ಥಳದ ಮತ್ತು ಜನಜೀವನದ ಕುರಿತಾಗಿ ಹೆಚ್ಚೆಚ್ಚು ನೋಡಲು, ತಿಳಿಯಲು ಅನುಕೂಲವಾಗುತ್ತದೆ. ಟ್ಯಾಕ್ಸಿ, ಆಟೋ ಬಳಸುವ ಕಡೆ ಬಸ್ ನ ವ್ಯವಸ್ಥೆಯಿದ್ದರೆ, ಅಥವಾ ಕೆಲವು ಹತ್ತಿರದ ಸ್ಥಳಗಳಿಗೆ ಕಾಲ್ನಡಿಗೆಯಲ್ಲೇ ಹೋದರೆ, ಹಣ ಉಳಿತ್ಯಾವಾಗುವುದರ ಜೊತೆಗೆ, ಹಾದಿಯುದ್ದಕ್ಕೂ ನಾವು ಪ್ರವಾಸಕ್ಕೆಂದು ತೆರಳಿರುವ ಜಾಗವನ್ನು ಇನ್ನೂ ಕೂಲಂಕುಷವಾಗಿತಿಳಿಯುವ ಆಸೆ ಪೂರೈಸುತ್ತದೆ.

ಪ್ರವಾಸ ಎಂಬುದು ಕೇವಲ ನಮ್ಮ ಕಥೆಯಲ್ಲ. ಪ್ರವಾಸದ ಸಮಯದ ಆಗುಹೋಗುಗಳು, ಹಾದಿಯುದ್ದಕ್ಕೂ ಸಿಗುವ ಜನರ ಕಥೆಗಳು, ಸನ್ನಿವೇಶಗಳು ಒಂದೊಂದು ಕಥೆಯನ್ನು ಅದರ ಜೊತೆಗೆ ಅನೇಕಾನೇಕ ಅನುಭವದ ಪಾಠಗಳನ್ನು ಕಲಿಸಿ ಹೋಗುತ್ತದೆ. ಪ್ರವಾಸದಿಂದ ಒಳ್ಳೊಳ್ಳೆಯ ನೆನಪುಗಳ ಬುತ್ತಿ ನಮ್ಮದಾಗುತ್ತದೆ. ಹಾಗಾಗಿ ಒಂದು ಉತ್ತಮ ಪ್ರವಾಸದ ನಿಲುವು ಮತ್ತು ಗೆಲುವು ಕೇವಲ ಪ್ರವಾಸೋದ್ಯಮ ಇಲಾಖೆ,  ಸರ್ಕಾರ ಅಥವಾ ಇನ್ಯಾವುದೋ ಸಂಘ ಸಮೂಹದವರ ಜವಾಬ್ಧಾರಿ ಮಾತ್ರವಲ್ಲ. ಪ್ರವಾಸಿಗರಾಗಿ ನಮ್ಮಿಂದಲೂ ಕೂಡ ಅಷ್ಟೇ ಪ್ರಮಾಣದ ಹೆಮ್ಮೆ, ಪ್ರೀತಿ, ಕಾಳಜಿಯ ಅವಶ್ಯಕ.  ಪ್ರವಾಸಿಗರ ಕರ್ತವ್ಯಕ್ಕೆ ಬದ್ಧರಾಗಿ ನಮ್ಮ ಪ್ರವಾಸವನ್ನು ಸುಖಿಸೋಣ. 

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ