ಸೋಮವಾರ, ಮೇ 27, 2019

ಲೇಡೀಸ್ ಟ್ರಿಪ್ - ಅನುಭವ

ಅದೊಂದು ದಿನ ಫೋನಿನಲ್ಲಿ ಮಾತನಾಡುತ್ತ, "ಸುಮಾ ಇನ್ನೊಂದೆರಡು ದಿನಕ್ಕೆ ಸಾಗರಕ್ಕೆ ಬತ್ತ ಅಲ್ದಾ..ರಾಣಿ ಮತ್ತೆ ಹುಡ್ರು ಹೆಂಗಂದ್ರೂ ಇದ್ದ.. ನನ್ನ ಕಸಿನ್ ಪಲ್ಲವಿ ಕೂಡ ಇದ್ದ, ಎಲ್ಲಾ ಸೇರಿ ಹುಡ್ರು ಕಟ್ಕ್ಯಂಡು ನಾವ್ ನಾವೇ ಒಂದು ಲೇಡೀಸ್ ಟ್ರಿಪ್ ಹೋಗಿ ಬರನ.." ಎಂದು  ಕೇಳಿದಳು ಚಿನ್ನಕ್ಕ. "ಖಂಡಿತ ಹೋಪನ, ಅಡ್ಡಿಲ್ಲೆ.." ಎಂದೆಲ್ಲ ಖುಷಿಯಿಂದ ಹೂಂಗುಟ್ಟಿದೆ  ನಾನು. ಆದ್ರೆ ಮನಸ್ಸಿನಲ್ಲಿ ಅನುಮಾನವಿದ್ದೇ ಇತ್ತು. ಸುಮಾರಾಗಿ ಎಲ್ಲಾ ಲೇಡೀಸು ಗೂ ಆಗುವಂತೆ - ಇನ್ನೇನು ಹೋಗೆ ಬಿಟ್ಟೆವು ಅನ್ನೋ ಲೆವೆಲ್ ವರೆಗೆ ಆಸೆಯಿಂದ ಎಲ್ರೂ ಟ್ರಿಪ್ ಪ್ಲಾನ್ ಡಿಸ್ಕಷನ್  ಮಾಡೋದು, ಆಮೇಲೆ ಯಾವ್ಡ್ಯಾವ್ದೋ ಕಾರಣಕ್ಕೆ ಒಬ್ಬೊಬ್ಬರೇ ಕಳಚಿಕೊಂಡು ಟ್ರಿಪ್ ಕ್ಯಾನ್ಸಲ್ ಆಗುವುದು, ಪುಂಡತನದಲ್ಲಿ ಪ್ರಚಂಡತೆ ಪಡೆದುಕೊಂಡಿರುವ ನಮ್ಮ ಮಕ್ಕಳ ಸೈನ್ಯ ಕಟ್ಟಿಕೊಂಡು ನೀರಿಗೆ ಹೋಗುವ ಸಾಹಸ ಬೇಡ ಎಂದು ಮನೇಲಿ ಖಡಾಖಂಡಿತವಾಗಿ ನಿರಾಕರಿಸುವುದು, ನಾವೇ ಕಾರು ಲಾಂಗ್ ಡ್ರೈವ್ ಮಾಡಿಕೊಂಡು ಹೋಗುವುದು ಕಷ್ಟ ಸಾಧ್ಯ ಎಂಬಿತ್ಯಾದಿ ನಕಾರದ ಸಾಧ್ಯತೆಗಳನ್ನು ಆಲೋಚಿಸಿ ಏನೇನೂ ತಯಾರಿ ಮಾಡಿಕೊಳ್ಳದೇ ಕುಳಿತಿದ್ದು ಮೊದಲ ಸತ್ಯವಾಗಿತ್ತು. ಆಶ್ಚರ್ಯವೆಂಬಂತೆ ಎಲ್ಲರ ಮನೆಯವರಿಂದ ಗ್ರೀನ್ ಸಿಗ್ನಲ್ ಸಿಕ್ಕಿತು. ಆದರೆ ದುರದೃಷ್ಟವಶಾತ್ ಭಾಗ್ಯಕ್ಕ, ಪಲ್ಲವಿ ಯವರೆಲ್ಲ ತಮಗೆ 'ಬರಲಾಗ್ತಲ್ಲೆ' ಎಂದು ತಿಳಿಸಿದ ಮೇಲಂತೂ ನಮ್ಮ ದೊಡ್ಡ ಗ್ಯಾಂಗ್ ಕರಗಿ ಸಣ್ಣದಾಗುತ್ತ ಬಂದು ಕಡೆಗೆ ನಾನು, ಅಕ್ಕ, ಚಿನ್ನಕ್ಕ ಮತ್ತು ನಮ್ಮ ಪಿಲ್ಟುಗಳು ಇಷ್ಟೇ ಜನ ಉಳಿದುಕೊಂಡೆವು..ನಾವು ಮೂರೇ ಜನ, ಜೊತೆಗೆ ಪುಟ್ಟ ಪುಟ್ಟ ಪಟಿಂಗ ಮಕ್ಕಳು..! ಏನಾದರಾಗಲಿ ನಿರ್ಧರಿಸಿಯಾಗಿದ್ದ ಮನಸ್ಸು ಮತ್ತು ಟ್ರಿಪ್ ಗೆ ಸಿಕ್ಕಿದ್ದ ಎಲ್ಲರ ಪರ್ಮಿಷನ್ಗೋಸ್ಕರನಾದರೂ, ಕಾರವಾರ ತೀರ ಮುಟ್ಟಿಯೇ ಬರುವುದು ಎಂದು ತೀರ್ಮಾನಿಸಿಕೊಂಡೆವು.

ಟ್ರಿಪ್ ಹೋಗುವುದೇನೋ ಖಾತ್ರಿಯಾಗಿತ್ತು, ಅದಕ್ಕೆ ನಮ್ಮಗಳ ತಯಾರಿ ಮಾತ್ರ ಅಷ್ಟೇ ವಿಲಕ್ಷಣವಾಗಿತ್ತು :P ಕೊನೆ ಕ್ಷಣಕ್ಕೆ ಸಿಕ್ಕ ವಸತಿ ಅನುಕೂಲದ ಮಾಹಿತಿ ಮೇರೆಗೆ, ಹಿಂದಿನ ದಿನ ಸಂಜೆವರೆಗೂ ನಿಕ್ಕಿಯಿದ್ದ, 'ಎರಡು ದಿನಗಳ ಮಟ್ಟಿಗೆ ಕಾರವಾರ ಹೋಗುವುದು' ಎಂಬ ಟ್ರಿಪ್ಪಿನ ಸ್ಥಳದ ಹಠಾತ್ ಬದಲಾವಣೆ. "ನಾಳೆ ಹೋಗ್ತಿರೋದು ಕಾರವಾರ ಅಲ್ಲ ಕುಮಟಾ ಕ್ಕೆ.. " ಎಂಬ 'updates'  ಕೇಳಿ, ಯಾವುದಕ್ಕೂ ನಾಳೆ ಎಲ್ಲಿಗೆ ಹೋಗಿ ಲ್ಯಾನ್ಡ್ ಆದ್ರಿ ಎಂಬುದನ್ನು ತಿಳಿಸಿಬಿಡಿ ಎಂದು ಮನೆಯವರು ಫೋನಿನಲ್ಲಿ ವ್ಯಂಗ್ಯ ಮಾಡಿದ್ದೂ ಆಯಿತು. ಇನ್ನು ಪ್ಯಾಕಿಂಗ್ ದೆಂತೂ ವಿಷ್ಯ ಕೇಳುವುದೇ ಬೇಡ.. ನಾವೆಲ್ಲಾ ಮರುದಿವಸ ಹೊರಡುವವರು ಹೌದೇ ಎಂದು ಅಮ್ಮನಿಗೆ ಅನುಮಾನ ಬರುವಷ್ಟು, ಹಿಂದಿನ ದಿನ ಸಂಜೆಯವರೆಗೂ ಕಾಲಿಗೆ ಚಕ್ರ ಕೊಟ್ಟು ಅಲ್ಲಿ ಇಲ್ಲಿ ಆಪ್ತರ ಮನೆ, ನೆಂಟರ ಮನೆ ವಿಸಿಟ್ ಹೀಗೆ ಸಿಕ್ಕಿದ್ದ ರಜೆಯನ್ನು ಶ್ರದ್ದೆಯಿಂದ ಮುಗಿಸುವುದರಲ್ಲೇ ಮಗ್ನರಾಗಿದ್ದೆವು.. ಅಂತೂ ಇಂತೂ ಸಂಜೆ ಮನೆಗೆ  ಮರಳಿದವರು ಪಟಪಟನೆ ಕೈಗೆ ಸಿಕ್ಕ ನಮ್ಮ ಮತ್ತು ಮಕ್ಕಳ ಬಟ್ಟೆ ಬರೆ ಬ್ಯಾಗಿಗೆ ತುಂಬಿಕೊಂಡಿದ್ದಾಯಿತು. ಬೆಳಿಗ್ಗೆ ಏಳುವಷ್ಟರಲ್ಲಿ, ಪ್ರಯಾಣಕ್ಕೆ ಹಣ್ಣು-ನೀರಿನ ವ್ಯವಸ್ಥೆ ಎಲ್ಲ ಅಪ್ಪಾಜಿ ಮಾಡಿಟ್ಟಾಗಿತ್ತು. ಅವತ್ತು ತಿಂಡಿ ಅಮ್ಮನ ಕೈರುಚಿಯ ಬಿಸಿ ಬಿಸಿ ಸಿಹಿ-ಇಡ್ಲಿ. ದೊಡ್ಡ ಚಮಚದಲ್ಲಿ ತುಪ್ಪ ಬಡಿಸಿ ಇಡ್ಲಿ ಕೊಟ್ಟುಬಿಟ್ಟರೆಂತೂ, ಎಷ್ಟು ಇಡ್ಲಿ ತಿನ್ನುತ್ತಿದ್ದೇವೆ, ಡಯಟ್ಟು ಪಯಟ್ಟು ಎಂಬ್ಯಾವ ಯೋಚನೆಯನ್ನೂ ಮೆದುಳು ನಿರ್ವಹಿಸದೇ-ನಿಯಂತ್ರಿಸದೇ, ಕೈ-ಬಾಯಿ ತನ್ನ ಪಾಡಿಗೆ ತಾನು ಹೊಟ್ಟೆಗೆ ಇಡ್ಲಿ ಇಳಿಸುತ್ತಿರುತ್ತದೆ. ಅಂತೂ ಹೀಗೆಲ್ಲ ತಿಂದು ತೇಗಿ, ಒಂದು ಕಡೆ ಅಕ್ಕ ಕಾರ್ ಹೊರ ತೆಗೆದು, ಇನ್ನೊಂದ್ ಕಡೆ ಅಜ್ಜ ಅಜ್ಜಿಯರು, ಆ ಕಡೆ ಈ ಕಡೆ ಓಡುವ ಮೊಮ್ಮಕ್ಕಳನ್ನು ಹಿಡಿದು ಕಾರಿನಲ್ಲಿ ತುಂಬುವ ಹರಸಾಹಸ ಮಾಡುತ್ತಿದ್ದರೆ, ಆ ಗ್ಯಾಪಿನಲ್ಲಿ ನಂದು ಸಾಧ್ಯವಾದಷ್ಟು ಮುಗಿಸಬೇಕಾಗಿದ್ದ ಅಪ್ಪಾಜಿ ಮನೆಯ ಗೋಡೆಯ ಮೇಲಿನ ಆರ್ಟ್ನ ಮುಂದುವರಿಕೆ! ಕಾರ್ ಸ್ಟಾರ್ಟ್ ಮಾಡಿ "ಯೇ ಸೌಮ್ಯ ಟ್ರಿಪ್ ಶುರು ಅದ್ರೂ ಮಾಡಣ ಬಾರೆ.. " ಎಂದು ಅಕ್ಕ ಅವಾಜ್ ಹಾಕಿದ ಮೇಲೆ ದೌಡಾಯಿಸಿ ಓಡಿ ಕಾರು ಹತ್ತಿ ನಮ್ಮ ಪ್ರವಾಸ ಪ್ರಾರಂಭಿಸಿದ್ದು .. :D



ಮಕ್ಕಳೆಲ್ಲ ತಾವು ಕುಳಿತುಕೊಳ್ಳುವ ಜಾಗಕ್ಕೋಸ್ಕರ ಆಡುವ ಜಗಳವನ್ನು ಬಿಡಿಸಿ, ರಾಜಿ ಮಾಡುವಂತ ಸಾಹಸದಿಂದ ಶುರುವಾಗಿ ಹಾಡು, ಪ್ರವಾಸದ ಪ್ರಯಾಸಕ್ಕೆ ಮಕ್ಕಳು ಬೋರ್ ಆಗದಂತೆ ಆಟಗಳ ಜೊತೆ, ಮೊದಲ ಸ್ಟಾಪ್ ಶಿರಸಿಗೆ ತಲುಪಿದೆವು. ಚಿನ್ನಕ್ಕ ಮತ್ತು ಅವಳ ಮಗ ಸೂರಜ್ ಜೊತೆ ಮುಂದಕ್ಕೆ ಕುಮಟಾ ಹೋಗುವ ಪ್ಲಾನ್ ಆಗಿತ್ತು. ಚಿನ್ನಕ್ಕನ ಮನೆ ತಲುಪುತ್ತಿದ್ದಂತೆಯೇ, ಕಾರೊಳಗೆ ಕೂತು ಕೂತು ಬೇಜಾರಾಗಿದ್ದ ಮಕ್ಕಳೆಲ್ಲ, ಕಣ್ಣಿ ಬಿಡಿಸಿಕೊಂಡು ಜಿಗಿಯುವ ಪುಟ್ಟೀಕರಗಳಂತೆ (ದನಕರು) ಚಿನ್ನಕ್ಕನ ಮನೆ ತುಂಬಾ ಹಿಂದೆ ಮುಂದೆ ಕುಪ್ಪಳಿಸುತ್ತಿದ್ದರೆ, ಚಿನ್ನಕ್ಕನ ಅತ್ತೆಗೆ ಗಾಬರಿ.. ! ನಾವು ಅವರ ಮನೆಯೊಳನಡೆದಾಗ, ಮಕ್ಕಳ ಸೈನ್ಯ ಮತ್ತು ಅವರುಗಳ ಹಾರಾಟ ನೋಡಿ ಅತ್ತೆ ಅತ್ಯಂತ ಕಳಕಳಿಯಿಂದ, "ಈ ಹುಡ್ರು ನೋಡ್ಕ್ಯಂಡು ನಿಂಗವಿಷ್ಟೇ ಜನ ಹೋಗ್ತ್ರ..!?" ಎಂದುಎರಡೆರಡು ಸಲ ವಿಚಾರಿಸಿದರು.. ನಂತರ ಅಡುಗೆಮನೆಯಲ್ಲಿ ಚಾ ಮಾಡಿ, ಸಣ್ಣ ಲೋಟಗಳನ್ನು ಸರಿಸಿಟ್ಟು, ದೊಡ್ಡ ಲೋಟಗಳಲ್ಲಿ ಸ್ಟ್ರಾಂಗ್ ಚಾ ಹನಿಸಿ ಕೊಡುವಾಗಲೆಂತೂ ನಮ್ಮದು ನಗಬೇಕೋ ಅಳಬೇಕೋ ತಿಳಿಯದ ಪರಿಸ್ಥಿತಿ :D :D




ಅಲ್ಲಿಂದ ಮುಂದಕ್ಕೆ ಶುರು ನಮ್ಮ ಪ್ರವಾಸದ ಹಾದಿ. ಮೇ ತಿಂಗಳ ಪ್ರವಾಸದ ಗಮ್ಮತ್ತೆಂದರೆ ರಸ್ತೆಯ ಪಕ್ಕೆಲಗಳಲ್ಲಿ ಅಲ್ಲಲ್ಲಿ ಪ್ರೀತಿಯುಕ್ಕುವ ಮೇ ಫ್ಲವರ್ ಗಳ ತೋರಣ.  ಬಿರುಬೇಸಿಗೆಯ ಸೆಕೆ ಇದ್ದರೂ,ಹಚ್ಚ ಹಸಿರಿನ ಘಾಟಿಯ ಹಾದಿ ಕಣ್ಣಿಗೆ ತಂಪನ್ನು ನೀಡುತ್ತಿತ್ತು. ಪ್ರಯಾಣಿಸುವ ದಾರಿಯಲ್ಲಿ ಕಂಡುಬರುವ ಇಂಟೆರೆಸ್ಟಿಂಗ್ ಊರುಗಳ ಹೆಸರುಗಳು, ಆ ಹೆಸರುಗಳ ಹುಟ್ಟುವಿಕೆಯ ಕುರಿತು ಒಂದಷ್ಟು ನಮ್ಮದೇ ಆದ ಊಹಾಪೋಹಗಳು, ಒಮ್ಮೊಮ್ಮೆ ಕಿಸಕ್ಕನೆ, ಒಮ್ಮೊಮ್ಮೆ ಹೊಟ್ಟೆಹಿಡಿದು ನಗುವಷ್ಟು ಜೋಕ್ಸ್ ಗಳನ್ನು ಮಾಡಿಕೊಳ್ಳುತ್ತ,ಒಂದಷ್ಟು ಮಾತುಕತೆಗಳ ಸರಕಿನೊಂದಿಗೆ ಮಧ್ಯಾಹ್ನಕ್ಕೆ ಕುಮಟಾ ತಲುಪಿದೆವು. ನಾವು ಮುಂಚೆಯೇ ಬುಕ್ ಮಾಡಿಟ್ಟುಕೊಂಡಿದ್ದ ಪರಿಚಯದವರ ಬೀಚ್ ರೆಸಾರ್ಟ್ ನ ಗೇಟನ್ನು ಕ್ಲೋಸ್ ಮಾಡಿ ಒಳಬರುವಂತೆಯೂ ಇನ್ಯಾವುದೋ ಸ್ವತಂತ್ರ ಲೋಕಕ್ಕೆ ಕಾಲಿಟ್ಟ ಅನುಭವ.. ಮಕ್ಕಳೆಲ್ಲರಿಗೂ ರೆಸಾರ್ಟ್ ಎದುರಿಗಿದ್ದ ಸಮುದ್ರ ನೀರು ಕಂಡ ಕ್ಷಣದಿಂದಲೂ ಊಟಕ್ಕೂ ಪುರುಸುತ್ತಿಲ್ಲದಂತೆ ಆಟವಾಡುವ ತವಕ. ಮಕ್ಕಳೊಂದೇ ಏನು ನಮಗೂ ಅಷ್ಟೇ ಕಾತುರತೆ ಇದ್ದಿದ್ದರಿಂದ ಊಟದ ನಂತರ ಸ್ವಲ್ಪವೂ ವಿಶ್ರಾಂತಿ ಕೇಳದೆ ಮನಸ್ಸು ಎಳೆದಲ್ಲಿಓಡಾಡಿದೆವು..




"ನಾವು ನಡೆಯುವಾಗ ಕಾಲಿನ ಸ್ಪರ್ಶಕ್ಕೆ ಸಿಗುವ ಪ್ರತಿಯೊಂದು ನೈಸರ್ಗಿಕ ವಸ್ತುವನ್ನು ಫೀಲ್ ಮಾಡಿ ಎಂಜಾಯ್ ಮಾಡಬೇಕು" ಎಂಬುದು ಅಕ್ಕನಿಂದ ಕಲಿತ ಪಾಠ. ನುಣುಪಾದ ರವೆ ರವೆ ಮರಳನ್ನು ಬರಿಗಾಲಿನಲ್ಲಿ ಹಿಸುಕಿ ನಡೆಯುತ್ತಾ, ಕಿವಿಗೆ ಬೀಳುತ್ತಿದ್ದ ಭೋರ್ಗರೆಯುವ ಸಮುದ್ರದಲೆಗಳ ಶಬ್ದ ಆಲೈಸುತ್ತ ಬಿರುಬಿಸಿಲೆಂಬುದನ್ನು ಲೆಕ್ಕಿಸದೇ, ಎಲ್ಲರೂ ಹೋಗಿ ಸಮುದ್ರ ನೀರಿಗೆ ಹೋಗಿ ಹಾರಿಕೊಂಡಿದ್ದೇ..! ಫೋಟೋಗ್ರಫಿ ಹುಚ್ಚಿರುವ ನನಗೋ, ಒಂದು ಕಡೆ ಆದಷ್ಟು ಬೇಗ ನೀರಿಗಿಳಿಯುವ ತವಕ, ಇನ್ನೊಂದು ಕಡೆ ನನ್ನ ಕ್ಯಾಮೆರಾ, ಮೊಬೈಲ್ ಒದ್ದೆಯಾಗದಂತೆ ಕಾಪಾಡಿಕೊಂಡು, ಅಪ್ಪಳಿಸಿ ಎಡರುತ್ತಿದ್ದ ಅಲೆಗಳ ಒಂದಷ್ಟು ಫೋಟೋ ಹೊಡೆಯುವ  ಅಮಲು.. ಮರಳು ಆಡುವುದು, ನೀರಿಗೆ ಓಡುವುದು ಎಲ್ಲವೂ ಅಲ್ಲಿ ಸ್ವಚ್ಛಂದ ಸಮಯ..ಮಕ್ಕಳೆಂತೂ ಎದ್ದೂ -ಬಿದ್ದೂ ಸಮುದ್ರದ ಅಲೆಗಳಲ್ಲಿ ಎಲ್ಲ ರೀತಿಯ ಆಟ /ಮೋಜನ್ನು ಪಡೆಯುತ್ತಿದ್ದರು..ನಾವು ಹೆಣ್ಮಕ್ಕಳು ಕೂಡ ಒಂದಷ್ಟು ನಗು-ತಮಾಷೆಗಳ ಜೊತೆ, ಮರಳಾಟ-ಮಳ್ಳಾಟ ಎಲ್ಲಾ ಮನಸ್ಪೂರ್ತಿಯಾಗಿ ಆಡಿದೆವು..  "ನಮಗ್ ನಾವೇ ಗುಂಡಿ ತೋಡದೂ ಕೂಡ ಹೇಳಿದಷ್ಟು ಸುಲಭೀಲ್ಲೇ.." ಎಂದೆಲ್ಲ ತಮಾಷೆ ಮಾಡಿಕೊಂಡು ಮರಳಿನಲ್ಲಿ ಹೂತುಕೊಂಡು ಒಂದಷ್ಟು ಮಂಗಾಟ ಮುಗಿಸಿದೆವು..ನಾನೆಂತೂ ಸಿಕ್ಕಿದಷ್ಟೂ ನಮ್ಮ ಕಂದಮ್ಮಗಳ ನೀರಿನಾಟದ ಮೋಜನ್ನು ಫೋಟೋಗಳಲ್ಲಿ ಹಿಡಿದಿಟ್ಟುಕೊಂಡೆ. ಕಾಲಿಗೆ ತಾಗುವ ಮೊದಲ ಅಲೆಯ ಸ್ಪರ್ಶದ ಸುಖದಿಂದ ಶುರುವಾಗಿ, ಮುಂದೆ ಮುಂದೆ ಹೋದಂತೆಯೂ ರಭಸವಾದ ಅಲೆಗಳು ನಮ್ಮನ್ನು ದೂಡಿ ಎತ್ತಿ ಮುಳುಗಿಸಿ ಮತ್ತೆ ದಡಕ್ಕೆ ಎಸೆಯುವಲ್ಲಿಯವರೆಗೆ, ಉಪ್ಪು ನೀರು, ಮರಳು ಎಲ್ಲವೂ ಕಿವಿ ಮೂಗು ನೆತ್ತಿಯವರೆಗೆ ಏರಿ, ಕೆಮ್ಮಿ ಮುಕ್ಕರಿಸಿ ದಡಕ್ಕೆ ಬಂದು ಸಾಕಪ್ಪ ಎಂದು ಬಿದ್ದುಕೊಳ್ಳುವವರೆಗೆ ನೀರಿನಲ್ಲಿ ಆಡಿದ್ದೇ ಆಡಿದ್ದು.. ಬೀಚ್ ಬಾಲ್ ಆಟ ಮತ್ತಷ್ಟು ಖುಷಿ ಕೊಟ್ಟಿತು.. ಮತ್ತೆ ಚಹಾ ಬ್ರೇಕ್ ಮತ್ತೆ ನೀರಲ್ಲಿ ಆಟ.. :)







ಒಟ್ಟಾರೆಯಾಗಿ ಸೂರ್ಯ ಟಾಟಾ ಹೇಳುವ ವರೆಗೆ ನಾವಾಗಲಿ, ಮಕ್ಕಳಾಗಲಿ ನೀರಿನಿಂದ ಹೊರಬೀಳಲಿಲ್ಲ.. ತೆಗೆದುಕೊಂಡು ಹೋಗಿದ್ದ ಕಲ್ಲಂಗಡಿ ಹಣ್ಣುಗಳು ಕ್ಷಣಮಾತ್ರದಲ್ಲಿ ಸ್ವಾಹಾ ಆಗಿದ್ದು, ಬೀಚಿನ ಗಮ್ಮತ್ತಿಗೆ ಸಾಕ್ಷಿಯಾಗಿತ್ತು..




ನೀರಿನಲ್ಲಿ ಕುಣಿದಾಡಿ ಸುಸ್ತಾದ ಮಕ್ಕಳು ಸ್ನಾನ ರಾತ್ರಿಯೂಟ ಮುಗಿಸಿದ್ದೆ ತಡ,  ಲೋಕದ ಪರಿವೇ ಇಲ್ಲದಂತೆ ನಿದ್ದೆಗೆ ಜಾರಿದರು..ಬಿರುಬೇಸಿಗೆಯ ದಿನವಾದ್ದರಿಂದ ಕುಮಟಾದಲ್ಲಿಯೂ ಸೆಕೆ ಅಗಾಧವಿತ್ತು. ಮಾತು ಕಥೆ ಎಲ್ಲ ಮುಗುಸಿ, ಫೋಟೋಗಳನ್ನೊಂದಷ್ಟು ಎಡಿಟ್ ಮಾಡಿ ನೋಡಿಕೊಂಡು ಬಿದ್ದು ಬಿದ್ದು ನಕ್ಕು ಸುಸ್ತಾಗಿ ನಾವೆಲ್ಲರೂ ಮಲಗಲಣಿಯಾದೆವು . ಆದರೆ ಸೆಕೆಗೆ ನಾವಿದ್ದ ಟೆಂಟ್ ನಲ್ಲಿ ನಿದ್ದೆ ಬರದೇ, ಅಕ್ಕ ನಾನು ಹೊರಬಂದು ಸಮುದ್ರದ ಕಡೆಗೆ ಮುಖ ಮಾಡಿ ನಿರ್ಮಿಸಿದ್ದ 'ವಿಶ್ರಾಂತಿ ಅಟ್ಟ' ದಲ್ಲಿ ಹತ್ತಿ ಕೂರೋಣ ಎಂದು ತಿಂಗಳ ಬೆಳಕಿನಲ್ಲೇ ಏನೋ ಮಾತನಾಡುತ್ತ ಮೆಟ್ಟಿಲುಗಳನ್ನು ಹತ್ತಿ ನಿಂತೆವು. ಇನ್ನೇನು ೪ ಹೆಜ್ಜೆ ಮುಂದಕ್ಕೆ ನಡೆಯಬೇಕು ಎನ್ನುವಷ್ಟರಲ್ಲಿ, ಕೋರಲೆಂದಿಟ್ಟಿದ್ದ ಹಾಸಿನ ಮೇಲೆ ಏನೋ ಗುಡ್ಡೆಯಂತಹ ವಸ್ತುವಿದೆ, ಮತ್ತದು ಆಕಡೆ ಈಕಡೆ ಅಲುಗಾಡಿದ ಅನುಭವ. ನಾವೋ ಕೂಗುವುದೊಂದು ಬಾಕಿ..!




ದಡಬಡಾಯಿಸಿ ಮೊಬೈಲ್ ಟಾರ್ಚ್ ಬಿಟ್ಟುನೋಡಿದೆ. ಅಲ್ಲಿನ ನಿರ್ವಾಹಕ ಹುಡುಗನೊಬ್ಬ ಸತ್ತು ಬಿದ್ದವರಂತೆ ಮಲಗಿ ನಿದ್ರಿಸುತ್ತಿದ್ದ. ಆತ ಮುಸುಕು ತೆಗೆದು ಕಣ್ತೆರೆದು ನೋಡಿದ್ದರಿಂದ ಕಟ್ಟಿಕೊಂಡಿದ್ದ ಉಸಿರು ಬಿಟ್ಟು ನಾನು ಅಕ್ಕ ಇಬ್ಬರೂ ಒಬ್ಬರ ಮುಖ ಒಬ್ಬರು ನೋಡಿಕೊಂಡು ಸಾವರಿಸಿಕೊಂಡು ಮರುಕ್ಷಣದಲ್ಲಿ ಉಕ್ಕಿ ಬರುತ್ತಿದ್ದ ನಗು ತಡೆದು, ಹೇಗೋ ಸೌಂಡ್ ಲೆಸ್ ನಗುವಾಗಿ ಪರಿವರ್ತಿಸಿ ಮತ್ತೊಂದಷ್ಟು ನಕ್ಕಿದ್ದೆ ನಕ್ಕಿದ್ದು.. ಎಷ್ಟು ಮನೆಮಂದಿಯ ಜೊತೆ ಆಗೀಗ ಫೋನಿನಲ್ಲಿ ಮಾತನಾಡುತ್ತೇವೆಂದರೂ ಹೀಗೆ ಸಂದರ್ಭ ಸಿಕ್ಕಿ ಕೂತು ಕಥೆ ಹೊಡೆಯುವ ಕ್ಷಣಗಳು ಮಾತ್ರ ಅಮೂಲ್ಯ.. ಮುಗಿಯದ ಮಾತುಗಳ ಮಧ್ಯದಲ್ಲಿ ನಮ್ಮನು ಹುಡುಕಿಕೊಂಡು ಎದ್ದು ಬಂದವ,ತಿಂಗಳ ಬೆಳಕಲ್ಲಿ ಬೆಳ್ಳನೆ ಹೊಳೆಯುತ್ತ ಸರಿದು ಬಂದು ಮತ್ತೆ ಮರಳುತ್ತಿದ್ದ ಸಮುದ್ರದಲೆಗಳನ್ನು ಕುರಿತಾಗಿ ಅಕ್ಕನ ಮಗ ವೈಜ್ಞಾನಿಕ ವಿಷಯಗಳ ಕುರಿತಾಗಿ ಒಂದು ಸಣ್ಣ ಪಾಠವನ್ನೇ ಮಾಡಿದ..! ಹೊಸ ವಿಷಯಗಳನ್ನು ತಿಳಿದುಕೊಳ್ಳಲು ವಯಸ್ಸಿನ ಮಿತಿಯೇ? ಸಮುದ್ರದಾಳದ ಜೀವಿಗಳ ಕುರಿತಾಗಿ ಅವನು ಹೇಳಿದ ವಿಷಯಗಳನ್ನೆಲ್ಲ ಕೇಳಿಸಿಕೊಂಡು, ಒಡಲೊಳಗಿನ ಎಷ್ಟೋ ವಿಷಯಗಳ ಕುರಿತು ಅಚ್ಚರಿಗೊಂಡು, ಮತ್ತೊಂದಷ್ಟು ಸಮಯ ಕಳೆದು, ಭೋರ್ಗರೆಯುವ ಸಮುದ್ರದ ಅಬ್ಬರಿಸುವ ಅಲೆಗಳ ಶಬ್ದವನ್ನು ಕೇಳುತ್ತ ಅಂತೂ ಇಂತೂ ಬೆಳಗಿನ ಜಾವಕ್ಕೆ ನಿದ್ರಿಸಿದೆವು..




ಮರುದಿನ ಬೆಳಿಗ್ಗೆ ೫.೩೦ ಗೆ ಎದ್ದು ಸಮುದ್ರ ತೀರದುದ್ದಕ್ಕೂ ಬೆಳಗಿನ ಜಾವದ ತಂಪನ್ನು ಅನುಭವಿಸುತ್ತ  ಮಾತನಾಡುತ್ತ ವಾಕ್ ಮಾಡಿಕೊಂಡು ಮಧ್ಯದಲ್ಲಿ ಆಗೊಮ್ಮೆ ಈಗೊಮ್ಮೆ ನನ್ನ ಒಂದಷ್ಟು ಫೋಟೋ ಪ್ರಯೋಗಗಳನ್ನು ನಡೆಸುತ್ತ ಓಡಾಡಿಕೊಂಡು ವಾಪಾಸಾದೆವು.. ಮಕ್ಕಳೆಲ್ಲ ಸ್ಟಾರ್ ಫಿಶ್, ಏಡಿ ಗಳನ್ನೆಲ್ಲ ಹುಡುಕಿದರು. ಕಪ್ಪೆ ಚಿಪ್ಪು ಆಯ್ದರು.. ನಾವಿದ್ದ ರೆಸಾರ್ಟ್ ನ ಸುತ್ತಲಿನಲ್ಲಿ ನವಿಲು, ನೇರಳೆ ಹಣ್ಣು, ಹುಣಸೆಕಾಯಿ ಎಲ್ಲ ನೋಡಿ ಹೆಕ್ಕಿ ಮುಗಿಸಿಯೂ ಆಯಿತು..   ವಾಪಾಸು ಹೊರಡುವ ಮನಸ್ಸು ಯಾರಿಗೂ ಇರಲಿಲ್ಲ.. ಮತ್ತೆ ಸಂಜೆ ಬೆಂದಕಾಳೂರಿಗೆ ಹೊರಟಿದ್ದ ನನ್ನ ಪ್ರಯಾಣದ ನೆನಪಾಗಿ, ಒಲ್ಲದ ಮನಸ್ಸಿನಿಂದ ಗಾಡಿ ವಾಪಸು ಸಾಗರದ ಕಡೆಗೆ ತಿರುಗಿಸಿದೆವು. ವಾಪಸು ಬರುವಾಗಲೂ ಹಾದಿಯುದ್ದಕ್ಕೂ ಸಿಗುತ್ತಿದ್ದ 'ಕವಲಕ್ಕಿ', 'ಅಪ್ಪನಿ', 'ಸಂಶಿ', 'ಕಾರ್ಕೀ', 'ಜಲ್ವಾಲಿ' ಇತ್ಯಾದಿ ಇಂಟೆರೆಸ್ಟಿಂಗ್ ಊರುಗಳ ಹೆಸರುಗಳನ್ನು ಹುಡುಕುತ್ತ, ಅವುಗಳಿಗೊಂದಷ್ಟು ಕಥೆ ಪದ್ಯಗಳನ್ನು ಕಟ್ಟುತ್ತಾ, ಹಾದಿಬದಿಯಲ್ಲಿನ ಸ್ಥಳೀಯ ಹಣ್ಣು ಆಹಾರಗಳನ್ನು ತಿಂದು ಸಂಭ್ರಮಿಸಿ ಮರಳಿದೆವು..






ಇವೆಲ್ಲದರ ಮಧ್ಯೆ, ಹಿಡಿದು ಕೊಳಗಕ್ಕೆ ತುಂಬಲು ಪ್ರಯತ್ನಿಸುವ ಕಪ್ಪೆಗಳಂತಿದ್ದ ಮಕ್ಕಳನ್ನು ಇಟ್ಟುಕೊಂಡು ಟ್ರಿಪ್ ಮೆಮ್ಬರ್ರುಗಳ ಒಂದೂ ಗ್ರೂಪ್ ಫೋಟೋ ಕ್ಲಿಕ್ಕಿಸಿಕೊಳ್ಳಲು ಸಾಧ್ಯವಾಗಲಿಲ್ಲ ಎಂದು ಒಂದು ಕ್ಷಣಕ್ಕೆ ನಿರಾಸೆಯಾದರೂ, ಒಟ್ಟು ಸೇರಿ ಖುಷಿ ಪಟ್ಟ ಕಳೆದ ಸಂತೋಷದ ಕ್ಷಣಗಳು ಎಲ್ಲರಿಗೂ ಮನಸ್ಸಿನಲ್ಲಿ ಭಧ್ರವಾಗಿ ಕೂತಿದ್ದೆಂತೂ ಹೌದು..ಒಟ್ಟಾರೆಯಾಗಿ ಹೇಳುವುದಾದರೆ ಈ ನಮ್ಮ ಒಂದೂವರೆ ದಿನದ ಯಾರ  ಮೇಲೂ ಅವಲಂಭಿತರಾಗದೆ, ಸ್ವತಂತ್ರತೆಯಿಂದ ಓಡಾಡಿದ 'ಲೇಡೀಸ್ ಟ್ರಿಪ್' ಮನಸ್ಸುಗಳನ್ನು ಹಸನು ಮಾಡಿದ್ದೊಂದೇ ಅಲ್ಲದೆ, ನಮ್ಮಲ್ಲಿನ ಧೈರ್ಯ ಮತ್ತು ಆತ್ಮವಿಶ್ವಾಸ ಹೆಚ್ಚಿಸಿದ್ದೆಂತೂ ಸುಳ್ಳಲ್ಲ  :) :)


ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ