ಶನಿವಾರ, ಡಿಸೆಂಬರ್ 8, 2018

ಪುರ ಲುಹುರ್ ಉಲುವಾಟು, ಬಾಲಿ

ಅದೊಂದು ದ್ವೀಪದ ತುತ್ತತುದಿ. ಅಲ್ಲಿದೆ ಒಂದು ಸಮುದ್ರ ಮಟ್ಟಕ್ಕಿಂತ ಸಾಕಷ್ಟು ಎತ್ತರದಲ್ಲಿರುವ  ಬ್ರಹತ್ ಕಡಿಬಂಡೆ. ಅದರ ಮೇಲೆ, ಮನಸ್ಸು ಪ್ರಫುಲ್ಲಗೊಳ್ಳುವಂತಹದೊಂದು ದೇವಾಲಯ. ದೇವಾಲಯದಾಚೆಗೆ ಕಣ್ಣು ಹಾಯಿಸಿದಷ್ಟು ದೂರವೂ, ಮುಗಿಯದ ಸಾಗರದ ತುಂಬು ನೋಟ. ಕೆಳಗಡೆ ನಿರಂತರವಾಗಿ ಬಂಡೆಗೆ ಬಂದಪ್ಪಳಿಸುವ ಶುಭ್ರ ಅಲೆಗಳ ಮೋಹಕ ಆಟ. ಕಿವಿಗೊಟ್ಟು ಆಲೈಸಲು, ತನ್ನತಾನದಲಿ ಶಬ್ದ ಮಾಡುವ ನೀಲ ಶಾಂತ ಅಲೆಗಳ ಹೊಯ್ದಾಟ.. ಅಲ್ಲೆಲ್ಲೋ ಆಗಾಧ ಸಾಗರದ ಮಧ್ಯದಲ್ಲಿ ಸಣ್ಣ ಬಿಳಿ ಹರಳಿನಂತೆ ಕಂಡು, ಕ್ರಮೇಣ ಪುಟ್ಟ ಚುಕ್ಕೆಯಂತೆ ಮಾಯವಾಗುವ ಹಡಗು. ಸೂರ್ಯ ತಂಪಾಗುವ ಸಮಯಕ್ಕೆ, ಆಕಾಶದ ತುಂಬೆಲ್ಲ ರಂಗಿನ ಕೆಂಬಣ್ಣ; ಅದನ್ನು ಪ್ರತಿಫಲಿಸುವ ಸಮುದ್ರವೋ ಬಂಗಾರದ ಬಣ್ಣ.. ಸಂಜೆಯ ತಣ್ಣನೆ ಬೀಸುವ ಗಾಳಿಗೆ ಮೈ ಒಡ್ಡಿ ನಿಂತರೆ ಸಾಕು, ನಮ್ಮ ಸುತ್ತಮುತ್ತಲು ನಮ್ಮಂತೆಯೇ ಸಾವಿರಾರು ವೀಕ್ಷಕರಿದ್ದರೂ, ಆ ಸ್ಥಳದ ಸೌಂದರ್ಯಕ್ಕೆ ಮನಸೋತು ನಮ್ಮ ಉಪಸ್ಥಿತಿಯೇ ಮರೆಯುವಂತಹ ಅನುಭಾವ.. ದಿಗಂತದಂಚಿನಲ್ಲಿ ಅಸ್ತಮಿಸುವ ದಿನಕರನನ್ನು ಮನದಣಿಯೆ ನೋಡುವಾಗ, ಮಹಾಸಾಗರದ ಅಲೆಗಳ ನಿನಾದವನ್ನು ಆಲೈಸುವಾಗ, ಪ್ರಕೃತಿಯೇ ದೈವವೆಂದು ಆರಾಧಿಸುವ ದೇಗುಲದ ಶಕ್ತಿ ತರಂಗಗಳನ್ನು ಅನುಭವಿಸುವಾಗ ಉಂಟಾಗುವ ವಿಸ್ಮಿತ ಮೌನ ಮತ್ತು ಈ ಎಲ್ಲ ಚೆಲುವನ್ನು ಹೀರಿಕೊಂಡು ಮನಸ್ಸಿಗೆ ಸಿಗುವ ಧನ್ಯತಾ ಭಾವಕ್ಕೆ ಬೆಲೆ ಕಟ್ಟಲಾಗದು. ಹೀಗೊಂದು ಮನಸ್ಸು ತುಂಬಿ ಬರುವಂತ ರಮಣೀಯ ಅನುಭವವಾಗುವ ಸ್ಥಳ ಬಾಲಿಯ 'ಪುರ ಲುಹುರ್ ಉಲುವಾಟು'.



ದೇವರುಗಳ ದ್ವೀಪ, ಸಹಸ್ರ ದೇವಾಲಯಗಳ ನಾಡು ಎಂದೇ ಪ್ರಸಿದ್ಧವಾಗಿರುವ ಇಂಡೋನೇಷ್ಯಾ ದ ಬಾಲಿ ದ್ವೀಪ, ಕೇವಲ ಒಂದು ಸಾವಿರ ದೇವಾಲಯಗಳ ಸಂಖ್ಯೆಗೆ ಸೀಮಿತವಾದ ನಾಡಲ್ಲ. ಇಲ್ಲಿ ಸುಮಾರು ೨೦,೦೦೦ ಕ್ಕೂ ಮಿಗಿಲಾಗಿ ಸಣ್ಣ-ದೊಡ್ಡ ದೇವಾಲಯಗಳಿರಬಹುದು ಎಂದು ಅಂದಾಜಿಸಲಾಗಿದೆ. ಉಸಿರಾಡುವ ಗಾಳಿ, ಮೆಟ್ಟುವ ಮಣ್ಣು, ಕುಡಿಯುವ ನೀರು, ಬಳಸುವ ಅಗ್ನಿ ಹೀಗೆ ಪ್ರಕೃತಿಯ ಪ್ರತಿಯೊಂದು ಅಂಶಗಳೂ ಕೂಡ ದೇವರ ಶಕ್ತಿಯ ಸ್ವರೂಪಗಳು, ಪೂರ್ವಜರ ಆತ್ಮ, ದೇವರುಗಳ ಅಸ್ತಿತ್ವ ಎಲ್ಲವೂ ಅಡಕವಾಗಿರುವುದು ಪರಮ ದೈವ ಪ್ರಕೃತಿಯಲ್ಲಿಯೇ ಎಂಬ ಬಲವಾದ ನಂಬಿಕೆ ಅನಾದಿ ಕಾಲದಿಂದಲೂ ಇಲ್ಲಿನ ಜನರಲ್ಲಿದೆ. ಪ್ರಪಂಚದಲ್ಲಿ ಒಳ್ಳೇ ಮತ್ತು ಕೆಟ್ಟ  ಶಕ್ತಿ ಎಂಬ ಎರಡು ಬಗೆಯ ಶಕ್ತಿಯು ಇರುತ್ತದೆ; ಮತ್ತದರ ಸಮತೋಲನ ಇದ್ದಾಗಲೇ ಜಗತ್ತಿನ ಶಾಂತಿ ಸಾಧ್ಯ, ಎಂಬ ತತ್ವವನ್ನು ಪಾಲಿಸುತ್ತ ಬರುತ್ತಿರುವ ಬಾಲಿನರು ಅತ್ಯಂತ ಶ್ರದ್ದೆಯಿಂದ ಪೂಜಿಸುವ ಸ್ಥಳ ಮತ್ತು ದೇವಾಲಯಗಳಲ್ಲಿ,  ದೇವತೆಗಳ ಹಾಗೂ ರಾಕ್ಷಸರ ಶಿಲಾಮೂರ್ತಿಗಳನ್ನು ಕಾಣಬಹುದಾಗಿದೆ. ಇಂತಹ ದೈವಿಕ ಪಾವಿತ್ರ್ಯತೆಯನ್ನೊಳಗೊಂಡ, ರಕ್ಷಕ ಸ್ಥಳಗಳು ಎಂದೇ ಹೆಸರಾದ 'sad kahyangan  temples' (ಆರು ಸ್ವರ್ಗಸ್ಥಳಗಳು)  ಪ್ರಮುಖ ಹಿಂದೂ ಪುರಾತನ ಆರು ಶಕ್ತಿ ದೇವಾಲಯಗಳ ಪೈಕಿ, ಸಮುದ್ರ ದೇವತೆಗಳನ್ನು ಪೂಜೆಗೈಯುವ 'ಪುರ ಉಲುವಾಟು' ಕೂಡ ಒಂದು .

ಉಲುವಾಟು  - ಸ್ಥಳ ಇತಿಹಾಸ

 'ಪುರ' ಎಂದರೆ ದೇಗುಲ, 'ಲುಹುರ್' ಎಂದರೆ ದೈವಿಕವಾದ, 'ಉಲು' ಎಂದರೆ ಭೂಮಿಯ ತುದಿ ಮತ್ತು 'ವಾಟು' ಎಂದರೆ ಬಂಡೆ ಎಂಬ ಅರ್ಥವಿರುವ ಈ ದೇವಾಲಯವು ಹಿಂದೂ ಮಹಾಸಾಗರಕ್ಕೆ ಹೊಂದಿಕೊಂಡಂತೆ ಸಮುದ್ರ ಮಟ್ಟಕ್ಕಿಂತಲೂ ೭೦ ಮೀಟರ್ ಎತ್ತರದ ಸುಣ್ಣದ ಕಲ್ಲಿನಿಂದ ನೈಸರ್ಗಿಕವಾಗಿ ಮಾರ್ಪಟ್ಟ ಕಡಿದಾದ ಬಂಡೆಯ ಮೇಲೆ ನಿರ್ಮಾಣಗೊಂಡಿದೆ.

ಪುರಾತತ್ವ ಶಾಸ್ತ್ರಗಳ ಪ್ರಕಾರ ೧೧ ನೇ ಶತಮಾನದಲ್ಲಿ 'ಎಂಪು ಕುಟುರಾನ್' ಎಂಬ ಜಾವಾದ ಸನ್ಯಾಸಿಯೊಬ್ಬರು ತಮ್ಮ ಹಿಂದುತ್ವ ಪ್ರಚಾರ ಉದ್ದೇಶದಿಂದ ಕಟ್ಟಿಸಿದರು ಎಂಬ ಪ್ರಸ್ತಾಪವಿದೆ. ಜಾವಾದ ಇನ್ನೊಬ್ಬ ಸಂತ 'ದಾಂಗ್ ಹ್ಯಾಂಗ್ ನಿರರ್ಥ' ಈ ಸ್ಥಳದ ಸೌಂದರ್ಯಕ್ಕೆ, ಮಹಿಮೆಗೆ ಮನಸೋತು, ಧ್ಯಾನ ಭೋದನೆಗಳನ್ನು ಮಾಡುತ್ತಾ, ಸ್ವಲ್ಪ ಕಾಲದ ನಂತರ ದೇವಾಲಯವೊಂದನ್ನು ನಿರ್ಮಾಣ ಮಾಡಿಸಿದರು ಎನ್ನುತ್ತಾರೆ ಇನ್ನು ಕೆಲವು ಸ್ಥಳೀಯರು. ಸಂತ ನಿರರ್ಥ ಒಂದು ದಿನ ಪ್ರಾರ್ಥನೆಯ ಸಮಯದಲ್ಲಿಯೇ, ಎಲ್ಲರ ಸಮ್ಮುಖದಲ್ಲಿ ಮೋಕ್ಷವನ್ನು ಹೊಂದಿದರು, ಮತ್ತವರ ದೇಹ ನೋಡನೋಡುತ್ತಿದಂತೆಯೇ ಗಾಳಿಯಲ್ಲಿ ಮೇಲೇರಿ, ಮೋಡಗಳ ಮಧ್ಯೆ ಮಿಂಚಿನ ಬೆಳಕಿನಲ್ಲಿ ಎಂಬ ಮರೆಯಾಯಿತು, ಸಂತ ನಿರರ್ಥ ರ ಅನುಯಾಯಿಗಳೇ ಮಂಗಗಳ ರೂಪ ತಾಳಿ, ಸಮುದ್ರದ ದುಷ್ಟ ಶಕ್ತಿ ಗಳಿಂದ ರಕ್ಷಣೆ ನೀಡುತ್ತವೆ ಎಂಬ ಕಥೆ ಅಲ್ಲಿನ ಪ್ರವಾಸೀ ಗೈಡ್ ನಿಂದ ಒಬ್ಬರಿಂದ ಸಿಕ್ಕ ವಿಷಯ ಸಂಗ್ರಹ. ಹಾಗಾಗಿಯೇ ಈ ಸ್ಥಳವನ್ನು ಕೂಡ 'gates of heaven' ಎಂದುಕರೆಯುತ್ತಾರೆ.

ಉಲುವಾಟು ದೇಗುಲ - ಇಲ್ಲಿ ಏನೇನಿದೆ?

ಬೆಳಿಗ್ಗೆ ೯ ರಿಂದ ಸಂಜೆ ೬, ಈ ದೇವಾಲಯಕ್ಕೆ ಭೇಟಿ ನೀಡಬಹುದಾದ ಸಮಯ. ದೇವಾಲಯದ ಆವರಣ ತಲುಪಲು ಸಣ್ಣದೊಂದು ಅರಣ್ಯದ ಮೂಲಕವಾಗಿ ಹಾದು ಹೋಗಬೇಕು. ದೇವರಿಗೆ ಕಾಲನ್ನು ತೋರಿಸುವುದು ಅವಮಾನ ಎಂದು ಪರಿಗಣಿಸುವ ಇಲ್ಲಿನ ನಂಬಿಕೆಗಾಗಿ, ದೇವಾಲಯದ ಪ್ರಾವಿತ್ರತೆಯನ್ನು ಕಾಪಾಡಲು, ಪ್ರತಿಯೊಬ್ಬರೂ ಅಲ್ಲಿ ನೀಡುವ 'ಸಾರೊಂಗ್' ಮತ್ತು 'ಸಾಷ್' ಎಂಬ ಮಡಿ ವಸ್ತ್ರವನ್ನು ದೇಗುಲದ ಹೊರಾಂಗಣದಲ್ಲಿಯೇ ತೊಟ್ಟುಕೊಂಡು ಒಳ ನಡೆಯಬೇಕು. ನೂರಾರು ಮಂಗಗಳು ಸ್ವಚ್ಛಂದವಾಗಿ ಓಡಾಡಿಕೊಂಡಿರುವ ಈ ಸ್ಥಳವನ್ನು , ಮಂಗಗಳು ಅತಿಮಾನುಷ ದುಷ್ಟ ಶಕ್ತಿಯಿಂದ ಕಾಪಾಡುತ್ತದೆ ಎಂಬ ಪ್ರತೀತಿ ಇದೆ. ಹಾಗಾಗಿ ಮಂಗಗಳಿಗಿಲ್ಲಿ ವಿಶೇಷ ಗೌರವ. ದೇವಾಲಯದ ಆವರಣದ ತಲುಪಿತ್ತಿದ್ದಂತೆಯೇ ಬಲಕ್ಕೆ ಕಾಣಸಿಗುವುದು, ರಾಮಾಯಣದ ಕಥೆಗಳಲ್ಲಿ ಬರುವ ಕುಂಭಕರ್ಣನ ದೊಡ್ಡದಾದ ಶಿಲಾಮೂರ್ತಿ. ಹನುಮಂತ ಸೇರಿದಂತೆ ಸಹಸ್ರ ಸಂಖ್ಯೆಯಲ್ಲಿ ವಾನರರು ಹೇಗೆ ಕುಂಭಕರ್ಣ ಎಂಬ ರಕ್ಕಸನನ್ನು ಕಚ್ಚಿ, ಈಟಿಯಿಂದ ಇರಿಯುತ್ತ, ಕಲ್ಲಿನಲ್ಲಿ ಘಾಸಿಗೊಳಿಸುತ್ತ ಯುದ್ಧದ ಸಮಯದಲ್ಲಿ ತಡೆಯಲು, ಸಂಹರಿಸಲು ಪ್ರಯತ್ನಿಸಿದರು ಎಂಬುದನ್ನು ಅತ್ಯಂತ ಸಮರ್ಪಕವಾಗಿ ಶಿಲಾನ್ಯಾಸದ ರೂಪದಲ್ಲಿ ತೋರಿಸಲಾಗಿದೆ.



ದೇಗುಲದ ಇಕ್ಕೆಲಕ್ಕೂ ಆ ವಿಶಾಲ ಬಂಡೆಕಲ್ಲಿಗೆ ಹೊಂದಿಕೊಂಡಂತೆ ತಡೆಗೋಡೆಯನ್ನು ನಿರ್ಮಿಸಿ ಓಡಾಡಲು ಹಾದಿಯನ್ನು, ಅಲ್ಲಲ್ಲಿ ವಿಶ್ರಮಿಸಲು ಕಟ್ಟೆ, ಸೂರ್ಯಾಸ್ತದ ವಿಹಂಗಮ ನೋಟಕ್ಕಾಗಿ ಪನೋರಮಿಕ್ ವೀವ್ ಪಾಯಿಂಟ್ ಗಳನ್ನು ಕೂಡನಿರ್ಮಿಸಲಾಗಿದೆ. ಒಂದು ತುದಿಯಿಂದ ಇನ್ನೊಂದು ತುದಿಯವರೆಗೆ ವೀಕ್ಷಿಸುತ್ತ ನಡೆದರೆ ಸುಮಾರು ಒಂದು ಗಂಟೆಯೇ ಬೇಕಾಗಬಹುದು. ಮೆಟ್ಟಿಲುಗಳ ಹತ್ತಿ ಮೇಲೇರಿದರೆ ಕಾಣುವ ಮುಖ್ಯ ದೇಗುಲದ ಎರಡೂ ಬದಿಗಳಿಗೂ ಆನೆಯ ಮುಖವಿರುವ ಮಾನವ ದೇಹವಿರುವ ಶಿಲಾಮೂರ್ತಿಗಳಿವೆ. ದೇಗುಲದ ಎರಡು ದ್ವಾರಗಳ ಮೇಲೂ ಸುಂದರವಾದ ಹೂವು ಮತ್ತು ಎಳೆಗಳ ಕಲ್ಲಿನ ಕೆತ್ತನೆಯಿದೆ. ಹನುಮಂತನ ಶಿಲಾಮೂರ್ತಿಯನ್ನು ಕೂಡ ಇಲ್ಲಿ ಕಾಣಬಹುದು. ಸಾಮಾನ್ಯವಾಗಿ ಕಾಣಸಿಗದ ರೆಕ್ಕೆಗಳ ಮಾದರಿಯಲ್ಲಿ ಚಾಚಿಕೊಂಡಿರುವ ದೇವಾಲಯದ ಗೇಟುಗಳು ನೋಡಲು ವಿಶಿಷ್ಟವೆನಿಸುತ್ತದೆ. ದೇಗುಲದ ಆವರಣದಲ್ಲಿ ಎತ್ತರಕ್ಕೆ ಚಾಚಿಕೊಂಡಿರುವ ನೈಸರ್ಗಿಕ ವಸ್ತುಗಳಿಂದ ನಿರ್ಮಿತ, ಬಿಳಿ-ಕೆಂಪು ಬಣ್ಣದ ಬಾವುಟಗಳು, ಅಲ್ಲಿನ ಸಂಪ್ರದಾಯಗಳ ಮೆರಗನ್ನು ಹೆಚ್ಚಿಸುತ್ತವೆ. ಮುಖ್ಯ ದೇಗುಲದ ಒಳಾಂಗಣದಲ್ಲಿ ಮಹಾಸಾಗರಕ್ಕೆ ಅಭಿಮುಖವಾಗಿ 'ದಾಂಗ್ ಹ್ಯಾಂಗ್ ನಿರರ್ಥ' ರ ಶಿಲಾಮೂರ್ತಿಯಿದೆ. ವರ್ಷಕ್ಕೆ ಎರಡು ಬಾರಿ ದೇವಾಲಯದ ಮಹೋತ್ಸವಗಳು ವಿಜೃಂಭಣೆಯಿಂದ ನಡೆಯುತ್ತವೆ. ಆಗ್ಗಾಗ್ಗೆ ವಿಶೇಷ ಪೂಜೆಗಳೂ ಕೂಡ ನಡೆಯುವುದರಿಂದ ಅಂತಹ ಸಮಯದಲ್ಲಿ ಈ ದೇವಾಲಯಕ್ಕೆ ಪ್ರವೇಶವಿರುವುದಿಲ್ಲ.






ದೇಗುಲದ ಹೊರಗಡೆ  ಬಣ್ಣಬಣ್ಣದ ಬೋಗನವಿಲ್ಲ ಮತ್ತು ವೈವಿಧ್ಯಮಯ ದೇವಕಣಗಿಲು ಹೂವಿನ ಗಿಡಗಳನ್ನು ಬೆಳೆಸಿರುವುದರಿಂದ ಈ  ಸಂಪೂರ್ಣ ಸ್ಥಳವು ಅತ್ಯಂತ ಆಕರ್ಷಣೀಯವೆನಿಸುತ್ತದೆ. ಆಗಸ, ಭೂಮಿ, ಸಾಗರ ಒಂದೆಡೆ ಅನಾವರಣ ಗೊಳ್ಳುವ ಈ ಸ್ಥಳದ ಸೌಂದರ್ಯವನ್ನು ಆಹ್ಲಾದಿಸುವುದೇ ಒಂದು ಸೊಗಸು.  ದ್ವೀಪದ ಕೊನೆಯಾದ್ದರಿಂದ ಸೂರ್ಯಾಸ್ತವು ಅತ್ಯಂತ ಸ್ಪಷ್ಟ ಮತ್ತು ವಿಶಾಲ ಕೋನದಲ್ಲಿ ನೋಡಲು ಸಿಗುತ್ತದೆ.  ಛಾಯಾಗ್ರಹಣ ಆಸಕ್ತರಿಗಂತೂ ಹೊತ್ತು ಸರಿದಂತೆಯೂ ಕ್ಷಣ ಕ್ಷಣಕ್ಕೂ ಬದಲಾಯಿಸುವ ಆಗಸದ ಬಣ್ಣ, ನೊರೆಹಾಲ ಅಲೆಗಳು, ನೀಲಿ ಸಮುದ್ರ ಹೀಗೆ ಸೀನರಿ ಚಿತ್ರ ಹಿಡಿಯುವುದೇ ಒಂದು ಹಬ್ಬ.ನಿರಂತರ ಅಲೆಗಳ ಅಪ್ಪಳಿಸುವಿಕೆಯಿಂದ ಕ್ಲಿಫ್ ಎರೋಷನ್ (ಬಂಡೆಯ ಸವಕಳಿ) ಆಗುತ್ತಿದ್ದರೂ, ಅತ್ಯಂತ ಮಂದ ಗತಿಯಲ್ಲಿ ಇರುವುದರಿಂದ, ಈ ಗಡಸು ಬಂಡೆಯ ಧ್ರಡತೆ ನಿಸರ್ಗದ ವಿಸ್ಮಯವನ್ನು ಎತ್ತಿ ಹಿಡಿಯುತ್ತದೆ.

ಕೆಚಕ್ ನೃತ್ಯ

ಇಲ್ಲಿನ ಮತ್ತೊಂದು ಮುಖ್ಯ ಆಕರ್ಷಣೆಯೆಂದರೆ, 'ಕೆಚಕ್' ವೆಂಬ ಸಾಂಪ್ರದಾಯಿಕ ಜಾನಪದ ಬಾಲಿನರ ನೃತ್ಯ ಪ್ರದರ್ಶನ. ಪ್ರವಾಸೋದ್ಯಮದ ಉದ್ದೇಶದಿಂದ ಸಂಜೆ ೬ ರಿಂದ ೭ ಗಂಟೆಯವರೆಗೆ ಉಲುವಾಟು ದೇಗುಲದ ಓಪನ್ ಸ್ಟೇಜ್ ಒಂದರಲ್ಲಿ ನಡೆಸಲಾಗುತ್ತದೆ. ಅತ್ಯಂತ ವಿಶಿಷ್ಟವಾದ ಈ ಪ್ರದರ್ಶನ ಕ್ಕೆ 'ಮಂಕಿ ಚಾಂಟ್ ಡಾನ್ಸ್' ಎಂದೂ ಕೂಡ ಕರೆಯುತ್ತಾರೆ. ಸೂರ್ಯಾಸ್ತದ ನಂತರದ ಮುಸುಕು ಮಬ್ಬಿನಲಿ ಈ ನೃತ್ಯ ಇನ್ನಷ್ಟು ಸೊಗಸಾಗಿ ರಂಜಿಸುತ್ತದೆ. ೭೫ ಪುರುಷ ಪ್ರಾತ್ರಧಾರಿಗಳು ವಿಶೇಷ ರೀತಿಯ ವಸ್ತ್ರವನ್ನು ತೊಟ್ಟುಕೊಂಡು, ರಾಮನ ವನವಾಸ, ಸೀತೆಯ ಅಪಹರಣ, ಹನುಮಂತನೊಡಗೂಡಿ ವಾನರರ ಸಹಕಾರ,ರಾವಣನ ಸಂಹಾರ ಮತ್ತು ಕೊನೆಯಲ್ಲಿ ರಾಮ ಸೀತೆಯರ ಒಂದುಗೂಡುವಿಕೆಯ ವರೆಗಿನ ರಾಮಾಯಣದ ಹಲವು ಕಥಾಹಂದರವನ್ನು ಅತ್ಯಂತ ಮನೋಜ್ಞವಾಗಿ ತಮ್ಮ ನೃತ್ಯದ ಮೂಲಕ ತೋರ್ಪಡಿಸುತ್ತಾರೆ. ಹಿನ್ನಲೆ ಸಂಗೀತ ಇಂಪಿನ ಜೊತೆಯಲ್ಲಿ 'ಕೆಚಕ್' ಎಂಬ ವಿಭಿನ್ನ ರೀತಿಯ ಧ್ವನಿ ಲಯಗಳನ್ನು ಹೊರಡಿಸಿ, ಮಾಡುವ ನೃತ್ಯ ವಿಶೇಷವೆನಿಸುತ್ತದೆ.


ವಿಶೇಷ ಮಾಹಿತಿ

ಉಲುವಾಟು ಬಾಲಿ ದ್ವೀಪದ ಕುಟ ಜಿಲ್ಲೆಯ ಪೆಕಾಟು ಗ್ರಾಮದಲ್ಲಿರುವ ಈ ದೇವಾಲಯ ಕೂಟದಿಂದ ದಕ್ಷಿಣಕ್ಕೆ ಸುಮಾರು ೨೫ ಕಿ.ಮೀ ದೂರದಲ್ಲಿದೆ. ಸಾರ್ವಜನಿಕ ವಾಹನಗಳು ಲಭ್ಯವಿಲ್ಲದ ಕಾರಣ, ಪ್ರವಾಸಿಗರು ಸತಃ ವಾಹನ ವ್ಯವಸ್ಥೆ ಮಾಡಿಕೊಂಡು ಹೋಗಬೇಕು. ಟ್ಯಾಕ್ಸಿಗಳು, ಒಂದು ದಿನದ ಮಟ್ಟಿಗೆ ಬಾಡಿಗೆ ಸ್ಕೂಟರ್ಗಳು ಕುಟ ಸಿಟಿ ಇಂದ ಪಡೆಯಬಹುದಾಗಿದೆ.

ಬೆಳಿಗ್ಗೆ ೯ ರಿಂದ ಸಂಜೆ ೬ ವರೆಗೆ ಭೇಟಿಯ ಸಮಯವಾದರೂ, ಇಲ್ಲಿನ ಸೂರ್ಯಾಸ್ತ ಅತ್ಯಂತ ರಮಣೀಯವಾಗಿರುವುದರಿಂದ, ಮಧ್ಯಾಹ್ನದ ನಂತರದ ಸಮಯ ಭೇಟಿಗೆ ಸೂಕ್ತ.

ವಾನರ ರಕ್ಷಕರೆಂಬ ಪ್ರಾಧಾನ್ಯತೆಯಿರುವ ಈ ಸ್ಥಳದಲ್ಲಿ ಮಂಗಗಳು ಸಾಕಷ್ಟಿರುವುದರಿಂದ ಕೆಲವೊಮ್ಮೆ ಅವುಗಳ ಕಾಟವೂ ಅಷ್ಟೇ ಸಮಸ್ಯೆಯಾಗುತ್ತದೆ. ಕನ್ನಡಕ, ಕ್ಯಾಮೆರಾ, ಮೊಬೈಲ್, ಹ್ಯಾಟ್, ತಿಂಡಿ ಪಟ್ಟಣಗಳು ಹೀಗೆ ಅನೇಕ ವಸ್ತುಗಳನ್ನು ಎರಗಿ ಎಳೆದುಕೊಳ್ಳುವಲ್ಲಿ ಇಲ್ಲಿನ ಮಂಗಗಳು ಪ್ರಸಿದ್ಧವಾದುದರಿಂದ, ಸ್ವಲ್ಪ ಮುನ್ನೆಚ್ಚರಿಕೆ ವಹಿಸಿಕೊಳ್ಳಬೇಕಾದ ಅವಶ್ಯಕತೆಯಿದೆ.


(ಈ ವಾರದ ೮/೧೨/೨೦೧೮ ರ ವಿಶ್ವವಾಣಿಯ ಯಾತ್ರಾ ಪುರವಣಿಯಲ್ಲಿ ಪ್ರಕಟಿತ)








ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ