ಮಂಗಳವಾರ, ಆಗಸ್ಟ್ 8, 2023

ಡಿಕ್ಲಟ್ಟರಿಂಗ್

ಮನುಷ್ಯ ಎಂದ ಮೇಲೆ ಉತ್ತಮ ಬದುಕಿನ ಆಸೆ ಇದ್ದೇ ಇರುತ್ತದೆ. ಇತರರಂತೆ ಐಷಾರಾಮಿ ಬದುಕು ಬೇಕೆಂಬ ತುಡಿತ ಅನೇಕರಿಗಿರುತ್ತದೆ. ಮೂಲಭೂತ ಸೌಕರ್ಯಗಳು ಎಲ್ಲರಿಗೂ ಬೇಕು ನಿಜ, ಆದರೆ ನಮಗೆ ಅವಶ್ಯಕತೆಯೇ ಇಲ್ಲದ, ಅದೆಷ್ಟೋ ವಸ್ತುಗಳ ಹೊಣೆಗಾರಿಕೆ ಹೊತ್ತು, ಉಸಿರುಗಟ್ಟಿಕೊಂಡು ನಾವು ಬದುಕುತ್ತಿದ್ದೇವೆ ಎಂಬುದನ್ನು ಯಾರಾದರು ಗಮನಿಸಿದ್ದೀರಾ? 

ಇದು ಚೆಂದ, ಇದು ಟ್ರೆಂಡಿ ಎನ್ನುತ್ತಾ ಕೊಂಡ ೪೦ ಶರ್ಟುಗಳು ಕಪಾಟಿನಲ್ಲಿದ್ದರೂ ಇಷ್ಟವಾಗುವ ಬಟ್ಟೆ ಅರ್ಜೆಂಟಾಗಿ ಬೇಕಾದಾಗ ಸಿಗುವುದಿಲ್ಲ. ಅಜ್ಜಿಯ ಕಾಲದಿಂದ ಬಳುವಳಿಯಾಗಿ ಬಂದ ೧೫೦ ಪಾತ್ರೆಗಳು ಇದ್ದರೂ, ಬೇಕಾದ ಸೌಟು ಎಲ್ಲಿದೆ ಎಂದು ಹುಡುಕುವುದು ತಪ್ಪುವುದಿಲ್ಲ. ಫ್ರಿಡ್ಜಿನಿಂದ  ಬೀಳುವ ವಸ್ತುಗಳ ಹಿಡಿದುಕೊಂಡು ಸರ್ಕಸ್ ಮಾಡಿ ಕೊತ್ತಂಬರಿ ಸೊಪ್ಪು ತೆಗೆಯಬೇಕು. ಮನೆ ಹೆಂಗೂ ದೊಡ್ಡದು, ಮುಂದೆ ಯಾವಾಗಲಾದರೂ ಬೇಕಾಗುತ್ತದೆ ಎಂದು ಪೇರಿಸಿಟ್ಟ ವಸ್ತುಗಳ ಮೇಲೆಲ್ಲಾ ಧೂಳು, ಆಪ್ತರ ನೆನಪಿನ ಕಾಣಿಕೆ ಎಂದು ಅಟ್ಟ ಹತ್ತಿಸಿ ಇಟ್ಟಿದ್ದ ವಸ್ತುಗಳು ಇಲಿ ಜಿರಳೆಗೆ ಆಹಾರವಾಗಿರುತ್ತದೆ,  ನಮ್ಮ ಪ್ರೆಸ್ಟೀಜ್ ಗೆ ತಂದುಕೊಂಡಿರುವ ಪೀಠೋಪರಕರಣಗಳು ಮಕ್ಕಳಿಗೆ ಆಟವಾಡಲು ಜಾಗವಿಲ್ಲದಂತೆ ಮಾಡಿವೆ. ಹೀಗೆ ಮನೆಯ ಅಥವಾ ಕೆಲಸದ ಸ್ಥಳದಲ್ಲಿನ ಭೌತಿಕ ವಸ್ತುಗಳಾಗಲಿ ಅಥವಾ ಎಲ್ಲರೊಂದಿಗೆ ಸಂಪರ್ಕದಲ್ಲಿರುವ ಇಚ್ಛೆಗೆ, ಇತರ ವ್ಯವಹಾರಗಳಿಗೆ, ಗುಡ್ಡೆ ಆಗುವ ಇನ್ಬಾಕ್ಸ್ ಮತ್ತು ಇತರ ಗ್ಯಾಡ್ಜೆಟ್ ನೋಟಿಫಿಕೇಷನ್ನುಗಳು, ನಮ್ಮ ಮನೆ ಮತ್ತು ಮನಸ್ಸನ್ನು ಅದೆಷ್ಟು 'ರಾಡಿ' ಮಾಡಿಬಿಟ್ಟಿದೆ. ಉಫ್! 'ಈಗಿನ ಟ್ರೆಂಡ್' ಎಂಬ ಹೆಸರಿನಲ್ಲಿ 'ಕೊಳ್ಳುಬಾಕತನ' ಹಾಸುಹೊಕ್ಕಿಯಾಗಿದೆ. ಇಲ್ಲಿ ವಸ್ತುಗಳ ಶೇಖರಣೆ ಜೊತೆಗೆ, ಅವುಗಳ ಸ್ವಚ್ಛತೆ, ಸಂರಕ್ಷಣೆ  ಮತ್ತು ಪ್ರತಿಕ್ರಿಯಿಸುವ 'ಗೊಂದಲ'ಗಳನ್ನೂ ತೆಗೆದುಕೊಂಡು, ನಮ್ಮ ಉಪಯುಕ್ತ ಸಮಯ ಮತ್ತು ಶಕ್ತಿಯನ್ನು ನಮಗೇ ಅರಿವಿಲ್ಲದೆ  ಅನಾವಶ್ಯಕವಾಗಿ ವ್ಯಯಿಸುತ್ತಿದ್ದೇವೆ! ಮನೆಯೆಲ್ಲಿರುವ ವಸ್ತುಗಳನ್ನೆಲ್ಲ ಸಂಭಾಳಿಸಿ ಶುಚಿಯಿಡುವಷ್ಟರಲ್ಲಿ, ಮಕ್ಕಳು ಮತ್ತು ಮನೆ ಮಂದಿಯೊಡನೆ, ಸ್ವಂತ ಸಂತೋಷಕ್ಕೆ ಬಳಸಬಹುದಾದ ಸಮಯವೆಲ್ಲಿದೆ ನಮಗೀಗ? ಈ ಅಗೋಚರ ಒತ್ತಡದ ಜೀವನಶೈಲಿಗೆ ಬಗ್ಗಿ ಬಳಲುತ್ತಿರುವುದರಿಂದ  ಹೊರಬರಬೇಕೆಂದರೆ, ನಾವುಮಾಡಬೇಕಾದ್ದು 'ಡಿಕ್ಲಟರಿಂಗ್'!

'ಡಿಕ್ಲಟರಿಂಗ್' ಎಂದರೆ, ಪ್ರಜ್ಞಾ ಪೂರ್ವಕವಾಗಿ ನಾವು ಬದುಕುತ್ತಿರುವ ಕಿಕ್ಕಿರಿದ ಸ್ಥಳದಿಂದ ನಮಗೆ 'ಗೊಂದಲ'  ಉಂಟುಮಾಡುವ ವಸ್ತುಗಳನ್ನು, ಬೇಡವಾದುದ್ದನ್ನು ಕಡಿತಗೊಳಿಸುವುದು. 'ಡಿಕ್ಲಟರಿಂಗ್' ಒತ್ತಡ ಮತ್ತು ಆತಂಕವನ್ನು ಹೆಚ್ಚಿಸುತ್ತಿರುವ, ಅಸ್ಥವ್ಯಸ್ಥವಾಗಿರುವ ಜೀವನ ಪರಿಸರಕ್ಕೆ, ಸುಂದರ ಮತ್ತು ಶುಚಿತ್ವದ ಕ್ರಮವನ್ನು ಮರುಸ್ಥಾಪಿಸುವ,  ಮಾನಸಿಕ ಯೋಗಕ್ಷೇಮ ಪಡೆಯುವ ಒಂದು ಚಿಕಿತ್ಸಕ ಕ್ರಿಯೆ. 

 ಡಿಕ್ಲಟ್ಟರಿಂಗ್ ಒಂದು ಸವಾಲು- ಏಕೆ?  

ಹೆಚ್ಚೆಚ್ಚು ವಸ್ತುಗಳಿದ್ದರೆ ಅದು ಶ್ರೀಮಂತಿಕೆ ಎಂಬ ಭಾವ, ಕಷ್ಟಪಟ್ಟು ಹಣ ವ್ಯಯಿಸಿ ಪಡೆದ ವಸ್ತುಗಳ ಹೊರಹಾಕುವುದು ಹಣಕಾಸಿನ ನಷ್ಟ ಎಂಬ ಯೋಚನೆ, ಕಾರ್ಯ ನಿರ್ವಹಿಸುತ್ತಿರುವ ಒಳ್ಳೊಳ್ಳೆ ವಸ್ತುಗಳ ಬಿಡುವುದಕ್ಕೆ ಒಲ್ಲದ ಮನಸ್ಸು, ಮುಂದೆ ಭವಿಷ್ಯದಲ್ಲಿ ಎಂದಾದರೂ ಉಪಯೋಗಕ್ಕೆ ಬರುತ್ತದೆ ಎಂಬ ದೂರಾಲೋಚನೆ, ಮತ್ತೊಮ್ಮೆ ತೆಗೆದುಕೊಳ್ಳಬೇಕಾದ ಪರಿಸ್ಥಿತಿಯಲ್ಲಿ ಆಗಬಹುದಾದ ಖರ್ಚು ವೆಚ್ಚಗಳ ಕುರಿತಾದ ಭಯ, ಕನಿಷ್ಠ ವಸ್ತುಗಳಿದ್ದರೆ, ಇತರರು ಏನಂದುಕೊಂಡಾರು ಎಂಬ ಸಂಕುಚಿತ ಭಾವನೆ, ಹಿಂದಿನ ನೆನಪುಗಳಿಗೆ ಕೂಡಿಕೊಂಡಿರುವ ವಸ್ತುಗಳ ಕಳೆದುಕೊಳ್ಳುವ ಭಾವನಾತ್ಮಕತೆ  ಹೀಗೆ ಸಾಕಷ್ಟು ಕಾರಣಗಳಿಗೆ ನಾವು ನಮಗೆ ಮೂಲಭೂತ ಅಗತ್ಯತೆ ಇಲ್ಲದಿದ್ದರೂ ಕಷ್ಟಪಟ್ಟು ಪೋಷಿಸಿಕೊಂಡು ಬಂದಿರುವ ವಸ್ತುಗಳನ್ನು ಕಡಿತಗೊಳಿಸಿಕೊಳ್ಳಲು, ಅಚ್ಚುಕಟ್ಟಾದ ಜೀವನಶೈಲಿಯನ್ನು ಹೊಂದಲು ಹೆದರುತ್ತೇವೆ. 

ಡಿಕ್ಲಟ್ಟರಿಂಗ್ ಮಾಡುವುದು ಹೇಗೆ?

ನಮಗೆ ಸಂಬಂಧಿಸಿದ ಪ್ರತಿಯೊಂದು ವಸ್ತುವಿನ ಕುರಿತಾಗಿ, ಅದರ ಮಹತ್ವ ಮತ್ತು ನಿಯಮಿತ ಬಳಕೆಯ ಬಗ್ಗೆ ನಮ್ಮನ್ನೇ ನಾವು ಪ್ರಶ್ನಿಸಿಕೊಂಡು, ಸೀಸನಲ್ ವಸ್ತುಗಳ ಒಳಗೊಂಡು, ಕನಿಷ್ಠ ಪ್ರಮಾಣದಲ್ಲಿ ಬಳಕೆ ಮಾಡುವ ಬಗೆಗೆ ಪ್ಲಾನ್ ಮಾಡಬೇಕು. ಸಣ್ಣ ಹೋಟೆಲ್ ಬಿಲ್ ಚೀಟಿಯಾದರೂ ಸರಿ, ಪ್ರತಿನಿತ್ಯ ಒಂದಾದರೂ ಬೇಡದ ವಸ್ತುವನ್ನು ನಿರ್ಧರಿಸಿ, ವಿಲೇವಾರಿ, ರೆಸೆಲ್ಲಿಂಗ್, ದಾನದ ಮೂಲಕ ಹೊರ ಹಾಕುತ್ತಲಿರಬೇಕು.  ಸಮಯಾವಕಾಶವನ್ನಿಟ್ಟುಕೊಂಡು ವಾರಕ್ಕೊಂದು ಕಪಾಟು, ಕಿಕ್ಕಿರಿದ ಮೂಲೆಗಳನ್ನು ಗಮನಿಸಿ ಮುರಿದ, ಹರಿದ, ಜೋಡಿ ಕಳೆದುಕೊಂಡ ವಸ್ತುಗಳಿಗೆ ತಿಲಾಂಜಲಿ ನೀಡಿ, ಬೇಕಾದ ವಸ್ತುಗಳಿಗಷ್ಟೇ ಆದ್ಯತೆ ನೀಡಬೇಕು. 

ಮನೆಯಲ್ಲಿ ಮಕ್ಕಳಿದ್ದರೆ, ಎಲ್ಲ ಪುಸ್ತಕಗಳು ಮತ್ತು ಆಟದ ಸಾಮಾನುಗಳನ್ನು ಬುಟ್ಟಿಯಲ್ಲಿ ಹರಡಿಕೊಂಡು ಇಡುವುದಕ್ಕಿಂತ, ಸ್ವಲ್ಪವೇ ವಸ್ತುಗಳನ್ನು ಎದುರಿಗಿಟ್ಟು ವಾರಕ್ಕೊಮ್ಮೆ ಬದಲಾಯಿಸುತ್ತ, ಉಳಿದ್ದನ್ನು ಒಳಗೆ ಜೋಡಿಸಿಡುವುದು ಉತ್ತಮ. ಬಿಲ್ಲ್ಗಳ ಡಿಜಿಟಲ್ ಕಾಪಿ ಇದ್ದರೆ ಸಾಕು.  ಕಂಪ್ಯೂಟರ್ ನಲ್ಲಿ ಮೇಲ್ಬಾಕ್ಸ್, ಫೋಟೋಸ್, ಪಿಡಿಎಫ್ ಇನ್ನಿತರ ಸಾವಿರಾರು ಫೈಲ್ಸ್ ಗಳನ್ನು  ಪ್ರತ್ಯೇಕಿಸಿ, ದಿನಾಂಕದ ಜೊತೆಯಲ್ಲಿ ಸರಿಯಾದ ಹೆಸರಿನಿಂದ ಲೇಬಲ್ ಮಾಡಿ, ಆಗಾಗ್ಗೆ ಬ್ಯಾಕುಪ್ ವ್ಯವಸ್ಥೆಗಳ ಮೂಲಕ ಸೇವ್ ಮಾಡುತ್ತಿದ್ದರೆ, ಬೇಕಾದಾಗ ಹುಡುಕುವ ತಾಪತ್ರಯ ತಪ್ಪುತ್ತದೆ. ಅಂತೆಯೇ ಮೊಬೈಲ್ ನಲ್ಲಿ ಸದ್ಬಳಕೆಯಾಗದಿರುವ ಅಪ್ಗಳನ್ನು ತೆಗೆದರೆ, ಪದೇ ಪದೇ ನೋಟಿಫಿಕೇಶನ್ಮಗಳ ಹಾವಳಿಯಿಂದ, ನಾವು ಗ್ಯಾಡ್ಜೆಟ್ಗೆ ಮತ್ತಷ್ಟು ಅಡ್ದಿಕ್ಟ್ ಆಗುವುದು ತಪ್ಪುತ್ತದೆ. 

ನಿತ್ಯದಡುಗೆಗೆ ಬೇಕಾವಷ್ಟು ಅಡುಗೆ ಪರಿಕರಗಳನ್ನು ಇಟ್ಟುಕೊಳ್ಳುವುದು. ಉಳಿದಿದ್ದನ್ನು ಆದ್ಯತೆಯ ಮೇರೆಗೆ ಸ್ಟೋರೇಜ್ ನಲ್ಲಿ ಎತ್ತಿಡುವುದು, ಸಾಮಗ್ರಿಗಳ ಡಬ್ಬಿಯನ್ನು ಅದರ ಹೆಸರಿನೊಂದಿಗೆ ಲೇಬಲ್ ಮಾಡುವುದರಿಂದ, ಗೊಂದಲವಿಲ್ಲದ ಜಾಗ ಅಡುಗೆಗೆ ಆಸಕ್ತಿಯನ್ನು ತರುತ್ತದೆ. ಸೂಪರ್ ಮಾರ್ಕೆಟ್ಟಿಗೆ ಹೋಗಿ ಅಲ್ಲಿ ಕಂಡಿದ್ದೆಲ್ಲ ತೆಗೆದುಕೊಂಡು ಬರುವುದಕ್ಕಿಂತಲೂ, ಸಾಮಾನು ಪಟ್ಟಿ ಮಾಡಿಕೊಂಡು ಅದಷ್ಟೇ ವಸ್ತುಗಳ ಶಾಪಿಂಗ್ ಮುಗಿಸಿ ಬರುವುದು ಉತ್ತಮ. ತಿಂಗಳಿಗೊಮ್ಮೆ ಫ್ರಿಡ್ಜ್ ಪರಿಶೀಲಿಸಿ ಪ್ಯಾಕೆಟ್ ಫುಡ್ ಗಳ ಬಳಕೆಯ ಕೊನೆಯ ದಿನಾಂಕ ಪರಿಶೀಲಿಸಿ ವಿಲೇವಾರಿ ಮಾಡುತ್ತಿರಿ. ನಿನ್ನೆ ಮೊನ್ನೆಯ ಆಹಾರಗಳ ನೈರ್ಮಲ್ಯದ ಕಡೆಗೆ ಗಮನ ಕೊಡಿ. 

ಆದಷ್ಟು ನಿತ್ಯ ಬಳಸುವ ವಸ್ತುಗಳಿಗೆ ಅದರದ್ದೇ ಆದ ಜಾಗ ಮೀಸಲಿರಲಿ. ನೆಲಕ್ಕೆ ವಸ್ತುಗಳನ್ನು ಇಡುವ ಅಭ್ಯಾಸ ಬಿಟ್ಟರೆ. ಸ್ವಚ್ಛ ಖಾಲಿ ನೆಲ ಕಣ್ಣಿಗೆ ಹಿತವೆನಿಸುತ್ತದೆ. ಬಾಗಿಲಿಗೆ ಕೊಕ್ಕೆಗಳನ್ನು ಸ್ಥಾಪಿಸಿ, ಕೋಟು ಬ್ಯಾಗ್ಗಳನ್ನು ನೇತುಹಾಕಬಹುದು. ಎಲೆಕ್ಟ್ರಾನಿಕ್ ಸಾಧನಗಳಿಗಾಗಿಯೇ ಎಕ್ಸ್ಟೆಂಡೆಡ್ ಚಾರ್ಜಿನ್ಗ್ ಸ್ಟೇಷನ್ ಒಂದೆಡೆ ಮಾಡಿಟ್ಟರೆ, ಎಲ್ಲೆಲ್ಲೋ ಮರೆಯುವ ತೊಂದರೆ ತಪ್ಪುತ್ತದೆ. 

ಸೇಲ್ ನಲ್ಲಿ ತೆಗೆದುಕೊಂಡ ವಸ್ತುಗಳನ್ನು ಮರುವ್ಯಾಪಾರ ಮಾಡಲು ಬರುವುದಿಲ್ಲ, ಹಾಳಾದ ವಸ್ತುಗಳನ್ನು ಇತರರಿಗೆ ಕೊಡಲು ಮನಸ್ಸೂ ಬಾರದು. ಆದರೆ ಹಣ ಪೋಲು. ಹಾಗಾಗಿ ಯೋಚಿಸಿ ಉತ್ತಮ ದರ್ಜೆಯ ವಸ್ತುಗಳನ್ನು ಅವಶ್ಯಕತೆ ಇದ್ದರೆ ಮಾತ್ರ ತೆಗೆದುಕೊಳ್ಳಿ.

ಡಿಕ್ಲಟರಿಂಗ್ ಎನ್ನುವುದು ಯಾವುದೇ ಒಂದು ವಸ್ತುವಿಗೆ ಸೀಮಿತ ಅಲ್ಲ. ನಮ್ಮ ದೈಹಿಕ ಮತ್ತು ಮಾನಸಿಕ ಯೋಗಕ್ಷೇಮಕ್ಕೆ ಬೇಕಾದಷ್ಟು ಸಮಯಾವಕಾಶ ನೀಡಿ, ಉತ್ತಮ ಆಹಾರ ಸೇವನೆ, ವ್ಯಾಯಾಮ ಒಳ್ಳೆಯ ಹವ್ಯಾಸಗಳನ್ನು ರೂಢಿಸಿಕೊಂಡರೆ, ಅನವಶ್ಯಕ ಶಾಪಿಂಗ್ ಗಳಿಂದ ವಸ್ತು ಕೊಂಡು ತರುವ ಹಂಬಲ, ಗ್ಯಾಡ್ಜೆಟ್ ಗಳಲ್ಲಿ ಅವಶ್ಯಕತೆಗೂ ಮೀರಿ ಕಳೆಯುವ ಸಮಯ ಕಡಿಮೆ ಮಾಡಬಹುದು. ಮನಸ್ಸು ಶಾಂತವಾಗುತ್ತದೆ. ಪ್ರೀತಿಪಾತ್ರರಿಗೆ ಉಪಯೋಗಕ್ಕಿಲ್ಲದ ನೆನಪಿನ ಕಾಣಿಕೆಗಳು ಕಾಪಿಟ್ಟುಕೊಳ್ಳಲು ಭಾರವೇ. ಬಳಕೆದಾರರಿಗೆ ವಿಚಾರಿಸಿ ಸಣ್ಣದಾದರೂ ಸರಿ, ಉಪಯುಕ್ತಉಡುಗೊರೆಗಳನ್ನು ನೀಡುವುದು ಒಳಿತು

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ