ಭಾನುವಾರ, ಮಾರ್ಚ್ 19, 2023

ಕಾಲಿಂಪಾಂಗ್ ಸೈನ್ಸ್ ಸೆಂಟರ್

 ದಾರ್ಜೀಲಿಂಗ್ ನ ಕಾಲಿಂಪಾಂಗ್ ಅದರ ಮನೋಹರ ಪ್ರಾಕೃತಿಕ ಸೌಂದರ್ಯಕ್ಕೆ, ಬೌದ್ಧ ಧಾರ್ಮಿಕ ಕೇಂದ್ರಗಳಿಗೆ, ವಿಶಾಲವಾದ ಹಿಮಾಲಯ ಪರ್ವತಗಳ ನಡುವೆ ಉದಯಿಸುವ, ಮುಳುಗುವ ಸೂರ್ಯನ ಸೌಂದರ್ಯಕ್ಕೆ ಪ್ರಸಿದ್ಧಿಯಾಗಿದೆ. ಇಲ್ಲಿನ ಕ್ಯಾಕ್ಟಸ್ಆರ್ಕಿಡ್ ಹೂಗಳಷ್ಟೇ ಪ್ರಸಿದ್ಧಿ ಆಗಸದಲ್ಲಿ ಹಕ್ಕಿಯಂತೆ ಹಾರುವ ಪ್ಯಾರಾಗ್ಲೈಡಿಂಗ್ ಸಾಹಸ ಕ್ರೀಡೆ. ಇವೆಲ್ಲದರ ಜೊತೆಗೆ ಇನ್ನೊಂದು ಆಕರ್ಷಕ ಪ್ರವಾಸೀ ಸ್ಥಳ, ಕಾಲಿಂಪಾಂಗ್ ಸೈನ್ಸ್ ಸೆಂಟರ್. ಈ ವಿಜ್ಞಾನ ಕೇಂದ್ರ ಸ್ಥಾಪನೆಗೊಂಡಿದ್ದು, ಸಮಾಜದಲ್ಲಿ ವೈಜ್ಞಾನಿಕ ಮನೋಭಾವನೆ ಬೆಳೆಸುವ ಉದ್ದೇಶದಿಂದ, ಶಿಕ್ಷಣಕ್ಕೆ ಸಂಬಂಧಿಸಿದಂತೆ, ಶೈಕ್ಷಣಿಕ ಸಂಸ್ಥೆಗಳಿಗಾಗಿ, ವಿದ್ಯಾರ್ಥಿಗಳಿಗಾಗಿ ೨೦೦೮ ರಲ್ಲಿ. ಭಾರತ ಸರ್ಕಾರ ಸಂಸ್ಕೃತಿ ಸಚಿವಾಲಯದ ವತಿಯಿಂದ ನಿರ್ಮಿತ, ಏಳು ಎಕರೆಯಷ್ಟು ವಿಶಾಲ ಜಾಗದಲ್ಲಿರುವ ಈ ವಿಜ್ಞಾನ ಕೇಂದ್ರವನ್ನು, ಮಕ್ಕಳು ದೊಡ್ಡವರು ಎನ್ನದೇ ಎಲ್ಲರೂ ಒಮ್ಮೆ ನೋಡಿಬರಬೇಕಾದಂತಹ ಸ್ಥಳವಿದು. 










ಪ್ರಾರಂಭದಲ್ಲಿಯೇ ವಿಜ್ಞಾನ ಕೇಂದ್ರದ ಹೊರಾಂಗಣದಲ್ಲಿ ದೊಡ್ಡ ಡೈನೊಸಾರ್ಸ್ಗಳು ನಮ್ಮನ್ನು ಸ್ವಾಗತಿಸುತ್ತವೆ. ಪ್ರಸಿದ್ಧ ಗಣಿತ ಮತ್ತು ವಿಜ್ಞಾನ ಶಾಸ್ತ್ರಜ್ಞರ ಪುತ್ತಳಿಗಳು ನಮ್ಮ ದೇಶಕ್ಕೆ ಸಿಕ್ಕ ಅಮೂಲ್ಯ ಕೊಡುಗೆಗಳ ನೆನಪಿಸುತ್ತವೆ. ಹೊರಾಂಗಣ ದೊಡ್ಡ ವಿಸ್ತೀರ್ಣದ ಜಾಗದಲ್ಲಿ ಅಲ್ಲಲ್ಲಿ ವಿವಿಧ ಜಾತಿಯ ಡೈನೊಸಾರ್ಸ್ಗಳ ದೊಡ್ಡ ದೊಡ್ಡ ಪುತ್ಥಳಿಗಳನ್ನು ನಿರ್ಮಿಸಿದ್ದಾರೆ. ಭೂಮಿಯ ಐತಿಹಾಸಿಕತೆಗೆ ಇದೊಂದು ಕಥಾಸರಣಿಯಂತೆ ಭಾಸವಾಗುತ್ತದೆ. ಪ್ರಯೋಗಗಳ ಮೂಲಕ ವಿಜ್ಞಾನ ನಮಗೆ ಸುಲಭವಾಗಿ ಅರ್ಥ ಮಾಡಿಸುವ ಉದ್ದೇಶದಿಂದ ಸಾಕಷ್ಟು ಬಗೆಯ ಆಟದ ರೂಪದ ವಿಜ್ಞಾನದ ಪ್ರಾತ್ಯಕ್ಷಿಕೆಗಳನ್ನು ಕೇಂದ್ರದ ಒಳಗೂ ಹೊರಗೂ ನಿರ್ಮಿಸಲಾಗಿದೆ. ಹೊರಗಡೆ ಶಬ್ದದ ವೇಗ ಮತ್ತು ಕೊಳವೆಯ ಉದ್ದಕ್ಕೆ ಅನುಪಾತವಾಗಿ ಪ್ರತಿಧ್ವನಿ ಹೊರಡಿಸುವಂತಹ - ಏಕೋ ಟ್ಯೂಬ್, ದೂರ ಮತ್ತು ಆಕಾರದ ಅನುಪಾತ ತಿಳಿಸುವಂತಹ ಆಟ. ಬೇರೆ ಬೇರೆ ಅಳತೆಯ ಕೊಳವೆಗಳಿಂದ ಹೊರಹೊಮ್ಮಬಹುದಾದ ಸಂಗೀತ, ಉದ್ದ ಮತ್ತು ಭಾರಗಳ ಅನುಪಾತವನ್ನು ಅರಿತುಕೊಳ್ಳಬಹುದಾದ ತೂಕದ ಗುಂಡಿನ ಮಾಡೆಲ್, ಜೀಕುವ ಜೋಕಾಲಿ ಆಟದಲ್ಲೂ ಸೈನ್ಸ್ ಹೇಗೆ ವರ್ಕ್ ಆಗುತ್ತದೆ ಎಂಬುದು ಸ್ವತಃ ಅನುಭವಕ್ಕೆ ಪಡೆಯುವಂತಹ ರೀತಿಯಲ್ಲಿ ಪ್ರಾತ್ಯಕ್ಷಿಕೆಗೆ ಅವಕಾಶ ಇದೆ. ಅದೆಷ್ಟೋ ಪರಿಕಲ್ಪನೆ ನಮ್ಮ ನಿತ್ಯ ಜೀವನದಲ್ಲಿ ಕಾಣಸಿಗುತ್ತಿದ್ದರೂ, ನಮಗೆ ಆ ವಿಜ್ಞಾನದ ಅರಿವು ಮೂಡಿರುವುದಿಲ್ಲ. ಆವಿಷ್ಕಾರಗಳು ನಮ್ಮ ಜೀವನದ ಪ್ರತಿಯೊಂದು ಅಂಶವನ್ನು ಕ್ರಾಂತಿಗೊಳಿಸಿದೆ ಎಂಬುದು ಇಲ್ಲಿನ ಪ್ರಾತ್ಯಕ್ಷಿಕೆ ಕಂಡಾಗ ನಮ್ಮ ತಿಳುವಳಿಕೆಗೆ ಬರುತ್ತದೆ. ಪ್ರಾಯೋಗಿಕ ವೀಕ್ಷಣೆಯ ಮಾಡೆಲ್ ಗಳನ್ನು ಇಟ್ಟಿರುವುದು, ಜನರಿಗೆ ವೈಜ್ಞಾನಿಕ ತಿಳುವಳಿಕೆ ಸಿಗುವಲ್ಲಿ ಸಹಾಯಕವಾಗುವಂತಿದೆ. 



ಕೇಂದ್ರದ ಒಳಗೆ, ಮ್ಯಾಜಿಕ್ ವಾಟರ್ ಟ್ಯಾಪ್,  ಒಳ ಹೊಕ್ಕರೆ ಕಳೆದೇ  ಹೋದೆವೆಂದು ಭಾಸವಾಗುವ ಕನ್ನಡಿಯ ಕೋಣೆಗಳು, ಆಯಾಸ್ಕಾಂತೀಯ ಗುಣಗಳು ಮತ್ತು ಉಷ್ಣತೆಯ ಕುರಿತಾದ ಪ್ರಾತ್ಯಕ್ಷಿಕೆಗಳು, ವಿವಿಧ ಬಗೆಯ ದ್ರವ್ಯಗಳ ಸಾಂದ್ರತೆ, ವಿದ್ಯುತ್ ಕೋಶಗಳು, ಪೈತಾಗೋರಸ್ ಥಿಯೆರಂ. ಫ್ಯಾರ್ಡ್ ನಿಯಮಗಳು ಇನ್ನೂ ಅನೇಕ ಬಗೆಯ ತಾಂತ್ರಿಕ ವಸ್ತುಗಳ ಸಂಗ್ರಹಾಲಯ ವಿದ್ಯಾರ್ಥಿಗಳ ಕುತೂಹಲ ತಣಿಸುವಂತಹದಾಗಿದೆ. ಇಂತಹದೊಂದು ಮಾಹಿತಿ ಸ್ಥಳ ನಮ್ಮ ಪ್ರವಾಸದ ಭಾಗವಾದದ್ದು, ನಮ್ಮ ದಾರ್ಜೀಲಿಂಗ್ ಟ್ರಿಪ್ ನ ಖುಷಿ.  

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ