ಸೋಮವಾರ, ಆಗಸ್ಟ್ 26, 2019

ಟ್ರೆಕ್ ಟು ಘಾನ್ಗ್ಹರಿಯ

ಟ್ರೆಕಿಂಗ್ ಟೀಮಿನವರನ್ನು ಸೇರಿಕೊಂಡು ಹೃಷಿಕೇಶದಿಂದ ಹೊರಟು, ಜೋಷಿಮಠ ದೇವಪ್ರಾಯಗದ ಮೂಲಕ ಹಾದು, ಸುಧೀರ್ಘ ೧೨.೫ ತಾಸುಗಳ ಘಾಟಿ ರೋಡಿನ ಪ್ರಯಾಣ. ಬೆಂಗಳೂರಿನಿಂದ ಹೊರಡುವಾಗ ನೋಡಿಕೊಂಡ ವೆದರ್ ರಿಪೋರ್ಟ್ ಪ್ರಕಾರ ನಾವು ಟ್ರೆಕ್ ಹೋಗುವ ಸ್ಥಳದಲ್ಲಿ ಎಲ್ಲಾ ದಿನವೂ ಮಳೆ ಎಂದಿತ್ತು. ನಮ್ಮದು ಪೂರಾ ಮಾನ್ಸೂನ್ ಟ್ರೆಕ್ಕೇ ಆಗಲಿಕ್ಕಿದೆ ಎಂದು ಗಟ್ಟಿ ಮನಸ್ಸು ಮಾಡಿಯೇ ಹೊರಟಿದ್ದರಿಂದ, ಆಗಾಗ್ಗೆ ಹನಿಯುತ್ತಿದ್ದ ಜುಮುರು ಮಳೆ, ಒಮ್ಮೊಮ್ಮೆ ಕಗ್ಗತ್ತಲು ಅವರಿಸುವಂತಹ ಮೋಡ ಮತ್ತು ಕೆಲವೊಮ್ಮೆ ಶುಭ್ರ ಬಿಳಿ ಮಂಜಿನ ಮುಸುಕು ಹೀಗೆ ಕ್ಷಣ ಕ್ಷಣಕ್ಕೆ ಬದಲಾಗುತ್ತಿದ್ದ ವಾತಾವರಣ ಕಂಡರೂ ಆತಂಕವೆನಿಸಲಿಲ್ಲ. ಹಿಂದಿ ಸುಲಲಿತವಾದ್ದರಿಂದ ಮಾತುಕತೆಗೆನೂ ತೊಂದರೆಯಾಗಲಿಲ್ಲ. ವಾಹನ ಚಾಲಕ ಶೈಲೇಂದರ್, ಅಲ್ಲಿನ ಭೌಗೋಳಿಕತೆ, ಜನಜೀವನ ಇತ್ಯಾದಿ ಕುರಿತಾಗಿ ಹೊಸ ವಿಷಯಗಳನ್ನು ತಿಳಿಸುತ್ತ, ನಮ್ಮೆಲ್ಲ ಪ್ರಶ್ನೆಗಳಿಗೆ, ಕುತೂಹಲಕ್ಕೆ ಉತ್ಸುಕತೆಯಿಂದಲೇ ಉತ್ತರಿಸುತ್ತ ಹೋಗುತ್ತಿದ್ದರು. ಗಾಡಿಯ ಕಿಟಕಿಯಾಚೆಗಿನ ಪ್ರತಿಯೊಂದು ವಿಹಂಗಮ ನೋಟವೂ ಒಂದೊಂದು ಕಥೆ ಸಾರುವಂತಿತ್ತು. ಮತ್ತವಷ್ಟೂ ಅಗಾಧ ಹಿಮಾಲಯದ ಒಂದು ಸಣ್ಣ ಭಾಗವಷ್ಟೇ ಎಂಬುದು ನಮ್ಮನ್ನು ಮತ್ತಷ್ಟು ಬೆರಗಾಗುವಂತೆ ಮಾಡುತ್ತಿತ್ತು.

ದಿನದ ಕೊನೆಯಲ್ಲಿ ತಲುಪಿದ್ದು ಪಾಂಡುಕೇಶ್ವರ ಎಂಬ ಊರಿಗೆ. ಟ್ರೆಕಿಂಗ್ ಗೈಡ್ಗಳು ತಮ್ಮ ಪರಿಚಯ, ಟ್ರೆಕಿಂಗ್ ಸಮಯದ ಅನುಕೂಲ/ಅನಾನುಕೂಲಗಳು, ಸೌಲಭ್ಯಗಳು, ಟ್ರೆಕಿಂಗ್ ನ ನಿಯಮಗಳು, ಸಮಯದ ಪಾಲನೆ, ಎತ್ತರದ ಸ್ಥಳಕ್ಕೆ ಹೋದಂತೆಯೂ ಬದಲಾಗುವ ಒತ್ತಡಕ್ಕೆ, ದೇಹದ ಸಮತೋಲನ ಕಳೆದುಕೊಳ್ಳದಂತೆ ನೀರು-ಉಸಿರಾಟದ ಕುರಿತೊಂದಷ್ಟು ಮುಖ್ಯ ಮಾಹಿತಿಗಳು, ನಮ್ಮ ಆರೋಗ್ಯ ಸುರಕ್ಷತೆಯ ಕುರಿತಾಗಿ ಕೈಗೊಳ್ಳಬೇಕಾದ ಕ್ರಮಗಳು ಇತ್ಯಾದಿ ವಿಷಯಗಳ ಕುರಿತಾಗಿ ನೀಡಿದ ಮಾಹಿತಿಗಳು ಉಪಯುಕ್ತವಾಗಿದ್ದವು. ೭೨ ವಯಸ್ಸಿನ ಸುಪರ್ಣ ಅಂಕಲ್ ನಿಂದ ಹಿಡಿದು, ೨೩ ವರ್ಷದ ಹುಡುಗ ತುಷಾರ್ ವರೆಗೆ ಸುಮಾರು ಎಲ್ಲ ವಯಸ್ಸಿನವರು ಇದ್ದುದ್ದರಿಂದ ನಮ್ಮ ಟೀಮ್ ಒಂದು ರೀತಿಯಲ್ಲಿ ಆಕರ್ಷಕವೆನಿಸಿತ್ತು. ಬೆರಳಂಚಿಗೆ ಕ್ಲಿಪ್ಪಿಸಬಹುದಾದ ಆಕ್ಸಿಮೀಟರ್ ಮೂಲಕ ನಮ್ಮ ಹಾರ್ಟ್ ರೇಟ್ ಅನ್ನು ಮಾನಿಟರ್ ಮಾಡುವುದು ಅಲ್ಲಿ ನಿತ್ಯಕ್ರಮವಾಗಿತ್ತು. ಹೊಸತಾಗಿ ಏರ್ಪಟ್ಟ ಟ್ರೆಕಿಂಗ್ ಟೀಮ್ ನ ಹೊಸ ಜನರ ಪರಿಚಯ, ಒಂದಷ್ಟು ಮಾತುಕತೆಗಳ ಮುಗಿಸಿ, ರಾತ್ರಿ ವಿಶ್ರಾಂತಿ ಪಡೆದೆವು.

ಎರಡನೆಯ ದಿನ :

ಮರುದಿನ ಬೆಳಿಗ್ಗೆ ೭.೩೦ಗೆ ಎಲ್ಲರೂ ತಿಂಡಿ ಮುಗಿಸಿ ಚಾರಣಕ್ಕೆ ತಯಾರಿರಲು ಆದೇಶವಾಗಿತ್ತು. ಹಿಂದಿನ ದಿನ ತಲುಪುವಾಗ ಕತ್ತಲಾಗಿತ್ತರಿಂದ, ನಮ್ಮ ಸುತ್ತಮುತ್ತಲಿನ ಪರಿಸರ ಹೇಗಿದೆ ಎಂಬ ಸ್ಪಷ್ಟ ನಿಲುವು ಸಿಕ್ಕಿರಲಿಲ್ಲ. ಮರುದಿನ ಬೆಳಿಗ್ಗೆ ಎದ್ದು ರೂಮಿನ ಕಿಟಕಿಯ ಪರದೆ ಸರಿಸಿ ನೋಡಿದರೆ, ಎತ್ತರೆತ್ತರ ಪರ್ವತಗಳ ನಡುವೆ ಅತೀ ತಗ್ಗಿನಲ್ಲಿ, ಕಿರಿದಾಗಿ ನಮ್ಮ ಹೋಟೆಲ್ ನಂತಹ ಬಿಲ್ಡಿಂಗ್ಗಳು..! ತಕ್ಷಣಕ್ಕೆ ಹೊರಬಿದ್ದು ಬಿಲ್ಡಿಂಗ್ ನ ಛಾವಣಿಯ ಮೇಲೆ ನಿಂತು ನೋಡಿದರೆ, ಕತ್ತು ನೇರ ಮಾಡಲು ಸಾಧ್ಯವೇ ಇಲ್ಲದೆ ನೋಡಬೇಕಾದ ಎತ್ತರೆತ್ತರ ಪರ್ವತಗಳು ಮತ್ತು ದೂರದಲ್ಲಿ ಸ್ನೋ ಕ್ಯಾಪ್ಡ್ ಹಿಮಾಲಯನ್ ಮೌಂಟೇನ್ಸ್..!! ನೇಪಾಳಕ್ಕೆ ಪ್ರವಾಸ ಹೋಗಿ ಅನ್ನಪೂರ್ಣ ಹಿಮಾಲಯನ್ ಮೌಂಟೈನ್ಸ್ ನೋಡಿದ್ದೇವಾದರೂ ಇಷ್ಟು ಹತ್ತಿರಕ್ಕೆ.. ಉಂಹೂಂ ಇದೇ ಮೊದಲು.. ನನಗೋ ಜೀವನಚೈತ್ರ ಸಿನಿಮಾದ 'ನಾದಮಯ..' ಹಾಡಿನ ಡಾ| ರಾಜಕುಮಾರ ನ ಹಾಗೆ ಎಲ್ಲವೂ ವಿಸ್ಮಯದಂತೆ ಕಾಣುತ್ತಿತ್ತು.. (ಓವರ್ ಆಯ್ತು, ಆದ್ರೆ ಮೊದಲ ಸಲದ ಅನುಭವವಾದ್ದರಿಂದ ಹಾಗೇ ಅನ್ನಿಸಿತ್ತು :D ಹಾಡೂ ಗುನುಗಿಕೊಂಡಿದ್ದೆ :P ).ಮಾರ್ನಿಂಗ್ ಗ್ರೀನ್ ಟೀ, ಬ್ರೆಕ್ಫಾಸ್ಟ್ ಮತ್ತು ಚಹಾ ಎಲ್ಲವಕ್ಕೂ ಟೈಮಿಂಗ್ಸ್ ಹಿಂದಿನ ದಿನವೇ ನೀಡಲಾಗುತ್ತದೆ. ಕಟ್ಟುನಿಟ್ಟಾಗಿ ಆ ಸಮಯಕ್ಕೆ ಹೋಗಲೇ ಬೇಕು. ಕಾರಣ ಕೂಡ ಸಮಂಜಸ. ಅಲ್ಲಿ ಚಹಾ ಇಟ್ಟ 2 ನಿಮಿಷಕ್ಕೆ ಅಲ್ಲಿಯ ಚಳಿಗೆ ತಣ್ಣಗಾಗಿ ಹೋಗಿರುತ್ತದೆ. ಎಲ್ಲರೂ ಉತ್ಸಾಹದಿಂದ ಎದ್ದು ಚಾರಣಕ್ಕೆ ತಯಾರಾಗಿ ಉಳಿದುಕೊಂಡಿದ್ದ ಪಾಂಡುಕೇಶ್ವರ ಹೋಟೆಲ್ನಿಂದ ಗೋವಿಂದ್ಘಾಟ್ ಗೆ ಪ್ರಯಾಣ ಬೆಳೆಸಿದೆವು. ಗೋವಿಂದ್ಘಾಟ್ ಇಂದ ಬೇಸ್ ಕ್ಯಾಮ್ಪ್ ಸ್ಥಳ ಘಾನ್ಗ್ಹರಿಯಕ್ಕೆ ಚಾರಣದ ಹಾದಿ ಒಟ್ಟು ೧೪ ಕಿಲೋ ಮೀಟರುಗಳು. ಆದರೆ ೨೦೧೩ ರ ಪ್ರವಾಹದ ನಂತರ ಜರ್ಜರಿತಗೊಂಡಿದ್ದ ಕೆಲವು ಸ್ಥಳಗಳ ಮರುನಿರ್ಮಾಣದಹಂತದಲ್ಲಿ ಹೊಸತಾಗಿ ಸ್ವಲ್ಪ ದೂರ ರಸ್ತೆಯನ್ನು ಮಾಡಿದ್ದಾರೆ. ಹಾಗಾಗಿ ಗೋವಿಂದ್ಘಾಟಿನಿಂದ ಹೊರಟು ಸಿಗುವ ಮೊದಲ ಪುಟ್ಟ ಹಳ್ಳಿ ಪುಲ್ನ ವರೆಗೆ ವಾಹನದಲ್ಲಿ ನಮ್ಮನ್ನು ಕರೆದೊಯ್ಯುತ್ತಾರೆ. ಈ ಪ್ರದೇಶಗಳ ಎತ್ತರವನ್ನು ತಿಳಿಸಬೇಕೆಂದರೆ, ಸಮುದ್ರ ಮಟ್ಟಕ್ಕಿಂತ ನಾನು ವಾಸಿಸುವ ಬೆಂಗಳೂರು ಪ್ರದೇಶ ೩೦೦೦ ಅಡಿ ಎತ್ತರದಲ್ಲಿದೆ. ಇದು ಭಾರತದ ಅನೇಕ ಮುಖ್ಯ ಪಟ್ಟಣಗಳಿಗೆ ಹೋಲಿಸಿದರೆ, ಎಲ್ಲದಕ್ಕಿಂತ ಎತ್ತರದಲ್ಲಿದೆ. ಇನ್ನು ಗೋವಿಂದ ಘಾಟ್ ನ ಎತ್ತರ ೫೫೦೦ ಅಡಿ ಮತ್ತು ನಾವು ತಲುಪಬೇಕಿರುವ ಗಾಂಗ್ರಿಯ ಊರಿರುವುದು, ಸಮುದ್ರ ಮಟ್ಟಕ್ಕಿಂತ ೧೦೨೦೦ ಅಡಿಗಳಷ್ಟು ಮೇಲೆ. ಅಲ್ಲಿಗೆ ನಮ್ಮ ಅಂದಿನ ಚಾರಣ, ೫೦೦೦ ಅಡಿಗಳಷ್ಟು ಎತ್ತರಕ್ಕೆ ಕಡಿದಾದ ಬೆಟ್ಟಗಳ ನಡುವೆ ೧೦ ಕಿಲೋ ಮೀಟರ್ಗಳ ಚಾರಣ, ಕನಿಷ್ಠ ಆರು ತಾಸುಗಳ ನಡಿಗೆ! ಇದರ ಜೊತೆಗೆ ಮಳೆಯ ವೈಪರೀತ್ಯ ವಾತಾವರಣ, ಕಡಿದಾದ ಜಾರಿಕೆಯ ಕಲ್ಲಿನ ಹಾದಿ  ಯಾವುದೂ ಕೂಡ ನಮಗಿದು ಅನಿರೀಕ್ಷಿತ ಎಂದು ಹೇಳಿಕೊಳ್ಳುವಂತಿಲ್ಲ. ಎಲ್ಲವಕ್ಕೂ ತಯಾರಾಗಿಯೇ ಹೊರಡಬೇಕು. ಇದು ಕೇವಲ ಪ್ರವಾಸೀ ಪ್ರಕೃತಿ ತಾಣವಾಗಿ, ನೈಸರ್ಗಿಕ ಸೌಂದರ್ಯ ಸಿರಿಯನ್ನು ಆಹ್ಲಾದಿಸಲು ಚಾರಣಿಗರ ಮುಖ್ಯ ಆಕರ್ಷಣೆಯಾಗಿ ಮಾತ್ರವಲ್ಲ. ಹೇಮಕುಂಡ ಸಾಹಿಬ್ ಎಂಬ ಸಿಖ್ ಧರ್ಮದವರ ಅತ್ಯಂತ ಪವಿತ್ರವಾದ ತೀರ್ಥ ಯಾತ್ರಾ ಕೇಂದ್ರಕ್ಕೂ ಇದೇ ಚಾರಣ ಹಾದಿಯಾದ್ದರಿಂದ ಅಪಾರ ಸಂಖ್ಯೆಯಲ್ಲಿ ದಿನನಿತ್ಯ ಪ್ರವಾಸಿಗರ ಓಡಾಟವಿರುತ್ತದೆ.

ಹೇಮಕುಂಡ್ ತೀರ್ಥ ಯಾತ್ರಾ ಸ್ಥಳ, ವ್ಯಾಲಿ ಆಫ್ ಪ್ಲಾವರ್ಸ್ ಗಳ ಸೊಬಗನ್ನು ಸವಿಯಲು ಸಾಧ್ಯವಾಗುವುದೇ ವರ್ಷದಲ್ಲಿ, ಜೂನ್ ನಿಂದ ಅಕ್ಟೊಬರ್ ವರೆಗಿನ ಆರು ತಿಂಗಳುಗಳು. ಉಳಿದ ಆರು ತಿಂಗಳುಗಳು ಅದು ಸಂಪೂರ್ಣ ಹಿಮಚ್ಛಾದಿತ ಪ್ರದೇಶವಾಗಿ ಈ ಎಲ್ಲ ಸ್ಥಳಗಳಲ್ಲಿ ಜನರ ಪ್ರವಾಸವನ್ನು, ಓಡಾಟವನ್ನು ನಿಷೇದಿಸಲಾಗುತ್ತದೆ. ಮೋಟಾರು ವಾಹನದ ಸೇವೆ ಕೊನೆಯಾಗಿ, ಕಾಲ್ನಡಿಗೆ ಪುಲ್ನ ದಿಂದಲೇ ಪ್ರಾರಂಭವಾಗುವುದರಿಂದ, ಅಲ್ಲಿಂದಲೇ ಅನೇಕ ಚಹಾ ಮತ್ತು ತಿನ್ನುವ ಆಹಾರ, ತಿಂಡಿ ಪೊಟ್ಟಣಗಳ ಅಂಗಡಿಗಳ ಸಾಲು ಸರತಿ ಸಿಗುತ್ತವೆ. ಚಾರಣಕ್ಕೆ ಬೇಕಾಗುವ ಊರುಗೋಲು ಕೂಡ ಅಲ್ಲಿಯೇ ಲಭ್ಯವಿರುತ್ತದೆ. ಪ್ರವಾಹಕ್ಕೂ ಮುಂಚೆ, ಕಾಲ್ನಡಿಗೆಯ ಈ ಹಾದಿ ಸಾಕಷ್ಟು ದುರ್ಗಮವಾಗಿಯೂ, ಮತ್ತಷ್ಟು ಕಡಿದಾಗಿಯೂ ಇತ್ತೆಂದು ನಮ್ಮ ಗೈಡ್ ನಿಂದ ತಿಳಿದ ಮಾಹಿತಿ.  ಈಗಲೂ ಕೂಡ ಮಳೆಯ ರಭಸಕ್ಕೆ ಯಾವ ಸಮಯಕ್ಕೆ ಯಾವ ಬೆಟ್ಟಗಳಿಂದ ಭೂಕುಸಿದು, ಕಲ್ಲು ಬಂಡೆಗಳು ಉದುರುತ್ತವೆ ಎಂಬುದನ್ನು ಊಹಿಸಲಾಗದು ಎಂದೂ ಕೂಡ ಸೇರಿಸುವುದನ್ನು ಅವರು ಮರೆಯುವುದಿಲ್ಲ. ಚಾರಣ ಹವ್ಯಾಸ ಅಥವಾ ಹರಕೆಯ ಮೇರೆಗೆ ಕಾಲ್ನಡಿಗೆಯಲ್ಲಿ ನಡೆಯುವ ಜನರ ಹೊರತಾಗಿ, ಚಾರಣ ಮಾಡಲಾಗದವರು, ಮಕ್ಕಳೊಡನೆ ಕುಟುಂಬ ಸಮೇತವಾಗಿ ಗುರುದ್ವಾರಕ್ಕೆ ಭೇಟಿ ನೀಡುವವರು, ಹೀಗೆ ಬರುವ ಪ್ರವಾಸಿಗರಿಗೆಂದೇ ಇಲ್ಲಿ ಮ್ಯೂಲ್ ಗಳು ಲಭ್ಯ. ಹೇಸರಗತ್ತೆಗಳೇ ಇಲ್ಲಿನ ಮುಖ್ಯ ಸಾರಿಗೆ ಎನ್ನಬಹುದು. ಹೇಸರಗತ್ತೆಗಳು ಕುದುರೆಯ ಜಾತಿಗೆ ಸೇರಿದ್ದವಾದ್ದರಿಂದ ಓಟದಲ್ಲಿ ರಭಸವಿರುವಂತಹ ಪ್ರಾಣಿಗಳು. ಇದರ ಜೊತೆಯಲ್ಲಿ ಹೆಸರಗತ್ತೆಗಳ ಜೀರ್ಣಾಂಗ ವ್ಯೂಹ ಪ್ರಕ್ರಿಯೆ ಬೇರೆ ಪ್ರಾಣಿಗಳಿಗಿಂತ ಭಿನ್ನವಾಗಿದ್ದು, ಇವು ಸಾಕಷ್ಟು ಬಗೆಯ ಸಸ್ಯರಾಶಿಯ ತಿಂದು ಬದುಕಬಲ್ಲವು.. ಎಂದು ಎಲ್ಲೋ ಓದಿದ್ದ ನೆನಪು.. ಹಾಗಾಗಿಯೇ ಇಲ್ಲಿ ಹೆಸರಗತ್ತೆಗಳ ಬಳಕೆ ಹೆಚ್ಚಿರಬಹುದೆಂದು ಊಹಿಸಿದೆ..ಆರು ತಿಂಗಳು ಪ್ರವಾಸೋದ್ಯಮಕ್ಕಾಗಿ ತೆರೆಯಲ್ಪಡುವ ಈ ಜಾಗದ ಸಾರಿಗೆ ವ್ಯವಸ್ಥೆಯ ಬಳಕೆಯಿಂದ ಹಿಡಿದು, ಬೆಸ್ಕ್ಯಾಮ್ಪ್ ಘಾನ್ಗ್ಹರಿಯ ಊರಿಗೆ ಗ್ಯಾಸ್ ಸಿಲಿಂಡರ್ ನಿಂದ ಹಿಡಿದು ಪ್ರತಿಯೊಂದು ಸರಕು ಸರಂಜಾಮುಗಳನ್ನು ಸಾಗಿಸಲು ಕೂಡ ಈ ಮ್ಯೂಲ್ ಗಳೇ ಅವಲಂಭಿತ ವ್ಯವಸ್ಥೆ. ಪ್ರವಾಸದ ಸೀಸನ್ನಿನಲ್ಲೆಂತೂ ಈ ಹೇಸರಗತ್ತೆ ಸವಾರಿಯ ಮೂಲಕ ಸಾಧ್ಯವಾದಷ್ಟು ಸಂಪಾದನೆಯಾಗಲೆಂದು ನಿಯಂತ್ರಕ ಮಾಲಿಗಳು ಸಾಕಷ್ಟು ಚುರುಕಿನಿಂದ ಬೇಸ್ ಕ್ಯಾಮ್ಪ್ ವರೆಗೆ ದಿನಕ್ಕೆ ಸಾಕಷ್ಟು ಟ್ರಿಪ್ಸ್ ಹೊಡೆಯುತ್ತಾರೆ. ನಾವು ಚಾರಣ ಮಾಡುವಾಗ ಬೆಟ್ಟದ ದಿಬ್ಬದ ಬದಿಯಲ್ಲಿಯೇ ನಡೆಯುತ್ತಾ ಸಾಗಬೇಕು. ಏಕೆಂದರೆ ಹೆಸರಗತ್ತೆ ಯನ್ನು ಕೆಳಗೆ ಇಳಿಸಿಕೊಂಡು ಬರುವಾಗ ಅವುಗಳ ವೇಗ ಸಾಕಷ್ಟಿದ್ದು ದಾರಿಯ ಗೊಂದಲ ಹೆಚ್ಚಿರುತ್ತದೆ. ಇದರ ಜೊತೆಗೆ ಇಲ್ಲಿನ ಮತ್ತೊಂದು ಮುಖ್ಯ ಸಾರಿಗೆ ಎಂದರೆ ಪೋರ್ಟರ್ಸ್ ಗಳು. ಇದು ಇಲ್ಲಿನ ಹಲವು ನಿವಾಸಿಗಳ ಆದಾಯದ ಮೂಲವಾದ್ದರಿಂದ, ಬುಟ್ಟಿಯ ಮಾದರಿಯ ಸೀಟಿನಲ್ಲಿ ಕೂರಿಸಿಕೊಂಡು ತಮ್ಮ ಬೆನ್ನ ಮೇಲೆ ಹೊತ್ತು ನಡೆಯುವ ಅನೇಕ ಪೋರ್ಟರ್ಸ್ಗಗಳ ಹೋರಾಟದ ಬದುಕು ಸಾಗುತ್ತದೆ. ಇವುಗಳ ಹೊರತಾಗಿ ಇತ್ತೀಚಿಗಷ್ಟೇ ಕೆಲವು ಸಮಯದಿಂದ ಪ್ರಾರಂಭವಾದ ಛಾಪೆರ್ ಅಥವಾ ಹೆಲಿಕಾಪ್ಟರ್ ನ ವಾಯುಮಾರ್ಗದ ಸೌಲಭ್ಯ ಪ್ರವಾಸಿಗರಿಗೆ ಮತ್ತೊಂದು ಪೂರಕ ವ್ಯವಸ್ಥೆ. ಗೋವಿಂದ್ ಘಾಟ್ ನಿಂದ ಬೇಸ್ ಕ್ಯಾಮ್ಪ್ ಊರು ಘಾನ್ಗ್ಹರಿಯ ವರೆಗೆ ಹೆಲಿಕಾಪ್ಟರ್ ಮೂಲಕ ಸಾಗಬಹುದಾದರೂ ಈ ಸೌಲಭ್ಯ ಮಾತ್ರ ಸಂಪೂರ್ಣ ಹವಾಮಾನದ ಮೇಲೆ ಅವಲಂಭಿತ. ಇವೆಲ್ಲವನ್ನು ಗಮನಿಸುತ್ತಾ ನಮ್ಮ ಟ್ರೆಕಿಂಗ್ ಅಲ್ಲಿಂದ ಪ್ರಾರಂಭವಾಯಿತು.

ಅಂದು ನಮ್ಮ ಅದೃಷ್ಟಕ್ಕೆ ಮಳೆ ಬಿಡುವು ಕೊಟ್ಟಿತ್ತು.  ಎಳೆ ಬಿಸಿಲಿಗೆ ಖುಷಿಯಿಂದ ಕಣ್ಣೆತ್ತಿ ಎದುರಿಗಿದ್ದ ಆಗಸದವರೆಗೆ ಚಾಚಿಕೊಂಡ ಶಿಖರಗಳನ್ನೊಮ್ಮೆ ನೋಡಿ, ಅದರಲ್ಲಿ ಕಡಿದು ಮಾಡಿರುವ ಚಾರಣದ ಪ್ರಾರಂಭದ ಹಾದಿಯನ್ನು ಹಿಡಿದೆವು. ಕಲ್ಲುಗಳನ್ನು ಜೋಡಿಸಿ ಎತ್ತರೆತ್ತರ ಮೆಟ್ಟಿಲುಗಳ ಮಾದರಿಯಲ್ಲಿ ಸುಮಾರಷ್ಟು ಸ್ಪಷ್ಟ ಚಾರಣದ ಹಾದಿಯನ್ನು ನಿರ್ಮಿಸಿರುವುದು  ಪ್ರಶಂಸನೀಯ. ದಾರಿಯುದ್ದಕ್ಕೂ  ನಮ್ಮಂತೆಯೇ ಟ್ರೆಕಿಂಗ್ ಗೆ ಸಾಕಷ್ಟು ತಂಡಗಳು ಸಿಗುತ್ತಿದ್ದವು. ಕನ್ನಡಿಗರು ಸಿಕ್ಕಾಗ ಖುಷಿ.. ಹಿಮ ಕರಗಿ ಹರಿಯುವ ನೀರೇ ಇಲ್ಲಿನ ಮಿನರಲ್ ವಾಟರ್. ಅಲ್ಲಲ್ಲಿ ನಲ್ಲಿಗಳನ್ನಿಟ್ಟು ಚಾರಣಿಗರಿಗೆ ನೀರು ತುಂಬಿಸಿಕೊಳ್ಳುವ ವ್ಯವಸ್ಥೆ, ಮ್ಯೂಲ್ ಗಳಿಗೆ ಕುಡಿಯುವ ನೀರಿನ ತೊಟ್ಟಿ, ಚಾರಣದ ದಾರಿಯ ಬದಿಯಲ್ಲಿ ವಿಶ್ರಮಿಸುವ ಕಟ್ಟೆ, ಕಂಡಕಂಡಲ್ಲಿ ಅಂಗಡಿಗಳನ್ನು ಇಡಲು ಅವಕಾಶ ನೀಡದೆ, ದಾರಿಯಲ್ಲಿ ಸಿಕ್ಕುವ ಪುಟ್ಟ ಪುಟ್ಟ ಊರುಗಳಲ್ಲಷ್ಟೇ  ಊಟ ತಿಂಡಿ, ಪೇಯಗಳ ಅಂಗಡಿಗಳಿರುವುದು ವ್ಯವಸ್ಥಿತವೆನಿಸಿತು. ಪ್ರವಾಸೋದ್ಯಮವೇ ಇಲ್ಲಿನ ಜೀವಾಳವಾಗಿರುವುದರಿಂದ, ಈ ಪ್ರದೇಶಗಳ ಸ್ವಚ್ಛತೆಯನ್ನು ಕಾಪಾಡಿಕೊಳ್ಳಲು ಸಾಕಷ್ಟು ವ್ಯವಸ್ಥೆಯನ್ನು ಮಾಡಿದ್ದಾರೆ. ಅತಿ ಮುಖ್ಯವಾಗಿ, ಹೇಸರಗತ್ತೆಯ ಓಡಾಟ ಹೆಚ್ಚಿರುವಿದರಿಂದ ಅದರ  ಹೊಲಸನ್ನು ನಿಯಮಿತವಾಗಿ ಸ್ವಚ್ಛಗೊಳಿಸಬೇಕಾಗುತ್ತದೆ. ಅದಕ್ಕಿಂತಲೂ ಹೊಲಸಾದ, ಮನುಷ್ಯನೆಂಬ ಜೀವಿ ಕಂಡ ಕಂಡಲ್ಲಿ ಎಸೆಯುವ ಪ್ಲಾಸ್ಟಿಕ್ ಮತ್ತು ಇನ್ನಿತರ ಕಸಗಳನ್ನು ನಿಯಮಿತವಾಗಿ ಸ್ವಚ್ಛಗೊಳಿಸಲೆಂದೇ ಭರಪೂರ ಕಾರ್ಮಿಕರಿದ್ದಾರೆ. ಬೆಳಗ್ಗಿನಿಂದ ಸಂಜೆಯವರೆಗೆ ಪಾಳಿಯಲ್ಲಿ ಕಾರ್ಮಿಕರು ಚಾರಣ ಹಾದಿಯನ್ನು ನಿರಂತರವಾಗಿ ಸ್ವಚ್ಛಗೊಳಿಸುತ್ತಲೇ ಇರುತ್ತಾರೆ. ತಮಗೇನಾದರೂ ತಿನ್ನಲು ಸಿಗುವುದೇನೋ ಎಂಬಾಸೆಯಿಂದ ಯಾತ್ರಾರ್ಥಿಗಳಲ್ಲಿ ಆಹಾರವಿದ್ದರೆ ನೀಡಿ ಎಂದು ಒಮ್ಮೊಮ್ಮೆ ಬೇಡುವುದಿದೆ..

ಚಾರಣ ಹೊರಟ ಶುರುವಿನ ಮೊದಲ ಮೂರು ಕಿಲೋಮೀಟರ್ಗಳೇ ಸಾಕಷ್ಟು ಕಠಿಣವಾದ ಹಾದಿ. ನೋಡಲು ಮಾತ್ರ ಸುಲಭದ ಹಾದಿಯೆನಿಸಿದರೂ ಹತ್ತುವಾಗ ದೊಡ್ಡ ದೊಡ್ಡ ಎತ್ತರದ ಕಲ್ಲಿನ ಹಾಸುಗಳನ್ನು ಏರಬೇಕಾಗುವುದು. ಈ ಚಾರಣ ನನಗೆ ಮೊದಲ ಅನುಭವ. ಶುರುವಿನಲ್ಲಿ ಎತ್ತರೆತ್ತರದ ಮೆಟ್ಟಿಲುಗಳ ಮಾದರಿಯ ಹಾದಿಯನ್ನು ಏರಲು, ಬಿರುಸಿನ ಉಸಿರಾಟಕ್ಕೆ ಅಡ್ಜಸ್ಟ್ ಆಗಲು  ದೇಹಕ್ಕೆ ಸ್ವಲ್ಪ ಕಾಲಾವಕಾಶ ಹಿಡಿಯಿತು. ನಿಯಮಿತ ವ್ಯಾಯಾಮ, ಹೆಚ್ಚು ನೀರು ಕುಡಿಯುವ ಅಭ್ಯಾಸ, ಚಾರಣಕ್ಕೆ ಉಪಯುಕ್ತ ಟಿಪ್ಸ್ ನೀಡಿದ ಸ್ನೇಹಿತ ದಿನೇಶ್ ಮನೀರ್ ತಿಳಿಸಿದಂತೆ, ಮೆಟ್ಟಿಲುಗಳ ಹತ್ತಿ ಇಳಿಯುವ ವ್ಯಾಯಾಮ ಪ್ರತಿನಿತ್ಯ ಮಾಡಿ ದೇಹ ತಯಾರು ಮಾಡಿಕೊಂಡಿದ್ದು ವೈಯುಕ್ತಿಕವಾಗಿ ನನಗೆ ಸಾಕಷ್ಟು ಉಪಯುಕ್ತವಾಯಿತು. ಬೆಟ್ಟಗಳಿಂದ ಸುತ್ತುವರಿದ ಪರಿಸರ, ಬೆಟ್ಟಗಳ ಮಧ್ಯದಿಂದ ಹಿಮ ಕರಗಿ ಬೆಟ್ಟದಿಂದ ಧರೆಗಿಳಿಯುತ್ತಿರುವ ಬೆಳ್ಳನೆಯ ಜಲಪಾತ,  ಕ್ಷಣಕ್ಷಣಕ್ಕೆ ಬದಲಾಗುವ ಮೋಡಗಳ ಸಾಲುಗಳು, ಗಿಡಗಂಟಿಗಳಲ್ಲಿನ ಸಣ್ಣ ಸಣ್ಣ ಹೂಗಳು, ದೂರದಲ್ಲಿ ಗೋಚರಿಸುವ ಹಿಮದ ಟೊಪ್ಪಿಗೆ ಹೊದ್ದ ಶಿಖರಗಳನ್ನು ನಿಂತು ನೋಡುವ ಪ್ರವಾಸಿಗರ ಬೆರಗು ಕಣ್ಣುಗಳು, ಸಂಗಡಿಗರ ಜೋಕು ನಗು ತಮಾಷೆಗಳು, ಪಕ್ಕದಲ್ಲಿ ಹರಿಯುವ ಹಿಮನದಿಯ ಜುಳುಜುಳು ಶಬ್ದ, ವೃದ್ದಾಪ್ಯದ ತುದಿಯಲ್ಲಿದ್ದರೂ ನಂಬಿದ ದೈವವನ್ನೊಮ್ಮೆ ಕಂಡು ಸೇವೆ ಮಾಡಿ ಬರಬೇಕೆಂದು ಕಾಲ್ನಡಿಗೆಯಲ್ಲಿ ಹತ್ತುತ್ತಿರುವ ಹಿರಿಯ ಜೀವ, ಶ್ರದ್ದೆಯಿಂದ ಕಲ್ಲಿನ ಅಂಚಂಚಿನ ಹಾಸುಗಳಿಂದಲೂ ಕಸವನ್ನು ಬಗೆದು ಸ್ವಚ್ಛಗೊಳಿಸುವ ಮಾಲಿಗಳು, ಬೆನ್ನು ಮುರಿಯುವಂತಹ ಭಾರದ ಹುಲ್ಲಿನ ಹೊರೆ ಬೆನ್ನ ಮೇಲಿದ್ದರೂ ಅಲ್ಲಿನ ಸ್ಥಳೀಯ ಹೆಣ್ಣುಮಕ್ಕಳ ಆ ಹೊಳೆಯುವ ಕಣ್ಣುಗಳು. ಕಣ್ಣುಗಳನ್ನೂ ಕೂಡ ಹೊರಳಿಸದಂತೆ ತನ್ನ ಬೆನ್ನ ಮೇಲಿರುವುದನ್ನು ಹೊತ್ತು ನಡೆಯುವುದು ತಮ್ಮ ಕರ್ತವ್ಯವೆಂಬಂತೆ ಹತ್ತುವ ಮೂಕ ಪ್ರಾಣಿಗಳು, ಮಧ್ಯೆ ಮಧ್ಯೆ ಸಿಗುವ ಪುಟ್ಟ ಪುಟ್ಟ ಊರು, ತಲೆಯ ಮೇಲೆ ಹಸಿರ ಮರಗಳ ಸೂರು..ಹೀಗೆ 'ಕಳೆದು ಹೋದ ಅನುಭವ'ದ ಮಧ್ಯೆ ನಮ್ಮ ಕಾಲ್ನಡಿಗೆ ನಡೆಯುವುದರಿಂದ ಚಾರಣದ ಕಠಿಣತೆಯಾಗಲಿ, ದೈಹಿಕ ಸುಸ್ತಾಗಲಿ ಒಂದೂ ನಮ್ಮ ಗಮನಕ್ಕೆ ಸಿಗುವುದೇ ಇಲ್ಲ!! ಕಾರಣವಿಲ್ಲದೇ ಕಂಡಿದ್ದೆಲ್ಲವೂ ಆಪ್ತವೆನಿಸುತ್ತ ಹೋಗುತ್ತದೆ..ಪರಿಚಯವೇ ಇಲ್ಲದ ಊರಿನೊಂದಿಗೆ ಅನುಬಂಧವನ್ನುವನ್ನು ಹೊಂದುವುದು ಎಂದರೆ ಇದೇ ಇರಬೇಕು. ನನ್ನ ಕೇಳಿದರೆ, ಚಾರಣದ ದಣಿವನ್ನು ಮೀರಿ ಪ್ರಕೃತಿಯ ಜೊತೆಗಿನ ನಿಕಟವಾದ ಒಡನಾಟದ ಅನುಭವವನ್ನು ಪಡೆದೆ ಎಂದು ಹೇಳುತ್ತೇನೆ.. 😊 

ಈ ಹಿಮಾಲಯನ್ ಬೆಟ್ಟಗಳಲ್ಲಿ ಸಾಕಷ್ಟು ಸಸ್ಯರಾಶಿಯನ್ನು ಕಾಣಬಹುದು. ಅವೆಷ್ಟು ಜಾತಿಯ ಹೂಗಳ ಸಸ್ಯಗಳಿದ್ದಾವೋ ಲೆಕ್ಕವಿಲ್ಲ. ಅನೇಕ ಔಷಧೀಯ ಗುಣಗಳುಳ್ಳ ವಿಶಿಷ್ಟ ಗಿಡ ಮರಗಳು ಅಲ್ಲಿವೆ. ಸೀಸನ್ನಿನ  ಹಣ್ಣಿನ ರಸವನ್ನು ತೆಗೆದಿಟ್ಟು ವರ್ಷವಿಡೀ ಜ್ಯುಸ್ ಸಿರಪ್ ನಂತೆ ಬಳಸುವ ಅವರ ಕ್ರಮಗಳು, ತೊಗಟೆಯಿಂದ ತಾಳೆಗರಿಯಂತಹ ಬರವಣಿಗೆಯ ಪೇಪರ್ ಅನ್ನು ಮಾಡಬಹುದಾದ ಒಂದು ವಿಶಿಷ್ಟ ಜಾತಿಯ ಮರ ಹೀಗೆ ಅನೇಕ ಆಸಕ್ತಿದಾಯಕ ವಿಷಯಗಳು ಇತ್ಯಾದಿ ಅಲ್ಲಿನ ಸಸ್ಯ ಮತ್ತು ಪ್ರಾಣಿ ಸಂಕುಲಗಳ ಕುರಿತಾಗಿ ಸಾಕಷ್ಟು ವಿಷಯಗಳು ನಮ್ಮ ಟ್ರೆಕಿಂಗ್ ಗೈಡ್ ತಿಳಿಸುತ್ತ ಹೋದರು. ನಮ್ಮಲ್ಲಿ ಬಳಸುವ ಒಂದೆಲಗದ (ಬ್ರಾಹ್ಮೀ) ಸೊಪ್ಪಿನ ವಿಶಿಷ್ಟತೆ ಅಲ್ಲಿನ ಜನರಿಗೆ ಇನ್ನೂ ಪರಿಚಯವಿಲ್ಲ. ಇಲ್ಲಿ ಬೆಂಗಳೂರಿನ ಮನೆಯ ಪಾಟಿನಲ್ಲಿ ಗಿಡ ನೆಟ್ಟು, ಗೊಬ್ಬರ ನೀರು ಕೊಟ್ಟು, ಮಾತನಾಡಿಸಿ ಹೇಳಿಕೇಳಿ ಮಾಡಿ, ಕಡೆಗೂ ಒಂದು ಹೊಸ ಕುಡಿ ಒಡೆದು ನಿಂತಾಗ ಸಂಭ್ರಮಿಸೋ ಸೋರಲೇ ಸೊಪ್ಪು ಅಲ್ಲಿ  ಸಹಸ್ರ ಸಂಖ್ಯೆಯಲ್ಲಿ ಬೆಳೆದುಕೊಂಡಿರುವ ಒಂದು 'ಕಾಡು ಸಸ್ಯ' ಎಂದು ನೋಡುವಾಗ ಏನೋ ಒಂತರ ಖುಷಿ ಮತ್ತು ದಿಗ್ಬ್ರಮೆ! ಒಂದು ಕ್ಷಣಕ್ಕೆ ಚಟ್ನೆ ತಂಬುಳಿ ಎಲ್ಲವನ್ನೂ ಮನಸಾರೆ ನೆನೆದುಕೊಂಡು ಮುಂದಕ್ಕೆ ಸಾಗಿದ್ದಾಯಿತು.. ನಡೆಯುವಾಗ, ಹೇಮಕುಂಡಕ್ಕೆ ಹೋಗುವ ಸಿಖ್ ಧರ್ಮದ ಯಾತ್ರಿಗಳು ಹಾದಿಯುದ್ದಕ್ಕೊ "ವಾಹೇ ಗುರು ಜೀ ಸತ್ ಸ್ರೀ ಅಕಾಲ್ "ಎಂಬ ಜಯ ಘೋಷ ದೊಂದಿಗೆ ಜಪಿಸುತ್ತ ಹೋಗುವುದು ನಮ್ಮಲ್ಲೂ ಕೂಡ ಒಂದು ರೀತಿಯ ಧನಾತ್ಮಕ ಶಕ್ತಿಯನ್ನು ನೀಡುತ್ತಿತ್ತು. ವ್ಯಾಲಿ ಆಫ್ ಪ್ಲಾವರ್ಸ್ ಪರ್ವತ ಶ್ರೇಣಿಗಳಿಂದ ಹಿಮ ಕರಗಿ ನೀರಾಗಿ ನಿರ್ಮಾಣವಾಗುವ ಪುಷ್ಪವತಿ ನದಿ, ಭ್ಯೂನ್ದರ್ ಗಂಗಾ ಎಂಬ ಇನ್ನೊಂದು ಉಪನದಿಯ ಜೊತೆ ಸೇರಿಕೊಂಡು ಲಕ್ಷ್ಮಣ ಗಂಗಾ ಎಂಬ ಹೆಸರಿನಲ್ಲಿ ಹರಿಯುತ್ತದೆ. ಚಾರಣದ ಹಾದಿಯಲ್ಲಿ ಸಿಗುವ ಭ್ಯೂನ್ದರ್ ಹಳ್ಳಿಯ ಬಳಿ ಹೀಗೆ ಕರಗಿ ನೀರಾಗಿ ನಿರ್ಮಾಣಗೊಂಡ ಝರಿಯು ನಮ್ಮ ಕಾಲುಬುಡಕ್ಕೆ ಹರಿಯುವುತ್ತದೆ. ಆ ಕೊರೆವ ತಣ್ಣನೆಯ ಶುಭ್ರ ಸ್ವಚ್ಛ, ಖನಿಜಯುಕ್ತ ರುಚಿಕರ ನೀರನ್ನು ಕುಡಿದು ಅನುಭವಿಸುವ ಸುಖವೇ ಬೇರೆ!! ಒಮ್ಮೊಮ್ಮೆ ಹೀಗೆ ಬಂದು ಹಾಗೆ ಹೋಗುವ ಜಿನುಗು ಮಳೆ, ಮರುಕ್ಷಣಕ್ಕೆ ಬಿಸಿಲ ಹೊಳಪು, ಮತ್ತಷ್ಟು ಮಗದಷ್ಟು ಅಲ್ಲಿನ ಸೌಂದರ್ಯವನ್ನೆನ್ನೋ ಹೆಚ್ಚಿಸುತ್ತಿತ್ತು. ಆದರೆ ಮೇಲೇರಿದಂತೆ ವಾತಾವರಣಕ್ಕೆ ತಕ್ಕಂತೆ ಚಳಿಯೂ ಕೂಡ ಹೆಚ್ಚುತ್ತಾ ಹೋಗುತ್ತಿತ್ತು. ಹಾದಿ ಕಠಿಣವಾದಂತೆಯೂ ಪದೇ ಪದೇ ನೀರಿನ ಗುಟುಕನ್ನು ಕುಡಿದು ಉಸಿರಾಟದ ಸಮತೋಲನ ಕಾಪಾಡಿಕೊಳ್ಳಬೇಕಾಗುತ್ತದೆ. ಮಳೆಗಾಲದಲ್ಲಂತೂ ಕುಡಿಯುವ ನೀರಿಗೆ ಕೈಯೊಡ್ಡಿದರೆ ಕೈ ಮರಗಟ್ಟುವ ಪರಿಸ್ಥಿತಿ. ಸಾಕಷ್ಟು ಜನರಿಗೆ ಮೌಂಟೇನ್ ಸಿಕ್ನೆಸ್ ಅಂದರೆ ಪರ್ವತಗಳಂತಹ ಎತ್ತರದ ಪ್ರದೇಶಕ್ಕೆ ಹೋಗುತ್ತಿದ್ದಂತೆಯೂ ಒತ್ತಡದಿಂದಾಗಿ ತಲೆನೋವು, ವಾಕರಿಕೆ, ವಾಂತಿ, ತಲೆಸುತ್ತುವಿಕೆ, ಉಸಿರಾಟದ ಸಮಸ್ಯೆ ಎದುರಾಗುತ್ತದೆ. ಜೊತೆಗಿದ್ದ ಗೆಳತಿಗೆ ಅಷ್ಟು ತೀವ್ರವಾಗಿಯಲ್ಲದಿದ್ದರೂ ಹೊಟ್ಟೆನೋವಿನ ಸಮಸ್ಯೆ ಎದುರಾಗಿ ಆದಷ್ಟು ಸಾವಕಾಶವಾಗಿ ಚಾರಣ ನಡೆಸಿಕೊಂಡು ಬಂದೆವು. ಕೊನೆಗೂ ೧೧ ಕಿಮೀ ನಷ್ಟು ಕಾಲ್ನಡಿಗೆ ಮುಗಿಸಿ, ಎತ್ತರೆತ್ತರ ಪೈನ್ ಮರಗಳ ಹಚ್ಚ ಹಸಿರು ಮುಚ್ಚಿಗೆಯಿಂದ ಮುಂದೆ ಸಾಗಿ ಬೇಸ್ ಕ್ಯಾಮ್ಪ್ ಘಾನ್ಗ್ಹರಿಯ ಊರಿನ ಬುಡವನ್ನು ತಲುಪುವಾಗ ಮುಂದಕ್ಕೆ ಅನಾವರಣಗೊಳ್ಳುತ್ತಿದ್ದ ಪ್ರಕೃತಿ ಸೌಂದರ್ಯ ಕಂಡು ಬಾಯಿ ಆಕ್ಷರಸಃ ತೆರೆದುಕೊಂಡಿತ್ತು. ಪರಿಸ್ಥಿತಿ ಅಯ್ಯಪ್ಪ-ಉಸ್ಸಪ್ಪ ಆಗಿದ್ದರೂ, ಡೆಸ್ಟಿನಿ ತಲುಪಿಯಾಯಿತೆಂದು ಎಲ್ಲರ ಮುಖದಲ್ಲೂ ಚಿಗುರೊಡೆದ ಮಂದಹಾಸ.. ಸಂಭ್ರಮ..!! ಕೇವಲ ಆರು ತಿಂಗಳುಗಳ ಕಾಲ ಜೀವಂತವಿರುವ(ಉಳಿದ ಆರು ತಿಂಗಳುಗಳು ಈ ಊರುಗಳು ಕೂಡ  ಹಿಮದಲ್ಲಿ ಆವೃತ್ತವಾಗುತ್ತದೆ) ಹೇಮಕುಂಡ್ ಮತ್ತು ವ್ಯಾಲಿ ಆಫ್ ಫ್ಲ್ಯಾವಾರ್ಸ್ ನ  ಬೇಸ್ ಕ್ಯಾಮ್ಪ್ ಸ್ಥಳವೆಂದೇ ಹೆಸರಾಗಿರುವ ಈ ಊರು ತನ್ನ ಹಿಂದಿರುವ ಹತ್ತಿರದ ಬೃಹದಾಕಾರದ ಹಿಮಾವೃತ್ತ ಶಿಖರಗಳು, ಸುಂದರವಾಗಿ ಹರಿಯುತ್ತಿರುವ ಜಲಪಾತ, ಹಿಮನದಿಯನ್ನು ದಾಟಲೆಂದು ಕಟ್ಟಿಟ್ಟ ಕಾಲುಸೇತುವೆ ಹೀಗೆ ಬ್ಯಾಕ್ ಗ್ರೌಂಡಿನಲ್ಲಿ ಮತ್ತಷ್ಟು ಸುಂದರವಾದ ಪ್ರಕೃತಿಯ ಸೊಬಗಿನೊಡಗೂಡಿ ಅದೊಂದು ಪೈಂಟಿಗ್ ಎನ್ನುವಂಥ ಭಾವನೆ ನೀಡುತ್ತಿತ್ತು..ಅದನ್ನು ಕಂಡು ಬಳಲಿಕೆಯ ಮಧ್ಯೆಯೂ ಹೊಸ ಚೈತನ್ಯವನ್ನು ಪಡೆದ ಅನುಭವ..! ಪ್ರಾರಂಭದಲ್ಲೇ ಚಾಪರ್ ಬಂದಿಳಿಯುವ ಹೆಲಿಪ್ಯಾಡ್, ಒಂದಷ್ಟು ಬೇಸ್ ಕ್ಯಾಮ್ಪ್ ಟೆಂಟ್ಗಳು ಕಾಣ ಸಿಗುತ್ತವೆ. ಪ್ರವಾಸೋದ್ಯಮಕ್ಕೆ ಸಂಬಂಧ ಪಟ್ಟಂತೆಯೇ ಪ್ರತಿಯೊಬ್ಬರ ಕಾಯಕ..ಸುಮಾರು 50-60 ಕಟ್ಟಡಗಳು ಇರುವಂತಹ ಪುಟ್ಟ ಊರಿದು.  ಹಾಸ್ಟೆಲ್ ಮಾದರಿಯ ತಂಗಲು ವ್ಯವಸ್ಥೆ ಸಿಗಬಹುದಾದ ಹೋಟೆಲ್ಗಳು, ನಾನಾ ಬಗೆಯ ತಿಂಡಿಗಳ ಅಂಗಡಿಗಳು, ಕಿರಾಣಿ ಅಂಗಡಿಗಳು, ಪ್ರವಾಸೀ ಸಂಬಂಧಿ ಗೈಡಿಂಗ್ ಆಫೀಸುಗಳು ಒಳಗೊಂಡಿರುವ  ಅಂಗಡಿ ಮುಕ್ಕಟ್ಟು ಹೋಟೆಲ್ಗಳಿರುವ ಈ ಊರಿನ ಹಿಂದೆ ಬ್ರಹದಾಕಾರದ ಹಿಮಾವೃತ್ತ ಬೆಟ್ಟಗಳು ಮತ್ತಷ್ಟು ಹತ್ತಿರದಿಂದ ಕಾಣುತ್ತಿದ್ದು, ಅಂತಹ ಬಳಲಿಕೆಯ ಮಧ್ಯೆಯೂ ಹೊಸಚೈತನ್ಯವನ್ನು ನೀಡಿತ್ತು.. ಬಳಲಿದ ಕಾಲುಗಳಿಂದ ಹೆಜ್ಜೆ ಊರಿಕೊಂಡು ಮುಂದೆ ಸಾಗಿ ನಮ್ಮ ಹೋಟೆಲ್ ಅನ್ನು ತಲುಪಿದೆವು. ಹಾಂ ! ಹಾಗೆಂದು ಹೋಗಿ ಮಲಗಿಬಿಟ್ಟಿದ್ದೆನಲ್ಲ, ಸುಧಾರಿಸಿಕೊಂಡು ಲಘು ಸ್ನಾಕ್ಸ್ ನಂತರ ಮತ್ತೆ ಘಾನ್ಗ್ಹರಿಯ ಊರನ್ನು ಅನ್ವೇಷಿಸಲು ಹೊರಟದ್ದೇ..ಹೇಳಿಕೇಳಿ ಹಿಮಾವೃತ್ತ ಬೆಟ್ಟದ ಹತ್ತಿರದ ಸ್ಥಳ.. ಕೊರೆವ ಚಳಿ ಹಲ್ಲನ್ನು ಕೂಡ ಕಟಗುಡಿಸುತ್ತಿತ್ತು.. ಅದಕ್ಕೆ, ತಿಂಡಿ ಅಂಗಡಿಗಳ ಬಿಸಿ ಬಿಸಿ ದೂಧ್, ಬಿಸಿ ಬಿಸಿ ಜಿಲೇಬಿ, ಜಾಮೂನುಗಳನ್ನು ಹೊಂದಾಣಿಸಿದೆವು.. ಹತ್ತಿರದ ಗುರುದ್ವಾರಕ್ಕೆ ಭೇಟಿ ನೀಡಿ, ನಮಸ್ಕರಿಸಿ ಅಲ್ಲಿ ಸಂಜೆ ೭ ಗಂಟೆಗೆ ನೀಡುವ   ಸ್ಪೆಷಲ್ ಪ್ರಸಾದವನ್ನು ಮರೆಯದೇ ಪಡೆದು ತಿಂದು ಧನ್ಯರಾದೆವು.. ಮತ್ತೊಂದಷ್ಟು ಸಂಗಡಿಗರ ಜೊತೆ ಕಥೆ, ಹರಟೆ, ರಾತ್ರಿಯ ಊಟ, ಹೆಲ್ತ್ ಚೆಕ್ ಅಪ್ಸ್ ಗಳ ರೂಡಿ ಮುಗಿಸಿ ಅಂದಿನ ರೋಚಕ ದಿನವನ್ನು ಕೊನೆಗೊಳಿಸಿದೆವು.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ