ಸೋಮವಾರ, ಡಿಸೆಂಬರ್ 18, 2023

ಹೆರಿಟೇಜ್ ವಿಲೇಜ್ - ರಘುರಾಜ್ಪುರ

ಒಡಿಶಾ ಪ್ರವಾಸ ಮಾಡಿದ್ದ ಗೆಳೆಯನೊಬ್ಬ, ನೀ ಅಲ್ಲಿ ಆರ್ಟ್ ವಿಲ್ಲೇಜ್ ಗೆ ಹೋಗಕ್ಕೇ.. ನಿಂಗ್ ಭಾರೀ ಇಷ್ಟ ಆಗ್ತು ಎಂದು ಹೇಳಿದ್ದು ವರ್ಷಗಳಿಂದ ಮನಸ್ಸಿನಲ್ಲಿ ಬರೆದಿಟ್ಟ ಷರಾ ಆಗಿತ್ತು. ಕಲೆಯ ಕುರಿತು ಆಸಕ್ತಿ ಇರುವ ನನಗಂತೂ, ಇಡೀ ಊರಿಗೆ ಊರೇ ಪೇಂಟಿಂಗ್ ಮತ್ತು ಆರ್ಟ್ ಗಳಿಂದ ತುಂಬಿರುತ್ತದೆ, ಎಂಬ ವಿಷಯವೇ  ಪುಳಕವಾಗಿತ್ತು. ನಮ್ಮ ಪ್ರವಾಸದ ಸಮಯದಲ್ಲಿ ಇಂಟರ್ನೆಟ್ ಮಾಹಿತಿ ಒಟ್ಟು ಮಾಡಿಕೊಂಡು ತಯಾರಾಗಿ ಹೋದೆವು. ಪುರಿ ನಗರಿಯ ಹೊರಗೆ, ಭುವನೇಶ್ವರ್ ಕಡೆಗೆ ಹೈವೆಯಲ್ಲಿ ೧೪ ಕಿಮೀ ಮುಂದಕ್ಕೆ ಹೋದರೆ, ಚಂದನಾಪುರ್ ಸಿಗುತ್ತದೆ, ಅಲ್ಲಿಯ ಮಾರುಕಟ್ಟೆಯ ಪಕ್ಕದಲ್ಲಿ ಒಳ ರಸ್ತೆ ಹಿಡಿದು ೨೦೦ ಮೀ ಮುಂದಕ್ಕೆ ಹೋದರೆ ಸಿಗುವುದೇ ರಘರಾಜಪುರ್ ಹಳ್ಳಿ. ೧೦೦-೧೨೦ ಸಣ್ಣ ದೊಡ್ಡ ಮನೆಗಳಿರುವ ಈ ಊರಿನ ಪ್ರತಿಯೊಂದು ಮನೆಯಲ್ಲೂ ಕನಿಷ್ಠ ಒಬ್ಬರಾದರೂ ಕಲಾವಿದರು! ಇಡೀ ಊರಿನ ಎಲ್ಲ ಮನೆಗಳ ಗೋಡೆಗಳ ಮೇಲೂ ಸಾಂಪ್ರದಾಯಿಕ ಚಿತ್ರಕಲೆಗಳು! ಕೆಲವರ ಮನೆ ಎಷ್ಟು ಸಣ್ಣದೆಂದರೆ, ಮನೆ ಹೊರಗಿನ ಜಗಲಿಯಲ್ಲೇ ಕಾಲವಸ್ತುಗಳ ನೇತು ಹಾಕಿ ಪ್ರದರ್ಶನಕ್ಕಿಟ್ಟಿರುತ್ತಾರೆ. 




ಭಾರತೀಯ ರಾಷ್ಟ್ರೀಯ ರಾಷ್ಟ್ರೀಯ ಟ್ರಸ್ಟ್ ಫಾರ್ ಆರ್ಟ್ ಅಂಡ್ ಕಲ್ಚರಲ್ ಹೆರಿಟೇಜ್ (ಇಂಟ್ಯಾಚ್) ರಘುರಾಜ್ಪುರವನ್ನು ಒಂದು ಪರಂಪರೆ ಗ್ರಾಮವಾಗಿ ಅಭಿವೃದ್ಧಿಪಡಿಸಿದೆ, 'ಹೆರಿಟೇಜ್ ವಿಲೇಜ್' ಎಂದು ಘೋಷಿಸಿದೆ.ಇದನ್ನು ಒಡಿಶಾದ ಪ್ರಾಚೀನ ಗೋಡೆ ವರ್ಣಚಿತ್ರಗಳನ್ನು ಪ್ರಯತ್ನಿಸಲು ಮತ್ತು ಪುನರುಜ್ಜೀವನಗೊಳಿಸಲು ಆಯ್ಕೆ ಮಾಡಿದೆ. ಇದು ಕಲೆ ಮತ್ತು ಕರಕುಶಲತೆಗೇ ಸಮರ್ಪಿತಗೊಂಡ ಗ್ರಾಮವಾಗಿದೆ. ಇದೇ ಗ್ರಾಮದಲ್ಲಿ 5ನೇ ಶತಮಾನದಲ್ಲಿ ಪಟ್ಟ ಚಿತ್ರ ಮಾದರಿಯ ಪೇಂಟಿಂಗ್ಸ್ ಉಗಮಗೊಂಡಿತ್ತು. ಇದು ಒಡಿಸ್ಸಿ ಗುರು ಕೆಲುಚರಣ್ ಮಹಾಪಾತ್ರ ಅವರ ಜನ್ಮಸ್ಥಾನ ಮತ್ತು ನೃತ್ಯ ಶೈಲಿ ಗೋಟಿಪುವದ ಉಗಮ ಸ್ಥಾನವೂ ಹೌದು. ಪಟ್ಟಚಿತ್ರದ ಪಾರಂಪರಿಕ ಕರಕುಶಲವನ್ನು ಜಗತ್ತಿಗೆ ಒಡೆಯನಾದ ಶ್ರೀ ಜಗನ್ನಾಥನನ್ನು ಅಲಂಕರಿಸಲು ಬಳಕೆ ಮಾಡಲಾಗುತ್ತದೆ, ಈ ಕಾರಣದಿಂದಲೇ ಈ ಕಲಾ ಶೈಲಿ ಅತ್ಯಂತ ಪ್ರಾಮುಖ್ಯತೆಯನ್ನು ಪಡೆದುಕೊಂಡಿದೆ. ಇಲ್ಲಿನ ಕಲಾಪ್ರಕಾರಗಳ ಕುರಿತಾಗಿ ಈಗೀಗ ಹೆಚ್ಚೆಚ್ಚು ಪ್ರಚಾರ ಸಿಕ್ಕಿರುವ ಕಾರಣ, ಪ್ರತಿಯೊಂದು ಮನೆಯವರ ಮುಖ್ಯ ಕಾಯಕವೂ ಪ್ರವಾಸಿಗರಿಗೆ ಅವರ ಆಸಕ್ತಿಗೆ ತಕ್ಕಂತೆ ಕಲಾ ಮಾಹಿತಿ ನೀಡಿ, ತಮ್ಮ ಕಲಾವಸ್ತುಗಳ ಮಾರಾಟ ಮಾಡುವುದು. 

ಹೈವೆಯಿಂದಲೇ ಆ ಊರಿನ ಹುಡುಗನೊಬ್ಬ "ನಿಮಗೆ ಹಾದಿ ತೋರಿಸುತ್ತೇನೆ; ತಮ್ಮ ಮನೆಯಲ್ಲಿ ಕೂಡ ನಾವು ಪೇಂಟಿಂಗ್ ಮಾಡುತ್ತೇವೆ" ಎಂದು ಹೇಳಿ ತನ್ನ ಮನೆಗೆ ಕರೆದುಕೊಂಡು ಹೋದ. 



ಆ ಮನೆಯವರು ಸ್ವಾಗತಿಸಿ ಒಳಗೆ ಕರೆದೊಯ್ದು ಜಗಲಿಯಲ್ಲಿ ನಮ್ಮನ್ನು ಕೂರಿಸಿದರು. ಸಾಮಾನ್ಯ ಎಲ್ಲರ ಮನೆಗಳಲ್ಲಿ ನೆಲದ ಮೇಲೆ ಸದಾ ಚಾಪೆ ಹಾಸಿಯೇ ಇಟ್ಟಿರುತ್ತಾರೆ. ಗ್ರಾಹಕ ಅತಿಥಿಗಳಿಗೆ ತಾವು ರಚಿಸುವ ಕಲೆಯ ಕುರಿತಾಗಿ, ಅದರ ಇತಿಹಾಸ, ನೂರಾರು ವರ್ಷ ಕಲೆಯ ಮೇಲೆ ಅವಲಂಬಿತ ತಮ್ಮ ವೃತ್ತಿ ಪಾರಂಪರಿಕತೆ, ಪೈಟಿಂಗ್ ಮಾಡುವ ಬಗೆ, ಬಳಸುವ ಸಾಮಗ್ರಿಗಳು, ನೈಸರ್ಗಿಕ ಬಣ್ಣಗಳು ಇತ್ಯಾದಿ ಹಲವು ವಿಷಯಗಳ ಬಗ್ಗೆ ತಿಳಿಸಿದರು. ಹೆಚ್ಚಿನ ಮಾಹಿತಿಯ ಪಾರದರ್ಶಕತೆ ಸಿಕ್ಕಾಗ, ಗ್ರಾಹಕರಿಗೆ ಕೊಳ್ಳುವ ವಸ್ತುಗಳು ಮೆಚ್ಚುಗೆಯಾಗುವುದು ಒಂದು ಮಟ್ಟಿಗೆ ಮಾರಾಟ ತಂತ್ರವೂ ಹೌದಾಗಿದ್ದರೂ, ಇಂತಹ ಮೂಲಭೂತ ಸ್ಥಳಗಳಿಗೆ ಹೋದಾಗ ಇವೆಲ್ಲ ವಿಷಯಗಳು ತಿಳಿದುಕೊಳ್ಳುವಂತಹ ಅವಕಾಶ ಸಿಗುತ್ತದೆ. ಅದೇ ಅಲ್ಲವೇ ಪ್ರವಾಸದ ಉದ್ದೇಶಗಳು? ಒಡಿಶಾದ ಮತ್ತು ಬೆಂಗಾಲದ ಸಾಂಪ್ರದಾಯಿಕ ಶೈಲಿಯಲ್ಲಿ ರೂಪುಗೊಂಡ ಮುಖ್ಯ ಚಿತ್ರಕಲಾ ಮಾದರಿ - ಪಟ್ಟಚಿತ್ರ. ೫ನೇ ಶತಮಾನದಲ್ಲಿದ್ದ ಹಿಂದೂ ಸಾಂಪ್ರದಾಯಿಕ ವರ್ಣ ಚಿತ್ರಕಲೆ. ಪಟಚಿತ್ರ ವರ್ಣಚಿತ್ರವನ್ನು ಬಟ್ಟೆಯ ತುಂಡಿನ ಮೇಲೆ ಅಂಟು ಬಳಸಿ ತಯಾರು ಮಾಡಲಾಗುವ ದಪ್ಪನೆಯ ಹಾಳೆಯ ಮೇಲೆ ಮಾಡಲಾಗುತ್ತದೆ. ಧಾರ್ಮಿಕ ಅದರಲ್ಲಿಯೂ ಹೆಚ್ಚಾಗಿ ಕೃಷ್ಣನ ಲೇಲೆ, ಅವತಾರಗಳು, ಪುರಿ ಜಗನ್ನಾಥ, ವಿಷ್ಣುವಿನ ಅವತಾರಗಳು ಮತ್ತು ಇನ್ನಿತರ ಬುಡಕಟ್ಟು ವಿಷಯಗಳೇ ಮುಖ್ಯವಾದವುಗಳು. ಅದರಲ್ಲೂ ಕೃಷ್ಣನ ರಾಸಲೀಲೆ, ಬಾಲ್ಯ ಕಥನ, ದಶಾವತಾರ ಸರಣಿಗಳು. ಜಗನ್ನಾಥ-ಸುಭದ್ರ-ಬಲಭದ್ರರ ಚಿತ್ರವಂತೂ ಎಲ್ಲ ವರ್ಣರಂಜಿತ ಅವತಾರಗಳಲ್ಲಿ ಇತ್ತು. ಈ ಕಲೆಯಲ್ಲಿ ಕುಶಲಕರ್ಮಿ ಮತ್ತು ಆತನ ಕಲ್ಪನೆಯ ಶ್ರೇಷ್ಠತೆಯನ್ನು ನಾವು ಕಾಣಬಹುದಾಗಿದೆ. ಒಂದಕ್ಕಿಂತ ಒಂದು ಕಣ್ಣುಸೆಳೆಯುವ ಅದ್ಭುತ ಚಿತ್ರಕಲೆ! ಅದೆಷ್ಟೋ ದೊಡ್ಡ ದೊಡ್ಡ ಚಿತ್ರಕಲೆಗಳ ಗಾಜಿನ ಚೌಕಟ್ಟು ಹಾಕಿಸಿ ಇಟ್ಟಿದ್ದರು. ಇನ್ನೂ ನೂರಾರು ಬಟ್ಟೆಯ ಸುರುಳಿ ಸುತ್ತಿಟ್ಟ ಕಲಾಚಿತ್ರಗಳಿದ್ದವು. ಒಂದೊಂದೇ ಸುರುಳಿ ಬಿಚ್ಚಿ ಅವುಗಳ ಪೌರಾಣಿಕ ಹಿನ್ನೆಲೆ ಕಥೆ ಸಹಿತವಾಗಿ ಅದರ ಪ್ರಾಮುಖ್ಯತೆ ತಿಳಿಸಿದರು. ರೇಷ್ಮೆಯ ಬಟ್ಟೆಯ ಮೇಲೂ ತೆಳುವಾದ ಕುಂಚಗಳಿಂದ ಪೈಂಟ್ ಮಾಡಿದ್ದ ಸಣ್ಣ ದೊಡ್ಡ ಚಿತ್ರಕಲೆಗಳೂ ಕೂಡ ಅವರಲ್ಲಿ ಲಭ್ಯವಿತ್ತು. ಕಡಿಮೆ ಬೆಲೆಗೆ ಕೇಳಿ ಪಡೆಯುವ ಗ್ರಾಹಕರು ಬಟ್ಟೆಯ ಮೇಲೆ ಪ್ರಿಂಟೆಡ್ ಡಿಸೈನ್ಸ್ ಗಳನ್ನೂ ಕೇಳಿ ಪಡೆದು ತೆಗೆದುಕೊಂಡು ಹೋಗುತ್ತಾರೆ ಅಸಲಿ ಚಿತ್ರಗಳನ್ನು ಅದರ ಪ್ರಾಮುಖ್ಯತೆ ಅರಿತವರೇ ಸರಿಯಾದ ಬೆಲೆ ಕೊಟ್ಟು ಕೊಳ್ಳುತ್ತಾರೆ ಎಂಬ ಸತ್ಯವನ್ನೂ ಕಲಾವಿದೆಯಾದ ನನ್ನ ಬಳಿ ಹಂಚಿಕೊಂಡರು. ಜನರ ಬೇಡಿಕೆಗೆ ತಕ್ಕಂತೆ ಸರಕು! ನನ್ನ ಮಗಳಿಗೆ ಕೃಷ್ಣ ಪ್ರಿಯವಾದವನಾದ್ದರಿಂದ, ಕೃಷ್ಣನ ಕುರಿತಾದ ಒಂದೆರಡು ಪೇಂಟಿಂಗ್ಗಳನ್ನು ಅವಳ ಇಚ್ಛೆಯಂತೆಯೇ ಖರೀದಿಸಿದೆವು. ತಾಳೆ ಗರಿಯ ಮೇಲೆ ಸೂಕ್ಷ್ಮ ಚಿತ್ರ ಕೆತ್ತನೆಗಳ ಕಿರು ಪರಿಚಯ ಸಿಕ್ಕಿತು. ತನ್ನ ಆಪ್ತರಿಗೆ ಸಗಣಿಯಿಂದ ತಯಾರು ಮಾಡಿದ ಗೊಂಬೆಗಳ ಮಗಳು ಆಯ್ಕೆ ಮಾಡಿ ಕಾಯ್ದಿರಿಸಿಕೊಂಡಳು. ೩೦ ರೂಪಾಯಿಗಳಿಂದ ಹಿಡಿದು ೫೦ ಸಾವಿರದ ವರೆಗಿನ ಬೆಲೆಯ ಕಲಾವಸ್ತುಗಳು ಅಲ್ಲಿ ಲಭ್ಯ..




ಅಲ್ಲಿಂದ ಮುಂದಕ್ಕೆ ಹೊರಟು ಬೀದಿಗೆ ಇಳಿದ ಕೂಡಲೇ, ಗ್ರಾಮದ ಅನೇಕ ಜನರು ತಮ್ಮ ತಮ್ಮ ಮನೆಯ ಕಾಲಾವಸ್ತುಗಳ ನೋಡಿ ಹೋಗಲು ದುಂಬಾಲು ಬೀಳುವುದು ಕಿರಿಕಿರಿಯಾದರೂ ಅವರ ದುಡಿಮೆಗೋಸ್ಕರ ಸರ್ವೇ ಸಾಮಾನ್ಯವದು ಎನಿಸಿತು. ಹಾಗೆಯೆ ಇನ್ನೊಬ್ಬರ ಮನೆಗೆ ಹೊಕ್ಕು ಅಲ್ಲಿಯೂ ಸಾಕಷ್ಟು ಪಟಚಿತ್ರಗಳನ್ನು ಗಮನಿಸಿ ಅಲ್ಲೊಂದೆರಡು ಚಿತ್ರಗಳ ಖರೀದಿ ಮಾಡಿದೆವು. ಅಲ್ಲಿಯ ಕಲಾವಿದರೊಬ್ಬರು , ತಾನು ಪ್ರತಿ ವರ್ಷ ಬೆಂಗಳೂರಿನ ಚಿತ್ರಕಲಾ ಪರಿಷತ್ ನಡೆಸುವ ಚಿತ್ರಸಂತೆಗೆ ತಪ್ಪದೆ ಭಾಗವಹಿಸುತ್ತೇನೆ ಎಂದೂತಿಳಿಸಿದರು. ಜಗನ್ನಾಥ ದೇವಸ್ಥಾನದ ರಥಯಾತ್ರೆಗೆ ಈ ಊರಿನ ಕಲಾವಿದರನ್ನೇ ಕರೆಯಿಸಿ ಛಾವಣಿ ಮತ್ತು ಛತ್ರಿಗಳ, ಗೋಡೆಗಳ ಪೇಂಟಿಂಗ್ ಗಳ ಕೆಲಸ ಮಾಡಿಸಲಾಗುತ್ತದೆ  ಎಂದು ಕೆಲವು ಕಲಾವಿದರಿಂದ ತಿಳಿದ ಮಾಹಿತಿ. ಪ್ರತಿಯೊಬ್ಬರ ಮನೆಯಲ್ಲಿಯೂ ಕಲೆಗೆ ಸಂಬಂಧ ಪಟ್ಟಂತೆ ತಮ್ಮ ಮನೆ ಮಂದಿಯರೆಲ್ಲರ ಪೇಂಟಿಂಗ್ ಕುರಿತಾಗಿ ತಿಳಿಸುವುದು ಸಾಮಾನ್ಯ. ತಮ್ಮ ಅಮ್ಮ, ಅಜ್ಜ ಅಜ್ಜಿ ರಚಿಸಿದ ಚಿತ್ರಗಳು ಎಂಬ ಭಾವನಾತ್ಮಕ ವಿಷಯಗಳ ಉಲ್ಲೇಖಿಸುವಾಗ ಅಲ್ಲಿನ ಪಾರಂಪರಿಕತೆಯ ಕುರಿತಾಗಿ ಆಶ್ಚರ್ಯವಾಗುತ್ತದೆ. ಹಲವರು ತಮ್ಮ ಕೆಲಸಕ್ಕೆ ರಾಷ್ಟ್ರೀಯ ಪ್ರಶಸ್ತಿಗಳನ್ನು ಗೆದ್ದಿದ್ದಾರೆ.




ಎಲ್ಲರದ್ದೂ ಸಾಧಾರಣ ಮಹಡಿಯ ಅಂತಸ್ತಿಲ್ಲದ ಮನೆಗಳು ಆದರೆ ಪ್ರತಿಯೊಬ್ಬರ ಮನೆಯೂ ಆರ್ಟ್ ಸ್ಟುಡಿಯೋ ಎಂದರೆ ತಪ್ಪಾಗಲಾರದು. ಮನೆಗಳ ಮೇಲೆ ಚಿತ್ರಿಸಿದ ಸ್ಥಳಿಯ ಕಲೆಗಳು ಆಕರ್ಷಕವಾಗಿವೆ, ಮನೆಯ ಗೋಡೆ, ಮೆಟ್ಟಿಲುಗಳು, ಕಟ್ಟೆ, ಕಿಟಕಿ ಚೌಕಟ್ಟಿನ ತುಂಬಾ ಧಾರ್ಮಿಕ ಮೋಹಕ ಪಟ್ಟ ಚಿತ್ರ ವಿನ್ಯಾಸಗಳೇ ತುಂಬಿವೆ! ಎಲ್ಲರ ಮನೆಯ ಗೋಡೆ,. ಕಟ್ಟೆ ನೋಡುತ್ತಾ ಹೋದರೂ ಸಾಕು ಒಂದು ಸಾಂಪ್ರದಾಯಿಕ ವರ್ಣಚಿತ್ರ ಶೈಲಿಯ ಕಲಾಪ್ರದರ್ಶನ ನೋಡಿದಂತೆ ಅನಿಸುತ್ತಿತ್ತು. ಪಂಚತಂತ್ರ ಪ್ರಾಣಿಗಳ ನೀತಿಕಥೆಗಳು ಇಲ್ಲಿ ಕಾಣಸಿಗುತ್ತವೆ. ಧಾರ್ಮಿಕ ಗ್ರಂಥಗಳಿಂದ ಕಥೆಗಳನ್ನು ಮನೋಜ್ಞವಾಗಿ ಚಿತ್ರಿಸಲಾಗಿದೆ. ಮದುವೆ ಕಾರ್ಯಕ್ರಮವಾದ ಮನೆಗಳ ಗೋಡೆಯ ಮೇಲೆ ಮದುವೆಯಾದವರ ವಿವರಣೆ ನೀಡುವ ಚಿತ್ರಮಾದರಿಯೂ ಕೆಲವೆಡೆ ಇತ್ತು. ಯಾರ ಮನೆ ಒಳಗೆ ಹೊಕ್ಕರೂ, ಕಣ್ಣು ಹಾಯಿಸದಲ್ಲೆಲ್ಲ ವರ್ಣರಂಜಿತ ಕಲಾವಸ್ತುಗಳ ಪ್ರದರ್ಶನ. ಪಟ್ಟ ಚಿತ್ರಗಳ ಹೊರತಾಗಿ, ಕರಕುಶಲಗಳ ಭಂಡಾರವೇ ಇರುತ್ತದೆ. ಕೈಯಲ್ಲಿ ಪೈಂಟ್ ಮಾಡಿದಂತಹ ವೈವಿಧ್ಯಮಯ ಹೋಂ ಡೆಕೋರ್ ವಸ್ತುಗಳು, ಮುಖವಾಡಗಳು, ಕೀಚೈನ್, ಪೆನ್ನು ಪೆಣ್ ಸ್ಟಾಂಡ್ ಎಲ್ಲದರ ಮೇಲೂ ವರ್ಣರಂಜಿತ ಪೇಂಟಿಂಗ್ಗಳು. ತಾಳೆ ಗರಿಯ ಮೇಲೆ ಸೂಕ್ಷ್ಮ ಚಿತ್ರ ಕೆತ್ತನೆಗಳು, ತೆಂಗಿನ ಕೊಬ್ಬರಿಯ ಮೇಲೆ ಪೈಂಟ್ ಆದ ದೃಷ್ಟಿ ಬೊಂಬೆಗಳು, ಕಲ್ಲಿನ ಶಿಲ್ಪ, ಮರದ ಕೆತ್ತನೆಗಳು ಮತ್ತು ಮರದ ಆಟಿಕೆಗಳು, ಸಗಣಿಯಿಂದ ತಯಾರಾದ ಬೊಂಬೆಗಳು ಗ್ರಾಮದ ತುಂಬಾ ಎಲ್ಲರ ಮನೆಯಲ್ಲಿ ಲಭ್ಯ.

ವಾಣಿಜ್ಯೋದ್ಯಮ ಬೆಳೆದಿದ್ದರೂ, ಕಲಾಸಕ್ತರು ಯಾರೇ ಇದ್ದರೂ ಒಮ್ಮೆ ಭೇಟಿ ನೀಡಲೇ ಬೇಕಾದ ಸ್ಥಳವಿದು. 


















2 ಕಾಮೆಂಟ್‌ಗಳು: