ಬುಧವಾರ, ಜನವರಿ 17, 2024

ನುಗ್ಗೆ ಸೊಪ್ಪಿನ ಚಟ್ನಿ ಪುಡಿ

ನನಗೆ ಸಿಕ್ಕಾಪಟ್ಟೆ ಅಡುಗೆಯ ಕ್ರೇಜ್ ಇಲ್ಲದಿದ್ದರೂ, ಆದಷ್ಟು ಮನೆಯಲ್ಲಿಯೇ ಹೊಸ ಬಗೆಯ ಅಡುಗೆ ಪದಾರ್ಥಗಳನ್ನು, ಬಾಯ್ಬಡುಗೆಗೆ ಕುರುಕಲು ಮಾಡುತ್ತಿರುತ್ತೇನೆ. ಮಗಳು ಚಟ್ನಿಪುಡಿಯ ಗೊಣಮಿ. ಹಾಗಾಗಿ ಒಂದಾದ ಮೇಲೊಂದು ಬಗೆಯ ಚಟ್ನಿಪುಡಿ ಮನೆಯಲ್ಲಿ ಮಾಡುತ್ತಿರುತ್ತೇನೆ. 

ಚಳಿಗಾಲ ಈಗ ನುಗ್ಗೆ ಸೊಪ್ಪಿನ ಸೀಸನ್. ಆಯಾಯ ಸೀಸನ್ನಿನ ಸೊಪ್ಪು ತರಕಾರಿ  ಹಣ್ಣುಗಳ ಬಳಕೆ ಆರೋಗ್ಯಕರ. ನುಗ್ಗೆ ಸೊಪ್ಪು ಮನುಷ್ಯನ ಹೃದಯವನ್ನು ಮತ್ತು ಲಿವರ್ ಅನ್ನು ಹಾನಿಮಾಡುವ ವಿಷಕಾರಿ ಬ್ಯಾಕ್ಟೀರಿಯಾ ಅಥವಾ ವೈರಸ್ ಗಳಿಂದ ರಕ್ಷಣೆ ಮಾಡುತ್ತದೆ. ನುಗ್ಗೆ ಸೊಪ್ಪಿನಲ್ಲಿ ಯಥೇಚ್ಛವಾಗಿ ಆಂಟಿ - ಆಕ್ಸಿಡೆಂಟ್ ಗಳು, ವಿಟಮಿನ್ ' ಸಿ ', ಜಿಂಕ್ ಇತ್ಯಾದಿ ಅವಶ್ಯಕ ಪೋಷಕಾಂಶ ದೊರೆಯುತ್ತದೆ. ಮಕ್ಕಳಿಗೆ ಮಲಬದ್ಧತೆ ಮತ್ತು ಅಜೀರ್ಣದಂತಹ ಸಮಸ್ಯೆ ಪರಿಹಾರಕ್ಕೆ ಸಹಕಾರಿ.

ಚಳಿಗಾಲದಲ್ಲಿ ಎಲ್ಲ ತಿಂಡಿ ಬಿಸಿ ಬಿಸಿ ಬೇಕೆನಿಸುತ್ತದೆ. ಅದರ ಜೊತೆಗೆ ಈ ನುಗ್ಗೆ ಸೊಪ್ಪಿನ ಚಟ್ನಿಪುಡಿ ಮತ್ತು ಕೊಬ್ಬರಿ ಎಣ್ಣೆಯ ಕಾಂಬಿನೇಷನ್ ಅಂತೂ ವರ್ಣಿಸಲಸದಳ!! ಯಾಕೋ ಇವತ್ತು ಹಂಚಿಕೊಳ್ಳೋಣ ಯಾರಿಗಾದರೂ ಉಪಯೋಗವಾದಿತು ಎನಿಸಿ ಈ ಪೋಸ್ಟ್. ಸಾಮಾಗ್ರಿಗಳನ್ನು ಚೆನ್ನಾಗಿ ಜೋಡಿಸಿಕೊಂಡು ಫೋಟೋ ತೆಗೆದು, ಮಾಡುವ ವಿಧಾನದ ವಿಡಿಯೋ ಮಾಡಿ ಎಡಿಟಿಂಗ್ ಮಾಡುವಷ್ಟು ತಾಳ್ಮೆಕಿಂತಲೂ ಹೆಚ್ಚಾಗಿ ಆಸಕ್ತಿ ಇಲ್ಲ. ಹಾಗಾಗಿ ಮಾಡುವ ವಿಧಾನವನ್ನು ಇಲ್ಲಿ ಬರೆದಿದ್ದೇನೆ 

ನುಗ್ಗೆಸೊಪ್ಪು ಬಾಣಲಿಯಲ್ಲಿ ಹುರಿಯುವುದಕ್ಕಿಂತ ಬಿಡಿಸಿ, ತೊಳೆದು, ನೆರಳಿನಲ್ಲಿ ಬಟ್ಟೆಯ ಮೇಲೆ ಹರಗಿ ಮೂರ್ನಾಲ್ಕು ದಿನಗಳ ಕಾಲ ಒಣಗಿಸಿಕೊಂಡರೆ ಅದರ ಹಸಿರು ಬಣ್ಣ ಮತ್ತು ಪೋಷಕಾಂಶ ಕಾಯ್ದಿರಿಸಿ ಕೊಳ್ಳಬಹುದು.

ನುಗ್ಗೆಸೊಪ್ಪು 2 ಬಟ್ಟಲು
ತುರಿದ ಕೊಬ್ಬರಿ 1 ಬಟ್ಟಲು
ಕಡ್ಲೆಬೇಳೆ 1 ಬಟ್ಟಲು
ಉದ್ದಿನಬೇಳೆ 3/4 ಬಟ್ಟಲು 
 ಶೇಂಗಾಬೀಜ 1/4 ಬಟ್ಟಲು
ಕೊತ್ತಂಬರಿ ಕಾಳು 2 ಚಮಚಗಳು 
ಜೀರಿಗೆ 1 ಚಮಚ
ಗುಂಟೂರು ಮತ್ತು ಬ್ಯಾಡಗಿ ಮೆಣಸು 5-10
ಹುಣಸೆ ಅಡಿಕೆಯಷ್ಟು ಗಾತ್ರದ ಉಂಡೆ. 
ಬೆಳ್ಳುಳ್ಳಿ ಬೇಕಾದಲ್ಲಿ ಮಾತ್ರ - 5-6 ಎಸಳುಗಳು

ಬಾಣಲೆಯಲ್ಲಿ ಕಡಲೆಬೇಳೆಯನ್ನು ಸಣ್ಣ ಉರಿಯಲ್ಲಿ ಹೊಂಬಣ್ಣಕ್ಕೆ ಹುರಿದು ಎತ್ತಿಟ್ಟುಕೊಳ್ಳಬೇಕು. ಅದೇ ರೀತಿ ಶೇಂಗಾ ಬೀಜವನ್ನೂ, ಅದರ ನಂತರ ಉದ್ದಿನ ಬೇಳೆಯನ್ನೂ ಬೇರೆ ಬೇರೆಯಾಗಿ ಹುರಿದು ಎತ್ತಿಟ್ಟುಕೊಳ್ಳಬೇಕು. ನಂತರ ಬಾಣಲೆಗೆ ಅರ್ಧ ಚಮಚ ಕೊಬ್ಬರಿ ಎಣ್ಣೆ ಹಾಕಿ ಸಣ್ಣ ಉರಿಯಲ್ಲಿ ಗುಂಟೂರು ಮತ್ತು ಬ್ಯಾಡಗಿ ಮೆಣಸು ನಮಗೆ ಬೇಕಾಗುವಷ್ಟು ಖಾರಕ್ಕೆ ತಕ್ಕಂತೆ ಹಾಕಿ ಹುರಿದುಕೊಳ್ಳಬೇಕು. ಹೀಗೆ ಹುರಿಯುವಾಗಲೇ, ಜೊತೆಯಲ್ಲಿ ಕೊತ್ತಂಬರಿ ಕಾಳು, ಜೀರಿಗೆ, ಬೆಳ್ಳುಳ್ಳಿ ಎಸಳು, ಹುಣಸೆ ಹಾಕಿ ಕೈಯಾಡಿಸಿ ಕೊಳ್ಳಬೇಕು. ನಂತರ ಗ್ಯಾಸ್ ಸ್ಟವ್ ಆಫ್ ಮಾಡಿ ಬಾಣಲೆ ಬಿಸಿ ಇರುವಾಗಲೇ ಅದಕ್ಕೆ ತುರಿದ ಕೊಬ್ಬರಿ ಮತ್ತು ಒಣಗಿಸಿಟ್ಟ ನುಗ್ಗೆ ಸೊಪ್ಪಿನ್ನು ಹಾಕಿಟ್ಟರೆ, 
ಬಾಣಲೆ ತಣಿಯುವಷ್ಟರಲ್ಲಿ ಎಲ್ಲ ಸಾಮಗ್ರಿಗಳು ಗರಂ ಆಗಿರುತ್ತದೆ. ಅಂತರ ಇವೆಲ್ಲ ಸಾಮಗ್ರಿಗಳನ್ನು ಮಿಕ್ಸರ್ ಗ್ರೈಂಡರ್ನಲ್ಲಿ ಹಾಕಿ ರುಚಿಗೆ ತಕ್ಕಷ್ಟು ಉಪ್ಪು ಮತ್ತು ಸ್ವಲ್ಪ ಹುಡಿ ಬೆಲ್ಲ ಇಲ್ಲವಾದಲ್ಲಿ ಒಂದು ಚಮಚ ಸಕ್ಕರೆ ಹಾಕಿ ಹಾಕಿ, ನಿಮಗೆ ಬೇಕಾಗುವ ಚಟ್ನಿಪುಡಿ ನಯಕ್ಕೆ ಬೀಸಿಕೊಂಡರೆ, ಅದ್ಭುತ ನುಗ್ಗೆಸೊಪ್ಪಿನ ಪರಿಮಳದ ರುಚಿಕರ ಮತ್ತು ಆರೋಗ್ಯಕರ ನುಗ್ಗೆ ಸೊಪ್ಪಿನ ಚಟ್ನಿಪುಡಿ ತಯಾರ್!! 

ಈ ಚಟ್ನಿಪುಡಿಯನ್ನು ಬಿಸಿ ಬಿಸಿ ಅನ್ನಕ್ಕೆ ಕೊಬ್ಬರಿ ಎಣ್ಣೆಯೊಂದಿಗೆ ಕಲಸಿ ತಿನ್ನಬಹುದು. ದೋಸೆ, ಇಡ್ಲಿ, ಚಪಾತಿಗಳಿಗಂತೂ ಚಟ್ನಿಪುಡಿ ಮತ್ತು ಕೊಬ್ಬರಿ ಎಣ್ಣೆ ಅದ್ಭುತವಾಗಿ ಹೊಂದುತ್ತದೆ. 

#ಚಟ್ನಿಪುಡಿ #ನುಗ್ಗೆಸೊಪ್ಪು #ರುಚಿಮತ್ತುಶಕ್ತಿ #ಮನೆಯಡುಗೆ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ