ಶುಕ್ರವಾರ, ಜುಲೈ 28, 2023

ಚಾಕೋಲೇಟ್ ಕೊಡ್ಲಾ??

ತಮ್ಮದೇ ಮಕ್ಕಳಿಗೆ ಅತಿಯಾಗಿ ಚಾಕೊಲೇಟ್ ಕೊಡಿಸುವ ಪಾಲಕರು ಮತ್ತು ನೆಂಟರಿಷ್ಟರಾಗಿ ಮಕ್ಕಳಿರುವ ಮನೆಗೆ ಚಾಕೊಲೇಟ್ ಕೊಂಡೊಯ್ಯುವವರ ಗಮನಕ್ಕೆ!

ಮಕ್ಕಳು ಮತ್ತು ಚಾಕೊಲೇಟಿಗೆ ಅವಿನಾಭಾವ ಸಂಬಂಧ. ಬರ್ತಡೇ ಎಂದರೆ ಚಾಕೊಲೇಟು ಹಂಚಿಕೆ ಖಾಯಂ. ಚಿಕ್ಕ ಮಕ್ಕಳಿರುವ ಮನೆಗೆ ಮನೆಯವರೂ ಸೇರಿದಂತೆ, ಸ್ನೇಹಿತರು ಬಂಧುಗಳು ಚಾಕೊಲೇಟನ್ನು ತೆಗೆದುಕೊಂಡು ಹೋಗಿ ಕೊಡುವುದು ಸರ್ವೇ ಸಾಮಾನ್ಯ. ಯಾಕೆ? ಮಕ್ಕಳು ಸಿಹಿ ತಿಂದು ಖುಷಿಯಾಗಲಿ, ತಮ್ಮನ್ನು ಒಳ್ಳೆಯವರೆಂದು ಗುರುತಿಸಿಕೊಳ್ಳಲು ಸಿಗಬಹುದಾದ ಅತ್ಯಂತ ಕಡಿಮೆ ಖರ್ಚಿನ ತಿಂಡಿ ಚಾಕೊಲೇಟು. ಆದರೆ ಈ ಭರದಲ್ಲಿ, ಏನೂ ಅರಿಯದ ಮಕ್ಕಳಲ್ಲಿ, ಚಾಕೊಲೇಟಿನ ಅತಿಯಾದ ಬಳಕೆಯ ಚಟವನ್ನು, ಅನಾರೋಗ್ಯವನ್ನು ನಾವೇ ಧಾರೆಯೆರೆಯುತ್ತಿದ್ದೇವೆ. 

ಅಧ್ಯಯನಗಳ ಪ್ರಕಾರ ಕೋಕೋ ಬೀನ್ಸ್ ಗಳಲ್ಲಿ ಉತ್ಕರ್ಷಣ ನಿರೋಧಕಗಳು ಹೆಚ್ಚಾಗಿ ಇರುತ್ತವಯಾದ್ದರಿಂದ  ಚಾಕೊಲೇಟ್ಸ್ಗಳು ಆರೋಗ್ಯಕ್ಕೆ ಒಳ್ಳೆಯದು ಎನ್ನುತ್ತಾರೆ. ಚಾಕೊಲೇಟು ಬಾಯಲ್ಲಿಟ್ಟರೆ ಕರಗುವಂತೆ ಮಾಡಲು ಸಸ್ಯಜನ್ಯವಾದ ಕೋಕೋ ಬೆಣ್ಣೆಯನ್ನು ಮಾತ್ರ ಹೆಚ್ಚಿನ ಪ್ರಮಾಣದಲ್ಲಿ ಬಳಸಿ, ಹಾಲಿನ ಕೆನೆ ಮತ್ತು ಸಕ್ಕರೆಯ ಪ್ರಮಾಣವನ್ನು ಕನಿಷ್ಠವಾಗಿರಿಸಬೇಕು ಎನ್ನುತ್ತದೆ ಕಾನೂನು. ಖಾದ್ಯ ತೈಲಗಳ ಬಳಕೆ ಸಂಪೂರ್ಣ ನಿಷಿದ್ಧವಿದೆ. ಆದರೂ ಕೆಲವು ಚಾಕೊಲೇಟುಗಳಿಗೆ,  ತಾಳೆ, ಶೇಂಗಾ, ಸೂರ್ಯಕಾಂತಿಯ್ಕೆ ಎಣ್ಣೆಯನ್ನು ಬಳಸುವುದು ಗಮನಿಸಬಹುದು. ಎಷ್ಟೋ ಕಡೆ ಹೈಡ್ರೋಜೆನೆರೇಟೆಡ್ ಖಾದ್ಯ ತೈಲ ಬಳಕೆಯಾಗುತ್ತದೆ ಆದರೆ ಅದನ್ನು ಲೇಬಲ್ಲಿನಲ್ಲಿ ನಮೂದಿಸುವುದಿಲ್ಲ. ಇಂತಹ ಕೊಬ್ಬಿನಂಶ ನಮ್ಮ ಜೀರ್ಣಾಂಗದಲ್ಲಿ ಸುಲಭದಲ್ಲಿ ಕರಾಗುವಂತದಲ್ಲ. ಎಳೆ ಮಕ್ಕಳ ಆರೋಗ್ಯಕ್ಕಂತೂ ಇದು ಅತ್ಯಂತ ಅಪಾಯ.ದುರದೃಷ್ಟವಶಾತ್  ನಾವು ಮಾರುಕಟ್ಟೆಯಲ್ಲಿ ಕಾಣುವ ನೂರಾರು ಬಗೆಯ ಚಾಕೊಲೇಟಿನ ತಯಾರಿಗೆ ಮಾರಕವೆನಿಸುವ ಅತಿಯಾದ ಸಕ್ಕರೆ ಮತ್ತು ಕೊಬ್ಬಿನಂಶ ಬಳಕೆ ಹೆಚ್ಚಾಗುತ್ತಿದೆ. ತಪಾಸಣೆಗೆ ಕೋಕೋ ಪ್ರಮಾಣವನ್ನು ಪತ್ತೆ ಹಚ್ಚುವ ತಾಂತ್ರಿಕತೆಯ ಕೊರತೆಯಿದೆ. ಮೂಡ್ ಬೂಸ್ಟರ್ ಎಂಬಿತ್ಯಾದಿ ಹೊಸಕಲ್ಪನೆಯ ಚಾಕೊಲೇಟಿನ ಆವಿಷ್ಕಾರ, ಹಣ ಸಂಪಾದನೆಯ ಮಾರ್ಗವಾಗಿ, ಅದಕ್ಕೆ ಬಳಸುವ ಆರೋಗ್ಯಕರ ಸಾಮಗ್ರಿಗಳ ಮಿತಿಯನ್ನು ಮೀರಿ ಹಾನಿಕಾರಕ ಬಣ್ಣಗಳು, ಕೃತಕ ರುಚಿಗಳು ಮತ್ತು ಸಂರಕ್ಷಕಗಳ ಬಳಕೆ ಸಾಮಾನ್ಯವಾಗಿದೆ. ಪೂರಕವಾಗಿ ದಿನನಿತ್ಯ ಟೀವಿಯಲ್ಲಿ ಕಾಣುವ ವರ್ಣರಂಜಿತ ಜಾಹಿರಾತುಗಳು, ಅಂಗಡಿಗಳಲ್ಲಿ ಎದುರಿಗೆ ಕಾಣುವ ಚಾಕೊಲೇಟಿನ ಡಬ್ಬಿಗಳು, ಮಕ್ಕಳ ಮನಸ್ಸಿನಲ್ಲಿ ಚಾಕೊಲೇಟುಗಳ ಮಾಹಿತಿ ಇನ್ನಷ್ಟು ಮನನಗೊಳ್ಳಲು ಸಹಾಯ ಮಾಡುತ್ತವೆ.

ಮಕ್ಕಳಿಗೇಕೆ ಚಾಕೊಲೇಟ್  'ಕೊಡುವ' ಅಭ್ಯಾಸ ನಮ್ಮದು?

ಮನೆಯಲ್ಲಿ ಮಕ್ಕಳು ಹಸಿವಾಯಿತು ಎಂದು ರಚ್ಚೆ ಹಿಡಿದಾಗ ರುಚಿಕರ ತಿಂಡಿ ಮಾಡುವಷ್ಟು ಸಮಯವಾಗಲೀ ವ್ಯವಧಾನವಾಗಲೀ ಕೆಲವು ಪಾಲಕರಿಗಿರುವುದಿಲ್ಲ. "ತಗೋ ದುಡ್ಡು ತಗೋ ಹೋಗಿ ಅಂಗಡಿಯಿಂದ ಚಾಕೊಲೇಟು ತಗೆದುಕೊಂಡು ತಿನ್ನು" ಎಂದು ಮಕ್ಕಳನ್ನುಕಳಿಸಿಬಿಟ್ಟರೆ, ತಮಗೆ ಶ್ರಮ ತಪ್ಪುತ್ತದೆ ಎಂಬುದು ಕೆಲವರ ಭಾವವಾದರೆ, ಚಾಕೊಲೇಟೆಂದರೆ ಒಂದು ಸಿಹಿಯಷ್ಟೇ, ಮಕ್ಕಳಿಗೆ ಖುಷಿಯಾಗಲು ಅಷ್ಟು ಸಾಕು ಎಂಬ ಅಜ್ಞಾನ ಹಲವರದು. ಅವಶ್ಯಕತೆ ಇದೆಯೋ ಇಲ್ಲವೋ ಮಕ್ಕಳ ಮೇಲಿನ ಮಮಕಾರಕ್ಕೆ ಅಂಗಡಿಗೆ ಹೋದಾಗಲೆಲ್ಲ ತಾವು ತೆಗೆದುಕೊಳ್ಳುವ ಸಾಮಗ್ರಿಗಳ ಜೊತೆಗೆ ಕೊನೆಯಲೊಂದು ಚಾಕೊಲೇಟನ್ನು ಕೊಂಡು ತಿನ್ನಿಸುವುದು, ಅನೇಕರ ರೂಢಿ. ಕೆಲವೊಮ್ಮೆ ನಮ್ಮ ಆಜ್ಞೆಯನ್ನು ಪಾಲಿಸಲೆಂದು, ಮಕ್ಕಳ ಮನವೊಲೈಸಿಕೊಳ್ಳಲು ನಾವು ದೊಡ್ಡವರೇ ಮಕ್ಕಳನ್ನು ಚಾಕೊಲೇಟಿನ ಆಮಿಷಕ್ಕೆ ತಳ್ಳುತ್ತೇವೆ. ಮಕ್ಕಳಿರುವವರ ಮನೆಗೆ ಬೇರೆಲ್ಲ ಉಡುಗೊರೆಯ ಬೆಲೆಗೆ ಹೋಲಿಸಿದರೆ, ಚಾಕೊಲೇಟು ಕೊಂಡೊಯ್ಯುವುದು ಅಗ್ಗ. ಹಾಗಾಗಿ ನೆಂಟರಿಷ್ಟರು ಉಡುಗೊರೆಯಾಗಿ ಚಾಕೊಲೇಟ ಬಿಸ್ಕತ್ತಿನ ಪೊಟ್ಟಣಕ್ಕೆ ಮೊದಲ ಆದ್ಯತೆ ನೀಡಿ ಕೊಳ್ಳುತ್ತಾರೆ.   

ಚಾಕೊಲೇಟೆಂಬ ರಾಸಾಯನಿಕ ಗುಡ್ಡೆಯ ದುಷ್ಪರಿಣಾಮಗಳು :

ಕ್ಯಾನ್ಡಿ  ಮತ್ತು ಚಾಕೊಲೇಟ್ ಗಳ ಅತಿಯಾದ ಸೇವನೆಯಿಂದ ಚಿಕ್ಕಮಕ್ಕಳಲ್ಲಿ ಕೂಡ ಈಗ ಜುವೈನಲ್ ಮಧುಮೇಹದಂತಹ ರೋಗಗಳು ಕಾಣಿಸಿಕೊಳ್ಳುತ್ತಿವೆ. ಸಕ್ಕರೆಯಂಶ ಹಲ್ಲುಗಳನ್ನು ಹುಳುಕು ಮಾಡುತ್ತವೆ ಎಂಬ ಕನಿಷ್ಠ ಜ್ಞಾನವಿದ್ದರೂ, ಮಕ್ಕಳ ಆರೋಗ್ಯದ ಕುರಿತಾಗಿ ನಿರ್ಲಕ್ಷ್ಯ ತೋರುವ ಪಾಲಕರಿಗೆ ಮಕ್ಕಳಲ್ಲಿ ಪ್ರಕ್ಷುಬ್ಧತೆ, ತಲೆನೋವು ಮತ್ತು ವಾಕರಿಕೆ ಕಾಣಿಸಿಕೊಂಡಾಗ ಅವು ಚಾಕೊಲೇಟಿನಿಂದ ಎಂಬ ಸಂದೇಹ ಬರುವುದಿಲ್ಲ. ಅಂಗಡಿಗೆ ಹೋದಾಗ ಯಾವುದೋ ಒಂದು ಎದುರಿಗೆ ಕಂಡ ಚಾಕೊಲೇಟನ್ನುಮಕ್ಕಳಿಗಾಗಿ ತೆಗೆದುಕೊಂಡುಕೊಡುವವರಿಗೆ, ಅದು ಹಾಲು ಮತ್ತು ಡೈರಿ ಆಧಾರಿತ ಚಾಕೊಲೇಟ್ಗಳಾಗಿದ್ದರೆ, ಲ್ಯಾಕ್ಟೊಸ್ ಅಸಹಿಷ್ಣುತೆ ಹೊಂದಿರುವ ಮಕ್ಕಳಲ್ಲಿ ಕಾಲಾನಂತರ ಹೊಟ್ಟೆಯುರಿ, ಹೊಟ್ಟೆನೋವು, ಥಂಡಿ ಕೆಮ್ಮು ಇತ್ಯಾದಿ ತೊಂದರೆಗಳನ್ನು ತಂದೊಡ್ಡುತ್ತದೆ ಎಂಬ ಅರಿವಿರುವುದಿಲ್ಲ. ಕೆಲವರ ದೇಹಕ್ಕೆ ಚಾಕೊಲೇಟಿಗೆ ಬಳಸುವ ಕೆಲವು ಸಾಮಗ್ರಿಗಳಿಂದ ಅಲರ್ಜಿಇರುತ್ತದೆ, ಪ್ರಾರಂಭದಲ್ಲಿ ಸೌಮ್ಯ ರೋಗಲಕ್ಷಣಗಳು ಎನಿಸಿದರೂ ಅಲರ್ಗಿ ತೊಂದರೆಗಳು ಕ್ರಮೇಣ ಉಸಿರಾಟದ ಸಮಸ್ಯೆಯವರೆಗೆ ಗಂಭೀರತೆ ಪಡೆದುಕೊಳ್ಳುತ್ತದೆ. 

ಹಾಗದರೇನು ಮಾಡೋಣ?

ಆದಷ್ಟು ಎಳೆ ಮಕ್ಕಳಿಗೆ ಚಾಕೊಲೇಟ್ ತಿನ್ನಿಸುವ ಅಭ್ಯಾಸ ಮಾಡದಿರಿ. ಇದು ಮನೆಯವರಿಗೂ, ಮಕ್ಕಳಿರುವ ಮನೆಗೆ ಹೋಗುವ ನೆಂಟರಿಷ್ಟರಿಗೂ ಅನ್ವಯ. ಮಕ್ಕಳಿಗೆ ಅವರ ಪಾಲಕರ ಅನುಮತಿಯಲ್ಲಿ ಚಾಕೊಲೇಟ್ ಗಳನ್ನು ನೀಡುವ ಶಿಷ್ಟಾಚಾರವಿರಲಿ. ಚಾಕೊಲೇಟ್ ಬದಲಾಗಿ ಮಕ್ಕಳಿಗೆ ನೀವು ಕೊಡುವ ಸಮಯ ಅವರಿಗೆ ಅತ್ಯಂತ ಆಪ್ತ ಉಡುಗೊರೆಯಾಗುತ್ತದೆ. ಸಾಧ್ಯವಾದರೆ ಹಣ್ಣನ್ನು ಅಥವಾ ಮನೆಯಲ್ಲಿಯೇ ಮಾಡಿದ ಫ್ರೆಶ್ ತಿಂಡಿಯನ್ನು ಕೊಂಡೊಯ್ಯಿರಿ.  

ಚಾಕೊಲೇಟ್ ಎಂಬುದು ರುಚಿ, ಹಸಿವು, ಮಜ, ಬೋರ್ ಆದಾಗ ಸಮಯ ಕಳೆಯಲು, ಇತರರು ತಿನ್ನುತ್ತಾರೆ ಎಂಬ ಅಸೂಯೆ, ಪ್ರಶಂಸೆಗೆ ಸಿಗುವ ಬಹುಮಾನ ಹೀಗೆ ಅನೇಕ ಸಂದರ್ಭಗಳಲ್ಲಿ ಮಕ್ಕಳ ಹೊಟ್ಟೆಗೆ ಹೋಗುತ್ತದೆ. ಮಕ್ಕಳು  ಆಸೆಪಡುತ್ತಿದ್ದರೆ, ಮನೆಯಲ್ಲಿಯೇ ಸ್ವಾಸ್ತ್ಯ ವಸ್ತುಗಳನ್ನು ಬಳಸಿ ಕೆಲವು ಬಗೆಯ ಚಾಕೊಲೇಟ್ ತಯಾರಿಸಬಹುದು ಅಥವಾ ಮಕ್ಕಳಿಗೆ ಇಷ್ಟವಾಗುವ ಸಿಹಿಯನ್ನು ಆಗೀಗ್ಗೆ ಮಕ್ಕಳ ಆರೋಗ್ಯಕ್ಕಾಗಿ ಶ್ರಮಪಟ್ಟು ನಾವೇ ತಯಾರಿಸಿ ಕೊಟ್ಟರೆ ಹೊರಗಿನ ತಿಂಡಿಯ ಆಸೆಕಡಿಮೆಯಾಗುತ್ತದೆ. ಬೋರ್ ಆದಾಗ ತಿನ್ನುವ ಚಪಲ ಬಿಡಿಸಲು ಮಕ್ಕಳಿಗೆ ಹವ್ಯಾಸಕ್ಕೆ ಆದ್ಯತೆ ನೀಡಿ ಪ್ರೋತ್ಸಾಹಿಸಿ. ಮಕ್ಕಳ ಒಳ್ಳೆಯ ಕೆಲಸಗಳಿಗೆ ಮುಕ್ತವಾಗಿ ಮಾತನಾಡಿ ಪ್ರಶಂಶಿಸಿ. ಶಾಲೆಯಲ್ಲಿ ಬರ್ತಡೆಗೆ ಚಾಕೊಲೇಟ್ ಬದಲು, ಉಪಯುಕ್ತ ವಸ್ತುಗಳಾದ ರಬ್ಬರ್, ಮೆಂಡರ್,  ಪೆನ್ಸಿಲ್ ಪೆನ್ನುಗಳನ್ನು ಹಂಚಬಹುದು. 

ಯಾವ್ಯಾವ ಬಗೆಯ ಚಾಕೊಲೇಟ್ ತಿಂದಾಗ ಮಗುವಿನ ದೇಹ ಯಾವ ರೀತಿ ವರ್ತಿಸಿತ್ತು ಎಂಬುದನ್ನು ಪ್ರತಿಸಲ ಗಮನಿಸಿಕೊಂಡು, ಪಟ್ಟಿಯೊಂದನ್ನು ತಯಾರಿಸಿಟ್ಟುಕೊಳ್ಳಿ. ಕೆಲವರಿಗೆ ಹಾಲು ಆಧಾರಿತ ಚಾಕೊಲೇಟಿನ ಸೇವನೆ ತೊಂದರೆಯಿದ್ದರೆ, ಕೆಲವು ಮಕ್ಕಳಿಗೆ ಕೆಲವು ತೈಲಗಳ ಜೀರ್ಣತೆಯ ತೊಂದರೆಯಿರುತ್ತದೆ. ಈ ವಿಷಯಗಳ ಆಧಾರಿತ ಮಕ್ಕಳಿಗೆ ತಿಳುವಳಿಕೆ  ಹೇಳಿದರೆ, ಮಕ್ಕಳಿಗೆ ಚಾಕೊಲೇಟಿನ ತೊಂದರೆ ಮನದಟ್ಟಾಗುತ್ತದೆ.
#kannadaarticle #impactsofbuyingchocolatesforkids

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ