ಮಂಗಳವಾರ, ಏಪ್ರಿಲ್ 23, 2024

HPE_CSR ಸ್ವಯಂ ಸೇವೆ

HPE_CSR ಟೀಮ್ ನಿಂದ, ಸರ್ಕಾರಿ ಶಾಲಾ ಮಕ್ಕಳಿಗೆ ಟೀಮ್ ಬಿಲ್ಡಿಂಗ್ ಆಕ್ಟಿವಿಟಿ ನೀಡುವ ಸ್ವಯಂ ಸೇವೆ ನೀಡಲು ನಾವು ಕಳೆದ ಶನಿವಾರ, ೨೦ನೇ ಏಪ್ರಿಲ್, ದೊಡ್ಡಬನಹಳ್ಳಿ ಶಾಲೆಯ ಸರ್ಕಾರೀ ಪ್ರಾಥಮಿಕ ಶಾಲೆಯೊಂದಕ್ಕೆ ಭೇಟಿ ನೀಡಿದೆವು. ಬೇಸಿಗೆ ರಜೆ, ಶಾಲೆ ನಡೆಯುವ ಕಾಲವಲ್ಲ, ಎಷ್ಟು ಮಕ್ಕಳು ಬಂದಾರು ಎಂಬ ಅಳುಕಿನಿಂದಲೇ ನಾವು ೬ ಜನರ ತಂಡ ದೊಡ್ಡಬನಹಳ್ಳಿಗೆ ಭೇಟಿನೀಡಿದೆವು. ೩೮ ಮಕ್ಕಳ ಉತ್ಸಾಹದ ಪಾಲ್ಗೊಳ್ಳುವಿಕೆ ನಮ್ಮನ್ನು ಅಚ್ಚರಿ ಮಾಡಿಸಿತು ಮತ್ತು ನಮ್ಮ ಉತ್ಸಾಹ ದುಪ್ಪಟ್ಟಾಗುವಂತೆ ಮಾಡಿತು. ಮಕ್ಕಳೊಂದಿಗೆ ಮಾತುಕತೆ, ಅವರೊಂದಿಗೆ ಕೂಡಿ ನಡೆಸಿದ ಮಂಡಲ ಚಿತ್ರಕಲೆ, ನಕ್ಕು ನಲಿದು ತಿಂಡಿ ಹಣ್ಣುಗಳ ತಿಂದು, ಕಥೆ ಪುಸ್ತಕಗಳ ನೀಡಿ ಬರುವುದರೊಂದಿಗೆ, ೪ ತಾಸುಗಳ ಈ ಕಾರ್ಯಕ್ರಮ, ಮಕ್ಕಳು ಮತ್ತು ನಮ್ಮ ಪಾಲಿಗೆ ಅತ್ಯಂತ ಯಶಸ್ವೀ ಕಾರ್ಯಕ್ರಮ.  

ಸ್ವಯಂ ಸೇವೆ ಒಂದು ಕರ್ಮಯೋಗ. ಲೆಟ್ಸ್ ಗ್ರೋ ಟುಗೆದರ್ ಎಂದಾಗ ಮಾತ್ರ ನಮ್ಮ ಯಶಸ್ಸು ಎಂಬುವುದು ಪರಿಪೂರ್ಣವಾಗುವುದು. ಅದೇ ಪರಿಕಲ್ಪನೆಯಲ್ಲಿ ನಮ್ಮ HPE_CSR ಟೀಮ್, ಕಂಪೆನಿಯ ಸಹಕಾರದಿಂದ ಸಮಾಜಕ್ಕಾಗಿ, ಪರಿಸರಕ್ಕಾಗಿ ಅನೇಕ ಕಾರ್ಯಕ್ರಮಗಳ ಮೂಲಕ  ತಮ್ಮನ್ನು ತಾವೇ ಕೆಲಕಾಲದಿಂದ ತೊಡಗಿಸಿಕೊಳ್ಳುತ್ತ ಬರುತ್ತಿದೆ. ಈ ವಾರ, ನಾವು ಏಳು ಮಂದಿ, ಲೋಕೇಶ್, ಮಹಂತೇಶ್, ಅರುಣಾ, ಸೌಮ್ಯ, ಪಾರುಲ್, ಮಹೇಶ್, ದೀಪಮಾಲಾ ಈ ಸರ್ತಿಯ ಕಾರ್ಯಕ್ರಮಕ್ಕೆ ತಯಾರಾದೆವು. Child Right  Foundation NGO ಮುಖ್ಯಸ್ಥ ಕ್ರಿಸ್ಟಫರ್ ಮೂಲಕ ಸಂಪರ್ಕ ಸಿಕ್ಕಿದ ದೊಡ್ಡಬನಹಳ್ಳಿ ಶಾಲೆ ಬೆಂಗಳೂರಿನಿಂದ ಸುಮಾರು ೫೦ ಕಿಮೀ ದೂರದಲ್ಲಿದೆ. ಶಾಲೆಯಲ್ಲಿ ೧ ರಿಂದ ೭ ನೇ ತರಗತಿಯವರೆಗೆ ಸುಮಾರು ೨೦೦ ಮಕ್ಕಳಿದ್ದಾರೆ. ಮಕ್ಕಳ ಪೋಷಕರಲ್ಲಿ ಹೆಚ್ಚಿನವರು ದೈನಂದಿನ ವೇತನ ಹೊಂದಿರುವ ಕಾರ್ಮಿಕರು ಮತ್ತು ರೈತರು. ಸರ್ಕಾರೀ ಸವಲತ್ತುಗಳ ಪಡೆದುಕೊಂಡು ಶಿಕ್ಷಣ ಪಡೆಯುತ್ತಿರುವ ಈ ಮಕ್ಕಳ ಶ್ರದ್ಧೆ, ಕಲಿಯುವ ಆಸಕ್ತಿ ಮೆಚ್ಚುವಂತಿದೆ. ನಾವು ಅಲ್ಲಿಗೆ ತಲುಪುವಾಗ ಮಕ್ಕಳು ಶಾಲೆಯ ಆವರಣವನ್ನು ಸ್ವಚ್ಛಗೊಳಿಸಿ, ಗಿಡಗಳಿಗೆ ನೀರುಣಿಸುತ್ತಿದ್ದರು. ಶಾಲೆಯ ಮುಖ್ಯೋಪಾಧ್ಯಾಯರಾದ ಶ್ರೀ ಮಂಜುನಾಥ್ ಸರ್  ಮತ್ತು ಶಾಲೆಯ ಹಿತೈಷಿ, ನಿವೃತ್ತ ಮುಖ್ಯೋಪಾಧ್ಯಾಯರಾದ  ಶ್ರೀ ರಾಜಶೇಖರ ಹಂದೆ ಅವರು ನಮ್ಮನ್ನು ಆತ್ಮೀಯವಾಗಿ ಬರಮಾಡಿಕೊಂಡು ಶಾಲೆಯ ವ್ಯವಸ್ಥೆಗಳ ಕುರಿತು ನಾಲ್ಕೈದು ಮಾತನಾಡಿದರು. ಹಿಂದಿನ ಭೇಟಿಯಲ್ಲಿ ಮಕ್ಕಳಿಗೆ ಸಿಕ್ಕ ಸೈಕಲ್ ಬಳಕೆಯಾದ ಬಗ್ಗೆ ಮೆಚ್ಚುಗೆಯ ಮಾತನ್ನಾಡಿದರು. 

ಮಕ್ಕಳೇ ನಡೆಸಿದ ಒಂದು ಸ್ವಾಗತ ಕಾರ್ಯಕ್ರಮದ ನಂತರ, ಮಕ್ಕಳಿಗೆ 'ಮಂಡಲ ಚಿತ್ರಕಲೆ' ಯ ಕುರಿತಾಗಿ ಮಾಹಿತಿ ತಿಳಿಸಿ, ನಾವು ಸಿದ್ಧವಿಟ್ಟುಕೊಂಡು ಹೋಗಿದ್ದ ಮಂಡಲ ಚಿತ್ರಕಲೆ ಕಿಟ್ ಅನ್ನು ಮಕ್ಕಳಿಗೆ ಲೋಕೇಶ್ ಮತ್ತು ಇತರರು ವಿತರಿಸಿದರು. ಮಂಡಲ ಒಂದು ಆಧ್ಯಾತ್ಮಿಕ ಚಿತ್ರಕಲೆ. ಕಣ್ಣು ಮತ್ತು ಕೈಯ ಹೊಂದಾಣಿಕೆ, ಆತಂಕವನ್ನು ಹೋಗಲಾಡಿಸಿ ಏಕಾಗ್ರತೆಯನ್ನು ಹೆಚ್ಚಿಸುವ ವೈಜ್ಞಾನಿಕ ಕಲೆಯಿದು. ಚಿತ್ರಗಳ ಮೂಲಕ ಕ್ರಿಯಾಶೀಲತೆ ಹೆಚ್ಚಿಸುವ ಈ ಚಿತ್ರಕಲೆ ವಿದ್ಯಾರ್ಥಿಗಳಿಗೆ ಅತ್ಯಂತ ಸಹಕಾರಿ. ಕಳೆದ ೫-೬ ವರ್ಷಗಳಿಂದ ತಮ್ಮ ಪ್ರವೃತ್ತಿಯಾಗಿ ಮಂಡಲ ಮತ್ತು ಹಸೆ, ವರ್ಲಿ, ಮಧುಬನಿಯಂತಹ ಜಾನಪದಚಿತ್ರಕಲೆಯನ್ನು ರೂಢಿಸಿಕೊಂಡು, ಬಳಸಿ, ಇತರರಿಗೂ ಕಲಿಸಿಕೊಡುವ ಕಾರ್ಯವನ್ನು ಮಾಡುತ್ತಿರುವ ಸೌಮ್ಯಬೀನಾ, ಮಂಡಲ ಚಿತ್ರಕಲೆಯನ್ನು ಅತ್ಯಂತ ಆಸ್ಥೆಯಿಂದ ಮಕ್ಕಳಿಗೆ ಕಲಿಸಿದರು. ವರ್ಲ್ಡ್ ಹೆರಿಟೇಜ್ ಡೇ ಸಂದರ್ಭವಾಗಿದ್ದರಿಂದ, ನಮ್ಮ ದೇಶದ ಪರಂಪರೆಯ  ಮೌಲ್ಯವನ್ನು ಎತ್ತಿ ಹಿಡಿಯಲು, ನಾವು ಸಾಮಾನ್ಯ ಜನರು ಕೊಡಬಹುದಾದ ಚಿತ್ರಮಾಧ್ಯಮ ಕೊಡುಗೆಯನ್ನು ತಮ್ಮ ಚಿತ್ರಕಲೆಯ ಪ್ರದರ್ಶನದ ಮೂಲಕ ಸೌಮ್ಯ ಮಕ್ಕಳಿಗೆ ವಿವರಿಸಿ ಹೇಳಿದರು. ಪ್ರಕೃತಿ ಮತ್ತು ಕಲೆ ಹೇಗೆ ಒಂದಕ್ಕೊಂದು ಪೂರಕ, ಪ್ರಕೃತಿಯ ಆರಾಧನೆಗೆ ಕಲೆ ಹೇಗೆ ಸಹಾಯ ಮಾಡುತ್ತದೆ ಎಂಬಿತ್ಯಾದಿ ವಿಷಯಗಳ ತಮ್ಮ ಕಾರ್ಯಾಗಾರದಲ್ಲಿ ಬಲು ಸರಳವಾದ ಉದಾಹರಣೆಯೊಂದಿಗೆ ವಿವರಿಸಿದರು. ಬಳಿಕ ತಾವು ರಚಿಸಿದ ಮಂಡಲ ಚಿತ್ರಕ್ಕೆ ಬಣ್ಣ ಹಚ್ಚುವ ಅವಧಿಯನ್ನು ಸಂಭ್ರಮಿಸಿದರು. ಮಕ್ಕಳಿಗೆ ಸಹಾಯ ಮಾಡುತ್ತಾ,  ಮಂಡಲ ಚಿತ್ರವನ್ನು, ಮಕ್ಕಳೊಂದಿಗೆ ತಾವೂ ಕುಳಿತು ಮಹಂತೇಶ್, ಪಾರುಲ್, ಅರುಣಾ ದೀಪಮಾಲಾ ಎಲ್ಲರೂ ಬರೆದದ್ದು ಮಕ್ಕಳಿಗೆ ತಮ್ಮ ಹಿಂಜರಿಕೆಯಿಂದ ಹೊರಬಂದು ತಾವೆಲ್ಲರೂ ಒಂದೇ ಎಂಬ ಆರಾಮದಾಯಕ ಭಾವನೆ ನೀಡಿತು. ಪಾರುಲ್ ಮತ್ತು ಅರುಣ, ಮಂಡಲ ಚಿತ್ರಕಲೆಯನ್ನು ತಮ್ಮದೇ ಆಲೋಚನೆಯಲ್ಲಿ ರಚಿಸಿ, ಕಲೆಯನ್ನು ಹೇಗೆ ಇನ್ನಷ್ಟು ಕ್ರಿಯಾತ್ಮಕವಾಗಿಸಬಹುದು ಎಂದು ತೋರಿಸಿಕೊಟ್ಟರು. 

ಬೇಸಿಗೆಯಾದ್ದರಿಂದ ಮಕ್ಕಳ ಸಂತೋಷವೊಂದೇ ಅಲ್ಲದೆ ಅವರ ಆರೋಗ್ಯವನ್ನೂ ಗಮನದಲ್ಲಿರಿಸ್ಕೊಂಡು, ಮಕ್ಕಳಿಗೆ ಪ್ರಿಯವಾಗುವ ಬಿಸ್ಕಿಟ್ ಚಿಪ್ಸ್ ಜೊತೆಯಲ್ಲಿ ಸಾಕಷ್ಟು ಕಲ್ಲಂಗಡಿ ಹಣ್ಣುಗಳನ್ನು ಕೊಂಡೊಯ್ದಿದ್ದೆವು. ಕಲ್ಲಂಗಡಿ ಹಣ್ಣನ್ನು ಅಲ್ಲಿಯೇ ಕುಳಿತು ಹೆಚ್ಚಿ ಹಂಚುವಲ್ಲಿ ಮಹೇಶ್, ಲೋಕೇಶ್, ಪಾರುಲ್ ಸಹಕರಿಸಿದರು. ಮಕ್ಕಳು ಮನಸೋ ಇಚ್ಛೆ ಹಣ್ಣನ್ನು ತಿಂದು ಖುಷಿ ಪಟ್ಟರು. ಆಹಾರ ಪೊಟ್ಟಣ ಸೇರಿದಂತೆ, ಕನಿಷ್ಠ ಪ್ಲಾಸ್ಟಿಕ್ ಬಳಕೆಯ, ಏಕೋ ಫ್ರೆಂಡ್ಲಿ ಸಂತೋಷಕೂಟ ನಮ್ಮದಾಗಿತ್ತು.  ಹಸಿಕಸ ಒಣಕಸ ಬೇರ್ಪಡಿಸಿ, ಕಸ ವಿಲೇವಾರಿ ಕೂಡ ನಾವು ಮಕ್ಕಳು ಎಲ್ಲರೂ ಸೇರಿ ತ್ವರಿತವಾಗಿ ಮಾಡಿ ಮುಗಿಸಿದೆವು.  ನಂತರ ಪುಟ್ಟದೊಂದು ಸಭೆ ತಯಾರು ಮಾಡಿಕೊಂಡು ಆ ದಿನದ ಕಾರ್ಯಾಗಾರದ ಕುರಿತಾಗಿ ಮಕ್ಕಳೆಲ್ಲರ ಅಭಿಪ್ರಾಯ ಕೇಳಿಕೊಂಡು, ಮಕ್ಕಳಿಗೆ ಅವರ ಚಿತ್ರಕಲೆಯ ಪ್ರಯತ್ನಕ್ಕೆ ಪ್ರತಿಫಲವಾಗಿ, ಕಥೆಪುಸ್ತಕಗಳ ಉಡುಗೊರೆ ನೀಡಿದೆವು. ವರ್ಲ್ಡ್ ಬುಕ್ ಡೇ ಹತ್ತರವಿರುವಾಗ, ಕಥೆ ಪುಸ್ತಕಗಳ ಹಂಚಿಕೆ,  ತಿಳಿಸಿದರು. ಈಗ ಸರ್ವೇಸಾಮಾಯವಾಗಿರುವ, ಮೊಬೈಲ್ ಮತ್ತು ಸೋಶಿಯಲ್ ಮೀಡಿಯಾ ಗೀಳಿನ ಮಧ್ಯೆ  ಮಕ್ಕಳ ಸರ್ವತೋಮುಖ ಬೆಳವಣಿಗೆಗೆ ಕಥೆಪುಸ್ತಕಗಳು ಅತ್ಯಂತ ಮುಖ್ಯವಾಗುತ್ತವೆಯಾದ್ದರಿಂದ, ನಮ್ಮ ಸಹಾಯಹಸ್ತವನ್ನು ಶಾಲೆಯ ಮುಖ್ಯಸ್ಥರು ಮನದಣಿಯೆ ನೆನೆದರು. ಮಕ್ಕಳ ಹೊಸ ಕಲಾಮಾಧ್ಯಮವ ಕಲಿಯುವ ಆಸಕ್ತಿ, ಮಾತುಕತೆ, ಕಥೆಪುಸ್ತಕಗಳ ಕಂಡೊಡನೆ ಹಾತೊರೆಯುವಿಕೆ ಎಲ್ಲವೂ ನಮ್ಮ ಇಡೀ ದಿನದ ಸಂಘಟನಾ ಕಾರ್ಯಕ್ರಮವನ್ನು ಸಾರ್ಥಕಗೊಳಿಸುವಂತೆ ಮಾಡಿತು. 



 

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ