ಬುಧವಾರ, ಜನವರಿ 3, 2024

ಕೈವಾರ ಬೆಟ್ಟ ಮತ್ತು ಕೈಲಾಸಗಿರಿ ಗುಹೆ

ಬೆಂಗಳೂರಿನಿಂದ ೬೫ ಕಿಮೀ ದೂರದಲ್ಲಿ ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ತಾಲೂಕಿನಲ್ಲಿದೆ ಕೈವಾರವೆಂಬ ಊರು. ಆಸ್ತಿಕರಿಗೆ ಇದೊಂದು ಪುಣ್ಯಕ್ಷೇತ್ರ, ಚಾರಣಿಗರಿಗೆ ಮತ್ತೊಂದು ಸ್ವರ್ಗ.  ಕರ್ನಾಟಕ ಅರಣ್ಯ ಇಲಾಖೆಯವರ ನಿರ್ವಹಣೆಯಲ್ಲಿರುವ ಇಲ್ಲಿನ ಕೈವಾರ ಬೆಟ್ಟಕ್ಕೆ ಟ್ರೆಕಿಂಗ್ ಹೋಗಲು ಮುಂಚಿತವಾಗಿ ಅನುಮತಿ ಪಡೆಯಬೇಕಾಗುತ್ತದೆ. karnatakatourism.org  ನಲ್ಲಿ ಕೂಡ ಆನ್ಲೈನ್ ಟಿಕೆಟ್ ಬುಕಿಂಗ್ ಮಾಡಬಹುದು. ಬೆಂಗಳೂರಿನಿಂದ ಹೊರಟು ಹೊಸಕೋಟೆ ಮಾರ್ಗವಾಗಿ ಅಥವಾ ದೇವನಹಳ್ಳಿ-ಬಿಜಯಪುರ ಮಾರ್ಗವಾಗಿ ಬಸ್ಸು ಅಥವಾ ಸ್ವಂತ ವಾಹನದಲ್ಲಿ ಕೈವಾರವನ್ನು ತಲುಪಬಹುದು. ನಾವು ಹೋದದ್ದು ನಮ್ಮ ಯೋಗ ಶಿಕ್ಷಣ ಕೇಂದ್ರದ ವತಿಯಿಂದ, ಸಂಚಾರದ ವ್ಯವಸ್ಥೆ, ಊಟ ತಿಂಡಿಗಳ ವ್ಯವಸ್ಥೆ ಮುಂಚಿತವಾಗಿಯೇ ನಮ್ಮ ತಂಡದ ನೇಕಾರರಿಂದ ಆದ್ದ ಕಾರಣ, ನಮಗೆ ಹೆಚ್ಚಿನ  ನಿರ್ವಹಣಾ ಜವಾಬ್ಧಾರಿ ಬೀಳಲಿಲ್ಲ. ಚಾರಣ ಯೋಗಬಂಧುಗಳ ಜೊತೆಯಾದ್ದರಿಂದ ದೇಹದ ಸ್ನಾಯುಗಳನ್ನು ಚಲನಶೀಲವಾಗಿರಿಸಲು ಆಸಕ್ತಿ ಹೊಂದಿರುವ ಸಮಾನ ಮನಸ್ಕರರ ಗುಂಪು ದೊರೆತಂತಾಗಿತ್ತು. ಇದರ ಜೊತೆಯಲ್ಲಿ, ಈ ಸ್ಥಳದ ಮಹಿಮೆಯನ್ನು ಅತ್ಯಂತ ನಿಖರವಾಗಿ ಬಲ್ಲವರಾದ ನಮ್ಮ ಗುರುಗಳಾದ ಸುಬ್ಬು ಬೈಯ್ಯ ಮತ್ತು ಅಶೋಕ್ ಸರ್ ನ ನೇತೃತ್ವದ ಯೋಗಯಾತ್ರೆ ಇದಾದ್ದರಿಂದ, ಸ್ಥಳ ಮಹಿಮೆಯನ್ನು ವಿಸ್ತಾರವಾಗಿ ತಿಳಿಯಲು ಇನ್ನಷ್ಟು ಸಹಾಯಕವಾಯಿತು. ಈ ಸ್ಥಳ ಸಂತ ಕೈವಾರ ತಾತಯ್ಯ ಆಶ್ರಮ ಮತ್ತು ದೇವಾಲಯದ ಸಂಕೀರ್ಣಕ್ಕೆ ಹೆಸರುವಾಸಿಯಾಗಿದೆ. 



ಈ ಸ್ಥಳ, ಯೋಗಿ ನಾರಾಯಣ ಯತೀಂದ್ರರು ಜನ್ಮವನ್ನು ತಾಳಿ, ಈ ಸಮಾಜಕ್ಕೆ ಕಾಲಜ್ಞಾನ ಭವಿಷ್ಯವನ್ನು ನೀಡಿದಂತಹ ಪುಣ್ಯಕ್ಷೇತ್ರ. ಚಿಕ್ಕಂದಿನಲ್ಲಿ ಅಪ್ಪಾಜಿ ರಸವತ್ತಾಗಿ ಹೇಳುತ್ತಿದ್ದ ಕಥೆ, ಪ್ರಜಾಪೀಡಿತ ಬಕಾಸುರನನ್ನು ಭೀಮ ವಧೆ ಮಾಡಿದ್ದು. ಆ ಕಥೆಯ ಜೀವಂತಿಕೆ ಈ ಕೈವಾರ ಬೆಟ್ಟದಲ್ಲಿದೆ ಎಂದು ಕೇಳಿದಾಗ ಇಷ್ಟು ದೊಡ್ಡವಳಾದರೂ ನನಗೇ ಒಂದು ರೀತಿಯ ರೋಮಾಂಚನ.  ಬಾಲ್ಯದಲ್ಲಿ ಕೇಳಿದ ಕಥೆಗಳ ಅನುಭವ ಹೇಗೆ ಪರಿಣಮಿಸುತ್ತದೆ ಎಂಬ ಖುಷಿ ಒಂದು ಕಡೆಗೆ.  ಕೃತ ಯುಗದಲ್ಲಿ ಈ ಸ್ಥಳದ ಹೆಸರು ಕೈವರ ಎಂದಾಗಿತ್ತಂತೆ ಅಂದರೆ ಇಲ್ಲಿ ಕೈ ಮುಗಿದು ಮನಸಾರೆ ಪ್ರಾರ್ಥಿಸಿದರೆ ಸಾಕು, ವರ ಸಿಗುತ್ತದೆ ಎಂಬ ವಾಡಿಕೆ ಇಲ್ಲಿಯ ಜನರದ್ದು ಆಧ್ಯಾತ್ಮಿಕವಾಗಿಯೇ  ಹೆಚ್ಚು ಪ್ರಸಿದ್ಧಿಗೊಂಡಿರುವ ಸ್ಥಳ ಕೈವಾರವಾಗಿದ್ದರೂ, ಸುತ್ತಮುತ್ತಲಿನ ಬೆಟ್ಟಗುಡ್ಡಗಳನ್ನೊಳಗೊಂಡ ಭೂದೃಶ್ಯಾವಳಿಯಿಂದಾಗಿ, ಈ ಸ್ಥಳ ಸದಾ ಚಾರಣಿಗರನ್ನೂ ತನ್ನತ್ತ ಸೆಳೆಯುತ್ತಿದೆ. 


ಮೊದಲಿಗೆ ಭೇಟಿಯಿತ್ತದ್ದು, ಸದ್ಗುರು ಯೋಗಿ ನಾರೇಯಣ ಮಠಕ್ಕೆ. ನಾರಾಯಣನ ಭಕ್ತ, ಸಂತ ತಾತಯ್ಯನವರು ಅಲ್ಲಿಯೇ ದೇಹ ತ್ಯಾಗ ಮಾಡಿದರು ಎಂದು ಹೇಳಲಾಗುತ್ತದೆ.  ಅಲ್ಲಿಯ ವಿಶಿಷ್ಟತೆ ಎಂದರೆ ಅಲ್ಲಿ ಬರುವ ಹೆಣ್ಣುಮಕ್ಕಳಿಗೆ ಪ್ರಸಾದವೆಂದು ಬಳೆಯನ್ನು ನೀಡುತ್ತಾರೆ. ಹಿಂದೆ ಸಂತ ತಾತಯ್ಯನವರು ದೇವಸ್ಥಾನದ ಹೊರಗೆ ಇದೇ ರೀತಿ ಎಲ್ಲ ಹೆಣ್ಣುಮಕ್ಕಳಿಗೆ ಬಳೆಗಳನ್ನು ನೀಡಿ ಹರಸುತ್ತಿದ್ದರಂತೆ. ಒಳಾಂಗಣದಲ್ಲಿ ಧಾನ್ಯ ಕುಟ್ಟುವ ಒರಳಿದೆ, ಒಂದಷ್ಟು ಕಾಣಿಕೆ ನೀಡಿ, ಹಳೆಯ ಕಾಲದಲ್ಲಿ ಧಾನ್ಯವನ್ನು ಕುಟ್ಟಿ ಹಿಟ್ಟು ಮಾಡುತ್ತಿದ್ದ ಅನುಭವವನ್ನು ಅಲ್ಲಿ ಪಡೆಯಬಹುದು.  ಈ ಮಠದ ಎದುರಲ್ಲಿಯೇ ಕಾಣುತ್ತದೆ ಕೈವಾರ ಬೆಟ್ಟ. ನಮ್ಮ ಜೊತೆಗಿದ್ದ ಚಳ್ಳಪಿಳ್ಳೆಗಳನ್ನೆಲ್ಲ ಕಟ್ಟಿಕೊಂಡು, ಒಟ್ಟು  ೩೫ ಜನರ ನಮ್ಮ ತಂಡ ಚಾರಣ ಪ್ರಾರಂಭಿಸಿತು. ಕೈವಾರ ಬೆಟ್ಟದ ತುಂಬಾ ಕಲ್ಲುಬಂಡೆಗಳು. ಹಾಗಾಗಿ ಅತಿಯಾದ ಬಿಸಿಲಿನ ಸಮಯದಲ್ಲಿ ಕಾಲುಸುಡುತ್ತದೆ. ನಮ್ಮ ಚಾರಣದ ಹಿಂದಿನ ದಿನ ಮಧ್ಯೆ ರಾತ್ರೆವರೆಗೆ ಧೋ ಎಂದು ಮಳೆ ಸುರಿಯುತ್ತಿತ್ತು.  ಎಲ್ಲಿ ನಮ್ಮ ಪ್ರವಾಸ ರದ್ದಾಗುವುದೋ ಎಂದುಕೊಂಡಿದ್ದವರಿಗೆ, ಮರುದಿನ ಮಳೆ ನಿಂತಿದ್ದು, ಮತ್ತು ಆ ತೇವಾಂಶಕ್ಕೆ ವಾತಾವರಣವೂ ತಂಪಾದ್ದು ನಮ್ಮ ಪಾಲಿಗೆ ವರವಾಯಿತು.  





ಮಕ್ಕಳೆಲ್ಲ ಅತ್ಯಂತ ಉತ್ಸುಕತೆಯಿಂದ ನಾ ಮುಂದೆ ತಾ ಮುಂದೆ ಎಂದು ಪ್ರಾರಂಭದ ಮೆಟ್ಟಿಲುಗಳ ಏರಿ ಸಾಗಿದವು. ಒಂದೈನೂರು ಮೆಟ್ಟಿಲುಗಳು ಸಿಗುವ ಒಟ್ಟಾರೆ ನಾಲ್ಕು ಕಿಲೋಮೀಟರ್ ಗಳ ಚಾರಣವದು. ಸುಬ್ಬು ಭೈಯ್ಯಾ ಅವರ ನೇತೃತ್ವದಲ್ಲಿ ಸ್ಥಳದ ಕುರಿತು ಒಂದಷ್ಟು ಕಥೆ ಕೇಳಿಕೊಂಡು ಹಿರಿಯರು ಕಿರಿಯರು ಒಬ್ಬರಿಗೊಬ್ಬರು ಕೆಲವು ಕಠಿಣ ಹಾದಿಗಳಲ್ಲಿ ಜೊತೆಗೂಡಿ ಸಾಗುತ್ತಿದ್ದೆವಾದ್ದರಿಂದ, ಸುಮಾರು ಎರಡು ತಾಸಿಗೆ ನಾವು ಬೆಟ್ಟದ ತುದಿಯ ತಲುಪಿದೆವು. ಸಾಕಷ್ಟು ಮೆಟ್ಟಿಲುಗಳು, ಮತ್ತೊಂದಷ್ಟು ಎಲ್ಲರೂ ಓಡಾಡಿ ಮಾರ್ಪಟ್ಟ ಕಾಲುಹಾದಿಗಳ ದಾಟುತ್ತ, ಹತ್ತುತ್ತಾ ಹೋಗುತ್ತಿದ್ದಂತೆಯೂ, ಮೇಲಿನಿಂದ ಕೆಳಗಡೆ ಕೈವಾರಪಟ್ಟಣದ  ದೃಶ್ಯ, ಸುತ್ತಲಿನ ಬೆಟ್ಟ ಗುಡ್ಡಗಳ  ಅನಾವರಣ  ಆಗುತ್ತಿದ್ದ ಬಗೆಯೇ ಸುಂದರ! ಮೇಲೇರಿದಂತೆ, ತಣ್ಣನೆಯ ಗಾಳಿ ಮುಖಕ್ಕೆ ಸೋಕಿ ಬೆಟ್ಟ ಹತ್ತುವ  ಶ್ರಮವನ್ನುನೀಗಿಸುತ್ತಿತ್ತು. ಹಾದಿಯುದ್ದಕ್ಕೂ ಸುಬ್ಬು ಬೈಯ್ಯ ಅವರ ಹಾಡುಗಳು, ಅಮರಣ್ಣನ ಕೊಳಲು ವಾದನಚಾರಣಕ್ಕೆ ಮತ್ತಷ್ಟು ಮುದವನ್ನು ನೀಡುತ್ತಿತ್ತು. ಹಾದಿ ಬದಿ ಪರಿಗೆ ಹಣ್ಣು ಹುಡುಕಿ ತಿಂದ್ದದ್ದಾಯಿತು, ಲಂಟಾನದ  ಹೂಗಳ ಅಲಂಕಾರ, ಬಣ್ಣದ ಎಲೆಗಳ ಹೆಕ್ಕುವ ಆಟಗಳೂ ಸಾಗಿದವು. ಚಾರಣ ಅಂದರೆ ಅದೇ ಉದ್ದೇಶವಲ್ಲವೇ? ಪ್ರಕೃತಿಯನ್ನುಹತ್ತಿರದಿಂದ ಗಮನಿಸುವುದು.  ದೊಡ್ಡ ದೊಡ್ಡ ಕಲ್ಲು ಬಂಡೆಗಳ ಮಧ್ಯೆ ಮೂಡಿರುವ  ನೈಸರ್ಗಿಕ ದ್ವಾರ ನೋಡಿ ಬೆರಗಾದೆವು. ಹಾದಿಯುದ್ದಕ್ಕೂ ಸಾಕಷ್ಟು ಕೋತಿಗಳು ನಮ್ಮ ಹಿಂದೆ ಮುಂದೆ ಸುತ್ತಿಕೊಂಡು ಇದ್ದವು ಹಾಗಾಗಿ ಬೆಲೆಬಾಳುವ ವಸ್ತುಗಳ ಬಗ್ಗೆ ಜಾಗರೂಕತೆ ಬೇಕಲ್ಲಿ! 













ಚಾರಣದ ಅರ್ಧ ಪ್ರಯಾಣಕ್ಕೆ, ಸಣ್ಣ ನೀರಿನ ಚಿಲುಮೆಯಿರುವ ಹೊಂಡ ಮತ್ತು ಸಣ್ಣದೊಂದು ಚಾಮುಂಡಿ ದೇವಿಯಿರುವ ಗುಡಿಯೊಂದು ಸಿಗುತ್ತದೆ. ಆ ಬಿಸಿಲಲ್ಲೂ, ಆ ಶುದ್ಧ ತಣ್ಣನೆಯ ನೀರು ಕುಡಿಯಲು ಸುಖ. ಮುಖಕ್ಕೆ ತಣ್ಣನೆಯ ನೀರು ಎರಚಿಕೊಂಡು ಮತ್ತೆ ನಮ್ಮ ಚಾರಣ ಮುಂದುವರೆಯಿತು.  




ದಂತಕಥೆಯ ಪ್ರಕಾರ ಭೀಮ ಮತ್ತು ಬಕಾಸುರ ಮಹಾಭಾರತದ ಅವಧಿಯಲ್ಲಿ ಈ ಬೆಟ್ಟದ ಮೇಲೆ ಕಾದಾಡಿದ್ದರು. ಬೆಟ್ಟದ ತುದಿ ತಲುಪಿದ ಮೇಲಂತೂ ಅಷ್ಟೆತ್ತರದ ಸ್ಥಳದಿಂದ ಕೈವಾರ ಪಟ್ಟಣದ ಸುತ್ತಮುತ್ತಲಿನ ನೋಟ ವಿಹಂಗಮವಾಗಿದೆ. ನನಗಂತೂ ಬಣ್ಣದ ಪ್ಯಾಲೆಟ್ ಎನಿಸುವಂತೆ ಕಾಣುತ್ತಿತ್ತು ಅಲ್ಲಿಂದ ಕೆಳಗಿನ ಭೂಮಿ. ಒಂದಷ್ಟು ಹೊತ್ತು ವಿಶ್ರಾಂತಿ, ಮಾತುಕತೆ  ಧ್ಯಾನ ಫೋಟೋಶೂಟ್ ಗಳು ನಡೆದವು. ಮಂಗಗಳ ಕಾಟ ಅಷ್ಟೇ ಇದೆ ಎಲ್ಲಿಂದ ಎಲ್ಲಿಯವರೆಗೆ ಹೋದರೂ.. ನಂತರ ನಿಧಾನಕ್ಕೆ ಹತ್ತಿ ಹೋಗಿದ್ದ ಉತ್ಸಾಹದಲ್ಲೇ ಬೆಟ್ಟವನ್ನು ಇಳಿದು ಬಂದೆವು. ಯಾವ ಸುಸ್ತು ಬಳಲಿಕೆ ತೋರಿಸದೇ ಮಕ್ಕಳೆಲ್ಲ ಓಡಾಡಿದ್ದು ಚಾರಣದ ಬೆಸ್ಟ್ ಪಾರ್ಟ್. 
















ಅಲ್ಲಿಂದ ಕೆಳಗಿಳಿದು, ಒಳ ಹೊಕ್ಕಿದ್ದೆ ಅಮರನಾರಾಯಣ ದೇವಸ್ಥಾನಕ್ಕೆ. ನೂರಾರು ವರ್ಷಗಳಿಂದಲೂ ದೇವರಿರುವ ಆ ಸ್ಥಳ ಸ್ವತಃ ಇಂದ್ರನಿಂದಲೇ ನಿರ್ಮಿತ ಎನ್ನುತ್ತಾರೆ ಅಲ್ಲಿನ ಹಿರಿಯರು. ಅಲ್ಲಿನ ಹೊರಾಂಗಣ ಆವರಣದಲ್ಲಿ ಬಳೆಗಾರರೊಬ್ಬರ ಅಂಗಡಿಯಿದೆ. ಇಷ್ಟವಾದ ಬಳೆಗಳನ್ನು ಅಲ್ಲಿ ಕೊಳ್ಳಬಹುದು. 




ಕೈವಾರ ಪಟ್ಟಣದಲ್ಲಿ ಇನ್ನೂ ಅನೇಕ ಸಣ್ಣ ಪುಟ್ಟ ದೇವಾಲಯಗಳಿವೆ. ಅದರಲ್ಲಿ ಒಂದು ಭೀಮೇಶ್ವರ ದೇವಸ್ಥಾನ. ಆವರದ ಮುಖ್ಯ ದೇವಸ್ಥಾನದ ಸುತ್ತಮುತ್ತಲು ಸಣ್ಣ ಪುಟ್ಟ ಗುಡಿಗಳಿವೆ. ದೇವಸ್ಥಾನದ ಕಲ್ಲಿನ ಕೆತ್ತನೆಗಳು ವಿಶಿಷ್ಟವಾಗಿದೆ. ಸುಬ್ಬು ಭೈಯ್ಯಾ ಇದ್ದಲ್ಲಿ ಭಕ್ತಿ ಯೋಗದ ಅವಕಾಶ ಸಿಕ್ಕೇ ಸಿಗುತ್ತದೆ. ಕೀರ್ತನೆ ಭಜನೆಗಳ ಅನುಭವ ಮನವನ್ನು ತಣಿಸುತ್ತದೆ. ಒಂದಷ್ಟು ಶಾಂತ ಸಮಯವನ್ನು ಕಳೆದು ಅಲ್ಲಿಂದ ಮುಂದಕ್ಕೆ ಸಾಗಿದೆವು. ಎಲ್ಲವನ್ನು ಮುಗಿಸಿ ಹೊರಬರುವಷ್ಟರಲ್ಲಿ ಶುಚಿ ರುಚಿಯಾದ ಮಠದ ಊಟ ನಮಗಾಗಿ ಕಾದಿತ್ತು. ಖಾಸಗಿ ಪ್ರವಾಸವಾದ ಕಾರಣ, ಒಂದಷ್ಟು ಬಗೆಯ ಸಿಹಿ ಯನ್ನು ಹೇಳಿ ಮಾಡಿಸಿದ್ದರು ನಮ್ಮ ಯೋಗ ಗುರುಗಳ ಟೀಮ್.  ಎಲ್ಲವನ್ನೂ ಸವಿದು ಮುಂದಕ್ಕೆ ಹೊರಟಿದ್ದು ಕೈಲಾಸಗಿರಿ ಗುಹೆಯ ದೇವಾಲಯಕ್ಕೆ. 



ಸುಮಾರು ೭ ಕಿಮೀ ದೂರದಲ್ಲಿದೆ ಕೈಲಾಸ ಗಿರಿ ಗುಹೆ. ರಸ್ತೆ ಅಷ್ಟೇನೂ ಸಲೀಸಾಗಿಲ್ಲದಿರುವುದರಿಂದ, ಕೈಲಾಸಗಿರಿ ತಲುಪುವಷ್ಟರಲ್ಲಿ ಬೆನ್ನು ನುಜ್ಜುಗುಜ್ಜು. ಪಾರ್ಕಿಂಗ್ ಜಾಗದಿಂದ ತುಸು ಮೇಲಕ್ಕೆ ಸುಮಾರು ೨೦೦ ಮೀಟರ್ ಹತ್ತಿದರೆ ಸಿಗುತ್ತದೆ ಕೈಲಾಸಗಿರಿ ಗುಹೆ. ದೂರದಿಂದಲೇ ಬ್ರಹತ್ ಏಕಶಿಲಾ ಗುಹೆ ಮತ್ತದರ ಒಳಗಿನ ದೇವಾಲಯದ ವಿಹಂಗಮ ನೋಟ ನೋಡಲು ಅತ್ಯಂತ ಖುಷಿ  ಆಗುತ್ತದೆ. ಮಹಾಭಾರತದ ಪಾಂಡವರು ತಮ್ಮ ವನವಾಸದ ಸಮಯದಲ್ಲಿ ಈ ಗುಹೆಯಲ್ಲಿ ವಾಸವಿದ್ದರು ಎಂದು ನಂಬಲಾಗಿದೆ. ಗುಹೆಯ ಒಳಗೆ ಹೋಗುತ್ತಿದ್ದಂತೆ ಒಂದು ಬಗೆಯ ಸಕಾರಾತ್ಮಕ ಅನುಭವ ಸಿಗುತ್ತದೆ. ಮಾತನಾಡಿದ್ದೆಲ್ಲ ಪ್ರತಿಧ್ವನಿಸುವ ಒಂದು ಆಧ್ಯಾತ್ಮಿಕ ಜಾಗವನ್ನು ದಾಟಿದರೆ ಮುಂದಕ್ಕೆ ಬೇರೆ ಬೇರೆ ದೇವರುಗಳ  ಸಣ್ಣ ಸಣ್ಣ ಗುಡಿಗಳು ಇವೆ. ಒಳಗಡೆ ಫೋಟೋ ನಿಷಿದ್ಧ. ಎಲ್ಲವೂ ಗುಹೆಯ ಒಳಗಡೆಯೇ ಕೆತ್ತಿ ಮಾಡಿದ ಗುಡಿಗಳು. ಹೊರಗಡೆ ಅದೆಷ್ಟು ಬಿಸಿಲಿನ ಬೇಗೆಯಿತ್ತೋ ಗುಹೆಯ ಒಳಗಡೆ ಅಷ್ಟೇ ತಂಪಾದ ವಾತಾವರಣವಿದೆ.  ಶಿವ ಲಿಂಗದ ಗರ್ಭಗುಡಿ ಒಂದೆಡೆಯಾದರೆ , ಅಂಬುಜಾ ದುರ್ಗಿಯ ಗುಡಿ ಇನ್ನೊಂದೆಡೆ. ಶಿವಲಿಂಗದ ಸುತ್ತ ಕುಳಿತು ಮಾಡಿದ ಭಜನೆ, ಅಮರಣ್ಣನ ರುದ್ರ ಪಠಣ ಎಲ್ಲವೂ ಕಿವಿಗೆ ಮತ್ತು ಮನಸ್ಸಿಗೆ ಆನಂದವನ್ನು ನೀಡಿದವು. ಧ್ಯಾನದ ನಂತರ ಹೊರಗಡೆ ಬಂದು ನಮ್ಮ ಯೋಗ ಯಾತ್ರೆಯ ಟೀಮಿನೊಂದಿಗೆ ಒಂದಷ್ಟು ಫೋಟೋ ಶೂಟ್ ಮಾಡಿಕೊಂಡು ಅಲ್ಲಿಂದ ಹೊರಟೆವು. ಮಂಗಗಳ ಕಾಟ ಮಾತ್ರ ಇಲ್ಲಿ ತುಂಬಾ ಜಾಸ್ತಿ, ಹಾಗಾಗಿ ಕೈಯಲ್ಲಿ ಯಾವುದೇ ರೀತಿಯ ಬ್ಯಾಗ್ ತಿಂಡಿ ಪೊಟ್ಟಣಗಳ ಕಾಪಾಡಿಕೊಳ್ಳುವುದು ಕಷ್ಟಸಾಧ್ಯ .










ಮರಳಿ ಬರುವಾಗ ಹಾಗೂ ಹೀಗೂ ಸಮಯ ಉಳಿಸಿಕೊಂಡು, ತಾತಯ್ಯ ಗುಹೆ ಮತ್ತು ಆಧ್ಯಾ ತ್ಮಿಕ ಸ್ಥಳಕ್ಕೊಂಡು ಶೀಘ್ರ ಭೇಟಿ ನೀಡಿದೆವು. ಸಂತ ತಾತಯ್ಯ ನವರು ಜ್ಞಾನೋದಯ ಪಡೆದುಕೊಂಡ ಗುಹೆಯಿದು ಎಂಬ ಪ್ರತೀತಿಯಿದೆ. ಸೂರ್ಯ ಮುಳುಗುವ ಹೊತ್ತಾದ್ದರಿಂದ ದೇವಾಲಯದ ಹೊರಾಂಗಣ ಮತ್ತು ಸುತ್ತಮುತ್ತಲಿನ ಬೆಟ್ಟಗುಡ್ಡಗಳು ಹೊಂಬಣ್ಣದಿಂದ ಕೂಡಿದ್ದು ನೋಡಲುಅದ್ಭುತವಾಗಿತ್ತು. ಭಕ್ತಿಯೋಗದ ಪ್ರಕಾರಗಳಲ್ಲಿ ಸಂಗೀತ ನೃತ್ಯ ಎಲ್ಲವೂ ಒಪ್ಪಿತ. ಭಜನೆಗಳ ಜೊತೆಗೆ ಎಲ್ಲರೂ ಸಂಗೀತ ನೃತ್ಯ ಕೊಳಲು ವಾದನದ ಜೊತೆಗೆ ಧ್ಯಾನ ಮುಗಿಸಿ, ಸವಿ ಸವಿ ನೆನಪುಗಳೊಂದಿಗೆ, ಹಗುರಾದ ಮನಸ್ಸಿನೊಂದಿಗೆ ಅಲ್ಲಿಂದ ಹೊರಟು ರಾತ್ರೆಗೆ ಬೆಂಗಳೂರು ತಲುಪಿದೆವು. 












ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ