ಸೋಮವಾರ, ಜೂನ್ 18, 2018

ಒಂದು ಚಪ್ಪಾಳೆ 'ನಮ್ಮ ಮೆಟ್ರೋ' ಗೆ

ಒಂದು ಕಾಲವಿತ್ತು. ಬೆಂಗಳೂರಿನಿಂದ ನಾವು ಊರಿಗೆ ಹೋಗಬೇಕೆಂದರೆ, ನಮ್ಮ ಮನೆಯಿಂದ ಸಾಕಷ್ಟು ದೂರದಲ್ಲಿರುವ ಮೆಜೆಸ್ಟಿಕ್ ಗೆ ಸಿಟಿ ಬಸ್ ಹತ್ತಿ ಕುಳಿತು, ಹೊಂಡ ಗುಂಡಿ ರಸ್ತೆಗಳನ್ನು ದಾಟುತ್ತ(ಹಾರುತ್ತ), ಒಂದೆರಡು ಗಂಟೆ ಬೆಂಗಳೂರು ದರ್ಶನ ಫ್ರೀಯಾಗಿ ಪಡೆದು,  ಕಡೆಗೂ ತಲುಪಿದ ಸಮಯಕ್ಕೆ ಯಾವ ಬಸ್ ಸಿಕ್ಕರೂ ಅದೇ ನಮ್ಮ ಪುಣ್ಯ ಎಂದು ಭಾವಿಸಿ,  ಊರಿಗೆ ಪ್ರಯಾಣಿಸುತ್ತಿದ್ದೆವು. ಅದರಲ್ಲೂ ಹಬ್ಬಕ್ಕೆಲ್ಲ ಊರಿಗೆ ಹೋಗುವಾಗಲೆಂತೂ ಟ್ರಾಫಿಕ್ ಜಾಮನ್ನು ನೋಡಿಬಿಟ್ಟರೆ ತಲೆತಿರುಗುತ್ತಿತ್ತು. ಬಸ್ಸು ರಾತ್ರೆ ೧೦ ಗಂಟೆಗಿದ್ದರೂ, ೬.೪೫ ಗೆ ಆಫೀಸಿನಿಂದ ಬಂದಿದ್ದೆ ಮತ್ತೆ ಬ್ಯಾಗು ಹಿಡಿದು ಓಡುವುದೇ ನಮ್ಮ ಕೆಲಸ..ಇನ್ನು, ಮೆಜೆಸ್ಟಿಕ್ಗೆ  ಹೋಗುವ ಸಿಟಿ ಬಸ್ನ ಪ್ರಯಾಣದ ಸುಖ ಏನ್ ಕೇಳ್ತೀರಿ..!! ೫ ನಿಮಿಷಕ್ಕೆ ಒಂದಿಂಚು ಹಾದಿ ಸಾಗುತ್ತಿರುವ ಬಸ್ಸಿನಿಂದ ಮಧ್ಯದಲ್ಲೇ ಇಳಿದು, ಎದುರಿನ ದರ್ಶಿನಿಯಲ್ಲಿ ಸಿಂಗಲ್ ಇಡ್ಲಿ ತಿಂದು, ಒಂದು ಕಾಪಿ ಕುಡಿದು, ತೊಳೆದ ಕೈ ಒರೆಸಿಕೊಂಡು ಮತ್ತೆ ಅದೇ ಬಸ್ಸನ್ನು ನಾಲ್ಕೇ ಹೆಜ್ಜೆ ಮುಂದಕ್ಕಿಟ್ಟು ಹತ್ತಬಹುದಾದಂತಹ ಸೌಭಾಗ್ಯ.. ಆ ರೇಂಜಿಗೆ ಬಸ್ಸಿನ ವೇಗದ ಮಿತಿ. ಇದರ ಜೊತೆ, ಸರಿಯಾದ ಸಮಯಕ್ಕೆ ಬಸ್ ಸ್ಟಾಂಡ್ ತಲುಪುತ್ತೇವೋ ಇಲ್ಲವೋ  ಅನ್ನೋ ಟೆನ್ಶನ್. ಕೂತ ಬಸ್ಸಲ್ಲೇ ಸರ್ಕಾರದ ವ್ಯವಸ್ಥೆಯನ್ನು ಬೈಯುತ್ತಾ, ನಮ್ಮ ನಸೀಬನ್ನು ಹಳಹಳಿಸುತ್ತ ಇರುತ್ತಿದ್ದೆವು. ಈ ಹೈರಾಣ ಸಿಟಿ ಬಸ್ಸಿನ ಪ್ರಯಾಣಕ್ಕೊಂದೇ ಸೀಮಿತ ಅಲ್ಲ. ಬೆಂಗಳೂರಿನಲ್ಲಿ, ವಾಹನ ಸವಾರಿಯಾಗಿ ಎಲ್ಲಿಗಾದರೂ ಹೋಗಬೇಕೆಂದರೆ, ಒಂದೋ ದೊಡ್ಡ ದೊಡ್ಡ ಮುಖ್ಯ ರಸ್ತೆಗಳಲ್ಲಿ ಹಸಿರು ಕೆಂಪು ದೀಪಗಳನ್ನು ಕಣ್ಣು ಮಂಜು ಮಾಡಿ ನೋಡಿಕೊಂಡು, ಮೇರಾ ನಂಬರ್ ಕಬ್ ಆಯೇಗಾ ಎಂದು ಮುಗಿಯದ ವಾಹನಗಳ ಸರದಿಯಲ್ಲಿ ಕಾಯುತ್ತ, ಕ್ಲಚ್ಚು ಬ್ರೇಕು ಅದುಮಿ ಹಿಡಿದು, ಗಂಟೆಗಟ್ಟಲೆ ನಿಂತು ನಿಂತು ಚಲಿಸುತ್ತ ಮುಂದಕ್ಕೆ ಸಾಗಬೇಕು.  ಇಲ್ಲವೋ, ಈ  ಪೇಚಾಟ ತಪ್ಪಿಸುವ ಸಲುವಾಗಿ ಶಾರ್ಟ್ಕಟ್  ಎಂದು ಚಿಕ್ಕ ಚಿಕ್ಕ ಕೊಂಪೆ ರಸ್ತೆಗಳ್ಳಲ್ಲಿ ನಮ್ಮ ಗಾಡಿಯನ್ನು ನುಗ್ಗಿಸುತ್ತಾ, ಗುದ್ದಿಸುತ್ತ, ಗುದ್ದಿಸಿಕೊಳ್ಳುತ್ತ, ಒಬ್ಬರಿಗೊಬ್ಬರು ಬೈದುಕೊಂಡು ಬಿಪಿ ಹೆಚ್ಚು ಕಡಿಮೆ ಮಾಡಿಕೊಂಡು, ಹೋರಾಡಿ ಮುನ್ನುಗ್ಗುವ ಸಾಹಸ..ಎಲ್ಲಿ ಹೋದರೂ, ಹಿಂದೆ ಮುಂದೆ ಹಾಂಕರಿಸುವ (ಅಬ್ಬರಿಸುವ) ಇತರ ವಾಹನಗಳ ಶಬ್ದ, ಪಕ್ಕದಲ್ಲೇ ಎಲ್ಲೋ ಚಂಡಿಕಾ ಹೋಮ ನಡೆದಿದೆ ಎನ್ನುವಂತೆ ಕಾಣುವಷ್ಟು ದಟ್ಟವಾದ ಮಾಲಿನ್ಯದ ಹೊಗೆ ಒಂದಷ್ಟು ಕುಡಿದು, ಅಂತೂ ಡೆಸ್ಟಿನಿ ತಲುಪವಷ್ಟರಲ್ಲಿ ಇಂದ್ರೀಯಾದಿಯಾಗಿ ದೇಹದ ಸಕಲ ಭಾಗವೂ ನಜ್ಜುಗುಜ್ಜು. ಇದು ಬೆಂಗಳೂರಿಗರ ಸಾಕಷ್ಟು ಜನರ ನಿತ್ಯ ಪರಿಪಾಠ. ಅನುಭವಿಸಿದವನಿಗೇ ಗೊತ್ತು ಬೆಂಗಳೂರಿನ ಟ್ರಾಫಿಕ್ ಸಮಸ್ಯೆ.  ಇಂತಿಪ್ಪ ಊರಿನಲ್ಲಿ ಕನಕಪುರ ಕಡೆಯಿಂದ ಯಶವಂತಪುರ ರೈಲ್ವೆ ಸ್ಟೇಷನ್ ಗೆ ಪ್ರಯಾಣಿಸಬೇಕಿದ್ದ ನಾನು ಇಂದು ೩ ಗಂಟೆ ಪ್ರಯಾಣ ಬೇಕಾಗುತ್ತಿದ್ದ  ಸ್ಥಳಕ್ಕೆ ೪೦ ನಿಮಿಷಕ್ಕೆ ತಲುಪಲು ಸಾಧ್ಯವಾಗಿಸಿದ್ದು 'ನಮ್ಮ ಮೆಟ್ರೋ'!.

ಟ್ರಾವೆಲ್ ಚಾನಲೊಂದರಲ್ಲಿ ಮುಂಬೈ ನ ಬ್ಯುಸಿ ರೈಲ್ವೆ ಸಿಸ್ಟಮ್ ಕುರಿತು ಡಾಕ್ಯುಮೆಂಟರಿ ನೋಡಿ ಬೆರಗಾಗಿದ್ದ ನನಗೆ, ನಮ್ಮ ಬೆಂಗಳೂರಿಗೂ ಮೆಟ್ರೋ ಬರುತ್ತದೆಯಂತೆ ಎಂಬ ಸುದ್ದಿ ಅತ್ಯಂತ ಸಂತೋಷ ಮತ್ತು ಕಾತುರತೆಯನ್ನು ತಂದಿತ್ತು. ಮೆಟ್ರೋ ಟ್ರೈನಿನ ಸಂಚಾರ ಕುತೂಹಲಕ್ಕಿಂತಲೂ ಅದರ ವಿಳಂಬತೆಗೆ ಹೆಚ್ಚು ಸುದ್ದಿಯಾಗತೊಡಗಿದಾಗ  ಅಷ್ಟೇ ನಿರಾಸೆಯಾಗಿತ್ತು. ಮಂದಗತಿಯಲ್ಲಿ ಸಾಗುತ್ತಿದ್ದ ಮೆಟ್ರೋ ನಿರ್ಮಾಣ ಕಾರ್ಯ, ಅದಕ್ಕೆಂದು ಕಂಡ ಕಂಡಲ್ಲಿ ಅಗೆದಿಟ್ಟ ರಸ್ತೆಗಳನ್ನು, ಹೆಚ್ಚಿದ ಟ್ರಾಫಿಕ್ ಜಾಮ್ ಗಳನ್ನು ನೋಡಿ ಇದು 'ಮುಗಿಯದ' ಪಂಚವಾರ್ಷಿಕ ಯೋಜನೆ ಎಂದು ಒಂದಷ್ಟು ಬೈದುಕೊಂಡಿದ್ದಾಗಿತ್ತು.

ತಡವಾಗಿಯಾದರೂ ಹಾಗೊಂದು ದಿನ ಮೆಟ್ರೋ ರೈಲು ಸಂಪರ್ಕ ಪ್ರಾಯೋಗಿಕ ಹಂತವಾಗಿ ಬಯ್ಯಪ್ಪನಹಳ್ಳಿ ಯಿಂದ ಮಹಾತ್ಮಾ ಗಾಂಧಿ ರಸ್ತೆ ವರೆಗೆಂದು ಉದ್ಘಾಟನೆಗೊಂಡಾಗ, ನವೀನ ಮಾದರಿಯ ರೈಲು ಸಂಪರ್ಕ ವ್ಯವಸ್ಥೆ ಎಲ್ಲೆಡೆ ಬಿಸಿ ಬಿಸಿ ಸುದ್ಧಿಯನ್ನುಂಟುಮಾಡಿತ್ತು. ಎಂಜಿ ರೋಡಿನ ಮೆಟ್ರೋ ಸ್ಟೇಷನ್, ನೋಡುಗರ ತಾಣವಾಗಿ ಮಾರ್ಪಾಟುಗೊಂಡುಬಿಟ್ಟಿತ್ತು. ಎಲ್ಲರಂತೆಯೇ ನಾವೂ ಕೂಡ ಯಾವುದೋ ಒಂದು ಪ್ರಸಿದ್ಧ ಪ್ರವಾಸಿ ತಾಣಕ್ಕೆ ಹೋಗುವಂತೆ ಅಪ್ಪಾಜಿ ಅಮ್ಮ ಎಲ್ಲರನ್ನೂ ಕರೆದುಕೊಂಡು ಹೋಗಿ, ಎಂಜಿ ರೋಡಿನಿಂದ ಬೈಯಪ್ಪನಹಳ್ಳಿ ವರೆಗೆ ಮೆಟ್ರೋ ಟ್ರೈನಿನಲ್ಲಿ ಒಂದು ರೌಂಡ್ ಹೊಡೆದಿದ್ದಾಯಿತು. ಜನಜಂಗುಳಿಯ ಊರಿನಲ್ಲಿ, ನಿಶ್ಯಬ್ದವಾಗಿ ಕ್ಷಣಮಾತ್ರದಲ್ಲಿ ಒಂದು ಸ್ಥಳದಿಂದ ಇನ್ನೊಂದೆಡೆಗೆ ಕರೆದೊಯುವ ಎಸಿ ಟ್ರೈನ್, ವ್ಯವಸ್ಥಿತ ಟಿಕೆಟ್ ಪಡೆಯುವ, ಸಂಚರಿಸುವ ವಿಧಾನ, ಟ್ರೈನಿನ ಒಳಾಂಗಣ ಹೊರಾಂಗಣ ವಿನ್ಯಾಸಗಳನ್ನೆಲ್ಲ ನೋಡಿ ಮರುಳಾಗಿದ್ದೆಲ್ಲ ಆಯಿತು. ಇದರ ಜೊತೆಗೆ, ಮಾಡಲೇ ಬೇಕಾದ ಕರ್ತವ್ಯವೆಂಬಂತೆ, ಮೆಟ್ರೋ ಸ್ಟೇಷನ್ನಿಂದ ಹಿಡಿದು ಒಳಗಡೆ ಟ್ರೈನಿನ ಕಂಬದ ವರೆಗೂ, ಕುಳಿತು, ನಿಂತು, ಒರಗಿ ಒಂದಷ್ಟು ಫೋಟೋ ಕ್ಲಿಕ್ಕಿಸಿಕೊಂಡು ಸಂಭ್ರಮಿಸಿ ಬಂದಿದ್ವಿ.


ಈಗ ಹಂತ ಹಂತವಾಗಿ ಮೆಟ್ರೋ ಪೂರ್ಣ ಪ್ರಮಾಣದ ಸಂಚಾರ ಅಸ್ತಿತ್ವಕ್ಕೆ ಬಂದಿದೆ. ನೇರಳೆ ಮತ್ತು ಹಸಿರು ಮಾರ್ಗವಾಗಿ ಮೆಟ್ರೋ ಟ್ರೈನ್ ಗಳಲ್ಲಿ ಸಂಚರಿಸುವ ಬೆಂಗಳೂರಿಗರು ದಿನಕ್ಕೆ  ಸರಿ ಸುಮಾರು ೧ ಲಕ್ಷ. ನೇರಳೆ ಮತ್ತು ಹಸಿರು ಬಣ್ಣದ ಮಾರ್ಗಗಳು ಅದೆಷ್ಟು ದೂರದ ಸ್ಥಳಗಳನ್ನೂ ಅತೀ ಕಡಿಮೆ ಸಮಯದಲ್ಲಿ ಕೂಡಿಸುತ್ತದೆ. ಸಧ್ಯಕ್ಕೆ ದಿನನಿತ್ಯದ ಪಯಣಿಗಳು ನಾನಲ್ಲದಿದ್ದರೂ, ಹೊರಗೆ ಓಡಾಡುವ ಅವಶ್ಯಕತೆಗೆ ನಾನು ಹೆಚ್ಚು ಅವಲಂಭಿಸಿರುವುದು ಮೆಟ್ರೋ ಟ್ರೈನ್ ಗೆನೆ. ಊರಿಗೆ ಹೋಗಲು ಈಗ ಅದೆಷ್ಟು ಸುಲಭ! ಮೆಟ್ರೋ ಆದಾಗಿನಿಂದ  'ದೂರದ' ಸಂಬಂಧಿಗಳೂ ಕೂಡ ಈಗ ಹತ್ತಿರವಾಗಿದ್ದಾರೆ..ಸ್ವಚ್ಛವಾದ ಸ್ಟೇಷನ್ಗಳು, ಎಲ್ಲಿಂದ ಎಲ್ಲಿಯವರೆಗೆ ಹೋದರೂ ಸಿಗುವ ಮೆಟ್ರೋ ಸಿಬ್ಬಂದಿ ವರ್ಗದವರ ಉತ್ತಮ ಮಾರ್ಗದರ್ಶನ, ಯಾವುದೇ ಟ್ರಾಫಿಕ್ಕಿನ ಕಿರಿಕಿರಿಯಿಲ್ಲದೆ, ಸಮಯದ ವ್ಯಯವಿಲ್ಲದೆ, ನಿರರ್ಮಳವಾಗಿ ಕುಳಿತು ಸಂಚರಿಸುವ ವ್ಯವಸ್ಥೆ,  ಟ್ರೈನಿನಲ್ಲಿ ಕುಳಿತಿರುವಷ್ಟು ಹೊತ್ತು ಸಿಗುವ ನೂರಾರು ಮುಖಗಳು, ನೂರಾರು ಕಥೆಗಳು, ಎಲ್ಲವೂ ಖುಷಿ ಕೊಡುತ್ತದೆ ನನಗೆ... ಇಷ್ಟೆಲ್ಲಾ ಸಿಕ್ಕಿರುವ ಕಾರಣಕ್ಕೋ ಏನೋ, ಇಂದು ಹಸಿರು ಮಾರ್ಗದ ಮೆಟ್ರೋ ಟ್ರೈನಿನಲ್ಲಿ ಈ ಸಂಪರ್ಕವು ನೆನ್ನೆಗೆ ತನ್ನ ಒಂದು ವರ್ಷದ ಯಶಸ್ವಿ 'ಯಾನ' ವನ್ನು ಸಂಭ್ರಮಿಸುತ್ತಿರುವ ಕುರಿತು ಘೋಷಣೆ ಮಾಡಿದಾಗ, ನನಗರಿಲ್ಲದಂತೆಯೇ ನಾನು ಚಪ್ಪಾಳೆ ತಟ್ಟಿ ಸಂಭ್ರಮಿಸಿಬಿಟ್ಟಿದ್ದು..!! (ಕೆಲವರು ಮುಗುಳ್ನಕ್ಕಿದ್ದು, ಕೆಲವರು 'ಇವಳಿಗೇನಾಯಿತು' ಎಂಬಂತೆ ಕೆಕ್ಕರಿಸಿ ನೋಡಿದ್ದು ಬೇರೆ ಮಾತು)

ಒಟ್ನಲ್ಲಿ ಹ್ಯಾಪಿ ಫಸ್ಟ್ ಇಯರ್ ಬರ್ತ್ಡೇ ಮೈ ಡಿಯರ್ 'ನಮ್ಮ ಮೆಟ್ರೋ' (ಗ್ರೀನ್ ಲೈನ್). 

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ