ಬುಧವಾರ, ಮೇ 22, 2019

ಮದುವೆಮನೆ ಮತ್ತು ಕಾಲಮಾನ

ಈಗ ಊರ ಕಡೆ ಶುಭಕಾರ್ಯಗಳ ಸೀಸನ್. ಕರುಳು ಬಳ್ಳಿ, ನೆಂಟರಿಷ್ಟರು, ಆತ್ಮೀಯರು, ಸ್ನೇಹಿತರ ಮನೆಗಳಿಂದ ಹತ್ತು ಹಲವು ಕಾರ್ಯಕ್ರಮಗಳ ಆಹ್ವಾನದ ಮಹಾಪೂರವೇ ಇರುತ್ತದೆ.ನಮ್ಮಂತಹ ನಗರವಾಸಿಗರಿಗೆ, ವೃತ್ತಿಪರರಿಗೆ ಕೆಲಸಕ್ಕೆ ಮಧ್ಯೆ ಮಧ್ಯೆ ಪಡೆಯಬಹುದಾದ ರಜೆ, ಜೀವನೋಪಾಯಕ್ಕೆ ನಡೆಸುತ್ತಿರುವ ಬಿಸಿನೆಸ್ ನ ಮಾರ್ಕೆಟಿಂಗ್ ಅನುಕೂಲ/ಅನಾನುಕೂಲಗಳು, ಮಕ್ಕಳ ಶಾಲಾ-ಕಾಲೇಜು  ಪಠ್ಯೇತರ ಕ್ಲಾಸುಗಳು ಎಲ್ಲವನ್ನೂ ಪರಿಗಣಿಸಿಕೊಳ್ಳಬೇಕಾದ ಪರಿಸ್ಥಿತಿ. ಸಮಾಜದ ಕಟ್ಟುಪಾಡು, ಇರುವ ಅಲ್ಪಸ್ವಲ್ಪ ಭಾಂದವ್ಯಕ್ಕೆ ಗೌರವವಿಟ್ಟು, ಸಲಿಗೆಗೆ ಕಟ್ಟುಬಿದ್ದು, ಒಂದು ದಿನದ ಮಟ್ಟಿಗೆ ಊರಿಗೆ ಹೋಗಿ ಕಾರ್ಯಕ್ರಮಗಳನ್ನು ಮುಗಿಸಿ ಸಂಜೆಗೆ ವಾಪಸು ಬಸ್ಸು ಹತ್ತಿ ಮರುದಿನದ ಕರ್ತವ್ಯಕ್ಕೆ ಹಾಜಾರಾಗುವ ಅನಿವಾರ್ಯತೆ ಒಂದು ಕಡೆಯಾದರೆ, ಕೆಲವೊಮ್ಮೆ ಆಹ್ವಾನ ನೀಡಿದವರು ತಮಗೆ ಎಷ್ಟು ಮುಖ್ಯ/ಅಮುಖ್ಯರು, ಆಹ್ವಾನವಿರುವ ಕಾರ್ಯಕ್ರಮದ ಸ್ಥಳವನ್ನು ತಲುಪಲು ತಾವು ವ್ಯಯಿಸಬೇಕಾದ ಶ್ರಮ ಸಮಯ ಎಂಬಿತ್ಯಾದಿ ಜರಡಿ ಹಿಡಿದು, ಕಡೆಗೆ ನಮ್ಮದು ಬ್ಯುಸಿ ಲೈಫ್ ಎಂಬ ಮುಸುಕಣ್ಣೆಳೆದುಕೊಂಡು ಬರಲಾಗುವುದಿಲ್ಲ ಎಂದು ಫೋನಿನಲ್ಲೇ ಶುಭಾಶಯ ಕೋರಿ ಮದುವೆ ಸಮಾರಂಭ ಸಮಾಪ್ತಿಗೊಳಿಸುವುದು ಇತ್ತೀಚಿನ ಇನ್ನೊಂದು ಬಗೆಯ ಬಾಳರೀತಿಯಾಗುತ್ತಿದೆ. ಇದು ಕೇವಲ ನಗರ ಪ್ರದೇಶದವರಿಗೆ ಮಾತ್ರ ಸೀಮಿತವಾಗಿಲ್ಲ. ನಾವೇ ಕಾಣುವಂತೆ ಇತ್ತೀಚಿಗೆ ಎಲ್ಲೆಡೆ, ಸ್ಥಳೀಯರು ಕೂಡ ಮದುವೆ -ಮುಂಜಿ ಕಾರ್ಯಕ್ರಮಗಳಿಗೆ ಊಟದ ಸಮಯಕ್ಕೂ ಸ್ವಲ್ಪ ಮುಂಚೆಯಷ್ಟೇ ತಲುಪಿ, ಎದುರಿಗೆ ಸಿಕ್ಕವರನ್ನೆಲ್ಲ ಮಾತನಾಡಿಸಿ,ಒಂದಷ್ಟು ಫೋಟೋ ಕ್ಲಿಕ್ಕಿಸಿಕೊಂಡು, ವಧು ವರ ಮತ್ತವರ ಅವರ ಕುಟುಂಬದವರನ್ನು ಮಾತನಾಡಿಸಿ, ಕಾರ್ಯಕ್ರಮದ ಅದ್ಧೂರಿತನ, ವೈಭವವನ್ನೆಲ್ಲ ಕಣ್ಣಲ್ಲೇ ಅಳೆದು, ಊಟ ಮಾಡಿ, ತಾಂಬೂಲ ಸ್ವೀಕರಿಸಿ ಅಲ್ಲಿಂದ ಜಾಗ ಖಾಲಿ ಮಾಡುವುದು ಸರ್ವೇ ಸಾಮಾನ್ಯವಾಗುತ್ತಿದೆ. ಕೆಲವೇ ಕೆಲವು ಹಳ್ಳಿಗಳಲ್ಲಿ, ದೊಡ್ಡ ಕುಟುಂಬಗಳಿರುವಲ್ಲಿ, ಮದುವೆ ಸಡಗರ, ನೆಂಟರಿಷ್ಟರ ಕಲರವ, ಹರಟೆ-ನಗು ಇತ್ಯಾದಿ ಕಂಡುಬಂದರೂ, ಸುಲಭವಾಗುತ್ತಿರುವ ಅಂತೆಯೇ ಶರವೇಗದಲ್ಲಿ ಬದಲಾಗುತ್ತಿರುವ ಆಧುನಿಕ ಜನಜೀವನ, ಹಿಂದೆ ೩-೪ ದಿನಗಳ ಕಾರ್ಯಕ್ರಮಗಳ ನೆಪದಲ್ಲಾದರೂ ದೊರೆಯುತ್ತಿದ್ದ ಕೌಟುಂಬಿಕ ಬಾಂಧವ್ಯಗಳು, ಸಂಬಂಧಗಳ  'ಆಚರಣೆ ' ಮೊಟಕುಗೊಳಿಸಿ ಒಂದು ಹೊತ್ತಿನ ಮೀಟಿಂಗ್ ನ ರೀತಿಯಲ್ಲಿ ಮಾರ್ಪಾಡುಗೊಳಿಸಿರುವುದು ಕೂಡ ಅಷ್ಟೇ ವಿಷಾದನೀಯ.!

ಮದುವೆ ವಿಧಿ ವಿಧಾನಗಳು ಒಂದೊಂದು ಪ್ರಾಂತ್ಯದಲ್ಲಿ ಒಂದೊಂದು ರೀತಿಯಲ್ಲಿ ನಡೆಸಿದರೂ, ಹೆಚ್ಚಿನ ವ್ಯತ್ಯಾಸವೇನೂ ಇರುವುದಿಲ್ಲ. ಮಲೆನಾಡಿನ ಹಿಂದೂ ಮದುವೆಗಳ ಆಚಾರ ವಿಚಾರಗಳು ಆಕರ್ಷಕವಾಗಿರುತ್ತದೆ. ಹಿಂದಿನ ತಲೆಮಾರಿನ ಕಾರ್ಯಕ್ರಮಗಳೆಂದರೆ ಅದರ ಗಮ್ಮತ್ತೇ ಬೇರೆ ಇತ್ತು. ನಮ್ಮ ಅಜ್ಜ-ಅಜ್ಜಿಯರ ಕಾಲಕ್ಕೆ ಮದುವೆಯೆಂದರೆ ೭ ದಿನಗಳ ಕಾರ್ಯಕ್ರಮವಿರುತ್ತಿತ್ತಂತೆ! ಈಗಿನ ರೀತಿ ಎಲ್ಲವೂ ಕ್ಯಾಟರಿಂಗ್ ನ ವ್ಯವಸ್ಥೆಗಳ ಕಾಲವಲ್ಲವದು. ಆಗೆಲ್ಲ ಆಧುನಿಕತೆಯ ಸೋಗಿಲ್ಲದ ಕಾರಣ ಪರಸ್ಪರ ಸಹಕಾರದ ಬಲದ ಮೇಲೆಯೇ ಕಾರ್ಯಕ್ರಮಗಳು ಯಶಸ್ವಿಗೊಳ್ಳುತ್ತಿದ್ದವು. ದೊಡ್ಡ ಕುಟುಂಬಗಳಿರುತ್ತಿದ್ದ ಕಾರಣ, ಮನೆ ಮಂದಿ, ಅಕ್ಕ ತಂಗಿಯರು, ತವರು ಮನೆ ನೆಂಟರಿಷ್ಟರೆಲ್ಲರೂ ಬಟ್ಟೆ-ಬರೆ ತುಂಬಿಕೊಂಡು ಒಂದು ವಾರದ ಮುಂಚಿನಿಂದಲೇ ಕಾರ್ಯಕ್ರಮಕ್ಕೆ ಅಣಿ ಮಾಡಿಕೊಡಲು ಬರುತ್ತಿದ್ದರು. ನಾವೂ ಕೂಡ ಸಣ್ಣವರಿದ್ದಾಗ ನಮ್ಮ ಪೋಷಕರ ಜೊತೆಯಲ್ಲಿ ಇಂತಹ ಶುಭ ಕಾರ್ಯಕ್ರಮಗಳಿಗೆ ಹೋದರೆ ೪ ದಿನ ಅದೇ ಊರಿನಲ್ಲಿ ಜಾಂಡಾ ಊರಿ, ಆ ಮನೆಯ, ಆ ಊರಿನ ಸುತ್ತಮುತ್ತಲಿನೆಲ್ಲ ಸ್ಥಳವನ್ನು ಓಡಾಡಿ ಸಂಭ್ರಮಿಸಿ ಬರುತ್ತಿದ್ದೆವು.

 ಈಗಲೂ ಕೆಲವು ಹಳ್ಳಿ ಕಡೆಗಳಲ್ಲಿ ಸುಮಾರಾಗಿ ಮನೆಗಳ ಅಂಗಳ ವಿಶಾಲವಾಗಿರುವುದರಿಂದ ಸಾಕಷ್ಟು ಮದುವೆಗಳು ಅಲ್ಲಿಯೇ ನಡೆದುಹೋಗುತ್ತದೆ . ತಮ್ಮ ಊರಿನವರ ಮನೆಯಲ್ಲಿ ಮದುವೆ  ಎಂದರೆ ಅದು ಇಡೀ ಊರಿಗೆ 'ಹಬ್ಬ'ವಿದ್ದಂತೆ. ಮದುವೆಗೂ ಎರಡು ದಿನ ಮುಂಚಿತವಾಗಿ ಊರಿನವರೆಲ್ಲ ಬಂದು ತಮಗೆ ತೋಚಿದಷ್ಟು ತಮ್ಮ ಪಾಲಿನ ಸಹಾಯವನ್ನು ಮಾಡಿಕೊಡುತ್ತಾರೆ. ಇದಕ್ಕೆ 'ದೊನ್ನೆ -ಬಾಳೆ ಶಾಸ್ಟ್ರ ಎಂದು ಹೆಸರಿದೆ. ಊಟಕ್ಕೆ ಬಾಳೆ ಎಲೆಗಳನ್ನು ಕತ್ತರಿಸಿ ಸ್ವಚ್ಛಗೊಳಿಸಿದುವುದು, ದೊನ್ನೆ ತಯಾರಿಸುವುದು, ಅಡುಗೆಗೆ ತರಕಾರಿಗಳನ್ನು ಸ್ವಚ್ಛಗೊಳಿಸಿ ಹೆಚ್ಚಿಕೊಡುವುದು, ಎಲೆ ಅಡಿಕೆ ಹೊಗೆಸೊಪ್ಪಿನ ತಾಂಬೂಲ ತಯಾರಿ, ಮದುವೆ ಚಪ್ಪರಕ್ಕೆ ಕಂಬ ಹೂತು ಮಂಟಪ ಕಟ್ಟಿ, ತೋರಣಗಳ ಸಿದ್ಧತೆ. ನಂತರದಲ್ಲಿ ದೊನ್ನೆ ಬಾಳೆ ಶಾಸ್ತ್ರಕ್ಕೆ ಬಂದವರಿಗೆ ತಿಂಡಿ ಮತ್ತು ಪಾನೀಯದ ವ್ಯವಸ್ಥೆ ಇರುತ್ತದೆ. ಬೆಲ್ಲ ಹಾಕಿ ಮಾಡಿದ ರುಚಿ ರುಚಿ ಅವಲಕ್ಕಿ, ಅರಳಕಾಳು, ಮಂಡಕ್ಕಿ, ಕಾಪಿ, ಕಷಾಯ ಆಹಾಹಾ ಅದರ ರುಚಿ ಬಲ್ಲವನೇ ಬಲ್ಲ.. ಹೀಗೆ ಹೆಂಗಸರು-ಗಂಡಸರೆಂಬ ಬೇಧಭಾವವಿಲ್ಲದೆ, ಸಂಜೆ ಊರವರೆಲ್ಲರೂ ಸುತ್ತಲೂ ಕುಳಿತು ಕಥೆ ಹೇಳುತ್ತಾ, ಒಬ್ಬರಿಗೊಬ್ಬರ ಕಾಲು ಎಳೆಯುತ್ತ ಒಟ್ಟಾಗಿ ಸಂತಸ ಪಡುವ ಕಾರ್ಯಕ್ರಮವೇ ಒಂದು ಸುಖ. ಅಷ್ಟಕ್ಕೇ ಮುಗಿಯದೆ ಮದುವೆಯ ಸಮಯದಲ್ಲಿ ಅತಿಥಿ ಸತ್ಕಾರಕ್ಕೆಂದು ಅಕ್ಕಪಕ್ಕದ ಮನೆಯವರೆಲ್ಲ ತಮ್ಮ ಮನೆಗಳಲ್ಲಿ , ನೆಂಟರು ತಂಗುವ ವ್ಯವಸ್ಥೆಯನ್ನು ನೀಡುತ್ತಾರೆ. ದೊಡ್ಡ ಪ್ರಮಾಣದ ಅಡುಗೆಗೆ ಮತ್ತು ಬಳಕೆಗೆ ಹೆಚ್ಚುವರಿ ಪಾತ್ರೆ ಪಡಗಗಳು ನೆರೆಹೊರೆಯವರಿಂದಲೇ ಸಂಗ್ರಹವಾಗುತ್ತದೆ. ಮಧ್ಯಾಹ್ನ ಉಂಡು ಕೈತೊಳೆದರೆ, ಕಂಬಳಿ ಹಾಸಿ ವಿಶ್ರಾಂತಿ ವ್ಯವಸ್ಥೆ, ಎಲೆ ಅಡಿಕೆ ತಾಂಬೂಲ ಎಲ್ಲವೂ ಅಕ್ಕಪಕ್ಕದ ಮನೆಗಳಲ್ಲಿ ತಯಾರಿರುತ್ತದೆ.

 ಈ ಮದುವೆ ಮುಂಜಿಗಳಲ್ಲಿ ಮನೆಯ ಯಜಮಾನ ಎಷ್ಟೇ ಪೂಜೆ, ವಸ್ತ್ರ, ಆಭರಣ, ಭೋಜನ ದಿನಸಿ ಇನ್ನಿತರ ವ್ಯವಸ್ಥೆಗಳನ್ನು ಮಾಡಿಕೊಂಡರೂ ಕಡೆಗೆ ಶಾಸ್ತ್ರಗಳನ್ನು ಹೇಳಿ-ಕೇಳಿ ಮಾಡಲು ಒಂದಷ್ಟು ಹಿರಿಯ ಜೀವಗಳು, ತತ್ತಕ್ಷಣಕ್ಕೆ ಎದುರಾಗುವ ಸಮಸ್ಯೆಗಳಿಗೆ, 'ಮಾಡಿದರಾಯ್ತು ಬಿಡಿ' ಎಂದು ಮನೋಸ್ಥೈರ್ಯ ನೀಡುವ ಭಾವ ನೆಂಟರು-ಆತ್ಮೀಯರು, ಬಲವಿರುವ ಗಂಡು ಹೈಕ್ಳುಗಳು, ಅಲಂಕಾರ ಮಾಡಿಕೊಂಡು ಹಿಂದೆ ಮುಂದೆ ತಿರುಗಾಡಿಕೊಂಡಿರುವ ಹೆಣ್ಮಕ್ಕಳು, ಹಾಡು ಕಥೆ  ಸೊಲ್ಲು ಹರಟೆ ನಗು ಇವೆಲ್ಲಾ ಸೇರಿ ಮಾಡುವೆ ಮನೆಯ ಗೌಜು ಪ್ರಾರಂಭವಾದರೇನೇ ಸಮಾಧಾನ. ಮದ್ವೆ ಮನೆಯ ದಿನದ ವಾತಾವರಣವೇ ಒಂದು ಉತ್ಸಾಹ. ಅಂದು ಹುಡುಗ ಹುಡುಗಿ ಮಾಡುವೆ ಮಂಟಪದಡಿಯಲ್ಲಿ ಬಂಧಿಗಳಾಗುತ್ತಾರೆ, ಮಾಂಗಲ್ಯಧಾರಣೆ, ಸಪ್ತಪದಿ, ಲಾಜಾಹೋಮ, ಕನ್ಯಾದಾನ ಹೀಗೆ ಒಂದರ ಮೇಲೊಂದರಂತೆ ಪೂಜೆ ಮಾಡಿಸುವ ಭಟ್ಟರು ವಿಧಿ ವಿಧಾನವನ್ನು ನಡೆಸುತ್ತಾರೆ. ಪ್ರತಿ ಸಂಪ್ರದಾಯಕ್ಕೂ, ಹಳೆಕಾಲದ ಹಾಡುಗಳಿವೆ. ಮದುವೆ  ಮನೆ ಹಾಡುಗಳನ್ನು ಗೊತ್ತಿರುವ ಹೆಂಗಸರು ಹಾಡುವಾಗ ಆ ರಾಗವನ್ನು ಕೇಳುವುದೇ ಒಂದು ಅನುಭವ.  ಎಷ್ಟೋ ವರ್ಷಗಳಿಂದ ಕಾಣದ ಜನರು, ನಾವು ನಿಯಮಿತವಾಗಿ ಹೋಗಲಾರದೆ ಭಾಂದವ್ಯ ಬಿಟ್ಟು ಹೋದ ಸಂಬಂಧಿಗಳು ಎಲ್ಲರೂ ಒಂದೆಡೆ ಸೇರಿದಾಗ ಸಿಗುವ ಸಂತೋಷಕ್ಕೆ ಮಿತಿಯಿದೆಯೇ? ಅವುಗಳನ್ನೆಲ್ಲ ಅನುಭವಿಸಿಯೇ ತೀರಬೇಕು. ಗಳಿಗೆಗೊಮ್ಮೆ ತಿರುಗಿ ಬಂದು ಕವಳ ಹಾಕಿ ಲೋಕಾಭಿರಾಮವಾಗಿ ಮಾತನಾಡುತ್ತ ಕುಳಿತ ಗಂಡಸರ ಅಲ್ಲಲ್ಲಿನ ಗುಂಪು ಒಂದೆಡೆಯಾದರೆ, ಇಡೀ ಜಗತ್ತಿನ ಸುದ್ದಿ ಹರಟುತ್ತ ಕೂರುವ ಹೆಂಗಸರು ಕೂಡ ಅಷ್ಟೇ ಸಂಭ್ರಮದಲ್ಲಿ ಬೀಗುತ್ತಿರುತ್ತಾರೆ. ರಂಗೋಲಿ, ಮದರಂಗಿ, ಡ್ರೆಸ್ ಗೆ ಮ್ಯಾಚಿಂಗ್ ಬಳೆ, ಸೆಲ್ಫಿ, ಸ್ಟೇಟಸ್ ಫೋಟೋಗಳು, ಹುಡುಗರೆಡೆಗೆ ಓರೆ ನೋಟ ಎಂದು ಹೆಣ್ಮಕ್ಕಳು ಠಳಾಯಿಸುತ್ತಿದ್ದರೆ, ಚಿಕ್ಕಪುಟ್ಟ ಮನೆಗೆಲಸ, ಗ್ಯಾಸ್ ಲಾಟೀನಿನ ರಿಪೇರೀ, ಅಲ್ಲಿ ನೆಂಟರನ್ನು ವಸ್ ಸ್ಟ್ಯಾಂಡಿನಿಂದ ಕರೆತರುವುದು, ಇತ್ತ ಬಂದವರಿಗೆ ಪಾನೀಯದ ವ್ಯವಸ್ಥೆ ಎಂಬಿತ್ಯಾದಿ ಚಟುವಟಿಕೆಯ ಕೆಲಸಕ್ಕೆ ಹುಡುಗರು ರೆಡಿ ಆಗುತ್ತಾರೆ. ಇನ್ನು ಅಡುಗೆ ಮನೆಯಲ್ಲಿ ತಯಾರಾಗುತ್ತಿರುವ ಜಿಲೇಬಿ, ಚಕ್ಲಿಯ ತಿಂದು ಇನ್ನೇನು ಲೂಟಿ ಮಾಡಬಹದು ಎಂಬ ಹುಡುಕಾಟದಲ್ಲಿ ಚಿಕ್ಕ ಮಕ್ಕಳಿರುತ್ತಾರೆ. ಒರಳು ಕಲ್ಲಿಗೆ ಅರಿಶಿನ ಅಕ್ಕಿ ಇನ್ನಿತರ ವಸ್ತುಗಳನ್ನು ಹಾಕಿ ಕುಟ್ಟಿ ಶುಭ ಕಾರ್ಯಕ್ರಮವನ್ನು ಪ್ರಾರಂಭಿಸುವುದರಿಂದ ಪ್ರಾರಂಭವಾಗುವ ಅನೇಕ ವಿಧಿ ವಿಧಾನಗಳು, ಕೆಲವು ಅಣ್ಣ-ತಮ್ಮ, ಅಕ್ಕ ತಂಗಿಯರ ಗ್ಯಾಂಗ್ ಸೇರಿಕೊಂಡಾಗ ಮಗದಷ್ಟು ರಂಗೇರುತ್ತದೆ. ಊರ ಕರೆಯುವ (ಆಹ್ವಾನಿಸುವ) ಶಾಸ್ತ್ರ, ಅರಿಶಿನ ಶಾಸ್ತ್ರ ವೆಂಬ ಹೋಳಿ ಆಟ, ವರನ ಕಾಶೀ ಯಾತ್ರೆ ಪುರಾಣದ ಹಾಸ್ಯಾಸ್ಪದ ಸಂಭಾಷಣೆಗಳು, ವಧುವರರಿಗೆ ಆರತಿ ಎತ್ತಿ ದುಡ್ಡು ಕೀಳುವ ಮೋಜು,ಊಟದ ಜೊತೆ ಗೊಂದಷ್ಟು ಮನೆಯ ಮೇಲಿನ ಮಾಡು ಹಾರಿ ಹೋಗುವಂತೆ ಪುಂಖಾನುಪುಂಖವಾಗಿ ಕೇಳಿ ಬರುವ ಗ್ರಂಥಗಳು, ಓಕುಳಿಯ ಹೋಳಿ, ಕಡೆಗೆ ಪ್ರಸ್ಥಕ್ಕೆ ಕೋಣೆಯನ್ನು ಸಿಂಗರಿಸಿ ಒಂದಷ್ಟು ಇನಾಮು ಕೇಳಿ ಸತಾಯಿಸುವಲ್ಲಿನವರೆಗೆ ಕಸಿನ್ಸ್ ಗಳ ಪಾತ್ರ ಬಲು ದೊಡ್ಡದು.

ಊರ ಕಡೆಗಿನ ಮದುವೆ ಮನೆಯ ಊಟದಲ್ಲಿ ಒಂದು ವಿಶಿಷ್ಟತೆ ಇರುತ್ತದೆ. ಏಕೆಂದರೆ ಹಳ್ಳಿಗಳಲ್ಲಿ ಊರ ಕಡೆ ಸಿಗುವ ತರಕಾರಿಗಳಲ್ಲಿಯೇ ಪದಾರ್ಥಗಳನ್ನು ಮಾಡಿಸುದರಿಂದ ಹಾಗೂ ಊರ ಕಡೆಗಿನ ಪದಾರ್ಥಗಳ ರುಚಿ ನಮಗೆ ಬಾಲ್ಯದಿಂದಲೂ ಒಗ್ಗಿರುವುದರಿಂದ ಪ್ರತಿಯೊಂದೂ ರುಚಿಕರವೆನಿಸುತ್ತಾರೆ  ಸೀಸನಲ್ ರುಚಿ ಉಪ್ಪಿನಕಾಯಿಗಳು, ರುಚಿಕಟ್ಟಾದ ಸಾರು, ಮಾವಿನಕಾಯಿ ನೀರುಗೊಜ್ಜು, ಹಲಸಿನಕಾಯಿ ಹಪ್ಪಳ, ರಾತ್ರೆಯ ಊಟಕ್ಕೆ ಸೂಜುಮೆಣಸು ಹಾಕಿ ಬೀಸಿದ ಬೀಸುಗೊಜ್ಜು, ಇನ್ನಿತರ ಸಾಂಪ್ರದಾಯಿಕ ಅಡುಗೆಗಳು ನಮ್ಮ ಊರಿನ ಕಡೆಗಿನ ಘಮಲನ್ನು ಮತ್ತಷ್ಟು ಗಟ್ಟಿಗೊಳಿಸುತ್ತದೆ. ಊಟದ ಸಮಯದಲ್ಲಿ ಕುಟುಂಬದವರು ನಿಧಾನಕ್ಕೆ ಊಟ ಸಾಗಲಿ ಎಂದು ಹೇಳಿಕೊಳ್ಳುತ್ತಾ ಪ್ರತಿಯೊಬ್ಬರನ್ನೂ ಮಾತನಾಡಿಸುವ ಬಗೆ ಅತ್ಯಂತ ಆತ್ಮೀಯ ಭಾವವನ್ನು ನೀಡುತ್ತದೆ.

ರಾತ್ರೆಯ ಊಟ ಮುಗಿಯುತ್ತಿದ್ದಂತೆ, ಮದುವೆಯಾಗುತ್ತಿರುವ ಹುಡುಗ ಅಥವಾ ಹುಡುಗಿಯ ಸ್ನೇಹಿತ ಸ್ನೇಹಿತೆಯರ ಕುಹಕಗಳು, ತಮಾಷೆಗಳು, ಅನುಭವಗಳು, ಸಲಹೆಗಳು ಒಂದೆಡೆ ಹರಿಯುತ್ತಿದ್ದರೆ, ಹಗಲಿಡೀ ಸುದ್ದಿ ಹೇಳಿದ್ದರೂ ಇನ್ನೂ ಮುಗಿಯಷ್ಟಿರುವ ಕಥೆಗಳನ್ನು ಹರಟುತ್ತ ಹೆಂಗಸರು ಉದ್ದಕೆ ಹಾಸಿಗೆಗೆ ಒರಗಿ ಹರಟುತ್ತಾರೆ, ತಮ್ಮ ಸುಖ ದುಃಖಗಳನ್ನು ಹೇಳಿಕೊಳ್ಳುತ್ತಾರೆ. ಕೆಲವು ಮನೆಗಳಲ್ಲಿ ಹೊರಗಡೆ ಜಗಲಿಯಲ್ಲಿ ಅಥವಾ ಅಂಗಳದಲ್ಲಿ  ಗಂಡಸರ 'ಇಸ್ಪೀಟು ಮಂಡಲ' ಪ್ರಾರಂಭವಾಗಿರುತ್ತದೆ ;)

ನಮ್ಮ ಈಗಿನ ಮದುವೆ ಕಲ್ಚರ್ ನ್ನು ಗಮನಿಸಿದರೆ, ಚೆನ್ನಾಗಿ ಅಲಂಕಾರ ಮಾಡಿಕೊಂಡು ತಯಾರಾಗಿ ರೆಸೆಪ್ಷನ್ ನ ಉದ್ದ ಕ್ಯೂ ನಲ್ಲಿ ಅರ್ಧ ಗಂಟೆ ನಿಂತು, ಜನರನ್ನು ಮಾತನಾಡಿಸದಿದ್ದರೂ ಪರವಾಗಿಲ್ಲ, ಹಿಂದೆ ಮುಂದೆ ತಿರುಗುತ್ತಿರುವ ಡ್ರೋನ್ ಕ್ಯಾಮೆರಾ, ಫೋಟೋಗ್ರಾಫರ್/ವಿಡಿಯೋಗ್ರಾಫರ್ ಗಳಿಗೆ, ಸಮೂಹ ಸೆಲ್ಫಿಗಳಿಗೆ ಮೂತಿ ಚೂಪ ಮಾಡಿ-ಹಲ್ಲು ಕಿರಿದು ನಮ್ಮ ಹಾಜರಾತಿ ನೀಡಿ, ಅಲ್ಲಿನ ಬಣ್ಣದ ಲೈಟು/ಮ್ಯೂಸಿಕ್  ನ ಥಳುಕು, ಬೃಹತ್ ಮಂಟಪ, ವಿಶಿಷ್ಟ ಅಥಿತಿಗಳು, ಆಭರಣಗಳು ಎಲ್ಲವನ್ನೂ ಕಣ್ಣಗಳ ಮಾಡಿ ನೋಡಿ, ಬಫೆ ಊಟ ಉಂಡು, ಮನೆ ಕಡೆ ಮುಖ ಮಾಡಿ ಹೊರಡುವಾಗ ಊರ ಕಡೆಗಿನ ೪ ದಿವಸಗಳ ಮದ್ವೆ ಮನೆಯ ಗಮ್ಮತ್ತು ಯಾಕೋ ಅತಿಯಾಗಿ ಕಾಡುವುದೆಂತೂ ಹೌದು.


(ಉದಯವಾಣಿ 'ಅವಳು' ಆವೃತ್ತಿಯಲ್ಲಿ ಪ್ರಕಟಿತ )






ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ