ಭಾನುವಾರ, ಮೇ 10, 2020

ತಾಯಂದಿರ ದಿನವಿದು

ನನ್ನ ಅಮ್ಮುಮ್ಮ ನಿಗೆ ಈಗ ೯೪ ವರ್ಷ. ಬಡತನ ಕಷ್ಟ ಕಾರ್ಪಣ್ಯಗಳನ್ನು ಜೀವನದುದ್ದಕ್ಕೂ ಪಡೆದು, ಸಹಿಸಿಕೊಂಡು ಬಂದವಳು ಅವಳು.. ಮನೆ ತುಂಬಾ ಮಕ್ಕಳು. ದೊಡ್ಡ ಮಗಳ ಬಾಳಂತನ ಮತ್ತು ಅಮ್ಮುಮ್ಮನ ಕಿರಿ ಮಗುವಿನ ಬಾಳಂತನ ಹೆಚ್ಚು ಕಮ್ಮಿ ಒಟ್ಟೊಟ್ಟಿಗೆ ನಡೆಯುವಂತಹ ಕಾಲದಲ್ಲಿ, ಪ್ರತಿಯೊಂದನ್ನೂ ಸಂಭಾಳಿಸಿದವಳು..ಕಷ್ಟಕರ ವ್ಯವಸಾಯ ದುಡಿಮೆ, ಆಸ್ತಿ ವ್ಯಾಜ್ಯ ಜಗಳಗಳ ನಡುವೆ ಗಂಡನೊಂದಿಗೆ ಸೂರಿಂದ ಸೂರಿಗೆ ದಾಟುತ್ತ, ಎರಡೇ ಎರಡು ಸೀರೆಯಲ್ಲಿ ತಾನು ಜೀವನ ಮಾಡಿಕೊಂಡು, ೪ ಅಂಗಿ ಚಡ್ಡಿ, ೨ ಲಂಗ ಗಳಲ್ಲಿ ಆರು ಜನ ಮಕ್ಕಳನ್ನು ಕಷ್ಟಪಟ್ಟು ಬೆಳೆಸಿಕೊಂಡು ಬಂದ ಗಟ್ಟಿಗಿತ್ತಿ ನನ್ನ ಅಮ್ಮುಮ್ಮ.. ಆಗಿನ ಪರಿಸ್ಥಿತಿಯೇ ಹಾಗಿತ್ತು, ಎಲ್ಲರ ಹೊಟ್ಟೆಗೆ ಆಗುವಷ್ಟು ಊಟ ತಿಂಡಿ, ದನಕರಗಳ ಹೊಟ್ಟೆ ಹೊರೆಯುವ ಕೆಲಸ, ಇಷ್ಟರಲ್ಲೇ ದುಡಿಮೆ ಸರಿಯಾಗುತ್ತಿತ್ತು..ಮತ್ತೊಂದಷ್ಟು ಕಷ್ಟಪಟ್ಟು ಉಳಿಸಿಕೊಂಡ ದುಡ್ಡು, ವ್ಯಾಜ್ಯ ಕೋರ್ಟು ಕಚೇರಿ ಎಂದೇ ಕರಗುತ್ತಿತ್ತು..ಒಮ್ಮೆಯಂತೂ ಪೂಜ್ಯ ಶ್ರೀಧರ ಗುರುಗಳು ಮನೆ ಬಾಗಿಲಿಗೆ ಬಂದಾಗ, ಅವರಿಗೆ ದಾನ ನೀಡಲು ಧಾನ್ಯ, ಉತ್ತಮವಾದ ಹಣ್ಣು, ಸಿಹಿ ಅಪ್ಪಚ್ಚಿ  ಏನೂ ಇರದಿದ್ದಾಗ ಕೇವಲ ಬೆಲ್ಲ ಮತ್ತು ಒಂದು ಹಿಡಿ ಅರಳುಕಾಳು ಕೊಟ್ಟು, ಕಾಲಿಗೆ ನಮಸ್ಕರಿಸಿ ಕಳುಹಿಸಿದ ಪ್ರಸಂಗವನ್ನು ಅಮ್ಮುಮ್ಮ ಇವತ್ತಿಗೂ ನೆನಪಿಸಿಕೊಳ್ಳುತ್ತಾಳೆ. ಮಕ್ಕಳಿಗೆ ಉತ್ತಮ ವಿದ್ಯಾಭ್ಯಾಸ ಕೊಡಿಸಲೂ ಆಗದ ಪರಿಸ್ಥಿತಿ ಅವರದ್ದು.. ಮಕ್ಕಳೆಲ್ಲಾ ಎಲ್ಲೆಲ್ಲೋ, ಯಾರ್ಯಾರದ್ದೋ ಸಂಬಂಧಿಕರ ಮನೆಯಲ್ಲಿ ಉಳಿದುಕೊಂಡು, ವಾರಾನ್ನದ ಕೃಪೆಯ ಮೇರೆಗೆ ವಿದ್ಯಾಭ್ಯಾಸ ಮುಗಿಸಿಕೊಂಡರು. ಮಕ್ಕಳು ಮತ್ತು ತಾಯಿಯ ಅಗಲಿಕೆ ಆಗಿನ ಅನಿವಾರ್ಯತೆಯಾಗಿದ್ದರೂ, ಈಗ ಮಕ್ಕಳೆಲ್ಲರೂ ಒಂದು ಹಂತಕ್ಕೆ ದೊಡ್ಡ ದೊಡ್ಡ ಹುದ್ದೆಯ ವರೆಗೆ ತಲುಪಿ, ನಾಲ್ಕು ಜನರು ಖುಷಿ ಪಡುವಷ್ಟರ ಮಟ್ಟಿನ ಜೀವನ ನಡೆಸುತ್ತಿರುವುದರಲ್ಲಿ ಅವಳ ಪಾಲಿನ ಮಮತೆ ಮತ್ತು ತ್ಯಾಗ ದ ಕೊಡುಗೆ ಸುಮಾರಷ್ಟಿದೆ..ವರ್ಷಗಳು ಉರುಳಿದಂತೆ ಅಜ್ಜ ಪ್ಯಾರಾಲಿಸಿಸ್ ಖಾಯಿಲೆಗೆ ತುತ್ತಾಗಿ ೧೪ ವರ್ಷಗಳ ಕಾಲ ಹಾಸಿಗೆಯಲ್ಲಿಯೇ ಮಲಗಿದ, ಊಟ ತಿಂಡಿ ಪಾಯಿಖಾನೆ ಎಲ್ಲವೂ ಮಲಗಿದಲ್ಲಿಯೇ ವ್ಯವಸ್ಥೆ ಮಾಡಬೇಕಿತ್ತು.. ಅಂತಹ ಅನಿವಾರ್ಯತೆಯ ಪರಿಸ್ಥಿತಿಯಲ್ಲೂ, ಕಿಂಚಿತ್ತೂ ಬೇಸರಿಸದೆ ತನ್ನ ಪಾಲಿನ ಕರ್ತವ್ಯವನ್ನು ನಿಷ್ಠೆಯಿಂದ, ಅಜ್ಜ ಸಾಯುವ ವರೆಗೂ ಮಾಡಿಕೊಂಡು ಬಂದ ಧೈರ್ಯವಂತೆ ಅಮ್ಮುಮ್ಮ..  ಅವಳ ಹೋರಾಟದ ಬದುಕಿನಲ್ಲಿ ಬಂದಪ್ಪಳಿಸಿದ ಆಘಾತಗಳು ಒಂದೆರೆಡಲ್ಲ.. ೭೫ ನೇ ಹಿರಿಯ ವಯಸ್ಸಿಗೆ, ಅವಳಿಗೆ ಕರುಳಿನ ಕ್ಯಾನ್ಸರ್ ಖಾಯಿಲೆ ಗುರುತಿಸಲ್ಪಟ್ಟಿತು. ಆಪರೇಷನ್ ನಡೆದರೂ, ಕ್ಯಾನ್ಸರ್ ಎಂಬ ಪದದ ಅರಿವಿಲ್ಲದೆ, "ಏನೋ ಹೊಟ್ಟೆಯ ತೊಂದರೆಗೆ ಸಣ್ಣ ಆಪರೇಷನ್ ಆಗಿದೆ, ನೀ ಹುಷಾರಾಗ್ತೇ ಬೇಗ.. " ಎಂಬ ಮಕ್ಕಳ ಮನೋಸ್ಥೈರ್ಯದ ಬಲದ ಮೇಲೆಯೇ, ಮುಂಚಿನಕಿಂತಲೂ ಗಟ್ಟಿಯಾಗಿಬಿಟ್ಟಳು.. ಕ್ಯಾನ್ಸರ್ ಕಣಗಳಿಗೆ ಮತ್ತೆ ಅವಳನ್ನು ಅಲುಗಾಡಿಸಲು ಸಾಧ್ಯವಾಗಲಿಲ್ಲ..ಕೊನೆಯ ಮಗ, ನಲ್ವತ್ತನೇ ವಯಸ್ಸಿನಲ್ಲಿಯೇ ಅನಾರೋಗ್ಯದಿಂದ ಮೃತಗೊಂಡಾಗ, ಅದನ್ನೂ ಹೃದಯ ಗಟ್ಟಿ ಮಾಡಿಕೊಂಡು ತಡೆದುಕೊಂಡವಳು ಆ ತಾಯಿ. ಎಲ್ಲ ಮಕ್ಕಳ ಕಷ್ಟಗಳಿಗೂ ಬೇಕೆಂದಾಗ ಸಾಂತ್ವಾನ, ಧೈರ್ಯ ನೀಡಿ, ತನ್ನ ಕೈಲಾದ ಸಹಾಯ ಮಾಡುತ್ತಾ ಬಂದ ಅದಮ್ಯ ಶಕ್ತಿ .. 

ಅಮ್ಮುಮ್ಮನ ಕಲಿಕೆಯ ದಾಹ ಅಮೋಘವಾದದ್ದು..! ಶಾಲೆಗೆ ಹೋಗಿ ಓದು ಬರಹ ಕಲಿತವಳಲ್ಲ ಅವಳು. ಆದರೆ ಮಕ್ಕಳು ಅಕ್ಷರ ಕಲಿಯುವಾಗ ಅವರ ಜೊತೆ ಕೂತು ಅಲ್ಪ ಸ್ವಲ್ಪ ಅ, ಆ, ಇ, ಈ ಕಲಿತು, ಕಡೆಗೆ ಲೆಕ್ಕಪತ್ರದ ಕಾಗದಕ್ಕೆ 'ಸಾವಿತ್ರಮ್ಮ' ಎಂದು ತನ್ನ ಸಹಿ ಬರೆಯುವಷ್ಟರ ಮಟ್ಟಿಗೆ ಅಕ್ಷರ ಕಲಿತ ಸಾಧನೆ ಅವಳದ್ದು. ಇತ್ತೀಚಿಗೆ ಅಂದ್ರೆ ಹೆಚ್ಚು ಕಮ್ಮಿ, ಕಳೆದ ವರ್ಷದ ವರೆಗೂ, ಕನ್ನಡಕವನ್ನೇರಿಸಿ ಅಕ್ಷರಗಳನ್ನು ಕೂಡಿಸಿ ಕೂಡಿಸಿ ದಿನನಿತ್ಯದ ಪೇಪರ್ರನ್ನು ಓದಿ, ಎಲ್ಲಾ ಸುದ್ದಿ ಹೀರಿಕೊಂಡು ಅದರ ಬಗ್ಗೆ ಮಕ್ಕಳೊಡನೆ ಕೂತು ಮಾತನಾಡುವ ಪರಿಯೇ ನಮಗೆ ಒಂದು ಬಗೆಯ ಖುಷಿ.. ತೋಟಕ್ಕೆಲ್ಲ ಓಡಾಡುವಷ್ಟು ಶಕ್ತಿ ಇರುವ ತನಕ, ತಾನೇ ಖುದ್ದಾಗಿ ಹೋಗಿ, ಗೊತ್ತಿರುವ ಬೇರು ನಾರುಗಳನ್ನು ಕಿತ್ತು ತಂದುಕೊಂಡು ಕಷಾಯ ಮಾಡಿಕೊಂಡು, ಅದರಲ್ಲೇ ಸಣ್ಣ ಪುಟ್ಟ ಜ್ವರ ಕೆಮ್ಮು ಥಂಡಿಯನ್ನು ಹೆಸರಿಲ್ಲದಂತೆ ಜಯಿಸಿಕೊಳ್ಳುವವಳು.. ಈಗ ವಯೋಮಾನಕ್ಕೆ ತಕ್ಕಂತೆ ದೇಹ ಅಶಕ್ತವಾಗುತ್ತಿದೆ, ನಿದ್ದೆ ಬರುವುದಿಲ್ಲ, ಮೈ ಕೈ ನೋವಿನ ನರಳಾಟ.. ಅಷ್ಟಿದ್ದರೂ ಇವತ್ತಿಗೂ ಬೆಳಿಗ್ಗೆ ಬೇಗನೆ ಎದ್ದು, ತಿಂಡಿ ತಿಂದು, ತನ್ನ ತಟ್ಟೆ, ಬಟ್ಟೆ ತೊಳೆದುಕೊಂಡು, ಮಂದಗತಿಯಲ್ಲೇ ಆದರೂ ಅಲ್ಪ ಸ್ವಲ್ಪ ಮನೆಯೊಳಗೆಯೇ ಗೋಡೆಗಳ ಆಧಾರ ಹಿಡಿದು, ವಾಕಿಂಗ್ ಮುಗಿಸಿ, ನರಗಳೆದ್ದ ಕೈಯಿಂದ ದೀಪಕ್ಕೆ ಬತ್ತಿ ಹೊಸೆದು, ಹೂವು ತೆಗೆದುಕೊಂಡು ಪಕ್ಕದಲ್ಲಿರುವ ದೇವಸ್ಥಾನಕ್ಕೆ ಹೋಗಿ ನೀಲಕಂಠೇಶ್ವರನಿಗೆ ಕೈ ಮುಗಿದು ಬರುವ ತನ್ನ ದಿನಚರಿಯನ್ನು ಸುಮಾರಾಗಿ  ತಪ್ಪಿಸುವುದಿಲ್ಲ..!

ಅಮ್ಮಮ್ಮನ ಬಗೆಗಿನ ವಿಷಯಗಳನ್ನು ಬರೆಯುತ್ತಾ ಹೋದರೆ, ಇವತ್ತಿಗೆ ಮುಗಿಯಲಿಕ್ಕಿಲ್ಲ.. ಚಿಕ್ಕಪ್ಪನ ಮನೆಯಲ್ಲಿರುವ ಅಮ್ಮಮ್ಮನನ್ನು ಪದೇ ಪದೇ ಹೋಗಿ ಮಾತನಾಡಿಸಿ ಪ್ರೀತಿ ಕೊಟ್ಟು-ತೆಗೆದುಕೊಳ್ಳುವ ನಿಯಮಿತ ಅಭ್ಯಾಸ ಅಪ್ಪಾಜಿ ಮತ್ತವನ ಸಹೋದರರಿಗಿದೆ..ನಾವು ಮೊಮ್ಮಕ್ಕಳು ಯಾರೇ ಊರಿಗೆ ಬಂದರೂ ಒಂದು ಗಳಿಗೆ ಮಟ್ಟಿಗೆ ಆದರೂ ಅವಳಿರುವಲ್ಲಿಗೆ ಹೋಗಿ, ಅವಳಿಗೆ ಕಿವಿ ಕೇಳದಿದ್ದರೂ ಹೋಗಿ ಮಾತನಾಡಿಸಿ ಬರದಿದ್ದರೆ ನಮಗೆ ಸಮಾಧಾನವಿಲ್ಲ..ಆ ಮಟ್ಟಿಗೆ ಅಮ್ಮುಮ್ಮ ಅದೃಷ್ಟವಂತೆ..ಅಷ್ಟು ಬಾಂಧವ್ಯವನ್ನು ಅವಳು ನಮಗೆ ನಮ್ಮ ಬಾಲ್ಯದಿಂದಲೂ ಕಟ್ಟಿಟ್ಟಿರುವುದೇ ಅದಕ್ಕೆ ಕಾರಣ! ಕಳೆದ ವಾರದಿಂದ ವಯೋಮಾನಕ್ಕೆ ತಕ್ಕಂತೆ ತುಸು ಹೆಚ್ಚೇ ಹುಷಾರಿರಲಿಲ್ಲ ಅಮ್ಮಮ್ಮನಿಗೆ. ಮಾಣಿ (ದೊಡ್ಡಪ್ಪ), ರಾಮು (ಅಪ್ಪಾಜಿ), ನಾಣು (ಚಿಕ್ಕಪ್ಪ) ಎಂದೆಲ್ಲ ತನ್ನ ಮಕ್ಕಳ ಕನವರಿಕೆ.. ಬೇಸಿಗೆಯ ಧಗೆ, ಯಾರನ್ನೂ ಭೇಟಿಯಾಗಲಾರದಂತಹ ಕೊರೋನಾ ಲಾಕ್ ಡೌನ್ ನ ಬಂಧನ ಎಲ್ಲವೂ ಅಮ್ಮಮ್ಮನನ್ನು ತುಸು ಕುಗ್ಗಿಸಿತ್ತು.. ಈ ಕಡೆಯಿಂದ ಅವಳ ಮಕ್ಕಳ ಮನಸ್ಸು ಕೂಡ ಹಪಹಪಿಸದೆಯೇ ಇರುತ್ತದೆಯೇ? ಪರ್ಮಿಷನ್ ಪಡೆದು, ಜನರು ಓಡಾಡಲು ನೀಡಿದ ಸಮಯದ ಗಡುವಿನ ಮಧ್ಯೆಯೇ ಎಲ್ಲರೂ ಹೋಗಿ ಅಮ್ಮಮ್ಮನನ್ನು ಭೇಟಿಯಾಗಿದ್ದಾಯಿತು.. ಅಮ್ಮಮ್ಮಂಗೆ ಕಣ್ಣು, ಕಿವಿ ಎರಡೂ ಮಂದವಾಗಿದೆ, ಆದರೆ ಬುದ್ಧಿ ಮಾತ್ರ ಅಷ್ಟೇ ಚುರುಕು..ಮಕ್ಕಳ ಕಂಡು ಅವಳಿಗಾದ ಸಂತೋಷ-ದುಃಖದ ಭಾವವನ್ನು ಪದಗಳಲ್ಲಿ ಹೇಳಲು ಸಾಧ್ಯವಿಲ್ಲ..ಅವಳ ಆ ಅಳುವಿನಲ್ಲೂ ಅಪರಿಮಿತ ಸಂತೋಷವಿತ್ತು..! ಹೊತ್ತು ಕಳೆಯಲು ಸಾಧ್ಯವಾಗದೆ, ಕಾಡುವ ಶಾರೀರಿಕ ಮಾನಸಿಕ ತೊಂದರೆ, ಮೈ ಕೈ ನೋವು, ಬಾರದ ನಿದ್ದೆಯ ಮಧ್ಯೆಯೂ ಕೂಡ ತನ್ನ ಜವಾಬ್ಧಾರಿಗಳದ್ದೇ ಆಲೋಚನೆ ಅವಳಿಗೆ..ತನಗೆ ತೋಟವನ್ನು ನೋಡಬೇಕು ಎನಿಸುತ್ತಿದೆ ವ್ಯವಸ್ಥೆ ಮಾಡಿ ಎಂದು ಕೇಳಿಕೊಂಡು, ಕಾರಿನಲ್ಲಿ ಹೋಗಿ, ತೋಟ ಇಳಿಯಲಾಗದಿದ್ದರೂ, ನಿಂತಲ್ಲಿಂದಲೇ ಭೂಮಿತಾಯಿಯನ್ನು, ತೋಟದ ಮಣ್ಣನ್ನು ಮುಟ್ಟಿ ನಮಸ್ಕರಿಸಿ ಬಂದಾಗಿದೆ ಅಮ್ಮುಮ್ಮ! ಅನಕ್ಷರಸ್ಥ ಅಮ್ಮುಮ್ಮ, ಅದೆಷ್ಟೋ ವರ್ಷಗಳ ಹಿಂದೆಯೇ, ತನ್ನ ಮರಣದ ನಂತರ, ತನ್ನ ದೇಹವನ್ನು ದಾನಕ್ಕೆ ಬರೆದು ಸಹಿ ಹಾಕಿಟ್ಟಿದ್ದಾಳೆ..! "ನಂಗೆ ಎಂತಾರು ಆದ್ರೆ, ನಿಂಗ ಅಳ್ತಾ ತಡ ಮಾಡ್ತಾ ಕೂರಡಿ, ಆಸ್ಪತ್ರಿಗ ಎಲ್ಲಿಗ ನೋಡಿ ಕಳ್ಸಿ ಈ ದೇಹನ ಮತ್ತೆ.." ಎಂದು ನಮಗೆ ನೆನಪು ಬೇರೆ ಮಾಡುವವಳು ಇವಳು..! "ಹಿಂದೆ ಪ್ಲೇಗ್ ಬಂದಂಗೆ ಈಗ ಅದೆಂತೋ ಜ್ವರ ಬೈಂದಡ, ವಯಸ್ಸಾದವು ಎಲ್ಲಾ ಓಡಾಡಾಂಗಿಲ್ಲೆ ಅಲ್ದಾ.." ಎಂದು ಇಂದಿನ ಆಗು ಹೋಗುಗಳ ಕುರಿತು ಮಕ್ಕಳೊಂದಿಗೆ ಹೇಳಿ ಕೇಳಿ ಮಾಡುವ ಅವಳಿಗೆ, ಮೊದಲಿಗೆ ಬರುವ ಯೋಚನೆಯಾದರೂ ಯಾವುದು? "ಮದ್ವೆ ಗಿದ್ವೆ ಆಪ ಹೆಣ್ಣು ಹುಡ್ರು ಕಥೆ ಎಂತದು.." ಎಂದು ತನ್ನ ಮೊಮ್ಮಕ್ಕಳ ಕುರಿತಾಗಿಯೇ ಆಲೋಚಿಸುತ್ತಾಳೆ ಅವಳು.. ಸೀರೆಯ ನಿರ್ವಹಣೆ ಅವಳಿಗೆ ಕಷ್ಟ ಎಂದು ನೈಟಿ ಅಭ್ಯಾಸ ಮಾಡಿಕೊಂಡಿರುವ ಅಮ್ಮುಮ್ಮ ಮೊನ್ನೆ ನನ್ನ ಬಳಿ, "ಅಮ್ಮಿ, ನನ್ ಈ ನೈಟಿ ಉದ್ದಕ್ಕಿದ್ದು, ಕಾಲಿಗೆ ಕಡ್ತು.. (ಕಾಲಿಗೆ ಸಿಕ್ಕು ತೊಂದರೆಯಾಗುತ್ತದೆ ಎಂದರ್ಥ), ಮೊಣಕಾಲ್ವರಿಗೆ ಬಪ್ಪಾನ್ಗೆ ನೈಟಿ ಮಾಡ್ಕೊಡು, ತೊಳ್ಕಳಕ್ಕೂ ಸುಲ್ಭ ನಂಗೆ, ನಿಂಗಳಂಗೆ ಗಿಡ್ಡ ಅಂಗಿ ಸ್ಟ್ಯಾಯ್ಲು ಆಗ್ತು ಹದ..? " ಎಂದು ತಮಾಷೆ ಬೇರೆ ಮಾಡುತ್ತಿದ್ದಳು.. ಕೇಳದ ಕಿವಿ, ತುಂಬಿದ ಮಂಜುಗಣ್ಣಿನಲ್ಲಿಯೇ ನನ್ನ ಅಕ್ಕನನ್ನು ಅಮೆರಿಕಕ್ಕೆ ಕಳಿಸಿದ್ದಳು ಅಮ್ಮುಮ್ಮ.. "ಸುಮಾ ಹುಡ್ರು ಅರಾಮಿಡ್ವಡ? ನಾ ವಾಪಸ್ ಬರವರಿಗೆ ಇರು ಹೇಳಿಕ್ ಹೊಯ್ದ ಸುಮಾ.. " ಎಂದು ಕಣ್ಣು ತುಂಬಿಕೊಂಡೇ ಅಕ್ಕನನ್ನು ನೆನೆಯುತ್ತಾಳೆ.. 'ಕಣ್ಣೀರು ಎಂಬುದು ಯಾವಾಗಲೂ ಬೇಸರವೇ ಎಂದಾಗಬೇಕಿಲ್ಲ, ಅದೂ ಕೂಡ, ಪ್ರೀತಿ ತೋರಿಸುವ ಒಂದು ಭಾವ'  ಎಂಬುದನ್ನು ತನ್ನ ಕಣ್ಣಲ್ಲೇ ತೋರಿಸಿ ಹೇಳುತ್ತಾಳೆ..ಹುಚ್ಚ್ ಅಮ್ಮುಮ್ಮ ನಮ್ಮನ್ನೂ ಅಳಿಸುತ್ತಾಳೆ..:) "ತಗ ಈ ಹಣ್ಣು ತಿನ್ನು ಗಟ್ಟಿಯಾಗ್ತೇ.." ಎಂದು ಅಪ್ಪಾಜಿ ಹಣ್ಣು ಬಿಡಿಸಿ ತಿನ್ನಲು ಕೊಟ್ಟರೆ, ಅದನ್ನು ಬಾಯಿಗೆ ಹಾಕಿಕೊಳ್ಳುತ್ತಲೇ, " ಹುಡ್ರಾ ಹಿಂದ್ಗಡೆ ಮಾಡಗೆ ಬಾಳೆ ಹಣ್ಣಿನ್ ಗೊನೆ ಇದ್ದು, ಎಲ್ರು ತಗಂಡ್ ಹೋಗ್ಕ್ಯಾನ್ಡ್ ತಿನ್ನಿ, ಮರ್ತಿಕ್ ಹೋಗಡಿ.." ಎಂದು ಹೇಳುವುದಕ್ಕೂ ಮರೆಯುವುದಿಲ್ಲ..

ಕಳೆದ ವಾರ, ಒಂದು ಬಾರಿ ಡ್ರಿಪ್ಸ್ ಹಾಕಿಸಿ ಬರಬೇಕಾಗುವುದೇನೋ ಎಂಬಷ್ಟು ಕಳೆಗುಂದಿದ್ದ ಅಮ್ಮುಮ್ಮ ಆವತ್ತು ಮಕ್ಕಳ ಕಂಡು ಮಾತನಾಡಿ ಮನಸ್ಸು ಹಗುರವಾದಂತೆಯೂ, ಮಕ್ಕಳ ಧೈರ್ಯಕ್ಕೆ, ಸಾಂತ್ವಾನಕ್ಕೆ, ಪ್ರೀತಿಗೆ ಸೋತು, ಮಾತ್ರೆ ಔಷಧಿಗಳನ್ನು ತೆಗೆದುಕೊಳ್ಳಲೊಪ್ಪಿಕೊಂಡು ಈಗ ಚೇತರಿಸಿಕೊಳ್ಳುತ್ತಿದ್ದಾಳೆ..:) 

ನನ್ನ ಹಾರೈಕೆ ಇಷ್ಟೇ.. ನನ್ನ ಅಮ್ಮುಮ್ಮನಂತಹ ಅಮ್ಮ, ತನ್ನ ಅನಾರೋಗ್ಯದ ನಡುವೆಯೂ ಪ್ರತಿಫಲಾಕ್ಷೆಯಿಲ್ಲದೆ, ಮಕ್ಕಳಿಗಾಗಿ ಪ್ರತಿಯೊಂದನ್ನು ಮಾಡುವ ನನ್ನಮ್ಮನಂತಹ ಅಮ್ಮ, ಯಾವಾಗ ಏನು ಬೇಕಾದರೂ ನಿಸ್ಸಂಕೋಚವಾಗಿ ಹೇಳಿಕೊಳ್ಳಲು ಇರುವ ನನ್ನಕ್ಕನಂತಹ ಅಮ್ಮ,ಅತ್ತೆ ಎಂಬ ಮತ್ತೊಬ್ಬ ಅಮ್ಮ.. ಹೀಗೆ ನಮ್ಮ ಸುತ್ತಮುತ್ತಲೂ ತಮ್ಮ ಪ್ರತಿಕ್ಷಣದ ನಿಸ್ವಾರ್ಥ ಪ್ರೀತಿ, ತ್ಯಾಗ, ನಂಬಿಕೆ, ಕಾಳಜಿ, ಸಾಂತ್ವಾನ, ಧೈರ್ಯ ಮತ್ತು ತಮ್ಮ ಅದಮ್ಯ ಶಕ್ತಿಯನ್ನೂ ಮಕ್ಕಳಿಗಾಗಿ ಪೊರೆವ ಎಲ್ಲಾ ಅಮ್ಮಂದಿರಿಗೂ ಚಿಕ್ಕಪುಟ್ಟದಾದರೂ ಸರಿ ಅವರ ಮಟ್ಟಿಗಿನ ಸಂತೋಷ ಸಿಗುತ್ತಲೇ ಇರಲಿ..  ಎಲ್ಲಾ ಅಮ್ಮಂದಿರಿಗೂ "ಅಮ್ಮಂದಿರ ದಿನದ ಶುಭಾಶಯಗಳು.. "  

Happy Mother's Day !

1 ಕಾಮೆಂಟ್‌: