ಸೋಮವಾರ, ಮಾರ್ಚ್ 6, 2023

ಲೇ-ಪಾಕ್ಷಿ!

 ದಕ್ಷಿಣ ಭಾರತದಲ್ಲಿ ಐತಿಹಾಸಿಕ ಸ್ಥಳಗಳಲ್ಲಿ ಒಂದು ಪ್ರಮುಖವಾದ ಸ್ಥಳ ಎನಿಸಿಕೊಂಡ, ವಿಜಯನಗರ ಸಾಮ್ರಾಜ್ಯದ ಆಳ್ವಿಕೆಯ ದೇವಾಲಯ, ಪಕ್ಕಾ ಆಗಿನ ಸಾಂಪ್ರದಾಯಿಕ ವಾಸ್ತುಶೈಲಿಯಲ್ಲಿ ೧೬ ನೇ ಶತಮಾನದಲ್ಲಿ ನಿರ್ಮಾಣಗೊಂಡ ದೇವಾಲಯ ಲೇಪಾಕ್ಷಿ ದೇವಾಲಯ. ಮುಖ್ಯವಾಗಿ ವೀರಭದ್ರ ಸ್ವಾಮಿ, ಶಿವ ಮತ್ತು ವಿಷ್ಣುವಿನ ಪೂಜೆಗೆ ಬದ್ಧವಾದ ದೇವಾಲಯ. ಬೆಂಗಳೂರಿನಿಂದ ೧೨೦ ಕಿಮೀ ದೂರದಲ್ಲಿರುವ ಈ ದೇವಾಲಯ, ಒಂದು ದಿನದ ಪ್ರವಾಸಕ್ಕೆ  ಸೂಕ್ತವಾದ ತಾಣವಾಗಿದೆ. ನೋಡ ನೋಡುತ್ತಿದ್ದಂತೆಯೇ ೨.೫ ತಾಸಿನಲ್ಲಿ ಕರ್ನಾಟಕ ದಾಟಿ ಪಕ್ಕದ ರಾಜ್ಯಕ್ಕೆ ದಾಟುವ ಖುಷಿ ೯.೫ ವರ್ಷದ ಮಗಳಿಗೆ. 


ಲೇಪಾಕ್ಷಿ ಊರು ತಲುಪುತ್ತಿದ್ದಂತೆಯೇ ದೊಡ್ಡದೊಂದು ಬಂಡೆ ಕಲ್ಲಿನ ಮೇಲೆ ದೊಡ್ಡದಾದ ಜಟಾಯುವಿನ ಮೂರ್ತಿಯೊಂದನ್ನು ಪ್ರತಿಷ್ಠಾಪಿಸಲಾಗಿದೆ. (ಆ ಬಂಡೆಕಲ್ಲಿನ ಸ್ಥಳಕ್ಕೆ ಹೋಗಲು ದಾರಿಯಿದೆ ಮತ್ತು ಮೇಲಿನವರೆಗೆ ಹೋಗಲು ಮೆಟ್ಟಿಲುಗಳಿವೆ) ಈ ಊರಿನ ಹೆಸರಿಗೂ ಆ ಮೂರ್ತಿ ಕಾಣುವುದಕ್ಕೂ, ಒಂದು ರೀತಿಯ ಸಂಭ್ರಮ ಅಲ್ಲಿಂದಲೇ ಪ್ರಾರಂಭವಾಗುತ್ತದೆ.  ಪುರಾಣ ಕಥೆಗಳ ಪ್ರಕಾರ, ಸೀತೆಯನ್ನು ರಾವಣನು ಅಪಹರಿಸಿಕೊಂಡು ಹೋಗುವ ಸಮಯದಲ್ಲಿ ಜಟಾಯು ಪಕ್ಷಿಯು ತನ್ನ ಕೈಲಾದಷ್ಟು ರಕ್ಷಿಸುವ ಪ್ರಯತ್ನ ಮಾಡುತ್ತದೆ. ಆದರೆ ಕೊನೆಯಲ್ಲಿ, ರಾವಣನ ಪರಾಕ್ರಮದ ಮುಂದೆ ಜಟಾಯುವು ರೆಕ್ಕೆ ಕತ್ತರಿಸಿದ ಅಸಹಾಯಕ ಪಕ್ಷಿಯಾಗಿ ಕೆಳಗೆ ಬೀಳುತ್ತದೆ. ಆನಂತರ ರಾಮ ಜಟಾಯುವನ್ನು ಕಂಡಾಗ, ಲೇ…ಪಕ್ಷಿ (ಎದ್ದೇಳು ಪಕ್ಷಿಯೇ) ಎಂಬ ಉಚ್ಚಾರಿಸಿ ಜಟಾಯುವಿಗೆ ಮುಕ್ತಿ ನೀಡಿದ ಸ್ಥಳವೇ ಈ ಲೇಪಾಕ್ಷಿ ಎನ್ನಲಾಗುತ್ತದೆ. 

ಏಕಶಿಲೆಯಲ್ಲಿ ಮಾಡಿದ ೪.೫ ಮೀ ಅಷ್ಟು ಎತ್ತರದ, ೮.೫ ಮೀ ಅಷ್ಟು ಉದ್ದದ  ನಂದಿ ವಿಗ್ರಹ ಲೇಪಾಕ್ಷಿಯ ಪ್ರಾರಂಭದಲ್ಲೇ ನಮ್ಮನ್ನು ಸ್ವಾಗತಿಸುತ್ತದೆ. ಅಲ್ಲಿಂದ ಒಂದು ೨೦೦ಮೀ ದೂರಕ್ಕೆ ಲೇಪಾಕ್ಷಿ ದೇವಾಲಯ ಸಿಗುತ್ತದೆ. ಹಿಂದೆ ಏಳು ಪ್ರಾಕಾರಗಳಷ್ಟು ವಿಸ್ತಾರವಾಗಿದ್ದ ದೇವಾಲಯ ಈಗ ಮೂರು ಪ್ರಾಕಾರಗಳಷ್ಟು ಮಾತ್ರ ಉಳಿದುಕೊಂಡಿದೆ ಎಂಬ ಮಾಹಿತಿಯಿದೆ. ಇಲ್ಲಿನ ದೇವಾಲಯದ ಮುಖ್ಯ ವಿಶೇಷತೆ ಎಂದರೆ,  ೭೦ ಕಂಬಗಳ ಮೇಲೆ ನಿಂತಿರುವ ಇಲ್ಲಿನ ಮುಖ್ಯ ದೇವಾಲಯದ ಒಂದು ವಿಶಿಷ್ಟ ಕಂಬ,  ನೆಲಕ್ಕೆ ಆಧಾರಿತವಾಗದೆ 'ತೇಲುವ ಕಂಬ'ವಾಗಿದೆ ಮತ್ತು ಈ ಕಂಬ, ಆ ಇಡೀ ದೇವಾಲಯದ ಆಧಾರಸ್ಥಮಭ ಎಂದು ಅಲ್ಲಿನವರು ತಿಳಿಸುತ್ತಾರೆ. ಆದರೆ ದೇವಾಲಯದ ಪ್ರತಿಯೊಂದು ಕಂಬದಲ್ಲೂ ಒಂದೊಂದು ಅಮೋಘ ಶಿಲ್ಪಕಲೆಗಳನ್ನು ಒಳಗೊಂಡಿದೆ. ನಿಧಾನಕ್ಕೆ ನೋಡುತ್ತಾ ಹೋದರೆ, ಸುಮಾರು ಮೂರು ಗಂಟೆಗಳಷ್ಟು ಸಮಯ ಕಲ್ಲಿನ ಕೆತ್ತನೆಗಳನ್ನು ನೋಡಲೇ ಹಿಡಿಯುತ್ತದೆ. ಮಗಳು ಕಲ್ಲಿನಲ್ಲಿ ಕೆತ್ತಿದ್ದ ಪ್ರಾಣಿ ಪಕ್ಷಿಗಳನ್ನು ನೋಡಿ ಖುಷಿ ಪಟ್ಟಳು. ನೃತ್ಯಗಾರರ ಭಂಗಿಗಳನ್ನು ಪ್ರಯತ್ನಿಸುವ ಆಟಗಳನ್ನು ಆಡುತ್ತಿದ್ದಳು. ಶಿವನ ಅವತಾರಗಳ ಶಿಲ್ಪಕಲೆಗಳು, ರಾಮಾಯಣ ಮಾಹಾಭಾರತದಂತಹ ಪುರಾಣಗಳ ಕಥೆಗಳನ್ನು ಒಳಗೊಂಡಿರುವ ಸನ್ನಿವೇಶಗಳ ಕೆತ್ತನೆಗಳು ಕಣ್ತುಂಬಿಕೊಳ್ಳಲು ತುಂಬಾ ಸಂತೋಷವಾಗುತ್ತದೆ. ಗೋಡೆಗಳು ಮತ್ತು ದೇವಾಲಯದ ಛಾವಣಿಯ ಮೇಲೆ ಅಳಿದುಳಿದ ಗೋಡೆ ವರ್ಣಚಿತ್ರಗಳು (ಮ್ಯೂರಲ್ ಪೇಂಟಿಂಗ್), ಅನೇಕ ಚಿತ್ರಗಳು ಸಾವಿರಾರು ವರ್ಷಗಳ ಪ್ರಾಕೃತಿಕ ಸವೆತದಿಂದ  ಮಾಸಿ ಹೋಗಿದ್ದರೂ ಕೂಡ, ಅದನ್ನು ಸ್ವಚ್ಛಗೊಳಿಸಿ ನೈಸರ್ಗಿಕ ಬಣ್ಣಗಳಿಂದ ಮರುಸ್ಪರ್ಶ ನೀಡುತ್ತಿದ್ದಾರೆ. 


ಒಟ್ಟಾರೆಯಾಗಿ, ಪುರಾತನ ಶಿಲ್ಪಕಲೆ, ನಮ್ಮ ಸಂಸ್ಕೃತಿ, ಪುರಾಣಕಥೆಗಳ ಕುರಿತಾಗಿ ಆಸಕ್ತಿಇರುವವರು ನಿರಾಯಾಸವಾಗಿ ಅರ್ಧ ದಿನ ಇಲ್ಲಿಯೇ ಸಂತೋಷದಿಂದ ಕಳೆಯಬಹುದಾದಂತಹ ಸುಂದರ ಪ್ರವಾಸೀ ತಾಣ ಈ ಲೇಪಾಕ್ಷಿ. 


#travel #architecture #incredibleindia 





ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ